"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್
Showing posts with label ಸಂದರ್ಶನದ ತಯಾರಿ. Show all posts
Showing posts with label ಸಂದರ್ಶನದ ತಯಾರಿ. Show all posts

Saturday, 28 May 2016

☀ಯುಪಿಎಸ್’ಸಿ 2015ರ ಸಾಧಕರ ಸಂದರ್ಶನ: ಯುಪಿಎಸ್’ಸಿಯಲ್ಲಿ 48ನೇ ಸ್ಥಾನ ಪಡೆದಿರುವ ಕನ್ನಡಿಗ ದರ್ಶನ್ ಮೊದಲ ಸಂದರ್ಶನ: ಸುವರ್ಣನ್ಯೂಸ್ ವೆಬ್ ಎಕ್ಸ್ ಕ್ಲೂಸಿವ್: (UPSC Exclusive Interview)

☀ಯುಪಿಎಸ್’ಸಿ 2015ರ ಸಾಧಕರ ಸಂದರ್ಶನ:
ಯುಪಿಎಸ್’ಸಿಯಲ್ಲಿ 48ನೇ ಸ್ಥಾನ ಪಡೆದಿರುವ ಕನ್ನಡಿಗ ದರ್ಶನ್ ಮೊದಲ ಸಂದರ್ಶನ: ಸುವರ್ಣನ್ಯೂಸ್ ವೆಬ್ ಎಕ್ಸ್ ಕ್ಲೂಸಿವ್:
(UPSC  Exclusive Interview)
━━━━━━━━━━━━━━━━━━━━━━━━━━━━━━━━━━━━━━━━━━━━━


•► ಕೇಂದ್ರ ಲೋಕ ಸೇವಾ ಆಯೋಗ(ಯುಪಿಎಸ್‌ಸಿ) ನಡೆಸಿದ 2015 ಸಾಲಿನ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ 1,078 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಅದರಲ್ಲಿಯೂ ಈ ಬಾರಿ ಕರ್ನಾಟಕದ 30 ಕ್ಕೂ ಹೆಚ್ಚು ಮಂದಿ ಕೇಂದ್ರ ನಾಗರಿಕ ಸೇವೆಗೆ ಆಯ್ಕೆಯಾಗಿದ್ದು, ದಾವಣಗೆರೆಯ ದರ್ಶನ್ 48 ನೇ ಸ್ಥಾನ ಪಡೆದು ರಾಜ್ಯಕ್ಕೆ ಮೊದಲಿಗರಾಗಿದ್ದಾರೆ.

ವಿಶ್ವಮೂರ್ತಿ ಮತ್ತು ಪದ್ಮ ದಂಪತಿ ಪುತ್ರರಾದ ದರ್ಶನ್ ಮೂಲತಃ ದಾವಣಗೆರೆಯವರಾಗಿದ್ದು ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಹಾಸನದಲ್ಲಿ, ಫ್ರೌಢಶಾಲಾ ಮತ್ತು ಕಾಲೇಜು ಶಿಕ್ಷಣವನ್ನು ದಾವಣಗೆರೆಯಲ್ಲಿ ಪೂರೈಸಿ, ಬೆಂಗಳೂರಿಗೆ ಬಂದು ನೆಲೆಸಿದ ಅವರು ಬೆಂಗಳೂರಿನ ಜೆಎಸ್’ಎಸ್ ಐಟಿ ಕಾಲೇಜಿನಲ್ಲಿ ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ಅಂಡ್ ಮ್ಯಾನೆಜ್’ಮೆಂಟ್ ವಿಷಯದಲ್ಲಿ ಪದವಿ ಪಡೆದಿದ್ದಾರೆ. ತಮ್ಮ ಆಯ್ಕೆಯ ಸಂಭ್ರಮವನ್ನು ಸುವರ್ಣ ನ್ಯೂಸ್-ಕನ್ನಡಪ್ರಭಕ್ಕೆ ನೀಡಿದ ಮೊದಲ ಸಂದರ್ಶನ ಹಂಚಿಕೊಂಡಿದ್ದಾರೆ.


●.ಐಎಎಸ್ ಕನಸು ಶುರುವಾಗಿದ್ದು, ತಯಾರಿ ಪ್ರಾರಂಭಿಸಿದ್ದು ಯಾವಾಗ..?

•► 2011ರಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದ ನಂತರದಲ್ಲಿ ನಾಗರಿಕ ಸೇವಾ ಪರೀಕ್ಷೆಗಳನ್ನು ಬರೆದು ಸಾರ್ವಜನಿಕ ಸೇವೆಯನ್ನು ಮಾಡಬೇಕು ಎನ್ನುವ ಕನಸು ಶುರುವಾಯಿತು. ಅಂದಿನಿಂದಲೇ ಯುಪಿಎಸ್’ಸಿ ಪರೀಕ್ಷೆಗೆ ತಯಾರಿ ಆರಂಭವಾಗಿತ್ತು. ಅಂದಿನಿಂದ ಇಂದಿನವರೆಗೂ ನಿರಂತರವಾಗಿ ನಡೆದುಕೊಂಡು ಬಂದಿದೆ.


●.ಯುಪಿಎಸ್’ಸಿ ಪರೀಕ್ಷೆಯಲ್ಲಿ ಇದು ಎಷ್ಟನೇ ಪ್ರಯತ್ನ..?

•► 2011ರಿಂದ ಇಲ್ಲಿಯವರೆಗೂ 4 ಬಾರಿ ಪ್ರಯತ್ನ ಮಾಡಿದ್ದೇನೆ. ಈ ಬಾರಿಯ ಪ್ರಯತ್ನದಲ್ಲಿ ಯಶಸ್ಸು ದೊರಕಿದೆ. ಮೊದಲ ಮೂರು ಪ್ರಯತ್ನಗಳಲ್ಲಿ ಪ್ರಿಲಿಮ್ಸ್’ನಲ್ಲಿ ಪಾಸಾಗಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ 48ನೇ ಸ್ಥಾನ ಪಡೆದಿರುವುದು ತುಂಬ ಖುಷಿ ನೀಡಿದೆ. ಯಾವುದೇ ಪ್ರಯತ್ನದಲ್ಲಿ ಸೋಲು ಕಂಡಾಗ ಮತ್ತೆ ಪ್ರಯತ್ನಿಸದಿದ್ದರೆ ಗೆಲುವು ಕಾಣುವುದು ಸಾಧ್ಯವಿಲ್ಲ, ಮತ್ತೆ ಮತ್ತೆ ಪಯತ್ನಿಸಿದರಷ್ಟೇ ಯಶಸ್ಸು ಖಂಡಿತ.


