"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday, 26 May 2016

☀ ಇಂದಿನ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : ●.ಲಿಗೋ-ಇಂಡಿಯಾ ಯೋಜನೆ - (ಲೇಸರ್ ಇಂಟರ್‌ಫೆರೋಮೀಟರ್ ಗ್ರಾವಿಟೇಶನಲ್-ವೇವ್ ಅಬ್ಸರ್ವೇಟರಿ(ಲಿಗೋ) ಪ್ರಾಜೆಕ್ಟ್) - 'ಗುರುತ್ವಾಕರ್ಷಣ ತರಂಗ' (LIGO-INDIA PROJECT)

☀ ಇಂದಿನ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ :
●.ಲಿಗೋ-ಇಂಡಿಯಾ ಯೋಜನೆ - (ಲೇಸರ್ ಇಂಟರ್‌ಫೆರೋಮೀಟರ್ ಗ್ರಾವಿಟೇಶನಲ್-ವೇವ್ ಅಬ್ಸರ್ವೇಟರಿ(ಲಿಗೋ) ಪ್ರಾಜೆಕ್ಟ್) - 'ಗುರುತ್ವಾಕರ್ಷಣ ತರಂಗ' (LIGO-INDIA PROJECT) 
━━━━━━━━━━━━━━━━━━━━━━━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಪರೀಕ್ಷೆ : ಮೇನ್ಸ್ ತಯಾರಿ.
(IAS/KAS Exams - Mains Preparation)


— ಶತಮಾನದ ಹಿಂದೆ ವಿಜ್ಞಾನಿ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್ ಪ್ರಸ್ತಾಪಿಸಿದ್ದ 'ಗುರುತ್ವಾಕರ್ಷಣ ತರಂಗ' ವನ್ನು ಪತ್ತೆ ಹಚ್ಚಿರುವುದಾಗಿ ವಿಜ್ಞಾನಿಗಳು ಘೋಷಿಸಿದ್ದಾರೆ. ಈ ಸಂಶೋಧನೆಯನ್ನು ಕೆಲವು ತಜ್ಞರು ಶತಮಾನದ ಆವಿಷ್ಕಾರ ಎಂದು ಬಣ್ಣಿಸಿದ್ದು, ಕಪ್ಪುರಂಧ್ರ, ನಕ್ಷತ್ರದ ಅವನತಿ ಕುರಿತಾದ ಸಂಶೋಧನೆಯಲ್ಲಿ ಮಹತ್ವದ ಮೈಲಿಗಲ್ಲೆಂದು ಹೇಳಲಾಗುತ್ತಿದೆ.


ಏನಿದು ?
ಗುರುತ್ವಾಕರ್ಷಣ ತರಂಗ 130 ಕೋಟಿ ಬೆಳಕಿನ ವರ್ಷಗಳ ಹಿಂದೆ ಎರಡು ಬೃಹತ್ ಕಪ್ಪು ರಂಧ್ರಗಳ ನಡುವೆ ಘರ್ಷಣೆ ಸಂಭವಿಸಿದೆ. ಒಂದು ಸೆಕೆಂಡ್‌ನಲ್ಲಿ ಸಂಭವಿಸುವ ಘರ್ಷಣೆಯಿಂದ ಸೃಷ್ಟಿಯಾಗುವ ಭೌತದ್ರವ್ಯವು ಕ್ಷಣಮಾತ್ರದಲ್ಲಿ ಶಕ್ತಿಯಾಗಿ ಪರಿವರ್ತನೆಯಾಗಿ ಅಲೆಗಳನ್ನು ದೂರಕ್ಕೆ ಕೊಂಡೊಯ್ಯುತ್ತದೆ. ಆ ರೀತಿ ಹೊರಸೂಸಿದ ಅಲೆಯನ್ನೇ ಗುರುತ್ವಾಕರ್ಷಣ ತರಂಗ ಎಂದು ಕರೆಯಲಾಗಿದೆ. ಅಂದು ಹೊರಸೂಸಿದ ಅಲೆಯೊಂದು ವೇಗವಾಗಿ ಚಲಿಸುತ್ತಾ 2015ರ ಸೆ. 14ರಂದು ಭೂಮಿಯನ್ನು ತಲುಪಿರುವುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.


