"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday 30 March 2014

* ಇತ್ತೀಚೆಗೆ ಉತ್ತರಾಖಂಡದಲ್ಲಿ ಸಂಭವಿಸಿದ ಜಲ ಪ್ರಳಯಕ್ಕೆ ಪ್ರಮುಖ ಕಾರಣಗಳು (The main causes for Uttarakhand floods) :

* ಇತ್ತೀಚೆಗೆ ಉತ್ತರಾಖಂಡದಲ್ಲಿ ಸಂಭವಿಸಿದ ಜಲ ಪ್ರಳಯಕ್ಕೆ ಪ್ರಮುಖ ಕಾರಣಗಳು
(The main causes for Uttarakhand floods) :

 2013ರ ಜೂನ್ ತಿಂಗಳ ಮಧ್ಯ ಭಾಗದಲ್ಲಿ ಉತ್ತರ ಭಾರತದ ರಾಜ್ಯಗಳಾದ ಉತ್ತರಾಖಂಡ, ಹಿಮಾಚಲ ಪ್ರದೇಶ, ದೆಹಲಿ ಹಾಗೂ ಪಂಜಾಬ್, ಹರಿಯಾಣದ ಕೆಲವು ಭಾಗಗಳಲ್ಲಿ ಸಂಭವಿಸಿದ ಅನಿರೀಕ್ಷಿತ ಮೇಘಸ್ಪೋಟದಿಂದಾಗಿ ಬಹುಪಾಲು ಗ್ರಾಮ, ಪಟ್ಟಣ, ನಗರಗಳು ಜಲಾವೃತಗೊಂಡು, ಜನ-ಜೀವನ ತತ್ತರಿಸಿ ಹೋಯಿತು. ಅದರಲ್ಲೂ ಅತೀ ಹೆಚ್ಚಿನ ಪ್ರವಾಹಕ್ಕೀಡಾದ ಉತ್ತರಾಖಂಡದ ಪವಿತ್ರ ಯಾತ್ರಾ ಸ್ಥಳಗಳಾದ ಬದರೀನಾಥ್, ಕೇದಾರನಾಥ, ಹರಿದ್ವಾರ, ಹೃಷಿಕೇಶ, ರುದ್ರಪ್ರಯಾಗಗಳು ಜಲಪ್ರಳಯದಲ್ಲಿ ಮುಳುಗಿ ಸಾವಿರಾರು ಸಂಖ್ಯೆಯಲ್ಲಿ ಪ್ರಾಣಹಾನಿ ಉಂಟಾಯಿತು.

ಅಭಿವೃದ್ಧಿಯ ಹೆಸರಿನಲ್ಲಿ ಮಾನವನು ತನ್ನ ಸ್ವಾರ್ಥ ಪರ ಇಚ್ಛೆ ಈಡೇರಿಕೆಗಾಗಿ ನೈಸರ್ಗಿಕ ವ್ಯವಸ್ಥೆಗೆ ಧಕ್ಕೆಯುಂಟು ಮಾಡಿರುವ ಕಾರಣ ಸಂಭವಿಸಿದ ನೈಸರ್ಗಿಕ ವಿಕೋಪಕ್ಕೆ ಈ ಉತ್ತರಾಖಂಡದ ಜಲ ಪ್ರಳಯ ಸ್ಪಷ್ಟ ನಿದರ್ಶನವಾಗಿದೆ.

 * ಉತ್ತರ ಭಾರತದಲ್ಲಿ, ಅದರಲ್ಲೂ ಮುಖ್ಯವಾಗಿ ಉತ್ತರಾಖಂಡದಲ್ಲಿ ಸಂಭವಿಸಿದ ಜಲ ಪ್ರಳಯಕ್ಕೆ ನೈಸರ್ಗಿಕ ವ್ಯವಸ್ಥೆಯಲ್ಲಿ ಮಾನವನ ಹಸ್ತಕ್ಷೇಪವೇ ಪ್ರಮುಖ ಕಾರಣವೆಂಬುದು ಸ್ಪಷ್ಟವಾಗಿದೆ.

 * ಭಾಗೀರಥಿ, ಕೋಸಿ, ಗಂಗಾ, ಯಮುನಾ, ಅಲಕನಂದಾ, ಗೋಮತಿ, ಮಂದಾಕಿನಿ ಇತ್ಯಾದಿ ಪ್ರಮುಖ ನದಿಗಳ ದಟ್ಟ ಜಾಲವನ್ನು ಹೊಂದಿರುವ ಉತ್ತರಾಖಂಡದಲ್ಲಿನ ಅರಣ್ಯ ಸಂಪತ್ತು ದೊಡ್ಡ ಪ್ರಮಾಣದಲ್ಲಿ ನಶಿಸುತ್ತಿರುವುದರಿಂದ ಅರಣ್ಯ ಗಳ ಸಹಜ ನೀರು ಹಿಡಿದಿಟ್ಟುಕೊಳ್ಳುವ ವ್ಯವಸ್ಥೆಗೆ ಧಕ್ಕೆಯಾಗಿದೆ.

 * ಏಷ್ಯಾದಲ್ಲೇ ಅತಿ ದೊಡ್ಡ ದೊಡ್ಡದಾಗಿರುವ ತೆಹರಿ ಅಣೆಕಟ್ಟನ್ನೊಳಗೊಂಡು ಸುಮಾರು 300ಕ್ಕೂ ಹೆಚ್ಚು ಹಿರಿ-ಕಿರಿಯ ಜಲ ವಿದ್ಯುತ್ ಯೋಜನೆಗಳು ಇಲ್ಲಿ ತಲೆಯೆತ್ತುತ್ತಿರುವುದು ಈ ಅನಾಹುತಕ್ಕೆ ಇನ್ನೊಂದು ಪ್ರಮುಖ ಕಾರಣವಾಗಿದೆ.

 * ಇಲ್ಲಿನ ಬೆಟ್ಟ ಗುಡ್ಡಗಳಲ್ಲಿ ನಿರಂತರವಾಗಿ ನಡೆಯುತ್ತಿರುವಂಥ ಖನಿಜಗಳ ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ರಸ್ತೆಗಳ ನಿರ್ಮಾಣ ಇತ್ಯಾದಿಗಳಿಗಾಗಿ ನಡೆಸುವ ನಿರಂತರ ಸ್ಫೋಟಗಳು ಭೂಮಿಯ ಶಿಲಾಸ್ಥರಗಳನ್ನು ಸಡಿಲುಗೊಳಿಸಿದ್ದು ಭೂ ಕುಸಿತಕ್ಕೆ ಕಾರಣವಾಗಿದೆ.

 * ಪ್ರವಾಸೋದ್ಯಮ ಅಭಿವೃದ್ದಿ ಹೆಸರಿನಲ್ಲಿ ನದಿ ದಡಗಳನ್ನು ಆಕ್ರಮಿಸಿ ಕಟ್ಟಡಗಳನ್ನು, ನದಿಗಳ ಮಧ್ಯದಲ್ಲಿಯೇ ಪಿಲ್ಲರ್ ನಿರ್ಮಿಸಿ ಅವುಗಳ ಮೇಲೆ ಹೊಟೇಲುಗಳನ್ನು ಕಟ್ಟಿರುವುದು.

 * ಇಲ್ಲಿ ಹಲವಾರು ಯಾತ್ರಾಸ್ಥಳಗಳನ್ನು ಹೊಂದಿದ್ದು ಭಕ್ತಿಯ ಭಾವಾವೇಶದಲ್ಲಿ ಈ ಪ್ರದೇಶಗಳಿಗೆ ಲಕ್ಷಗಟ್ಟಲೆ ಜನ ನುಗ್ಗಿದ್ದರಿಂದಲೂ ಪ್ರವಾಹದ ಸಂದರ್ಭದಲ್ಲಿ ಹೆಚ್ಚು ಸಾವು ನೋವುಗಳಾಗಿವೆ.

 ಹೀಗೆ ಒಂದೆಡೆ ಅತಿಯಾದ ಸ್ವಾರ್ಥ ಮತ್ತೊಂದೆಡೆ ವೈಚಾರಿಕತೆಯ ಕೊರತೆಯಿಂದಾಗಿ ಈ ಪ್ರಳಯದಲ್ಲಿ ಸಾವಿರಾರು ಜನ ಜೀವ ಕಳೆದುಕೊಂಡರು. ಮಾನವನೊಂದಿಗೆ ಉಳಿದ ಜೀವರಾಶಿಯೂ ಬದುಕಬೇಕು. ಅಭಿವೃದ್ಧಿಯ ಸೋಗಿನಲ್ಲಿ ನೈಸರ್ಗಿಕ ವ್ಯವಸ್ಥೆಗೆ ಧಕ್ಕೆಯಾಗಬಾರದು. ಭಕ್ತಿಯೆಂಬುವುದು ಮೂಢನಂಬಿಕೆಯಾಗಬಾರದು ಎಂಬ ಪಾಠ ಈ ಪ್ರಳಯ ಕಲಿಸಿದ್ದನ್ನು ಮರೆಯುವಂತಿಲ್ಲ.

Saturday 29 March 2014

★ ಭಾರತೀಯ ಪರಂಪರೆಯ ತಾಣಗಳು (Indian Heritage Sites) :

★ ಭಾರತೀಯ ಪರಂಪರೆಯ ತಾಣಗಳು (Indian Heritage Sites) :

 ಭಾರತ ದೇಶ ವೈವಿಧ್ಯಮಯ ಸಂಸ್ಕೃತಿ, ಧಾರ್ಮಿಕ ಪರಂಪರೆ, ಐತಿಹಾಸಿಕ ಕಟ್ಟಡಗಳಿಂದ ಪ್ರಸಿದ್ಧಿ ಪಡೆದಿದ್ದು, ವಿಶ್ವಪಟದಲ್ಲಿ ಗುರುತಿಸಿಕೊಂಡಿದೆ. ಭಾರತವನ್ನಾಳಿದ ದೊರೆಗಳು ನೀಡಿದ ಕೊಡುಗೆ, ಬ್ರಿಟಿಷರಕಾಲದಲ್ಲಿ ನಿರ್ಮಾಣಗೊಂಡ ಕೆಲವು ಸ್ಮಾರಕಗಳು ಇಂದಿಗೂ ಪ್ರವಾಸಿ ತಾಣಗಳಾಗಿ ಹೆಸರು ಪಡೆದಿವೆ. ವಿಶ್ವಪರಂಪರೆಯ ಪಟ್ಟಿಯಲ್ಲಿ ಸೇರಿಕೊಂಡಿವೆ.

1. ತಾಜ್ ಮಹಲ್, ಆಗ್ರಾ (Taj Mahal, Agra) :
ಆಗ್ರಾದ ತಾಜ್ ಮಹಲ್ ವಿಶ್ವದ ಏಳು ಅದ್ಭುತಗಳಲ್ಲಿ ಒಂದು. ಭವ್ಯ ಸ್ಮಾರಕದ ಹೊರತಾಗಿ ಹಲವು ವಿಸ್ಮಯಗಳನ್ನು ತೆರೆದಿಡುತ್ತದೆ. ಪಡೆದುಕೊಂಡ ಪ್ರೀತಿ, ಕಳೆದುಕೊಂಡು, ಅದಕ್ಕೆ ಕನಿಕರಪಟ್ಟು , ಮತ್ತೆ ಪ್ರೀತಿಸುವ ಆತ್ಮ ತಾಜ್‌ಮಹಲ್‌ನಲ್ಲಿದೆ. ಅಲ್ಲಿ ಪ್ರೀತಿಯೊಂದೇ ಅಲ್ಲ, ಪ್ರೀತಿಸುವ ಹೃದಯದ ಮಾತಿದೆ. ಮೊಘಲ್ ದೊರೆ ಶಾಹ್‌ಜಾನ್ ತನ್ನ ಪ್ರೀತಿಯ ಹೆಂಡತಿಗಾಗಿ ಕಟ್ಟಿಸಿದ ಭವ್ಯ ಸಮಾಧಿ. ಬರಿ ನೆನಪಾಗಿ ಉಳಿದ ಹೆಂಡತಿಯ ಹೆಸರಲ್ಲಿ ಅಂತಹ ಅದ್ಭುತ ತಾಜ್‌ಮಹಲ್‌ನ್ನು ಕಟ್ಟಿಸುತ್ತಾನೆ. ಈ ಪ್ರೀತಿಯ ಕಥೆಯನ್ನೊಳಗೊಂಡ ತಾಜ್ ಮಹಲ್ ವಿಶ್ವದ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

2. ಅಜಂತಾ, ಎಲ್ಲೋರ ಗುಹೆಗಳು (Caves of Ajanta, Ellora) :
ಮಹಾರಾಷ್ಟ್ರದ ಔರಂಗಾಬಾದ್‌ನಿಂದ ಕೆಲವೇ ದೂರದಲ್ಲಿರುವ, ಅಜಂತಾ ಎಲ್ಲೋರಾ ಗುಹೆಗಳು ವಿಸ್ಮಯ ಮೂಡಿಸುತ್ತವೆ. 3ನೇ ಶತಮಾನದ ಈ ಗುಹೆಗಳು ಬೌದ್ಧ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಅತ್ಯುತ್ತಮ ಮೇರುಕೃತಿಗಳು ಎಂದು ಪರಿಗಣಿಸಬಹುದು. ಇವುಗಳು ಸ್ವಾಭಾವಿಕವಾಗಿ ರಚಿತಗೊಂಡಿರುವ ಗುಹೆಗಳಲ್ಲ. ಕೆಲವು ಸಾವಿರ ವರ್ಷಗಳ ಹಿಂದೆ ಬೌದ್ಧ ಸಂನ್ಯಾಸಿಗಳು ಸ್ವಾಭಾವಿಕ ಬಂಡೆ ಕಲ್ಲುಗಳ ಮೇಲೆ ಕೆತ್ತಿ ಗುಹೆಗಳನ್ನು ನಿರ್ಮಿಸಿದ್ದಾರೆ. ಮುಂಬೈನಿಂದ 400 ಕಿಮೀ ದೂರದಲ್ಲಿದೆ.

