"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday, 28 May 2016

☀ಯುಪಿಎಸ್’ಸಿ ಪರೀಕ್ಷಾ ತಯಾರಿ : ಯುಪಿಎಸ್’ಸಿನಲ್ಲಿ 922ನೇ ರ್ಯಾಂಕ್ ಸ್ಥಾನ ಪಡೆದ ಗ್ರಾಮೀಣ ಪ್ರತಿಭೆ ಡಾ.ಲಿಂಗರಾಜು ಜೊತೆ ಎಕ್ಸ್’ಕ್ಲೂಸಿವ್ ಸಂದರ್ಶನ : (UPSC Exclusive Interview)

☀ಯುಪಿಎಸ್’ಸಿ ಪರೀಕ್ಷಾ ತಯಾರಿ :
ಯುಪಿಎಸ್’ಸಿನಲ್ಲಿ 922ನೇ ರ್ಯಾಂಕ್ ಸ್ಥಾನ ಪಡೆದ ಗ್ರಾಮೀಣ ಪ್ರತಿಭೆ ಡಾ.ಲಿಂಗರಾಜು ಜೊತೆ ಎಕ್ಸ್’ಕ್ಲೂಸಿವ್ ಸಂದರ್ಶನ :
(UPSC  Exclusive Interview)
━━━━━━━━━━━━━━━━━━━━━━━━━━━━━━━━━━━━━━━━━━━━━


•►ಯುಪಿಎಸ್ ಸಿ ಫಲಿತಾಂಶ  ಪ್ರಕಟವಾಗಿದ್ದು ಶಿವಮೊಗ್ಗದ ಈಎಸ್’ಐ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಲಿಂಗರಾಜು ನಾಯಕ್ 922 ನೇ ರ್ಯಾಂಕ್ ಪಡೆದಿದ್ದಾರೆ. ಇವರು ಸೊರಬ ತಾಲೂಕು ಹಿರೇಮಾಗಡಿ ತಾಂಡಾದ ಅಪ್ಪಟ ಗ್ರಾಮೀಣ ಪ್ರತಿಭೆ. ಇವರು ತಮ್ಮ ಅನುಭವವನ್ನು ನಮ್ಮ ಸುವರ್ಣ ನ್ಯೂಸ್ ನೊಂದಿಗೆ ಹಂಚಿಕೊಂಡಿದ್ದು ಹೀಗೆ.


●.ಸುವರ್ಣ ನ್ಯೂಸ್ :ಪರೀಕ್ಷಾ ತಯಾರಿ ಹೇಗಿತ್ತು?

•►ತಯಾರಿಯನ್ನು 2009 ರಿಂದಲೇ ಶುರು ಮಾಡಿದ್ದೆ. ದೆಹಲಿಯಲ್ಲಿ 10 ತಿಂಗಳು ಕೋಚಿಂಗ್ ಪಡೆದೆ. ಸಮಯ ಸಿಕ್ಕಾಗಲೆಲ್ಲಾ ಓದುತ್ತಿದ್ದೆ. ಅಷ್ಟೊತ್ತಿಗೆ ಮೆಡಿಕಲ್ ಎಕ್ಸಾಮ್ ರಿಸಲ್ಟ್ ಬಂದು ಕೆಲಸ ಸಿಕ್ಕಿತ್ತು. ಆದರೂ ಪ್ರಯತ್ನಪಡುತ್ತಲೇ ಇದ್ದೆ. ಪರೀಕ್ಷೆಗೋಸ್ಕರಾನೇ ಅಂತ ಓದ್ತಾ ಇರಲಿಲ್ಲ. ಯಾವಾಗಲೂ ಅಪ್ಡೇಟ್ ಆಗ್ತಾ ಇದ್ದೆ. ಇದು ಸಹಾಯವಾಯ್ತು. 7 ಸಲ ಅಟೆಂಪ್ಟ್ ಮಾಡಿದೀನಿ. 4 ಮೇನ್ಸ್ ಎಕ್ಸಾಮ್ ಬರ್ದಿದೀನಿ. 4 ನೇ ಮೇನ್ಸ್ ನಲ್ಲಿ ಪಾಸಾಗಿದೀನಿ.


