"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday 22 July 2015

☀ UNIT: Ⅱ) ಸಂಧಿಗಳು: (ಸಂಸ್ಕೃತ ಸಂಧಿಗಳು)...ಮುಂದುವರಿದ ಭಾಗ. (Kannada Grammar)

☀ UNIT: Ⅱ) ಸಂಧಿಗಳು: (ಸಂಸ್ಕೃತ ವ್ಯಂಜನ ಸಂಧಿಗಳು)...ಮುಂದುವರಿದ ಭಾಗ.
(Kannada Grammar)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕನ್ನಡ ಸಾಹಿತ್ಯ
(Kannada Literature)

★ ಕನ್ನಡ ವ್ಯಾಕರಣ
(Kannada Grammar)


●.೨. ಸಂಸ್ಕೃತ ವ್ಯಂಜನ ಸಂಧಿಗಳು
━━━━━━━━━━━━━━━━━━━━━

●.(೧) ಜಶ್ತ್ವಸಂಧಿ
•┈┈┈┈┈┈┈┈┈┈┈┈┈┈┈┈•
— ಜಶ್ ಎಂದರೆ ಸಂಸ್ಕೃತ ವ್ಯಾಕರಣದಲ್ಲಿ ಜಬಗಡದ ಈ ಐದು ವ್ಯಂಜನಗಳನ್ನು ತಿಳಿಸುವ ಒಂದು ಸಂಜ್ಞೆ.  ಜಶ್ತ್ವ ಎಂದರೆ ಈ ಐದು ವರ್ಣಗಳಾದ ಜಬಗಡದ ವ್ಯಂಜನಗಳು ಆದೇಶವಾಗಿ ಬರುವುದು ಎಂದು ಅರ್ಥ. 

— ಯಾವ ಅಕ್ಷರಕ್ಕೆ ಇವು ಆದೇಶವಾಗಿ ಬರುತ್ತವೆ? ಎಂಬ ಬಗೆಗೆ ತಿಳಿಯೋಣ.
(೧) ದಿಗಂತದಲ್ಲಿ ಪಸರಿಸಿತು.
(೨) ಅಜಂತ ಎಂದರೆ ಸ್ವರಾಂತ ಎಂದು ಸಂಜ್ಞೆ.
(೩) ಷಣ್ಮುಖನಿಗೆ ಷಡಾನನ ಎಂಬ ಹೆಸರೂ ಉಂಟು.
(೪) ಆ ಹುಡುಗನ ಹೆಸರು ಸದಾನಂದ ಎಂದು.
(೫) ಅಬ್ಧಿ ಎಂದರೆ ಸಾಗರಕ್ಕೆ ಹೆಸರು.

— ಈ ವಾಕ್ಯಗಳಲ್ಲಿ ಬಂದಿರುವ ದಿಗಂತ, ಅಜಂತ, ಷಡಾನನ, ಸದಾನಂದ, ಅಬ್ಧಿ ಈ ಶಬ್ದಗಳನ್ನು ಬಿಡಿಸಿ ಬರೆದರೆ__
ದಿಕ್ + ಅಂತ = ದಿಗ್ + ಅಂತ = ದಿಗಂತ (ಪೂರ್ವದ ಕಕಾರಕ್ಕೆ ಗಕಾರಾದೇಶ)
(ಕ್ + ಅ = ಗ್‌ಅ)
ಅಚ್ + ಅಂತ = ಅಜ್ + ಅಂತ = ಅಜಂತ (ಚಕಾರಕ್ಕೆ ಜಕಾರಾದೇಶ)
(ಚ್ + ಅ = ಜ್‌ಅ)
ಷಟ್ + ಆನನ = ಷಡ್ + ಆನನ = ಷಡಾನನ (ಟಕಾರಕ್ಕೆ ಡಕಾರಾದೇಶ)
(ಟ್ + ಅ = ಡ್‌ಅ)
ಸತ್ + ಆನಂದ = ಸದ್ + ಆನಂದ = ಸದಾನಂದ (ತಕಾರಕ್ಕೆ ದಕಾರಾದೇಶ)
(ತ್ + ಆ = ದ್‌ಆ)
ಅಪ್ + ಧಿ = ಅಬ್ + ಧಿ = ಅಬ್ಧಿ (ಪಕಾರಕ್ಕೆ ಬಕಾರಾದೇಶ)
(ಪ್ + ಧಿ = ಬ್‌ಧಿ)

