"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday, 4 September 2015

☀ಈ ದಿನದ (KAS/IAS) ಪ್ರಶ್ನೆ: "ವಿಶ್ವ ಪರಂಪರೆಯ ತಾಣವಾಗಿ ಪಶ್ಚಿಮ ಘಟ್ಟಗಳು-ಜೀವ ವೈವಿಧ್ಯ ಸುಸ್ಥಿರ ಬಳಕೆ ". -(Sustainable use of the Biodiversity of the Western Ghats-As a World Heritage Site.)

☀ಈ ದಿನದ (KAS/IAS) ಪ್ರಶ್ನೆ:
-"ವಿಶ್ವ ಪರಂಪರೆಯ ತಾಣವಾಗಿ ಪಶ್ಚಿಮ ಘಟ್ಟಗಳು-ಜೀವ ವೈವಿಧ್ಯ ಸುಸ್ಥಿರ ಬಳಕೆ ".

-(Sustainable use of the Biodiversity of the Western Ghats-As a World Heritage Site.)
━━━━━━━━━━━━━━━━━━━━━━━━━━━━━━━━━━━━━━━━━━━━━

★ ವಿವರಣಾತ್ಮಕ ಸಾಮಾನ್ಯ ಅಧ್ಯಯನ.
(General Studies notes in Kannada Medium)

★ ಐಎಎಸ್ / ಕೆಎಎಸ್ ಪರೀಕ್ಷಾ ವಿಶೇಷಾಂಕ
(KAS/IAS Examination Special)


— ಇತ್ತೀಚೆಗಷ್ಟೇ ಯುನೆಸ್ಕೋದಿಂದ ವಿಶ್ವಪರಂಪರೆಯ ಪಟ್ಟಿಗೆ ಪಶ್ಚಿಮ ಘಟ್ಟಗಳ 39 ನೆಲೆಗಳು ಸೇರಿವೆ. ಪ್ರಪಂಚದ ಅತ್ಯಂತ ಮಹತ್ವಪೂರ್ಣವಾದ ಎಂಟು ಜೈವಿಕ ವೈವಿಧ್ಯ `ಅತೀ ಅಗ್ರ ತಾಣ' (ಬಯೋ ಡೈವರ್ಸಿಟಿ ಹಾಟೆಸ್ಟ್ ಸ್ಪಾಟ್ಸ್)ಗಳಲ್ಲಿ ಪಶ್ಚಿಮಘಟ್ಟಗಳೂ ಒಂದು.

☀ಪಶ್ಚಿಮ ಘಟ್ಟಗಳು :
•┈┈┈┈┈┈┈┈┈┈┈┈┈┈•
●.ಪಶ್ಚಿಮ ಘಟ್ಟಗಳು ಭಾರತ ಜಂಬೂದ್ವೀಪದ ಪಶ್ಚಿಮ ಭಾಗದಲ್ಲಿರುವ ಒಂದು ಪರ್ವತ ಶ್ರೇಣಿ. ಈ ಶ್ರೇಣಿಗೆ ಸಹ್ಯಾದ್ರಿ ಪರ್ವತಗಳು ಎಂಬ ಹೆಸರು ಸಹ ಇದೆ. ದಖ್ಖನ್ ಪೀಠಭೂಮಿಯ ಪಶ್ಚಿಮದ ಅಂಚಿನ ಉದ್ದಕ್ಕೂ ಹಬ್ಬಿರುವ ಪಶ್ಚಿಮ ಘಟ್ಟಗಳು ಪೀಠಭೂಮಿಯನ್ನು ಅರಬ್ಬೀ ಸಮುದ್ರದ ಕಿರಿದಾದ ಕರಾವಳಿ ಪ್ರದೇಶದಿಂದ ಬೇರ್ಪಡಿಸುತ್ತವೆ.

