"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday, 7 January 2015

☀ ಫೆಬ್ರುವರಿ 2014 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು ☀ (Important Current Affairs of February 2014)

☀ ಫೆಬ್ರುವರಿ 2014 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು ☀
(Important Current Affairs of February 2014)

━━━━━━━━━━━━━━━━━━━━━━━━━━━━━━━━━━━━━━━━━━━━━

★ಫೆಬ್ರುವರಿ 2014
(February 2014)


2015ರ ಹೊಸಿಲಿಗೆ ಬಂದು ನಿಂತಿದ್ದೇವೆ. ಕಳೆದೊಂದು ವರ್ಷದಲ್ಲಿ ನಡೆದ ಮಹತ್ವದ ಘಟನೆಗಳನ್ನು ಸಂಕ್ಷಿಪ್ತವಾಗಿ ನೀಡಲಿರುವ ಸರಣಿ ಲೇಖನದ ಎರಡನೇ ಭಾಗವಿದು. ಫೆಬ್ರುವರಿ ತಿಂಗಳ  ಮಹತ್ವದ ಆಗುಹೋಗುಗಳ ವಿವರ ಇಲ್ಲಿದೆ...


🌀 ಭಾರತೀಯ ಮೂಲದ ಸತ್ಯ ನಾದೆಲ್ಲಾ ಅವರು ಮೈಕ್ರೋ ಸಾಫ್ಟ್‌ ಕಂಪೆನಿಯ ಸಿಇಒ ಆಗಿ ಫೆಬ್ರುವರಿ ನಾಲ್ಕರಂದು ನೇಮಕಗೊಂಡರು.


🌀 ಫೆ. 4ರಂದು ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಮತ್ತು ರಾಜ್ಯದ ವಿಜ್ಞಾನಿ ಸಿ.ಎನ್‌.ಆರ್‌ ರಾವ್‌ ಅವರಿಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು  ಭಾರತ ರತ್ನ ಪ್ರಶಸ್ತಿ ನೀಡಿದರು.


🌀 ಭಾರತದ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಅವರು 26ರಂದು ‘ಅಂಬೇಡ್ಕರ್‌ ಅವೆಕಿಂಗ್‌ ಇಂಡಿಯಾಸ್‌ ಸೋಶಿಯಲ್‌ ಕಾನ್ಸಿಯೆನ್ಸ್‌ (Ambedkar Awakening India’s Social Conscience) ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದರು. ಇದನ್ನು ನರೇಂದ್ರ ಜಾಧವ್‌ ಬರೆದಿದ್ದಾರೆ. ನರೇಂದ್ರ ಜಾಧವ್‌ ಯೋಜನಾ ಆಯೋಗದ ಸದಸ್ಯರು ಹೌದು.


🌀 2014ರ ರಾಷ್ಟ್ರೀಯ ಬಿಲಿಯರ್ಡ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಅಲೋಕ್‌ ಕುಮಾರ್‌ ಅವರನ್ನು ಮಣಿಸಿದ ಸೌರವ್‌ ಕೋಠಾರಿ ಚಾಂಪಿಯನ್‌ ಆದರು. ಈ ಪಂದ್ಯಾವಳಿಯನ್ನು ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ಆಯೋಜಿಸಲಾಗಿತ್ತು.


🌀 ‌ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಮಂಡಳಿ (ಎನ್‌ಜಿಟಿ)ಯು ಸಾರ್ವಜನಿಕ ಸ್ಥಳಗಳಲ್ಲಿ ಟೈರ್‌ ಸುಡುವುದನ್ನು ನೀಷೇಧಿಸಿ ಫೆಬ್ರುವರಿ 7ರಂದು ಮಹತ್ವದ ಆದೇಶವನ್ನು ಹೊರಡಿಸಿತು.