•► ಲಿಗೋ ಮೂಲಕ ಪತ್ತೆ 

ಗುರುತ್ವಾಕರ್ಷಣ ತರಂಗಗಳು ವ್ಯೋಮದಲ್ಲಿ ನಡೆದ ಬೃಹತ್ ಕಾಯಗಳ ಘರ್ಷಣೆಯ ಅಳತೆಗೋಲಾಗಿವೆ. ಗುರುತ್ವಾಕರ್ಷಣ ಅಲೆಗಳನ್ನು ಗುರುತಿಸುವ ಸಲುವಾಗಿಯೇ ಇಡಲಾದ ಅಮೆರಿಕ ಮೂಲದ ಎರಡು ಭೂಗರ್ಭ ಪತ್ತೆಸಾಧನಗಳಲ್ಲಿ ಈ ಅಪರೂಪದ ವಿದ್ಯಮಾನ ದಾಖಲಾಗಿದೆ. ಇದಕ್ಕಾಗಿ ಲೇಸರ್ ಇಂಟರ್‌ಫೆರೋಮೀಟರ್ ಗ್ರಾವಿಟೇಶನಲ್-ವೇವ್ ಅಬ್ಸರ್ವೇಟರಿ(ಲಿಗೋ) ಎಂಬ ಪ್ರಾಜೆಕ್ಟ್ ಕೈಗೊಳ್ಳಲಾಗಿತ್ತು. ಲೂಸಿಯಾನಾದ ಲಿವಿಂಗ್‌ಸ್ಟನ್ ಮತ್ತು ವಾಷಿಂಗ್ಟನ್‌ನ ಹ್ಯಾನ್‌ಫೋರ್ಡ್‌ಗಳಲ್ಲಿ ಲಿಗೋ ಸ್ಥಾಪಿಸಲಾಗಿದೆ. ಅಮೆರಿಕದ ರಾಷ್ಟ್ರೀಯ ವಿಜ್ಞಾನ ಫೌಂಡೇಶನ್ 2002-2012ರ ಅವಧಿಯಲ್ಲಿ ಇದನ್ನು ಸ್ಥಾಪಿಸಿದೆ. ಲಿಗೋ ಭೂಮಿಯನ್ನು ಹಾದುಹೋಗುವ ಗುರುತ್ವಾಕರ್ಷಣ ತರಂಗದ ಸಣ್ಣ ಕಂಪನವನ್ನು ಕಂಡು ಹಿಡಿಯುತ್ತದೆ. ಈ ಮೂಲಕ ದೊರೆತ ಮಾಹಿತಿಗಳನ್ನು ತಿಂಗಳಾನುಗಟ್ಟಲೆ ಲೆಕ್ಕಾಚಾರಕ್ಕೆ ಹಚ್ಚಿದ ವಿಜ್ಞಾನಿಗಳು ಈ ಗುರುತ್ವದ ಅಲೆಗಳು 1.3 ನೂರು ಕೋಟಿಯಷ್ಟು ವರ್ಷಗಳ ಹಿಂದೆ ಎರಡು ಬೃಹತ್ ಕಪ್ಪುರಂಧ್ರಗಳು ಡಿಕ್ಕಿಯಿಂದ ಹೊರಹೊಮ್ಮಿದವು ಎಂಬುದನ್ನು ಕಂಡುಕೊಂಡಿದ್ದಾರೆ.