●.ಮಹಾರಾಷ್ಟ್ರ-ಗುಜರಾತ್‌ಗಳ ಗಡಿಪ್ರದೇಶದಲ್ಲಿ ತಾಪ್ತಿ ನದಿಯ ದಕ್ಷಿಣದಲ್ಲಿ ಆರಂಭವಾಗುವ ಈ ಶ್ರೇಣಿಯು ದಕ್ಷಿಣಾಭಿಮುಖವಾಗಿ ಹಬ್ಬಿ ಕನ್ಯಾಕುಮಾರಿಯವರೆಗೆ ಇರುವುದು.

●.ಒಟ್ಟು ಸುಮಾರು ೧೬೦೦ ಕಿ.ಮೀ. ಉದ್ದವಿರುವ ಪಶ್ಚಿಮ ಘಟ್ಟಗಳು ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಹಬ್ಬಿವೆ. ಒಟ್ಟು ಶ್ರೇಣಿಯ ಅರ್ಧಕ್ಕಿಂತ ಹೆಚ್ಚು ಭಾಗವು ಕರ್ಣಾಟಕದಲ್ಲಿಯೇ ಇದೆ.

●.ಪಶ್ಚಿಮ ಘಟ್ಟಗಳು ಒಟ್ಟು ೬೦೦೦೦ ಚದರ ಕಿ.ಮೀ. ಪ್ರದೇಶವನ್ನು ಆವರಿಸಿವೆ.

●.ಇಲ್ಲಿಂದ ಹೊರಡುವ ನದಿಗಳು ಭಾರತದ ಒಟ್ಟು ಜಲಾನಯನ ಪ್ರದೇಶದ ೪೦% ಭಾಗವನ್ನು ಆವರಿಸಿವೆ.

●.ಪಶ್ಚಿಮ ಘಟ್ಟಗಳ ಸರಾಸರಿ ಎತ್ತರ ಸುಮಾರು ೧೨೦೦ ಮೀಟರ್. ಈ ಪ್ರದೇಶವು ವಿಶ್ವದ ಅತ್ಯಂತ ಸಕ್ರಿಯ ಜೀವವೈವಿಧ್ಯದ ನೆಲೆಗಳಲ್ಲಿ ಒಂದಾಗಿದ್ದು ೫೦೦೦ಕ್ಕೂ ಹೆಚ್ಚಿನ ತಳಿಯ ಗಿಡಮರಗಳು, ೧೩೯ ಬಗೆಯ ಸಸ್ತನಿಗಳು, ೫೦೮ ಪ್ರಭೇದದ ಪಕ್ಷಿಗಳು ಮತ್ತು ೧೭೯ ಪ್ರಕಾರದ ದ್ವಿಚರಿಗಳಿಗೆ ನೆಲೆಯಾಗಿವೆ. ವಿಶ್ವದಲ್ಲಿ ಅಳಿವಿನಂಚಿನಲ್ಲಿರುವ ಜೀವತಳಿಗಳ ಪೈಕಿ ೩೨೫ ತಳಿಗಳ ಜೀವಿಗಳು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿವೆ.


☀ಪಶ್ಚಿಮ ಘಟ್ಟಗಳು ಮತ್ತು ಜೀವ ವೈವಿಧ್ಯ :
•┈┈┈┈┈┈┈┈┈┈┈┈┈┈┈┈┈┈┈┈┈┈┈┈•
●.ಪ್ರದೇಶವೊಂದರಲ್ಲಿ ಇರುವ ಜೀವ ಪ್ರಭೇದಗಳ ಒಟ್ಟು ಮೊತ್ತವನ್ನು ಆ ಪ್ರದೇಶದ ಜೀವ ವೈವಿಧ್ಯ ಎಂದು ಕರೆಯುತ್ತಾರೆ.

●.ಜಗತ್ತಿನ ಒಟ್ಟು ಭೂಭಾಗದ ಶೇಕಡಾ 2.5 ರಷ್ಟು ಮಾತ್ರ ಇರುವ ಭಾರತದ ಜೈವಿಕ ವೈವಿಧ್ಯ ಜಾಗತಿಕ ಜೀವ ವೈವಿಧ್ಯದ ಶೇಕಡಾ 7.8 ರಷ್ಟು. ಇವುಗಳಲ್ಲಿ ಬಹುಪಾಲು ಇರುವುದು ಪಶ್ಚಿಮ ಘಟ್ಟಗಳಲ್ಲಿ.

●.ಕೇವಲ ಪಶ್ಚಿಮಘಟ್ಟಗಳಲ್ಲಿ ಮಾತ್ರ ಕಂಡು ಬರುವ ಸ್ಥಳೀಯ ಪ್ರಭೇದಗಳಲ್ಲಿ 150 ಹುಲ್ಲು, 100 ಆರ್ಕಿಡ್, 11 ತಾಳೆ, 9 ಮೆಣಸು ಮತ್ತು 7 ಸಿಸ್ಟು ಪ್ರಭೇದಗಳಿವೆ.

●.ಇಲ್ಲಿಯ ಸೂಕ್ಷ್ಮ ಪ್ರದೇಶಗಳನ್ನು ಅಧ್ಯಯನ ಮಾಡಿ, ಅದರ ಸಂರಕ್ಷಣೆಗೆ ಅಗತ್ಯವಾದ ನೀತಿ ನಿಲುವುಗಳನ್ನು ರೂಪಿಸಲು ಕೇಂದ್ರ ಸರ್ಕಾರ ರಚಿಸಿದ್ದ 14 ಪರಿಣತರ ತಂಡ ಪ್ರೊ. ಮಾಧವ ಗಾಡ್ಗೀಳ್ ಅವರ ನೇತೃತ್ವದಲ್ಲಿ ಅಧ್ಯಯನ ನಡೆಸಿ, 2011ರ ಆಗಸ್ಟ್‌ನಲ್ಲಿ ವಿವರವಾದ ವರದಿಯನ್ನು ಸಲ್ಲಿಸಿತು.ಈ ವರದಿಯಲ್ಲಿ, ಪಶ್ಚಿಮ ಘಟ್ಟಗಳನ್ನು ಜೀವ ಪರಿಸ್ಥಿತಿಯ ದೃಷ್ಟಿಯಿಂದ ಮೂರು ವಿವಿಧ ಹಂತಗಳ ಸೂಕ್ಷ್ಮ ವಲಯಗಳನ್ನಾಗಿ ವಿಭಾಗಿಸಲಾಗಿದೆ.

●.ಮೊದಲ ವರ್ಗದ ಸೂಕ್ಷ್ಮ ವಲಯದಲ್ಲಿ ಯಾವುದೇ ರೀತಿಯ ಜಲ ವಿದ್ಯುತ್ ಯೋಜನೆ ಅಥವಾ ಜಲಾಶಯಗಳ ನಿರ್ಮಾಣಕ್ಕೆ ಅವಕಾಶವಿಲ್ಲ. ಇದರಲ್ಲಿ ಒಟ್ಟು 26 ತಾಲೂಕುಗಳನ್ನು ಗುರುತಿಸಿದೆ.ಐದು ತಾಲೂಕುಗಳಲ್ಲಿ ಎರಡನೆಯ ಸೂಕ್ಷ್ಮವಲಯವನ್ನೂ, 12 ತಾಲೂಕುಗಳಲ್ಲಿ ಮೂರನೆಯ ವರ್ಗದ ಪ್ರದೇಶವನ್ನು ಗುರುತಿಸಿದೆ. ಈ ಪ್ರದೇಶಗಳಲ್ಲಿ ಯಾವ ಅಭಿವೃದ್ಧಿ ಚಟುವಟಿಕೆಗಳು ನಡೆಯಬಹುದು, ಯಾವುದು ನಡೆಯಬಾರದು ಎನ್ನುವುದನ್ನೂ ಸ್ಪಷ್ಟಪಡಿಸಿದೆ.

●.ಇದರೊಂದಿಗೆ ಪಶ್ಚಿಮ ಘಟ್ಟಗಳ ಸಂರಕ್ಷಣೆಯಲ್ಲಿ ಸ್ಥಳೀಯರ ಭಾಗವಹಿಸುವಿಕೆ, 2006ರ ಪರಿಶಿಷ್ಟ ಪಂಗಡ ಮತ್ತು ಅನುಸೂಚಿತ ಬುಡಕಟ್ಟು ಹಾಗೂ ಇತರೆ ಅರಣ್ಯವಾಸಿಗಳ ಹಕ್ಕುಗಳ ಅಧಿನಿಯಮ ನೀಡುವ ಸವಲತ್ತುಗಳನ್ನು ಅಲ್ಲಿಯ ಜನರಿಗೆ ಒದಗಿಸಬೇಕೆಂಬ ಶಿಫಾರಸು ಮಾಡಿದೆ.

●.ವಿಶ್ವಪರಂಪರೆಯ 39 ತಾಣಗಳ ಸಂರಕ್ಷಣೆ ಮಾಡುವಾಗ ಈ ವರದಿಯಲ್ಲಿರುವ ಅಂಶಗಳನ್ನು ಗಮನಿಸಬೇಕೆಂಬ ಸೂಚನೆಯನ್ನು ಯುನೆಸ್ಕೋ ಭಾರತ ಸರ್ಕಾರಕ್ಕೆ ನೀಡಿದೆ.

●.ತೀರ ಇತ್ತೀಚಿನವರೆಗೂ `ಜೀವ ವೈವಿಧ್ಯ' ಕೇವಲ ವಿಜ್ಞಾನಿಗಳ ಸಂಶೋಧಕರ ವಿಷಯವಾಗಿತ್ತು. ಆದರೆ ಮಾನವನ ಮೂಲಭೂತ ಅವಶ್ಯಕತೆಗಳಾದ ಅನ್ನ, ಆರೋಗ್ಯ, ಆವಾಸ, ಆದಾಯಗಳು ಬರುವುದೇ ಈ ಜೀವ ವೈವಿಧ್ಯದಿಂದ.

●.ಹೆಚ್ಚಾಗುತ್ತಾ ಬಂದ ಜನಸಂಖ್ಯೆ, ಮಾನವನ ಅಭಿವೃದ್ಧಿ ಪರ ಚಟುವಟಿಕೆಗಳು ಜೀವ ಪರಿಸರ ವ್ಯವಸ್ಥೆಗೆ ಉಂಟು ಮಾಡಿದ ಹಾನಿ, ಆವಾಸಗಳ ನಾಶ, ಕೃಷಿ ವಿಸ್ತರಣೆ, ಪರಿಸರ ಮಾಲಿನ್ಯ ಬದಲಾಗುತ್ತಿರುವ ಹವಾಮಾನ, ಇವೆಲ್ಲವುಗಳಿಂದ ಜೀವ ವೈವಿಧ್ಯದ ಅಳಿಯುವಿಕೆ ಹಿಂದೆಂದಿಗಿಂತಲೂ ಅಧಿಕವಾಗಿದೆ.

●.ಪ್ರತಿ ದಿನಪ್ರಭೇದಗಳ ಅಳಿಯುವಿಕೆ ನೈಸರ್ಗಿಕ ಪ್ರಮಾಣಕ್ಕಿಂತ ಸಾವಿರ ಪಟ್ಟು ಹೆಚ್ಚಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ವಿನಾಶದ ಕೊಂಡಿ ಮಾನವನನ್ನು ತಲುಪುವ ಮುಂಚೆಯೇ ಅವನ ಎಲ್ಲ ಅವಶ್ಯಕತೆಗಳನ್ನು ಪೂರೈಸುವ ಜೀವವೈವಿಧ್ಯದ ನಾಶದಿಂದ ಅವನು ಅಳಿಯುತ್ತಾನೆ.

●.ಹಾಗೆಯೇ ಇದೀಗ ಜನ ಸಾಮಾನ್ಯರೂ ಈ ಜೀವ ವೈವಿಧ್ಯ ಸಂರಕ್ಷಣೆಯಲ್ಲಿ ತೊಡಗಿಕೊಳ್ಳುವುದು ಅನಿವಾರ್ಯವಾಗಿದೆ. ಏಕೆಂದರೆ ಭಾರತ ಈ ನಿಟ್ಟಿನಲ್ಲಿ ಈ ವರೆಗೆ ಮಾಡಿರುವ ಪ್ರಯತ್ನ ಬಹಳ ನಿರಾಶಾದಾಯಕವಾಗಿದೆ.

●.22 ವರ್ಷಗಳ ಹಿಂದೆ ರಿಯೋ ಶೃಂಗ ಸಭೆಯಲ್ಲಿ ಶೇಕಡಾ 17 ರಷ್ಟು ಭೂಭಾಗವನ್ನು ಮನುಷ್ಯನ ಚಟುವಟಿಕೆಗಳಿಂದ ದೂರವಿಟ್ಟು ಸಂರಕ್ಷಣೆ ಮಾಡುತ್ತೇನೆಂದು ಸಹಿ ಮಾಡಿದ್ದ ಭಾರತ ಶೇಕಡಾ 4 ರಷ್ಟು ಭೂಭಾಗವನ್ನು ಮಾತ್ರ ಸಂರಕ್ಷಿತ ಪ್ರದೇಶವೆಂದು ಘೋಷಿಸಿದೆ.

●.ಸ್ವಾತಂತ್ರ್ಯ ಪೂರ್ವದಿಂದಲೂ ರೂಪಿಸಲಾಗಿದ್ದ ನಮ್ಮ ಅಪರೂಪದ ತಳಿ ಖಜಾನೆಗಳಲ್ಲಿ ಸಂಗ್ರಹವಾಗಿದ್ದ ನಾಲ್ಕು ಲಕ್ಷ ತಳಿ ಮೂಲಗಳನ್ನು ಬಹುರಾಷ್ಟ್ರೀಯ ಕಂಪೆನಿಗಳು ಪಡೆದುಕೊಂಡಿವೆ. ವಿಶಿಷ್ಠ ಪರಿಸರಗಳಲ್ಲಿ ಬದುಕಿ ಫಲ ನೀಡಬಹುದಾಗಿದ್ದ ತಳಿಗಳು ಅನ್ಯರ ಪಾಲಾಗಿವೆ. ಆಹಾರ, ಔಷಧಿಗಳ ಮೂಲವಾದ ವನ್ಯ ಪ್ರಬೇಧಗಳು ನಶಿಸಿ ಹೋಗುತ್ತಿವೆ.ಇಂತಹ ಪರಿಸ್ಥಿತಿಯಲ್ಲಿ ದೇಶದ ಭಾರತೀಯ ಜೀವ ವೈವಿಧ್ಯ ಕಾಂಗ್ರೆಸ್ ತೆಗೆದುಕೊಳ್ಳಲಿರುವ ನಿರ್ಣಯಗಳು ಮಹತ್ವಪೂರ್ಣವಾಗಲಿವೆ. ಸುಸ್ಥಿರ ಅಭಿವೃದ್ಧಿಗಾಗಿ ಜೈವಿಕ ವೈವಿಧ್ಯದ ಸಂರಕ್ಷಣೆ ಅತ್ಯವಶ್ಯಕ. ಪಶ್ಚಿಮ ಘಟ್ಟಗಳಿಗೆ ದೊರೆತಿರುವ ವಿಶ್ವಪರಂಪರೆಯ ಮಾನ್ಯತೆಯ ಬಗೆಗಿನ ಸರಿಯಾದ ತಿಳಿವಳಿಕೆ, ಸ್ಥಳೀಯರ ಭಾಗವಹಿಸುವಿಕೆ ಮತ್ತು ಜೈವಿಕ ವೈವಿಧ್ಯದ ದಾಖಲಾತಿಗೆ ಜನಪರ ಆಂದೋಲನಗಳ ಅವಶ್ಯಕತೆ ಇದೆ. ಎಳೆಯರು, ಯುವಕರು, ರೈತರು, ಮಹಿಳೆಯರು ಈ ಕ್ಷೇತ್ರಕ್ಕೆ ಕೈ ಹಾಕಿದಾಗ ಮಾತ್ರ ಜೈವಿಕ ವೈವಿಧ್ಯ ಉಳಿಯಲಿದೆ.

No comments:

Post a Comment