 3. ರಾಜಸ್ತಾನ ರಾಯಲ್ ಸ್ಟೇಟ್ (Rajasthan Royal State) :
ರಾಜಸ್ತಾನ ರಾಯಲ್ ಸ್ಟೇಟ್ ಎಂದು ಕರೆಸಿಕೊಂಡಿರೋ ರಾಜಸ್ತಾನದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯಿದೆ. ಈ ರಾಜ್ಯದಲ್ಲಿ ನೋಡಬಹುದಾದ ಹಲವು ಸುಂದರ ಸ್ಥಳಗಳಿವೆ. ಸರೋವರಗಳ ನಗರ ಉದಯಪುರದಲ್ಲಿ ಮಾನವ ನಿರ್ಮಿತ ಸುಂದರ ಸರೋವರ, ವೈಭವದಿಂದ ಕೂಡಿದ ಅರಮನೆಗಳು ಹಾಗೂ ಬಿಷ್ಣೋಯ್ ಗ್ರಾಮ ಅನ್ನೋದು ಒಂದು ಕಲಾ ಗ್ರಾಮ. ಇಲ್ಲಿ ರಾಜಸ್ತಾನದ ಸ್ಥಳೀಯರನ್ನು ಭೇಟಿ ಮಾಡಿ, ವಿಭಿನ್ನ ಕಲೆಯನ್ನು ಕಲಿಯಬಹುದು.

 4. ಬುದ್ಧ ಗಯಾ (Budha Gaya) :
ಬೌದ್ಧ ಧರ್ಮ ಹುಟ್ಟಿದ್ದು ಬಿಹಾರದಲ್ಲಿ. ಬುದ್ಧ ಧ್ಯಾನಕ್ಕೆ ಕುಳಿತು ಜ್ಞಾನೋದಯವಾದ ಜಾಗವನ್ನು ಬುದ್ಧ ಗಯಾ ಎಂದು ಕರೆಯುತ್ತಾರೆ. ಇದು ವಿಶ್ವದ ಪ್ರಮುಖ ಬೌದ್ಧ ಕೇಂದ್ರಎನಿಸಿದೆ. ಇದನ್ನೇ ಬೋಧಿ ವೃಕ್ಷ ಎಂದು ಕರೆಯುತ್ತಾರೆ. ಇಲ್ಲಿ ಸರಳ ಜೀವನ ಶೈಲಿ, ಸಂನ್ಯಾಸ, ಪ್ರತಿಯೊಂದು ಜೀವದ ಮೇಲೂ ಅನುಭೂತಿ ತೋರುವ ಉಪದೇಶ ನೀಡಲಾಗುತ್ತದೆ. 'ವಿಹಾರ' ಎಂಬ ಪದದಿಂದ ವಿಹಾರ ಹುಟ್ಟಿಕೊಂಡಿದ್ದು. ಬೌದ್ಧ ಮಠಗಳನ್ನು 'ವಿಹಾರ' ಎಂದು ಕರೆಯಲಾಗುತ್ತಿತ್ತು. ಇಲ್ಲಿ ಹಲವು ಹಳೆಯ ಬೌದ್ಧ ದೇವಾಲಯಗಳಿವೆ. ನಲಂದ ವಿಶ್ವವಿದ್ಯಾಲಯ ಇರುವುದು ಇಲ್ಲಿಯೇ.

 5. ಗೋವಾ ಕ್ಯಾಥೆಡ್ರಲ್ಸ್ಗ್(Goa Cathedrals) :
 ಗೋವಾದಲ್ಲಿ ವಸಾಹತುಶಾಹಿಗಳ ಕೊಡುಗೆಹೆಚ್ಚು. ಪೋರ್ಚ್‌ಗೀಸರ ಕಾಲದಲ್ಲಿ ನಿರ್ಮಾಣಗೊಂಡಿರುವ ಹಲವಾರು ಸುಂದರ ಚರ್ಚ್‌ಗಳಿದ್ದು, ಅವುಗಳಲ್ಲಿ ಹೆಚ್ಚಿನವು, ಹಳೆ ಗೋವಾಕ್ಕೆ ಸೇರ್ಪಡೆಗೊಂಡಿವೆ. ಓಲ್ಡ್ ಗೋವಾದ ಚರ್ಚುಗಳು, ರೋಮ್ ಚರ್ಚ್‌ಗಳವೈಭವವನ್ನು ಹೋಲುತ್ತವೆ.

* ಗೋವಾದಲ್ಲಿರುವ ಕೆಲವು ಪ್ರಮುಖ ಚರ್ಚುಗಳು:
ಸೈಂಟ್ ಕ್ಯಾಥೆಡ್ರಲ್ ಚರ್ಚ್, ಸೈಂಟ್ ಫ್ರಾನ್ಸಿಸ್ ಚರ್ಚ್, ಸೈಂಟ್ ಕ್ಯಾಥರಿನ್, ಬೆಸಿಲಿಕಾ ಆಫ್ ಜೀಸಸ್, ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್, ಡ್ಯೂಕ್ ಆಫ್ ಟುಸ್ಕಾನಿ, ಹೀಗೆ ಇನ್ನೂ ಹಲವಾರು ಚರ್ಚ್‌ಗಳನ್ನು ಇಲ್ಲಿ ನೋಡಬಹುದು.

 6. ಖಜುರಾಹೋ ಟೆಂಪಲ್ (Khajuraho Temples) :
ಭಾರತದ ದೇವಸ್ಥಾನಗಳ ವಾಸ್ತುಶಿಲ್ಪಗಳ ಪೈಕಿ ಖಜುರಾಹೋ ದೇವಸ್ಥಾನದ ವಾಸ್ತುಶಿಲ್ಪ ಅನನ್ಯ.ಮಧ್ಯ ಪ್ರದೇಶದಲ್ಲಿರುವ ಖಜುರಾಹೋ ದೇವಾಲಯದಲ್ಲಿ ಕಾಮಪ್ರಚೋದಕ ಶಿಲ್ಪಗಳಿವೆ. ಇದು ಸಾಂಪ್ರದಾಯಿಕ ಮನಸ್ಥಿತಿಯನ್ನು ಒಂದು ಕ್ಷಣ ಬದಲಾಯಿಸಿಬಿಡುತ್ತದೆ. ಈ ದೇವಾಲಯ ಯುನೆಸ್ಕೋ ವಿಶ್ವಪರಂಪರೆಯ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ. ಕೆಲವು ವಾಸ್ತುಶಿಲ್ಪಗಳು ಶಿಲ್ಪಿಯ ಕೌಶಲವನ್ನು ಹೇಳುತ್ತದೆ. ಚಂದ್ರನ ವಂಶಸ್ಥ ಈ ವಾಸ್ತುಶಿಲ್ಪವನ್ನು ರಚಿಸಿದ ಎಂಬುದು ನಂಬಿಕೆ.

 7. ಹಂಪಿ (Hampi) :
14ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಇದು ವಿಜಯನಗರ ಸಾಮ್ರಾಜ್ಯದ ವೈಭವದ ದಿನಗಳನ್ನು ನೆನಪಿಸುತ್ತದೆ. ಆ ಕಾಲದ ವಾಣಿಜ್ಯ ಹಾಗೂ ಆಡಳಿತದ ಪ್ರಮುಖ ಕೇಂದ್ರವಾಗಿತ್ತು. 25ಕಿಮೀ ವಿಸ್ತೀರ್ಣದಲ್ಲಿ ಸುಮಾರು 500ಕ್ಕೂಹೆಚ್ಚು ಸ್ಮಾರಕಗಳಿವೆ. ಇಲ್ಲಿರುವ ವಿಠ್ಠಲ ದೇವಸ್ಥಾನ ಫೇಮಸ್. ಇದರ ದೊಡ್ಡ ಸಭಾಂಗಣ 56 ಕಂಬಗಳನ್ನೊಳಗೊಂಡಿದ್ದು, ಇದನ್ನು ತಟ್ಟಿದಾಗ ಸಂಗೀತ ಹೊರಹೊಮ್ಮುತ್ತದೆ. ಪ್ರತಿವರ್ಷ ಇಲ್ಲಿ ಹಂಪಿ ಉತ್ಸವ ನಡೆಯುತ್ತದೆ. ಬೆಂಗಳೂರಿನಿಂದ 350 ಕಿಮೀ ದೂರದಲ್ಲಿದೆ.

(ಮೂಲ: ವಿಜಯ ಕರ್ನಾಟಕ ಪತ್ರಿಕೆ)

★ 'ಅಂಡಮಾನ್' ದ್ವೀಪದ ಪ್ರವಾಸಿ ತಾಣಗಳು (Tourism destinations of Andaman Island ) :

★ 'ಅಂಡಮಾನ್' ದ್ವೀಪದ  ಪ್ರವಾಸಿ ತಾಣಗಳು (Tourism destinations of Andaman Island )  :

 ಇದು ಪ್ರಕೃತಿ ಸೌಂದರ್ಯದಿಂದ ತುಂಬಿ ತುಳುಕುತ್ತಿರುವ ದ್ವೀಪ. ತರಹೇವಾರಿ ಹೂವುಗಳು, ಪಕ್ಷಿಗಳು, ಪ್ರಾಣಿಗಳು, ತಾಳೆ ಮತ್ತು ತೆಂಗು ಮುಂತಾದವು ನೋಡಲು ಅತ್ಯಂತ ರಮಣೀಯವಾಗಿವೆ.

 * ಪೋರ್ಟ್‌ಬ್ಲೇರ್ :
ಈ ದ್ವೀಪ ಸಮೂಹದ ರಾಜಧಾನಿ. ಅಂಡಮಾನ್‌ಗೆ ಇದೇ ಹೆಬ್ಬಾಗಿಲು.ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಸುಮಾರು 600 ದ್ವೀಪಗಳಿವೆ. ಇವು ಬಂಗಾಳ ಕೊಲ್ಲಿಯ ಸೀಮೆಗೆ ಬರುತ್ತವೆ.ಇವುಗಳ ವಿಸ್ತೀರ್ಣ ಸುಮಾರು 780 ಚದರಕಿಲೋಮೀಟರ್. ಇದರಲ್ಲಿ ಶೇಕಡ 35ರಷ್ಟು ಭಾಗ ಆದಿವಾಸಿಗಳಿಗೆ ಮೀಸಲಾಗಿದೆ. ಈ ನಡುಗಡ್ಡೆಗಳನ್ನು ಉತ್ತರ , ಮಧ್ಯ ಮತ್ತು ದಕ್ಷಿಣ ಅಂಡಮಾನ್ ಎಂದು ವಿಂಗಡಿಸಿದ್ದು, ಕೇವಲ ಇಪ್ಪತ್ನಾಲ್ಕರಲ್ಲಿ ಮಾತ್ರ (ಅಂಡಮಾನಿನಲ್ಲಿ 11 ಮತ್ತು ನಿಕೋಬಾರಿನಲ್ಲಿ 13) ಜನರು ವಾಸಿಸುತ್ತಿದ್ದಾರೆ. ಈ ದ್ವೀಪಗಳಿಗೆ ಶತಮಾನಗಳ ಕಾಲ ಸಂಪರ್ಕವೇ ಇರಲಿಲ್ಲ.

* ಆಂತ್ರೊಪಾಲಜಿ ಮ್ಯೂಸಿಯಂ :
ಇಲ್ಲಿರುವ ಆಂತ್ರೊಪಾಲಜಿ ಮ್ಯೂಸಿಯಂನಲ್ಲಿ ಆದಿವಾಸಿಗಳ ಜೀವನಶೈಲಿ ಮತ್ತು ಅವರ ಕಲೆ, ಅವರು ಉಪಯೋಗಿಸುವ ವಸ್ತುಗಳ ಬಗ್ಗೆ ತಿಳಿಯಬಹುದು.

* ಸಮುದ್ರಿಕಾ ಮ್ಯೂಸಿಯಂ :
ಸನಿಹದಲ್ಲೇ ಇರುವ ಸಮುದ್ರಿಕಾ ಮ್ಯೂಸಿಯಂನಲ್ಲಿ ನಾನಾ ರೀತಿಯ ಶಂಖಗಳು, ಹವಳಗಳು, ಕಪ್ಪೆಚಿಪ್ಪುಗಳು ನೋಡಲು ಸಿಗುತ್ತವೆ. ಇವು ಖರೀದಿಗೂ ಲಭ್ಯ. ಇಲ್ಲಿ ಮುತ್ತು-ಹವಳಗಳೂ ಇವೆ. ಅತಿ ವಿರಳವಾದ ಶಂಖ ಮತ್ತು ಕಪ್ಪೆ ಚಿಪ್ಪುಗಳನ್ನು ನೋಡಬಹುದು.

 * ಸೆಲ್ಯುಲರ್ ಜೈಲು :
ಇಲ್ಲಿರುವ ಸೆಲ್ಯುಲರ್ ಜೈಲು ಏಷ್ಯಾದಲ್ಲೇ ಅತ್ಯಂತ ದೊಡ್ಡದು. ಇದುಈಗ ರಾಷ್ಟ್ರೀಯ ಸ್ಮಾರಕಗಳಲ್ಲೊಂದಾಗಿದೆ. ಇಲ್ಲಿ ಮ್ಯೂಸಿಯಂ ಕೂಡ ಇದೆ. ಸಂಜೆ ಧ್ವನಿ ಮತ್ತು ಬೆಳಕಿನ ಪ್ರದರ್ಶನ ಇರುತ್ತದೆ. ಬ್ರಿಟೀಷರು ನಮ್ಮ ಧೀರ-ಶೂರ ಸ್ವಾತಂತ್ರ್ಯ ಸೇನಾನಿಗಳನ್ನು ಬಂಧಿಸಿಡುತ್ತಿದ್ದರು. ಇಲ್ಲಿ ಅವರಿಗೆ ಕೊಡುತ್ತಿದ್ದ ಕಷ್ಟಗಳನ್ನೆಲ್ಲ ವಿವರವಾಗಿ ಬಿಚ್ಚಿಡಲಾಗಿದೆ. ಅದನ್ನೆಲ್ಲ ನೋಡಿದರೆ ಮನಸ್ಸು ಮೌನಕ್ಕೆ ಶರಣಾಗುತ್ತದೆ.

