"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday 9 April 2020

•► ವೃತ್ತಿ ಬದುಕಿನ ಯಶಸ್ಸು ಸಾಧಿಸಲು 8 ಅಂಶಗಳ ಸೂತ್ರಗಳು. (the list of 8 points to get success in career)

•► ವೃತ್ತಿ ಬದುಕಿನ ಯಶಸ್ಸು ಸಾಧಿಸಲು 8 ಅಂಶಗಳ ಸೂತ್ರಗಳು.
(the list of 8 points to get success in career)

━━━━━━━━━━━━━━━━━━━━━
★ ವ್ಯಕ್ತಿತ್ವ ವಿಕಸನ ಕೌಶಲ್ಯಗಳು
(personality Development skills)


ವೃತ್ತಿ ಜೀವನದಲ್ಲಿ ತುಂಬ ಯಶಸ್ಸು ಕಂಡವರನ್ನು ಯಾವತ್ತಾದರೂ ಮಾತನಾಡಿಸಿದ್ದೀರಾ? ಹೇಗೆ ಅಷ್ಟೆಲ್ಲ ದೊಡ್ಡ ಯಶಸ್ಸು ಅವರ ಪಾಲಿಗೆ ಒಲಿಯಿತು ಅಂತೇನಾದರೂ ಚರ್ಚೆ ಮಾಡಿದ್ದೀರಾ? ಇಂಥದ್ದನ್ನೆಲ್ಲ ಟೀವಿ, ಯೂಟ್ಯೂಬ್ ಗಳಲ್ಲಿ ನೋಡೋಕೆ ಅಥವಾ ಸಂದರ್ಶನಗಳಲ್ಲಿ ಓದುವುದಕ್ಕೆ ಚೆಂದ ಅಂತೀರಾ?
ಹಾಗಿದ್ದರೆ ನಿಮ್ಮೆದುರು 8 ಅಂಶಗಳನ್ನು ಇಡುತ್ತಿದ್ದೇವೆ. ನೀವು ಆಲೋಚಿಸಿ, ಇಷ್ಟನ್ನು ನೀವು ಅಳವಡಿಸಿಕೊಂಡರೆ ವೃತ್ತಿಯಲ್ಲಿ ಯಶಸ್ಸು ಪಡೆಯುವುದು ಕಷ್ಟವೇನಲ್ಲ. ಹಾಗಂತ ಈ ಎಂಟು ಅಂಶಗಳನ್ನು ಸರಕ್ಕನೆ ಅಳವಡಿಸಿಕೊಳ್ಳುವುದು ಕೂಡ ಸುಲಭವಲ್ಲ. ಈ ಅಂಶಗಳಲ್ಲಿ ಕೆಲವನ್ನು ನೀವು ಈಗಾಗಲೇ ದಾಟಿರಬಹುದು. ಅಥವಾ ಎಲ್ಲವೂ ನಿಮ್ಮ ಪಾಲಿಗೆ ಹಾಗೇ ಉಳಿದಿರಬಹುದು.
ಅಳೆದು- ತೂಗಿ ನೋಡಿಕೊಳ್ಳಿ. ಆ ಮೇಲೆ ನೀವೇ ನಿರ್ಧಾರ ಮಾಡಿ.

