"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday 28 June 2016

ಐಎಎಸ್, ಕೆಎಎಸ್ ಮತ್ತು ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಪೂರ್ವಭಾವಿ ತರಬೇತಿ -೨೦೧೬-೧೭ ರ ಪ್ರಕಟಣೆ

☀️ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಐಎಎಸ್, ಕೆಎಎಸ್ ಮತ್ತು ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಪೂರ್ವಭಾವಿ ತರಬೇತಿ -೨೦೧೬-೧೭ ರ ಪ್ರಕಟಣೆ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ 2016-17 ನೇ ಸಾಲಿನ ಐಎಎಸ್, ಕೆಎಎಸ್ ಮತ್ತು ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಪೂರ್ವಭಾವಿ ಉಚಿತ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಗಾಗಿ ಪ್ರಕಟನೆ ಹೊರಡಿಸಲಾಗಿದೆ.  ದಯವಿಟ್ಟು ಹೆಚ್ಚಿನ ಮಾಹಿತಿಗಾಗಿ  ಕೆಳಗಿನ official website ನ್ನು ಸಂಪರ್ಕಿಸಬಹುದು. 

For online application 👇
http://www.backwardclasses.kar.nic.in/BCWD/Website/Online%20Application%20-IAS-KAS-Banking.html

●.ಪಿ.ಡಿ.ಓ (ಪಂಚಾಯತ್ ಅಭಿವೃದ್ಧಿ ಅಧಿಕಾರಿ) ಕುರಿತು ಸಂಕ್ಷಿಪ್ತ ಮಾಹಿತಿ : (Brief description on(PDO) - Panchayat Development Officer Karnataka)

●.ಪಿ.ಡಿ.ಓ (ಪಂಚಾಯತ್ ಅಭಿವೃದ್ಧಿ ಅಧಿಕಾರಿ) ಕುರಿತು ಸಂಕ್ಷಿಪ್ತ ಮಾಹಿತಿ :
(Brief description on(PDO) - Panchayat Development Officer Karnataka) 
•─━━━━━═══════════━━━━━─••─━━━━━═══════════━━━━━─•

ಆತ್ಮೀಯ ಸ್ಪರ್ಧಾರ್ಥಿಗಳೇ,ಕೆಲವೇ ದಿನಗಳಲ್ಲಿ 638 ಪಿ.ಡಿ.ಓ,638-ಕಾರ್ಯದರ್ಶಿ ಗ್ರೇಡ್-1,ಹೈದ್ರಾಬಾದ್ ಕರ್ನಾಟಕ 177 ಪಿ.ಡಿ.ಓ,ಕಾರ್ಯದರ್ಶಿ ಗ್ರೇಡ್-1, 171.

 ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಧಿಸೂಚನೆ.
GM,3A,3B,2A,2B ಶುಲ್ಕ 500.SC,ST,CAT-1,and others 300.
ಸ್ಪಧಾ೯ತ್ಮಕ ಪರೀಕ್ಷಾ ದಿನಾಂಕ ಸೆಪ್ಟೆಂಬರ್ ತಿಂಗಳು 2016. (According to personal information, May be varied, differs)

 ●.ಪಿ.ಡಿ.ಓ ನೂತನ ಪಠ್ಯಕ್ರಮ :-


ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯವು ಪಿ.ಡಿ.ಓ (ಪಂಚಾಯತಿ ಅಭಿವೃದ್ಧಿ ಅಧಿಕಾರಿ), ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್ - 1 ಹುದ್ದೆಗಳ ಭರ್ತಿ ಆದಷ್ಟು ಬೇಗನೇ ಆಗಲಿದೆ. ಈ ಸಂಬಂಧ ಕೆಲವೇ ದಿನಗಳಲ್ಲಿ ಅಧಿಸೂಚನೆಯನ್ನು ಸರಕಾರ ಹೊರಡಿಸಲಿದೆ. ಸ್ಪರ್ಧಾರ್ಥಿಗಳು ಮುಂದಿನ ಪಠ್ಯಕ್ರಮವನ್ನು ಆಧರಿಸಿ ಪರೀಕ್ಷೆ ತಯಾರಿಯನ್ನು ನಡೆಸಬಹುದು.



●.ಪಿ.ಡಿ.ಓ (ಪಂಚಾಯತ್ ಅಭಿವೃದ್ಧಿ ಅಧಿಕಾರಿ) ಹುದ್ದಗೆ  :-

ಅರ್ಹತೆ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ
ಮಾಸಿಕ ವೇತನ 20,000 - 36,300 ರೂ
ಆಯ್ಕೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಸಂದರ್ಶನವಿಲ್ಲ, ನೇರವಾಗಿ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಯ್ಕೆ ಮಾಡಲಾಗುತ್ತದೆ.


●.ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ಗ್ರಾಮ ಪಂಚಾಯತಿ ಸಹಾಯಕರು ಗ್ರೇಡ್ - 1 ಹುದ್ದೆಗಳಿಗೆ :-

ಅರ್ಹತೆ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ
ಮಾಸಿಕ ವೇತನ 14,550 - 26,700 ರೂ.
ಆಯ್ಕೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಸಂದರ್ಶನವಿಲ್ಲ, ನೇರವಾಗಿ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಯ್ಕೆ ಮಾಡಲಾಗುತ್ತದೆ.




●.ಪರೀಕ್ಷೆಯ ಪಠ್ಯಕ್ರಮ :-

1. ಪತ್ರಿಕೆ - 1.

ಸಾಮಾನ್ಯ ತಿಳುವಳಿಕೆ

ಹಾಲಿ ಘಟನಾವಳಿಯ ಮಾಹಿತಿ, ಸಮಾಜ ವಿಜ್ಞಾನ, ಭಾರತೀಯ ಇತಿಹಾಸ, ಭಾರತೀಯ ಭೌಗೋಳಿಕ, ಸಾಮಾನ್ಯ ವಿಜ್ಞಾನ, ದಿನನಿತ್ಯದ ಆಗು - ಹೋಗುಗಳ ವಿಚಾರಧಾರೆ, ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲೀಷ್, ಮಾತು ಸಾಮಾನ್ಯ ಮನೋಸಾಮರ್ಥ್ಯ.

2. ಪತ್ರಿಕೆ - 2.

ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಬಗ್ಗೆ ನಿರ್ಧೀಷ್ಟ ಪತ್ರಿಕೆ.

ಕರ್ನಾಟಕ, ಭಾರತದ ಗ್ರಾಮಗಳ ಜನರ ಸ್ಥಿತಿ - ಗತಿಗಳು, ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಮತ್ತು ವ್ಯವಸ್ಥೆ, ಗ್ರಾಮೀಣಾಭಿವೃದ್ಧಿಯ ಕೇಂದ್ರ ಮತ್ತು ರಾಜ್ಯ ಕಾರ್ಯಕ್ರಮಗಳು, ಕುಡಿಯುವ ನೀರು ಮತ್ತು ನೈರ್ಮಲ್ಯ ಮತ್ತು ಪಂಚಾಯತ್ ರಾಜ್ಯ.


# ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಸಹಾಯಕ ಗ್ರೇಡ್ - 1 ಆಯ್ಕೆಗೋಸ್ಕರ ಪರೀಕ್ಷೆಯು ವಿವಿಧ ಆಯ್ಕೆಗಳ ಮಾದರಿ (ಬಹುಅಂಶ ಆಯ್ಕೆ) ಗಳನ್ವಯ ಪ್ರಶ್ನೆ ಪತ್ರಿಕೆ ಇರುತ್ತದೆ. 200 ಅಂಕಗಳನ್ನೊಳಗೊಂಡ ಎರಡು ಬರಹ ರೂಪದ ಪ್ರಶ್ನೆಗಳಿರುತ್ತವೆ. (ಗೆಜೆಟ್ ನಲ್ಲಿ ಇದೇ ರೀತಿ ಪ್ರಕಟಿಸಿರುತ್ತಾರೆ. ಅಂದರೆ ಈ ಪರೀಕ್ಷೆಗಳು ವಸ್ತುನಿಷ್ಠ ಬಹು ಆಯ್ಕೆ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ ಎಂದು ಅರ್ಥೈಸಿಕೊಳ್ಳಬಹುದು)



# ಪ್ರಶ್ನೆ ಪತ್ರಿಕೆಯು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಸಿದ್ಧಪಡಿಸಿರುತ್ತಾರೆ. ಅಭ್ಯರ್ಥಿಯು ಕನ್ನಡ ಅಥವಾ ಆಂಗ್ಲ ಭಾಷೆಯಲ್ಲಿ ಯಾವುದಾದರೂ ಒಂದರಲ್ಲಿ  ಉತ್ತರಿಸಬೇಕಾಗುತ್ತದೆ.