 * ಛತ್ತಮ್ ಸಾಮಿಲ್ ಕಟ್ಟಿಗೆ ಮಿಲ್ : ಇಲ್ಲಿರುವ ಛತ್ತಮ್ ಸಾಮಿಲ್ ಏಷ್ಯಾದಲ್ಲೇ ಅತ್ಯಂತ ದೊಡ್ಡ ಮತ್ತು ಹಳೆಯ ಕಟ್ಟಿಗೆ ಮಿಲ್. 1883ರಲ್ಲಿ ಇದು ಬ್ರಿಟಿಷರಿಂದ ಸ್ಥಾಪಿಸಲ್ಪಟ್ಟಿತು. ಇಲ್ಲಿಂದ ದೊಡ್ಡ ದೊಡ್ಡ ಕಟ್ಟಿಗೆಗಳನ್ನು ರಫ್ತು ಮಾಡುತ್ತಾರೆ. ಸ್ವಾತಂತ್ರ್ಯಪೂರ್ವದಲ್ಲಿ ಇಲ್ಲಿಂದ ಪಶ್ಚಿಮ ದೇಶಗಳಿಗೆ ಕಟ್ಟಿಗೆ ರಫ್ತಾಗುತ್ತಿತ್ತು. ಎರಡನೇ ಮಹಾಯುಧ್ಧದ ವೇಳೆ ಜಪಾನೀಯರು ನಡೆಸಿದ ಬಾಂಬ್ ದಾಳಿಯಲ್ಲಿ ಒಂದು ಬಾಂಬ್ ನೇರವಾಗಿ ಇದರ ಮೇಲೇ ಬಿದ್ದು ತುಂಬಾ ಹಾನಿಯಾಯಿತು. 1946ರಲ್ಲಿ ಈ ಸಾಮಿಲ್‌ಗೆ ಮತ್ತೆ ಜೀವ ತುಂಬಲಾಯಿತು. ಇಲ್ಲಿ ಅಂಡಮಾನ್ನಲ್ಲಿಯೇ ಸಿಗುವ 'ಪಡೌಕ' ಎನ್ನುವ ಒಂದು ಜಾತಿಯ ಮರದಿಂದ ಪೀಠೋಪಕರಣಗಳನ್ನು ತಯಾರಿಸುತ್ತಾರೆ.

 * ರಾಸ್ ಐಲ್ಯಾಂಡ್ :
ಇದು ಮೊದಲು ಅಂಡಮಾನ್ ಮತ್ತು ನಿಕೋಬಾರ್‌ನ ರಾಜಧಾನಿಯಾಗಿದ್ದು, ಬ್ರಿಟಿಷರ ಮುಖ್ಯ ಕಚೇರಿಯಾಗಿತ್ತು. ಈಗ ಇದು ಭಾರತದ ನೌಕಾಪಡೆಯ ಅಧೀನದಲ್ಲಿದೆ. ಇಲ್ಲಿನ ಸಮುದ್ರ ತಟದಲ್ಲಿರುವ ಎತ್ತರದ ತೆಂಗಿನ ಮರಗಳು, ಪುರಾತನ ಕಟ್ಟಡಗಳು, ಜಿಂಕೆಮರಿಗಳು ನಯನ ಮನೋಹರವಾಗಿವೆ.

* ವೈಪರ್ ಐಲ್ಯಾಂಡ್ (ಮಹಿಳಾಜೈಲು) : ಇದರ ವಿಶೇಷತೆ ಎಂದರೆ, ಇದು ಗೋಡೆಗಳಿಲ್ಲದ ಬಂದೀಖಾನೆ! ಇದನ್ನು ಸೆಲ್ಯುಲರ್ ಜೈಲಿಗಿಂತ ಮೊದಲು ನಮ್ಮ ಸ್ವಾತಂತ್ರಯೋಧರನ್ನು ಬಂಧಿಸಿಡಲು -ಮುಖ್ಯವಾಗಿ ಮಹಿಳಾಕೈದಿಗಳನ್ನು ಬಂಧಿಸಿಡಲು- ಉಪಯೋಗಿಸುತ್ತಿದ್ದರು. ಇದಕ್ಕೆ ಮಹಿಳಾಜೈಲು ಎಂದೂ ಕರೆಯಲಾಗುತ್ತದೆ. ಇಲ್ಲಿ ಕೈದಿಗಳ ಕೈ-ಕಾಲು ಗಳಿಗೆ ಕೋಳ ಹಾಕಿ ಬಿಡಲಾಗುತ್ತಿತ್ತು. ಇಲ್ಲಿಂದ ತಪ್ಪಿಸಿಕೊಂಡು ಹೋಗಲು ಯಾರಿಗೂ ಸಾಧ್ಯವಾಗುತ್ತಿರಲಿಲ್ಲ.

* ಹ್ಯಾವ್‌ಲಾಕ್ ಐಲ್ಯಾಂಡ್ :
ಇದು ಬಂಗಾರದ ಬಣ್ಣದ ಮರಳಿಗೆ ಮತ್ತು ನೀಲಿ ಬಣ್ಣದ ನೀರಿಗೆ ಪ್ರಸಿಧ್ಧವಾಗಿದೆ. ಇಲ್ಲಿನ ಬೀಚ್‌ಗಳು ತಿಳಿನೀರಿನಿಂದ ಕೂಡಿದ್ಜು, ಸುತ್ತಲೂ ಕಾಣುವ ನೀಲಿ ನೀರು, ಅದನ್ನು ಆವರಿಸಿರುವ ದಟ್ಟ ಕಾಡುಗಳ ಸೌಂದರ್ಯ ದ್ವೀಪದ ಮೆರಗನ್ನು ಹೆಚ್ಚಿಸಿವೆ. ಇಲ್ಲಿನ ಇನ್ನೊಂದು ವಿಶೇಷವೆಂದರೆ ಸಮುದ್ರ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ತನ್ನ ಬಣ್ಣವನ್ನು ಬದಲಿಸುತ್ತದೆ. ಇದು ಅವಿಸ್ಮರಣೀಯ ಅನುಭವ.

 * ಬಾರಾತಾಂಗ್ ಐಲ್ಯಾಂಡ್ :
ಇದು ದಕ್ಷಿಣ ಮತ್ತು ಮಧ್ಯ ಅಂಡಮಾನ್ ನಡುವೆ ಇದೆ. ಇಲ್ಲಿನ ಸುಣ್ಣಕಲ್ಲುಗಳಗುಹೆ ಮತ್ತು ಮಣ್ಣಿನ ಜ್ವಾಲಾಮುಖಿಗಳು ಪ್ರಸಿದ್ಧ. ಇದಕ್ಕೆ ದಟ್ಟ ಕಾಡಿನ ಮಧ್ಯ ಪ್ರಯಾಣಿಸಬೇಕಾಗುತ್ತದೆ. ಪೋರ್ಟ್‌ಬ್ಲೇರ್‌ನಿಂದ 100ಕಿ.ಮೀ. ದೂರದಲ್ಲಿದ್ದು, ಜರಾವಾ ಬುಡಕಟ್ಟು ಜನಾಂಗದವರು ವಾಸಿಸುತ್ತಾರೆ. ಇದು ಪ್ರಕೃತಿದತ್ತವಾದ ಗುಹೆ.

* ಪೋರ್ಟ್‌ಬ್ಲೇರ್ :
ಭಾರತೀಯ ಸಂಪ್ರದಾಯದಿಂದ ಕೂಡಿದ ಚಿಕ್ಕ ನಗರವಾಗಿದೆ. ಇಲ್ಲಿ ನಿಜವಾದ ಸಾಮಾಜಿಕ ವೈವಿಧ್ಯವಿದೆ. ಈ ಊರಿನ ಇತಿಹಾಸದಲ್ಲಿ ಯಾವತ್ತೂ ಮತೀಯ ಗಲಭೆಗಳಾಗಿಲ್ಲ. ಎಲ್ಲಾ ಧರ್ಮೀಯರೂ ಜತೆಗೂಡಿ ಎಲ್ಲಾ ಹಬ್ಬಗಳನ್ನೂ ಆಚರಿಸುತ್ತಾರೆ.ಇಲ್ಲಿನ ಕಿಂಗ್ ಎಳನೀರು ತುಂಬಾ ಪ್ರಸಿದ್ಧ. ಇಲ್ಲಿನ ಊಟದಲ್ಲಿ ಮೀನು ಮತ್ತಿತರ ಸಮುದ್ರಾಹಾರಗಳು ಪ್ರಮುಖ.

 * ಇಲ್ಲಿ ನೋಡತಕ್ಕ ಸ್ಥಳಗಳೆಂದರೆ ಮಹಾತ್ಮ ಗಾಂಧಿ ಮೆರೀನ್ ನ್ಯಾಷನಲ್ ಪಾರ್ಕ್, ಸೆಲ್ಯುಲರ್ ಜೈಲು, ಮತ್ಸ್ಯಾಗಾರ, ಸಮುದ್ರಿಕಾ ನೌಕಾ ಮ್ಯೂಸಿಯಂ, ಆಂತ್ರೊಪಾಲಜಿ ಮ್ಯೂಸಿಯಂ ಮತ್ತು ಖಾದಿ ಗ್ರಾಮೋದ್ಯೋಗ ಭವನ.
(ಮೂಲ : ವಿಜಯ ಕರ್ನಾಟಕ ಪತ್ರಿಕೆ)

★ ವರ್ಲ್ಡ್ ಹೆರಿಟೇಜ್ ಸೈಟ್ - ಕಾಜೀರಂಗದ ವನ್ಯಜೀವಿ ರಾಷ್ಟ್ರೀಯ ಉದ್ಯಾನವನ : ( World Heritage Site - Kajiranga National Park and Wildlife Sanctuary)

★ ವರ್ಲ್ಡ್ ಹೆರಿಟೇಜ್ ಸೈಟ್ - ಕಾಜೀರಂಗದ ವನ್ಯಜೀವಿ ರಾಷ್ಟ್ರೀಯ ಉದ್ಯಾನವನ :
( World Heritage Site - Kajiranga National Park and Wildlife Sanctuary)

 ಒಂಟಿ ಕೊಂಬಿನ ಘೇಂಡಾಮೃಗ ಹಾಗೂ ಅಳಿವಿನಂಚಿನಲ್ಲಿರುವ ಪ್ರಾಣಿಗಳು ಈ ರಾಷ್ಟ್ರೀಯ ಉದ್ಯಾನದಲ್ಲಿರುವುದರಿಂದ ಇದನ್ನು ವರ್ಲ್ಡ್ ಹೆರಿಟೇಜ್ ಸೈಟ್ ಎಂದು ಪರಿಗಣಿಸಲಾಗಿದೆ. ಈ ಉದ್ಯಾನ ಪಕ್ಷಿಗಳಸ್ವರ್ಗ ಎನಿಸಿದೆ. ಎತ್ತರದ ಹುಲ್ಲುಗಾವಲುಗಳು, ಇಲ್ಲಿನ ಭೂಪ್ರದೇಶದ ಸುಂದರ ವೈಶಿಷ್ಟ್ಯದಿಂದಾಗಿ ಕಾಝಿರಂಗ ಪ್ರವಾಸ ಅವಿಸ್ಮರಣೀಯವನ್ನಾಗಿಸಿದೆ.

ಇದನ್ನು 1940ರಲ್ಲಿ ವನ್ಯಜೀವಿಧಾಮ ಹಾಗೂ 1974ರಲ್ಲಿ ರಾಷ್ಟ್ರೀಯ ಉದ್ಯಾನ ಎಂದು ಘೋಷಿಸಲಾಗಿದೆ.ಈ ಉದ್ಯಾನ ಅಸ್ಸಾಂನ ಗೋಲಾಘಾಟ್ ಜಿಲ್ಲ್ಲೆಯಲ್ಲಿದೆ. ಭಾಗಶಃ ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿದೆ. ಇದು ಅಸ್ಸಾಂನ ಹಳೆಯ ಪಾರ್ಕ್ ಆಗಿದ್ದು, 430 ಚದರ ಕಿಮೀ ವಿಸ್ತೀರ್ಣವನ್ನೊಳಗೊಂಡಿದೆ. ಉತ್ತರಕ್ಕೆ ಬ್ರಹ್ಮಪುತ್ರ ನದಿ ಹಾಗೂ ದಕ್ಷಿಣಕ್ಕೆ ಕಾರ್ಬಿ ಆಂಗ್‌ಲಾಂಗ್ ಬೆಟ್ಟದಿಂದ ಸುತ್ತುವರಿದಿದೆ.

 * ಈ ಪಾರ್ಕ್ ನವೆಂಬರ್‌ನಿಂದ ಏಪ್ರಿಲ್‌ವರೆಗೆ ಮಾತ್ರ ತೆರೆದಿರುತ್ತದೆ. ಡಿಸೆಂಬರ್‌ನಲ್ಲಿ ಹೆಚ್ಚು ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಪಾರ್ಕ್ ಮೂಲಕ ರಾಷ್ಟ್ರೀಯ ಹೆದ್ದಾರಿ-37 ಹಾದು ಹೋಗುತ್ತದೆ. ಟೀ ಎಸ್ಟೇಟ್ ಇದ್ದು ಹಸಿರಿನಿಂದ ಕೂಡಿದ ಭೂದೃಶ್ಯ ಮನಸ್ಸೆಳೆಯುತ್ತದೆ. ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿ ಘೇಂಡಾಮೃಗ ಹಾಗೂ ಆನೆಗಳು ಕೆಲವೊಮ್ಮೆ ಕಾಣಸಿಗುತ್ತವೆ. ಒಂದು ಕೊಂಬಿನ ಖಡ್ಗಮೃಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಹುಲಿ, ಆನೆ, ಕರಡಿ, ಚಿರತೆ, ಕರಡಿ, ಸಾವಿರಾರು ಪಕ್ಷಿಗಳ ಆವಾಸಸ್ಥಾನವಾಗಿದೆ. ಪ್ರತಿವರ್ಷ ಫೆಬ್ರವರಿಯಲ್ಲಿ ಕಾಝಿರಂಗದ ಆನೆಗಳ ಉತ್ಸವ ನಡೆಯುತ್ತದೆ. ಪಾರ್ಕ್ ಸುತ್ತ ಆನೆ ಸವಾರಿ ಕೈಗೊಳ್ಳಬಹುದು ಜತೆಗೆ ಬ್ರಹ್ಮಪುತ್ರ ನದಿಯಲ್ಲಿ ದೋಣಿ ವಿಹಾರ ನಡೆಸಬಹುದು.