•► ಮಹತ್ವದ ಹೆಜ್ಜೆ 

ಈ ಹೊಸ ಮಾಹಿತಿಯು ತಾರಾಪುಂಜಗಳ ಹುಟ್ಟಿನ ಕುರಿತು ಹಾಗೂ ಬ್ರಹ್ಮಾಂಡದ ಬಹು ದೊಡ್ಡ ಕಾಯಗಳ ಬಗ್ಗೆ ವಿವರಣೆ ನೀಡಲು ಸಹಾಯಕವಾಗಿದೆ ಎಂದು ಲಿಗೋ ಪ್ರಾಜೆಕ್ಟ್ ಕೈಗೊಂಡ ತಂಡದ ನಾಯಕ ಡೇವಿಡ್ ಶೂಮೇಕರ್ ತಿಳಿಸಿದ್ದಾರೆ. ಈ ಹೊಸ ಸಂಶೋಧನೆಯನ್ನು ಫಿಸಿಕಲ್ ರಿವೀವ್ ಲೆಟರ್ಸ್ ಎಂಬ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗುತ್ತಿದೆ.


•► ಗುರುತ್ವಾಕರ್ಷಣ ಬಲ

ಭೂಮಿಯ ಮೇಲೆ ಹಾರುವ ವಸ್ತುಗಳನ್ನು ತನ್ನತ್ತ ಸೆಳೆಯುವ ಶಕ್ತಿ ಭೂಮಿಗಿದೆ. ಭೂಮಿಯ ಈ ಶಕ್ತಿಯನ್ನೇ ಗುರುತ್ವಾಕರ್ಷಣ ಬಲ ಎಂದು ಸರ್ ಐಸಾಕ್ ನ್ಯೂಟನ್ ಹೇಳಿದ್ದರು. ಈ ಎಲ್ಲ ವಸ್ತುಗಳು ಒಂದನ್ನೊಂದು ಆಕರ್ಷಿಸಲು ಕಾರಣವೇ ಈ ಬಲ. ನ್ಯೂಟನ್‌ನ ಗುರುತ್ವ ನಿಯಮದ ಪ್ರಕಾರ ಸ್ಥಿರ ಪ್ರಮಾಣದಲ್ಲಿ ಸಮಯಕ್ಕನುಗುಣವಾಗಿ ಹೆಚ್ಚುವ ವೇಗವೇ ಗುರುತ್ವ ವೇಗೋತ್ಕರ್ಷ. ಕಾಯವೊಂದಕ್ಕೆ ಕೊಡಲಾದ ವೇಗೋತ್ಕರ್ಷವು ಅದರ ಮೇಲೆ ಪ್ರಯೋಗಿಸಿದ ಬಲಕ್ಕೆ ನೇರ ಅನುಪಾತದಲ್ಲಿ ಆ ಬಲದ ದಿಕ್ಕಿನಲ್ಲೇ ಇರುತ್ತದೆ ಮತ್ತು ಕಾಯದ ದ್ರವ್ಯರಾಶಿಗೆ ವಿಲೋಮ ಅನುಪಾತದಲ್ಲಿಯೂ ಇರುತ್ತದೆ.


•► ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತ

ಗುರುತ್ವ ಶಕ್ತಿಯನ್ನು ಐನ್‌ಸ್ಟೀನ್ ಗಣಿತದ ವಿಧಾನ ಮುಖೇನ ವಿವರಿಸಿ ಅದನ್ನೇ ಸಾಮಾನ್ಯ ಸಾಪೇಕ್ಷ ಸಿದ್ಧಾಂತ ಎಂದು ಕರೆದಿದ್ದರು. ಅದರಲ್ಲಿ ಸ್ಥಳ ಮತ್ತು ಕಾಲ ಎಂಬ ಪರಿಕಲ್ಪನೆಗಳು ಮುಖ್ಯವಾಗಿವೆ. ಪದಾರ್ಥವೊಂದರಲ್ಲಿ ದ್ರವ್ಯ ಮತ್ತು ಶಕ್ತಿ ಇರುತ್ತದೆ, ಇಲ್ಲಿ ದ್ರವ್ಯ ಮತ್ತು ಶಕ್ತಿ ಸ್ಥಳ -ಕಾಲಗಳ ನಿರಂತತೆಯನ್ನು ವಕ್ರಗೊಳಿಸುತ್ತದೆ. ಗುರುತ್ವ ತರಂಗಗಳು ಸ್ಥಳ ಕಾಲಗಳ ನಿರಂತತೆಯಲ್ಲಿ ಅತಿ ಸಣ್ಣ ಅಲೆಗಳಾಗಿವೆ. ಗುರುತ್ವ ಬಲವು ಕಾಲದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಸಾಪೇಕ್ಷ ಸಿದ್ಧಾಂತ ತಿಳಿಸುತ್ತದೆ.


