"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday, 16 July 2020

•► ‘ಗಾಂಧಾರ ಕಲಾ ಪರಂಪರೆ’ - ಗಾಂಧಾರ ಕಲಾಶೈಲಿಯ ಪ್ರಮುಖ ಲಕ್ಷಣಗಳು: ಪತ್ರಿಕೆ—2 : ಸಾಮಾನ್ಯ ಅಧ್ಯಯನ— 1 (Gandhara School of Art — Salient features of the Gandhara Architecture)

•►  ‘ಗಾಂಧಾರ ಕಲಾ ಪರಂಪರೆ’ - ಗಾಂಧಾರ ಕಲಾಶೈಲಿಯ ಪ್ರಮುಖ ಲಕ್ಷಣಗಳು: ಪತ್ರಿಕೆ—2 : ಸಾಮಾನ್ಯ ಅಧ್ಯಯನ— 1
(Gandhara School of Art — Salient features  of the Gandhara Architecture)

━━━━━━━━━━━━━━━━━━━━━━━━━━━━━━━━━━━━━━
★ ಭಾರತೀಯ ಕಲೆ ಮತ್ತು ಸಂಸ್ಕೃತಿ
(Indian Art and Culture)

★ ಪ್ರಾಚೀನ ಭಾರತದ ಇತಿಹಾಸ
(Ancient Indian History)


(ಹಿಂದಿನ ಪುಟಗಳಲ್ಲಿ ಈ ಕಲಾ ಶೈಲಿಯ ಬಗ್ಗೆ ಈಗಾಗಲೇ ನಾನು ವಿವರಿಸಿ ಬರೆದಿದ್ದೇನೆ.)

ಭಾರತೀಯ ಮತ್ತು ಗ್ರೀಕ್ ಸಂಸ್ಕ್ರತಿಗಳ ಮಧ್ಯೆ ಮುಕ್ತ ಸಂಪರ್ಕದಿಂದಾಗಿ ‘ಗಾಂಧಾರ ಕಲಾ ಪರಂಪರೆ’ (Gandhara School of Art) ಎಂಬ ಹೊಸ ಕಲಾ ಪರಂಪರೆಯು ಉಗಮಿಸಿತು. ಇದು ಭಾರತ ಮತ್ತು ಗ್ರೀಕ್ ಕಲಾಶೈಲಿಗಳ ಸಮ್ಮಿಶ್ರಣವನ್ನು ಪ್ರತಿನಿಧಿಸುತ್ತದೆ.

ಕುಶಾನರ ಅವಧಿಯು ಗಾಂಧಾರ ಕಲೆಯ ಅಥವಾ ಗ್ರೀಕೋ-ಬೌದ್ಧಶೈಲಿಯ ಬೆಳವಣಿಗೆಗೆ ಪ್ರಾಮುಖ್ಯತೆ ಪಡೆದಿದೆ.

ಕಾನಿಷ್ಕನು ಮಹಾನ್ ಕಲಾಪೋಷಕನಾಗಿದ್ದನು. ಆತನ ಪ್ರಮುಖ ಕಟ್ಟಡಗಳು ಮತ್ತು ನಿರ್ಮಾಣಗಳು ಹೆಚ್ಚಾಗಿ ಗಾಂಧಾರ, ಮಥುರಾ, ಕಾನಿಷ್ಕಪುರ ಮತ್ತು ತಕ್ಷಶಿಲಗಳಲ್ಲಿ ಕಂಡುಬಂದಿವೆ.

ಈ ಕಲಾಶೈಲಿಯು ಗಾಂಧಾರ ಪ್ರದೇಶದಲ್ಲಿ ಉಗಮಿಸಿದ್ದರಿಂದ ಇದನ್ನು 'ಗಾಂಧಾರ ಕಲೆ' ಎಂದು ಕರೆಯಲಾಗಿದೆ. ಈ ಪ್ರದೇಶವು ಪ್ರಸ್ತುತ ಆಫ್ಘಾನಿಸ್ಥಾನದಲ್ಲಿದೆ.

