"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday 8 March 2015

☀ಮಹಿಳಾ ದಿನ ವಿಶೇಷ: ಭಾರತದ ಪ್ರಮುಖ ಮಹಿಳಾ ಸಾಧಕಿಯರು ('Women's Day special: Indian Famous Women)

☀ಮಹಿಳಾ ದಿನ ವಿಶೇಷ: ಭಾರತದ ಪ್ರಮುಖ ಮಹಿಳಾ ಸಾಧಕಿಯರು
('Women's Day special: Indian Famous Women)

━━━━━━━━━━━━━━━━━━━━━━━━━━━━━━━━━━━━━━━━━━━━━

— ತನಗಿರುವ ಮಿತಿಗಳನ್ನು ಮೀರುತ್ತಾ, ಪರಿಧಿಗಳನ್ನು ವಿಸ್ತರಿಸಿಕೊಳ್ಳುತ್ತಾ ತನ್ನ ಅಸ್ಮಿತೆಯನ್ನು ಜತನ ಮಾಡುತ್ತಲೇ ಸಮಾಜದಲ್ಲಿ ಬದಲಾವಣೆ ತರುವ ತಾಕತ್ತು ಹೆಣ್ತನಕ್ಕಿದೆ.
— ತಮ್ಮ ಇಚ್ಛಾಶಕ್ತಿಯಿಂದ ಅಸಾಧ್ಯವೆಂಬುದನ್ನು ಸಾಧಿಸಿ ಆಸೆಯ ಮಿಣುಕು ದೀಪ ಹೊತ್ತಿಸುವ ಹಲವು ಸಾಧಕಿಯರ ಚಿತ್ರಣ 'ಮಹಿಳಾ ದಿನಾಚರಣೆಯ ದಿನ' ನಿಮ್ಮ ಮುಂದಿದೆ.


●.ಇಂದಿರಾ ಗಾಂಧಿ

ಇಂದಿರಾ ಪ್ರಿಯದರ್ಶಿನಿ ಗಾಂಧಿ. ಭಾರತದ ಮೊಟ್ಟ ಮೊದಲ ಮತ್ತು ಏಕೈಕ ಮಹಿಳಾ ಪ್ರಧಾನ ಮಂತ್ರಿ. ಹೆಣ್ಣು ಮಕ್ಕಳಿಗೆ ರಾಜಕೀಯದ ಗೊಡವೆ ಬೇಡ ಎನ್ನುವ ಕಾಲಘಟ್ಟದಲ್ಲಿ ನಾಲ್ಕು ಸಲ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದ್ದು ಇವರ ಹೆಗ್ಗಳಿಕೆ. ಕಾಶ್ಮೀರಿ ಪಂಡಿತ್ ಕುಟುಂಬದ ಸುಕೋಮಲ ಹೆಣ್ಣುಮಗಳೊಬ್ಬಳ ವೈಯಕ್ತಿಕ ಮತ್ತು ರಾಜಕೀಯ ನಿಲುವಿಗೆ ಸಂಬಂಧಪಟ್ಟ ದಿಟ್ಟ ನಡೆ ಚಾರಿತ್ರಿಕ ಸಾಧನೆ. ಸಾವು ದುರಂತವಾದರೂ ಬದುಕಿದ ರೀತಿ ಇತಿಹಾಸ.