●.ಯುಪಿಎಸ್’ಸಿ ಪರೀಕ್ಷೆಗೆ ತಯಾರಿ ಹೇಗಿತ್ತು..?

•► 2011ರಲ್ಲಿ ಬಿಇ ಪದವಿ ಪಡೆದ ನಂತರದ ಕೋಚಿಂಗ್ ಪಡೆಯುವ ಸಲುವಾಗಿ ದೆಹಲಿಗೆ ತೆರಳಿ ಅಲ್ಲಿ ಒಂದು ವರ್ಷಗಳ ಕಾಲ ತರಬೇತಿ ಪಡೆದು, ನಂತರ ಬೆಂಗಳೂರಿಗೆ ವಾಪಸಾಗಿ ಜಯನಗರದಲ್ಲಿರುವ ಜೆಎಸ್ಎಸ್ ಕೋಚಿಂಗ್ ಸೆಂಟರ್’ನಲ್ಲಿ ಕೆಲದಿನ ತರಬೇತಿ ಪಡೆದಿದ್ದೆ. ಇದಾದ ಬಳಿಕ ಯಾವುದೇ ಕೋಚಿಂಗ್ ಪಡೆಯಲಿಲ್ಲವಾದರೂ ಜೆಎಸ್ಎಸ್ ಕೋಚಿಂಗ್ ಸೆಂಟರ್’ನ ಲೈಬ್ರರಿಯಲ್ಲಿ ಹೆಚ್ಚಿನ ಕಾಲ ಕುಳಿತು ಓದಿದ್ದು ಬಹಳ ಸಹಾಯಕ ಆಯ್ತು. ನಾನೇನು ದಿನ ನಿತ್ಯ ಇಷ್ಟು ಸಮಯವೇ ಓದಬೇಕು ಎಂಬ ನಿಯಮವನ್ನು ಹಾಕಿಕೊಂಡಿರಲಿಲ್ಲ, ಅಲ್ಲದೇ ಕೆಲವು ಬಾರಿ ವಾರಗಟ್ಟಲೆ ಓದದೆಯೂ ಇರುತ್ತಿದ್ದೆ. ಒಟ್ಟಿನಲ್ಲಿ ದಿನಕ್ಕೆ 6 ಗಂಟೆಕಾಲ ಅಭ್ಯಾಸ ಮಾಡಿದರೂ ಸಾಕು. ಪ್ರಿಲಿಮ್ಸ್ ಮತ್ತು ಮೇನ್ಸ್ ಪರೀಕ್ಷೆ ಸಂದರ್ಭದಲ್ಲಿ ಮಾತ್ರ ಹೆಚ್ಚು ಓದಿದೆ, ಸಂದರ್ಶನಕ್ಕೆ ಸಿದ್ದಗೊಳ್ಳುವ ವೇಳೆ ದೆಹಲಿಯ ಕನ್ನಡ ಸಂಘದಿಂದ ಉತ್ತಮ ಸಹಾಯ ಸಿಕ್ಕಿತ್ತು, ಅಲ್ಲಿನ ಅಣಕು ಸಂದರ್ಶನದಿಂದಾಗಿ ಮುಖ್ಯ ಸಂದರ್ಶನದಲ್ಲಿ ಒಳ್ಳೆಯ ಫಲಿತಾಂಶ ಸಿಕ್ಕಿತು.


●.ತಮ್ಮ ಸಾಧನೆಯ ಹಾದಿ ಹೇಗಿತ್ತು, ತಾವು ಎದುರಿಸಿದ್ದ ಸವಾಲುಗಳು ಹೇಗಿತ್ತು.?

•► ನಮ್ಮದು ಮೇಲ್ಮಧ್ಯಮ ವರ್ಗದ ಕುಟುಂಬವಾಗಿದ್ದು, ಪರೀಕ್ಷೆ ತಯಾರಿ ಸಂದರ್ಭದಲ್ಲಿ ಯಾವುದೇ ಹಣಕಾಸಿನ ತೊಂದರೆ ಎದುರಾಗಿಲ್ಲ. ಅಲ್ಲದೇ ನಾನೂ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಹಾಗಾಗಿ ಆರ್ಥಿಕವಾಗಿ ಸವಾಲುಗಳು ಇರಲಿಲ್ಲ, ಆದರೆ ಮಾನಸಿಕವಾಗಿ ಕೆಲವು ತೊಂದರೆಗಳು ಎದುರಾಗುತ್ತಿದ್ದವು, ಸ್ನೇಹಿತರೆಲ್ಲ ಒಳ್ಳೆಯ ಕೆಲಸಕ್ಕೆ ಸೇರಿ ಕೈತುಂಬ ಸಂಪಾದಿಸುತ್ತಿದ್ದ ದಿನಗಳಲ್ಲಿ ಸುಮ್ಮನೆ ಕುಳಿತು ಓದುವುದು ಕಷ್ಟವಾಗುತ್ತಿತ್ತು, ಸಂಬಂಧಿಕರು, ಹಿತೈಷಿಗಳ ಪ್ರಶ್ನೆಗಳಿಂದ ಹೆಚ್ಚು ಇರಿಸು ಮುರಿಸು ಉಂಟಾಗುತ್ತಿತ್ತು. ಇದನ್ನು ಬಿಟ್ಟರೆ ಬೇರೆ ಯಾವುದು ತೊಂದರೆ ಅನ್ನಿಸಲಿಲ್ಲ.


●.ನಿಮ್ಮ ಸಾಧನೆಗೆ ಕುಟುಂಬ ವರ್ಗದ ಸಹಕಾರ ಹೇಗಿತ್ತು?