— ಮೇಲಿನ ಈ ಐದೂ ಉದಾಹರಣೆಗಳನ್ನು ಲಕ್ಷ್ಯವಿಟ್ಟು ನೋಡಿದಾಗ, ಪೂರ್ವಶಬ್ದದ ಅಂತ್ಯದಲ್ಲಿರುವ  ಕ್, ಚ್, ಟ್, ತ್, ಪ್ ಗಳಿಗೆ ಕ್ರಮವಾಗಿ ಗ್, ಜ್, ಡ್, ದ್, ಬ್ ಗಳು ಆದೇಶಗಳಾಗಿ ಬಂದಿವೆ.  ಈ ಪೂರ್ವ ಶಬ್ದದಲ್ಲಿರುವ ವರ್ಗಪ್ರಥಮವರ್ಣಗಳಿಗೆ ಅದೇ ವರ್ಗದ ಮೂರನೆಯ ವರ್ಣಗಳು ಆದೇಶಗಳಾಗಿ ಬರುವ ಸಂಧಿಯು ಸಂಸ್ಕೃತ ಶಬ್ದಗಳೇ ಎರಡೂ ಆಗಿದ್ದಾಗ ಮಾತ್ರ ಬರುವುದು.

★ ಕನ್ನಡದಲ್ಲೂ ಕತಪ ಗಳಿಗೆ ಗದಬ ಗಳು ಆದೇಶವಾಗಿ ಬರುವುದುಂಟು.  ಆದರೆ ಕತಪ ಗಳು ಉತ್ತರಪದದ ಆದಿಯಲ್ಲಿರಬೇಕು.  ಇದು ಕೇವಲ ಕನ್ನಡದ ಆದೇಶಸಂಧಿಯೆಂದು ತಿಳಿಯಬೇಕು. 
— ಹೀಗೆ ಪೂರ್ವ ಶಬ್ದದ ಕೊನೆಯ ಕಚಟತಪ ಗಳಿಗೆ ಗಜಡದಬ ಗಳು ಆದೇಶವಾಗಿ ಬರುವುದೇ ಜಶ್ತ್ವಸಂಧಿಯೆನಿಸುವುದು.

●.ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.
— (೨೪) ಪೂರ್ವಶಬ್ದದ ಕೊನೆಯಲ್ಲಿರುವ ಕಚಟತಪ ವ್ಯಂಜನಗಳಿಗೆ ಯಾವ ವರ್ಣ ಪರವಾದರೂ (ಎದುರಿಗೆ ಬಂದರೂ) ಪ್ರಾಯಶಃ ಅದೇ ವರ್ಗದ ಮೂರನೆಯ ವ್ಯಂಜನಾಕ್ಷರಗಳು ಆದೇಶಗಳಾಗಿ ಬರುತ್ತವೆ. ಇದಕ್ಕೆ ಜಶ್ತ್ವಸಂಧಿಯೆನ್ನುವರು.

★ ಪ್ರಾಯಶಃ ಎಂದು ಹೇಳಿರುವುದರಿಂದ ಕಖ, ಚಛ, ಟಠ, ತಥ, ಪಫ, ಸ, ಷ, ಙ, ಞ, ಣ, ನ, ಮ ಅಕ್ಷರಗಳು ಪರವಾದರೆ (ಎದುರಿಗೆ ಬಂದರೆ) ಮೂರನೆಯ ಅಕ್ಷರಗಳು ಆದೇಶವಾಗಿ ಕೆಲವು ಕಡೆ ಬರುವುದಿಲ್ಲ. ಅಂದರೆ ಜಶ್ತ್ವಸಂಧಿಯಾಗುವುದಿಲ್ಲ.