●.ಆನಂದಿ ಬಾಯಿ ಜೋಷಿ

ಪಾರಂಪರಿಕ ನೆಲೆಗಟ್ಟನ್ನು ಮೀರಿ ಪಾಶ್ಚಾತ್ಯ ವೈದ್ಯಕೀಯ ಪದವಿ ಪಡೆದ ಮೊದಲ ಮಹಿಳಾ ವೈದ್ಯೆ. ಅಲ್ಲದೇ, ಪಾಶ್ಟಾತ್ಯ ವೈದ್ಯಕೀಯ ಪದವಿ ಪಡೆದ ಮತ್ತು ಅಮೆರಿಕಾದ ನೆಲದ ಮೇಲೆ ನಡೆದ ಮೊಟ್ಟಮೊದಲ ಹಿಂದೂ ಮಹಿಳೆ. ಪುಣೆಯ ಸಾಂಪ್ರದಾಯಿಕ ಕುಟುಂಬದಲ್ಲಿ ಜನನ, 9ನೇ ವಯಸ್ಸಿನಲ್ಲಿ ಮದುವೆ. ಹದಿನಾಲ್ಕನೇ ವಯಸ್ಸಿನಲ್ಲಿ ಜನ್ಮ ನೀಡಿದ ಮಗು ಸರಿಯಾದ ವೈದ್ಯಕೀಯ ಚಿಕಿತ್ಸೆ ಸಿಗದ ಕಾರಣ ಮೃತಪಟ್ಟಿದ್ದೆ ಇವರಲ್ಲಿ ವೈದ್ಯರಾಗುವ ಛಲ ಮೂಡಿಸಿದ್ದು.


●.ಹಮೈ ವ್ಯಾರವಾಲ

ಕಪ್ಪು ಬಿಳುಪಿನ ಚಿತ್ರಗಳಲ್ಲಿ ಸ್ವತಂತ್ರ ಭಾರತದ ಇತಿಹಾಸವನ್ನು ಹಿಡಿದಿಟ್ಟ ಹೆಗ್ಗಳಿಕೆ ಹಮೈ ವ್ಯಾರವಾಲ ಅವರದ್ದು. ಸಂಗಾತಿ ಮಾಣೆಕ್‌ಶಾ ಸಾಂಗತ್ಯ ಬಯಸಿ ಕ್ಯಾಮೆರಾ ಕೈಗೆತ್ತಿಕೊಂಡಾಗ ಆಕೆಗಿನ್ನೂ 13ರ ಹರೆಯ. ಹುಟ್ಟಿದ್ದು ಗುಜರಾತಿನ ನವ್ಸಾರಿ, ಶಿಕ್ಷಣ ಬಾಂಬೆಯಲ್ಲಿ, ದಿಲ್ಲಿ ಅವರ ಕರ್ಮಭೂಮಿ. ಸಮಾಜದ ಎಲ್ಲ ಎಲ್ಲೆಕಟ್ಟುಗಳನ್ನೂ ಮೀರಿ ವೃತ್ತಿಪರ ಛಾಯಾಗ್ರಹಣವನ್ನು ಕೈಗೆತ್ತಿಕೊಂಡ ಅವರು, ಬ್ರಿಟಿಷ್ ಇನ್‌ಫರ್ಮೇಷನ್ ಸರ್ವೀಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದರು. ಸೈಕಲ್ ಏರಿ, ಕ್ಯಾಮರಾ ಹಿಡಿದು ಹೊರಟರೆಂದರೆ ಚಿತ್ರದ ಬೇಟೆ ಶತಃಸಿದ್ಧ. ಒಂದೊಳ್ಳೆ ಆಂಗಲ್‌ಗಾಗಿ ಏರದ ಎತ್ತರ, ಕಾಯದ ಕ್ಷಣವಿಲ್ಲ. ಭಾರತದ ಕಡೆಯ ವೈಸರಾಯ್ ಲಾರ್ಡ್ ಮೌಂಟ್‌ಬ್ಯಾಟನ್ ಅವರ ನಿಷ್ಕ್ರಮಣ, ಕೆಂಪುಕೋಟೆಯ ಮೇಲೆ ಸ್ವತಂತ್ರ ಭಾರತದ ಧ್ವಜ ಹಾರಾಡಿದ ಮೊದಲ ಕ್ಷಣ, ಮಹಾತ್ಮನ ಅಂತಿಮ ಯಾತ್ರೆ, ಹೀಗೆ ಎಷ್ಟೋ ಅಪರೂಪದ ಕ್ಷಣಗಳು ಇವರ ಕ್ಯಾಮರಾದಲ್ಲಿ ಕೈದಾಗಿವೆ. ನೆಹರು ಇವರ ಅಚ್ಚುಮೆಚ್ಚಿನ ವಸ್ತು. ನೆಹರು ಸಿಗಾರ್ ಹೊತ್ತಿಸುವ ದೃಶ್ಯ ವಿಶ್ವದ ಗಮನ ಸೆಳೆಯಿತು. ಸಂಗಾತಿ ಅಗಲಿದ ನಂತರ ಛಾಯಾಗ್ರಹಣ ನಿಲ್ಲಿಸಿದ ಅವರು, ಕಡೆಯ ದಿನಗಳವರೆಗೂ ಸ್ವತಂತ್ರವಾಗಿ ಘನತೆಯಿಂದ ಬದುಕಿದರು.


●.ಮೀರಾ ಸಾಹಿಬ್ ಫಾತಿಮಾ ಬೀವಿ

1989ರಲ್ಲಿ ಸುಪ್ರೀಂ ಕೋರ್ಟಿಗೆ ನೇಮಕಗೊಂಡ ಮೊದಲ ಭಾರತದ ಮತ್ತು ಏಷ್ಯಾ ಖಂಡದ ಮೊದಲ ಮಹಿಳಾ ನ್ಯಾಯಾಧೀಶೆ. ರಾಷ್ಟ್ರವೊಂದರ ನ್ಯಾಯಾಂಗ ವಿಭಾಗದಲ್ಲಿ ಉನ್ನತ ಹುದ್ದೆಗೆ ಏರಿದ ಮೊಟ್ಟ ಮೊದಲ ಮುಸ್ಲಿಂ ಮಹಿಳೆ. ಮುಸ್ಲಿಂ ಮಹಿಳೆಯರ ವಿಚ್ಛೇದನ ಹಕ್ಕುಗಳ ರಕ್ಷಣೆ ಕುರಿತು ಇವರು ಮಾಡಿದ ಕೆಲಸ ಅಪಾರ. ಇದರ ಜತೆಯಲ್ಲೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ ಕಾರ್ಯ, ನಿವೃತ್ತಿ ನಂತರ ತಮಿಳುನಾಡಿನ ರಾಜ್ಯಪಾಲರಾಗಿ ಕೆಲಸ ನಿರ್ವಹಿಸಿದ್ದರು.


●.ನೀರಜಾ ಭಾನೋಟ್

1985ರಲ್ಲಿ ಅಮೆರಿಕದ 'ಪ್ಯಾನ್ ಅಮೆರಿಕನ್ ವಿಮಾನದ ಫ್ಲೈಟ್ ಅಟೆಂಡೆಂಟ್' ಪದವಿಗೆ ಅರ್ಜಿ ಸಲ್ಲಿಸಿದ ಚಂಡೀಘಡ್ ಮೂಲದ ಚೆಲುವೆ. ಸುಮಾರು 10 ಸಾವಿರ ಅಭ್ಯರ್ಥಿಗಳ ಪೈಕಿ ಆಯ್ಕೆಯಾದ 80 ಜನರಲ್ಲಿದ್ದ ಏಕೈಕ ಭಾರತೀಯಳು. ನಂತರ ಪ್ಯಾನ್ ಅಮೆರಿಕನ್ ಕ್ಲಿಪ್ಪರ್-73 ವಿಮಾನದ ಗಗನ ಸಖಿಯರ ಮುಖ್ಯಸ್ಥೆಯಾಗಿ ಕೆಲಸ. ಭಯೋತ್ಪಾದಕರಿಂದ ಅಪಹರಣಗೊಂಡ ವಿಮಾನದ 300ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಸಲು ತಮ್ಮ ಪ್ರಾಣವನ್ನು ನೀಡಿ, ವಿಮಾನಯಾನದ ಇತಿಹಾಸದಲ್ಲಿ ಮರೆಯದ ಹೆಸರು.