# ನೇಮಕಾತಿ ಅರ್ಜಿಗಳು :- ಯಾವುದೇ ಹುದ್ದೆಗೆ ಅಭ್ಯರ್ಥಿಯು ಅರ್ಜಿ ಸಲ್ಲಿಸುವುದಾದಲ್ಲಿ ಅಂತಹ ಅರ್ಜಿಯಲ್ಲಿ ಜಿಲ್ಲೆಗಳ ಪೈಕಿ ಅವನು ಆಯ್ಕೆಯ ಒಂದು ಜಿಲ್ಲೆಯನ್ನು ನಮೂದಿಸಿರಬೇಕು. ಆಯ್ಕೆಯು ಆ ಜಿಲ್ಲೆಗೆ ಸೀಮಿತವಾಗಿರುತ್ತದೆ.



●.PDO ಪರೀಕ್ಷೆಗ ತಯಾರಿಕೆಗೆ ಬೇಕಾದ ಅಗತ್ಯ ಪಠ್ಯಪುಸ್ತಕಗಳು (ನಿರ್ದಿಷ್ಟ ಪತ್ರಿಕೆಗಾಗಿ) :-

1.ಕರ್ನಾಟಕ ಪಂಚಾಯಿತಿ ರಾಜ್ ಕ್ಯಪಿಡಿ.

2.ಪಿಡಿಒ ತರಬೇತಿ ನೀಡುವ ಪಠ್ಯಕ್ರಮ

3.ಅಬ್ದುಲ್ ನಜೀರ್ ಸಾಬ್ ತರಬೇತಿ ಕೇಂದ್ರ ದ ಗ್ರಾಮೀಣ ಅಭಿವೃದ್ಧಿ ತರಬೇತಿ ಪಠ್ಯಕ್ರಮ

4.ಕರ್ನಾಟಕ ವಿಕಾಸ ಮಾಸಪತ್ರಿಕೆ

ಸ್ಪರ್ಧಾ ಚ್ಯತ್ರ pdo ಮಾರ್ಗದರ್ಶಿ.. 

Saturday 18 June 2016

ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು- 2015-16 3. ಯೋಜನೆ: ಜನಧನ ಯೋಜನೆ (Jan Dhan Yojana)

☀️ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು- 2015-16

3. ಯೋಜನೆ:  ಜನಧನ ಯೋಜನೆ
(Jan Dhan Yojana) 
•─━━━━━═══════════━━━━━─••─━━━━━═══════════━━━━━─•

★ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು
(Schemes of central government of India)


💢 ಪರಿಕಲ್ಪನೆ: 

ದೇಶದ ಪ್ರತಿ ಕುಟುಂಬವೂ ಬ್ಯಾಂಕ್ ಖಾತೆ ಹೊಂದಿರಬೇಕು ಎಂಬ ಮಹತ್ವಾಕಾಂಕ್ಷಿ ಯೋಜನೆಯಿದು. ಲೇವಾದೇವಿದಾರರಿಂದ ಬಡವರನ್ನು ರಕ್ಷಿಸುವ ಮತ್ತು ಪ್ರತಿಯೊಬ್ಬರನ್ನೂ ಅರ್ಥಿಕ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ ಎಂದೇ ಹೇಳಬಹುದು.

 2014ರ ಆಗಸ್ಟ್ 15ರಂದು ಸ್ವಾತಂತ್ರ್ಯೊತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಘೊಷಿಸಿದ ಯೋಜನೆ.

ಕಳೆದ 68 ವರ್ಷಗಳಲ್ಲಿ ವರ್ಷಕ್ಕೆ ತರೆಯಲ್ಪಡುತ್ತಿದ್ದ ಬ್ಯಾಂಕ್ ಖಾತೆಗಳ ಸಂಖ್ಯೆ ಬರೀ ಒಂದು ಕೋಟಿ. ಆದರೆ, ಈ ಯೋಜನೆಯಲ್ಲಿ ಉದ್ಘಾಟನೆಗೊಂಡ ದಿನವೇ 1.5 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಇದು ಭಾರತದ ಬ್ಯಾಂಕಿಂಗ್ ಇತಿಹಾಸದಲ್ಲೇ ಒಂದು ದಾಖಲೆ.

ಈ ಖಾತೆಯ ಫಲಾನುಭವಿಗೆ ಒಂದು ಲಕ್ಷ ರೂ. ಅಪಘಾತ ವಿಮೆ, 30 ಸಾವಿರ ರೂ. ಜೀವ ವಿಮೆ, ರುಪೇ ಡೆಬಿಟ್ ಕಾರ್ಡ್ ಹಾಗೂ 5000ರೂ. ಓವರ್​ಡ್ರಾಫ್ಟ್ ಸೌಲಭ್ಯ ಒದಗಿಸಲಾಗಿದೆ. ದೇಶಾದ್ಯಂತ ಯಾವುದೇ ಬ್ಯಾಂಕ್_ಖಾತೆಗೆ ಹಣವನ್ನು ವರ್ಗಾಯಿಸಬಹುದು.


💢ಪರಿಣಾಮ: 

ಬ್ಯಾಂಕಿಂಗ್_ಸೇವೆಯಿಂದ ವಂಚಿತರಾಗಿದ್ದ ಶೇಕಡ 48 ಗ್ರಾಮೀಣ ಭಾಗದ ಬಡಜನರಿಗೆ ಬ್ಯಾಂಕ್ ಖಾತೆ ತೆರೆಯಲು ಅವಕಾಶ ಒದಗಿಸಿದೆ. ಈ ನಿಟ್ಟಿನಲ್ಲಿ ಯೋಜನೆ ದೇಶದ #ಅರ್ಥವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಹೆಜ್ಜೆ. ಆದರೆ, ಈ ಯೋಜನೆಯಡಿಯಲ್ಲಿ ತೆರೆದ ಬಹುತೇಕ ಖಾತೆಗಳು ಚಲಾವಣೆಯಲ್ಲಿ ಇಲ್ಲ ಎಂಬ ಆರೋಪವೂ ಕೇಳಿಬಂದಿದೆ.


💢ಫಲಾನುಭವಿಗಳು: 

2016ರ ಮೇ ತಿಂಗಳ ಲೆಕ್ಕಾಚಾರ ಪ್ರಕಾರ ಒಟ್ಟು 21.7 ಕೋಟಿ ಫಲಾನುಭವಿಗಳು ಈ ಖಾತೆ ತೆರೆದಿದ್ದಾರೆ. ಇವರ ಪೈಕಿ ಶೇಕಡ 61.4ರಷ್ಟು ಗ್ರಾಮೀಣರೂ, ಶೇಕಡ 38.6ರಷ್ಟು ನಗರವಾಸಿಗಳೂ ಆಗಿದ್ದಾರೆ.

ಇವರ ಖಾತೆಯಲ್ಲಿ ಒಟ್ಟು 37,445.1 ಕೋಟಿ ರೂಪಾಯಿ ಜಮೆ ಆಗಿ ಉಳಿತಾಯವಾಗಿದೆ.

 ಶೂನ್ಯ ಠೇವಣಿ ಖಾತೆ ಪ್ರಮಾಣ ವರ್ಷದ ಹಿಂದಿದ್ದ ಶೇಕಡ 53.6ರಿಂದ ಶೇಕಡ 26.4ಕ್ಕೆ ಕುಸಿತ ಕಂಡಿದೆ.
(Courtesy : Vijayavani) 

☀️ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು - 2015-16 2. ಯೋಜನೆ: ನಮಾಮಿ ಗಂಗೆ (Namami Ganga)

☀️ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು - 2015-16

2. ಯೋಜನೆ: ನಮಾಮಿ ಗಂಗೆ
(Namami Ganga) 
•─━━━━━═══════════━━━━━─••─━━━━━═══════════━━━━━─•

★ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು - 2015-16
(Central Government schemes)


💢ಪರಿಕಲ್ಪನೆ: 

ನಮಾಮಿ_ಗಂಗೆ_ಯೋಜನೆ ಅಥವಾ ನಮಾಮಿ ಗಂಗಾ ಯೋಜನೆಯು ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ.

ನದಿಯ ಸ್ವಚ್ಛತೆ ಹಾಗೂ ಸಂರಕ್ಷಣೆ ಸೇರಿ ಗಂಗಾನದಿಯ ಸಮಗ್ರ ಅಭಿವೃದ್ಧಿ ಇದರ ಪ್ರಮುಖ ಉದ್ದೇಶ.