ಉದಾಹರಣೆಗೆ:-
ವಾಕ್+ದೇವಿ=ವಾಗ್‌ದೇವಿ=ವಾಗ್ದೇವಿ(ಕಕಾರಕ್ಕೆ ಗಕಾರಾದೇಶ)

ವಾಕ್+ದಾನ=ವಾಗ್‌ದಾನ=ವಾಗ್ದಾನ(           ”            )

ವಾಕ್+ಅಧಿಪ=ವಾಗ್‌ಅಧಿಪ=ವಾಗಧಿಪ(           ”            )

ದಿಕ್+ದೇಶ=ದಿಗ್‌ದೇಶ=ದಿಗ್ದೇಶ(           ”            )

ದಿಕ್+ದಿಗಂತ=ದಿಗ್‌ದಿಗಂತ=ದಿಗ್ದಿಗಂತ(           ”            )

ದಿಕ್+ದೇವತೆ=ದಿಗ್‌ದೇವತೆ=ದಿಗ್ದೇವತೆ(           ”            )

ಅಚ್+ಅಂತ=ಅಜ್‌ಅಂತ=ಅಜಂತ(ಚಕಾರಕ್ಕೆ ಜಕಾರಾದೇಶ)

ಅಚ್+ಆದಿ=ಅಜ್‌ಆದಿ=ಅಜಾದಿ(           ”            )

ಷಟ್+ಆನನ=ಷಡ್‌ಆನನ=ಷಡಾನನ(ಟಕಾರಕ್ಕೆ ಡಕಾರಾದೇಶ)

ಷಟ್+ಅಂಗ=ಷಡ್‌ಅಂಗ=ಷಡಂಗ(           ”            )

ಷಟ್+ಅಂಗನೆ=ಷಡ್‌ಅಂಗನೆ=ಷಡಂಗನೆ(           ”            )

ವಿರಾಟ್+ರೂಪ=ವಿರಾಡ್‌ರೂಪ=ವಿರಾಡ್ರೂಪ(           ”            )

ಸತ್+ಉದ್ದೇಶ=ಸದ್‌ಉದ್ದೇಶ=ಸದುದ್ದೇಶ(ತಕಾರಕ್ಕೆ ದಕಾರಾದೇಶ)

ಸತ್+ಉತ್ತರ=ಸದ್‌ಉತ್ತರ=ಸದುತ್ತರ(           ”            )

ಚಿತ್+ಆನಂದ=ಚಿದ್‌ಆನಂದ=ಚಿದಾನಂದ(           ”            )

ಸತ್+ಭಾವ=ಸದ್‌ಭಾವ=ಸದ್ಭಾವ(           ”            )

ಸತ್+ಉದ್ಯೋಗ=ಸದ್‌ಉದ್ಯೋಗ=ಸದುದ್ಯೋಗ(           ”            )

ಅಪ್+ಆ=ಅಬ್‌ಜ=ಅಬ್ಜ(ಪಕಾರಕ್ಕೆ ಬಕಾರಾದೇಶ)

ಅಪ್+ಚ=ಅಬ್‌ದ=ಅಬ್ದ(ಪಕಾರಕ್ಕೆ ಬಕಾರಾದೇಶ)

ಅಪ್+ಅಂಶ=ಅಬ್‌ಅಂಶ=ಅಬಂಶ(ಪಕಾರಕ್ಕೆ ಬಕಾರಾದೇಶ)

ಅಪ್+ಧಿ=ಅಬ್‌ಧಿ=ಅಬ್ಧಿ(ಪಕಾರಕ್ಕೆ ಬಕಾರಾದೇಶ)


★ ಜಶ್ತ್ವಸಂಧಿಯಾಗದಿರುವುದಕ್ಕೆ ಉದಾಹರಣೆಗಳು
ದಿಕ್+ಚಕ್ರ=ದಿಕ್ಚಕ್ರಇಲ್ಲಿ ಎಲ್ಲಿಯೂ ಮೂರನೆಯ ವರ್ಣದ ಆದೇಶವಿಲ್ಲ
ದಿಕ್+ತಟ=ದಿಕ್ತಟ
ಸತ್+ಕವಿ=ಸತ್ಕವಿ
ದಿಕ್+ಸೂಚಿ=ದಿಕ್ಸೂಚಿ
ವಾಕ್+ಪತಿ=ವಾಕ್ಪತಿ