• ಗಾಂಧಾರ ಕಲಾಶೈಲಿಯ ಪ್ರಮುಖ ಲಕ್ಷಣಗಳು:
━━━━━━━━━━━━━━━━━━━
1. ಈ ಕಲಾಶೈಲಿಯಲ್ಲಿ ಆಳೆತ್ತರದ ಗೌತಮ ಬುದ್ಧನ ವಿಗ್ರಹಗಳನ್ನು ಕೆತ್ತಲಾಗಿದೆ. ಅಲ್ಲಿಯವರೆಗೆ ಬುದ್ಧನ ಅಸ್ತಿತ್ವವನ್ನು ಕಮಲ, ಛತ್ರಿ ಮುಂತಾದ ಚಿಹ್ನೆಗಳ ರೂಪದಲ್ಲಿ ತೋರಿಸಲಾಗುತ್ತಿತ್ತು.

2. ವಿಗ್ರಹಗಳನ್ನು ಕೆತ್ತುವಾಗ ದೇಹ ವಿನ್ಯಾಸದ ಅನುಪಾತದೊಂದಿಗೆ ಸ್ನಾಯುಗಳು, ಮೀಸೆ ಮುಂತಾದವುಗಳಿಗೆ ಹೆಚ್ಚಿನ ಗಮನ ಹರಿಸಿ ಸ್ವಾಭಾವಿಕ ಜೋಡಣೆಯೊಂದಿಗೆ ಮೂಡಿಸಲಾಗಿದೆ.

3. ಕಲಾಕೌಶಲ್ಯದಿಂದ ಕೂಡಿದ ಈ ಕಲೆಯ ನಮೂನೆಗಳಲ್ಲಿ ಬಟ್ಟೆಯ ಮಡಿಕೆಗಳು ಮತ್ತು ನೆರಿಗೆಗಳನ್ನು ತುಂಬಾ ಸೂಕ್ಷ್ಮವಾಗಿ ಮತ್ತು ಕಲಾತ್ಮಕವಾಗಿ ಪ್ರದರ್ಶಿಸಲಾಗಿದೆ.

4. ವಿಗ್ರಹಗಳ ಮೇಲಿರುವ ಆಭರಣಗಳ ಮೇಲಿನ ಕೆತ್ತನೆಗೆ ಹೆಚ್ಚಿನ ಆಸಕ್ತಿ ತೋರಿಸಲಾಗಿದ್ದು, ಅವುಗಳ ಭೌತಿಕ ಸೌಂದರ್ಯವನ್ನು ವೃದ್ಧಿಸಿದೆ.

5. ವಿಗ್ರಹಗಳಿಗೆ ಮೆರುಗು ನೀಡುವುದು (Polish) ಈ ಕಲೆಯ ಪ್ರಮುಖ ಲಕ್ಷಣವಾಗಿದೆ.

6. ಬಹುತೇಕ ಈ ನಮೂನೆಗಳನ್ನು ಕಲ್ಲು, ಅರಲುಗಚ್ಚು (Terracotta) ಮತ್ತು ಜೇಡಿಮಣ್ಣಿನಿಂದ ತಯಾರಿಸಲಾಗಿದೆ.
7. ಈ ವಿಗ್ರಹಗಳಲ್ಲಿ ಬಳಸಲಾಗಿರುವ ತಾಂತ್ರಿಕತೆ ಗ್ರೀಕ್ ಶೈಲಿಯದ್ದಾದರೆ, ಅದರ ಆದರ್ಶ, ಸ್ಫೂರ್ತಿ ಮತ್ತು ವ್ಯಕ್ತಿತ್ವ ಎಲ್ಲವೂ ಭಾರತೀಯವಾದುದಾಗಿದೆ.

ಡಾ. ಆರ್.ಸಿ. ಮಜುಮ್‍ದಾರ್ ಹೇಳುವಂತೆ - “ಗಾಂಧಾರ ಕಲಾಕಾರನು ಗ್ರೀಕ್ ಕರಕುಶಲತೆ ಹಾಗೂ ಭಾರತೀಯ ಹೃದಯವನ್ನು ಹೊಂದಿದ್ದನು”. ಈ ಕಾರಣದಿಂದ ಈ ಕಲೆಯಲ್ಲಿ ನಿರ್ಮಿತವಾದ ವಿಗ್ರಹಗಳು ಮತ್ತು ಪ್ರತಿಮೆಗಳಲ್ಲಿ ಬುದ್ಧನನ್ನು ಗ್ರೀಕ್ ದೇವತೆ ಅಪೊಲೊನನ್ನು ಹೋಲುವಂತೆ ಕೆತ್ತುವ ಪ್ರಯತ್ನ ಮಾಡಲಾಗಿದೆ

No comments:

Post a Comment