"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday 9 February 2015


☀.ಬಯೋಡೀಸಲ್ (Biodiesel) ಎಂದರೇನು? ಅದನ್ನು ಹೇಗೆ ತಯಾರಿಸಲಾಗುತ್ತದೆ?


☆.ಬಯೋಡೀಸಲ್ (Biodiesel) ಎಂದರೆ ಸಸ್ಯ ಜನ್ಯ, ತೈಲ, ಪ್ರಾಣಿ ಜನ್ಯ ಕೊಬ್ಬಿನಿಂದ ತಯಾರಿಸಿದ ಇಂಧನ.
'ಬಯೋಡೀಸಲ್ (Biodiesel)' ಎಂಬುದು ಸಸ್ಯಜನ್ಯ-ತೈಲ ಅಥವಾ ಪಶು-ಕೊಬ್ಬು ಆಧಾರಿತ ಡೀಸೆಲ್‌ ರೂಪದ ಇಂಧನ. ಇದು ಆಲ್ಕೈಲ್‌(ಮಿತೈಲ್‌,ಪ್ರೊಪೈಲ್‌ ಅಥವಾ ಇತೈಲ್‌) ಎಸ್ಟರ್‌ಗಳ ಸರಣಿ ಹೊಂದಿದೆ. ಸಸ್ಯ-ತರಕಾರಿ ತೈಲ, ಪಶುವಿನ ಕೊಬ್ಬು (ಟ್ಯಾಲೊ) ನಂತಹ ಲಿಪಿಡ್‌ಗಳನ್ನು ಆಲ್ಕೊಹಾಲ್‌ನೊಂದಿಗೆ ರಾಸಾಯನಿಕ ಕ್ರಿಯೆಗೊಳಪಡಿಸಿ ಜೈವಿಕ ಡೀಸೆಲ್‌ ತಯಾರಿಸಲಾಗುತ್ತದೆ.

☆.ಜೈವಿಕ ಡೀಸೆಲ್ ಅನ್ನು ಸಸ್ಯಜನ್ಯ ಎಣ್ಣೆ ಅಥವಾ ಪ್ರಾಣಿಜನ್ಯ ಕೊಬ್ಬಿನಿಂದ ಉತ್ಪಾದಿಸಲಾಗುತ್ತದೆ. ಜೈವಿಕ ಡೀಸೆಲ್ ದೀರ್ಘ ಸರಪಳಿ ಕೊಬ್ಬಿನ ಆಮ್ಲದಿಂದ (Long Chain fatty acid) ಉತ್ಪತ್ತಿಯಾದ ಮೋನೊ ಅಲ್ಕೈಲ್ ಎಸ್ಟರ್ (Mono Alkyl Ester). ಎಣ್ಣೆ ಅಥವಾ ಕೊಬ್ಬನ್ನು ಮೆಥನಾಲ್ ಅಥವಾ ಎಥನಾಲ್ ಜೊತೆ ಸೇರಿಸಿ NaOH/KOH ಎಂಬ ಪ್ರತ್ಯಾಮ್ಲ ಪ್ರಚೋದಕದೊಂದಿಗೆ ಟ್ರಾನ್ಸ್‌ಎಸ್ಟರಿಫಿಕೇಷನ್ ಎಂಬ ರಾಸಾಯನಿಕ ಕ್ರಿಯೆಯ ಮೂಲಕ ಜೈವಿಕ ಡೀಸಲ್ ತಯಾರಿಸಲಾಗುತ್ತದೆ.

ಈ ವಿಧಾನದಿಂದ ಜೈವಿಕ ಇಂಧನವು ಡೀಸೆಲ್ ಹೊಂದಿರುವ ಸುಲಭವಾಗಿ ಉರಿಯುವ ಗುಣಗಳನ್ನು ಹೊಂದಿರುವುದರಿಂದ, ರಾಷ್ಟ್ರೀಯ ಜೈವಿಕ ಇಂಧನ ಕಾರ್ಯಕ್ರಮವನ್ನು ಕಾರ್ಯ ರೂಪಕ್ಕೆ ತಂದಾಗ ಇದನ್ನು ಬಹು ಮಟ್ಟಿಗೆ ಪೆಟ್ರೋಲಿಯಂ ಇಂಧನಕ್ಕೆ ಪರ್ಯಾಯವಾಗಿ ಉಪಯೋಗಿಸಬಹುದು.ವಿವಿದ ಮರಗಿಡಗಳ ಬೀಜಗಳಿಂದ, ಪ್ರಾಣಿಗಳ ಕೊಬ್ಬಿನಿಂದ ಉತ್ಪಾದಿಸಲ್ಪಡುವ ಎಣ್ಣೆ ಅಥವಾ ತೈಲಗಳೇ ಜೈವಿಕ ಇಂಧನಗಳಾಗಿವೆ, ಈ ರೀತಿಯ ತೈಲಗಳನ್ನು ಕೆಲವು ಖಾದ್ಯಮತ್ತು ಅಖಾದ್ಯವಾದುವುಗಳೆಂದು ವರ್ಗೀಕರಿಸಲಾಗಿದೆ.

ಖಾದ್ಯ ತೈಲಗಳ ಉತ್ಪಾದನೆಯಲ್ಲಿ ಕೊರತೆಯಿರುವುದರಿಂದ ಮತ್ತು ಉತ್ಪಾದನಾವೆಚ್ಚ ಹೆಚ್ಚಾಗಿರುವುದರಿಂದ ಈ ತೈಲಗಳನ್ನು ಇಂಧನವನ್ನಾಗಿಬಳಸುವುದು ಸಾದ್ಯವಾಗುತ್ತಿಲ್ಲ, ಬದಲಿಗೆ ಅಖಾದ್ಯ ತೈಲಗಳನ್ನು ಮಾತ್ರ ಇಂಧನವನ್ನಾಗಿ ಬಳಸುವುದು ಬಹು ಸೂಕ್ತವಾಗಿದೆ. ಈ ತೈಲಗಳು ಮೂಲತಃ ಜೀವಜನ್ಯವಾಗಿರುವರಿಂದ ಮತ್ತು ಇದನ್ನು ಪ್ರಸ್ತುತ ಚಾಲ್ತಿಯಲ್ಲಿರುವ ಎಲ್ಲಾ ಡೀಸಲ್ ಯಂತ್ರಗಳಲ್ಲಿ(ಎಂಜಿನ್) ಬಳಸಬಹುದಾದ್ದರಿಂದ ಇದನ್ನು ಆಂಗ್ಲ ಭಾಷೆಯಲ್ಲಿ”ಬಯೋಡೀಸಲ್”(ಜೈವಿಕ ಡೀಸಲ್) ಎಂದು ಕರೆಯಲಾಗಿದೆ.

ನಮ್ಮ ಪರಿಸರದಲ್ಲಿ ಕಾಣಬರುವ ಹೊಂಗೆ, ಬೇವು, ಜಟ್ರೋಫಾ, ಹಿಪ್ಪೆ, ಹರಳು, ಸಿಮರೂಬ ಇತ್ಯಾದಿ ಮರಗಳ ಬೀಜಗಳಿಂದ ದೊರೆಯುವ ತೈಲಗಳನ್ನು ಬಯೋಡೀಸಲ್ಲಾಗಿ ಬಳಸಬಹುದಾಗಿದೆ.ಬಯೋಡೀಸಲ್, ಪೆಟ್ರೋಲಿಯಂ ಡೀಸಲ್‌ಗೆ ಪರ್ಯಾಯವಾಗಿಬಳಸುವ ಇಂಧನವಾಗಿ ಬಳಸುವ ಕಾರಣದಿಂದಲೂ ಇದನ್ನು”ಬಯೋಡೀಸಲ್”(ಜೈವಿಕ ಡೀಸಲ್) ಎಂದು ಕರೆಯಲಾಗಿದೆ.

ಸರಳವಾಗಿ ಜೈವಿಕ ಇಂಧನ ಎಂದರೆ ನೈಸರ್ಗಿಕವಾಗಿ ಪರಿಸರದಲ್ಲಿ ವಿಫುಲವಾಗಿ ಎಲ್ಲೆಡೆ ಬೆಳೆಯುವ, ದೊರೆಯುವ, ವಿವಿಧ ಜೀವರಾಶಿ ಗಿಡಮರಗಳಿಂದ ಮತ್ತು ಅವುಗಳ ಬೀಜಗಳಿಂದ ಉತ್ಪಾದಿಸಬಹುದಾದ ಎಣ್ಣೆ ಅಥವಾ ತೈಲವಾಗಿದೆ. ಈ ಎಣ್ಣೆಗಳು ಪರಿಸರ ಸ್ನೇಹಿಗಳಾಗಿದ್ದು, ಹಲವಾರು ಆರೋಗ್ಯಕರ ಉಪಯುಕ್ತತೆಯನ್ನು ಹೊಂದಿವೆ ಮತ್ತು ಈ ಎಣ್ಣೆ ಅಥವಾ ತೈಲಗಳನ್ನು ಕೃಷಿ, ಕೈಗಾರಿಕೆ, ಸಾರಿಗೆಯಂತಹ ವಿವಿಧ ವ್ಯವಸ್ಥೆಗಳಲ್ಲಿ ಇಂಧನವನ್ನಾಗಿ ಉಪಯೊಗಿಸಬಹುದಾಗಿದೆ. ಇಂಧನ ಉದ್ದೇಶಗಳಿಗಾಗಿ ಬಳಸಬಹುದಾದ ಈ ತೈಲಗಳನ್ನು ಜೈವಿಕ ಇಂಧನವೆಂದು ಕರೆಯುತ್ತಾರೆ.

 ಈ ತೈಲಗಳನ್ನು ಎಲ್ಲೆಡೆ ಸುಲಭವಾಗಿ ಕಡಿಮೆ ವೆಚ್ಚದಲ್ಲಿ ನಿರಂತರವಾಗಿ ಮರು ಉತ್ಪಾದಿಸಬಹುದಾಗಿದೆ, ಎಲ್ಲಕ್ಕಿಂತ ಮುಖ್ಯವಾಗಿ ಈ ಇಂಧನಗಳ ಉಪಯೋಗದಿಂದ ಪರಿಸರಕ್ಕೆ ಮತ್ತು ಜೀವಜಗತ್ತಿನ ಮೇಲೆ ಯಾವುದೇ ಕೆಟ್ಟ ಪರಿಣಾಮಗಳಾಗುವುದಿಲ್ಲ ಬದಲಿಗೆ ಸುರಕ್ಫಿತ ಇಂಧನಗಳಾಗಿ ಆರ್ಥಿಕ ವ್ಯವಸ್ಥೆಗೆ ಮತ್ತು ದೇಶದ ಇಂಧನ ಸುರಕ್ಷೆತೆಗೆ ಭದ್ರಬುನಾದಿಯಾಗುತ್ತವೆ.

☀ ಜೈವಿಕ ಡೀಸಲ್ ತಯಾರಿಕೆಗೆ ಉಪಯೋಗಿಸುವ ಅಖಾದ್ಯ ತೈಲ ಬೀಜಗಳು ಯಾವುವು?
☆.ಹೊಂಗೆ, ಬೇವು, ಹಿಪ್ಪೆ, ಸೀಮರೂಬಾ ಹಾಗೂ ಜಟ್ರೋಪ ಇತ್ಯಾದಿ.

No comments:

Post a Comment