●.ಸು.ನ್ಯೂ:ಡಾಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ನೀವು ಸಮಯ ಹೇಗೆ ಹೊಂದಿಸ್ತಾ ಇದ್ರಿ?

•►ಕಷ್ಟವಾಗ್ತಾ ಇತ್ತು.  ಬೆಳಿಗ್ಗೆ 9-12, ಮದ್ಯಾಹ್ನ 4-7 ಆಸ್ಪತ್ರೆಯ ಕೆಲಸದ ಅವಧಿ. ಪೇಷಂಟ್ ಗಳು ಜಾಸ್ತಿಯಿದ್ದರೆ ಕೆಲಸ ಮುಗಿತಾ ಇರಲಿಲ್ಲ. ಮನೆಗೆ ಬರಬೇಕಾದ್ರೆ ತಲೆ ಫ್ರೀ ಮಾಡ್ಕೊಂಡು ಬರ್ತಿದ್ದೆ. ಮನೆಗೆ ಬಂದು ಓದ್ತಾ ಇದ್ದೆ. ಪರೀಕ್ಷಾ ಸಮಯದಲ್ಲಿ ಒಂದೆರಡು ತಿಂಗಳು ರಜೆ ಹಾಕಿ ಕೋಚಿಂಗ್ ಗೆ ಹೋಗ್ತಿದ್ದೆ. ಮನಸ್ಸಿದ್ದರೆ ಏನು ಬೇಕಾದ್ರೂ ಮಾಡಬಹುದು. ಹಾಗಾಗಿ ನನಗೆ ಒತ್ತಡಗಳಿದ್ದರೂ ಅದು ಕಲಿಕೆಗೆ ಅಡ್ಡ ಬರಲಿಲ್ಲ.


●.ಸು.ನ್ಯೂ:ವೃತ್ತಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ನಿಮಗೆ ಈ ಆಲೋಚನೆ ಯಾಕೆ ಬಂತು?

•►ಹೌದು.ವೈದ್ಯನಾಗಿ ಸಮಾಜ ಸೇವೆ ಮಾಡ್ತಾ ಇದ್ದೀನಿ. ಎಂಬಿಬಿಸ್ ಜೊತೆಗೆ ಎಂಡಿ ಮಾಡಿಕೊಂಡು ಆರಾಮಾಗಿ ಹಣ  ಗಳಿಸಬಹುದಿತ್ತು. ನನ್ನ ಸ್ನೇಹಿತರೆಲ್ಲರೂ ಹಾಗೆ ಹೇಳಿದರು. ಆದರೆ ನನಗೆ ಹಣ ಮಾಡೋದಕ್ಕಿಂತ ಹೆಚ್ಚಾಗಿ ಸಮಾಜಕ್ಕೆ, ಜನರಿಗೆ ಅನುಕೂಲವಾಗುವಂತ ಕೆಲಸ ಮಾಡಬೇಕು ಅನ್ನೋದು ಆಸೆಯಾಗಿತ್ತು. ಅದು ಅಲ್ಲದೇ ನಾನು ಬಂದಿರೋದು ಹಳ್ಳಿಯಿಂದ. ಅಲ್ಲಿನ ಕಷ್ಟಗಳು, ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ನೋಡಿ ಬೆಳೆದವನು. ಹಾಗಾಗಿ ನಮ್ಮ ಹಳ್ಳಿಗಾಗಿ, ನನ್ನ ಹಾಗೆ ಯಾರೂ ಕಷ್ಟಪಡಬಾರದು. ಅವರಿಗಾಗಿ ನಾನು ಏನಾದರೂ ಸೇವೆ ಮಾಡಬೇಕು ಎಂದು ಚಿಕ್ಕಂದಿನಿಂದಲೇ ಅನಿಸ್ತಾ ಇತ್ತು. ಇದೇ ನನಗೆ ದೊಡ್ಡ ಮೋಟಿವೆಶನ್ ಎಂದರೆ ತಪ್ಪಾಗಲಾರದು.