●.(೨) ಶ್ಚುತ್ವ ಸಂಧಿ
•┈┈┈┈┈┈┈┈┈┈┈┈┈┈┈┈•
ಶ್ಚು ಎಂದರೆ ಶಕಾರ ಚವರ್ಗಾಕ್ಷರಗಳು.  (ಶ್=ಶಕಾರ, ಚು=ಚ ಛ ಜ ಝ ಞ) ಈ ಆರು ಅಕ್ಷರಗಳೇ ಶ್ಚು ಎಂಬ ಸಂಜ್ಞೆಯಿಂದ ಸಂಸ್ಕೃತ ವ್ಯಾಕರಣದಲ್ಲಿ ಕರೆಯಿಸಿಕೊಳ್ಳುತ್ತವೆ.  ಇವುಗಳು ಆದೇಶವಾಗಿ ಬರುವುದೇ ಶ್ಚುತ್ವಸಂಧಿ ಎನಿಸುವುದು.

★ ಹಾಗಾದರೆ ಇವು ಯಾವ ಅಕ್ಷರಗಳಿಗೆ ಯಾವಾಗ ಅದೇಶವಾಗಿ ಬರುತ್ತವೆಂಬುದನ್ನು ಯೋಚಿಸೋಣ.

ಮನಸ್ + ಶುದ್ಧಿ = ಮನಶ್ + ಶುದ್ಧಿ = ಮನಶ್ಶುದ್ಧಿ
(ಸಕಾರಕ್ಕೆ ಶಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ)

ಯಶಸ್ + ಚಂದ್ರಿಕೆ = ಯಶಶ್ + ಚಂದ್ರಿಕೆ = ಯಶಶ್ಚಂದ್ರಿಕೆ
(ಸಕಾರಕ್ಕೆ ಚಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ)

ಲಸತ್ + ಚಿತ್ರ = ಲಸಚ್ + ಚಿತ್ರ = ಲಸಚ್ಚಿತ್ರ
(ತಕಾರಕ್ಕೆ ಚಕಾರ ಪರವಾಗಿ ತಕಾರಕ್ಕೆ ಚಕಾರಾದೇಶ)

ಸತ್ + ಚಿತ್ರ = ಸಚ್ + ಚಿತ್ರ = ಸಚ್ಚಿತ್ರ
(ತಕಾರಕ್ಕೆ ಚಕಾರ ಪರವಾಗಿ ತಕಾರಕ್ಕೆ ಚಕಾರಾದೇಶ)

ಬೃಹತ್ + ಛತ್ರ = ಬೃಹಚ್ + ಛತ್ರ = ಬೃಹಚ್ಛತ್ರ
(ತಕಾರಕ್ಕೆ ಛಕಾರ ಪರವಾಗಿ, ತಕಾರಕ್ಕೆ ಚಕಾರಾದೇಶ)
ಮೇಲಿನ ಎಲ್ಲ ಉದಾಹರಣೆಗಳನ್ನು ಗಮನವಿಟ್ಟು ನೋಡಿರಿ.

★ಶಬ್ದದ ಅಂತ್ಯದಲ್ಲಿ ಸಕಾರ ಇಲ್ಲವೆ ತವರ್ಗದಲ್ಲಿನ ಐದು ಅಕ್ಷರಗಳಲ್ಲಿ ಯುವುದಾದರೊಂದು ಅಕ್ಷರವಿರುತ್ತದೆ.  ಪರದಲ್ಲಿ (ಎದುರಿನಲ್ಲಿ) ಶಕಾರ ಇಲ್ಲವೆ ಚವರ್ಗದಲ್ಲಿನ ಯಾವುದಾದರೊಂದು ಅಕ್ಷರವಿದೆ.