●.ರೀನಾ ಕೌಶಲ್ ಧರ್ಮಶಕ್ತು

ಪ್ರಪಂಚದಲ್ಲೇ ಅತ್ಯಂತ ಶೀತ ಪ್ರದೇಶವಾದ ದಕ್ಷಿಣ ಧ್ರುವದ ತುದಿ ಮುಟ್ಟಿದ ಮೊದಲ ಭಾರತೀಯಳು ಎಂಬ ಗೌರವಕ್ಕೆ ಭಾಜನಳಾದ ಮಹಿಳೆ. ದೆಹಲಿ ಮೂಲಕ 38 ದಿನಗಳ ಕಾಲ ಸ್ಕೀಯಿಂಗ್ ಮಾಡುತ್ತ 915 ಕೀ.ಮೀ. ದೂರವನ್ನು ಮಂಜುಗಡ್ಡೆಯ ದಾರಿಯಲ್ಲಿ ಪಯಣಿಸಿ ಗುರಿ ತಲುಪಿದ ಸಾಹಸಿ.


●.ಮೇರಿಕೋಮ್

ಭಾರತೀಯ ಮಹಿಳಾ ಬಾಕ್ಸಿಂಗ್ ಪಟು. ಮಣಿಪುರದ ಕೋಮ್ ಬುಡಕಟ್ಟು ಸಮುದಾಯಕ್ಕೆ ಸೇರಿದ ಈಕೆ, 5 ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್. ಅಲ್ಲದೇ ಆಡಿದ ಆರು ಚಾಂಪಿಯನ್‌ಶಿಪ್‌ಗಳಲ್ಲೂ ಪದಕ ಗೆದ್ದ ಏಕೈಕ ಮಹಿಳೆ. 2012ರ ಬೇಸಿಗೆ ಒಲಿಂಪಿಕ್ಸ್‌ಗೆ ಆಯ್ಕೆಯಾದ ಏಕೈಕ ಬಾರತೀಯ ಮಹಿಳಾ ಬಾಕ್ಸಿಂಗ್ ಪಟು. ಮತ್ತು 50 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿ ಕಂಚಿನ ಪದಕ ವಿಜೇತೆ. ಭಾರತದ ಅತ್ಯಂತ ಹೆಚ್ಚಿನ ಪ್ರಸಿದ್ಧಿ ಮತ್ತು ಗೌರವ ಪಡೆದ ಕ್ರೀಡಾ ತಾರೆ.


●.ಇರೋಮ್ ಶರ್ಮಿಳಾ ಛಾನು (42)

ಮಣಿಪುರದ ಉಕ್ಕಿನ ಮಹಿಳೆ,ನಾಗರಿಕ ಹಕ್ಕುಗಳ ಕಾರ‌್ಯಕರ್ತೆ, ಕವಯಿತ್ರಿ ಇರೋಮ್ ಶರ್ಮಿಳಾ ಛಾನು. ಇಂಫಾಲ ಅವರ ಹುಟ್ಟೂರು.
ಸಶಸ್ತ್ರಪಡೆಯ (ವಿಶೇಷ ಅಧಿಕಾರ) ಕಾಯಿದೆ 1958ಅನ್ನು ವಾಪಸ್ ಪಡೆಯಲು ಆಗ್ರಹಿಸಿ 2000 ಇಸವಿಯ ನ.3ರಿಂದ ನಿರಶನ ಆರಂಭಿಸಿದ್ದು, 15ನೇ ವರ್ಷದಲ್ಲೂ ಮುಂದುವರಿಸಿದ ಗಟ್ಟಿಗಿತ್ತಿ. ರಾಜ್ಯದಲ್ಲಿ ಸಶಸ್ತ್ರಪಡೆಯು ವಿಶೇಷಾಧಿಕಾರ ಬಳಸಿಕೊಂಡು ಮಹಿಳೆಯರ ಮೇಲೆ ಅತ್ಯಾಚಾರ, ಅಮಾಯಕರ ಹತ್ಯೆಯಲ್ಲಿ ತೊಡಗಿರುವುದರ ವಿರುದ್ಧ ಸಿಡಿದೆದ್ದು ಏಕಾಂಗಿಯಾಗಿ ಅಹಿಂಸಾತ್ಮಕ ಪ್ರತಿಭಟನೆ ಮುಂದುವರಿಸಿರುವ ದಿಟ್ಟೆ.