✦ 'ಇಲ್ಲ' ಅನ್ನೋದನ್ನು ಕಲಿಯಿರಿ

ಎಲ್ಲರಿಗೂ ದಿನದ ಇಪ್ಪತ್ನಾಲ್ಕು ಗಂಟೆಯೇ ಇರುವುದು. ಆದರೆ ಕೆಲವರು ಅಷ್ಟರಲ್ಲೇ ವಿಪರೀತ ಕೆಲಸ ಮಾಡುತ್ತಾರೆ. ಅರ್ಥಾತ್ ಒಂದು ನಿಮಿಷವೂ ವ್ಯರ್ಥವಾಗುವುದಕ್ಕೆ ಬಿಡದೆ ಪ್ರಯೋಜನ ಮಾಡಿಕೊಂಡಿರುತ್ತಾರೆ. ಅದು ಹೇಗೆ ಸಾಧ್ಯ ಗೊತ್ತಾ? ಸಾಮಾನ್ಯವಾಗಿ ಸ್ನೇಹಿತರೋ ಸಂಬಂಧಿಕರೋ ಎಲ್ಲಾದರೂ ಕರೆದರೆ ಅಥವಾ ಕಚೇರಿ ಸಮಯದಲ್ಲೇ ಕಾಫೀ ಮತ್ತೊಂದಕ್ಕೆ ಕರೆದರೆ ಎಂಥ ಕೆಲಸ ಇದ್ದರೂ ಏನಾದರೂ ಅಂದುಕೊಂಡರೆ ಎಂಬ ಅಳುಕಿನಲ್ಲಿ ಅವರ ಜತೆಗೆ ಹೋಗಿಬಿಡ್ತೀವಿ. ಆ ಕಾರಣದಿಂದಾಗಿ ಕರೆದವರ ಪಾಲಿಗೆ ಒಳ್ಲೆಯವರಾಗಬಹುದು. ಆದರೆ ಮುಗಿಸಬೇಕಾದ ಕೆಲಸ ಮುಂದಕ್ಕೆ ಹೋಗುತ್ತದೆ. ಅಥವಾ ಅಂದುಕೊಂಡಂತೆ ಅಚ್ಚುಕಟ್ಟಾಗಿ ಆಗುವುದಿಲ್ಲ. ಹೀಗೂ ಅಲ್ಲದಿದ್ದರೆ ಕೆಲಸ ವಹಿಸಿದವರ ಕಣ್ಣಲ್ಲಿ ನಾವು 'ಬೇಜವಾಬ್ದಾರರು' ಅನ್ನಿಸಿಕೊಳ್ಳುತ್ತೇವೆ.
ನೆನಪಿರಲಿ: ಕೆಲಸ ಇದ್ದಾಗ ಸಂಕೋಚಕ್ಕೆ ಬೀಳದೆ 'ಇಲ್ಲ' ಅನ್ನೋದನ್ನು ಕಲಿಯಿರಿ.

✦ "ನಾನು ಮಾಡ್ತೀನಿ" ಎಂದು ಮುನ್ನುಗ್ಗಿ

ನಮಗೆ ಗೊತ್ತಿರುವ ಕೆಲಸ ಇದ್ದಲ್ಲಿ, ಅದನ್ನು ಅಚ್ಚುಕಟ್ಟಾಗಿ ಮಾಡಬಲ್ಲೆವು ಎಂಬ ನಂಬಿಕೆ ಇದ್ದಲ್ಲಿ 'ನಾನು ಮಾಡ್ತೀನಿ' ಎಂದು ಮುನ್ನುಗ್ಗಿ. ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡರೆ ಹೇಗೆ, ನಾನಾಗಿಯೇ ಕೇಳಿದರೆ ಏನೆಂದುಕೊಂಡಾರೋ ಎಂಬ ಅಳುಕು ಬೇಡ. ಕೆಲಸ ಗೊತ್ತಿದ್ದೂ ತಾವಾಗಿಯೇ ಮುಂದೆ ಬಂದು, ಜವಾಬ್ದಾರಿ ತೆಗೆದುಕೊಳ್ಳದವರನ್ನು ಯಾರೂ ಇಷ್ಟಪಡುವುದಿಲ್ಲ. ಮುಖ್ಯವಾಗಿ ಉದ್ಯೋಗ ಸ್ಥಳದಲ್ಲಿ ಮೈ ಮೇಲೆ ಜವಾಬ್ದಾರಿ ಹಾಕಿಕೊಳ್ಳದವರನ್ನು 'ಎಣ್ಣೆ ಹಚ್ಚಿಕೊಂಡವರಂತೆ' ಆಡುತ್ತಾರೆ ಎನ್ನುತ್ತಾರೆ. ಅದರರ್ಥ ಯಾವುದಕ್ಕೆ ಸಿಗದೆ ನುಣುಚಿಕೊಳ್ಳುವವರು ಅಂತ. ಆದ್ದರಿಂದ ಅಗತ್ಯ ಕಂಡುಬಂದಲ್ಲಿ 'ನಾನು ಮಾಡ್ತೀನಿ' ಎಂದು ಮುನ್ನುಗ್ಗಿ.

