"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday, 13 March 2015

☀ಕರ್ನಾಟಕ ರಾಜ್ಯ ಸರ್ಕಾರದ ಯೋಜನೆಗಳು:  (The Karnataka Government plans)

☀ಕರ್ನಾಟಕ ರಾಜ್ಯ ಸರ್ಕಾರದ ಯೋಜನೆಗಳು:
(The Karnataka Government plans)


━━━━━━━━━━━━━━━━━━━━━━━━━━━━━━━━━━━━━━━━━━━━━


●. ಸುವರ್ಣ ಗ್ರಾಮೋದಯ:

✧.  ಸುವರ್ಣ ಗ್ರಾಮೋದಯ ಯೋಜನೆಯು ಕರ್ನಾಟಕ ಸರ್ಕಾರದ ಒಂದು ವಿನೂತನ ಯೋಜನೆಯಾಗಿದ್ದು, ಗ್ರಾಮೀಣ ಅಭಿವೃದ್ಧಿಯಲ್ಲಿ ಆಳವಾದ ಮತ್ತು ಸಮಗ್ರ ದೂರದೃಷ್ಠಿತ್ವವನ್ನು ಹೊಂದುವ ಮೂಲಕ ಬಲಿಷ್ಠ ಗ್ರಾಮ ಸಮುದಾಯಗಳನ್ನು ಅಭಿವೃದ್ಧಿಪಡಿಸುವುದಾಗಿದೆ.

✧. ವಿಶಾಲ ಕರ್ನಾಟಕವು ರಚನೆಯಾದ ನಂತರ ರಾಜ್ಯವು ಸುವರ್ಣ ಮಹೋತ್ಸವ ಆಚರಣೆಯ ಸುಸಂದರ್ಭದ ನೆನಪಿಗಾಗಿ ಸುವರ್ಣ ಗ್ರಾಮೋದಯ ಯೋಜನೆಯನ್ನು ಜಾರಿಗೊಳಿಸಲಾಗಿದೆ.


●. ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಯೋಜನೆ :

✧.  ಗ್ರಾಮೀಣ ರಸ್ತೆ ಸಂಪರ್ಕವು ಗ್ರಾಮೀಣ ಕ್ಷೇತ್ರದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಹೆಚ್ಚಿಸುವಲ್ಲಿ ಪ್ರಮುಖ ಅಂಶವೆಂಬುದು ಬಹಳ ಹಿಂದಿನಿಂದಲೂ ಗುರುತಿಸಲ್ಪಟ್ಟಿದ್ದರೂ ಸಹ ಅನೇಕ ವರ್ಷಗಳಿಂದ ಸಮರ್ಪಕವಾಗಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಸಾಕಷ್ಟು ಪ್ರಾಶಸ್ತ್ಯ ದೊರಕಿಸಲು ಸಾಧ್ಯವಾಗಿರುವುದಿಲ್ಲ.

✧. ಗ್ರಾಮೀಣ ರಸ್ತೆಗಳ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ತುರ್ತಾಗಿ ಗಣನೀಯ ಪ್ರಮಾಣದ ಬಂಡವಾಳ ಹೂಡಬೇಕಾದ ಅಗತ್ಯತೆ ಇರುತ್ತದೆ.

✧. ಪ್ರಸ್ತುತ ಪ್ರಮುಖವಾಗಿ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿಯಲ್ಲಿ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ/ನಿರ್ವಹಣೆ ಮಾಡಲಾಗುತ್ತಿದೆ.


●.ಕೆರೆಗಳ ಪುನರುಜ್ಜೀವನ :

✧. ಜಿಲ್ಲಾ ಪಂಚಾಯತ್ ಕೆರೆಗಳ ಪೂರ್ವಸ್ಥಿತಿ ಹಾಗೂ ಪುನಶ್ಚೇತನಕ್ಕಾಗಿ ವಿಶೇಷ ಅಭಿವೃದ್ಧಿ ಯೋಜನೆಯಡಿ ಆಯವ್ಯಯದಲ್ಲಿ ಅನುದಾನವನ್ನು ಒದಗಿಸಿದ್ದು, ಈ ಅನುದಾನವನ್ನು ಡಾ|| ನಂಜುಂಡಪ್ಪ ವರದಿಯಲ್ಲಿ ಗುರುತಿಸಿರುವ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಕೆರೆಗಳನ್ನು ಅಭಿವೃದ್ಧಿಪಡಿಸಲು ಜಿಲ್ಲಾ ಪಂಚಾಯತ್ ಗಳಿಗೆ ಹಂಚಿಕೆ ಮಾಡಲಾಗಿದೆ.