 * ವನ್ಯಜೀವಿ ಧಾಮದ ಆಕರ್ಷಣೆಗಳು : ಒಂದು ಕೊಂಬಿನ ಘೇಂಡಾಮೃಗದ ಬದಲಾಗಿ ಇಲ್ಲಿ ಭಾರತದ ಆನೆ, ಕಾಡುಕೋಣ, ಜಿಂಕೆ, ಕರಡಿ, ಕಾಡುಬೆಕ್ಕು, ಚಿರತೆ ಬಣ್ಣದ ಬೆಕ್ಕು, ಲಂಗೂರ್, ಕಾಡುಹಂದಿ,ತೋಳ, ಉಡ ಜಾತಿಗೆ ಸೇರಿದ ಪ್ರಾಣಿಗಳನ್ನು ನೋಡಬಹುದು. ಸಫಾರಿ ರೋಮಾಂಚನಕಾರಿ ಅನುಭವ ನೀಡುತ್ತದೆ. ಅಲ್ಲದೆ ಪಕ್ಷಿ ವೀಕ್ಷಣೆಯ ಸ್ವರ್ಗ. ಗಿಡುಗ, ಹದ್ದು, ಗರುಡ, ಬಿಳಿ ಬಾಲವಿರುವ ಹದ್ದು, ಉದ್ಯಾನದ ಸರೋವರಗಳಲ್ಲಿ ಬಾತುಕೋಳಿ, ಇವೇ ಮೊದಲಾದ ಪಕ್ಷಿಗಳನ್ನು ನೋಡಬಹುದು. (ಮೂಲ: ವಿಜಯ ಕರ್ನಾಟಕ ಪತ್ರಿಕೆ)

Friday 28 March 2014

★ ಕರ್ನಾಟಕ ರಾಜ್ಯ ಯೋಜನಾ ಆಯೋಗದ ಸ್ವರೂಪ ಹಾಗೂ ಅದರ ಕಾರ್ಯಗಳನ್ನು ವಿವರಿಸಿರಿ. -(Explain the Structure and functions of the Karnataka State Planning Board)

★ ಕರ್ನಾಟಕ ರಾಜ್ಯ ಯೋಜನಾ ಆಯೋಗದ ಸ್ವರೂಪ ಹಾಗೂ ಅದರ ಕಾರ್ಯಗಳನ್ನು ವಿವರಿಸಿರಿ. -(Explain the Structure and functions of the Karnataka State Planning Board)

ದೇಶದ/ ರಾಜ್ಯದ ಸರ್ವಾಂಗೀಣ ಆರ್ಥಿಕ ಪ್ರಗತಿಯನ್ನು ಸಾಧಿಸಲು ಮತ್ತು ದೇಶದಲ್ಲಿ / ರಾಜ್ಯದಲ್ಲಿ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ಯೋಜನೆಯು ಒಂದು ಉತ್ತಮ ಸಾಧನವಾಗಿದ್ದು, ಅದನ್ನು ರೂಪಿಸುವಲ್ಲಿ ಯೋಜನಾ ಆಯೋಗದ ಪಾತ್ರ ಮಹತ್ವದ್ದಾಗಿದೆ.

 * ಸ್ವರೂಪ (Structure) :
ಕರ್ನಾಟಕ ರಾಜ್ಯದಲ್ಲಿ ಯೋಜನಾ ಯಂತ್ರ ವೆಂದರೆ ರಾಜ್ಯದ ಯೋಜನಾ ಮಂಡಳಿ. ಕರ್ನಾಟಕ ರಾಜ್ಯ ಯೋಜನಾ ಮಂಡಳಿಯ ಅಧ್ಯಕ್ಷರು, ರಾಜ್ಯದ ಮುಖ್ಯಮಂತ್ರಿಗಳು, ರಾಜ್ಯದ ಹಣಕಾಸಿನ ಮಂತ್ರಿ, ಯೋಜನಾ ಮಂತ್ರಿ ಮತ್ತು ಅರ್ಥಶಾಸ್ತ್ರ, ಹಣಕಾಸು ಮೊದಲಾದವುಗಳಲ್ಲಿ ಪರಿಣಿತರಾದ ಕೆಲವು ವ್ಯಕ್ತಿಗಳು ಅದರ ಅಧಿಕಾರೇತರ ಸದಸ್ಯರಾಗಿರುತ್ತಾರೆ. ಕರ್ನಾಟಕ ಸರ್ಕಾರದ ಯೋಜನೆ ಮತ್ತು ಸಂಖ್ಯಾ ವಿಭಾಗ, ಆಡಳಿತದ ಕಾರ್ಯದರ್ಶಿಗಳು ಅದರ ನಾಡಲ್ (Nodal) ಅಧಿಕಾರಿಗಳಾಗಿರುತ್ತಾರೆ. ಸದ್ಯಕ್ಕೆ ಅದರಲ್ಲಿ 13 ಜನರು ಸದಸ್ಯರಿರುತ್ತಾರೆ.

 * ಕರ್ನಾಟಕ ರಾಜ್ಯ ಯೋಜನಾ ಆಯೋಗದ ಕಾರ್ಯಗಳು (Functions) :

 1) ರಾಷ್ಟ್ರೀಯ ಯೋಜನಾ ಆಯೋಗದಂತೆ, ರಾಜ್ಯದ ಯೋಜನಾ ಮಂಡಳಿಯು ವಾರ್ಷಿಕ ಮತ್ತು ಪಂಚವಾರ್ಷಿಕ ಯೋಜನೆಗಳನ್ನು ತಯಾರಿಸುತ್ತದೆ. ಆದರೆ ರಾಷ್ಟೀಯ ಯೋಜನೆಯೊಂದಿಗೆ ಚರ್ಚಿಸಿದ ನಂತರ ಈ ಯೋಜನೆಗಳನ್ನು ತಯಾರಿಸಬೇಕಾಗುತ್ತದೆ. ಅಲ್ಲದೇ ಯೋಜನಾ ಆಯೋಗದ ಚೌಕಟ್ಟಿನೊಳಗೆ ಅವುಗಳನ್ನು ಅದು ರೂಪಿಸಬೇಕಾಗುತ್ತದೆ.

 2) ರಾಜ್ಯದ ಯೋಜನಾ ಮಂಡಳಿಯು ಸರ್ಕಾರದ ಎಲ್ಲಾ ಇಲಾಖೆಗಳಿಂದ ಮಾಹಿತಿಯನ್ನು-ಅಂಕಿ-ಅಂಶಗಳನ್ನು ಸಂಗ್ರಹಿಸಿ, ಇಲಾಖೆಗಳ ಮಂತ್ರಿಗಳೊಡನೆ ಮತ್ತು ಇಲಾಖಾ ಮುಖ್ಯಸ್ಥರೊಂದಿಗೆ ವಿಚಾರ ವಿನಿಮಯ ಮಾಡಿ, ಯೋಜನೆಗಳನ್ನು ಪೂರ್ತಿಗೊಳಿಸುತ್ತದೆ.

 3) ರಾಜ್ಯದ ಯೋಜನಾ ಮಂಡಳಿಯು ವಿವಿಧ ಇಲಾಖೆಗಳನ್ನು ಮತ್ತು ಮಂತ್ರಿ ಶಾಖೆಗಳು ತಯಾರಿಸಿದ ಯೋಜನೆಗಳನ್ನು ಸಮನ್ವಯಕರಿಸಿ, ಅವು ರಾಷ್ಟೀಯ ಯೋಜನೆಗಳ ಚೌಕಟ್ಟಿನೊಳಗೆ ಬರುವಂತೆ ಮಾಡಿ, ನಂತರ ಅವುಗಳನ್ನು ಆಯೋಗಕ್ಕೆ ಕಳುಹಿಸಿಕೊಡಬೇಕಾಗುತ್ತದೆ.

 4) ಹೀಗೆ ರಾಷ್ಟೀಯ ಆಯೋಗಕ್ಕೆ ಯೋಜನೆಗಳನ್ನು ಕಳುಹಿಸಿಕೊಡುವುದಕ್ಕಿಂತ ಮೊದಲು, ರಾಜ್ಯದ ಯೋಜನಾ ಮಂಡಳಿಯು ಮಂತ್ರಿ ಮಂಡಳದ ಸಭೆಯಲ್ಲಿದ್ದು, ಪರಿಪೂರ್ಣವಾಗಿ ಪರಿಶೀಲಿಸಿ, ಅಂತಿಮ ರೂಪವನ್ನು ಕೊಟ್ಟ ನಂತರ, ಅವುಗಳನ್ನು ಆಯೋಗಕ್ಕೆ ಕಳುಹಿಸಿಕೊಡುತ್ತದೆ.

 5) ಕೊನೆಗೆ ರಾಜ್ಯದ ಯೋಜನಾ ಮಂಡಳಿಯು ರಾಷ್ಟ್ರೀಯ ಯೋಜನಾ ಆಯೋಗದೊಂದಿಗೆ ಚರ್ಚಿಸಿ, ಅಂತಿಮಗೊಳಿಸಿ, ರಾಷ್ಟ್ರೀಯ ಯೋಜನೆಯಲ್ಲಿ ಅವುಗಳನ್ನು ಕ್ರೋಢೀಕರಿಸಲಾಗುತ್ತದೆ.

★ ನೋಟಾ (NOTA- None Of The Above) : ಚುನಾವಣೆ ಸುಧಾರಣೆಯ ಪ್ರಮುಖ ಅಸ್ತ್ರ? :

★ ನೋಟಾ (NOTA- None Of The Above) : ಚುನಾವಣೆ ಸುಧಾರಣೆಯ ಪ್ರಮುಖ ಅಸ್ತ್ರ? :

 ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ದೇಶದ ಆಡಳಿತ ವ್ಯವಸ್ಥೆ ಬದಲಿಸುವ ಸಾಮರ್ಥ್ಯ ಈ ಮತಕ್ಕಿದೆ. ಚುನಾವಣೆಗೆ ಸ್ಪರ್ಧಿಸಿರುವ ಯಾವೊಬ್ಬ ಅಭ್ಯರ್ಥಿ ತನಗೆ ಸೂಕ್ತ ಎನಿಸದಿದ್ದಲ್ಲಿ ಮತದಾರ ಈ 'ನೋಟಾ ' ಬಳಕೆ ಮಾಡಬಹುದು.

 * ನೋಟಾ (NOTA) ಎಂದರೇನು?
-What do you mean by NOTA ?

 - ನೋಟಾ ಅಂದರೆ ಮತದಾನ ಪಟ್ಟಿಯಲ್ಲಿರುವ ಯಾರೂ ನನ್ನ ಮತಕ್ಕೆ ಅರ್ಹರಲ್ಲ ಎಂದರ್ಥ. (NOTA- None Of The Above) ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಸುಧಾರಣೆಯ ಪ್ರಮುಖ ಅಂಗವಾಗಿ ನೋಟಾ ಜಾರಿಗೆ ನಿರ್ಧರಿಸಿ 2009 ರಲ್ಲಿ ಕೇಂದ್ರ ಚುನಾವಣಾ ಆಯೋಗ ಸುಪ್ರೀಂಕೋರ್ಟ್ ಗೆ ಇಂತಹದೊಂದು ಪ್ರಸ್ತಾವನೆಯನ್ನು ಸಲ್ಲಿಸಿತು. ಆದರೆ ಇದಕ್ಕೆ ಬಹುತೇಕ ರಾಜಕೀಯ ಪಕ್ಷಗಳು ಪ್ರತಿರೋಧ ವ್ಯಕ್ತಪಡಿಸಿದ್ದವು.

 * ಸಂಘಟನೆ ಒತ್ತಾಸೆ:
'Peoples Union for Civic Liberties' ಎಂಬ ಸರ್ಕಾರೇತರ ಸಂಸ್ಥೆ ನೋಟಾ ಜಾರಿಗೆ ಬೆಂಬಲಿಸಿ ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿತ್ತು. ಈ ಬಗ್ಗೆ ಸುಧೀರ್ಘವಾದ ಪ್ರತಿವಾದ ನಡೆದ ಬಳಿಕ ಅಂತಿಮವಾಗಿ 2013 ಸೆಪ್ಟಂಬರ್ 27 ರಂದು ಸುಪ್ರೀಂಕೋರ್ಟ್ 'ನೋಟಾ ' ಜಾರಿಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತು. ಜೊತೆಗೆ ರಾಜಕೀಯ ಪಕ್ಷಗಳಿಗೆ ಚುನಾವಣೆಯಲ್ಲಿ ಕೆಲವು ಬದಲಾವಣೆ ಅನಿವಾರ್ಯ ಮತ್ತು ರಾಜಕೀಯ ಶುದ್ಧೀಕರಣಕ್ಕೆ ಸಚ್ಚಾರಿತ್ರ್ಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಎಂಬ ಪರೋಕ್ಷ ಸೂಚನೆಯನ್ನು ಕೊಟ್ಟಿತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನಿಗೆ ಆಯ್ಕೆ ಸ್ವಾತಂತ್ರ್ಯವಿದೆ ಎಂದು ಪ್ರತಿಪಾದಿಸಿತ್ತು.

 * 'ನೋಟಾ'ದ ಮೊದಲ ಬಳಕೆ ಎಲ್ಲಿ? (Where the NOTA was used first time?)

- ಮುಂಬೈ ಮಹಾನಗರ ಪಾಲಿಕೆಯ 48ನೇ ವಾರ್ಡ್ ಗೆ (ವಿಶಾ) ನಡೆದ ಉಪಚುನಾವಣೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ನೋಟಾ ಬಳಸಲಾಯಿತು. 2548 ಮತಗಳಲ್ಲಿ 48 ಮತಗಳು ನೋಟಾದಡಿ ದಾಖಲಾಗಿದ್ದವು. ಕೆಲವು ವಿದ್ಯಾವಂತ ಮತದಾರರು ತಾವು ಅಭ್ಯರ್ಥಿಗಳನ್ನು ತಿರಸ್ಕರಿಸಿ ನೋಟಾ ಬಳಸಿದ್ದಾಗಿ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಅಷ್ಟರಮಟ್ಟಿಗೆ ನೋಟಾಗೆ ಚೊಚ್ಚಲ ಚುನಾವಣೆಯಲ್ಲಿಯೇ ಉತ್ತಮ ಸ್ಪಂದನೆ ಸಿಕ್ಕಿತ್ತು.

 - ಮತದಾನ ತಿರಸ್ಕರಿಸುವ ಹಕ್ಕು ಜಗತ್ತಿನ 13 ದೇಶಗಳಲ್ಲಿ ಜಾರಿಯಲ್ಲಿದೆ.

 * 'ನೋಟಾ'ದ ಬಳಕೆ ಹೇಗೆ? - How NOTA to be Used?

 - ವಿದ್ಯುನ್ಮಾನ ಮತಯಂತ್ರದಲ್ಲಿ (EVM - Electronic Voter Machine) ನಮೂದಾಗಿರುವ ಅಭ್ಯರ್ಥಿಗಳ ಸಾಲಿನಲ್ಲಿ ಅತ್ಯಂತ ಕೆಳಭಾಗದಲ್ಲಿ ಈ ನೋಟಾ ಬಟನ್ ಇರುತ್ತದೆ. ಉದಾ: 15 ಮಂದಿ ಅಭ್ಯರ್ಥಿಗಳಿದ್ದಲ್ಲಿ 16ನೇ ಸಂಖ್ಯೆಯಲ್ಲಿ ನೋಟಾ ಇರುತ್ತದೆ. ಪಟ್ಟಿಯಲ್ಲಿ ಯಾವೊಬ್ಬ ಅಭ್ಯರ್ಥಿಯೂ ತನ್ನ ಮತಕ್ಕೆ ಅನರ್ಹ ಎನಿಸಿದರೆ 'ನೋಟಾ'ಮೂಲಕವೇ ನಮ್ಮ ಮತದಾನದ ಹಕ್ಕು ಚಲಾಯಿಸಬಹುದು. ಇದು ಅಧಿಕೃತವಾಗಿ ದಾಖಲಾಗುತ್ತದೆ. ಜೊತೆಗೆ ಅನರ್ಹ ಅಭ್ಯರ್ಥಿಗಳನ್ನು ತಿರಸ್ಕರಿಸಿದ ಸಂದೇಶ ರವಾನೆಯಾಗುತ್ತದೆ.

 ★ ಮತದಾನ ಪ್ರಕ್ರಿಯೆಯಲ್ಲಿ 'ನೋಟಾ' ಪರಿಣಾಮಕಾರಿ ಯಾಗಬಲ್ಲುದೇ?
 - Can NOTA be affected in Election Procedure?

 * ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕುಮತದಾನ ಪ್ರಕ್ರಿಯೆಯ ಮೇಲೆ ಯಾವುದೇ ಗಾಢವಾದ ಪರಿಣಾಮ ವೇನೂ ಬೀರುವುದಿಲ್ಲ. ಏಕೆಂದರೆ ತಿರಸ್ಕೃತ ಮತಗಳನ್ನು ರದ್ದಾದ ಮತಗಳೆಂದು ಚುನಾವಣಾ ಆಯೋಗವು ಪರಿಗಣಿಸಲ್ಪಡುವುದರಿಂದ ಫಲಿತಾಂಶದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ.

 * ಬಹುಮತದ ಜನರು ಇದನ್ನು ಬಳಸಿದರೂ ಅಥವಾ ಯಾವುದೇ ಒಬ್ಬ ವಿಜೇತ ಅಭ್ಯರ್ಥಿ ಗಳಿಸುವ ಮತಕ್ಕಿಂತಲೂ 'ನೋಟಾ'ದಡಿ ಹೆಚ್ಚು ದಾಖಲಾಗಿದ್ದರೂ ಒಟ್ಟಾರೆ ಅಭ್ಯರ್ಥಿಗಳನ್ನು ತಿರಸ್ಕರಿಸುವ ಅವಕಾಶ ಇದರಲ್ಲಿಲ್ಲ. ವಿಶೇಷವೆಂದರೆ ನೋಟಾ'ದಡಿ ದಾಖಲಾದ ಮತಗಳ ಸನಿಹದಲ್ಲಿರುವ ಅಭ್ಯರ್ಥಿಯು ಜಯಶಾಲಿ ಎಂದು ಘೋಷಿಸಲಾಗುತ್ತದೆ.

 * ಈ ಮೂಲಕ ಕೇವಲ ಜನತೆಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ನೀಡಿದಂತಾಗಿದೆ.

 * ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ಮತದಾರನಿಂದ ಅಭ್ಯರ್ಥಿ ತಿರಸ್ಕರಗೊಳ್ಳುವ ಮೂಲಕ ಆತನ ನೈತಿಕ ಸ್ಥೈರ್ಯ ಕುಗ್ಗಿಸಿದ ತೃಪ್ತಿ ಮಾತ್ರ ಮತದಾರನದು.

Sunday 23 March 2014

★ ಭಾರತದಲ್ಲಿ ಪ್ಲಾಸ್ಟಿಕ್ ನೋಟುಗಳ ಪ್ರಯೋಗಾರ್ಥ ಬಿಡುಗಡೆಗೆ ಸಜ್ಜು : ( plastic notes )

★ ಭಾರತದಲ್ಲಿ ಪ್ಲಾಸ್ಟಿಕ್ ನೋಟುಗಳ ಪ್ರಯೋಗಾರ್ಥ ಬಿಡುಗಡೆ ಸಜ್ಜು :
( plastic notes releasing in India) -

ಭಾರತೀಯ ರಿಸರ್ವ್ ಬ್ಯಾಂಕ್ ಈ ವರ್ಷದ ಮಧ್ಯಾವಧಿಯಲ್ಲಿ 10 ಮುಖಬೆಲೆಯ ಒಂದು ಶತಕೋಟಿ ನೋಟುಗಳನ್ನು ಪ್ರಯೋಗಾರ್ಥವಾಗಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ನೋಟುಗಳ ಕುರಿತ ಒಂದಷ್ಟು ಮಾಹಿತಿ ಇಲ್ಲಿದೆ.

 * ಪ್ರಥಮ ಪ್ರಯೋಗ:
ಪ್ಲಾಸ್ಟಿಕ್ ನೋಟುಗಳ ಪ್ರಯೋಗಕ್ಕೆ ಮೊದಲು ಕೈಹಾಕಿದ್ದು ಹೈಟಿ ಮತ್ತು ಕೋಸ್ಟರಿಕಾ ದೇಶಗಳು. 1980ರ ದಶಕದಲ್ಲಿ ನಡೆದ ಈ ಪ್ರಯೋಗಕ್ಕೆ ಈ ಎರಡು ದೇಶಗಳು ಅಮೆರಿಕದ ತಂತ್ರಜ್ಞಾನವನ್ನು ಬಳಸಿಕೊಂಡಿದ್ದವು. ಆದರೆ, ಶಾಹಿಯ ಸಮಸ್ಯೆಯಿಂದಾಗಿ ಈ ಪ್ರಯೋಗ ಕೈಕೊಟ್ಟಿತು. 1983ರಲ್ಲಿ ಬ್ರಿಟನ್ ತಂತ್ರಜ್ಞಾನವನ್ನು ಬಳಸಿಕೊಂಡು ಐಲ್ ಆಫ್ ಮ್ಯಾನ್ ಎನ್ನುವ ದೇಶ ಪ್ಲಾಸ್ಟಿಕ್‌ನೋಟನ್ನು ಬಿಡುಗಡೆ ಮಾಡಿತ್ತು. ಈ ಪ್ರಯೋಗದ ಯಶಸ್ಸಿಗೂ ಶಾಹಿಯೇ ಅಡ್ಡಿಯಾಯಿತು.

 ವಿಶ್ವದಲ್ಲೇ ಮೊದಲ ಬಾರಿ ಸಂಪೂರ್ಣವಾಗಿ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಸಿದ್ದು ಆಸ್ಟ್ರೇಲಿಯಾ. 1988ರಿಂದ ಆಸ್ಟ್ರೇಲಿಯಾದಲ್ಲಿ ಪ್ಲಾಸ್ಟಿಕ್ ನೋಟುಗಳು ಚಲಾವಣೆಯಲ್ಲಿವೆ.

 * ಏನಿದರ ಉಪಯೋಗ?
ಪ್ಲಾಸ್ಟಿಕ್ ನೋಟುಗಳ ಆಯುಷ್ಯ ಜಾಸ್ತಿ. ಈ ನೋಟುಗಳು ಬೇಗ ಹಾಳಾಗುವುದಿಲ್ಲ. ಉಷ್ಣವಲಯದಲ್ಲಿರುವ ರಾಷ್ಟ್ರಗಳಿಗೆ ಈ ರೀತಿಯ ನೋಟು ಹೇಳಿಮಾಡಿಸಿದಂತಿದೆ. ತಾಪಮಾನದ ಏರಿಕೆಯಿಂದಾಗಿ ಮೈಯಿಂದ ಇಳಿಯುವ ಬೆವರನ್ನು ಕಾಗದದ ನೋಟುಗಳು ಹೀರಿಕೊಳ್ಳಬಹುದು. ಆದರೆ, ಪ್ಲಾಸ್ಟಿಕ್ ನೋಟುಗಳಲ್ಲಿ ಈ ಸಮಸ್ಯೆಯಿಲ್ಲ. ಕಾಗದದ ನೋಟುಗಳಿಗೆ ಹೋಲಿಸಿದರೆ ಈ ರೀತಿಯ ನೋಟುಗಳ ಉತ್ಪದನಾ ವೆಚ್ಚವೂ ಕಡಿಮೆ, ನಕಲು ಮಾಡುವುದು ಕಷ್ಟ.

 * ಅನನುಕೂಲಗಳೇನು?
ಪ್ಲಾಸ್ಟಿಕ್ ನೋಟುಗಳನ್ನು ಮಡಚಲು ಸಾಧ್ಯವಿಲ್ಲ. ಕೈಯಿಂದ ಬಹುಬೇಗ ಜಾರುತ್ತವೆ 23ಕ್ಕೂ ಹೆಚ್ಚು ದೇಶಗಳು ಆಸ್ಟ್ರೇಲಿಯಾ, ಬ್ರೂನೈ, ಪಪುವ ನ್ಯೂಗಿನಿಯಾ, ನ್ಯೂಜಿಲ್ಯಾಂಡ್, ರೊಮಾನಿಯಾ, ವಿಯೆಟ್ನಾಂ ಸೇರಿ ವಿಶ್ವದಲ್ಲಿ 23ಕ್ಕೂ ಹೆಚ್ಚು ದೇಶಗಳು ಪಾಲಿಮರ್ ಅಥವಾ ಪ್ಲಾಸ್ಟಿಕ್ ನೋಟುಗಳನ್ನು ಬಳಸುತ್ತಿವೆ. 2016ಕ್ಕೆ ಬ್ರಿಟನ್‌ನಲ್ಲಿ 2016ರ ವೇಳೆಗೆ ದೇಶದಲ್ಲಿ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸುವುದಾಗಿ ಬ್ರಿಟನ್‌ನ ಕೇಂದ್ರ ಬ್ಯಾಂಕ್ ಘೋಷಿಸಿದೆ.

 * ಹೇಗೆ ತಯಾರಿಸುತ್ತಾರೆ?
ಪ್ಲಾಸ್ಟಿಕ್ ನೋಟುಗಳನ್ನು ಪಾಲಿ ಪ್ರೊಪೈಲಿನ್‌ನಿಂದ ನಿರ್ಮಿಸಿರುವ ಫ್ಲೆಕ್ಸಿಬಲ್ ಹಾಗೂ ಪಾರದರ್ಶಕ ಫಿಲ್ಮ್‌ನಿಂದ ಉತ್ಪಾದಿಸಲಾಗುತ್ತದೆ. ಈ ನೋಟುಗಳ ಎದುರು ಮತ್ತು ಹಿಂದೆ ವಿಶೇಷವಾಗಿ ತಯಾರಿಸಿದ ಶಾಹಿಯ ಪದರಗಳ ಕೋಟಿಂಗ್ ಮಾಡಲಾಗಿರುತ್ತದೆ.

 * ಮುಂದಿನ ಯೋಜನೆ:
ಆರ್‌ಬಿಐ ಕೊಚ್ಚಿ, ಮೈಸೂರು, ಜೈಪುರ, ಶಿಮ್ಲಾ ಮತ್ತು ಭುವನೇಶ್ವರದಲ್ಲಿ 10 ಮುಖಬೆಲೆಯ ಪ್ಲಾಸ್ಟಿಕ್ ನೋಟುಗಳನ್ನು ಪ್ರಯೋಗಾರ್ಥವಾಗಿ ಪರಿಚಯಿಸಲು ಉದ್ದೇಶಿಸಿದೆ. ಇಲ್ಲಿ ಸಿಗುವ ಪ್ರತಿಕ್ರಿಯೆಯನ್ನು ನೋಡಿಕೊಂಡು ಬಳಿಕ ಹೆಚ್ಚಿನ ಮುಖಬೆಲೆಯ ನೋಟುಗಳನ್ನೂ ಪರಿಚಯಿಸುವ ಉದ್ದೇಶ ಆರ್‌ಬಿಐಗಿದೆ. ಇತ್ತೀಚೆಗೆ ಪಾಕಿಸ್ತಾನದ ಸರ್ಕಾರದ ನೆರವಿನೊಂದಿಗೆ ಹೆಚ್ಚುತ್ತಿರುವ ನಕಲಿ ನೋಟುಗಳ ದಂದೆಯಿಂದಾಗಿ ಭಾರತದ ಆರ್ಥಿಕತೆಗೆ ದೊಡ್ಡಮಟ್ಟದ ಹೊಡೆತ ಬೀಳುತ್ತಿದೆ. ಜತೆಗೆ, ಉಷ್ಣವಲಯದಲ್ಲಿರುವ ಕಾರಣ ಕಾಗದದ ನೋಟುಗಳು ಬಹುಬೇಗ ಹಾಳಾಗುತ್ತಿವೆ.

Tuesday 18 March 2014

★ ಭಾರತದ ಸಂವಿಧಾನದಲ್ಲಿ ಅಳವಡಿಸಲಾದ ರಿಟ್ ಗಳು (ತಡೆಯಾಜ್ಞೆಗಳು) ( Writs embodied in Constitution) :

★ ಭಾರತದ ಸಂವಿಧಾನದಲ್ಲಿ ಅಳವಡಿಸಲಾದ ರಿಟ್ ಗಳು (ತಡೆಯಾಜ್ಞೆಗಳು) ( Writs embodied in Constitution) :

 'ಸಂವಿಧಾನದ ಹೃದಯ' ವೆಂದು ಕರೆಯಲ್ಪಡುವ ಸಂವಿಧಾನದ 3 ನೇ ಭಾಗದಲ್ಲಿರುವ 32 ನೇ ಪರಿಚ್ಛೇದದ ಅಡಿಯಲ್ಲಿ ರಿಟ್ ಗಳನ್ನು ಸೇರಿಸಲಾಗಿದೆ.

 * ರಿಟ್ (Writs):
 ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳನ್ನು ಅದರಲ್ಲಿ ನಿರ್ದಿಷ್ಟ ಪಡಿಸಿರುವ ಒಂದು ಕೃತ್ಯವನ್ನು ಮಾಡಲು ಅಥವಾ ಮಾಡದಿರಲು ಅಥವಾ ಮಾಡುವುದರಿಂದ ವಿಮುಖನಾಗಲು ನಿರ್ದೇಶಿಸಿ ನ್ಯಾಯಾಲಯ ಹೊರಡಿಸುವ ಲಿಖಿತ ಅಪ್ಪಣೆಗಳು ಅಥವಾ ವಿದ್ಯುಕ್ತ ಆದೇಶ (Written Commands) .