✦ ಪ್ರತಿ ನಿತ್ಯವೂ ಕಲಿಕೆ ಜಾರಿಯಲ್ಲಿರಲಿ

ಕೆಲವರ ಪಾಲಿಗೆ ಒಂದು ಕೆಲಸ ಸಿಕ್ಕಿಬಿಟ್ಟರೆ, ಅದರಲ್ಲೂ ಉದ್ಯೋಗ ಭದ್ರತೆ ಇರುವಂತೆ ಕಡೆ ಕೆಲಸ ಸಿಕ್ಕಿಬಿಟ್ಟರೆ ಅರ್ಥಾತ್ ನಿವೃತ್ತಿ ಪಡೆದಂಥ ಮನಸ್ಥಿತಿ ತಲುಪಿಬಿಡುತ್ತಾರೆ. ಹೊಸದೇನನ್ನೂ ಕಲಿಯದೆ ಉಳಿದು ಬಿಡುತ್ತಾರೆ. ಕಂಪ್ಯೂಟರ್ ಕಲಿಯಬೇಕು ಎಂದು ಕಡ್ಡಾಯ ಮಾಡಿದಾಗ ಹೆದರಿದ ಎಷ್ಟೋ ಮಂದಿ ಸರ್ಕಾರಿ ನೌಕರರು ಸ್ವಯಂ ನಿವೃತ್ತಿ ಪಡೆದ ಉದಾಹರಣೆಗಳಿವೆ. ಇಂಗ್ಲಿಷ್ ನಲ್ಲಿ ಪಾಠ ಮಾಡಬೇಕಂತೆ ಎಂದು ಹೆದರುವ ಸರ್ಕಾರಿ ಶಾಲೆಯ ಶಿಕ್ಷಕ- ಶಿಕ್ಷಕಿಯರು ಎಷ್ಟೋ ಮಂದಿ ಇದ್ದಾರೆ. ಆದರೆ ಕಲಿಕೆ ಸದಾ ಜಾರಿಯಲ್ಲಿದ್ದರೆ ಇದು ದೊಡ್ಡ ವಿಷಯವೇ ಇಲ್ಲ. ಇನ್ನು ಪತ್ರಿಕೋದ್ಯಮದಲ್ಲಿ ಕೂಡ ಡೆಸ್ಕ್ ನಲ್ಲಿ ಕೆಲಸ ಮಾಡುವವರನ್ನು ರಿಪೋರ್ಟಿಂಗ್ ಗೆ ಹಾಕಿದರೆ ಕೂಡ ಭಯ ಬಿದ್ದು, ಕೆಲಸ ಬಿಡುವವರಿದ್ದಾರೆ.

✦ ಟೈಮ್ ಪಾಸ್ ಆಗ್ತಿಲ್ಲ ಅನ್ನೋರು ಗೆಲ್ಲೋಕೆ ಆಗಲ್ಲ

ನಾವು ಪ್ರಯತ್ನ ಪಡಲಿ, ಪಡದೇ ಇರಲಿ ಸಮಯವಂತೂ ತನ್ನಷ್ಟಕ್ಕೆ ತಾನು ಮುಂದಕ್ಕೆ ಹೋಗುತ್ತಲೇ ಇರುತ್ತದೆ. ದಿನದಲ್ಲಿ ಇಂತಿಷ್ಟೆ ಹೊತ್ತು ನಿದ್ದೆ. ಇಷ್ಟು ಹೊತ್ತಿಗೆ ಕೆಲಸ, ಇಷ್ಟು ಸಮಯ ಓದು ಎಂದು ಟೈಮ್ ಟೇಬಲ್ ಹಾಕಿಕೊಂಡು ಇರುವ ಜನರ ಮಧ್ಯೆ ನಾವು ಬದುಕುತ್ತಿದ್ದೇವೆ. ಅಂಥ ಸನ್ನಿವೇಶದಲ್ಲಿ, ಅಯ್ಯೋ ನನಗೆ ಟೈಮ್ ಪಾಸ್ ಆಗ್ತಿಲ್ಲ ಎನ್ನುವವರಿದ್ದರೆ ಅದಕ್ಕೆ ಕಾರಣ ಖಂಡಿತಾ ಅವರ ಅಶಿಸ್ತಾಗಿರುತ್ತದೆ. ಭವಿಷ್ಯದ ಬಗ್ಗೆ ಕನಸು, ಗುರಿ ಮತ್ತು ಅದನ್ನು ತಲುಪಲು ಏನು ಮಾಡಬೇಕು ಎಂದು ಸರಿಯಾಗಿ ಯೋಜನೆ ರೂಪಿಸದ ವ್ಯಕ್ತಿ ಮಾತ್ರ ಹೀಗೆ ಆಲೋಚನೆ ಮಾಡಲು ಸಾಧ್ಯ.