●.ಸೌರ ಬೆಳಕು:

✧. ಸೌರ ಬೆಳಕು ಯೋಜನೆಯು ರಾಜ್ಯ ಯೋಜನೆಯಾಗಿರುತ್ತದೆ. 2009-10ನೇ ಸಾಲಿನಿಂದ ಗ್ರಾಮ ಪಂಚಾಯಿತಿಗಳಲ್ಲಿ ಸೌರ ಬೀದಿ ದೀಪಗಳ ಅಳವಡಿಕೆ ಕುರಿತ ಯೋಜನೆಗೆ ಸೌರ ಬೆಳಕು ಎಂಬ ಹೆಸರಿನಿಂದ ಅನುಷ್ಠಾನಗೊಳಿಸಲಾಗುತ್ತಿದೆ.


●.ಅನಿಲ ಯೋಜನೆ (ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆ) :

✧. ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಕಾರ್ಯಕ್ರಮವು ಕೇಂದ್ರ ಪುರಸ್ಕೃತ ಕಾರ್ಯಕ್ರಮವಾಗಿದ್ದು, 1982-83ನೇ ಸಾಲಿನಿಂದ ಇದುವರೆವಿಗೂ ಅನುಷ್ಠಾನಗೊಳ್ಳಲಾಗುತ್ತಿದ್ದು, ಶೇ.100 ಮಹಿಳೆಯರಿಗಾಗಿಯೇ ಇರುವ    ಕಾರ್ಯಕ್ರಮವಾಗಿರುತ್ತದೆ.

✧. ಜೈವಾನಿಲವು ಸ್ವಚ್ಛ, ಮಾಲಿನ್ಯ ಹೊಗೆರಹಿತ ಹಾಗೂ ಸ್ಫೋಟಗೊಳ್ಳದ ಅಪಾಯರಹಿತ ಇಂಧನ ತ್ಯಾಜ್ಯ ವಸ್ತುಗಳಾದ ಸಗಣಿ, ಪ್ರಾಣಿ ಮತ್ತು ಮಾನವ ಮಲ ಮೂತ್ರ ಮತ್ತು ಇತರೆ ಸಸ್ಯಜನ್ಯ ಪದಾರ್ಥಗಳನ್ನು ಆಮ್ಲಜನಕ ರಹಿತ ವಾತಾವರಣದಲ್ಲಿನ ಜೈವಿಕ ಕ್ರಿಯೆಯಿಂದ ದೊರೆಯುವ ಸಂಯುಕ್ತ ಅನಿಲವೇ ಜೈವಿಕ ಅನಿಲ.

✧. ರಾಜ್ಯದಲ್ಲಿ ಗ್ರಾಮೀಣ ಇಂಧನ ಕಾರ್ಯಕ್ರಮಗಳು ನವೀಕರಿಸಬಹುದಾದ ಶಕ್ತಿ ಮೂಲಗಳ ಗುಣಾತ್ಮಕ ಮತ್ತು ಪರಿಣಾಮಕಾರಿ ಬಳಕೆಯ ಮೂಲ ಉದ್ದೇಶವನ್ನು ಹೊಂದಿದೆ.


●.ಅನ್ನ ಭಾಗ್ಯ :

✧. ಕಡು ಬಡವರ ಬಗ್ಗೆ ಈ ಸರ್ಕಾರ ಹೊಂದಿರುವ ಕಳಕಳಿಯಿಂದಾಗಿ ಒಂದು ರೂ. ಗೆ ಒಂದು ಕೆ.ಜಿ ಆಹಾರಧಾನ್ಯ ನೀಡುವ ‘ಅನ್ನಭಾಗ್ಯ’ಯೋಜನೆ 2013ರ ಜುಲೈತಿಂಗಳಿನಿಂದ ರಾಜ್ಯದಾದ್ಯಂತ ಜಾರಿಯಾಗಿದೆ.