 * ಸಂವಿಧಾನದ ಅನುಚ್ಛೇದ 32(2) ಮತ್ತು 226 ರ ಅನ್ವಯ ಕ್ರಮವಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಮತ್ತು ಉಚ್ಚ ನ್ಯಾಯಾಲಯ ಗಳಿಗೆ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ರಿಟ್ ಗಳನ್ನು ಹೊರಡಿಸುವ ಅಧಿಕಾರವನ್ನು ಕೊಡುತ್ತದೆ. ಅದು 32 ರ ಅಡಿಯಲ್ಲಿ ಸರ್ವೋಚ್ಚ ನ್ಯಾಯಾಲಯ ಕೇವಲ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ರಿಟ್ ಹೊರಡಿಸಬಹುದು. ಆದರೆ ಅನುಚ್ಛೇದ 226ರ ಅಡಿಯಲ್ಲಿ ಉಚ್ಚ ನ್ಯಾಯಾಲಯಗಳು ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ಮಾತ್ರವಲ್ಲದೆ ಬೇರಾವುದೇ ಕಾನೂನು ಸಮ್ಮತ ಹಕ್ಕುಗಳ ಜಾರಿಗೂ ರಿಟ್ ಹೊರಡಿಸಬಹುದು.

 * ರಿಟ್ ಗಳು (ತಡೆಯಾಜ್ಞೆಗಳು)(Writs) :
* ಹೇಬಿಯಸ್ ಕಾರ್ಪಸ್ (Habeas Corpus) :
 ಯಾವುದೇ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಬಂಧನದಲ್ಲಿಟ್ಟಾಗ ಆ ರೀತಿಯ ಬಂಧನಕ್ಕೆ ಕಾರಣವನ್ನು ತಿಳಿಯಲು ಬಂಧಿತ ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಬಂಧಿಸಿದ ವ್ಯಕ್ತಿಗೆ ನೀಡುವ ಆದೇಶದ ರೂಪದಲ್ಲಿರುತ್ತದೆ. ಕಾನೂನು ಸಮರ್ಥನೆಯಿಲ್ಲದೇ ಬಂಧಿತನಾಗಿರುವ ವ್ಯಕ್ತಿಯನ್ನು ಮುಕ್ತಗೊಳಿಸುವುದೇ ಇದರ ಉದ್ದೇಶವಾಗಿರುವುದು.

 - ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿಗಳನ್ನು ಈ ಕೆಳಗಿನವರು ದಾಖಲಿಸಬಹುದು;
1) ಸ್ವತಃ ಬಾಧಿತ ವ್ಯಕ್ತಿ.
2) ಆತನ ಪರವಾಗಿ ಬೇರೆ ಯಾವುದೇ ವ್ಯಕ್ತಿ

 * ಮ್ಯಾಂಡಮಾಸ್ (ಆಜ್ಞೆ) (Mandamus) : ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯ ಒಂದು ಸಂಸ್ಥೆಗೆ, ವ್ಯಕ್ತಿಗೆ ಅಥವಾ ಪ್ರಾಧಿಕಾರಕ್ಕೆ ತನ್ನ ಪದವಿಗೆ ಸಂಬಂಧಿಸಿದ ಸಾರ್ವಜನಿಕ ಕರ್ತವ್ಯವನ್ನು ಪಾಲಿಸಲು ಆಜ್ಞಾಪಿಸಿ ಹೊರಡಿಸುವ ಆದೇಶ. ಈ ಅರ್ಜಿಯನ್ನು ಪರಿಶೀಲಿಸುವ ನ್ಯಾಯಾಲಯವು ಆ ನಿರ್ದಿಷ್ಟ ಪ್ರಾಧಿಕಾರಕ್ಕೆ ಆ ಕ್ರಿಯೆಯನ್ನು ನೆರವೇರಿಸುವ ಕಾನೂನುಬದ್ಧ ಕರ್ತವ್ಯದ ಹೊಣೆಯಿದೆಯೇ ಮತ್ತು ಅರ್ಜಿದಾರನಿಗೆ ಆ ಕರ್ತವ್ಯ ಪಾಲನೆಯ ಒತ್ತಾಯ ಮಾಡುವ ಕಾನೂನುಬದ್ಧ ಹಕ್ಕಿದೆಯೇ ಎಂಬುದನ್ನು ಪರೀಕ್ಷಿಸಬೇಕಾಗುತ್ತದೆ.

 * ಪ್ರೊಹಿಬಿಷನ್ (Prohibition) :
ಅಧೀನ ನ್ಯಾಯಾಲಯ ಯಾವುದೇ ನಿರ್ದಿಷ್ಟ ವಿಷಯದಲ್ಲಿ ಅದರ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದರೆ ಆಗ ಆ ವಿಷಯದ ವ್ಯವಹರಣೆಯನ್ನು ಮುಂದುವರೆಸದಂತೆ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯ ಅಧೀನ ನ್ಯಾಯಾಲಯಕ್ಕೆ ಹೊರಡಿಸುವ ರಿಟ್ ಇದಾಗಿದೆ. ಅಧೀನ ನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿಯಡಿ ಮಾತ್ರ ಕಾರ್ಯನಿರ್ವಹಿಸುವಂತೆ ಮಾಡುವುದೇ ಈ ರಿಟ್ ನ ಉದ್ದೇಶವಾಗಿದೆ.

 * ಸರ್ಶಿಯೋರರಿ (Certiorari) : ಯಾವುದೇ ದಾವೆಯನ್ನು ಒಂದು ಅಧೀನ ನ್ಯಾಯಾಲಯದಿಂದ ಒಂದು ವರೀಷ್ಠ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲು ಸರ್ಶಿಯೋರರಿ ರಿಟ್ ಆದೇಶವನ್ನು ಹೊರಡಿಸಲಾಗುತ್ತದೆ. ನ್ಯಾಯಾಧಿಕರಣದ ಆದೇಶ ಅಥವಾ ತೀರ್ಮಾನವನ್ನು ರದ್ದುಗೊಳಿಸಲು ಸರ್ಶಿಯೋರರಿ ಹೊರಡಿಸಲ್ಪಡುತ್ತದೆ.

 * ಕೊ ವಾರಂಟೋ (Quowarranto) : ಯಾವುದೇ ಸಾರ್ವಜನಿಕ ಪದವಿಯನ್ನು ವಹಿಸಿರುವ ವ್ಯಕ್ತಿ ತಾನು ಯಾವ ಅಧಿಕಾರದಡಿಯಲ್ಲಿ ಆ ಪದವಿಯನ್ನು ವಹಿಸಿರುವನೆಂಬುದನ್ನು ನ್ಯಾಯಾಲಯಕ್ಕೆ ತೋರಿಸುವಂತೆ ಪ್ರಶ್ನಿಸಲು ' ಕೊ ವಾರಂಟೋ' ರಿಟ್ ಉಪಯೋಗಿಸಲ್ಪಡುತ್ತದೆ. ಯಾವುದೇ ಸಾರ್ವಜನಿಕ ಪದವಿಯನ್ನು ವಹಿಸಲು ಕೆಲವು ಅರ್ಹತೆಗಳನ್ನು ಕಾನೂನು ನಿಯಮಿಸಿರುತ್ತದೆ. ಯಾರಾದರೂ ವ್ಯಕ್ತಿ ಅಂತಹ ಎಲ್ಲ ಅಥವಾ ಯಾವ ಅರ್ಹತೆಗಳಿಲ್ಲದೇ ಪದವಿಯನ್ನು ಗಳಿಸಿದ್ದರೆ ಅವನನ್ನು ನ್ಯಾಯಾಲಯ ' ಕೊ ವಾರಂಟೋ' ರಿಟ್ ಹೊರಡಿಸುವ ಮೂಲಕ ಪ್ರಶ್ನಿಸುತ್ತದೆ. ಖಾಸಗಿ ಸಂಸ್ಥೆಗಳ ವಿರುದ್ದ ಈ ರಿಟ್ ಹೊರಡಿಸಲಾಗುವುದಿಲ್ಲ. ಯಾವುದೇ ಸಾರ್ವಜನಿಕ ಪದವಿಯನ್ನು ಅನರ್ಹ ವ್ಯಕ್ತಿ ಪಡೆಯಕೂಡದೆಂಬುದೇ ಈ ರಿಟ್ ಹೊರಡಿಸಲು ಪ್ರಧಾನ ಕಾರಣವಾಗಿದೆ.

★ ಪರಿಸರ ಸೂಕ್ಷ್ಮ ವಲಯ (Eco Sensitive Zone) :

★ ಪರಿಸರ ಸೂಕ್ಷ್ಮ ವಲಯ
(Eco Sensitive Zone) :

 ಅತ್ಯಂತ ಮಹತ್ವದ ಜೀವ ಸಂಕುಲಗಳ ಸಂರಕ್ಷಣಾ ತಾಣಗಳಾಗಿರುವ ವಿವಿಧ ರಾಷ್ಟ್ರೀಯ ಉದ್ಯಾನವನಗಳ, ಅಭಯಾರಣ್ಯಗಳ ಸುತ್ತಲಿನ ಪ್ರದೇಶವನ್ನು ' ಪರಿಸರ ಸೂಕ್ಷ್ಮ ವಲಯ' ಎಂದು ಕರೆಯಲಾಗುತ್ತದೆ.

 * ಜೀವ ವೈವಿಧ್ಯತೆ, ವನ್ಯ ಜೀವಿಗಳ ಆವಾಸಸ್ಥಾನಕ್ಕೆ ಇರುವ ದೂರ, ನಿಯಂತ್ರಿತ ಮಟ್ಟಕ್ಕಿಂತ ಅಧಿಕ ಪ್ರಮಾಣದಲ್ಲಿ ಕೈಗಾರಿಕೆಗಳನ್ನು, ಇತರೇ ಚಟುವಟಿಕೆಗಳನ್ನು ನಿಷೇಧಿಸುವ ಹಾಗೂ ನಿಯಂತ್ರಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ 1986 ರ Environment Protection Act ನ ನೀತಿ ನಿಯಮಾವಳಿಗಳ ಸೆಕ್ಷನ್ -5(1) ನೀಡುತ್ತದೆ. ಇಲ್ಲಿ ಎಲ್ಲಾ ರೀತಿಯ ವಾಣಿಜ್ಯ ಉದ್ದೇಶದ ಕಾರ್ಯಗಳಿಗೆ ನಿಷೇಧ ವಿರುತ್ತದೆ.

★ ಭಾರತೀಯ ವಿಜ್ಞಾನ ಕಾಂಗ್ರೆಸ್ (ISCA - Indian Science Congress Association) :

★ ಭಾರತೀಯ ವಿಜ್ಞಾನ ಕಾಂಗ್ರೆಸ್
 (ISCA - Indian Science Congress Association) :

* ಸ್ಥಾಪನೆ:
ಭಾರತದಲ್ಲಿ ವಿಜ್ಞಾನದ ವಿಷಯವಾಗಿ ಜಾಗೃತಿ ಮೂಡಿಸಲು, ವಾರ್ಷಿಕವಾಗಿ ವಿಜ್ಞಾನ ಸಮಾವೇಶಗಳನ್ನು ನಡೆಸುವುದರ ಮೂಲಕ ಭಾರತೀಯರಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ,ವೈಜ್ಞಾನಿಕ ಸಂಶೋಧನೆಗಳ ಪ್ರಗತಿಗಾಗಿ ಬ್ರಿಟೀಷ್ ರಸಾಯನ ಶಾಸ್ತ್ರಜ್ಞರಾದ ಪ್ರೋ. ಜೆ.ಎಲ್. ಸೈಮನ್ ಸನ್ ಮತ್ತು ಪ್ರೋ.ಪಿ.ಎಸ್. ಮ್ಯಾಕ್ ಮೋಹನ್ ರವರಿಂದ ಸ್ಥಾಪನೆಯಾಯಿತು.

 * ಮೊದಲ ಸಮಾವೇಶ -1914 : ಭಾರತೀಯ ವಿಜ್ಞಾನ ಕಾಂಗ್ರೆಸ್ ನ ಮೊದಲ ಸಮಾವೇಶವು 1914 ರ ಜನೆವರಿ 15 ರಿಂದ 17ರವರೆಗೆ ಕಲ್ಕತ್ತಾದ ಏಷಿಯಾಟಿಕ್ ಸೊಸೈಟಿಯ ಆವರಣದಲ್ಲಿ ನಡೆಯಿತು.

ಆಗಿನ ಕಲ್ಕತ್ತಾ ವಿ.ವಿ ಯ ಉಪ ಕುಲಪತಿಗಳಾದ ಸರ್. ಆಶುತೋಶ್ ಮುಖರ್ಜಿ ಯವರು ಈ ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿದ್ದರು .

 * ದೇಶದ ವಿಜ್ಞಾನಿಗಳೆಲ್ಲ ವರ್ಷಕ್ಕೊಮ್ಮೆ ಒಂದೆಡೆ ಸೇರಿ ತಾವು ನಡೆಯುತ್ತಿರುವ ಸಂಶೋಧನೆಗಳನ್ನು ವಿವರಿಸುವುದು, ಅನುಭವಗಳನ್ನು ಹಂಚಿಕೊಳ್ಳುವುದು , ಈ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಬಗ್ಗೆ ಪ್ರಜೆಗಳಲ್ಲಿ ತಿಳುವಳಿಕೆ ಮೂಡಿಸುವುದು. ಸಮಾವೇಶದ ಉದ್ದೇಶ.

 ★ ಭಾರತೀಯ ವಿಜ್ಞಾನ ಕಾಂಗ್ರೆಸ್ ನ ಗುರಿಗಳು:
- ಭಾರತದಲ್ಲಿ ವಿಜ್ಞಾನವನ್ನು ಪ್ರೋತ್ಸಾಹಿಸುವ ಸಲುವಾಗಿ ದೇಶದಲ್ಲಿ ಅನುಕೂಲಕರ ಪ್ರದೇಶದಲ್ಲಿ ವಾರ್ಷಿಕ ಸಮಾವೇಶಗಳನ್ನು ಏರ್ಪಡಿಸುವುದು.
 - ಸಂಸ್ಥೆಗೆ ಸಂಬಂಧಿಸಿದ ಕಾರ್ಯ ಚಟುವಟಿಕೆ, ಮಾಹಿತಿ, ವ್ಯವಹಾರಗಳನ್ನು ಪ್ರಕಟಿಸುವುದು.ವಿಜ್ಞಾನಕ್ಕೆ ಪ್ರಚಾರ ನೀಡುವುದು.
 - ವಿಜ್ಞಾನದ ವಿವಿಧ ವಿಭಾಗಗಳ (ಸಸ್ಯಶಾಸ್ತ್ರ , ಭೂವಿಜ್ಞಾನ, ಜೈವಿಕ ಭೌತಶಾಸ್ತ್ರ ಇತ್ಯಾದಿ) ಹೆಚ್ಚಿನ ಸಂಶೋಧನೆಗೆ ಪ್ರೋತ್ಸಾಹಿಸುವುದು.
 - ನೂತನ ವೈಜ್ಞಾನಿಕ ನೀತಿಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಪ್ರೋತ್ಸಾಹಿಸ ನೀಡುವುದು.