✦ ಯಾರಿಗೂ ನಾನು ಹೇಳೋದು ಅರ್ಥವಾಗ್ತಿಲ್ಲ

'ನಾನು ಹೇಳುವುದು ಅರ್ಥ ಆಗ್ತಿದೆಯಾ?' - ಈ ಪ್ರಶ್ನೆಯನ್ನು ಒಂದು ದಿನದಲ್ಲಿ ಎಷ್ಟು ಸಲ ಕೇಳುತ್ತೀರಿ? ಆ ಪೈಕಿ ಹೊಸಬರು ಎಷ್ಟು ಮಂದಿ ಅಥವಾ ನೀವು ನಿತ್ಯವೂ ವ್ಯವಹರಿಸುವಂಥವರು ಎಷ್ಟು ಜನ? ಒಂದು ದಿನದಲ್ಲಿ ಪದೇ ಪದೇ ನೀವು ಈ ಮಾತನ್ನು ಬಳಸುತ್ತಿದ್ದೀರಿ ಅಂದರೆ ಖಂಡಿತಾ ಸಮಸ್ಯೆ ಇದೆ ಅಂತಲೇ ಅರ್ಥ. ಸಂವಹನದ ಕೊರತೆ ಇದ್ದಲ್ಲಿ ಹೀಗೆ ಆಗುತ್ತದೆ. ಮೊದಲಿಗೆ ನೀವು ಹೇಳಬೇಕಾದ ವಿಚಾರ ಏನು ಎಂಬುದನ್ನು ಒಂದು ಕಡೆ ಬರೆದಿಟ್ಟುಕೊಳ್ಳಿ. ಆ ನಂತರ ವಿಚಾರವನ್ನು ಯಾರಿಗೆ ಹೇಳುತ್ತಿದ್ದೀರೋ ಅವರ ಆಲೋಚನಾ ಮಟ್ಟಕ್ಕೆ ತಕ್ಕಂತೆ ತಿಳಿಸಿ. ಹೇಳುವ ವಿಚಾರದಲ್ಲಿ ಸ್ಪಷ್ಟತೆ, ನಿಖರತೆ ಇರಲಿ.

✦ ಎಲ್ಲವನ್ನೂ ನಾನೇ ಮಾಡಬೇಕಿದೆ

ಬಹಳ ಮಂದಿಯ ಕೊರಗೇನು ಗೊತ್ತಾ? ಕೆಲಸಕ್ಕೆ ಅಂತ ತುಂಬ ಜನರನ್ನು ತೆಗೆದುಕೊಂಡಿದ್ದೀನಿ. ಆದರೂ ಎಲ್ಲವನ್ನೂ ನಾನೇ ಮಾಡಬೇಕು ಅಥವಾ ಪ್ರತಿಯೊಂದನ್ನು ಹೇಳಿ ಹೇಳಿ ಮಾಡಿಸಬೇಕು. ಇಂಥ ಸನ್ನಿವೇಶ ಸೃಷ್ಟಿಯಾಗಿದೆ ಅಂದರೆ, ನಿಮ್ಮ ನಾಯಕತ್ವ ಗುಣದಲ್ಲಿ ಬದಲಾವಣೆ ಮಾಡಿಕೊಳ್ಳುವ ಅಗತ್ಯ ಇದೆ. ನಿಮ್ಮನ್ನು ನೀವು ಮೊದಲ ಹಂತದ ನಾಯಕತ್ವದ ಸ್ಥಾನದಲ್ಲಿ ಇರುವವರು ಅಂದುಕೊಂಡರೆ, ಎರಡನೇ ಹಂತದ ನಾಯಕತ್ವವನ್ನು ಬೆಳೆಸಬೇಕು. ಸ್ವತಂತ್ರವಾಗಿ ನಿರ್ಧಾರ ಮಾಡುಕೊಳ್ಳುವ, ರಿಸ್ಕ್ ತೆಗೆದುಕೊಳ್ಳುವ ಅವಕಾಶ ನೀಡಬೇಕು. ಇವೆಲ್ಲ ಮಾಡಿದ ನಂತರವೂ ಇದೇ ಸಮಸ್ಯೆಯಿದೆ ಅಂದರೆ ನಿಮ್ಮ ಜತೆಗೆ ಕೆಲಸ ಮಾಡುವವರ ಸಾಮರ್ಥ್ಯವೇ ಅಷ್ಟು. ಅವರಿಂದ ಹೆಚ್ಚನ್ನು ನಿರೀಕ್ಷೆ ಮಾಡದೆ, ಹಾಗಂತ ಕಂಪ್ಲೇಂಟ್ ಕೂಡ ಮಾಡದೆ ಕೆಲಸ ಮಾಡಿಕೊಂಡು ಹೋಗಬೇಕು.