✧. ಅಕ್ಕಿ ಜೊತೆಗೆ, ರಾಗಿ, ಜೋಳ, ಕುಸುಬಲು ಅಕ್ಕಿ ಹಾಗೂ ಗೋಧಿಯನ್ನು ಸಹ ನೀಡಲಾಗುತ್ತಿದೆ.

✧. ಇದರಿಂದ ರಾಜ್ಯದ 1 ಕೋಟಿಗೂ ಅಧಿಕ ಕಡುಬಡ ಕುಟುಂಬಗಳಿಗೆ ಪ್ರಯೋಜನವಾಗುತ್ತಿದೆ.


●.ವಿದ್ಯಾಸಿರಿ :

✧. ಹಿಂದುಳಿದ ವರ್ಗಗಳ ಮೆಟ್ರಿಕ್  ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಅತೀ ಹೆಚ್ಚಿನ ಬೇಡಿಕೆ ಇರುವುದರಿಂದ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶ ದೊರಕದ ಹಾಗೂ ಮೆರಿಟ್ ಹೊಂದಿರುವ ವಿದ್ಯಾರ್ಥಿಗಳಿಗೆ ‘ಊಟ ವಸತಿ ಸಹಾಯ ಯೋಜನೆ’ಯನ್ನು ‘ವಿದ್ಯಾಸಿರಿ’ ಹೆಸರಿನಲ್ಲಿ ಸರ್ಕಾರ ಜಾರಿಗೆ ತಂದಿದೆ.


●.ಭಾಗ್ಯಜ್ಯೋತಿ :

✧. ಭಾಗ್ಯಜ್ಯೋತಿ ಮತ್ತು ಕುಟೀರ ಯೋಜನೆಗಳಡಿ ಸಿ. 13.5.2013ರವರೆಗೆ ಬಾಕಿ ಇರುವ ದಂಡಸಹಿತ ವಿದ್ಯುತ್  ಬಿಲ್ನ ಬಾಕಿಯನ್ನು ಸರ್ಕಾರ ಮನ್ನಾ ಮಾಡಿದೆ.

✧. ಸಾಲ ಬಾಕಿ ಇದ್ದು, ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಲ್ಲಿ ಮತ್ತೆ ವಿದ್ಯುತ್ ಸಂಪರ್ಕವನ್ನು ನೀಡಿದೆ.

✧. ಈ ಮೂಲಕ ಮತ್ತೆ ಬಡವರ ಮನೆಯಲ್ಲಿ ಬೆಳಕು ಮೂಡಿದೆ.


●.ಕ್ಷೀರ ಭಾಗ್ಯ :

✧. ಶಾಲಾ ಮಕ್ಕಳಿಗೆ ಬಿಸಿಹಾಲು ಪೂರೈಸುವ ಸರ್ಕಾರದ ಮಹಾತ್ವಾಕಾಂಕ್ಷೆಯ ‘ಕ್ಷೀರಭಾಗ್ಯ’ ಯೋಜನೆ 2013ರ ಆಗಸ್ಟ್ ತಿಂಗಳಿನಿಂದ ರಾಜ್ಯಾದಾದ್ಯಂತ ಅನುಷ್ಟಾನಗೊಂಡಿದೆ .

✧. ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವ ಸದುದ್ದೇಶದಿಂದ ಸರ್ಕಾರ ಜಾರಿಗೆ ತಂದಿದೆ, ಅಂಗನವಾಡಿ ಮಕ್ಕಳು ಸೇರಿದಂತೆ 1ರಿಂದ 10ನೇ ತರಗತಿವರೆಗಿನ ಒಂದು ಕೋಟಿಗೂ ಅಧಿಕ ಮಕ್ಕಳಿಗೆ ಪ್ರಯೋಜನವಾಗುತ್ತಿದೆ.


