"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday, 7 March 2015

☀ಪ್ರಾಚೀನ ಭಾರತದ ವಿಶ್ವವಿದ್ಯಾಲಯಗಳಲ್ಲಿ ಒಂದಾದ "ತಕ್ಷಶಿಲಾ ವಿಶ್ವವಿದ್ಯಾಲಯ" ದ ಕುರಿತು ವಿವರಿಸಿ.  ( "Takshasila University" is one of the India's ancient universities. elaborate.)

☀ಪ್ರಾಚೀನ ಭಾರತದ ವಿಶ್ವವಿದ್ಯಾಲಯಗಳಲ್ಲಿ ಒಂದಾದ "ತಕ್ಷಶಿಲಾ ವಿಶ್ವವಿದ್ಯಾಲಯ" ದ ಕುರಿತು ವಿವರಿಸಿ.
( "Takshasila University" is one of the India's ancient universities. elaborate.)
━━━━━━━━━━━━━━━━━━━━━━━━━━━━━━━━━━━━━━━━━━━━━

●.ರಾಷ್ಟ್ರದ ವೈಭವಪೂರ್ಣ ಭವಿತವ್ಯಕ್ಕೆ, ನಾಡಿನ ತರುಣರು ಕಾರಣರಾದರೆ, ರಾಷ್ಟ್ರದ ಆಧಾರಸ್ತಂಭ ತರುಣ ವೃಂದವನ್ನು ನಿರ್ಮಾಣ ಮಾಡುವ ಕಾರ್ಯವು ಆ ನಾಡಿನ ವಿದ್ಯಾಮಂದಿರಗಳನ್ನವಲಂಬಿಸಿರುತ್ತದೆ. ರಾಷ್ಟ್ರದ ಘನತೆ, ಗೌರವಗಳಿಗೆ ಧಕ್ಕೆ ತಾರದೆ ವರ್ತಿಸುವ ಯುವಕ ಸಮೂಹವನ್ನು ನಿರ್ಮಿಸುವ ಈ ಗುರುತರ ಜವಾಬ್ದಾರಿಯುತ ಕಾರ್ಯವನ್ನು ಪ್ರಾಚೀನ ಭಾರತದ ತಕ್ಷಶಿಲಾ, ನಾಲಂದಾ ಮತ್ತು ವಿಕ್ರಮಶಿಲಾ ವಿಶ್ವವಿದ್ಯಾಲಯಗಳು ಯಶಸ್ವಿಯಾಗಿ ನಿರ್ವಹಿಸುತ್ತಿದ್ದವು.

ಈ ವಿದ್ಯಾಮಂದಿರಗಳು ಕೇವಲ ಭಾರತದಲ್ಲಷ್ಟೇ ಅಲ್ಲ; ವಿಶ್ವದ ನಾನಾ ಮೂಲೆಗಳಲ್ಲಿಯೂ ಭಾರತದ ಕೀರ್ತಿಯನ್ನು ಮೊಳಗಿಸಿವೆ. ಭಾರತದ ವಿದ್ಯಾಮಂದಿರಗಳಲ್ಲಿ ಅಭ್ಯಸಿಸದಿದ್ದರೆ ವಿದ್ಯಾ ಪ್ರವಚನವು ಪೂರ್ಣವಾಗಲಿಲ್ಲ ಎಂಬ ಪ್ರತೀತಿಯು ಆಗಿನ ಕಾಲದಲ್ಲಿ ಬಳಕೆಯಲ್ಲಿತ್ತು. ಅಂತಹ ಬೃಹತ್‍ ಸಂಸ್ಥೆಗಳ ಅವಶೇಷಗಳು ಮಾತ್ರ ಈಗ ಭಾರತದಲ್ಲಿ ಕಾಣಬರುತ್ತಿವೆ.

ಇವುಗಳಲ್ಲಿ ತಕ್ಷಶಿಲಾ ವಿದ್ಯಾಮಂದಿರವು ಈಗಿನ ಪಂಜಾಬ್ ನಲ್ಲಿಯೂ ಉಳಿದೆರಡು ಮಗಧ (ಈಗಿನ ಬಿಹಾರ್‍)ದಲ್ಲಿಯೂ ಇದ್ದುವು.


●.ತಕ್ಷಶಿಲಾ ವಿಶ್ವವಿದ್ಯಾಲಯ:
("Takshasila University")

ತಕ್ಷಶಿಲಾವು ಭಾರತದ ಅತಿ ಪ್ರಾಚೀನ ವಿದ್ಯಾಮಂದಿರವಾಗಿದೆ. ಇಲ್ಲಿನ ನಾಗರೀಕತೆಯು ಪ್ರಪಂಚದ ಅತ್ಯುತ್ತಮ ನಾಗರೀಕತೆಗಳ ಗುಂಪಿನಲ್ಲಿ ಎಣಿಸಲ್ಪಡುತ್ತದೆ. ದೇಶ ವಿದೇಶಗಳಿಂದ ವಿದ್ವಾಂಸರ ಆಕರ್ಷಕ ಕೇಂದ್ರವಾಗಿದ್ದ ತಕ್ಷಶಿಲೆಯಲ್ಲಿ ಆರ್ಯಪುತ್ರ ಚಾಣಕ್ಯನಂತಹ ಸುಪ್ರಸಿದ್ಧ ರಾಜನೀತಿಜ್ಞರೂ ಅಜಾತಶತ್ರು ರಾಜನ ಆಸ್ಥಾನ ವೈದ್ಯನಾಗಿದ್ದ ಕೌಮಾರ ಜೀವಕನಂತಹ ಶಲ್ಯ ಚಿಕಿತ್ಸಕ(Surgeon)ರೂ ವಿದ್ಯಾರ್ಥಿಗಳಾಗಿದ್ದರು. ಆಗಿನ ಕಾಲದಲ್ಲಿ ಆಯುರ್ವೇದ, ಅರ್ಥಶಾಸ್ತ್ರ ಮತ್ತು ರಾಜನೀತಿ ಕಲಿಯಲು ಇದ್ದ ಒಂದೇ ಸ್ಥಾನವೆಂದರೆ ತಕ್ಷಶಿಲಾ ಎನ್ನುವಷ್ಟು ಹೆಸರು ಪಡೆದಿದ್ದಿತ್ತು.

ಪ್ರಾರಂಭದಲ್ಲಿ ವೈದಿಕ ಸಂಸ್ಕೃತಿಯ ಕೇಂದ್ರವಾಗಿದ್ದು ಕ್ರಮೇಣ ಬೌದ್ಧಮತ ಜ್ಞಾನಕ್ಕೆ ಪ್ರಮುಖ ಕೇಂದ್ರವಾದ ಈ ತಕ್ಷಶಿಲಾ ವಿಶ್ವವಿದ್ಯಾಲಯವು ಸುಮಾರು ಒಂದು ಸಾವಿರ ವರ್ಷಗಳ ಕಾಲದವರೆವಿಗೆ ಬೆಳಗಿ, ಜಗತ್ತಿನ ಪ್ರತಿಯೊಂದು ಮೂಲೆಗೂ ಭಾರತೀಯ ಸಭ್ಯತೆಯ ಬೆಳಕನ್ನು ಹರಡಿ, ಭಾರತೀಯ ಸಾಂಸ್ಕೃತಿಕ ಐಕ್ಯತೆಯ ಕಟ್ಟನ್ನು ಬಲಪಡಿಸಿತು.

●.ಕ್ರಿ. ಪೂ. ಐದನೇ ಶತಮಾನದಿಂದ ಕ್ರಿ. ಶ. 6ನೆ ಶತಮಾನದವರೆಗೆ ಬಾಳಿ ಬೆಳಗಿದ ಈ ಪ್ರಾಚೀನತಮ ವಿದ್ಯಾಕೇಂದ್ರವು ಆರನೆ ಶತಮಾನದಲ್ಲಿ ಹೂಣರ ಧಾಳಿಗೆ ಸಿಲುಕಿ ಪ್ರಕೃತಿಯಲ್ಲಿ ಲೀನವಾಗಿ ಹೋಯಿತು. ಆದರೆ ವಿಜ್ಞಾನಿಗಳು ಇತ್ತೀಚಿನ ಸಂಶೋಧನೆಯಿಂದ ಪುನಃ ಬೆಳಕಿಗೆ ಬಂದಿದೆ. ಆ ಕಾಲದಲ್ಲಿಯೇ ಭಾರತದಲ್ಲಿ ಪಾತ್ರೆಗಳು ಬಳಕೆಯಲ್ಲಿದ್ದುದು ಕಾಣಬರುತ್ತದೆ.

ಬ್ರಾಹ್ಮಿ ಮತ್ತು ಖರೋಷ್ಟ್ರೀ ಲಿಪಿಯಲ್ಲಿ ಬರೆದ ಬ್ರಾಹ್ಮಣ-ಬೌದ್ಧದರ್ಶನ-ಸಾಹಿತ್ಯ-ಅರ್ಥಶಾಸ್ತ್ರ ಮತ್ತು ವೈದ್ಯಗ್ರಂಥಗಳೂ ಅಲ್ಲಿ ದೊರೆತಿವೆ. ಈ ಸಂಶೋಧನೆಯ ಗರ್ಭದಿಂದ ತಕ್ಷಶಿಲೆಯ ವಿಷಯ ಇನ್ನೇನು ಹೊರಬೀಳುವುದೋ ನೋಡಬೇಕಾಗಿದೆ.

(Courtesy: Vikrama)

No comments:

Post a Comment