 * 2012ನೇ ಸಮಾವೇಶ ಭುವನೇಶ್ವರದಲ್ಲಿ ನಡೆದಿದ್ದು ಕ್ರಿ.ಶ. 2025 ರ ವೇಳೆಗೆ ವಿಶ್ವದ 5 ಪ್ರಮುಖ ವೈಜ್ಞಾನಿಕ ಬಲಾಢ್ಯ ದೇಶಗಳ ಪಟ್ಟಿಯಲ್ಲಿ ಸೇರುವ ಹಂಬಲದೊಂದಿಗೆ ಹೊಸ ವಿಜ್ಞಾನ ನೀತಿ-2013 ನ್ನು ಬಿಡುಗಡೆ ಗೊಳಿಸಿತು.

★ ಕರ್ನಾಟಕ ರಾಜ್ಯ ಯುವ ನೀತಿ (Karnataka State Youth Policy) :

★ ಕರ್ನಾಟಕ ರಾಜ್ಯ ಯುವ ನೀತಿ (Karnataka State Youth Policy) :

 ಕರ್ನಾಟಕ ರಾಜ್ಯದ ಸುಮಾರು 6.11 ಕೋಟಿ ಜನಸಂಖ್ಯೆಯ ಪೈಕಿ 1.9 ಕೋಟೆ ಮಂದಿ ಯುವಕರಿದ್ದು ಇವರೆಲ್ಲರ ಬೆಳವಣಿಗೆ ಮತ್ತು ಪ್ರಗತಿಯನ್ನಾಧರಿಸಿ ಯುವ ನೀತಿಯನ್ನು ಪ್ರಕಟಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.

- ಯುವ ನೀತಿಯ ಪ್ರಕಾರ 16-30 ವಯೋಮಾನದ ಯುವ ಸಮುದಾಯವನ್ನು ಯುವಕರೆಂದು ಗುರುತಿಸಲಾಗಿದೆ.

 * ಈ ನೀತಿಯನ್ನು ಸಾಧಿಸಲು ಕರ್ನಾಟಕ ಸರ್ಕಾರದ ಮುಂದೆಹಲವಾರು ಸವಾಲುಗಳಿದ್ದು ಅವುಗಳಲ್ಲಿ ಪ್ರಮುಖವಾಗಿ ರಾಜ್ಯದ ಕಾಲುಭಾಗದಷ್ಟು ಯುವಕರು ಅನಕ್ಷರಸ್ಥರಾಗಿದ್ದಾರೆ. ಯುವತಿಯರಲ್ಲಿ ಅರ್ಧದಷ್ಟು ಮಂದಿಯ ವಿದ್ಯಾಭ್ಯಾಸ 10ನೇ ತರಗತಿಯನ್ನು ದಾಟಿಲ್ಲ. ಇಂಥ ಸನ್ನಿವೇಶದ ನಡುವೆ ಕರ್ನಾಟಕ ಜ್ಞಾನ ಆಯೋಗ ಮತ್ತು ರಾಜ್ಯ ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ರಾಜ್ಯ ಯುವ ನೀತಿಯ ಕರಡು ರೂಪಿಸಿವೆ.

 * ರಾಜ್ಯ ಯುವ ನೀತಿಯ ಗುರಿಗಳು :
- ಕರ್ನಾಟಕದಲ್ಲಿರುವ ಸಕಲ ಯುವಕರನ್ನು ತಲುಪುವುದು.
- ರಾಜ್ಯದ ಯುವ ಜನರ ಆಶೋತ್ತರಗಳು ಮತ್ತು ಗುರಿಗಳನ್ನು ಕಾರ್ಯಾನುಷ್ಠಾನಗೊಳಿಸುವುದು ಮತ್ತು ಅಕ್ಷರ ರೂಪಕ್ಕೆ ತರುವುದು.
- ಯುವ ಸಮುದಾಯದ ಆಂತರಿಕ ಸತ್ವವನ್ನು ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕಾಗಿ ಸದೃಢಗೊಳಿಸುವುದು.
- ಎಲ್ಲ ಕ್ಷೇತ್ರಗಳಲ್ಲಿಯೂ ಯುವಶಕ್ತಿಯನ್ನು ಪರಿಗಣಿಸಿ ಯುವಕರ ಮತ್ತು ರಾಜ್ಯದ ಬೆಳವಣಿಗೆಗೆ ಸಹಾಯಕವಾಗಿ ಯುವಶಕ್ತಿಯನ್ನುಬೆಳೆಸುವುದು.
- ಉದ್ದೇಶಿತ ಗುರಿ ಸಾಧನೆಗೆ ಕ್ರಿಯಾ ಯೋಜನೆಗಳನ್ನು ವಿನ್ಯಾಸಗೊಳಿಸಿ ಯುವ ನೀತಿ ಅನುಷ್ಟಾನ ಗೊಳ್ಳುವಂತೆ ನೋಡಿಕೊಳ್ಳುವುದು.

 * ಯುವ ನೀತಿಯ ಕಾರ್ಯತಂತ್ರ : ಕರ್ನಾಟಕ ರಾಜ್ಯ ಯುವ ನೀತಿಯ ಕಾರ್ಯತಂತ್ರಐದು ಹಂತಗಳಲ್ಲಿದೆ.
1) ತಲುಪುವಿಕೆ
2) ತೊಡಗಿಸುವಿಕೆ
3) ಸಬಲೀಕರಣ
4) ಕಾಣಿಕೆ
5) ಪ್ರಗತಿ
ಈ ಕರಡು ನೀತಿಯ ಬಗ್ಗೆ ಈಗ ಸಾರ್ವಜನಿಕ ಚರ್ಚೆ ನಡೆಯುತ್ತಿದೆ.

★ ರಾಷ್ಟ್ರೀಯ ಯುವ ನೀತಿ (National Youth Policy) - 2014 :

★ ರಾಷ್ಟ್ರೀಯ ಯುವ ನೀತಿ -2014
(National Youth Policy -2014) :

ರಾಷ್ಟ್ರೀಯ ನಿರ್ಮಾಣದ ಹೊಣೆಗಾರಿಕೆಯನ್ನು ಅರಿತುಕೊಳ್ಳುವ ಯುವಜನರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಮಂತ್ರಿಮಂಡಲ 2014 ಜನೆವರಿ 9 ರಂದು ರಾಷ್ಟ್ರೀಯ ಯುವ ನೀತಿಯನ್ನು ಅಂಗೀಕರಿಸಿತು.

 * ರಾಷ್ಟ್ರೀಯ ಯುವ ನೀತಿ (NYP) ಯ ದೃಷ್ಟಿಕೋನ (Vision) :
ಭಾರತವು ರಾಷ್ಟ್ರಗಳ ಸಮುದಾಯದಲ್ಲಿ ಸೂಕ್ತ ಸ್ಥಾನ ಹೊಂದಲು ಅನುವಾಗುವಂತೆ ಯುವಜನರು ತಮ್ಮ ಪೂರ್ಣ ಸಾಮರ್ಥ್ಯವನ್ನು ಹೊರಹಾಕಿ ಗುರಿ ಸಾಧಿಸುವ ಧ್ಯೇಯ ಹೊಂದಿದೆ.

 * ಈ ದೃಷ್ಟಿಕೋನದ ಸಾಧನೆಗಾಗಿ ನೀತಿಯು 5 ಸರಿಯಾಗಿ ವ್ಯಾಖ್ಯಾನಿಸಲ್ಪಟ್ಟ ಧ್ಯೇಯೋದ್ದೇಶಗಳನ್ನು 11 ಆದ್ಯತಾ ವಲಯಗಳನ್ನು ಗುರುತಿಸಿ ಪ್ರತಿಯೊಂದು ವಲಯದಲ್ಲಿ ನೀತಿಯ ಮಧ್ಯಪ್ರವೇಶಕ್ಕೆ ಸಲಹೆ ಮಾಡಿದೆ.

 * ಗುರುತಿಸಿರುವ ಆದ್ಯತಾ ವಲಯಗಳು : ಶಿಕ್ಷಣ, ಕೌಶಲ್ಯವೃದ್ಧಿ, ಉದ್ಯೋಗ, ಉದ್ಯಮಶೀಲತೆ, ಆರೋಗ್ಯಯುತ ಜೀವನಶೈಲಿ, ಕ್ರೀಡೆ, ಸಾಮಾಜಿಕ ಮೌಲ್ಯಗಳು, ಸಾಮೂಹಿಕ ಪಾಲ್ಗೊಳ್ಳುವಿಕೆ, ರಾಜಕೀಯ ಮತ್ತು ಆಡಳಿತದಲ್ಲಿ ಆಸಕ್ತಿ, ಸಾಮಾಜಿಕ ನ್ಯಾಯ.

 * ಮುಖ್ಯಾಂಶಗಳು :
- ಈ ನೀತಿಯು ವಿದ್ಯಾವಂತ ಮತ್ತು ಆರೋಗ್ಯವಂತ ಯುವ ಸಮುದಾಯವನ್ನು ಕಾಣಲು ಬಯಸುತ್ತದೆ.
15-29 ವಯೋಮಾನದ ಎಲ್ಲ ಯುವಕರ ಸಂಖ್ಯೆ 2011 ರ ಜನಗಣತಿಯ ಪ್ರಕಾರ ಒಟ್ಟು ಜನಸಂಖ್ಯೆಯ ಶೇ.27.5 ರಷ್ಟಿದ್ದು ಈ ವಯೋಮಾನದವರ ಸರ್ವತೋಮುಖ ಬೆಳವಣಿಗೆ ನೀತಿಗೆ ಒತ್ತು ಕೊಟ್ಟಿದೆ.

- ದೇಶದಲ್ಲಿ ಈಗ 33 ಕೋಟಿ ಯುವಕರಿದ್ದಾರೆ. ಇವರೆಲ್ಲರ ಭವಿಷ್ಯ ದೇಶದ ಭವಿಷ್ಯದೊಂದಿಗೆ ಜೋಡಿಸಲ್ಪಟ್ಟಿದೆ. ಯುವಕರು ತಮ್ಮ ಪೂರ್ಣ ಸಾಮರ್ಥ್ಯವನ್ನು ಹೊರಹಾಕಲು, ಅವರ ರಾಷ್ಟ್ರ ನಿರ್ಮಾಣದಲ್ಲಿ ಭಾಗವಹಿಸಲು, ತಮ್ಮ ಜೀವನವನ್ನು ಅರ್ಥಪೂರ್ಣವಾಗಿಸಲು ಸರಕಾರಗಳು ಮತ್ತು ಖಾಸಗಿ ಸಂಘ ಸಂಸ್ಥೆಗಳು ಗಮನಹರಿಸಬೇಕಾಗಿದೆ ಎಂದು ಈ ನೀತಿ ಅಭಿಪ್ರಾಯಪಡುತ್ತದೆ.

★ ನಮ್ಮ ಕರ್ನಾಟಕ: ಗಮನಿಸಬೇಕಾದ ಅಂಶಗಳು: ( 2011 ರ ಜನಗಣತಿಯ ಪ್ರಕಾರ)

★ ನಮ್ಮ ಕರ್ನಾಟಕ: (Facts of Karnataka)
 ಗಮನಿಸಬೇಕಾದ ಅಂಶಗಳು: ( 2011 ರ ಜನಗಣತಿಯ ಪ್ರಕಾರ)

 * 1956 ರ ಏಕೀಕರಣದ ನಂತರ ವಿಶಾಲ ಮೈಸೂರು ರಾಜ್ಯ ಉದಯಿಸಿತು. ಆರಂಭದಲ್ಲಿ ಹತ್ತು ಜಿಲ್ಲೆಗಳನ್ನು ಒಳಗೊಂಡಿದ್ದ ಮೈಸೂರು ಪ್ರಾಂತ್ಯಕ್ಕೆ ಭಾಷೆಯ ಆಧಾರದಲ್ಲಿ 1956 ರಲ್ಲಿ ಬಳ್ಳಾರಿ ಜಿಲ್ಲೆ,
 ಮದ್ರಾಸ್ ಪ್ರಾಂತ್ಯದಿಂದ ದಕ್ಷಿಣ ಕನ್ನಡ ಜಿಲ್ಲೆ, ಬಾಂಬೆ ಪ್ರಾಂತ್ಯದಿಂದ - ಉತ್ತರ ಕನ್ನಡ, ಧಾರವಾಡ, ಬೆಳಗಾವಿ ಮತ್ತು ಬಿಜಾಪುರ ಜಿಲ್ಲೆಗಳು.
ಹೈದ್ರಾಬಾದ ಪ್ರಾಂತ್ಯದಿಂದ - ಬೀದರ, ಗುಲ್ಬರ್ಗಾ ಮತ್ತು ರಾಯಚೂರು ಜಿಲ್ಲೆಗಳು ವಿಶಾಲ ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡವು.

 * 2011 ರ ಜನಗಣತಿಯ ಪ್ರಕಾರ ಭಾರತದಲ್ಲಿ ಒಟ್ಟು 1,21,01,93,422 ಜನರಿದ್ದಾರೆ. ಇದರಲ್ಲಿ 62,37,24,248 ಪುರುಷರು, 58,64,69,174 ಮಹಿಳೆಯರು ಇದ್ದಾರೆ. ಭಾರತದ ಒಟ್ಟುಜನಸಂಖ್ಯೆಯಲ್ಲಿ ಕರ್ನಾಟಕ ರಾಜ್ಯದ ಪಾಲು ಶೇ.5.05 ರಷ್ಟು. ಅಂದರೆ ಕರ್ನಾಟಕ ರಾಜ್ಯದಒಟ್ಟು ಜನಸಂಖ್ಯೆ 6,11,30,704. ಇದರಲ್ಲಿ 3,10,57,742 ಪುರುಷರು ಮತ್ತು 3,00,72,962 ಮಹಿಳೆಯರಿದ್ದಾರೆ.

 * 2001-11 ರ ದಶಕದ ವೃದ್ಧಿ ದರ ಭಾರತದಲ್ಲಿ ಶೇ.17.64, ಆದರೆ ಕರ್ನಾಟಕದಲ್ಲಿ ಶೇ.15.67 ಆಗಿದೆ.