ಇದಕ್ಕಾಗಿ ಸರ್ಕಾರ ತನ್ನ ಚೊಚ್ಚಲ ಬಜೆಟ್​ನಲ್ಲಿ 2,037 ಕೋಟಿ ರೂ. ಮೀಸಲಿರಿಸಿತ್ತು. 2014-15ರ ಮುಂಗಡ ಪತ್ರದಲ್ಲಿ ಮುಂದಿನ ಐದು ವರ್ಷಗಳ ಅವಧಿಗಾಗಿ 20,000 ಕೋಟಿ ರೂಪಾಯಿಗೂ ಹೆಚ್ಚಿನ ಹಣ ಮೀಸಲಿರಿಸಲಾಗಿದೆ.

ಈ ಯೋಜನೆ ಪ್ರಕಾರ ಗಂಗಾ ನದಿ ಹರಿಯುವ ಎಂಟು ರಾಜ್ಯಗಳು, ನದಿ ದಂಡೆಯಲ್ಲಿರುವ 47 ಪಟ್ಟಣಗಳು, 12 ನದಿಗಳ ಸ್ವಚ್ಛತೆಗೆ ಆದ್ಯತೆ ಸಿಗಲಿದೆ. ಅಷ್ಟೇ ಅಲ್ಲ 2022ರ ವೇಳೆಗೆ ಗಂಗಾನದಿ ದಡದಲ್ಲಿರುವ 1,632 ಗ್ರಾಮಪಂಚಾಯಿತಿಗಳು ಬಯಲುಶೌಚದಿಂದ ಮುಕ್ತವಾಗಲಿವೆ.

ಈ ಯೋಜನೆಯ ಉಸ್ತುವಾರಿ ಜಲಸಂಪನ್ಮೂಲ ಸಚಿವಾಲಯದ್ದಾದರೂ, ಪರಿಸರ, ನಗರಾಭಿವೃದ್ಧಿ, ಬಂದರು, ಪ್ರವಾಸೋದ್ಯಮ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವಾಲಯಗಳೂ ಮಹತ್ವದ ಜವಾಬ್ದಾರಿ ಹೊಂದಿವೆ.

ನದಿ ದಡದ ಜನರ ಪಾಲ್ಗೊಳ್ಳುವಿಕೆಯಲ್ಲಿ ನದಿಯ ಸ್ವಚ್ಛತೆ ಕಾಪಾಡುವುದು, ನದಿ ಸಂರಕ್ಷಣೆ ಯೋಜನೆ ಜಾರಿಗೊಳಿಸುವುದು ಗಮನಾರ್ಹ ಅಂಶ.

ಗಂಗಾ_ಶುದ್ಧೀಕರಣ ಯೋಜನೆಗೆ ಸಹಕಾರಿಯಾಗುವ ‘ಭುವನ ಗಂಗಾ’ ಮೊಬೈಲ್ ಆಪನ್ನು ಈಗಾಗಲೇ ಬಿಡುಗಡೆಮಾಡಲಾಗಿದೆ. ಇದರ ಮೂಲಕ ಗಂಗಾ ನದಿಗೆ ತ್ಯಾಜ್ಯ ಬಿಡುಗಡೆ ಮಾಡುವ ಕೈಗಾರಿಕೆಗಳು ಅಥವಾ ವ್ಯಕ್ತಿಗಳ ಕುರಿತು ಫೋಟೊ ಸಹಿತ ಮಾಹಿತಿಯನ್ನು ಸರ್ಕಾರಕ್ಕೆ ನೀಡಬಹುದಾಗಿದೆ.


💢ಪರಿಣಾಮ: 

ವಾರಾಣಸಿಯಿಂದಲೇ ಆ ಕೆಲಸ ಆರಂಭವಾಗಿದೆ. ಅನೇಕ ಸ್ವಯಂ ಸೇವಾ ಸಂಸ್ಥೆಗಳು, ವ್ಯಕ್ತಿಗಳು ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ. ಈಗಾಗಲೇ ಹಲವು ಘಟ್ಟಗಳು ಸ್ವಚ್ಛವಾಗಿದ್ದು, ಆ ಘಟ್ಟಗಳ ನಿರ್ವಹಣಾ ಪ್ರಕ್ರಿಯೆ ಪ್ರಗತಿಯಲ್ಲಿದೆ.

ನದಿ ಶುದ್ಧೀಕರಣಕ್ಕೆ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಇಸ್ರೋ ಕೂಡ ಕೈಜೋಡಿಸಿದೆ. ಗಂಗಾ ನದಿಯ ತೀರದಲ್ಲಿರುವ ಪ್ರದೇಶಗಳ ಅಂಕಿಅಂಶಗಳನ್ನು ಸ್ಯಾಟಲೈಟ್ ಮೂಲಕ ಸಿದ್ಧಪಡಿಸಲು ಯೋಜನೆ ರೂಪಿಸಲಾಗಿದೆ. ನದಿ ಮಾಲಿನ್ಯ, ಯೋಜನೆ ಪ್ರಗತಿ ಮತ್ತಿತರ ವಿಚಾರಗಳ ಮೇಲೂ ನಿಗಾ ಇಡಬಹುದಾಗಿದೆ.

ಗಂಗಾ_ನದಿ ದಡದಲ್ಲಿರುವ ಉದ್ಯಮಗಳಿಗೆ ರೇಟಿಂಗ್ ನೀಡಲು ನಿರ್ಧರಿಸಲಾಗಿದೆ. ಎಲೆಕ್ಟ್ರಿಕ್ ಉತ್ಪನ್ನಗಳು ಮತ್ತು ಇತರ ಸಾಮಗ್ರಿಗಳಿಗೆ ಸುರಕ್ಷತೆ ಪ್ರಮಾಣದ ಆಧಾರದ ಮೇಲೆ ನೀಡಲಾಗುವ ರೇಟಿಂಗ್​ನಂತೆಯೇ ನಿರ್ಮಲ ಗಂಗಾ ರೇಟಿಂಗ್ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ.
ಗಂಗಾ ನದಿಗೆ ತ್ಯಾಜ್ಯವನ್ನು ಹರಿಬಿಡುವ ಉದ್ಯಮಗಳು ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ಮೂರು ಮಾದರಿಯ ಶ್ರೇಣಿಯನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲ, ಆಶ್ರಮಗಳು, ಮುನಿಸಿಪಾಲಿಟಿಗಳು, ಗ್ರಾಮ ಪಂಚಾಯಿತಿಗಳಿಗೂ ಸ್ಟಾರ್ ರೇಟಿಂಗ್ ನೀಡಲಾಗುತ್ತದೆ.

ಗಂಗೆಗೆ ಕಲುಷಿತ ನೀರು ಸೇರುವುದನ್ನು ತಪ್ಪಿಸಲು ‘ಗಂಗಾ ಗ್ರಾಮ್ ಯೋಜನೆಗೆ ಚಾಲನೆ ನೀಡಲಾಗಿದೆ. ಇದರ ಅನ್ವಯ ನದಿಗೆ ಹೊಂದಿಕೊಂಡಿರುವ 1,600 ಗ್ರಾಮಗಳಲ್ಲಿ ಪಂಜಾಬ್​ನ ಸೀಚೆವಲ್ ಮಾದರಿಯಲ್ಲಿ ಕೊಳಚೆ ನೀರು ಸಂಸ್ಕರಣ ಘಟಕಗಳು ತಲೆಯೆತ್ತಲಿವೆ.

ಮೊದಲ ಹಂತದಲ್ಲಿ 200 ಗ್ರಾಮಗಳಲ್ಲಿ ಯೋಜನೆ ಜಾರಿಯಾಗಲಿದೆ. ಚರಂಡಿ ನೀರನ್ನು ನದಿಗೆ ಸಂಸ್ಕರಿಸಿ ಬಿಡುವುದರ ಜತೆಗೆ ಗ್ರಾಮದ ಪ್ರತಿ ಮನೆಗೂ ಶೌಚಗೃಹ ನಿರ್ವಿುಸಲಾಗುತ್ತದೆ. ಇದರ ಅನ್ವಯ ಪ್ರತಿ ಗ್ರಾಮಕ್ಕೂ ಒಂದು ಕೋಟಿ ರೂ. ಅನುದಾನವನ್ನೂ ಒದಗಿಸಲಾಗುತ್ತಿದೆ.

(Courtesy : vijayavani) 

☀️ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು - 2015-16 1. ಯೋಜನೆ: ಸ್ವಚ್ಛ ಭಾರತ ಅಭಿಯಾನ (Swachh Bharath Abhiyan)

☀️ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು - 2015-16

1. ಯೋಜನೆ: ಸ್ವಚ್ಛ ಭಾರತ ಅಭಿಯಾನ
(Swachh Bharath Abhiyan) 
•─━━━━━═══════════━━━━━─••─━━━━━═══════════━━━━━─•

★ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು
(Schemes of Central Government Of India) 


💢ಪರಿಕಲ್ಪನೆ: 

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು. 2014ರ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ನವದೆಹಲಿಯ ರಾಜ್​ಘಾಟ್​ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವತಃ ಯೋಜನೆಗೆ ಚಾಲನೆ ನೀಡಿದ್ದರು. ಹೀಗೆ ಆರಂಭವಾದ ಈ ಯೋಜನೆ ಆಂದೋಲನ ಸ್ವರೂಪ ಪಡೆದುಕೊಂಡಿದೆ.

ವಿವಿಧ ಸಂಘ ಸಂಸ್ಥೆಗಳು ಇದೀಗ ನಿರಂತರ #ಸ್ವಚ್ಛ_ಭಾರತ_ಅಭಿಯಾನ ನಡೆಸುತ್ತಿವೆ. ದೇಶದ ಒಟ್ಟು 4,041 ನಗರಗಳು ಮತ್ತು ಪಟ್ಟಣಗಳನ್ನು ಈ ಆಂದೋಲನ ಒಳಗೊಂಡಿದೆ.

ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನಾಚರಣೆಯಾದ 2019ರ ಅಕ್ಟೋಬರ್ 2ರೊಳಗೆ #ಸ್ವಚ್ಛ_ಭಾರತ ರೂಪಿಸುವುದು ಇದರ ಗುರಿ.

ಸ್ವಚ್ಛ ಭಾರತ ಕೋಶದಡಿಯಲ್ಲಿ 3.69 ಕೋಟಿ ರೂಪಾಯಿ ಸಂಗ್ರಹವಾಗಿದೆ. 2016-17ನೇ ಸಾಲಿನ ಬಜೆಟ್​ನಲ್ಲಿ ಕೇಂದ್ರ ಸರ್ಕಾರ ಇದಕ್ಕಾಗಿ 9,000 ಕೋಟಿ ರೂ. ಮೀಸಲಿಟ್ಟಿದೆ. ವಿಶ್ವಬ್ಯಾಂಕ್ ಕೂಡ ಈ ಯೋಜನೆಗೆ ಹಣಕಾಸಿನ ಹಾಗೂ ತಾಂತ್ರಿಕ ನೆರವು ನೀಡಿದೆ.


💢 ಪರಿಣಾಮ: 

ಆಂದೋಲನ ಪ್ರಾರಂಭದಲ್ಲಿ ದೇಶಾದ್ಯಂತ ದೊಡ್ಡ ಸಂಚಲನವನ್ನೇ ಮೂಡಿಸಿತ್ತು. ಒಂದಷ್ಟು ಧನಾತ್ಮಕ ಬದಲಾವಣೆಗಳು ಹಲವೆಡೆ ಆಗಿವೆ.

ಕಸವಿಲೇವಾರಿ ಮುಂತಾದ ಸಮಸ್ಯೆಗಳಿದ್ದು, ಅದಕ್ಕೂ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಸಾಗಿದೆ. ಆದರೆ, ಸಮರ್ಪಕವಾಗಿ ಅನುದಾನ ಹಂಚಿಕೆ ಆಗದಿರುವ ಕಾರಣ ಸೇರಿ ವಿವಿಧ ಸಮಸ್ಯೆಗಳಿಂದಾಗಿ ಕ್ರಮೇಣ ಈ ಆಂದೋಲನ ಜನಪ್ರಿಯತೆಯನ್ನು ಕಳೆದುಕೊಂಡಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

(Courtesy :Vijayavani) 

☀️ಇತ್ತೀಚೆಗೆ ತೆರಿಗೆ ಸಂಬಂಧಿಸಿದಂತೆ ಸರ್ಕಾರ ಬಿಡುಗಡೆ ಮಾಡಿದ ದಾಖಲೆಗಳ ಪ್ರಕಾರ ಪ್ರಸ್ತುತ ದೇಶದ ತೆರಿಗೆ ಸಂಗ್ರಹ ಪ್ರಮಾಣದ ಅವಲೋಕನ : (The Recent Reports on Taxes collection procedure released by GoI)


☀️ಇತ್ತೀಚೆಗೆ ತೆರಿಗೆ ಸಂಬಂಧಿಸಿದಂತೆ ಸರ್ಕಾರ ಬಿಡುಗಡೆ ಮಾಡಿದ ದಾಖಲೆಗಳ ಪ್ರಕಾರ ಪ್ರಸ್ತುತ ದೇಶದ ತೆರಿಗೆ ಸಂಗ್ರಹ ಪ್ರಮಾಣದ ಅವಲೋಕನ  :
(The Recent Reports on Taxes collection procedure released by GoI)
•─━━━━━═══════════━━━━━─••─━━━━━═══════════━━━━━─•

★ಭಾರತದ ಹಣಕಾಸಿನ ಅರ್ಥಶಾಸ್ತ್ರ
(Indian Financial Economics)

★ ಭಾರತದ ತೆರಿಗೆ ಪದ್ಧತಿ
(Taxation System of India)



ಇತ್ತೀಚೆಗೆ ಸರ್ಕಾರ ಬಿಡುಗಡೆ ಮಾಡಿರುವ ದಾಖಲೆಗಳ ಪ್ರಕಾರ ಕಳೆದ ಐದು ವರ್ಷಗಳಲ್ಲಿ ತೆರಿಗೆ ಸಂಗ್ರಹ ಪ್ರಮಾಣ ಹಾಗೂ #ತೆರಿಗೆದಾರರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ.

 2011-12ರಲ್ಲಿ 1.13 ಕೋಟಿ ಜನರು ತೆರಿಗೆ ಪಾವತಿಸಿದ್ದಾರೆ. 120 ಕೋಟಿಗೂ ಹೆಚ್ಚಿನ ಜನಸಂಖ್ಯೆಯಿರುವ ಭಾರತದಲ್ಲಿ ತೆರಿಗೆ ಪಾವತಿದಾರರ ಸಂಖ್ಯೆ ಕೇವಲ ಶೇ. 1 ಆಗಿತ್ತು ಎಂಬುದು ಅಚ್ಚರಿ ಹಾಗೂ ಆತಂಕಕಾರಿ ಸಂಗತಿಯೇ.

2015-16ನೇ ಸಾಲಿನಲ್ಲಿ ತೆರಿಗೆದಾರರ ಸಂಖ್ಯೆ 5.1 ಕೋಟಿಗೆ ಏರಿಕೆಯಾಗಿರುವುದು ತುಸು ಸಮಾಧಾನಕರ ಸಂಗತಿ. 2000ನೇ ಇಸವಿಯಲ್ಲಿ 31,764 ಕೋಟಿ ರೂ. ಇದ್ದ #ನೇರ_ತೆರಿಗೆ ಸಂಗ್ರಹ, 2015ರ ವೇಳೆಗೆ 2.86 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.

ಕಳೆದ 16 ವರ್ಷಗಳಲ್ಲಿ ಭಾರತದ ಒಟ್ಟಾರೆ ತೆರಿಗೆ ಸಂಗ್ರಹ ಪ್ರಮಾಣ 9 ಪಟ್ಟು ಏರಿಕೆ ಕಂಡಿದೆ.

ನೇರ ತೆರಿಗೆ (ಕಾಪೋರೇಟ್_ತೆರಿಗೆ ಹಾಗೂ ಸಾರ್ವಜನಿಕ ಆದಾಯ_ತೆರಿಗೆ) 2015-16ನೇ ಸಾಲಿನಲ್ಲಿ ಒಟ್ಟು #ದೇಶಿ_ಉತ್ಪನ್ನದ (ಜಿಡಿಪಿ) ಶೇ. 5.47ಕ್ಕೆ ಇಳಿಕೆಯಾಗಿದ್ದು, ಇದು ಕಳೆದ 10 ವರ್ಷಗಳ ಕನಿಷ್ಠ ಮಟ್ಟಕ್ಕೆ ಹತ್ತಿರದಲ್ಲಿದೆ. ತೆರಿಗೆಯ ವ್ಯಾಪ್ತಿ ವಿಸ್ತರಿಸುವಂತೆ ಹಾಗೂ ತೆರಿಗೆ ಸಂಗ್ರಹ ಹೆಚ್ಚಿಸುವಂತೆ ಸಂಸದೀಯ ಸಮಿತಿಯು ಸರ್ಕಾರಕ್ಕೆ ಸಲಹೆ ಮಾಡಿದೆ.

2011-12ನೇ ಸಾಲಿನಲ್ಲಿ ತೆರಿಗೆ ಪಾವತಿಸಿದ ಸಾರ್ವಜನಿಕರ ಸಂಖ್ಯೆ 4 ಕೋಟಿ.

2014-15ರ ಆರ್ಥಿಕ ವರ್ಷದಲ್ಲಿ ತೆರಿಗೆದಾರರ ಸಂಖ್ಯೆ ಒಂದು ಕೋಟಿ ಮಾತ್ರ ಏರಿಕೆ ಕಂಡಿದೆ. ಇದು ನಿರೀಕ್ಷಿತ ಪ್ರಮಾಣಕ್ಕಿಂತ ತುಂಬ ಕಡಿಮೆ.

ಕಳೆದ 6 ವರ್ಷಗಳಿಂದ ನೇರ ತೆರಿಗೆ ಸಂಗ್ರಹ ಪ್ರಗತಿಯಲ್ಲಿ ಇಳಿಕೆ ಕಂಡುಬರುತ್ತಿದೆ.

2010-11ರ ಸಾಲಿನಲ್ಲಿ ತೆರಿಗೆ ಸಂಗ್ರಹ ಪ್ರಮಾಣ ಶೇ. 18 ಪ್ರಗತಿ ಕಂಡಿತ್ತು. ಆದರೆ ಕಳೆದ ವರ್ಷ ಇದರ ಪ್ರಮಾಣ ಶೇ. 6.7ಕ್ಕೆ ಸೀಮಿತಗೊಂಡಿದೆ.

2011-12ನೇ ಸಾಲಿನಲ್ಲಿ ಕೇವಲ ಮೂರು ವ್ಯಕ್ತಿಗಳು ತಮ್ಮ ಬಳಿ 500 ಕೋಟಿ ರೂ. ಗಿಂತ ಹೆಚ್ಚಿನ ಆಸ್ತಿಯಿದೆ ಎಂದು ಘೊಷಿಸಿಕೊಂಡಿದ್ದಾರೆ. ಇದೇ ವಿತ್ತೀಯ ವರ್ಷದಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ ಒಂದು ಲಕ್ಷ ಜನರು ಶೂನ್ಯ ಆದಾಯವಿರುವುದಾಗಿ ದಾಖಲೆ ಸಲ್ಲಿಸಿದ್ದಾರೆ.

 20 ಲಕ್ಷ ರೂ.ಗಿಂತ ಹೆಚ್ಚು ಆಸ್ತಿ ಘೊಷಿಸಿಕೊಂಡಿರುವವರ ಸಂಖ್ಯೆ 4.28 ಲಕ್ಷ.

2014-15ರಲ್ಲಿ ಮಹಾರಾಷ್ಟ್ರದಲ್ಲಿ 2.77 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹಗೊಂಡಿದ್ದು, ದೇಶದಲ್ಲೇ ಅತ್ಯಧಿಕ ನೇರ ತೆರಿಗೆ ಸಂಗ್ರಹಿಸಿದ ರಾಜ್ಯ ಎಂಬ ಕೀರ್ತಿಗೆ ಪಾತ್ರವಾಗಿದೆ.

91 ಸಾವಿರ ಕೋಟಿ ರೂ. ಸಂಗ್ರಹಿಸುವ ಮೂಲಕ ರಾಷ್ಟ್ರ ರಾಜಧಾನಿ ದೆಹಲಿ ಎರಡನೇ ಸ್ಥಾನದಲ್ಲಿದೆ. ದೇಶದ ಒಟ್ಟು ನೇರ ತೆರಿಗೆಯ ಶೇ. 53 ಈ ಎರಡು ರಾಜ್ಯಗಳಿಂದ ಲಭ್ಯವಾಗುತ್ತಿದೆ.

ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ 1.7 ಕೋಟಿ ಜನರು ಅಥವಾ ಶೇ. 54 ಜನರ ಆದಾಯ ನಿಗದಿತ ಮಟ್ಟಕ್ಕಿಂತ ಕಡಿಮೆ ಇರುವ ಕಾರಣ ಇವರು ಯಾವುದೇ ತೆರಿಗೆಯನ್ನು ಪಾವತಿಸುತ್ತಿಲ್ಲ.

(Courtesy : Vijayavani) 

☀️ಯಾಕೆ ಎಸ್​ಬಿಐ ಜೊತೆಗೆ ಈ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ವಿಲೀನ? ಇದರಿಂದ ಆಗುವ ಪರಿಣಾಮಗಳೇನು? ( The Reasons for merging other banks with SBI and its Impacts)

☀️ಯಾಕೆ ಎಸ್​ಬಿಐ ಜೊತೆಗೆ ಈ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ವಿಲೀನ? ಇದರಿಂದ ಆಗುವ ಪರಿಣಾಮಗಳೇನು?
( The Reasons for merging other banks with SBI and its Impacts)
•─━━━━━═══════════━━━━━─• •─━━━━━═══════════━━━━━─•

★ಭಾರತದ ಬ್ಯಾಂಕಿಂಗ್ ವ್ಯವಸ್ಥೆ
(Indian Banking System)

★ ಹಣಕಾಸಿನ ಅರ್ಥಶಾಸ್ತ್ರ
(Financial Economics)



ಬ್ಯಾಂಕುಗಳ ವಿಲೀನ ಕುರಿತು ಕೆಲ ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಇತರ ಬ್ಯಾಂಕುಗಳಿಗೆ ಹೋಲಿಸಿದರೆ ಕೆಲ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ವಹಿವಾಟು ಸಣ್ಣ ಪ್ರಮಾಣದ್ದಾಗಿದೆ. ಭಾರತದಂಥ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ವಾಣಿಜ್ಯ ಹಾಗೂ ವೈಯಕ್ತಿಕ ಸಾಲಗಳನ್ನು ಸಮರ್ಪಕವಾಗಿ ನೀಡಲು ದೊಡ್ಡ ಬ್ಯಾಂಕುಗಳಿಂದ ಮಾತ್ರ ಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಬ್ಯಾಂಕುಗಳ ವಿಲೀನದಿಂದ ದೊಡ್ಡ ಪ್ರಮಾಣದ ಉಳಿತಾಯವೂ ಸಾಧ್ಯವಾಗಲಿದೆ. ಬ್ಯಾಡ್​ಲೋನ್ ಸಮಸ್ಯೆಯಿಂದ ಬಳಲುತ್ತಿರುವ ಬ್ಯಾಂಕುಗಳಿಗೆ ಇದರಿಂದ ತುಸು ನಿರಾಳತೆ ಸಿಗಲಿದೆ. ಆದರೆ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಯಾವಾಗ ಪೂರ್ಣಗೊಳ್ಳುತ್ತಿದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದು ಎಸ್​_ಬಿ_ಐ ಸ್ಪಷ್ಟಪಡಿಸಿದೆ. ಐದು ಬ್ಯಾಂಕುಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಗಿದೆ. ಮಾತುಕತೆ ಇನ್ನೂ ಆರಂಭದ ಹಂತದಲ್ಲಿದ್ದು, ಸಮಗ್ರವಾಗಿ ಸಮಾಲೋಚನೆ ನಡೆಸಿದ ಬಳಿಕವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎಸ್​ಬಿಐ ಸ್ಪಷ್ಟನೆ ನೀಡಿದೆ.


💢ವಿಲೀನ ನಂತರ..

ಆರು ಬ್ಯಾಂಕುಗಳ ವಹಿವಾಟು ಎಸ್​ಬಿಐ ವ್ಯಾಪ್ತಿಗೆ ಬರಲಿದೆ. ಈಗಾಗಲೇ ಆರು ಬ್ಯಾಂಕುಗಳು ನೀಡಿರುವ ಸಾಲ, ಠೇವಣಿ ಸೇರಿ ಎಲ್ಲ ಆಸ್ತಿಗಳು ಎಸ್​ಬಿಐನೊಂದಿಗೆ ಸೇರಿಕೊಳ್ಳಲಿದೆ. ಆರೂ ಬ್ಯಾಂಕಿನ ಖಾತೆದಾರರ ವಹಿವಾಟು ಎಸ್​ಬಿಐ ಮೂಲಕ ನಡೆಯಲಿದೆ. ಪ್ರಸ್ತುತ ಬ್ಯಾಂಕಿನಲ್ಲಿ ಸಿಗುತ್ತಿರುವ ಎಲ್ಲ ಸೌಲಭ್ಯಗಳನ್ನು ಎಸ್​ಬಿಐ ಮುಂದುವರಿಸುವ ಸಾಧ್ಯತೆ ಇದೆ. ವಿಲೀನ ಬಳಿಕ ಈ ಬ್ಯಾಂಕುಗಳಲ್ಲಿನ ಕೆಲ ಗುತ್ತಿಗೆ ಆಧಾರಿತ ಸಿಬ್ಬಂದಿಯನ್ನು ಕೈಬಿಡುವ ಸಾಧ್ಯತೆಯೂ ಇದೆ.


💢37 ಟ್ರಿಲಿಯನ್ ರೂ.!

ಬ್ಯಾಂಕುಗಳ ವಿಲೀನ ನಂತರ ಎಸ್​ಬಿಐ ಒಟ್ಟು ವಹಿವಾಟು 37 ಟ್ರಿಲಿಯನ್ ರೂ.ಗೆ ತಲುಪಲಿದೆ. ಪ್ರಸ್ತುತ ಎರಡನೇ ಸ್ಥಾನದಲ್ಲಿರುವ ಐಸಿಐಸಿಐ ಬ್ಯಾಂಕ್ ವಹಿವಾಟು 7.2 ಟ್ರಿಲಿಯನ್ ಆಗಿದ್ದು, ಎಸ್​ಬಿಐ ವಹಿವಾಟು ಇದಕ್ಕಿಂತ ಐದು ಪಟ್ಟು ಹೆಚ್ಚಾಗಲಿದೆ. ಪ್ರಸ್ತುತ ಜಾಗತಿಕ ಟಾಪ್-50 ಬ್ಯಾಂಕುಗಳಲ್ಲಿ ಭಾರತದ ಯಾವುದೇ ಬ್ಯಾಂಕು ಸ್ಥಾನ ಪಡೆದಿಲ್ಲ.

2015ರಲ್ಲಿ ಬ್ಲೂಮ್​ಗ್ ನೀಡಿರುವ ವರದಿ ಪ್ರಕಾರ ಸ್ಟೇಟ್_ಬ್ಯಾಂಕ್_ಇಂಡಿಯಾ 52ನೇ ಸ್ಥಾನದಲ್ಲಿದೆ. ಐದು ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಬಳಿಕ ಎಸ್​ಬಿಐ ಟಾಪ್-50 ಬ್ಯಾಂಕುಗಳಲ್ಲಿ ಸ್ಥಾನ ಪಡೆಯಲಿದ್ದು, ವಿಶ್ವದ 45ನೇ ಅತಿದೊಡ್ಡ ಬ್ಯಾಂಕಾಗಿ ಹೊರಹೊಮ್ಮಲಿದೆ.


💢ಬ್ಯಾಂಕುಗಳ ವಿಲೀನ ಪ್ರಕ್ರಿಯೆಗೆ ನೌಕರರ ವಿರೋಧ

ಬ್ಯಾಂಕುಗಳ ವಿಲೀನಕ್ಕೆ ಅಲ್ಲಿನ ಉದ್ಯೋಗಿಗಳು ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವಿಲೀನ ಬಳಿಕ ಸಾವಿರಾರು ನೌಕರರು ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ (ಎಐಬಿಇಎ) ಪ್ರತಿಭಟನೆಗೆ ಕರೆೆ ನೀಡಿದ್ದು, ವಿಲೀನ ಪ್ರಕ್ರಿಯೆ ಆರಂಭವಾದರೆ ನೌಕರರ ಹೋರಾಟ ತೀವ್ರಗೊಳ್ಳುವ ಸಾಧ್ಯತೆ ಇದೆ.


💢ಬ್ಯಾಂಕುಗಳ ವಿಲೀನ ಪ್ರಕ್ರಿಯೆ

ಎಸ್​ಬಿಐ ಬ್ಯಾಂಕುಗಳನ್ನು ವಿಲೀನಗೊಳಿಸಿ ಕೊಳ್ಳುತ್ತಿರುವುದು ಇದೇ ಮೊದಲಲ್ಲ. ಸ್ಟೇಟ್ ಬ್ಯಾಂಕ್ ಆಫ್ ಸೌರಾಷ್ಟ್ರ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂದೋರನ್ನು 10 ವರ್ಷಗಳ ಹಿಂದೆಯೇ ಎಸ್​ಬಿಐ ತನ್ನಲ್ಲಿ ವಿಲೀನಗೊಳಿಸಿಕೊಂಡಿದೆ.

 ಸವಾಲು.

ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಸೂಕ್ಷ್ಮ ವಿಚಾರವಾಗಿದ್ದು, ಕಠಿಣ ಕೆಲಸವಾಗಿದೆ. ಐದು ಬ್ಯಾಂಕುಗಳು ಪ್ರಸ್ತುತ ತಮ್ಮದೇ ನಿಯಮದ ಅಡಿ ಕೆಲಸ ಮಾಡುತ್ತಿವೆ. ಇತರ ಸಂಸ್ಥೆಗಳೊಂದಿಗೆ ಹತ್ತಾರು ಒಪ್ಪಂದಗಳನ್ನು ಮಾಡಿಕೊಂಡು, ಹಣಕಾಸು ಚಟುವಟಿಕೆ ನಿರ್ವಹಿಸುತ್ತಿವೆ. ದೊಡ್ಡ ಪಟ್ಟಣಗಳಲ್ಲಿ ಬ್ಯಾಂಕುಗಳ ಶಾಖೆಗಳು ಸ್ವತಂತ್ರವಾಗಿ ಕೆಲಸ ನಿರ್ವಹಿಸುತ್ತಿದೆ. ಇವುಗಳನ್ನು ಒಂದೇ ಸೂರಿನಡಿ ತರುವುದು ಕಷ್ಟದ ಕೆಲಸ. ಸಮಗ್ರವಾಗಿ ಅಧ್ಯಯನ ನಡೆಸಿದ ಬಳಿಕವೇ ವಿಲೀನ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದು ಎಸ್​ಬಿಐ ಮಾಜಿ ನಿರ್ದೇಶಕ ಎ. ಕೃಷ್ಣ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.


💢ವಿಲೀನ ಪ್ರಕ್ರಿಯೆ ವೆಚ್ಚ 1660 ಕೋಟಿ ರೂ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ಇತರೆ ಐದು ಸ್ಟೇಟ್ ಬ್ಯಾಂಕ್​ಗಳು ಹಾಗೂ ಭಾರತೀಯ ಮಹಿಳಾ ಬ್ಯಾಂಕ್​ನ ವಿಲೀನ ಪ್ರಕ್ರಿಯೆಗೆ ಸರಿ ಸುಮಾರು 1660 ಕೋಟಿ ರೂಪಾಯಿ ವೆಚ್ಚವಾದೀತು ಎಂದು ಮೂಡೀ’ಸ್ ಇನ್ವೆಸ್ಟರ್ ಸರ್ವೀಸ್ ಹೇಳಿದೆ.


💢ಜೇಟ್ಲಿ ಸೂತ್ರ

ಕಳೆದ ಮಾರ್ಚ್​ನಲ್ಲಿ ನಡೆದಿದ್ದ ಬ್ಯಾಂಕರ್​ಗಳ ಸಭೆಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ, ಬ್ಯಾಂಕುಗಳ ವಿಲೀನ ಪ್ರಸ್ತಾಪ ಇಟ್ಟಿದ್ದರು. ‘ಸಣ್ಣ ಗಾತ್ರದ ದೊಡ್ಡ ಸಂಖ್ಯೆಯ ಬ್ಯಾಂಕುಗಳಿದ್ದರೆ ಪ್ರಗತಿ ಸಾಧ್ಯವಿಲ್ಲ. ದೊಡ್ಡ ಗಾತ್ರದ ಕಡಿಮೆ ಬ್ಯಾಂಕುಗಳಿದ್ದರೂ ಪ್ರಗತಿ ಸಾಧಿಸಬಹುದು’ ಎಂದು ಅಭಿಪ್ರಾಯಪಟ್ಟಿದ್ದರು. ನಷ್ಟ ಅನುಭವಿಸುತ್ತಿರುವ ಬ್ಯಾಂಕುಗಳಿಗೆ ಚೈತನ್ಯ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ, ಮೊದಲ ಹಂತದಲ್ಲಿ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಕೈಗೆತ್ತಿಕೊಳ್ಳಲಿದೆ. ನಂತರ ಅವುಗಳಿಗೆ ಹಣಕಾಸಿನ ನೆರವು ಒದಗಿಸಲಿದೆ ಎನ್ನಲಾಗಿದೆ.

(Courtesy : Vijayavani) 

☀️ ಎಸ್​ಬಿಐ ಜೊತೆ ಇತರೆ ಸ್ಟೇಟ್​ಬ್ಯಾಂಕ್​ಗಳ ವಿಲೀನ ಪ್ರಕ್ರಿಯೆ (SBI Associate banks propose merger with parent SBI)

☀️ ಎಸ್​ಬಿಐ ಜೊತೆ ಇತರೆ ಸ್ಟೇಟ್​ಬ್ಯಾಂಕ್​ಗಳ ವಿಲೀನ ಪ್ರಕ್ರಿಯೆ : 
(SBI Associate banks propose merger with parent SBI)
•─━━━━━═══════════━━━━━─• •─━━━━━═══════════━━━━━─•

★ ಹಣಕಾಸಿನ ಅರ್ಥಶಾಸ್ತ್ರ
(Financial Economics)


ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸದ್ಯ ಇದು ಬಹುರ್ಚಚಿತ ವಿಷಯ. ಪರ ವಿರೋಧದ ಚರ್ಚೆಗಳು ವ್ಯಾಪಕವಾಗಿದ್ದು, ಉದ್ಯೋಗ ಕಳೆದುಕೊಳ್ಳುವ ಭೀತಿಯಿಂದ ಇತರೆ ಸ್ಟೇಟ್ ಬ್ಯಾಂಕುಗಳು ಸಿಬ್ಬಂದಿ ವಿಲೀನ ಪ್ರಕ್ರಿಯೆ ವಿರೋಧಿಸಿ ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಬ್ಯಾಂಕಿಂಗ್ ವಲಯದಲ್ಲಿ ಕಳೆದ ವಾರ ಇದ್ದಕ್ಕಿದಂತೆ ಸಂಚಲನ ಸೃಷ್ಟಿಯಾಗಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧೀನದಲ್ಲಿರುವ ಐದು ಬ್ಯಾಂಕುಗಳನ್ನು ವಿಲೀನಗೊಳಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿದ್ದೇ ಇದಕ್ಕೆ ಕಾರಣ. ಈ ಪ್ರಕ್ರಿಯೆ ಪೂರ್ಣಗೊಂಡರೆ ಭಾರತ ವಿಶ್ವದ ಟಾಪ್-50 ಬ್ಯಾಂಕುಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲಿದೆ.

 ಆದರೆ ವಿಲೀನ ಪ್ರಸ್ತಾಪಕ್ಕೆ ಪರ ಹಾಗೂ ವಿರೋಧ ಕೇಳಿಬರುತ್ತಿವೆ. ವಿಲೀನಗೊಳ್ಳಲಿರುವ ಐದು ಬ್ಯಾಂಕುಗಳ ಉದ್ಯೋಗಿಗಳು ಪ್ರತಿಭಟನೆ ನಡೆಸಿ, ಎಸ್​ಬಿಐ ಕ್ರಮವನ್ನು ಖಂಡಿಸಿದ್ದಾರೆ.


●.ಯಾವ್ಯಾವ ಬ್ಯಾಂಕುಗಳ ವಿಲೀನ?

* ಸ್ಟೇಟ್ ಬ್ಯಾಂಕ್ ಆಫ್ ಮೈಸೂರು

* ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಹಾಗೂ ಜೈಪುರ

* ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್

* ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ

* ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್

* ಭಾರತೀಯ ಮಹಿಳಾ ಬ್ಯಾಂಕ್.

(Courtesy : vijayavani) 

Tuesday 14 June 2016

☀ ಯುಪಿಎಸ್‌ಸಿ (IAS) ಪೂರ್ವ ಪರೀಕ್ಷೆ ತಂತ್ರವೇ ಮಂತ್ರ (UPSC (IAS) Preliminary Exam Preparation Tips)

☀ ಯುಪಿಎಸ್‌ಸಿ (IAS) ಪೂರ್ವ ಪರೀಕ್ಷೆ ತಂತ್ರವೇ ಮಂತ್ರ
(UPSC (IAS) Preliminary Exam Preparation Tips)
━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಪರೀಕ್ಷೆ ತಯಾರಿ.
(IAS/KAS Exams Preparation)


ನಾಗರಿಕ ಸೇವಾ ಪರೀಕ್ಷೆಗೆ ನಿರ್ದಿಷ್ಟ ಕಾಲಮಾನದಲ್ಲಷ್ಟೇ ತಯಾರಿಯಾದರೆ ಸಾಕಾಗುವುದಿಲ್ಲ. ಆ ವರ್ಷದ ಪರೀಕ್ಷೆಗೆ ನೋಟಿಫಿಕೇಷನ್‌ ಜಾರಿಯಾದ ಕ್ಷಣದಿಂದಲೇ ಆಕಾಂಕ್ಷಿಗಳು ಪರೀಕ್ಷೆಗೆ ಸಿದ್ಧತೆ ನಡೆಸಬೇಕು. ಪೂರ್ವ ಪರೀಕ್ಷೆಗೆ (ಪಿ.ಟಿ.) ಅಭ್ಯರ್ಥಿಗಳು ಒತ್ತು ನೀಡಬೇಕು. ಮುಂದಿನ ಎರಡು ಹಂತಗಳಾದ ಮುಖ್ಯ ಪರೀಕ್ಷೆ ಹಾಗೂ ವೈಯಕ್ತಿಕ ಪರೀಕ್ಷೆಗೆ ಇದೇ ಸೋಪಾನ.

ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಪೂರ್ವ ಪರೀಕ್ಷೆ ಬರೆಯುವುದರಿಂದ ಅದೊಂದು ರೀತಿ ಜೂಜಾಟದಂತೆ. ಮುಖ್ಯ ಪರೀಕ್ಷೆಯಲ್ಲಿ ಉತ್ತಮವಾಗಿ ಬರೆದ ಪ್ರತಿಭಾವಂತ ಅಭ್ಯರ್ಥಿಗಳೂ ಕೆಲವೊಮ್ಮೆ ಈ ಪರೀಕ್ಷೆಯಲ್ಲಿ ಫೇಲಾಗುವುದುಂಟು. ಅಂಥವರಲ್ಲಿ ಹಿಂದೆ ವೈಯಕ್ತಿಕ ಪರೀಕ್ಷೆವರೆಗೆ ಹಾಜರಾದವರು ಕೂಡ ಸೇರಿರುವ ಉದಾಹರಣೆಗಳೂ ಉಂಟು. ಈ ಪರೀಕ್ಷೆಯನ್ನು ಹಗುರವಾಗಿ ಪರಿಗಣಿಸುವುದು ತರವಲ್ಲ.

ಫಲಿತಾಂಶ ಆಧಾರಿತ ತಂತ್ರವನ್ನು ಈ ಪರೀಕ್ಷೆಯ ವಿಷಯದಲ್ಲಿ ಅಭ್ಯರ್ಥಿಗಳು ಅನುಸರಿಸುವುದು ಸೂಕ್ತ. ಈ ನಿಟ್ಟಿನಲ್ಲಿ ಕೆಲವು ಅನುಕೂಲಕರ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ. ಮೊದಲನೆಯದಾಗಿ, ಅಭ್ಯರ್ಥಿಗಳು ಮಾಹಿತಿಯ ಕೊರತೆಯನ್ನು ಎದುರಿಸಬಾರದು. ಇದನ್ನು ನಾವು ‘ಜ್ಞಾನಾಧಾರಿತ’ ಎಂದು ಹೇಳುತ್ತೇವೆ. ಪಿ.ಟಿ. ಪಠ್ಯಕ್ರಮ ಸಮಗ್ರವಾಗಿರುವುದಿಲ್ಲ (ಅದು ಒಳಾರ್ಥಶೋಧಕ ಸ್ವರೂಪದ್ದಾಗಿರುತ್ತದೆ). ಬಹುತೇಕ ಅಭ್ಯರ್ಥಿಗಳಿಗೆ ಯಾವುದನ್ನು ಓದಬೇಕು, ಯಾವುದನ್ನು ಬಿಡಬೇಕು ಎಂಬುದನ್ನು ಕುರಿತು ಗೊಂದಲವಿರುತ್ತದೆ.

ಆದ್ದರಿಂದ ಮಾಹಿತಿ ಸಂಗ್ರಹಿಸುವ ಸೂಕ್ಷ್ಮಮತಿಯನ್ನು ಬೆಳೆಸಿಕೊಳ್ಳಬೇಕು. ಈ ಕೌಶಲವಿಲ್ಲದಿದ್ದರೆ ಕಲೆಹಾಕುವ ಮಾಹಿತಿ ಸಮೃದ್ಧಿಯಾದೀತೇ ವಿನಾ ಗುಣಾತ್ಮಕವಾಗದು.

