"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday 10 February 2015

☀.‘ಭಾರತದಲ್ಲಿ ತಯಾರಿಸಿ’ (ಮೇಕ್ ಇನ್ ಇಂಡಿಯಾ) ಅಭಿಯಾನದ ಕುರಿತು ಚರ್ಚಿಸಿ  ('Make in India' campaign)

☀.‘ಭಾರತದಲ್ಲಿ ತಯಾರಿಸಿ’ (ಮೇಕ್ ಇನ್ ಇಂಡಿಯಾ) ಅಭಿಯಾನದ ಕುರಿತು ಚರ್ಚಿಸಿ
('Make in India' campaign)
━━━━━━━━━━━━━━━━━━━━━━━━━━━━━━━━━━━━━━━━━━━━━

— ದೇಶದ ತಯಾರಿಕಾ ವಲಯಕ್ಕೆ ಚೈತನ್ಯ ತುಂಬುವ ಮತ್ತು ಯುವಜನರಿಗೆ ಉದ್ಯೋಗಾವಕಾಶ ಸೃಷ್ಟಿಸುವ ಎರಡು ಪ್ರಮುಖ ಸವಾಲುಗಳನ್ನು ಎದುರಿಸುವತ್ತ ಪ್ರಧಾನಿ ನರೇಂದ್ರ ಮೋದಿ ದೃಷ್ಟಿ ಹರಿಸಿದ್ದಾರೆ. ನಮ್ಮ ದೇಶದಲ್ಲಿ ಅಧಿಕಾರಶಾಹಿಯ ವಿಳಂಬ ಧೋರಣೆ, ಅಸಹ­ಕಾರ, ನಾನಾ ಬಗೆಯ ಕಾನೂನು ಕಟ್ಟಳೆಗಳು ಬಂಡವಾಳ ಹೂಡಿಕೆದಾರರಿಗೆ ಮತ್ತು ಉದ್ಯಮ ಸ್ಥಾಪಿಸುವವರಿಗೆ ಅಡಚಣೆಯಾಗಿವೆ ಎಂಬ ಕಟು ಸತ್ಯ ಅವರ ಗಮನಕ್ಕೂ ಬಂದಿದೆ.

— ಅದಕ್ಕಾಗಿಯೇ ನವ ದೆಹಲಿಯ ವಿಜ್ಞಾನ ಭವನದಲ್ಲಿ ಅವರು, ‘ಭಾರತದಲ್ಲಿ ತಯಾರಿಸಿ’ (ಮೇಕ್ ಇನ್ ಇಂಡಿಯಾ) ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ, ಹೂಡಿಕೆ ಮತ್ತು ತಯಾರಿಕಾ ಕ್ಷೇತ್ರಕ್ಕಿರುವ ಅಡ್ಡಿ ಆತಂಕಗಳನ್ನು ನಿವಾರಿಸುವ ಭರವಸೆ ಕೊಟ್ಟಿದ್ದಾರೆ. ‘ಮೊದಲು ಭಾರತದ ಅಭಿವೃದ್ಧಿ’ (ಫಸ್ಟ್ ಡೆವಲಪ್ ಇಂಡಿಯಾ) ಮತ್ತು ‘ಭಾರತದಲ್ಲಿ ತಯಾರಿಸಿ’ ಎಂಬ ಎರಡು ಮಂತ್ರಗಳೊಡನೆ ಅವರು ದೇಶಿ ಮತ್ತು ವಿದೇಶಿ ಬಂಡವಾಳ ಹೂಡಿಕೆದಾರರ ಮನವೊಲಿಸಲು ಮುಂದಾಗಿದ್ದು. ಈ ಮೂಲಕ ಎಫ್‌ಡಿಐಗೆ (ವಿದೇಶಿ ನೇರ ಹೂಡಿಕೆ) ಹೊಸ ಬಗೆಯ ವ್ಯಾಖ್ಯಾನ ನೀಡಿದ್ದಾರೆ. ಅಂದರಂತೆ ಷೇರು ಪೇಟೆಯ ಏರುಗತಿ ಮತ್ತು ಸಮಾರಂಭದಲ್ಲಿ ಪಾಲ್ಗೊಂಡಿದ್ದ ಉದ್ಯಮಿಗಳು, ಬ್ಯಾಂಕಿಂಗ್ ತಜ್ಞರ ಉತ್ಸಾಹದ ಪ್ರತಿಕ್ರಿಯೆಯೇ ಸಾಕ್ಷಿ.

— ದೇಶಿ ತಯಾರಿಕಾ  ಕ್ಷೇತ್ರದ ಬೆಳವಣಿಗೆ ದರ 2011ರಿಂದ ಈಚೆಗೆ ಕಳವಳಕಾರಿ ಮಟ್ಟಕ್ಕೆ ಇಳಿದಿದೆ. 2005—11ರ ಅವಧಿಯಲ್ಲಿ ಅದು ಶೇ 10ರಷ್ಟು ಏರಿಕೆ ದಾಖಲಿಸಿತ್ತು. 2011–12ರಲ್ಲಿ ಶೇ 2.7 ಮತ್ತು 2013ರಲ್ಲಿ ಶೇ 1ರ ಆಸುಪಾಸಿಗೆ ಕುಸಿದಿದೆ. ನಮ್ಮ ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ (ಜಿಡಿಪಿ) ತಯಾರಿಕಾ ವಲಯದ ಪಾಲು ಕೆಲ ವರ್ಷಗಳಿಂದ ಶೇ 15ನ್ನು ದಾಟಿಲ್ಲ.  ಕೌಶಲಪೂರ್ಣ ಮಾನವ ಸಂಪನ್ಮೂಲ, ಯಥೇಚ್ಛ ಅವಕಾಶಗಳಿದ್ದರೂ ಚೀನಾವನ್ನು ಹಿಂದಿಕ್ಕಲು ನಮಗೆ ಸಾಧ್ಯವಾಗಿಲ್ಲ. ಕೆಲವೇ ವರ್ಷಗಳ ಹಿಂದೆ ಕಳಪೆ ವಸ್ತುಗಳಿಗಷ್ಟೇ ಹೆಸರಾಗಿದ್ದ ಚೀನಾ ಇಂದು ಗುಣಮಟ್ಟದ ಸಾಮಗ್ರಿಗಳನ್ನು ಕಡಿಮೆ ವೆಚ್ಚದಲ್ಲಿ ತಯಾರಿಸಿ ಇಡೀ ವಿಶ್ವದ ಮಾರುಕಟ್ಟೆ ಆಕ್ರಮಿಸಿಕೊಂಡಿದೆ. ಅದರಿಂದ ನಾವು ಕಲಿಯುವುದು ಬಹಳಷ್ಟಿದೆ. ಜತೆಗೆ, ನಮ್ಮ ಬಡ ವರ್ಗವನ್ನು ಮಧ್ಯಮ ವರ್ಗದ ಮಟ್ಟಕ್ಕೆ ತರುವುದರಿಂದ, ಕೊಳ್ಳುವ ಶಕ್ತಿ ಹೆಚ್ಚಿಸುವುದರಿಂದ ಆರ್ಥಿಕ ಪ್ರಗತಿ ಮತ್ತು ಉದ್ಯೋಗಾವಕಾಶ ಸೃಷ್ಟಿ ಸಾಧ್ಯ.



✧. ‘ಭಾರತದಲ್ಲಿ ತಯಾರಿಸಿ’ (ಮೇಕ್ ಇನ್ ಇಂಡಿಯಾ) ಅಭಿಯಾನದ ಉದ್ದೇಶಗಳು:

1. ವಿದೇಶಿ ಅವಲಂಬನೆಯಿಂದ ಸಂಪೂರ್ಣ ಮುಕ್ತವಾಗಿ ಭಾರತವನ್ನು ಪ್ರಮುಖ ಉತ್ಪಾದಕ ರಾಷ್ಟ್ರವನ್ನಾಗಿಸುವುದು.

2. ಉತ್ಪಾದಕತೆ ಅಗತ್ಯವಾದ ಹೂಡಿಕೆಗಾಗಿ ದೇಶ-ವಿದೇಶದ ಹೂಡಿಕೆದಾರರನ್ನು ಆಕರ್ಷಿಸುವುದು.

3. ದೇಶೀಯ ಉದ್ಯಮಿಗಳ ಅಭಿವೃದ್ಧಿಗಾಗಿ ಸಕಲ ಸೌಲಭ್ಯ ಕಲ್ಪಿಸಿ ವಿಶ್ವಮಟ್ಟದಲ್ಲಿ ಬೆಳೆಸುವುದು.

4. ವಿದೇಶಿ ಕಂಪನಿಗಳನ್ನು ಸೆಳೆಯುವುದಕ್ಕಾಗಿ ಕಾನೂನು ಪ್ರಕ್ರಿಯೆ ಸರಳೀಕರಣಗೊಳಿಸುವುದು.

5. ಮಾಹಿತಿ ನೀಡಿಕೆ ಸುಲಭವಾಗುವಂತೆ 72 ಗಂಟೆಯೊಳಗೆ ಉತ್ತರ ನೀಡುವ ವ್ಯವಸ್ಥೆ ಜಾರಿ ಮಾಡುವುದು.

6. ಈ ಯೋಜನೆ ಕುರಿತಂತೆ ದೇಶದಾದ್ಯಂತ ಆಂದೋಲನ ಹಮ್ಮಿಕೊಳ್ಳಲಾಗುವುದು.

✧.‘ಭಾರತವನ್ನು ಒಂದು ಮಾರುಕಟ್ಟೆಯಾಗಿ ನೋಡಬಾರದು. ಪ್ರತಿಯೊಬ್ಬ ಭಾರತೀಯನ ಖರೀದಿ ಸಾಮರ್ಥ್ಯ ಹೆಚ್ಚಿಸಲು ಇಲ್ಲಿ ಅವಕಾಶಗಳಿವೆ ಎಂಬ ದೃಷ್ಟಿಯಿಂದ ನೋಡಬೇಕು. ಅದರಿಂದ ಎಲ್ಲರಿಗೂ ಒಳಿತು’ ಎಂಬ ಮೋದಿ ಅವರ ಮಾತು ಇಲ್ಲಿ ಪ್ರಸ್ತುತ. ಈ ಉತ್ಸಾಹ ಮತ್ತು ವಿಶ್ವಾಸ ಬಳಸಿಕೊಂಡು ಭಾರತವನ್ನೂ ಚೀನಾದಂತೆ ತಯಾರಿಕಾ ರಾಷ್ಟ್ರವಾಗಿ ಬದಲಿಸುವುದು ಸರ್ಕಾರ ಮತ್ತು ಉದ್ಯಮ ರಂಗದ ಜವಾಬ್ದಾರಿ.

✧.ಕೈಗಾರಿಕಾ ರಂಗಕ್ಕೆ ಉತ್ತೇಜನ ನೀಡುವ ಸಲುವಾಗಿ ಕಾರ್ಮಿಕ ಕಾಯ್ದೆ ಹಾಗೂ ಪರಿಸರ ಸಂಬಂಧಿ ಕಾಯ್ದೆಗಳಿಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಸರ್ಕಾರ ಯೋಚಿಸುತ್ತಿರುವುದು ಸರಿಯಾಗಿಯೇ ಇದೆ. ಕಾಯ್ದೆಗಳು ಕಾಲಕ್ಕೆ ತಕ್ಕಂತೆ ಪರಿಷ್ಕರಣೆ ಆಗಬೇಕು. ಅದೇ ರೀತಿ, ಭೂಸ್ವಾಧೀನಕ್ಕೆ ಸಂಬಂಧಿಸಿದ ತೊಡಕುಗಳ ನಿವಾರಣೆಗೂ ಗಮನಹರಿಸಬೇಕು. ಜಮೀನು ಕಳೆದುಕೊಳ್ಳುವ ರೈತರಿಗೂ ಅನ್ಯಾಯ ಆಗಬಾರದು. ಹೂಡಿಕೆದಾರರಿಗೂ ಹೊರೆಯೆನಿಸಬಾರದು. ಅಂತಹ ಮಧ್ಯಮ ಮಾರ್ಗ ಅನುಸರಿಸುವುದು ಒಳಿತು. ಪಾರದರ್ಶಕತೆ ಮೂಲಮಂತ್ರ ಆಗಬೇಕು.

No comments:

Post a Comment