"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday, 21 January 2015

☀ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಚುನಾವಣೆ ಹಾಗು ಚುನಾವಣಾ ಆಯೋಗದ ರಚನೆ, ಮತ್ತು ಕರ್ತವ್ಯಗಳು (Democracy and Elections in India. The structure and the duties of the Electoral Commission) ☀


★ ಭಾರತದ ಸಂವಿಧಾನ ★

☀ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಚುನಾವಣೆ ಹಾಗು ಚುನಾವಣಾ ಆಯೋಗದ ರಚನೆ, ಮತ್ತು ಕರ್ತವ್ಯಗಳು
(Democracy and Elections in India. The structure and the duties of the Electoral Commission) ☀


✧. ಆಧುನಿಕ ಯುಗ, ಪ್ರಜಾಪ್ರಭುತ್ವ ಯುಗ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳ ಪಾತ್ರ ಅತ್ಯಂತ ಮಹತ್ತರವಾದುದು, ಆಧುನಿಕ ರಾಷ್ಟ್ರಗಳು ಹೆಚ್ಚು ಜನಸಂಖ್ಯೆ ಮತ್ತು ವಿಶಾಲವಾದ ಭೂ ಪ್ರದೇಶಗಳನ್ನು ಹೊಂದಿರುವುದರಿಂದ ಪರೋಕ್ಷ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ.

✧. ಈ ವ್ಯವಸ್ಥೆಯಲ್ಲಿ ಪ್ರಜೆಗಳು ಚುನಾವಣೆಗಳಲ್ಲಿ ಮತದಾನದ ಮೂಲಕ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುತ್ತಾರೆ. ಪರೋಕ್ಷ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಚುನಾವಣೆಗಳ ಮೂಲಕ ಸರ್ಕಾರವನ್ನು ರಚಿಸುತ್ತಾರೆ. ಪ್ರಜೆಗಳಿಂದ ಚುನಾವಣೆಗಳ ಮೂಲಕ ಆಯ್ಕೆಯಾದ ಪಕ್ಷಗಳು ಜನರ ಆಶೋತ್ತರಗಳನ್ನು ಈಡೇರಿಸಲು ಕಾರ್ಯಕ್ರಮ ಗಳನ್ನು ರೂಪಿಸಬೇಕಾಗುತ್ತದೆ.



♠.ಚುನಾವಣಾ ವಿಧಾನ :

✧. ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳ ಮಹತ್ವವನ್ನು ಅರಿತು ಸಂವಿಧಾನ ರಚನಾಕಾರರು ಇವುಗಳನ್ನು ನಡೆಸಲು ಸ್ವತಂತ್ರ ಚುನಾವಣಾ ಆಯೋಗಕ್ಕೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದ್ದಾರೆ.

✧. 15 ನೇ ಭಾಗದಲ್ಲಿರುವ 324 ರಿಂದ 329 ರವರೆಗಿನ ವಿಧಿಗಳು ಚುನಾವಣಾ ಆಯೋಗ ಹಾಗೂ ಚುನಾವಣೆಗಳ ಬಗ್ಗೆ ನಿಯಮಗಳನ್ನು ಒಳಗೊಂಡಿವೆ.



♠.ಚುನಾವಣಾ ಆಯೋಗದ ರಚನೆ :

✧. 324(2) ನೇ ವಿಧಿ ಪ್ರಕಾರ ಚುನಾವಣಾ ಆಯೋಗ ಮುಖ್ಯ ಚುನಾವಣಾಧಿಕಾರಿಯನ್ನು ಮತ್ತು ಆಗಾಗ್ಗೆ ರಾಷ್ಟ್ರಪತಿಯಿಂದ ನೇಮಿಸಲ್ಪಡುವ ಇತರೆ ಚುನಾವಣಾಧಿಕಾರಿಗಳನ್ನು ಒಳಗೊಂಡಿರುತ್ತದೆ.