 * ಭಾರತದಲ್ಲಿ ಜನಸಾಂದ್ರತೆ 382. ಪ್ರತಿ ಚದರ ಕಿ.ಮೀ. ಆದರೆ ಕರ್ನಾಟಕದಲ್ಲಿ 319 ಪ್ರತಿ ಚದರ ಕಿ.ಮೀ. ಆಗಿದೆ.

 * ಭಾರತದಲ್ಲಿ ಪ್ರತಿ 1000 ಪುರುಷರಲ್ಲಿ ಸ್ತ್ರೀಯರ ಲಿಂಗಾನುಪಾತ 940/1000, ಆದರೆ ಕರ್ನಾಟಕದಲ್ಲಿ 968/1000 ಆಗಿದೆ.

 * ಭಾರತದಲ್ಲಿ ಸಾಕ್ಷರತೆಯ ಪ್ರಮಾಣ ಶೇ.74.04 ಆದರೆ, ಕರ್ನಾಟಕದಲ್ಲಿ ಸಾಕ್ಷರತೆ ಪ್ರಮಾಣ ಶೇ. 75.60 ಆಗಿದೆ.

 * 0-6 ವರ್ಷದೊಳಗಿನ ಮಕ್ಕಳು ಭಾರತದಲ್ಲಿ 15,87,89,287 ಇದ್ದರೆ, ಕರ್ನಾಟಕದಲ್ಲಿ 68,55,801 ಮಕ್ಕಳಿದ್ದಾರೆ.

 * ಒಟ್ಟು ಕರ್ನಾಟಕದ ಜನಸಂಖ್ಯೆಯಲ್ಲಿ ಶೇ.38.57 ರಷ್ಟು ಜನರು ಗ್ರಾಮೀಣ ವಾಸಿಗಳಾಗಿದ್ದರೆ, ಶೇ.38.57 ರಷ್ಟು ಜನರು ನಗರವಾಸಿಗಳಾಗಿದ್ದಾರೆ.

 * ಒಟ್ಟಾರೆ ವಿಶಾಲ ಕರ್ನಾಟಕವನ್ನು ಆಡಳಿತ ಅನುಕೂಲಕ್ಕಾಗಿ 4 ಕಂದಾಯ ವಿಭಾಗಗಳಾಗಿ, 30 ಜಿಲ್ಲೆಗಳಾಗಿ, 177 ತಾಲ್ಲುಕುಗಳಾಗಿ, 747 ಹೋಬಳಿ ಅಥವಾ ಕಂದಾಯ ವೃತ್ತಗಳಾಗಿ, 5692 ಗ್ರಾಮ ಪಂಚಾಯತಿ ಗಳಾಗಿ ವಿಭಜಿಸಲಾಗಿದೆ.

* ಕರ್ನಾಟಕ ರಾಜ್ಯದಲ್ಲಿ 27,028 ವಾಸಿಸಲು ಯೋಗ್ಯವಾದ ಗ್ರಾಮಗಳು , 2362 ವಾಸಿಸಲು ಯೋಗ್ಯವಲ್ಲದ ಗ್ರಾಮಗಳು , 281 ಪಟ್ಟಣಗಳು, 7 ಮಹಾನಗರ ಪಾಲಿಕೆಗಳು ಇವೆ.

 * ಕರ್ನಾಟಕವನ್ನು ರಕ್ಷಣೆ ಮತ್ತು ಭದ್ರತೆಯ ಉದ್ದೇಶದಿಂದ 20 ಪೊಲೀಸ್ ಜಿಲ್ಲೆಗಳನ್ನಾಗಿ, 77 ಉಪ ವಿಭಾಗಗಳನ್ನಾಗಿ, 178 ವೃತ್ತಗಳನ್ನಾಗಿ ವಿಂಗಡಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ 4 ಮಹಾನಗರ ಪೊಲೀಸ್ ಆಯುಕ್ತ ವಲಯಗಳು (ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ಹುಬ್ಬಳ್ಳಿ-ಧಾರವಾಡ ), 696 ಪೊಲೀಸ್ ಠಾಣೆಗಳು ಮತ್ತು 317 ಪೊಲೀಸ್ ಹೊರ ಠಾಣೆಗಳಿವೆ.

 * ಕರ್ನಾಟಕ ರಾಜ್ಯದಲ್ಲಿರುವ ರೇಲ್ವೆ ಪೊಲೀಸ್ ವಲಯಗಳು. 1) ಕೇಂದ್ರೀಯ ವಲಯ - ಬೆಂಗಳೂರು. 2) ಪೂರ್ವ ವಲಯ - ದಾವಣಗೆರೆ. 3) ಉತ್ತರ ವಲಯ - ಗುಲ್ಬರ್ಗಾ. 4) ದಕ್ಷಿಣ ವಲಯ - ಮೈಸೂರು. 5) ಪಶ್ಚಿಮ ವಲಯ - ಮಂಗಳೂರು.

 * ಒಟ್ಟಾರೆ ಕರ್ನಾಟಕ ರಾಜ್ಯದಲ್ಲಿ 30 ಜಿಲ್ಲೆಗಳಿದ್ದು. 224 ವಿಧಾನ ಸಭಾ ಕ್ಷೇತ್ರಗಳು ಮತ್ತು 28 ಲೋಕಸಭಾ ಕ್ಷೇತ್ರಗಳಿವೆ.

 * ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಜಿಲ್ಲೆ: ಬೆಂಗಳೂರು ನಗರ (95,88,910) ಹಾಗೂ ಬೆಳಗಾವಿ ಜಿಲ್ಲೆ (47,78,439) ದ್ವಿತೀಯ ಸ್ಥಾನದಲ್ಲಿದೆ.

 * ಕನಿಷ್ಟ ಜನಸಂಖ್ಯೆ ಹೊಂದಿರುವ ಜಿಲ್ಲೆಯೆಂದರೆ, ಕೊಡಗು (5,54,762).

 * ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ಜನಸಾಂದ್ರತೆ ಹೊಂದಿರುವ ಜಿಲ್ಲೆ: ಬೆಂಗಳೂರು ನಗರ ಜಿಲ್ಲೆ ( 4,378 ಪ್ರತಿ ಚದರ ಕಿ.ಮೀ.) ಹಾಗೂ ಅತೀ ಕಡಿಮೆ ಜನಸಾಂದ್ರತೆ ಹೊಂದಿರುವ ಜಿಲ್ಲೆ: ಕೊಡಗು ( 135 ಪ್ರತಿ ಚದರ ಕಿ.ಮೀ.)

 * ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ಸಾಕ್ಷರತೆ ಹೊಂದಿರುವ ಜಿಲ್ಲೆ: ದಕ್ಷಿಣ ಕನ್ನಡ ಜಿಲ್ಲೆ (ಶೇ.88.62 ರಷ್ಟು. ) ಹಾಗೂ ಅತೀ ಕಡಿಮೆ ಸಾಕ್ಷರತೆ ಹೊಂದಿರುವ ಜಿಲ್ಲೆ: ಯಾದಗಿರಿ ಜಿಲ್ಲೆ ( ಶೇ. 52.36 ರಷ್ಟು. )

 * ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ಲಿಂಗಾನುಪಾತ ಹೊಂದಿರುವ ಜಿಲ್ಲೆ: ಉಡುಪಿ ಜಿಲ್ಲೆ (1,093/1000).ಹಾಗೂ ಅತೀ ಕಡಿಮೆ ಲಿಂಗಾನುಪಾತ ಹೊಂದಿರುವ ಜಿಲ್ಲೆ: ಬೆಂಗಳೂರು ನಗರ ಜಿಲ್ಲೆ (908/1000).

★ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು (Comptroller and Auditor General of India) :

★ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು (Comptroller and Auditor General of India) : ನಮ್ಮ ದೇಶದ ಸಾರ್ವಜನಿಕ ಹಣಕಾಸು ನಿಯಂತ್ರಣದಲ್ಲಿ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ ಪಾತ್ರ ಅತ್ಯಂತ ಮಹತ್ವಪೂರ್ಣದ್ದಾಗಿದೆ. 2-G ಸೆಕ್ಟ್ರಮ್, ಕಾಮನ್ ವೆಲ್ತ್ ಗೇಮ್ಸ್ ಮತ್ತು ಕೋಲ್ ಗೇಟ್ ದಂಥ ಪ್ರಮುಖ ಅವ್ಯವಹಾರದ ಹಗರಣಗಳು ಬೆಳಕಿಗೆ ಬಂದಿದ್ದು ಮಹಾಲೆಕ್ಕ ಪರಿಶೋಧಕರಿಂದಲೇ. * CAG ಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ ( PAC - Public Account Committee ) ಯೊಂದಿಗೆ ಜೋಡಿಸಲಾಗಿತ್ತು. ಇದನ್ನು PAC ಯಿಂದ ಪ್ರತ್ಯೇಕಿಸಿ ಸ್ವತಂತ್ರವಾಗಿಸಿದವರು 2006 ರಿಂದ 2013 ರವರೆಗೆ CAG ಆಗಿದ್ದ ವಿನೋದ್ ರಾಯ್ ರವರು. *ಮುಖ್ಯಾಂಶಗಳು: * ಪ್ರಸ್ತುತ CAG ಶಶಿಕಾಂತ ಶರ್ಮಾ 2013 ರಿಂದ ಅಧಿಕಾರ ವಹಿಸಿಕೊಂಡಿದ್ದಾರೆ. * ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರನ್ನು ರಾಷ್ಟ್ರಪತಿಯವರು ನೇಮಿಸುತ್ತಾರೆ. * ಸಂವಿಧಾನದ 148 ನೇ ಅನುಚ್ಛೇದದ ಪ್ರಕಾರ ಭಾರತಕ್ಕೆ ಒಬ್ಬ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು ಇರುತ್ತಾರೆ. * ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರಾಗಿ ನೇಮಕಗೊಂಡ ಪ್ರತಿಯೊಬ್ಬ ವ್ಯಕ್ತಿಯು ತನ್ನ ಅಧಿಕಾರವನ್ನು ವಹಿಸಿಕೊಳ್ಳುವುದಕ್ಕೆ ಮುಂಚೆ ರಾಷ್ಟ್ರಪತಿಯ ಮುಂದೆ ಅಥವಾ ರಾಷ್ಟ್ರಪತಿಯು ಆ ಬಗ್ಗೆ ನೇಮಕ ಮಾಡಿದ ಒಬ್ಬ ವ್ಯಕ್ತಿಯ ಮುಂದೆ ಸಂವಿಧಾನದ 3 ನೇ ಅನುಸೂಚಿಯಲ್ಲಿ ಆ ಉದ್ದೇಶಕ್ಕಾಗಿ ಕೊಟ್ಟಿರುವ ನಮೂನೆಗೆ ಅನುಸಾರವಾಗಿ ಪ್ರಮಾಣ ವಚನವನ್ನು ಸ್ವಿಕರಿಸತಕ್ಕದ್ದಾಗಿದೆ. * ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ ವೇತನ ಮತ್ತು ಸೇವೆಯ ಕರ್ತವ್ಯಗಳು ಸಂಸತ್ತು ಕಾನೂನಿನ ಮೂಲಕ ನಿರ್ಧರಿಸಬಹುದಾಗಿದ್ದು, ಅವುಗಳನ್ನು ಸಂವಿಧಾನದ 2 ನೇ ಅನುಸೂಚಿಯಲ್ಲಿ ತಿಳಿಸಲಾಗಿದೆ. * ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ ಅಧಿಕಾರಾವಧಿ 6 ವರ್ಷಗಳು ಅಥವಾ 65 ವರ್ಷ ಪೂರ್ಣಗೊಳ್ಳುವವರೆಗೆ ಸೇವೆ ಸಲ್ಲಿಸತಕ್ಕದ್ದು. ಇವರ ವೇತನ ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ವೇತನಕ್ಕೆ ಸಮನಾಗಿರುತ್ತದೆ ಹಾಗೂ ಇವರ ವೇತನ ಮತ್ತು ಇತರ ಸೇವಾ ನಿಯಮಗಳು ಸಂಸತ್ತಿನ ಕಾಯ್ದೆಯ ಪ್ರಕಾರ ಇರುತ್ತದೆ. * ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು ರಾಜ್ಯ ಮತ್ತು ಕೇಂದ್ರಕ್ಕೆ ಸಂಬಂಧಿಸಿದ ಅಕೌಂಟನ್ನು ಪರಿಶೀಲಿಸಿ ರಾಷ್ಟ್ರಪತಿಗಳಿಗೆ ವರದಿಯನ್ನು ಒಪ್ಪಿಸುತ್ತಾರೆ. ರಾಷ್ಟ್ರಪತಿಯವರು ಸಂಸತ್ತಿನ ಮುಂದಿಡುತ್ತಾರೆ. * ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು (CAG) ಕೇಂದ್ರ ಮತ್ತು ರಾಜ್ಯಗಳ ಹಾಗೂ ಸಂಸತ್ತಿನ ಕಾಯ್ದೆಯನ್ವಯ ಸ್ಥಾಪಿತವಾದ ಇತರ ಯಾವುದೇ ಪ್ರಾಧಿಕಾರದ ಅಥವಾ ಮಂಡಳಿಯ, ಸರ್ಕಾರಿ ಕಂಪನಿಗಳ ಲೆಕ್ಕ ಖಾತೆಯನ್ನು ಸಹ ಆಡಿಟ್ ಮಾಡುತ್ತಾರೆ. * (CAG) ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರನ್ನು ಪದವಿಯಿಂದ ತೆಗೆದುಹಾಕಬೇಕಾದರೆ ಸಂಸತ್ತಿನ ತೀರ್ಮಾನದ ಮೇಲೆ ರಾಷ್ಟ್ರಪತಿಗಳು ಕ್ರಮ ಕೈಗೊಳ್ಳಬಹುದು. ಪ್ರಧಾನಮಂತ್ರಿ ಮತ್ತು ಕೇಂದ್ರ ಕಾರ್ಯಾಂಗಕ್ಕೆ ಇವರನ್ನು ತೆಗೆಯುವ ಅಧಿಕಾರ ಇರುವುದಿಲ್ಲ. ಮಹಾಭಿಯೋಗದ ಮೂಲಕ ಮಾತ್ರ ತೆಗೆಯಬಹುದು. * ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು ನಿವೃ ತ್ತಿ ಹೊಂದಿದ ಮೇಲೆ ಭಾರತ ಸರ್ಕಾರದ ಅಥವಾ ರಾಜ್ಯ ಸರ್ಕಾರದ ಅಧೀನದಲ್ಲಿರುವ ಯಾವುದೇ ಹುದ್ದೆಗೆ ಅರ್ಹರಾಗಿರುವುದಿಲ್ಲ.