●.ಎಂ.ಎಸ್.ಸುಬ್ಬಲಕ್ಷ್ಮಿ

ಸಂಗೀತವೇ ಜಗವಾಳೋ ಮಂದಹಾಸ ಎನ್ನುವುದಕ್ಕೆ ಜೀವಂತ ಪ್ರತಿಮೆ ಎಂ.ಎಸ್.ಸುಬ್ಬಲಕ್ಷ್ಮಿ. ವಿನಯ, ಸಜ್ಜನಿಕೆ, ಗಾಂಭೀರ್ಯ ಎಲ್ಲವೂ ಮೇಳೈಸಿದ ಅವರದ್ದು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅಜರಾಮರ ಹೆಸರು. ಪ್ರಪ್ರಥಮವಾಗಿ ಮೀರಾ ಭಜನ್ ಅನ್ನು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸಿದವರು. ದೇಶದ ಎಲ್ಲಾ ಭಾಷೆಯಲ್ಲೂ ಹಾಡಿರುವ ಹೆಗ್ಗಳಿಕೆ ಇವರದು. 1966ರಲ್ಲಿ ವಿಶ್ವಸಂಸ್ಥೆಯ ಕೋರಿಕೆಯಂತೆ ವಿಶ್ವಸಂಸ್ಥೆ ದಿನಾಚರಣೆ ಸಮಾರಂಭದಲ್ಲಿ ಕಛೇರಿ ನಡೆಸಲು ವಿಶೇಷ ಆಹ್ವಾನ ಪಡೆದು, ಹಾಡಿದ ಮೊಟ್ಟ ಮೊದಲ ಭಾರತೀಯ ಮಹಿಳೆ.


●.ಅಮೃತಾ ದೇವಿ

ಪರಿಸರ ಸಂರಕ್ಷಣೆಯಲ್ಲಿ ಈ ಶತಮಾನದ ಆರಂಭದಿಂದಲೂ ಅನೇಕ ಹೆಸರುಗಳು ಕೇಳಿ ಬರುತ್ತವೆ. ಆದರೆ 17ನೇ ಶತಮಾನದಲ್ಲಿ ರಾಜ ಆಜ್ಞೆಯಂತೆ ಮರ ಕಡಿಯಲು ಬಂದವರಿಗೆ ಮರಗಳನ್ನು ಕಡಿಯಲು ಬಿಡದೆ ಜೀವ ಕೊಟ್ಟ ಮಹಿಳೆ ಅಮೃತಾ ದೇವಿ. ವಿಷಯ ತಿಳಿದ ರಾಜ ಅವಳ ಸಮುದಾಯದವರು ಇರುವ ಗ್ರಾಮಗಳಲ್ಲಿ ಮರ ಕಡಿಯುವುದನ್ನು, ಬೇಟೆಯಾಡುವುದನ್ನು ನಿಷೇಧಿಸಿ ಕಾನೂನು ಜಾರಿಗೆಯ ತಂದ. ಅದು ಇಂದಿಗೂ ಜಾರಿಯಲ್ಲಿದೆ.