✧. ಮೊದಲ ಬಾರಿಗೆ 16-10-1989 ರಂದು ಎಸ್. ಎಸ್. ಧನೋವಾ ಮತ್ತು ವಿ. ಎಸ್. ಸೀಗೆಲ್ ಅವರನ್ನು ಚುನಾವಣಾಧಿಕಾರಿಗಳಾಗಿ ಕೇಂದ್ರ ಸರ್ಕಾರ ನೇಮಿಸಿತು.



♠.ಚುನಾವಣಾ ಆಯೋಗದ ಅಧಿಕಾರ ಮತ್ತು ಕರ್ತವ್ಯಗಳು :

✧. ಸಂವಿಧಾನದ 324(1) ನೇ ವಿಧಿಯಲ್ಲಿ ಚುನಾವಣಾ ಆಯೋಗದ ಎರಡು ಮುಖ್ಯ ಕರ್ತವ್ಯಗಳನ್ನು ನಮೂದಿಸಲಾಗಿದೆ.

1. ಮತದಾರರ ಪಟ್ಟಿಗಳನ್ನು ಸಿದ್ಧಪಡಿಸಿ ಅವುಗಳ ಪರೀಷ್ಕರಣವನ್ನು ವೀಕ್ಷಿಸಿ ನಿರ್ದೇಶನ ನೀಡುವುದು.

2. ಸಂಸತ್ತಿಗೆ, ರಾಜ್ಯ ಶಾಸಕಾಂಗಳಿಗೆ, ರಾಷ್ಟ್ರಪತಿ, ಉಪರಾಷ್ಟ್ರಪತಿ, ಸ್ಥಳೀಯ ಸರ್ಕಾರಗಳಿಗೆ ಚುನಾವಣೆಗಳನ್ನು ನಡೆಸುವುದು, ಅಲ್ಲದೆ 1950 ಮತ್ತು 1951 ರ ಪ್ರಜಾಪ್ರತಿನಿಧಿ ಕಾಯ್ದೆಗಳ ಪ್ರಕಾರ ಇನ್ನೂ ಕೆಲವು ಅಧಿಕಾರ ಮತ್ತು ಕರ್ತವ್ಯಗಳನ್ನು ನಿರ್ವಹಿಸುತ್ತದೆ.



♠.ಚುನಾವಣಾ ಆಯೋಗದ ಇತರೇ ಕಾರ್ಯಗಳು  :

✧. ಅಧಿಕಾರಕ್ಕೆ ದಾರಿ ತೋರುವ ಚುನಾವಣೆ ಹಣಬಲ, ತೋಳ್ಬಲಗಳ ಬೆದರಿಕೆ ಹಾಗೂ ಅಪರಾಧ ಹಿನ್ನೆಲೆಯುಳ್ಳ ಭ್ರಷ್ಟ್ರರ ಪ್ರವೇಶದಂತಹ ಸವಾಲುಗಳನ್ನು ಎದುರಿಸುತ್ತಿದೆ.

 ✧. ಇತ್ತೀಚಿನ ದಿನಗಳಲ್ಲಿ ಅಧಿಕಾರ ವರ್ಗ ಆಡಳಿತ ಯಂತ್ರವನ್ನು ದುರುಪಯೋಗ ಮಾಡುವುದಕ್ಕೆ ಚುನಾವಣಾ ಆಯೋಗ ನೀತಿ ಸಂಹಿತೆಯ ಚಾಟಿ ಹಿಡಿದು ನಿಯಂತ್ರಣಕ್ಕೆ ತರುತ್ತಿದೆ.

1.ಚುನಾವಣಾ ಆಯೋಗ ಕೈಗೊಂಡಿರುವ ಕೆಲ ರಚನಾತ್ಮಕ ಕ್ರಮಗಳಿಂದಾಗಿ ಹಣದ ಹೊಳೆ ಹರಿಯುವುದಕ್ಕೆ ಕೂಡ ಕಡಿವಾಣ ಬಿದ್ದಿದೆ.