🌀 ಸ್ಪೇನ್‌ ದೇಶದ ಹೆಸರಾಂತ ಗೀಟಾರ್‌ ವಾದಕ ಪಾಕೊ ಡೆ ಲೂಸಿಯಾ (66) ಫೆ. 25ರಂದು ನಿಧನರಾದರು. ತಮ್ಮ ಹದಿನೆಂಟನೆ ವಯಸ್ಸಿನಲ್ಲಿ ಮ್ಯಾಡ್ರಿಡ್‌ ಎಂಬ ಸಂಗೀತ ಆಲ್ಬಂ ಹೊರತರುವ ಮೂಲಕ ವಿಶ್ವದ ಗಮನ ಸೆಳೆದಿದ್ದರು. 2004 ಮತ್ತು 2012 ರಲ್ಲಿ ಲ್ಯಾಟಿನ್‌ ಗ್ರ್ಯಾಮಿ ಪ್ರಶಸ್ತಿ  ಪಡೆದಿದ್ದರು.


🌀 ಮಧ್ಯಪ್ರದೇಶದಲ್ಲಿ ದೇಶದ ಅತಿದೊಡ್ಡ 130 ಮೆಗಾ ವ್ಯಾಟ್‌ನ ಸೌರ ವಿದ್ಯುತ್‌ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗಿದೆ.  ಇದು  ನೀಮುಚ್‌ ಪ್ರದೇಶದ ಭಗವಾನ್‌ ಪುರದಲ್ಲಿದೆ. 1100 ಕೋಟಿ ರೂಪಾಯಿ ವೆಚ್ಚದ ಈ ಘಟಕ 305 ಹೆಕ್ಟೇರ್‌ ಪ್ರದೇಶದಲ್ಲಿದೆ.


🌀 ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಫೆಬ್ರುವರಿ 12ರಂದು 2014–15ನೇ ಸಾಲಿನ ಮಧ್ಯಂತರ ರೈಲ್ವೆ ಬಜೆಟ್‌ ಮಂಡಿಸಿದರು.


🌀 64ನೇ ಬರ್ಲಿನ್‌ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅವಿನಾಶ್‌ ಅರುಣ್‌ ನಿರ್ದೇಶನದ ‘ಕಿಲ್ಲಾ’ ಮರಾಠಿ ಸಿನಿಮಾ ‘ಕ್ರಿಸ್ಟಿಯಲ್‌ ಬಿಯರ್‌’ ಪ್ರಶಸ್ತಿಗೆ ಭಾಜನವಾಯಿತು.


🌀 ಫೆ. 14ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ರಾಜೀನಾಮೆ ನೀಡಿದರು. ಜನಲೋಕಪಾಲ್‌ ಮಸೂದೆಯನ್ನು ಅಂಗೀಕರಿಸಲು ವಿಫಲರಾದ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಸಿದರು. ಫೆಬ್ರುವರಿ 17ರಂದು ದೆಹಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿ ಮಾಡಲಾಯಿತು.


🌀 ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ವಾಸವಿದ್ದ ಮನೆ ಮತ್ತು ಶಾಲೆ ನವೀಕರಣಕ್ಕೆ ಭಾರತ ಸರ್ಕಾರ 8 ಕೋಟಿ ರೂಪಾಯಿ ಬಿಡುಗಡೆ ಮಾಡಿತು. ಪಾಕಿಸ್ತಾನದ ಫೈಸಲಾಬಾದ್‌ ಜಿಲ್ಲೆಯ ಸಮೀಪದ ಕುಗ್ರಾಮದಲ್ಲಿ ಭಗತ್‌ ಸಿಂಗ್‌ ಮನೆ ಇದೆ. ಪಾಕಿಸ್ತಾನ ಸರ್ಕಾರ ಕೂಡ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿದೆ.


🌀 ಬಿಸಿಸಿಸಿ (Broadcast Content Complaints Council)ನ ಮುಖ್ಯಸ್ಥರಾಗಿ ನ್ಯಾ. ಮುಕುಲ್‌ ಮುದ್ಗಲ್‌ ಅವರನ್ನು ಫೆಬ್ರುವರಿ 14ರಂದು ನೇಮಕ ಮಾಡಲಾಯಿತು. ಇವರು ಪಂಜಾಬ್‌ ಮತ್ತು ಹರಿಯಾಣ ರಾಜ್ಯದ ಮಾಜಿ ಮುಖ್ಯ ನ್ಯಾಯಮೂರ್ತಿಗಳು.