•► ನನ್ನ ಸಾಧನೆಗೆ ಪ್ರಮುಖ ಕಾರಣ ತಂದೆ-ತಾಯಿ ಎಂದರೆ ತಪ್ಪಿಲ್ಲ. ಅಮ್ಮ, ನಾನೆಷ್ಟು ಕಷ್ಟ ಅನುಭವಿಸಿದ್ದೇನೆ ಅದಕ್ಕಿಂತ ಹೆಚ್ಚಿನ ಕಷ್ಟವನ್ನು ನನಗಾಗಿ ಪಟ್ಟಿದ್ದಾರೆ. ಅವರ ಆಶಿರ್ವಾದ ಮತ್ತು ಹಾರೈಕೆಯೇ ಈ ಸಾಧನೆಗೆ ಕಾರಣವಾಗಿದೆ. ಇದರೊಂದಿಗೆ ನನ್ನ ಸ್ನೇಹಿತರು ಸಹ ನನ್ನ ಸಾಧನೆಯ ಬೆನ್ನಿಗೆ ನಿಂತ್ತಿದ್ದರು. ನಾನು ಯಾವಾಗಲು ಒಂಟಿಯಾಗಿ ಕುಳಿತು ಓದುತ್ತಿಲಿಲ್ಲ. ಸ್ನೇಹಿತರೊಂದಿಗೆ ಸೇರಿ ಓದುತ್ತಿದ್ದೆ, ಹನುಮಂತ್, ಜಯಂತ್ ಮತ್ತು ಸುನೀಲ್ ಇವರೆಲ್ಲರ ಸಹಾಯ ಮರೆಯಲು ಸಾಧ್ಯವಿಲ್ಲ.


●.ಅಧಿಕಾರಕ್ಕೆ ಬಂದ ಮೇಲೆ ನಿಮ್ಮ ಗುರಿ, ಯೋಜನೆಗಳೇನು?

•► ಸದ್ಯ 48ನೇ ಸ್ಥಾನ ಪಡೆದಿರುವುದೇ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಯಾವುದೇ ಯೋಜನೆಗಳನ್ನು ರೂಪಿಸಿಕೊಂಡಿಲ್ಲ. ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು ಎನ್ನುವ ಆಕಾಂಕ್ಷೆ ಇದೆ. ಯುಪಿಎಸ್’ಸಿ ಯಾವ ಕೆಲಸ ನೀಡದರೂ ಶ್ರದ್ದೆಯಿಂದಲೇ ಮಾಡುತ್ತೇನೆ.


●.ಮುಂದೆ ಯುಪಿಎಸ್’ಸಿ ಪರೀಕ್ಷೆ ತಯಾರಿ ನಡೆಸುತ್ತಿರುವವರಿಗೆ ನಿಮ್ಮ ಕಿವಿಮಾತು.

•► ಒಮ್ಮೆ ಈಜಲು ನೀರಿಗೆ ಬಿದ್ದ ಮೇಲೆ ಗುರಿ ಸಿಗುವವರೆಗೂ ಈಜಿರಿ. ಮಧ್ಯದಲ್ಲಿ ಗುರಿಯಿಂದ ಹಿಂತಿರುಗುವವರ ಸಂಖ್ಯೆ ಜಾಸ್ತಿ ಇದೆ. ಆದರೆ ಈ ರೀತಿ ಮಾಡಬೇಡಿ. ಒಂದು ಬಾರಿ ಸಾಧಿಸಬೇಕು ಎಂದು ಸಂಕಲ್ಪ ಮಾಡಿದ ಮೇಲೆ ಗುರಿ ಮುಟ್ಟುವವರೆಗೂ ನಿಲ್ಲಬೇಡಿ. ಆಗ ಮಾತ್ರ ಸಾಧನೆ ಸಾಧ್ಯ. ಕಷ್ಟಪಟ್ಟು ಓದುವುದಕ್ಕಿಂದ ಇಷ್ಟ ಪಟ್ಟು ಓದಿ, ಉತ್ತಮ ಇಂಗ್ಲೀಷ್ ಭಾಷೆ ಕರಗತ ಮಾಡಿಕೊಳ್ಳಿ, ಧೈರ್ಯವಾಗಿ ಮಾತನಾಡಿ, ಕಾನ್ಫಿಡೆಂಟ್ ಆಗಿರಿ. ಈ ಅಂಶಗಳು ಸಂದರ್ಶನದಲ್ಲಿ ಸಹಾಯಕ್ಕೆ ಬರಲಿದೆ.


●.ಕೊನೆಯದಾಗಿ ಏನನ್ನಾದರೂ ಹೇಳಲು ಬಯಸುವಿರಾ..?

•► ನನ್ನ ಸಾಧನೆಗೆ ಸಹಾಯ ಮಾಡಿದ ಎಲ್ಲಾರಿಗೂ ಧನ್ಯವಾದ ಅರ್ಪಿಸುತ್ತೇನೆ. ಅದರಲ್ಲೂ ನನ್ನ ತಾಯಿ ಮತ್ತು ಸ್ನೇಹಿತರಿಗೆ ನಾನು ಚಿರಋಣಿ.

– ಶ್ರೀನಿಧಿ ಶ್ರೀಕರ್.
(Courtesy : ಸುವರ್ಣನ್ಯೂಸ್)

☀ಯುಪಿಎಸ್’ಸಿ ಪರೀಕ್ಷಾ ತಯಾರಿ : ಯುಪಿಎಸ್’ಸಿನಲ್ಲಿ 922ನೇ ರ್ಯಾಂಕ್ ಸ್ಥಾನ ಪಡೆದ ಗ್ರಾಮೀಣ ಪ್ರತಿಭೆ ಡಾ.ಲಿಂಗರಾಜು ಜೊತೆ ಎಕ್ಸ್’ಕ್ಲೂಸಿವ್ ಸಂದರ್ಶನ : (UPSC Exclusive Interview)

☀ಯುಪಿಎಸ್’ಸಿ ಪರೀಕ್ಷಾ ತಯಾರಿ :
ಯುಪಿಎಸ್’ಸಿನಲ್ಲಿ 922ನೇ ರ್ಯಾಂಕ್ ಸ್ಥಾನ ಪಡೆದ ಗ್ರಾಮೀಣ ಪ್ರತಿಭೆ ಡಾ.ಲಿಂಗರಾಜು ಜೊತೆ ಎಕ್ಸ್’ಕ್ಲೂಸಿವ್ ಸಂದರ್ಶನ :
(UPSC  Exclusive Interview)
━━━━━━━━━━━━━━━━━━━━━━━━━━━━━━━━━━━━━━━━━━━━━


•►ಯುಪಿಎಸ್ ಸಿ ಫಲಿತಾಂಶ  ಪ್ರಕಟವಾಗಿದ್ದು ಶಿವಮೊಗ್ಗದ ಈಎಸ್’ಐ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಲಿಂಗರಾಜು ನಾಯಕ್ 922 ನೇ ರ್ಯಾಂಕ್ ಪಡೆದಿದ್ದಾರೆ. ಇವರು ಸೊರಬ ತಾಲೂಕು ಹಿರೇಮಾಗಡಿ ತಾಂಡಾದ ಅಪ್ಪಟ ಗ್ರಾಮೀಣ ಪ್ರತಿಭೆ. ಇವರು ತಮ್ಮ ಅನುಭವವನ್ನು ನಮ್ಮ ಸುವರ್ಣ ನ್ಯೂಸ್ ನೊಂದಿಗೆ ಹಂಚಿಕೊಂಡಿದ್ದು ಹೀಗೆ.


●.ಸುವರ್ಣ ನ್ಯೂಸ್ :ಪರೀಕ್ಷಾ ತಯಾರಿ ಹೇಗಿತ್ತು?

•►ತಯಾರಿಯನ್ನು 2009 ರಿಂದಲೇ ಶುರು ಮಾಡಿದ್ದೆ. ದೆಹಲಿಯಲ್ಲಿ 10 ತಿಂಗಳು ಕೋಚಿಂಗ್ ಪಡೆದೆ. ಸಮಯ ಸಿಕ್ಕಾಗಲೆಲ್ಲಾ ಓದುತ್ತಿದ್ದೆ. ಅಷ್ಟೊತ್ತಿಗೆ ಮೆಡಿಕಲ್ ಎಕ್ಸಾಮ್ ರಿಸಲ್ಟ್ ಬಂದು ಕೆಲಸ ಸಿಕ್ಕಿತ್ತು. ಆದರೂ ಪ್ರಯತ್ನಪಡುತ್ತಲೇ ಇದ್ದೆ. ಪರೀಕ್ಷೆಗೋಸ್ಕರಾನೇ ಅಂತ ಓದ್ತಾ ಇರಲಿಲ್ಲ. ಯಾವಾಗಲೂ ಅಪ್ಡೇಟ್ ಆಗ್ತಾ ಇದ್ದೆ. ಇದು ಸಹಾಯವಾಯ್ತು. 7 ಸಲ ಅಟೆಂಪ್ಟ್ ಮಾಡಿದೀನಿ. 4 ಮೇನ್ಸ್ ಎಕ್ಸಾಮ್ ಬರ್ದಿದೀನಿ. 4 ನೇ ಮೇನ್ಸ್ ನಲ್ಲಿ ಪಾಸಾಗಿದೀನಿ.


●.ಸು.ನ್ಯೂ:ಡಾಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ನೀವು ಸಮಯ ಹೇಗೆ ಹೊಂದಿಸ್ತಾ ಇದ್ರಿ?

•►ಕಷ್ಟವಾಗ್ತಾ ಇತ್ತು.  ಬೆಳಿಗ್ಗೆ 9-12, ಮದ್ಯಾಹ್ನ 4-7 ಆಸ್ಪತ್ರೆಯ ಕೆಲಸದ ಅವಧಿ. ಪೇಷಂಟ್ ಗಳು ಜಾಸ್ತಿಯಿದ್ದರೆ ಕೆಲಸ ಮುಗಿತಾ ಇರಲಿಲ್ಲ. ಮನೆಗೆ ಬರಬೇಕಾದ್ರೆ ತಲೆ ಫ್ರೀ ಮಾಡ್ಕೊಂಡು ಬರ್ತಿದ್ದೆ. ಮನೆಗೆ ಬಂದು ಓದ್ತಾ ಇದ್ದೆ. ಪರೀಕ್ಷಾ ಸಮಯದಲ್ಲಿ ಒಂದೆರಡು ತಿಂಗಳು ರಜೆ ಹಾಕಿ ಕೋಚಿಂಗ್ ಗೆ ಹೋಗ್ತಿದ್ದೆ. ಮನಸ್ಸಿದ್ದರೆ ಏನು ಬೇಕಾದ್ರೂ ಮಾಡಬಹುದು. ಹಾಗಾಗಿ ನನಗೆ ಒತ್ತಡಗಳಿದ್ದರೂ ಅದು ಕಲಿಕೆಗೆ ಅಡ್ಡ ಬರಲಿಲ್ಲ.


●.ಸು.ನ್ಯೂ:ವೃತ್ತಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ನಿಮಗೆ ಈ ಆಲೋಚನೆ ಯಾಕೆ ಬಂತು?

•►ಹೌದು.ವೈದ್ಯನಾಗಿ ಸಮಾಜ ಸೇವೆ ಮಾಡ್ತಾ ಇದ್ದೀನಿ. ಎಂಬಿಬಿಸ್ ಜೊತೆಗೆ ಎಂಡಿ ಮಾಡಿಕೊಂಡು ಆರಾಮಾಗಿ ಹಣ  ಗಳಿಸಬಹುದಿತ್ತು. ನನ್ನ ಸ್ನೇಹಿತರೆಲ್ಲರೂ ಹಾಗೆ ಹೇಳಿದರು. ಆದರೆ ನನಗೆ ಹಣ ಮಾಡೋದಕ್ಕಿಂತ ಹೆಚ್ಚಾಗಿ ಸಮಾಜಕ್ಕೆ, ಜನರಿಗೆ ಅನುಕೂಲವಾಗುವಂತ ಕೆಲಸ ಮಾಡಬೇಕು ಅನ್ನೋದು ಆಸೆಯಾಗಿತ್ತು. ಅದು ಅಲ್ಲದೇ ನಾನು ಬಂದಿರೋದು ಹಳ್ಳಿಯಿಂದ. ಅಲ್ಲಿನ ಕಷ್ಟಗಳು, ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ನೋಡಿ ಬೆಳೆದವನು. ಹಾಗಾಗಿ ನಮ್ಮ ಹಳ್ಳಿಗಾಗಿ, ನನ್ನ ಹಾಗೆ ಯಾರೂ ಕಷ್ಟಪಡಬಾರದು. ಅವರಿಗಾಗಿ ನಾನು ಏನಾದರೂ ಸೇವೆ ಮಾಡಬೇಕು ಎಂದು ಚಿಕ್ಕಂದಿನಿಂದಲೇ ಅನಿಸ್ತಾ ಇತ್ತು. ಇದೇ ನನಗೆ ದೊಡ್ಡ ಮೋಟಿವೆಶನ್ ಎಂದರೆ ತಪ್ಪಾಗಲಾರದು.


●.ಸು.ನ್ಯೂ:ಹಳ್ಳಿಯಲ್ಲಿ ಹುಟ್ಟಿ, ಕನ್ನಡ ಮಾದ್ಯಮದಲ್ಲಿ ಕಲಿತ ನಿಮಗೆ ಯುಪಿಎಸ್ ಇ ಪರೀಕ್ಷೆ ಎದುರಿಸುವುದು ಕಷ್ಟ ಎನಿಸಲಿಲ್ಲವೇ?

•►ಪ್ರಾರಂಭದಲ್ಲಿ ಹಿಂಜರಿಕೆ ಇತ್ತು. ಆದರೂ ನಾನು ಸಾಧಿಸುತ್ತೇನೆ ಎಂಬ ನಂಬಿಕೆಯಿತ್ತು. ಸಿಟಿಯಲ್ಲಿರುವವರಿಗೂ ನಮಗೆ ಇಂಗ್ಲೀಷ್ ಭಾಷೆಯ ಬಗ್ಗೆ ಅಂತರವಿರುತ್ತದೆ. ಆದರೆ ವಿಷಯ ಜ್ಞಾನವಿತ್ತು. ಇಂಗ್ಲೀಷ್ ಅಗತ್ಯ. ಆದರೆ ಅದೇ ಅಂತಿಮವಲ್ಲ. ಇಂಗ್ಲೀಷ್ ಬಂದ ಮಾತ್ರಕ್ಕೆ ಪರೀಕ್ಷೆ ಪಾಸು ಮಾಡಲು ಸಾಧ್ಯವಿಲ್ಲ. ಅದು ಒಂದು ಮಾದ್ಯಮವಷ್ಟೇ. ಹಾಗಾಗಿ ಪರೀಕ್ಷೆ ಬರೆಯಬೇಕು ಎನ್ನುವವರು ನಾನು ಹಳ್ಳಿಯಿಂದ ಬಂದಿದೀನಿ, ನನಗೆ ಇಂಗ್ಲೀಷ್ ಅಷ್ಟು ಚೆನ್ನಾಗಿ ಬರಲ್ಲ ಅಂತೆಲ್ಲಾ ಹಿಂಜರಿಕೆ ಬೇಡ. ಸಾಧಿಸಬೇಕು ಅಂತಿದ್ದರೆ ಇವ್ಯಾವುವು ಅಡ್ಡ ಬರುವುದಿಲ್ಲ.


●.ಸು.ನ್ಯೂ:ನೀವು ಬೆಳೆದು ಬಂದ ಹಾದಿಯನ್ನು ಹೇಳ್ತಿರಾ?

•►ನಾನು ಚಿಕ್ಕಂದಿನಿಂದಲೂ ಕೆಟ್ಟ ಹಠವಾದಿ. ಮೆಡಿಕಲ್ ಸೀಟು ಬೇಕು ಅನಿಸ್ತು. ಸೋ ಎಫರ್ಟ್ ಹಾಕ್ದೆ. ಸೀಟು ಸಿಕ್ತು. ಒಳ್ಳೆ ಮಾರ್ಕ್ಸ್ ಸಿಕ್ತು. ಆವಾಗ ನಾನ್ಯಾಕೆ ಯುಪಿಎಸ್ ಗೆ ಪ್ರಯತ್ನಪಡಬಾರದು ಅನಿಸ್ತು. ಅವತ್ತಿನಿಂದಲೇ ಓದಲು ಶುರು ಮಾಡಿದೆ. ಅಪ್ಪ, ಅಮ್ಮ ವಿದ್ಯಾವಂತರಲ್ಲ. ನನಗೆ ಯಾರೂ ಗೈಡ್ ಮಾಡಲಿಕ್ಕೆ ಇರಲಿಲ್ಲ. ನನಗೆ ನಾನೇ ಮೋಟಿವೇಶನ್. ನನ್ನ ಸ್ವಪ್ರಯತ್ನದಿಂದ ಕಲಿತಾ ಇದ್ದೆ. ನಾನು ಬೆಳೆದು ಬಂದ ದಾರಿ, ಎದುರಿಸಿದ ಕಷ್ಟಗಳು ಅದೇ ನನ್ನನ್ನು ಈ ಮಟ್ಟಕ್ಕೆ ಬೆಳೆಯಲು ಪ್ರೇರೆಪಿಸಿತು.


●.ನಿಮ್ಮ ಮುಂದಿನ ಗುರಿಯೇನು?

•►ಐಎಎಸ್ ಗೆ ಮತ್ತೊಮ್ಮೆ ಪ್ರಯತ್ನಪಡ್ತೀನಿ. ನನಗೆ ಬಹಳ ಆಸೆ ಇದೆ ಐಎಎಸ್ ಪಾಸ್ ಮಾಡಬೇಕು ಅಂತ. ನನ್ನ ಹಾಗೆ ಕಷ್ಟದಿಂದ ಬೆಳೆದು ಬಂದವರಿಗೆ ಯುಪಿಎಸ್ ಸಿ ತಯಾರಿಗೆ ಸಹಾಯ ಮಾಡಬೇಕು ಅಂತಿದೀನಿ. ಇನ್ನು ನಿರೀಕ್ಷೆ ಜಾಸ್ತಿಯಿತ್ತು. ಪರವಾಗಿಲ್ಲ ಫಲಿತಾಂಶ ಖುಷಿ ಕೊಟ್ಟಿದೆ. ಐಆರ್ ಎಸ್ ಸೇವೆ ಸಿಗಬಹುದು. ಆಡಳಿತದಲ್ಲಿ ಇನ್ನಷ್ಟು ಬದಲಾವಣೆ ತರಲು ಪ್ರಯತ್ನಿಸುತ್ತೇನೆ. ಜನರ ಸೇವೆಗಾಗಿ ಸದಾ ಸಿದ್ಧ.


●.ಸು.ನ್ಯೂ:ಯುಪಿಎಸ್ ಸಿ ಮಹತ್ವಾಕಾಂಕ್ಷಿಗಳಿಗೆ ನಿಮ್ಮ ಸಲಹೆ?

•►ಮೊದಲು ಗುರಿ ಸ್ಪಷ್ಟ  ಇರಬೇಕು. ನಾನು ಏನು ಮಾಡಬೇಕು ಅನ್ನೊದು ಸ್ಪಷ್ಟ ಇದ್ದರೆ ಅರ್ಧ ಕೆಲಸ ಮುಗಿದಂತೆ. ಮೊದಲ ಪ್ರಯತ್ನದಲ್ಲಿ ಯಶಸ್ವಿಯಾಗಿಲ್ಲ ಅಂತ ನಿರಾಶೆಯಾಗಿ ಪ್ರಯತ್ನ ಬಿಡಬಾರದು. ಬೇರೆಯವರಿಗೆ ನಿಮ್ಮನ್ನು ಹೋಲಿಸಿಕೊಳ್ಳಬೇಡಿ. ಅವರು ಬೆಳೆದು ಬಂದ ದಾರಿ, ಹಿನ್ನೆಲೆ, ನಿಮ್ಮ ದಾರಿ, ಹಿನ್ನೆಲೆ ವಿಭಿನ್ನವಾಗಿರುತ್ತದೆ. ನಿಮ್ಮ ಗುರಿ ಸ್ಪಷ್ಟವಿರಲಿ. ಆಗ ಗೆಲುವು ನಿಮ್ಮದೆ.
                                                                                                                ●.ಸಂದರ್ಶನ-ಶ್ರೀಲಕ್ಷ್ಮೀ ಎಚ್. ಎಲ್.
(Courtesy : ಸುವರ್ಣ ನ್ಯೂಸ್ )

Monday, 22 February 2016

■.ಮುಂಬರುವ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗಳ ತಯರಿ :— ಭಾಗ-I (UPSC, KPSC Examination Preparation :— PART-I)

■.ಮುಂಬರುವ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗೆಗಳ ತಯಾರಿ :— ಭಾಗ-I
(UPSC, KPSC Examination Preparation :— PART-I)
━━━━━━━━━━━━━━━━━━━━━━━━━━━━━━━━━━━━━━━


ಇತ್ತೀಚೆಗೆ ನಾಗರಿಕ ಸೇವೆಗಳ (ಐಎಎಸ್‌, ಐಎಫ್‌ಎಸ್‌, ಐಪಿಎಸ್‌) ಮುಖ್ಯ ಪರೀಕ್ಷೆ ಫಲಿತಾಂಶ  ಹೊರಬಿದ್ದಿದ್ದು, ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವವರ ಪಟ್ಟಿಯನ್ನು ಯುಪಿಎಸ್‌ಸಿ ಅಧಿಕೃತ ವೆಬ್‌ಸೈಟ್‌ www.upsc.gov.in ನಲ್ಲಿ ಪ್ರಕಟಿಸಲಾಗಿದೆ. ಅಲ್ಲದೆ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡವರು ಮಾರ್ಚ್‌ 8 ರಂದು ನಡೆಯುವ ಸಂದರ್ಶನಕ್ಕೆ ಹಾಜರಾಗಲು ಸೂಚಿಸಿದ್ದು

ಸದ್ಯದಲ್ಲೇ ಕೆಪಿಎಸ್‌ಸಿಯು ನಡೆಸಿದ ಕೆಎಎಸ್ ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟಿಸುವ ಸಿದ್ಧತೆಯಲ್ಲಿರುವುದು. ಕೆಎಎಸ್ ಅಕಾಂಕ್ಷಿಗಳೂ ಕೂಡಾ ಸಂದರ್ಶನದ ತಯಾರಿಯಲ್ಲಿರಬೇಕು.

ಅಭ್ಯರ್ಥಿಗಳು ತಮ್ಮ ಅಧ್ಯಯನ ವಿಷಯಗಳನ್ನು ಅವಲೋಕಿಸಿ ತಯಾರಾಗಲು ಸಮಯ ತುಂಬಾ ಕಡಿಮೆ ಇರುವುದನ್ನು ಗಮನಿಸಬೇಕು.
ದಿನಪತ್ರಿಕೆಗಳನ್ನು ಓದಿ ಪ್ರಪಂಚದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಜ್ಞಾನವನ್ನು ಅವಲೋಕಿಸಿಕೊಳ್ಳುತ್ತಾ, ನೀವು ಸಂದರ್ಶನಕ್ಕೆ ಸಿದ್ಧರಾಗಿದ್ದೀರಾ ಎಂಬುದನ್ನು ನೀವೇ ಪರೀಕ್ಷಿಸಿಕೊಳ್ಳಿ.

ನನ್ನ ಜ್ಞಾನ ಪರಿಮಿತಿಯಲ್ಲಿ ಗಮನಕ್ಕೆ ಬಂದ ಮುಂಬರುವ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗೆಗಳ ತಯಾರಿಗಾಗಿ ಬಹುಮಟ್ಟಿಗೆ ಸಹಕಾರಿಯಾಗಬಹುದಾದ ಕೆಲವು ಮಹತ್ವದ ಪ್ರಚಲಿತ ಘಟನೆಗಳನ್ನಾಧರಿಸಿದ ಅಂಶಗಳನ್ನು ನಾನು ಈ 'ಸ್ಪರ್ಧಾಲೋಕ'ದಲ್ಲಿ ತಕ್ಕಮಟ್ಟಿಗೆ ಭಾಗಗಳಲ್ಲಿ ವಿಂಗಡಿಸಿ ನಿಮ್ಮ ಮುಂದಿಡಲು ಪ್ರಯತ್ನಿಸುತ್ತಿದ್ದೇನೆ.

ಇದರ ಹೊರತು 'ಸ್ಪರ್ಧಾಲೋಕ'ದಲ್ಲಿ ಇನ್ನೂ ಅತ್ಯುತ್ತಮ ಮಾಹಿತಿಯನ್ನು ಸೇರ್ಪಡೆಗೊಳ್ಳಬೇಕು ಎಂದೆನಿಸಿದ್ದಲ್ಲಿ, ನಿಮ್ಮ ಹತ್ತಿರವಿರುವ ಮಾಹಿತಿಯನ್ನು ಹಂಚಿಕೊಳ್ಳಿ. ಅಭ್ಯರ್ಥಿಗಳಿಗೆ ಅವರ ಗುರಿ ತಲುಪುವಲ್ಲಿ ಕೈಜೋಡಿಸಿ.


■.ಭಾಗ-I.■
━━━━━━━━

1) ಸುಸ್ಥಿರ ಅಭಿವೃದ್ಧಿ ಮತ್ತು ಭಾರತದಲ್ಲಿ ಸುಸ್ಥಿರ ಅಭಿವೃದ್ಧಿ ಕುರಿತು ಇತ್ತೀಚಿನ ಬೆಳವಣಿಗೆ.

•► ಸುಸ್ಥಿರ ಅಭಿವೃದ್ಧಿ ಗುರಿಗಳು (SDG's). ಜಾಗತಿಕ ಸ್ಪಂದನೆ.

•► ಸುಸ್ಥಿರ ಅಭಿವೃದ್ಧಿ ಗುರಿಗಳು ಮತ್ತು ಆರೋಗ್ಯ.

•► ಸುಸ್ಥಿರ ಅಭಿವೃದ್ಧಿ ಗುರಿಗಳು ಮತ್ತು ಭಾರತ.


2) ಸಹಸ್ರಮಾನ ಅಭಿವೃದ್ಧಿ ಗುರಿಗಳು ( MDG's) ಮತ್ತು ಭಾರತ.

•► MDG's ಗುರಿಗಳನ್ನು ಭಾರತ ಸಂಪೂರ್ಣವಾಗಿ ಸಾಧಿಸಿದೆಯೇ?

•► MDG's ಗುರಿಗಳ ಸಾಧನೆಗೆ ಎದುರಾದ ಸವಾಲುಗಳು.

•► MDG's ಗುರಿಗಳನ್ನೇ ಸಾಧಿಸಲು ಸಾಧ್ಯವಾಗದ ಭಾರತವು SDG's ಗುರಿಗಳನ್ನು ಹೇಗೆ ತಾನೇ ಅನುಷ್ಠಾನಗೊಳಿಸುವುದು?


3) Swachh Bharath abhiyan ಬಗ್ಗೆ ಇಲ್ಲಿಯವರೆಗಿನ ಏಳು-ಬೀಳು.

•► ಸ್ವಚ್ಛ ಭಾರತ ಅಭಿಯಾನದ ಪರಿಣಾಮಕಾರಿ ಅನುಷ್ಠಾನಕ್ಕೆ ನಿಮ್ಮ ಸಲಹೆಗಳು.

•► ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛ ಭಾರತ ಅಭಿಯಾನದ ಅನುಷ್ಠಾನ. ಸವಾಲು -ಪರಿಹಾರ ಕ್ರಮಗಳು.

•► ಸ್ವಚ್ಛ ಭಾರತ ಮತ್ತು ಸೆಸ್


4) Make in India slogan ಹಾಗೂ ಜಾಗತಿಕ ಪಾಲ್ಗೊಳ್ಳುವಿಕೆ.

•► Make in Indiaದ ಭಾರತದ ರಾಜ್ಯವಾರು ಪ್ರಗತಿ.(especially Karnataka)


5) ಕೇಂದ್ರ ಸರ್ಕಾರದ ‘ಭೂಸ್ವಾಧೀನ ತಿದ್ದುಪಡಿ ಮಸೂದೆ’

•►  ‘ಭೂಸ್ವಾಧೀನ ತಿದ್ದುಪಡಿ ಮಸೂದೆ’ಯು ರೈತರ ಮೇಲೆ ಪರಿಣಾಮ ಬೀರಬಹುದು?


6) 'ಡಿಜಿಟಲ್‌ ಭಾರತ' ಕನಸಿಗೆ ಪೂರಕವಾಗಿ ದೇಶದಲ್ಲಿ ನಗದು ರಹಿತ ಆರ್ಥಿಕ ವ್ಯವಸ್ಥೆಗೆ ಜನಧನ ಯೋಜನೆಯ ಕೊಡುಗೆ.


7).ಸ್ಮಾರ್ಟ್ ಸಿಟಿ ಯೋಜನೆ-ಭವಿಷ್ಯ.

•► ಗ್ರಾಮೀಣ ಭಾರತದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಅನುಷ್ಠಾನದ ವಿಮರ್ಶೆ.


8).ಹೊಸ ಪಿಂಚಣಿ ಯೋಜನೆ (New Pension Scheam; NPS)


9).ಸ್ಟಾರ್ಟ್ ಅಪ್, ಸ್ಮಾರ್ಟ್ ಅಪ್ ಯೋಜನೆಗಳು.

•► ಸ್ಟಾರ್ಟ್ ಅಪ್ ಯೋಜನೆ ಮತ್ತು ಗ್ರಾಮೀಣ ಗುಡಿ ಕೈಗಾರಿಕೆಗಳು.

10).ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ (Inclusive Growth)

11).ಇಂಪ್ರಿಂಟ್ ಇಂಡಿಯಾ-ಸವಾಲುಗಳು.

12).ಏಕ್ ಭಾರತ್ ಶ್ರೇಷ್ಠ ಭಾರತ್ ಯೋಜನೆ.

13).ಹೆಣ್ಣು ಮಕ್ಕಳ ಸುರಕ್ಷತೆ ಹಾಗೂ ಭವಿಷ್ಯ ರೂಪಿಸುವಲ್ಲಿ ‘ಬೇಟಿ ಬಚಾವೋ, ಬೇಟಿ ಪಢಾವೋ’ ಯೋಜನೆಯ ಅವಲೋಕನ.

.
--------------------------------------------------------------------------------------------------------------


14).ವಿಶೇಷವಾಗಿ ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗಾಗಿ...

•► ದೇಶದ GDPಗೆ ಕರ್ನಾಟಕ ರಾಜ್ಯದ ಕೊಡುಗೆ.

•► ಕರ್ನಾಟಕದ ರಾಜ್ಯದ ಪ್ರವಾಸೋದ್ಯಮ. ಅಭಿವೃದ್ಧಿಗೆ ನಿಮ್ಮ ಸಲಹೆಗಳು.

•► ಕರ್ನಾಟಕದ ಭೌಗೋಳಿಕ ವೈಪರೀತ್ಯ (ಪ್ರಾದೇಶಿಕ ಅಸಮಾನತೆ) . (North-South)

•► ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ. -ತಡೆಯಲು ತತ್ ಕ್ಷಣದ ಪ್ರಯತ್ನಗಳು.

•► ನದಿ ನೀರಿನ ಹಂಚಿಕೆ ವಿವಾದಗಳು-ಪರಿಹಾರ.

•► ಒಂದು ಕಾಲದಲ್ಲಿ ಭ್ರಷ್ಟಾಚಾರವನ್ನು ತಡೆಯುವ ಕೆಲಸ ಮಾಡುತ್ತಾ ಲೋಕಾಯುಕ್ತ ಸಂಸ್ಥೆಗೆ ದೇಶದಲ್ಲೆಲ್ಲಾ ಮನ್ನಣೆ ತಂದುಕೊಟ್ಟ ಕರ್ನಾಟಕದ ಲೋಕಾಯುಕ್ತ, ಅದರ ಕಚೇರಿಯಲ್ಲಿಯೇ ಇಂದು ಭ್ರಷ್ಟಾಚಾರ ನಡೆದಿದೆ ಎಂಬ ಆಪಾದನೆ ಕಂಡುಬಂತು. ಯಾಕೆ?

•► ಕಳೆದ 3 ವರ್ಷಗಳಿಂದ ಅತೀ ಹೆಚ್ಚು ಡ್ರಗ್ಸ್ ವಹಿವಾಟು (ಮಾದಕ ವಸ್ತುಗಳ ಕಳ್ಳಸಾಗಣೆ ಮತ್ತು ಮಾರಾಟ) ಕರ್ನಾಟಕದಲ್ಲಿ ಬಹು ವ್ಯಾಪಕವಾಗಿ ನಡೆದಿದೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣಗಳೇನು,? ಹೇಗೆ ನಿಯಂತ್ರಿಸಬಹುದು?

•► ಡ್ರಗ್ಸ್ ವಹಿವಾಟಿಗೆ ಹೆಚ್ಚಾಗಿ ಯುವತಿಯರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಯಾಕೆ?

•► ಕರ್ನಾಟಕದಲ್ಲಿ ವಿದೇಶಿಗರ ವಲಸಿಗರ ಸಮಸ್ಯೆ.

•► 'ಇನ್‌ವೆಸ್ಟ್ ಕರ್ನಾಟಕ-2016'ದ ಪ್ರಸ್ತುತತೆ ಮತ್ತು ಅದರ ಮುಂದಿನ ಸವಾಲುಗಳು.

•► ಉದ್ಯೋಗಾಧಾರಿತ ಹಾಗೂ ಕೌಶಲ್ಯಾಧಾರಿತ ಶಿಕ್ಷಣ ಕೊಡುವ ಯೋಜನೆ

•► ಕನ್ನಡದ ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಿಸುವಲ್ಲಿ ಯಕ್ಷಗಾನ ನೃತ್ಯ ಹಾಗು ಸಾಹಿತ್ಯ.

•► ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಮಸೂದೆ–2015’

.
--------------------------------------------------------------------------------------------------------------


15) ಭಾರತದ ನೆರೆಯ ದೇಶಗಳೊಂದಿಗಿನ ಸಂಬಂಧ (specially with ಚೀನಾ, ಪಾಕಿಸ್ತಾನ, ದಕ್ಷಿಣ ಪೂರ್ವ ಮತ್ತು ದಕ್ಷಿಣ ಏಷ್ಯಾದ ರಾಷ್ಟ್ರಗಳು)

•► ಪಾಕಿಸ್ತಾನ ಮತ್ತು ಶಾಂತಿ ಮಾತುಕತೆ ಕುರಿತಾದ ಕೇಂದ್ರದ ನೀತಿಯನ್ನು ಬದಲಿಸುವ ಅಗತ್ಯವಿದೆಯೇ? ಇತ್ತೀಚಿನ ಪಠಾಣಕೋಟ್ ಘಟನೆಯ ಗಂಭೀರತೆಯೊಂದಿಗೆ ನಿಮ್ಮ ಅಭಿಪ್ರಾಯ ತಿಳಿಸಿ.              

•► ಪಾಕಿಸ್ತಾನದೊಂದಿಗೆ ಭಯೋತ್ಪಾದನೆ ಹಾಗೂ ಶಾಂತಿ ಮಾತುಕತೆಯನ್ನು ಪ್ರತ್ಯೇಕ ವಿಷಯವಾಗಿಟ್ಟುಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೇ?    

•► ‘ಹೊಸ ಸಿಲ್ಕ್ ರೂಟ್ ಪ್ರಾಜೆಕ್ಟ್’, ಮಾರಿಟೈಮ್​ಸಿಲ್ಕ್ ರೋಡ್’,

•► ದಕ್ಷಿಣ ಚೀನಾ ಸಾಗರದ ಮೇಲೆ ಭಾರತ-ಚೀನಾಗಳ ಒಡೆತನ ಸ್ಥಾಪಿಸುವಲ್ಲಿ ಜಟಾಪಟಿ.

•► ಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲಿ ಭಾರತದ ಸ್ಥಾಮಾನ. ವಿದೇಶಿ ವ್ಯಾಪಾರದ ಪಾತ್ರ.

•► ವಿಶ್ವದ ಎರಡನೇ ದೊಡ್ಡ ಆರ್ಥಿಕ ಶಕ್ತಿಯಾಗಿರುವ ಚೀನಾದ ಆರ್ಥಿಕತೆ ಕುಸಿದಿರುವುದು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡಿದೆಯೇ?

•► ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ.

•► ಭಾರತ-ಬಾಂಗ್ಲಾ  ದೇಶಗಳ ನಡುವೆ ಪರಾವೃತವಾಗಿರುವ ಭೂಮಿಯನ್ನು ವಿನಿಮಯ ಮಾಡಿಕೊಳ್ಳುವ ಮಸೂದೆ ಅಂಗೀಕಾರ.

•► ಭಾರತ-ಬಾಂಗ್ಲಾ ಭೂ ಗಡಿ ಒಪ್ಪಂದವು ಉಭಯ ದೇಶಗಳ ಬಾಂಧವ್ಯವೃದ್ಧಿಗೆ ಪೂರಕವಾಗುವುದೇ? ಅಕ್ರಮ ನುಸುಳುವಿಕೆ, ಪುನರ್ವಸತಿ, ಜನಾಂಗೀಯ ಘರ್ಷಣೆ ಮುಂತಾದವು ಪ್ರಬಲ ಸವಾಲುಗಳಾಗಲಿವೆಯೇ?
.
..ಮುಂದುವರಿಯುವುದು.