●.ಋಣ ಮುಕ್ತ ಭಾಗ್ಯ :

✧. ಬಡಜನರು ತಮ್ಮ ಹಳೆಯ ಸಾಲಗಳಿಂದ ಮುಕ್ತರಾಗಿ ಹೊಸ ಸಾಲಗಳನ್ನು ಪಡೆಯಲು ಅರ್ಹತೆ ಗಳಿಸಿ ಹೊಸ ಆರ್ಥಿಕ ಚಟುವಟಿಕೆಗಳನ್ನು ಕೈಗೆತ್ತಿಕೊಂಡು ಜೀವನ ನಡೆಸಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ.

✧. ಇದಕ್ಕಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಮುಖ್ಯಮಂತ್ರಿ ಸಿದ್ದರಾಮ್ಯಯ್ಯ ಅವರು ಮಾಡಿದ ಈ ಘೋಷಣೆ ಇಂದು ಲಕ್ಷಂತಾರ ಮಂದಿಗೆ ವರದಾನವಾಗಿದೆ .

✧. ಇದರಿಂದಾಗಿ ಪರಿಶಿಷ್ಟ ಜಾತಿ /ಪಂಗಡ ಮತ್ತು ಹಿಂದುಳಿದ ಜಾತಿ ಹಾಗೂ ಅಲ್ಪ ಸಂಖ್ಯಾಂತರ ಸಾಲಮನ್ನಾ ಯೋಜನೆಯಡಿ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಮಂದಿಗೆ ಪ್ರಯೋಜನವಾಗಿದೆ.

✧. ಸರ್ಕಾರದ ಈ ಕ್ರಮವನ್ನು ರಾಜ್ಯದ ಜನತೆ ಸಹ ಮುಕ್ತವಾಗಿ ಸ್ವಾಗತಿಸಿದ್ದಾರೆ.


●.‘ಮನಸ್ವಿನಿ ಮೈತ್ರಿ’ ಯೋಜನೆ :

✧. ನವಲತ್ತು ವರ್ಷದಾಟಿದ ಅವಿವಾಹಿತ/ ವಿಚ್ಚೇದಿತ/ ಪರಿತ್ಯಕ್ತ ಮಹಿಳೆಯರ ಬಾಳಿನಲ್ಲಿ ಬೆಳಕಿನ ಕಿರಣ ಮೂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2013-14ರ ಬಜೆಟ್ ನಲ್ಲಿ ಘೋಷಿಸಿದ್ದ ‘ಮನಸ್ವಿನಿ’ ಯೋಜನೆ ಜಾರಿಯಾಗಿದೆ.

✧. ಹಾಗೆಯೇ, ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಲಿಂಗ ಅಲ್ಪಸಂಖ್ಯಾತರಿಗಾಗಿ ರೂಪಿಸಿರುವ ‘ಮೈತ್ರಿ’ ಯೋಜನೆಯೂ ಅನುಷ್ಠಾನಗೊಂಡಿದೆ.


●.ವಸತಿ ಭಾಗ್ಯ :

✧. ರಾಜ್ಯವನ್ನು ಗುಡಿಸಲು ಮುಕ್ತವನ್ನಾಗಿಸಲು ಸರ್ಕಾರ ಸಂಕಲ್ಪಿಸಿದ್ದು, ಮುಂದಿನ ಐದು ವರ್ಷಗಳ ಅವಧಿಯಲ್ಲಿ 12 ಲಕ್ಷಕ್ಕೂ ಹೆಚ್ಚು ಮನೆ ನಿರ್ಮಾಣ ಗುರಿ ಹಾಕಿಕೊಳ್ಳಲಾಗಿದೆ.

✧.ಇದಕ್ಕಾಗಿ ಪ್ರತಿ ವರ್ಷವೂ 3ಲಕ್ಷ ಮನೆ ನಿರ್ಮಿಸಲಾಗುತ್ತಿದೆ.

✧. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗದವರಿಗೆ ವಸತಿ ಸೌಕರ್ಯ ಕಲ್ಪಿಸಲು ಸರ್ಕಾರ ಆದ್ಯತೆ ನೀಡಿದೆ.