★ಹೀಗೆ ಇವು ಒಂದಕ್ಕೊಂದು ಸಂಧಿಸಿದಾಗ ಸ ಕಾರವಿದ್ದಲ್ಲೆಲ್ಲ ಶಕಾರವು, ತವರ್ಗದ ಅಕ್ಷರಗಳಿದ್ದಲ್ಲೆಲ್ಲ ಚವರ್ಗದ ಅಕ್ಷರಗಳು ಆದೇಶಗಳಾಗಿ ಬಂದಿವೆ.
ಅಂದರೆ_ಸ ತ ಥ ದ ಧ ನ  ಗಳಿಗೆ__ಶ ಚ ಛ ಜ ಝ ಞ ಅಕ್ಷರಗಳು ಆದೇಶವಾಗಿ ಬರುತ್ತವೆ ಎಂದ ಹಾಗಾಯಿತು.

●.ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು:-
(೨೫) ಸಕಾರತವರ್ಗಾಕ್ಷರಗಳಿಗೆ ಶಕಾರ ಚವರ್ಗಾಕ್ಷರಗಳು ಪರವಾದಾಗ (ಎದುರಿಗೆ ಬಂದಾಗ) ಸಕಾರಕ್ಕೆ ಶಕಾರವೂ, ತವರ್ಗಕ್ಕೆ ಚವರ್ಗವೂ ಆದೇಶಗಳಾಗಿ ಬರುತ್ತವೆ.
ಪಯಸ್ + ಶಯನ = ಪಯಶ್ + ಶಯನ = ಪಯಶ್ಶಯನ
(ಸಕಾರಕ್ಕೆ ಶಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ)
ಮನಸ್ + ಚಂಚಲ = ಮನಶ್ + ಚಂಚಲ = ಮನಶ್ಚಂಚಲ
(ಸಕಾರಕ್ಕೆ ಚಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ)
ಮನಸ್ + ಚಾಪಲ್ಯ = ಮನಶ್ + ಚಾಪಲ್ಯ = ಮನಶ್ಚಾಪಲ್ಯ
(ಸಕಾರಕ್ಕೆ ಚಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ)
ಶರತ್ + ಚಂದ್ರ   = ಶರಚ್ + ಚಂದ್ರ = ಶರಚ್ಚಂದ್ರ
(ತಕಾರಕ್ಕೆ ಚಕಾರ ಪರವಾಗಿ ತಕಾರಕ್ಕೆ ಚಕಾರಾದೇಶ)
ಜಗತ್ + ಜ್ಯೋತಿ = ಜಗಚ್ + ಜ್ಯೋತಿ = ಜಗಜ್ಜ್ಯೋತಿ
(ತಕಾರಕ್ಕೆ ಜಕಾರ ಪರವಾಗಿ ತಕಾರಕ್ಕೆ ಚಕಾರಾದೇಶ, ಅನಂತರ ಜಕಾರಾದೇಶ)
ಯಶಸ್ + ಶರೀರಿ = ಯಶಶ್ + ಶರೀರಿ = ಯಶಶ್ಶರೀರಿ
ಇದರ ಹಾಗೆ-ಚಲಚ್ಚಿತ್ರ, ಚಲಚ್ಚಾಮರ, ಜ್ವಲಜ್ಜ್ಯೋತಿ, ಬೃಹಜ್ಜ್ಯೋತಿ, ಮನಶ್ಯಾಂತಿ, ಮನಶ್ಚಪಲ ಇತ್ಯಾದಿಗಳು.

●.(೩) ಅನುನಾಸಿಕ ಸಂಧಿ
•┈┈┈┈┈┈┈┈┈┈┈┈┈┈┈┈•
— ಙ, ಞ, ಣ, ನ, ಮ-ಈ ಐದು ಅಕ್ಷರಗಳು ಅನುನಾಸಿಕಾಕ್ಷರಗಳೆಂದು ಹಿಂದಿನ ಸಂಜ್ಞಾಪ್ರಕರಣದಲ್ಲಿ ತಿಳಿಸಿದೆ.  ಈ ಅನುನಾಸಿಕಾಕ್ಷರಗಳು ಆದೇಶವಾಗಿ ಬರುವ ಸಂಧಿಯೇ ಅನುನಾಸಿಕ ಸಂಧಿಯೆನಿಸುವುದು.