2.ಚುನಾವಣಾ ಆಯೋಗ ಚುನಾವಣಾ ಅವಧಿಯಲ್ಲಿ ಸ್ಪರ್ಧಿಗಳು ಹಾಗೂ ರಾಜಕೀಯ ಪಕ್ಷಗಳು ಮಾಡುವ ಖರ್ಚು ವೆಚ್ಚದ ಮೇಲೆ ನಿಗಾ ವಹಿಸಲು ವಿವಿಧ ಸೇವೆಗಳಿಂದ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನಿಯೋಜಿಸುತ್ತದೆ. ತನ್ಮೂಲಕ ಖರ್ಚಿನ ಮೇಲೆ ಕಡಿವಾಣ ಹಾಕಲು ಕ್ರಮ ಕೈಗೊಂಡಿದೆ.

3.ಚುನಾವಣಾ ಆಯೋಗದ ನಿರ್ದೇಶನಗಳಡಿಯಲ್ಲಿ ಮತ್ತು ಸಲಹೆ ಸೂಚನೆ ಮೇರೆಗೆ ರಾಜಕೀಯ ಪಕ್ಷಗಳ ಕ್ರಮ ಕೈಗೊಂಡಿದೆ. ಚುನಾವಣಾ ಆಯೋಗದ ನಿರ್ದೇಶನಗಳಡಿಯಲ್ಲಿ ಮತ್ತು ಸಲಹೆ ಸೂಚನೆ ಮೇರೆಗೆ ರಾಜಕೀಯ ಪಕ್ಷಗಳ ಹಾಗೂ ಸ್ಪರ್ಧಿಗಳು ಮಾಡುವ ದುಂದು ವೆಚ್ಚ ಅಂದರೆ ಕಟೌಟ್‌ಗಳು, ಬ್ಯಾನರ್‌ಗಳು, ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿಪತ್ರ ಅಂಟಿಸುವುದು. ಸ್ಲೋಗನ್‌ಗಳ ಬರಹ ಮುಂತಾದವುಗಳ ನಿಷೇಧ ಹೇರಲಾಗಿದೆ.

—ಆದರೆ ಚುನಾವಣಾ ಸಮಯದಲ್ಲಿ ನಡೆಯುವ ಚುನಾವಣಾ ಅಕ್ರಮಗಳಿಗೆ ತೋಳ್ಬಲದ ದುರುಪಯೋಗ ಕೇವಲ ಚುನಾವಣಾ ಆಯೋಗಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಕಳವಳದ ವಿಷಯವಾಗಿದೆ. ಮತದಾರರು ಮತ್ತು ಸಾರ್ವಜನಿಕರಿಗೆ ಒಟ್ಟಾರೆಯಾಗಿ ಹೆಚ್ಚುತ್ತಿರುವ ಈ ರಾಜಕೀಯ ಅಪರಾಧೀಕರಣ ನಿಜಕ್ಕೂ ಗಂಭೀರ ಚಿಂತೆಯ ವಿಷಯವೆನಿಸಿದೆ.



♠.ಪ್ರಸ್ತುತ ಜಾರಿಗೆ ಬಂದ ಚುನಾವಣಾ ಸುಧಾರಣಾ ಕ್ರಮಗಳು:

✧. ಚುನಾವಣಾ ಅಕ್ರಮಗಳನ್ನು ತಡೆಯಲು ಚುನಾವಣಾ ಆಯೋಗ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ.

1. ದಿನೇಶ್ ಗೋಸ್ವಾಮಿ ಸಮಿತಿ ರಚನೆ,ಕೆಲವು ಶಿಫಾರಸ್ಸುಗಳ ಜಾರಿ.

2. ಪಕ್ಷಾಂತರ ವಿರೋಧಿ ಕಾಯ್ದೆ ಜಾರಿ.