●.ಕಮಲಾದೇವಿ ಚಟ್ಟೋಪಾಧ್ಯಾಯ

ಹಲವು ಪ್ರಥಮಗಳನ್ನು ಸಾಧಿಸಿದ ಹೆಗ್ಗಳಿಕೆ ಕನ್ನಡತಿ ಕಮಲಾ ಚಟ್ಟೋಪಾಧ್ಯಾಯ ಅವರದ್ದು. ಸಹಕಾರ ಚಳವಳಿಯ ಮೂಲಕ ಭಾರತೀಯ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಶ್ರಮಿಸಿದವರು. ಸ್ವತಂತ್ರ ಭಾರತದಲ್ಲಿ ಭಾರತೀಯ ಕೈಮಗ್ಗ, ಕರಕುಶಲ, ರಂಗಭೂಮಿಯ ಏಳಿಗೆಯ ಪ್ರವರ್ತಕಿಯಾಗಿ ಗುರುತಿಸಿಕೊಂಡವರು. ಇವರ ದೂರದೃಷ್ಟಿಯ ಫಲವಾಗಿ ರಾಷ್ಟ್ರೀಯ ನಾಟಕ ಶಾಲೆ, ಸಂಗೀತ ನಾಟಕ ಅಕಾಡೆಮಿ, ಭಾರತ ಕರಕುಶಲ ಮಂಡಳಿ, ಸೆಂಟ್ರಲ್ ಕಾಟೇಜ್ ಆಫ್ ಇಂಡಸ್ಟ್ರೀಸ್ ಎಂಪೋರಿಯಂ ರೂಪು ತಾಳಿವೆ. ಅಖಿಲ ಭಾರತ ಕರಕುಶಲ ಮಂಡಳಿಯ ಮೊದಲ ಅಧ್ಯಕ್ಷೆ. 1964ರಲ್ಲಿ ಬೆಂಗಳೂರಿನಲ್ಲಿ ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ ಆ್ಯಂಡ್ ಕೊರಿಯೊಗ್ರಫಿ ಆರಂಭಿಸಿದರು.
1926ರಲ್ಲಿ ಮದ್ರಾಸ್ ಪಾವಿನ್ಷಿಯಲ್ ಲೆಜಿಸ್ಲೇಟಿವ್ ಅಸೆಂಬ್ಲಿಗೆ ಸ್ಪರ್ಧಿಸುವ ಮೂಲಕ ಅಸೆಂಬ್ಲಿಗೆ ಸ್ಪರ್ಧಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಇವರದ್ದು.


●.ಸುರೇಖಾ ಯಾದವ್

ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಸರಕು - ಸಾಗಣೆ ರೈಲಿನಲ್ಲಿ ಸಹಾಯಕ ಚಾಲಕಿಯಾಗಿ ನೇಮಕಗೊಂಡವರು ಮಹಾರಾಷ್ಟ್ರದ ಕಾರಡ್‌ನ ಸುರೇಖಾ ಯಾದವ್. ಸರಕು -ಸಾಗಣೆ ರೈಲುಗಳಲ್ಲಿ ಗಂಟೆಗಟ್ಟಲೆ ಪ್ರಯಾಣಿಸುವ ಸವಾಲನ್ನು ಛಲದಿಂದಲೇ ಸ್ವೀಕರಿಸಿದ ಈಕೆ, ಹತ್ತು ವರ್ಷಗಳ ಕಾಲ ಅಲ್ಲಿ ದುಡಿದರು. ಇಬ್ಬರು ಮಕ್ಕಳ ತಾಯಿಯಾಗಿರುವ ಈಕೆ ಸದ್ಯ ಕಳೆದ ದಶಕದಿಂದೀಚೆಗೆ ಉಪನಗರಗಳ ರೈಲು ಚಾಲಕಿಯಾಗಿದ್ದಾರೆ.