ಈ ಹಿನ್ನೆಲೆಯಲ್ಲಿ ಎರಡು ಸೂಕ್ಷ್ಮಗಳನ್ನು ಅಭ್ಯರ್ಥಿಗಳು ಪಾಲಿಸಬೇಕು. 

ಒಂದು, ಅಧ್ಯಯನ ಮಾಡಲು ಹಾಗೂ ಪೂರಕ ಮಾಹಿತಿಗಾಗಿ ಸಂಗ್ರಹಿಸುವ ಪುಸ್ತಕಗಳ ಆಯ್ಕೆಯಲ್ಲಿ ಎಚ್ಚರವಿರಬೇಕು. ಸಿಕ್ಕಿದ್ದೆಲ್ಲವನ್ನೂ ಓದಕೂಡದು.

ಉತ್ತಮ ಗುಣಮಟ್ಟದ ಪುಸ್ತಕಗಳು, ಸರ್ಕಾರಿ ಪತ್ರಿಕೆಗಳು ಹಾಗೂ ಆಯ್ದ ಸರ್ಕಾರಿ ದಾಖಲೆಗಳು ಎಲ್ಲ ಹಂತದ ಪರೀಕ್ಷೆಗಳಿಗೂ  ಉಪಯುಕ್ತ. ಒಳ್ಳೆಯದಕ್ಕೆ ಯಾವುದೇ ಅಡ್ಡದಾರಿ ಇಲ್ಲ ಎನ್ನುವುದಂತೂ ಸತ್ಯ. ಇನ್ನೊಂದು, ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಪರಿಶೀಲಿಸಿ, ಏನನ್ನು ಓದಬೇಕು ಎಂದು ನಿರ್ಧರಿಸುವುದು. ಪ್ರಶ್ನೆಗಳ ಸ್ವರೂಪ, ಅವುಗಳನ್ನು ಕೇಳುವ ಕ್ರಮ, ವಿಷಯದ ಆಳ, ಯಾವ ರೀತಿ ಗೊಂದಲಗಳನ್ನು ಮೂಡಿಸುವಂತೆ ಪ್ರಶ್ನೆ ಕೇಳುತ್ತಾರೆ ಎನ್ನುವ ಸೂಕ್ಷ್ಮ–ಎಲ್ಲವನ್ನೂ ಹಳೆ ಪ್ರಶ್ನೆಪತ್ರಿಕೆಗಳ ಅಧ್ಯಯನ ಸ್ಪಷ್ಟಪಡಿಸೀತು.

ಎರಡನೆಯದಾಗಿ, ಪರೀಕ್ಷಾ ಪ್ರಕ್ರಿಯೆಯ ಬದಲಾವಣೆಯನ್ನು ಅರಿಯುವ ಜಾಣ್ಮೆ ಇರಬೇಕು. ಪರೀಕ್ಷಾ ಬದಲಾವಣೆಯ ಪ್ರಕ್ರಿಯೆ ಶುರುವಾದಾಗ (ಸಂಕ್ಷಿಪ್ತವಾಗಿ ಹೇಳುವುದಾದರೆ, ಪಿ.ಟಿ.ಯಲ್ಲಿ ‘ಸಿಸ್ಯಾಟ್‌’ ಎನ್ನಲಾಗುವ ಕ್ರಮವನ್ನು ಜಾರಿಗೆ ತಂದದ್ದು) ವಾಡಿಕೆ ಕಲಿಕೆಯಿಂದ ಆನ್ವಯಿಕ ಕಲಿಕೆಯನ್ನು ಆಧರಿಸಿದ ಪ್ರಶ್ನೆಗಳಿಗೆ ಸ್ಥಿತ್ಯಂತರ ಆಯಿತು. ಸಂಪುಟ ಸಚಿವರು ಹಾಗೂ ಪಿ.ಟಿ. ನಿರ್ದೇಶಕರು ಸಂಸತ್‌ನಲ್ಲಿ 2010ರಲ್ಲಿ ಘೋಷಿಸಿದಂತೆ ಇದು ಬದಲಾವಣೆಗಳ ಗುರಿಗಳಲ್ಲಿ ಒಂದು. ಇದು ಪಿ.ಟಿ.ಯಲ್ಲಿ ಪ್ರಮುಖ ಬದಲಾವಣೆಗೆ ಕಾರಣವಾಯಿತು.

ಈಗ ಉರುಹೊಡೆದು ಓದಿ, ಯುಪಿಎಸ್‌ಸಿ ಪೂರ್ವ ಪರೀಕ್ಷೆ ಬರೆಯುವುದು ಅಸಾಧ್ಯ. ವಿಷಯ ಪರಿಕಲ್ಪನಾ ಸ್ಪಷ್ಟತೆ ತುಂಬ ಮುಖ್ಯ. ಈಗ ಬಹುತೇಕ ಪ್ರಶ್ನೆಗಳು ಹೈಬ್ರಿಡ್‌ ಸ್ವರೂಪದವು. ಮಾಹಿತಿ ಜ್ಞಾನದ ಜೊತೆಗೆ ಪರಿಕಲ್ಪನಾ ಸ್ಪಷ್ಟತೆಯನ್ನೂ ಅಳೆಯುವಂತೆ ಅವು ಇರುತ್ತವೆ. ಆದ್ದರಿಂದ ಕೇವಲ ಮಾಹಿತಿ ಇದ್ದರೆ ಸಾಲದು. ಲಭ್ಯ ಮಾಹಿತಿಯನ್ನು ವಿವಿಧ ಆಯಾಮಗಳಿಗೆ ಅನ್ವಯಿಸಿ ನೋಡುವ ಜಾಣ್ಮೆ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಆಕರಗ್ರಂಥಗಳು ಹಾಗೂ ಹೊಂದಿಸಿಕೊಂಡ ನೋಟ್ಸ್‌ ಇದ್ದರಷ್ಟೇ ಸಾಲದು. ಅವನ್ನು ಯಾವ ರೀತಿ ಅನ್ವಯಿಸಿ ನೋಡಬೇಕು ಎಂದು ಪರಿಣತರನ್ನು ಕೇಳಿ ತಿಳಿಯಬೇಕು.


ಕೊನೆಯದಾಗಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕರಾರುವಾಕ್ಕಾದ ಉತ್ತರಗಳನ್ನು ವೇಗವಾಗಿ ಬರೆಯುವುದರ ಮೂಲಕ ಬೇರೆ ಅಭ್ಯರ್ಥಿಗಳನ್ನು ಹಿಂದಿಕ್ಕಬೇಕಾಗುತ್ತದೆ. ಇದಕ್ಕೆ ಸೂಕ್ತ ಅಭ್ಯಾಸ ಅಗತ್ಯ. ಕೆಲವು ಅಣಕು ಪರೀಕ್ಷೆಗಳನ್ನು ಬರೆದು, ಕೈ ಪಳಗಿಸಿಕೊಳ್ಳಬೇಕು. ಹೀಗೆ ಮಾಡಿದಾಗ ಸಮಯನಿರ್ವಹಣೆ, ಪ್ರಮುಖವಾದ ವಿವಿಧ ಮಾಹಿತಿಯನ್ನು ಆಧರಿಸಿದ ಪ್ರಶ್ನೆಗಳನ್ನು ಎದುರಿಸುವ ರೀತಿ, ಪರಿಣತರ ವಿಶ್ಲೇಷಣೆ ಇವೆಲ್ಲವೂ ಮನವರಿಕೆಯಾಗುತ್ತವೆ. ಅಣಕು ಪರೀಕ್ಷೆಯ ಗುಣಮಟ್ಟದ ಬಗೆಗೆ ಕೂಡ ಎಚ್ಚರಿಕೆ ವಹಿಸಬೇಕು. ಯುಪಿಎಸ್‌ಸಿ ನಡೆಸುವ ಪರೀಕ್ಷೆಯ ಗುಣಮಟ್ಟಕ್ಕೆ ಸರಿಗಟ್ಟುವಂತೆ ಅದು ಇರಬೇಕಲ್ಲದೆ, ಅದಕ್ಕೆ ಮನಸ್ಸು ಅಣಿಯಾಗಲು ಉದ್ದೀಪಿಸಬೇಕು.

(ಲೇಖಕರು ನಾಗರಿಕ ಸೇವಾ ಪರೀಕ್ಷೆಯ ಅಭ್ಯರ್ಥಿಗಳಿಗೆ ಮಾರ್ಗದರ್ಶಕರು, ಅಂಕಣಕಾರರು)
(Courtesy : ಪ್ರಜಾವಾಣಿ)