●.ರೈತ ಸಂಪರ್ಕ ಕೇಂದ್ರ :

✧. ಬೇಡಿಕೆ ಆಧಾರಿತ ಹೊಸ ಕೃಷಿ ವಿಸ್ತರಣಾ ವ್ಯವಸ್ಥೆಯಾಗಿ "ರೈತ ಮಿತ್ರ ಯೋಜನೆ" ಯನ್ನು ರಾಜ್ಯದಲ್ಲಿ 2000-01ನೇ ಸಾಲಿನಿಂದ ಅನುಷ್ಟ್ಹಾನಗೊಳಿಸಲಾಗುತ್ತಿದೆ.

✧. ಈ ಹೊಸ ಯೋಜನೆಯಡಿಯಲ್ಲಿ ರಾಜ್ಯದ ಪ್ರತಿ ಹೋಬಳಿಗೆ ಒಂದರಂತೆ ಪ್ರಾರಂಭಿಸಿರುವ ಕೃಷಿ ವಿಸ್ತರಣಾ ಕೇಂದ್ರಗಳನ್ನು "ರೈತ ಸಂಪರ್ಕ ಕೇಂದ್ರಗಳು" ಎಂದು ಕರೆಯಲಾಗುತ್ತಿದೆ.

✧. ರಾಜ್ಯದ ಎಲ್ಲಾ ಹೋಬಳಿಗಳಲ್ಲಿ ಪ್ರತಿ ಹೋಬಳಿಗೆ ಒಂದರಂತೆ 747 ರೈತ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.


●.ಕೃಷಿ ಯಾಂತ್ರೀಕರಣ ಯೋಜನೆ :

✧. ಉತ್ಪಾದನಾ ವೆಚ್ಹ ಕಡಿಮೆ ಮಾಡುವುದು, ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅನುವು ಮಾಡುವುದು, ಉತ್ಪಾದಕತೆ ಹೆಚ್ಚಿಸುವುದು ಮತ್ತು ಕೃಷಿ ಕಾರ್ಮಿಕರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಕೃಷಿ ಯಾಂತ್ರೀಕರಣ ಯೋಜನೆಯ ಮುಖ್ಯ ಉದ್ಧೇಶಗಳು.

✧. ಕೃಷಿ ಇಲಾಖೆಯಲ್ಲಿ ಭೂಮಿ ಸಿದ್ಧತೆಯಿಂದ ಕೊಯ್ಲಿನವರೆಗೂ ವಿವಿಧ ಕೃಷಿ ಯಂತ್ರೋಪಕರಣಗಳನ್ನು ಸಹಾಯಧನದಡಿ ಒದಗಿಸಲಾಗುತ್ತಿದೆ.

✧. ಸಾವಯವ ಕೃಷಿಗೆ ಹೆಚ್ಚಿನ ಒತ್ತು ಕೊಡಲು ಉದ್ದೇಶಿಸಿ ರಾಜ್ಯ ಸರ್ಕಾರವು 2004-05ನೇ ಸಾಲಿನಲ್ಲಿ ಸಾವಯವ ಕೃಷಿ ನೀತಿಯನ್ನು ಹೊರತರಲಾಗಿದ್ದು ನೀತಿಯಡಿ ಅನೇಕ ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮಗಳನ್ನು ಅನುಷ್ಟ್ಹಾನಗೊಳಿಸಲಾಗುತ್ತಿದೆ.

 ✧. ಪ್ರಸ್ತುತ ಸಾಲಿನಲ್ಲಿ(2013-14) ಸಾವಯವ ಗ್ರಾಮ/ಸ್ಥಳ ಯೋಜನೆಯನ್ನು ಪರಿಷ್ಕರಣಿಯೊಂದಿಗೆ "ಸಾವಯವ ಭಾಗ್ಯ" ಯೋಜನೆ ಹೆಸರಿನಡಿಯಲ್ಲಿ ಹೋಬಳಿ ಮಟ್ಟಕ್ಕೆ ವಿಸ್ತರಿಸಲಾಗುತ್ತಿದೆ .

(ಕೃಪೆ: ಕರ್ನಾಟಕ ಸರ್ಕಾರಿ ವೆಬ್ ಸೈಟ್ ಗಳು)

No comments:

Post a Comment