●.ಅರುಂಧತಿ ಭಟ್ಟಾಚಾರ್ಯ

ದೇಶದ ಪ್ರತಿಷ್ಠಿತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೊದಲ ಮಹಿಳಾ ಅಧ್ಯಕ್ಷೆ. ಹುಟ್ಟೂರು ಕೋಲ್ಕೊತಾ. ಜಾಧವ್‌ಪುರ ವಿವಿ, ಕೋಲ್ಕೊತಾದ ಲೇಡಿ ಬ್ರಬುರ್ನೆ ಕಾಲೇಜಿನಲ್ಲಿ ಅಧ್ಯಯನ. ಪೋರ್ಬ್ಸ್ ಪಟ್ಟಿಯಲ್ಲಿ ಜಗತ್ತಿನ 36ನೇ ಪ್ರಭಾವಿ ಮಹಿಳೆ ಎಂದು ಗುರುತಿಸಿಕೊಂಡಿದ್ದಾರೆ. ಬ್ಯಾಂಕ್‌ನಲ್ಲಿ ಶೇ 20ರಷ್ಟು ಮಹಿಳೆಯರ ನಿರೀಕ್ಷೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕುಟುಂಬಕ್ಕೆ ನಿಕಟವಾಗಿರುವಂತೆ ವರ್ಗಾವಣೆ ಪ್ರಕ್ರಿಯೆ, ಉನ್ನತ ಶಿಕ್ಷಣ, ವಿಶೇಷ ತರಬೇತಿ, ಮಕ್ಕಳ ಆರೈಕೆಗಾಗಿ ಎರಡು ವರ್ಷಗಳ ವಿಶ್ರಾಂತಿ, ಮಹಿಳೆಯರ ಕೆಲಸದ ಅವಧಿಯಲ್ಲಿ ನಮ್ಯತೆ, ತಾತ್ಕಾಲಿಕ ನಿಯೋಜನೆ ಸೇರಿದಂತೆ ಹಲವು ಉಪಕ್ರಮಗಳನ್ನು ಕೈಗೊಂಡಿದ್ದಾರೆ.


●.ವಿಂಗ್ ಕಮಾಂಡರ್ ಪೂಜಾ ಠಾಕೂರ್

ರಾಜಸ್ಥಾನದಲ್ಲಿ ಹುಟ್ಟಿದ ಇವರು ಗಣರಾಜ್ಯೋತ್ಸವ ಪಥ ಸಂಚಲನವನ್ನು ನಿರ್ವಹಿಸಿದ ಮೊದಲ ಮಹಿಳೆಯಾಗಿ ಇತಿಹಾಸ ನಿರ್ಮಿಸಿದವರು. ಈ ಬಾರಿ ಗಣರಾಜ್ಯೋತ್ಸವಕ್ಕೆ ಪ್ರಮುಖ ಅತಿಥಿಯಾಗಿ ಬಂದಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಸ್ವಾಗತಿಸಿದ ಬೆಟಾಲಿಯನ್‌ನ ನೇತೃತ್ವದ ವಹಿಸಿ ಗೌರವ ವಂದನೆ ಸಲ್ಲಿಸುವ ಮೂಲಕ ದೇಶದ ಗೌರವಕ್ಕೆ ಪಾತ್ರರಾಗಿದ್ದಾರೆ. ಹೈದರಾಬಾದ್ ಏರ್‌ಪೋರ್ಸ್ ಅಕಾಡೆಮಿಯ 2000ನೇ ಬ್ಯಾಚ್‌ನ ಅಧಿಕಾರಿಯಾಗಿರುವ ಠಾಕೂರ್ ಪ್ಯಾರಾ ಜಂಪಿಂಗ್ ಮತ್ತು ಸಾಹಸ ಕ್ರೀಡೆಗಳಲ್ಲಿ ಛಾಪು ಮೂಡಿಸಿದ್ದಾರೆ. ಭಾರತೀಯ ವಾಯುಪಡೆಯಲ್ಲಿ ಹದಿಮೂರುವರೆ ವರ್ಷಗಳಿಂದ ಕಾರ‌್ಯ ನಿರ್ವಹಿಸುತ್ತಿದ್ದಾರೆ. ''ತರಬೇತಿ ಅವಧಿಯಲ್ಲಿ ನಮ್ಮನ್ನು ಪುರುಷ ಅಧಿಕಾರಿಗಳಂತೆ ಕಾಣಲಾಗುತ್ತಿತ್ತು. ಮೊದಲಿಗೆ ನಾವು ಅಧಿಕಾರಿಗಳು, ಬಳಿಕವಷ್ಟೆ ಮಹಿಳೆಯರು. ಇದು ನನ್ನ ಉದ್ಯೋಗವಲ್ಲ , ಜೀವನ ಮಾರ್ಗ,''ಎಂದು ಹೇಳುತ್ತಾರೆ.