★ ಹಾಗಾದರೆ ಇವು ಯಾವ ಅಕ್ಷರಕ್ಕೆ ಯಾವಾಗ ಆದೇಶವಾಗಿ ಬರುತ್ತವೆ? ಯಾವ ಅಕ್ಷರ ಪರವಾಗಿರಬೇಕು? ಎಂಬ ಬಗೆಗೆ ತಿಳಿಯೋಣ.
(೧) ವಾಕ್ + ಮಯ = ವಾಙ್ + ಮಯ = ವಾಙ್ಮಯ
(ಇಲ್ಲಿ ಕಕಾರಕ್ಕೆ ಮಕಾರ ಪರವಾಗಿ ಕಕಾರಕ್ಕೆ ಙಕಾರಾದೇಶವಾಗಿದೆ)
(೨) ಷಟ್ + ಮುಖ = ಷಣ್ + ಮುಖ = ಷಣ್ಮುಖ
(ಇಲ್ಲಿ ಟಕಾರಕ್ಕೆ ಮಕಾರ ಪರವಾಗಿ ಟಕಾರಕ್ಕೆ ಣಕಾರಾದೇಶವಾಗಿದೆ)
(೩) ಸತ್ + ಮಾನ = ಸನ್ + ಮಾನ = ಸನ್ಮಾನ
(ಇಲ್ಲಿ ತಕಾರಕ್ಕೆ ಮಕಾರ ಪರವಾಗಿ ತಕಾರಕ್ಕೆ ನಕಾರಾದೇಶವಾಗಿದೆ)
(೪) ಅಪ್ + ಮಯ =  ಅಮ್ + ಮಯ = ಅಮ್ಮಯ
(ಇಲ್ಲಿ ಪಕಾರಕ್ಕೆ ಮಕಾರ ಪರವಾಗಿ ಪಕಾರಕ್ಕೆ ಮಕಾರಾದೇಶವಾಗಿದೆ)

ಮೇಲಿನ ಈ ಉದಾಹರಣೆಗಳನ್ನು ಅವಲೋಕಿಸಿದಾಗ ಪೂರ್ವಶಬ್ದದ ಕೊನೆಯಲ್ಲೆಲ್ಲ ವರ್ಗದ ಮೊದಲನೆಯ ಅಕ್ಷರಗಳಾದ ಕ್, ಟ್, ತ್, ಪ್ ಇತ್ಯಾದಿ ಅಕ್ಷರಗಳಿವೆ.  ಎದುರಿಗೆ ಅನುನಾಸಿಕಾಕ್ಷರ ಬಂದಿದೆ.  ಆದ ಕಾರಣದಿಂದ ಈ ವರ್ಗದ ಮೊದಲನೆಯ ಅಕ್ಷರಗಳಾದ     ಕ ಟ ತ ಪ ಇತ್ಯಾದಿ ವ್ಯಂಜನಗಳಿಗೆ ಅದೇ ವರ್ಗದ ಅನುನಾಸಿಕಾಕ್ಷರ (ಐದನೆಯ ವರ್ಣ) ಆದೇಶವಾಗಿ ಬಂದಿದೆಯೆಂದು ತಿಳಿಯಬೇಕು.  ಅಂದರೆ ವರ್ಗದ ಮೊದಲನೆಯ ವ್ಯಂಜನಕ್ಕೆ ಅದರದೇ ಆದ ಅನುನಾಸಿಕಾಕ್ಷರ ಬರುವಿಕೆಯೇ ಅನುನಾಸಿಕ ಸಂಧಿಯೆನಿಸುವುದು.

●.ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು:-
(೨೬) ವರ್ಗ ಪ್ರಥಮ ವರ್ಣಗಳಿಗೆ ಯಾವ ಅನುನಾಸಿಕಾಕ್ಷರ ಪರವಾದರೂ, ಅವುಗಳಿಗೆ ಅಂದರೆ ಕ ಚ ಟ ತ ಪ ವ್ಯಂಜನಗಳಿಗೆ ಕ್ರಮವಾಗಿ ಙ ಞ ಣ ನ ಮ ವ್ಯಂಜನಗಳು ಆದೇಶಗಳಾಗಿ ಬರುತ್ತವೆ.

ಉದಾಹರಣೆಗೆ:-
ದಿಕ್ + ನಾಗ = ದಿಙ್ + ನಾಗ = ದಿಙ್ನಾಗ
(ಕಕಾರಕ್ಕೆ ನಕಾರ ಪರವಾಗಿ ಙಕಾರಾದೇಶ)
ಷಟ್ + ಮಾಸ = ಷಣ್ + ಮಾಸ = ಷಣ್ಮಾಸ
(ಟಕಾರಕ್ಕೆ ಮಕಾರ ಪರವಾಗಿ ಣಕಾರಾದೇಶ)
ವಾಕ್ + ಮಾಧುರ‍್ಯ = ವಾಙ್ + ಮಾಧುರ‍್ಯ = ವಾಙ್ಮಾಧುರ‍್ಯ
(ಕಕಾರಕ್ಕೆ ಮಕಾರ ಪರವಾಗಿ ಙಕಾರಾದೇಶ)
ಚಿತ್ + ಮಯ = ಚಿನ್ + ಮಯ = ಚಿನ್ಮಯ
(ತಕಾರಕ್ಕೆ ಮಕಾರ ಪರವಾಗಿ ನಕಾರಾದೇಶ)
ಚಿತ್ + ಮೂಲ = ಚಿನ್ + ಮೂಲ = ಚಿನ್ಮೂಲ
(ತಕಾರಕ್ಕೆ ಮಕಾರಪರವಾಗಿ ನಕಾರಾದೇಶ)
ಸತ್ + ಮಣಿ = ಸನ್ + ಮಣಿ = ಸನ್ಮಣಿ
(ತಕಾರಕ್ಕೆ ಮಕಾರ ಪರವಾಗಿ ನಕಾರಾದೇಶ)
ಇದರಂತೆ, ವಾಙ್ಮೂಲ, ವಾಙ್ಮಾನಸ, ಉನ್ಮಾದ, ತನ್ಮಯ ಇತ್ಯಾದಿ


★ ವಿವರಗಳು:-
[1] ಅಆ, ಇಈ, ಉಊ, ಋೠ ಈ ಸ್ವರಗಳು ಸವರ್ಣ ಸ್ವರಗಳು.  ಅಅ, ಅಆ, ಆಆ, ಆಅ-ಹೀಗೆ ಬಂದರೂ ಸವರ್ಣ ಸ್ವರಗಳು.  ಈಈ, ಇಇ, ಈಇ, ಇಈ-ಹೀಗೆ ಬಂದರೂ ಸವರ್ಣ ಸ್ವರಗಳು. ಇದರ ಹಾಗೆಯೇ ಉಊ, ಋೠ ಗಳ ಸವರ್ಣ ಸ್ವರಗಳ ವಿಚಾರ ಕೂಡ.

[2] ಅ ಆ ಕಾರಗಳಿಗೆ ಎಂದರೆ, ಅ ಅಥವಾ ಆ ಕಾರಗಳಲ್ಲಿ ಯಾವುದಾದರೊಂದು ಸ್ವರಕ್ಕೆ ಎಂದರ್ಥ.  ಏ ಐ ಕಾರಗಳು ಪರವಾದರೆ ಎಂದರೆ, ಏ ಅಥವಾ ಐ ಕಾರಗಳಲ್ಲಿ ಯಾವುದಾದರೂ ಒಂದು ಪರವಾದರೆ ಎಂದು ಅರ್ಥ.

[3] ಯಣ್ ಎಂದರೆ ಯ ವ ರ ಲ ಈ ನಾಲ್ಕು ಅಕ್ಷರಗಳೆಂದು ಹಿಂದೆ ತಿಳಿಸಿದೆಯಷ್ಟೆ.  ಲ ಕಾರವು ಆದೇಶವಾಗಿ ಬರುವ ಉದಾಹರಣೆಗಳು ಕನ್ನಡ ಭಾಷೆಯಲ್ಲಿ ಇಲ್ಲವಾದ್ದರಿಂದ ಸೂತ್ರದಲ್ಲಿ ಅದನ್ನು ಕೈಬಿಟ್ಟಿದೆ.

[4] ಅಚ್ ಎಂದರೆ ಸಂಸ್ಕೃತ ವ್ಯಾಕರಣದಲ್ಲಿ ಸ್ವರ ಎಂದು ಅರ್ಥ.
ಅಜಂತ ಎಂದರೆ ಸ್ವರಾಂತವೆಂದು ತಿಳಿಯಬೇಕು.

[5] ಅಬ್ಜ=ಕಮಲ
[6] ಅಬ್ದ=ಮೋಡ
[7] ಅಬಂಶ=ನೀರಿನ ಅಂಶ
[8] ಅಬ್ಧಿ=ಸಮುದ್ರ (ಅಪ್ ಅಂದರೆ ನೀರು)
[9] ಅಪ್‌ಮಯ=ನೀರಿನ ಮಯ, ಅಂದರೆ ಜಲಮಯ ಎಂದು ಅರ್ಥ.
[10] ಚಕಾರಕ್ಕೆ ಞ ಕಾರ ಆದೇಶವಾಗಿ ಬರುವ ಉದಾಹರಣೆಗಳು ಪ್ರಸಿದ್ಧವಲ್ಲವಾದ್ದರಿಂದ ಆ ಉದಾಹರಣೆ ಕೊಟ್ಟಿಲ್ಲ.
[11] ದಿಙ್ನಾಗ=ದಿಕ್ಕುಗಳಲ್ಲಿರುವ ಆನೆ (ಅಷ್ಟದಿಗ್ಗಜಗಳು)
[12] ವಾಙ್ಮಾಧುರ‍್ಯ=ಮಾತಿನ ಮಾಧುರ‍್ಯ
[13] ವಾಙ್ಮೂಲ=ಮಾತಿನ ಮೂಲ; ವಾಙ್ಮಾನಸ=ಮಾತು, ಮನಸ್ಸು; ಉನ್ಮಾದ=ವಿಶೇಷ ಮದದಿಂದ ಕೂಡಿದ; ತನ್ಮಯ=ಬೆರೆಯುವಿಕೆ.)


★ ಇದುವರೆಗೆ ಸಂಸ್ಕೃತ ಸ್ವರಸಂಧಿ ಮತ್ತು ವ್ಯಂಜನಸಂಧಿಗಳ ಬಗೆಗೆ ಹಲವಾರು ವಿಷಯಗಳನ್ನು ತಿಳಿದಿರುವಿರಿ.
ಅದರ ಸಾರಾಂಶವನ್ನು ಈ ಕೆಳಗಿನ ಪಟ್ಟಿಯಲ್ಲಿ ಮತ್ತೊಮ್ಮೆ  ಓದಿ  ನೆನಪಿನಲ್ಲಿಡಿರಿ.

●. ಸಂಸ್ಕೃತ ಸಂಧಿಗಳು
★ ಸ್ವರಸಂಧಿಗಳು
★ ವ್ಯಂಜನಸಂಧಿಗಳು
(i) ಸವರ್ಣದೀರ್ಘಸಂಧಿ
(ದೀರ್ಘಸ್ವರಾದೇಶ)(i) ಜಶ್ತ್ವಸಂಧಿ
(ಜಬಗಡದ ಆದೇಶ)
(ii) ಗುಣಸಂಧಿ
(ಏ, ಓ, ಅರ್ ಆದೇಶ)(ii) ಶ್ಚುತ್ವಸಂಧಿ
(ಶಕಾರ ಚವರ್ಗಾದೇಶ)
(iii) ವೃದ್ಧಿಸಂಧಿ
(ಐ, ಔ ಆದೇಶ)(iii) ಅನುನಾಸಿಕಸಂಧಿ
(ಙ,ಞ,ಣ,ನ,ಮ ಗಳ ಆದೇಶ)
(iv) ಯಣ್‌ಸಂಧಿ
(ಯ, ವ, ರ ಆದೇಶ)

(courtesy :Kannada divige) 

No comments:

Post a Comment