*ಫೆಬ್ರುವರಿ 15ರಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ‘ವಿನಾಯಕ ಡೋಂಗ್ರೆ ಮತ್ತು ಪ್ರೊ.ಗುಚೆಂಗ್‌ ಜಾಂಗ್‌ ಅವರಿಗೆ 2013ನೇ ಸಾಲಿನ ಅಂತರರಾಷ್ಟ್ರೀಯ ಗಾಂಧಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕುಷ್ಠ ರೋಗ ನಿವಾರಣೆಗಾಗಿ ಸಲ್ಲಿಸಿದ ಅಸಾಮಾನ್ಯ ಸೇವೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

🌀 ಲಂಡನ್‌ನಲ್ಲಿ ಫೆಬ್ರುವರಿ 16ರಂದು 67ನೇ ಬಾಪ್ತಾ ಪ್ರಶಸ್ತಿಗಳನ್ನು ನೀಡಲಾಯಿತು. ಬಾಪ್ತಾ ಪ್ರಶಸ್ತಿಗಳನ್ನು ಬ್ರಿಟಿಷ್‌ ಅಕಾಡೆಮಿ   ಅತ್ಯುತ್ತಮ ಸಿನಿಮಾ ಮತ್ತು ಸಾಕ್ಷ್ಯ ಚಿತ್ರಗಳಿಗೆ ನೀಡುತ್ತದೆ. 2013ರಲ್ಲಿ ತೆರೆಕಂಡ 12 ಈಯರ್ಸ್‌ ಎ ಸ್ಲೇವ್‌ (12 Years a Slave) ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆಯಿತು.


🌀 ಕೇಂದ್ರ ಸರ್ಕಾರ ಫೆಬ್ರುವರಿ 20ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಡಿಯಾ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಲು ತೀರ್ಮಾನಿಸಿತು. ಇಂಡೋ–ಆರ್ಯನ್‌ ಭಾಷಾ ಗುಂಪಿನಲ್ಲಿ ಒಡಿಯಾ ಮೊದಲ ಶಾಸ್ತ್ರೀಯ ಸ್ಥಾನಮಾನ ಪಡೆಯುವ ಭಾಷೆಯಾಗಿದೆ. ಒಡಿಯಾ ಒಡಿಶಾ ರಾಜ್ಯದ ಅಧಿಕೃತ ಆಡಳಿತ ಭಾಷೆಯಾಗಿದೆ.


🌀 ಫೆ. 20ರಂದು ಲೋಕಸಭೆಯಲ್ಲಿ ಆಂಧ್ರಪ್ರದೇಶ ಇಬ್ಭಾಗ ಮಸೂದೆ–2014’ ಅನ್ನು ಅಂಗೀಕರಿಸಲಾಯಿತು.


🌀 ಫೆ. 26ರಂದು ಸಿಕ್ಕಿಂ ವಿಧಾನಸಭೆಯು ಸಿಕ್ಕಿಂ ಲೋಕಾಯುಕ್ತ ಮಸೂದೆಯನ್ನು ಅವಿರೋಧವಾಗಿ ಅಂಗೀಕರಿಸಿತು.


🌀 ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರು ಫೆ. 17ರಂದು ಮಧ್ಯಂತರ ಬಜೆಟ್‌ ಮಂಡಿಸಿದರು. ಈ ಬಜೆಟ್‌ ಕೇಂದ್ರದ 83ನೇ ಬಜೆಟ್‌ ಆಗಿದೆ.


🌀 ದೆಹಲಿಯಲ್ಲಿ ನೆಲೆಸಿರುವ ಈಶಾನ್ಯ ರಾಜ್ಯಗಳ ಜನರಿಗಾಗಿ ದೆಹಲಿ ಪೊಲೀಸರು ಸಹಾಯವಾಣಿ (1093)ಯೊಂದನ್ನು ಆರಂಭಿಸಿದ್ದಾರೆ. ಜನಾಂಗೀಯ ನಿಂದನೆಯಂತಹ ದೂರಗಳನ್ನು ಈ ಸಹಾಯವಾಣಿಯ ಮೂಲಕ ದಾಖಲಿಸಬಹುದು.