●.ಸು.ನ್ಯೂ:ಹಳ್ಳಿಯಲ್ಲಿ ಹುಟ್ಟಿ, ಕನ್ನಡ ಮಾದ್ಯಮದಲ್ಲಿ ಕಲಿತ ನಿಮಗೆ ಯುಪಿಎಸ್ ಇ ಪರೀಕ್ಷೆ ಎದುರಿಸುವುದು ಕಷ್ಟ ಎನಿಸಲಿಲ್ಲವೇ?

•►ಪ್ರಾರಂಭದಲ್ಲಿ ಹಿಂಜರಿಕೆ ಇತ್ತು. ಆದರೂ ನಾನು ಸಾಧಿಸುತ್ತೇನೆ ಎಂಬ ನಂಬಿಕೆಯಿತ್ತು. ಸಿಟಿಯಲ್ಲಿರುವವರಿಗೂ ನಮಗೆ ಇಂಗ್ಲೀಷ್ ಭಾಷೆಯ ಬಗ್ಗೆ ಅಂತರವಿರುತ್ತದೆ. ಆದರೆ ವಿಷಯ ಜ್ಞಾನವಿತ್ತು. ಇಂಗ್ಲೀಷ್ ಅಗತ್ಯ. ಆದರೆ ಅದೇ ಅಂತಿಮವಲ್ಲ. ಇಂಗ್ಲೀಷ್ ಬಂದ ಮಾತ್ರಕ್ಕೆ ಪರೀಕ್ಷೆ ಪಾಸು ಮಾಡಲು ಸಾಧ್ಯವಿಲ್ಲ. ಅದು ಒಂದು ಮಾದ್ಯಮವಷ್ಟೇ. ಹಾಗಾಗಿ ಪರೀಕ್ಷೆ ಬರೆಯಬೇಕು ಎನ್ನುವವರು ನಾನು ಹಳ್ಳಿಯಿಂದ ಬಂದಿದೀನಿ, ನನಗೆ ಇಂಗ್ಲೀಷ್ ಅಷ್ಟು ಚೆನ್ನಾಗಿ ಬರಲ್ಲ ಅಂತೆಲ್ಲಾ ಹಿಂಜರಿಕೆ ಬೇಡ. ಸಾಧಿಸಬೇಕು ಅಂತಿದ್ದರೆ ಇವ್ಯಾವುವು ಅಡ್ಡ ಬರುವುದಿಲ್ಲ.


●.ಸು.ನ್ಯೂ:ನೀವು ಬೆಳೆದು ಬಂದ ಹಾದಿಯನ್ನು ಹೇಳ್ತಿರಾ?

•►ನಾನು ಚಿಕ್ಕಂದಿನಿಂದಲೂ ಕೆಟ್ಟ ಹಠವಾದಿ. ಮೆಡಿಕಲ್ ಸೀಟು ಬೇಕು ಅನಿಸ್ತು. ಸೋ ಎಫರ್ಟ್ ಹಾಕ್ದೆ. ಸೀಟು ಸಿಕ್ತು. ಒಳ್ಳೆ ಮಾರ್ಕ್ಸ್ ಸಿಕ್ತು. ಆವಾಗ ನಾನ್ಯಾಕೆ ಯುಪಿಎಸ್ ಗೆ ಪ್ರಯತ್ನಪಡಬಾರದು ಅನಿಸ್ತು. ಅವತ್ತಿನಿಂದಲೇ ಓದಲು ಶುರು ಮಾಡಿದೆ. ಅಪ್ಪ, ಅಮ್ಮ ವಿದ್ಯಾವಂತರಲ್ಲ. ನನಗೆ ಯಾರೂ ಗೈಡ್ ಮಾಡಲಿಕ್ಕೆ ಇರಲಿಲ್ಲ. ನನಗೆ ನಾನೇ ಮೋಟಿವೇಶನ್. ನನ್ನ ಸ್ವಪ್ರಯತ್ನದಿಂದ ಕಲಿತಾ ಇದ್ದೆ. ನಾನು ಬೆಳೆದು ಬಂದ ದಾರಿ, ಎದುರಿಸಿದ ಕಷ್ಟಗಳು ಅದೇ ನನ್ನನ್ನು ಈ ಮಟ್ಟಕ್ಕೆ ಬೆಳೆಯಲು ಪ್ರೇರೆಪಿಸಿತು.