✦ ಯಾಕಾದ್ರೂ ಸೋಮವಾರ ಬರುತ್ತೋ

ಒಂದೋ ಅಥವಾ ಎರಡು ದಿನವೂ ವಾರದ ರಜಾ ಮುಗಿದ ಮೇಲೆ ಕೆಲಸಕ್ಕೆ ಹಿಂತಿರುವುದಕ್ಕೆ ಆಸಕ್ತಿಯೇ ಇಲ್ಲ ಎಂದಾದರೆ ಅಂಥಲ್ಲಿ ಎಷ್ಟು ಸಮಯ ಇದ್ದರೂ ಪ್ರಯೋಜನ ಇಲ್ಲ. ಏಕೆಂದರೆ, ಮಾಡುವ ಕೆಲಸದಲ್ಲಿ ಉತ್ಸಾಹ ಇಲ್ಲದಿದ್ದಲ್ಲಿ ಪೂರ್ಣ ಸಾಮರ್ಥ್ಯವನ್ನು ತೋರಿಸುವುದಕ್ಕೆ ಆಗಲ್ಲ. ಅಥವಾ ಆ ಕೆಲಸ ಮಾಡುವಂಥ ಸಾಮರ್ಥ್ಯ ನಿಮ್ಮಲ್ಲಿ ಇಲ್ಲ. ಈ ಪೈಕಿ ಯಾವುದೇ ಆದರೂ ಅಂಥಲ್ಲಿ ಇರುವಷ್ಟೂ ಸಮಯ ಏನೂ ಸಾಧಿಸಿದಂತೆ ಆಗುವುದಿಲ್ಲ. ಆದ್ದರಿಂದ ಆ ಕೆಲಸ ನಿಮ್ಮ ಆಸಕ್ತಿಗೆ ಪೂರಕವಾಗಿಲ್ಲವೋ ಅಥವಾ ಆ ಕೆಲಸ ಮಾಡುವುದಕ್ಕೆ ನೀವು ಸಮರ್ಥರಲ್ಲವೋ, ಈ ಪೈಕಿ ಯಾವುದೇ ಆದರೂ ಅಲ್ಲಿಂದ ಹೊರಬರುವುದು ಉತ್ತಮ ನಿರ್ಧಾರ ಆಗುತ್ತದೆ.

✦ ನಾನು ಓದಿದ ಶಾಲೆ, ಕಾಲೇಜು ಸರಿಯಿಲ್ಲ

ನಾನು ಓದಿದ ಶಾಲೆ ಸರಿಯಿದ್ದಿದ್ದರೆ ಅಥವಾ ಕಾಲೇಜು ಸರಿಯಿದ್ದಿದ್ದರೆ ಅದರ ಕಥೆಯೇ ಬೇರೆಯಿತ್ತು... ಹೀಗೆ ಕೂಡ ತಮ್ಮ ಸೋಲಿಗೆ ಅಥವಾ ಹಿನ್ನಡೆಗೆ ಕಾರಣ ಹೇಳುವವರು ಸಿಗುತ್ತಾರೆ. ಹಾಗಂತ ಅವರು ಹೇಳುವ ಶಾಲೆ ಅಥವಾ ಕಾಲೇಜು ಯಾವುದು, ಅಲ್ಲಿಂದ ಓದಿ ಹೊರಬಂದವರೆಲ್ಲರೂ ಯಶಸ್ವಿ ಆಗಿದ್ದಾರಾ ಎಂದು ಆಲೋಚಿಸಿ ನೋಡಿ. ಸದ್ಯಕ್ಕೆ ಜಗತ್ತಿನ ಶ್ರೀಮಂತರು ಅಂತ ಯಾರಿದ್ದಾರೆ ಆ ಪೈಕಿ ಬಹಳ ಮಂದಿ ಕಾಲೇಜು ಡ್ರಾಪ್ ಔಟ್ ಗಳಿದ್ದಾರೆ. ಮುಖ್ಯವಾದ ಕೋರ್ಸ್ ಗಳನ್ನು ಅರ್ಧದಲ್ಲೇ ಬಿಟ್ಟವರಿದ್ದಾರೆ. ಹಾಗಂತ ಓದು ಮುಖ್ಯವಲ್ಲವಾ ಎಂದು ಕೇಳಬಹುದು. ಓದು ಮುಖ್ಯವೇ. ಆದರೆ ಯಶಸ್ಸಿಗೆ ಶಾಲೆ ಅಥವಾ ಕಾಲೇಜು ಖಂಡಿತಾ ಕಾರಣವಾಗಲ್ಲ.
(ಕೃಪೆ : ಗುಡ್ ರಿಟರ್ನ್ಸ್)