●.ರಾಜ್ಯ...: ಯಕ್ಷಗಾನ ಕಲಾವಿದೆ ಲೀಲಾ ಬೈಪಡಿತ್ತಾಯ (68)

ಪುರುಷ ಪಾರಮ್ಯದ ಗಂಡುಮೆಟ್ಟಿನ ಕಲೆ ಯಕ್ಷಗಾನವನ್ನೇ ವೃತ್ತಿಯಾಗಿರಿಸಿಕೊಂಡು ವ್ಯವಸಾಯಿ ಮೇಳಗಳಲ್ಲಿ ತಿರುಗಾಟ ಮಾಡಿದ ಮೊದಲ, ಯಕ್ಷಗಾನ ಕಲಾವಿದೆ ಲೀಲಾ ಬೈಪಡಿತ್ತಾಯ. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಈ ಕಲೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವ ಇವರು ಏಕಾಂಗಿಯಾಗಿ ಒಂದಿಡೀ ಆಟವನ್ನು ನಡೆಸಿಕೊಡುವ ಏಕೈಕ ವೃತ್ತಿಪರ ಮಹಿಳಾ ಭಾಗವತರು. ಧರ್ಮಸ್ಥಳ ಯಕ್ಷಗಾನ ಕಲಿಕಾ ಕೇಂದ್ರದಲ್ಲಿ ಗುರುಗಳಾಗಿ, ಈಗ ಕಟೀಲು ಯಕ್ಷಗಾನ ಕೇಂದ್ರದಲ್ಲಿ ಭಾಗವತಿಕೆ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂಬಯಿ, ಚೆನ್ನೈ, ಅಹಮದಾಬಾದ್, ದಿಲ್ಲಿಗಳಲ್ಲೂ ಇವರ ಕಂಠ ಮೊಳಗಿದೆ. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಎದುರು ಯಕ್ಷಗಾನ ಪ್ರದರ್ಶನ ನೀಡಿರುವ ಇವರು ಎರಡು ತುಳು ಚಲನಚಿತ್ರಗಳಿಗೂ ಕಂಠದಾನ ಮಾಡಿದ್ದಾರೆ. ಭಾಗ್ಯದ ಭಾಗೀರಥಿ ಎಂಬ ಸಾಮಾಜಿಕ ಯಕ್ಷಗಾನ ಪ್ರಸಂಗವೊಂದನ್ನು ಬರೆದಿದ್ದಾರೆ. ಕಾಸರಗೋಡಿನ ಮಧೂರು ಇವರ ಹುಟ್ಟೂರು. ಇವರು ಶಾಸ್ತ್ರೀಯ ಸಂಗೀತ ಅಭ್ಯಸಿಸಿ ಹಿಂದಿ ವಿಶಾರದ ಪದವಿ ಪಡೆದಿದ್ದಾರೆ. 2010ರಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಮತ್ತು 2012ರಲ್ಲಿ ಕರ್ನಾಟಕ ಸರಕಾರದ ಹಿರಿಯ ನಾಗರಿಕರ ಸಾಧನಾ ಪ್ರಶಸ್ತಿ ಸೇರಿದಂತೆ ನಾನಾ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

ಇನ್ನು, ಕೇಂದ್ರ ರೈಲ್ವೆ ಉಪನಗರಗಳ ಸಂಚಾರಿ ವ್ಯವಸ್ಥೆಯಲ್ಲಿ ಮೊದಲ ಬಾರಿ ಚಾಲಕರ ಸ್ಥಾನದಲ್ಲಿ ರಾರಾಜಿಸಿದ ಮಹಿಳೆ ಮುಮ್ತಾಜ್ ಕಜಿ, ಸಾಂಪ್ರದಾಯಿಕ ಕೌಟುಂಬಿಕ ಹಿನ್ನೆಲೆಯಿಂದ ಬಂದ ಈಕೆ ಧೈರ್ಯ, ಛಲವೊಂದಿದ್ದರೆ ಮಹಿಳೆಯರು ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಸ್ಪಷ್ಟ ನಿದರ್ಶನ ಎಂಬಂತಿದ್ದಾರೆ.

(Courtesy: Vijaya Karnataka)

No comments:

Post a Comment