🌀 ಕರ್ನಾಟಕ ತಂಡ ಐದನೇ ಭಾರಿಗೆ ಇರಾನಿ ಕಪ್‌ ಟ್ರೋಫಿಯನ್ನು ಗೆದ್ದುಕೊಂಡಿತು. ಜೆಡ್‌. ಆರ್‌ ಇರಾನಿ ಅವರ ಸ್ಮರಣಾರ್ಥ ಇರಾನಿ ಕಪ್‌ ಕ್ರಿಕೆಟ್‌ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತದೆ. 1998ರಲ್ಲಿ ವೆಂಕಟೇಶ್‌ ಪ್ರಸಾದ್‌ ನೇತೃತ್ವದ ಕರ್ನಾಟಕ ಇರಾನಿ ಕಪ್‌ ಅನ್ನು ಗೆದ್ದು ಕೊಂಡಿತ್ತು.


🌀 ಭಾರತೀಯ ನೌಕಾ ಪಡೆಯ ಮುಖ್ಯಸ್ಥರಾದ ದೇವೇಂದ್ರ ಕುಮಾರ್‌ ಜೋಶಿ ಅವರು 26ರಂದು ರಾಜೀನಾಮೆ ನೀಡಿದರು. ಮುಂಬೈನಲ್ಲಿ ಸಂಭವಿಸಿದ್ದ ಐಎನ್‌ಎಸ್‌ ಸಿಂಧೂರತ್ನ ಜಲಾಂತರ್ಗಾಮಿ ಅಪಘಾತ ದುರಂತದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು. ಸಿಂಧೂರತ್ನ ಜಲಾಂತರ್ಗಾಮಿಯನ್ನು ರಷ್ಯಾ ತಂತ್ರಜ್ಞಾನದೊಂದಿಗೆ ನಿರ್ಮಾಣ ಮಾಡಲಾಗಿತ್ತು.


🌀 ಮಹೀಂದ್ರ ಅಂಡ್‌ ಮಹೀಂದ್ರ ಲಿಮಿಟೆಡ್‌ ಕಂಪೆನಿಯು ಫೆ.27ರಂದು ಭೂತಾನ್‌ ದೇಶದ ರಾಜಧಾನಿ ಥಿಂಪುವಿನಲ್ಲಿ ಎಲೆಕ್ಟ್ರಿಕ್‌ ಕಾರ್‌ ‘ಇ–20’ಯನ್ನು ಬಿಡುಗಡೆ ಮಾಡಿತು.


🌀 ಪ್ರತ್ಯೇಕ ಬೋಡೊಲ್ಯಾಂಡ್‌ ರಾಜ್ಯ ರಚನೆ ಅಧ್ಯಯನಕ್ಕೆ ಕೇಂದ್ರ ಸರ್ಕಾರ ಕೇಂದ್ರದ ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ. ಪಿಳೈ ಅವರ ನೇತೃತ್ವದ ಏಕ ಸದಸ್ಯ ಸಮಿತಿಯನ್ನು ಫೆ. 27ರಂದು ಸಂವಿಧಾನ ಬದ್ಧವಾಗಿ ರಚನೆ ಮಾಡಿತು. ಪಿಳೈ ಅವರು 9 ತಿಂಗಳಲ್ಲಿ ರಾಜ್ಯ ರಚನೆ ಕುರಿತಂತೆ ವರದಿ ನೀಡಬೇಕಿದೆ. ಅಸ್ಸಾಂ ರಾಜ್ಯದಿಂದ ಬೋಡೋಲ್ಯಾಂಡ್‌ ಪ್ರತ್ಯೇಕವಾಗಲಿದೆ.

(ಕೃಪೆ: ಪ್ರಜಾವಾಣಿ)

No comments:

Post a Comment