•► ಈ ಸಂಶೋಧನೆಯ ಪ್ರಾಮುಖ್ಯ ಏನು? 

ಈ ಹೊಸ ಸಂಶೋಧನೆಯಿಂದಾಗಿ ಗುರುತ್ವಾಕರ್ಷಣೆ ಅಲೆ ಯನ್ನು ಕಂಡು ಹಿಡಿಯುವ ಹೊಸ ರೀತಿಯ ಯಂತ್ರಗಳನ್ನೇ ರೂಪಿಸಬಹುದು. ಈ ಯಂತ್ರಗಳು ಬ್ರಹ್ಮಾಂಡದ ಯಾವುದೇ ಮೂಲೆಯಲ್ಲಿ ಎಷ್ಟೇ ಜ್ಯೋತಿರ್‌ವರ್ಷಗಳ ಹಿಂದೆ ಶುರುವಾದ ಅಲೆಯನ್ನೂ ಗುರುತಿಸಬಲ್ಲವು. ನಕ್ಷತ್ರಗಳು ಸಾಯಲು ಮತ್ತು ಸೂಪಾರ್‌ನೋವಾ ಆಗಲು ಕಾರಣವೇನೆಂಬುದನ್ನೂ ಕಂಡುಹಿಡಿಯಬಹುದು.


•► ಪತ್ತೆ ಕೇಂದ್ರಕ್ಕೆ ಸಂಪುಟ ಅಸ್ತು

ಭಾರತದಲ್ಲೂ ಗುರುತ್ವ ಬಲ ಪತ್ತೆ ಮಾಡುವ ಕೇಂದ್ರ ಸ್ಥಾಪನೆಗೆ ಪ್ರಧಾನಿ ನೇತೃತ್ವದ ಸಂಪುಟ ಸಭೆ 2016ರ ಫೆ.17ರಂದು ಅನುಮೋದನೆ ನೀಡಿದೆ. ಅಮೆರಿಕದಲ್ಲಿರುವ 'ಲೇಸರ್ ಇಂಟರ್‌ಫೆರೋಮೀಟರ್ ಗ್ರಾವಿಟೇಷನಲ್ ವೇವ್ ಅಬ್ಸರ್ವೆಟರಿ (ಲಿಗೋ) ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ಭಾರತದಲ್ಲಿ ಈ ಕೇಂದ್ರ ಸ್ಥಾಪನೆಯಾಗುತ್ತಿದೆ.

ಲಿಗೋ-ಇಂಡಿಯಾ ಯೋಜನೆಯ ಅನುಸಾರ ಭಾರತದಲ್ಲಿಯೂ 8 ಕಿ.ಮೀ ಉದ್ದದ ಬೃಹತ್ ಕೊಳವೆ ಆಕಾರದ ಸುರಂಗ ನಿರ್ಮಾಣವಾಗಲಿದೆ. ಇದರ ಮೂಲಕ ಗುರತ್ವಾಕರ್ಷಣೆ ಶಕ್ತಿಯನ್ನು ಪತ್ತೆ ಮಾಡಲಾಗುತ್ತದೆ. ಪರಮಾಣು ಶಕ್ತಿ ಇಲಾಖೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳು ಯೋಜನೆಯ ಉಸ್ತುವಾರಿ ವಹಿಸಲಿವೆ.

(Courtesy : Prajawani) 

No comments:

Post a Comment