●.ನಿಮ್ಮ ಮುಂದಿನ ಗುರಿಯೇನು?

•►ಐಎಎಸ್ ಗೆ ಮತ್ತೊಮ್ಮೆ ಪ್ರಯತ್ನಪಡ್ತೀನಿ. ನನಗೆ ಬಹಳ ಆಸೆ ಇದೆ ಐಎಎಸ್ ಪಾಸ್ ಮಾಡಬೇಕು ಅಂತ. ನನ್ನ ಹಾಗೆ ಕಷ್ಟದಿಂದ ಬೆಳೆದು ಬಂದವರಿಗೆ ಯುಪಿಎಸ್ ಸಿ ತಯಾರಿಗೆ ಸಹಾಯ ಮಾಡಬೇಕು ಅಂತಿದೀನಿ. ಇನ್ನು ನಿರೀಕ್ಷೆ ಜಾಸ್ತಿಯಿತ್ತು. ಪರವಾಗಿಲ್ಲ ಫಲಿತಾಂಶ ಖುಷಿ ಕೊಟ್ಟಿದೆ. ಐಆರ್ ಎಸ್ ಸೇವೆ ಸಿಗಬಹುದು. ಆಡಳಿತದಲ್ಲಿ ಇನ್ನಷ್ಟು ಬದಲಾವಣೆ ತರಲು ಪ್ರಯತ್ನಿಸುತ್ತೇನೆ. ಜನರ ಸೇವೆಗಾಗಿ ಸದಾ ಸಿದ್ಧ.


●.ಸು.ನ್ಯೂ:ಯುಪಿಎಸ್ ಸಿ ಮಹತ್ವಾಕಾಂಕ್ಷಿಗಳಿಗೆ ನಿಮ್ಮ ಸಲಹೆ?

•►ಮೊದಲು ಗುರಿ ಸ್ಪಷ್ಟ  ಇರಬೇಕು. ನಾನು ಏನು ಮಾಡಬೇಕು ಅನ್ನೊದು ಸ್ಪಷ್ಟ ಇದ್ದರೆ ಅರ್ಧ ಕೆಲಸ ಮುಗಿದಂತೆ. ಮೊದಲ ಪ್ರಯತ್ನದಲ್ಲಿ ಯಶಸ್ವಿಯಾಗಿಲ್ಲ ಅಂತ ನಿರಾಶೆಯಾಗಿ ಪ್ರಯತ್ನ ಬಿಡಬಾರದು. ಬೇರೆಯವರಿಗೆ ನಿಮ್ಮನ್ನು ಹೋಲಿಸಿಕೊಳ್ಳಬೇಡಿ. ಅವರು ಬೆಳೆದು ಬಂದ ದಾರಿ, ಹಿನ್ನೆಲೆ, ನಿಮ್ಮ ದಾರಿ, ಹಿನ್ನೆಲೆ ವಿಭಿನ್ನವಾಗಿರುತ್ತದೆ. ನಿಮ್ಮ ಗುರಿ ಸ್ಪಷ್ಟವಿರಲಿ. ಆಗ ಗೆಲುವು ನಿಮ್ಮದೆ.
                                                                                                                ●.ಸಂದರ್ಶನ-ಶ್ರೀಲಕ್ಷ್ಮೀ ಎಚ್. ಎಲ್.
(Courtesy : ಸುವರ್ಣ ನ್ಯೂಸ್ )

No comments:

Post a Comment