3. ಎರಡು ಕ್ಷೇತ್ರಗಳಿಗಿಂತ ಹೆಚ್ಚು ಕಡೆ ಸ್ಪರ್ಧೆಗೆ ನಿಷೇಧ.

4. ನಾಮಪತ್ರ ಸಲ್ಲಿಕೆ ಜೊತೆಯಲ್ಲಿಯೇ ಅಭ್ಯರ್ಥಿಯ ಅಪರಾಧಗಳ ಹಿನ್ನೆಲೆ ಮತ್ತು ಆಸ್ತಿಪಾಸ್ತಿ ಘೋಷಣೆ ಕಡ್ಡಾಯ.

5. ನಾಮಪತ್ರ ಸಲ್ಲಿಸುವಾಗ ತಪ್ಪು ಮಾಹಿತಿ ನೀಡಿಕೆಯಲ್ಲಿ ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವುದು.

6. ಪಕ್ಷಗಳಿಗೆ ಉದ್ಯಮಿಗಳು ಮತ್ತು ಖಾಸಗಿ ಸಂಸ್ಥೆಗಳು ನೀಡುವ ದೇಣಿಗೆ ವಿವರ.

7. ಪಕ್ಷಗಳು ಚುನಾವಣಾ ವೆಚ್ಚ ಮತ್ತು ದೇಣಿಗೆ ಸಂಗ್ರಹ ಮಾಹಿತಿ ದಾಖಲೆಯನ್ನು ಇಡುವುದು ಮತ್ತು ವಾರ್ಷಿಕ ಲೆಕ್ಕ ಪರಿಶೋಧನೆಯ ವಿವರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವುದು.

8. ಅಭ್ಯರ್ಥಿಯ ಪರ ಅವರ ಪ್ರತಿನಿಧಿಯಾಗಿ ಪತ್ರಿಕೆಗಾಗಿ ಜಾಹೀರಾತು ನೀಡಿಕೆ ನಿರ್ಬಂಧ.

9. ಮತದಾನದ ವಯಸ್ಸು ೨೧ ರಿಂದ ೧೮ಕ್ಕೆ ಇಳಿಕೆ.

10. ವಿದ್ಯುನ್ಮಾನ ಮತಯಂತ್ರ ಬಳಕೆ.

11. ಭಾವಚಿತ್ರ ಸಹಿತ ಮತದಾರರ ಪಟ್ಟಿ ಮತಪತ್ರ ಚೀಟಿ ಜಾರಿಗೆ.



♠.ಉಳಿದ ಪ್ರಮುಖ ಶಿಫಾರಸ್ಸುಗಳು :

1. ಮತ ನಿರಾಕರಣೆ ಅಥವಾ ತಟಸ್ಥವಾಗಿರುವುದಕ್ಕೆ ಕಾನೂನು ಮಾನ್ಯತೆ.

2. ಚುನಾವಣೆಯಲ್ಲಿ ಶೇ. ೨೦ಕ್ಕಿಂತ ಕಡಿಮೆ ಮತ ಪಡೆಯುವ ಅಭ್ಯರ್ಥಿಗಳನ್ನು ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸುವಂತೆ ಅನರ್ಹ ಗೊಳಿಸುವುದು.

3. ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳನ್ನು ಸ್ಪರ್ಧೆಯಿಂದ ಅನರ್ಹಗೊಳಿಸುವುದು.

4. ಚುನಾವಣಾ ವೆಚ್ಚದಲ್ಲಿ ಸ್ವಲ್ಪ ಭಾಗವನ್ನು ಸರ್ಕಾರವೇ ಭರಿಸುವುದು.

5. ರಾಜಕೀಯ ಪಕ್ಷಗಳ ಸಂಖ್ಯೆಯನ್ನು ಎರಡು ಅಥವಾ ಮೂರಕ್ಕೆ ಮಿತಿಗೊಳಿಸುವುದು.

1 comment: