"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday 3 December 2015

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : ■. ಭಯೋತ್ಪಾದನೆ ಒಂದು ಜಾಗತಿಕ ಸವಾಲು ಹಾಗೂ ಭಯೋತ್ಪಾದನೆಯಲ್ಲಿ ಮಹಿಳೆ ವಹಿಸುತ್ತಿರುವ ಪಾತ್ರ: (Terrorism is a global challenge and a role of woman involving in terrorism)

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ :
■. ಭಯೋತ್ಪಾದನೆ ಒಂದು ಜಾಗತಿಕ ಸವಾಲು ಹಾಗೂ ಭಯೋತ್ಪಾದನೆಯಲ್ಲಿ ಮಹಿಳೆ  ವಹಿಸುತ್ತಿರುವ ಪಾತ್ರ:
(Terrorism is a global challenge and a role of woman involving in terrorism)
━━━━━━━━━━━━━━━━━━━━━━━━━━━━━━━━━━━━━━━━━━
★ಸಾಮಾನ್ಯ ಅಧ್ಯಯನ
(General Studies)


●. ಭಯೋತ್ಪಾದನೆ ಒಂದು ಜಾಗತಿಕ ಸವಾಲು:
••┈┈┈┈┈┈┈┈┈┈┈┈┈┈┈┈┈┈┈┈┈┈••
•► ಪುರಾತನ ಚೀನಿ ತತ್ವಜ್ಞಾನಿಯೊಬ್ಬನು ಹೇಳುವ ಮಾತುಗಳಿವು: ‘ಒಬ್ಬನನ್ನು ಕೊಲ್ಲು, ಇದರಿಂದ 1000 ಮಂದಿಗೆ ಹೆದರಿಸು’. ಭಯೋತ್ಪಾದನೆಯನ್ನು ವಿವರಿಸುವ ಮಾತುಗಳಾಗಿ ಇದನ್ನು ಪರಿಭಾವಿಸಬಹುದು.

•► ಭಯೋತ್ಪಾದನೆ ಇಂದು ಬೆಳೆಯುತ್ತಿರುವ ಅತಿ ದೊಡ್ಡ ಸಮಸ್ಯೆ. ಆತ್ಮಹತ್ಯಾ ದಾಳಿಗಳು  ಅನೇಕ ಉಗ್ರ ಗುಂಪುಗಳು ಅನುಸರಿಸುತ್ತಿರುವ ಕಾರ್ಯತಂತ್ರವಾಗಿಬಿಟ್ಟಿದೆ. ಇದು ಮಧ್ಯಪ್ರಾಚ್ಯ ಅಥವಾ ಇಸ್ಲಾಮಿಕ್ ಗುಂಪುಗಳಿಗಷ್ಟೇ  ಸೀಮಿತವಾಗಿಲ್ಲ. ಶ್ರೀಲಂಕಾದ  ಎಲ್‌ಟಿಟಿಇ (ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಳಂ) ಅತ್ಯಾಧುನಿಕ  ರೀತಿಯಲ್ಲಿ ಆತ್ಮಹತ್ಯಾ ದಾಳಿಗಳನ್ನು ನಡೆಸುವುದನ್ನು ಕರಗತ ಮಾಡಿಕೊಂಡಿತ್ತು. 1987ರ ಜುಲೈ 5ರಂದು ಮೊದಲ ಆತ್ಮಹತ್ಯಾ ಕಾರ್ಯಾಚರಣೆ ನಡೆಸಿದ ನಂತರ ಕನಿಷ್ಠ  250 ಆತ್ಮಹತ್ಯಾ ದಾಳಿಗಳನ್ನು ಎಲ್‌ಟಿಟಿಇ ನಡೆಸಿದೆ. ಟರ್ಕಿಯ ಮಾರ್ಕ್ಸ್‌ವಾದಿ ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ (ಪಿಕೆಕೆ) ಹಾಗೂ ರಷ್ಯಾದ  ಜನಾಂಗೀಯ ರಾಷ್ಟ್ರೀಯವಾದಿ, ಇಸ್ಲಾಮ್‌ವಾದಿ ಚೆಚೆನ್‌ಗಳೂ  ಆತ್ಮಹತ್ಯಾ ಭಯೋತ್ಪಾದನೆ ಬಳಸಿವೆ.


●. 1980ರ ದಶಕದ ನಂತರ ಈ ಆತ್ಮಹತ್ಯಾ ದಾಳಿಗಳು ಜಗತ್ತಿನ ವಿವಿಧ ಭಾಗಗಳಿಗೆ ಪಸರಿಸಿತು. ಇದಕ್ಕೆ ಕಾರಣ ಹಲವು ಕಾರಣಗಳನ್ನು ಕೊಡಬಹುದು.
━━━━━━━━━━━━━━━━━━━━━━━━━━━━━━━━━━━━━━━━━━
•► ಹೆಚ್ಚುತ್ತಿರುವ ಜನಸಂಖ್ಯೆ, ಬಡತನ, ಸಂಪನ್ಮೂಲಗಳ ಅಭಾವ, ಜನಾಂಗೀಯ ಸಂಘರ್ಷ, ನಿರುದ್ಯೋಗ, ಯುದ್ಧ- ಸಂಘರ್ಷಗಳಿಂದಾಗಿ ನಿರಾಶ್ರಿತರಾದವರ ವಲಸೆ, ಬಡ ರಾಷ್ಟ್ರಗಳಿಂದ ಶ್ರೀಮಂತ ರಾಷ್ಟ್ರಗಳಿಗೆ ವಲಸೆ ಹೋಗುವುದರ  ಜೊತೆಗೆ ತವರು ರಾಷ್ಟ್ರದ ಸಂಘರ್ಷವನ್ನೂ ಜೊತೆಗೊಯ್ಯುವುದು, ನಗರೀಕರಣ, ಪಾರಂಪರಿಕ ವ್ಯವಸ್ಥೆಯ ವಿನಾಶ, ಮೂಲಭೂತವಾದಿ ಗುಂಪುಗಳ ಪ್ರಾಬಲ್ಯ, ಪ್ರಾದೇಶಿಕ ಅಸಮತೋಲನ, ಸರ್ಕಾರ ಪ್ರಾಯೋಜಿತ ಹಿಂಸಾಚಾರ-  ಇವು ಸಮಕಾಲೀನ ಜಗತ್ತಿನಲ್ಲಿ ಭಯೋತ್ಪಾದನೆ ಹೆಚ್ಚಳಕ್ಕೆ ಮುಖ್ಯ ಕಾರಣಗಳೆನ್ನಬಹುದು.

•► ದಮನ, ಅನ್ಯಾಯ ಹಾಗೂ ವೈಯಕ್ತಿಕ ನೋವಿನಿಂದ ಪಲಾಯನ ಮಾಡಲು ಅಥವಾ ಸೇಡು ತೀರಿಸಿಕೊಳ್ಳಲು ಆತ್ಮಹತ್ಯಾ ದಾಳಿಗಳಿಗೆ ಸ್ವಯಂಪ್ರೇರಿತರಾಗಿ ವ್ಯಕ್ತಿಗಳು ಮುಂದಾಗುವುದಿದೆ ಎಂದೂ ಹೇಳಲಾಗುತ್ತದೆ.

•► ಆತ್ಮಹತ್ಯಾ ಕಾರ್ಯಾಚರಣೆಗಳಿಗೆ ಈಚಿನ ದಿನಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಹಿಳೆಯರನ್ನೂ ಬಳಸಲಾಗುತ್ತಿರುವುದು ಹೊಸದೊಂದು ಪಿಡುಗಾಗಿದೆ. ಬೊಕೊ ಹರಾಮ್ ಸಂಘಟನೆ ಈಗ ಐಎಸ್ ಉಗ್ರರ ಜೊತೆ ಗುರುತಿಸಿಕೊಂಡಿದ್ದು  ವಿಲಾಯತ್ ಅಲ್ ಸುಡಾನ್ ಅಲ್ ಗರ್ಬಿ ಎಂಬ ಹೊಸ ಹೆಸರು ಪಡೆದುಕೊಂಡಿದೆ. ಐಎಸ್  ಉಗ್ರರ ಪಶ್ಚಿಮ ಆಫ್ರಿಕಾ ಶಾಖೆಯಾಗಿ ಇದು ಕಾರ್ಯ ನಿರ್ವಹಿಸುತ್ತಿದೆ. ಇತಿಹಾಸದಲ್ಲಿ ಈ ಹಿಂದೆಂದೂ ಇಲ್ಲದಷ್ಟು ಪ್ರಮಾಣದಲ್ಲಿ ಮಹಿಳಾ ಆತ್ಮಹತ್ಯಾ ಬಾಂಬರ್‌ಗಳನ್ನು ಇದು ನಿಯೋಜಿಸುತ್ತಿರುವುದು ಆತಂಕಕಾರಿ.


●. ಆತ್ಮಹತ್ಯಾ ಕಾರ್ಯಾಚರಣೆಗಳಿಗೆ ಮಹಿಳೆಯರ ಬಳಕೆ :
━━━━━━━━━━━━━━━━━━━━━━━━━━━━━━━
•►  ಆತ್ಮಹತ್ಯಾ ಕಾರ್ಯಾಚರಣೆಗಳಿಗೆ ಮಹಿಳೆಯರನ್ನು ಬಳಸಿಕೊಳ್ಳುವ ಕ್ರಿಯೆ ಆರಂಭವಾದದ್ದು 20ನೇ ಶತಮಾನದ ದ್ವಿತೀಯಾರ್ಧದಲ್ಲಿ. 1980ರ ದಶಕದ ಮಧ್ಯಭಾಗದಲ್ಲಿ ಲೆಬನಾನ್‌ನಲ್ಲಿ ಶುರುವಾದ ಪಿಡುಗು ಇದು.

•►  ಇಸ್ರೇಲಿ ಮಿಲಿಟರಿ ಹಾಗೂ ಇಸ್ರೇಲಿ ಬೆಂಬಲಿತ ಸೌತ್ ಲೆಬನಾನ್ ಆರ್ಮಿಯ ಮೇಲೆ ದಾಳಿ ನಡೆಸಲು ಲೆಬನಾನ್‌ನ ಕಮ್ಯುನಿಸ್ಟ್ ಸಿರಿಯನ್ ಸೋಷಿಯಲ್ ನ್ಯಾಷನಲಿಸ್ಟ್ ಪಾರ್ಟಿಯ (ಎಸ್‌ಎಸ್‌ಎನ್‌ಪಿ) ಸದಸ್ಯರು ಕಾರ್ ಬಾಂಬ್‌ಗಳನ್ನು ಬಳಸಿದ್ದರು.  ಜೊತೆಗೆ ಮಹಿಳಾ ಆತ್ಮಹತ್ಯಾ ಬಾಂಬರ್‌ಗಳನ್ನೂ ಬಳಸಿದರು. ಲೆಬನಾನ್‌ನಲ್ಲಿ ಇಷ್ಟರಲ್ಲಾಗಲೇ ಆತ್ಮಹತ್ಯಾ ಬಾಂಬ್ ದಾಳಿಗಳನ್ನು  ಮೊದಲ ಬಾರಿಗೆ ಇಸ್ಲಾಮಿಕ್ ತಂಡ ಹೆಜ್ಬೊಲ್ಲಾ  ಬಳಕೆಗೆ ತಂದಾಗಿತ್ತು. ಆದರೆ ಧಾರ್ಮಿಕ  ಎನ್ನುವುದಕ್ಕಿಂತ  ಸೆಕ್ಯುಲರ್ ರಾಜಕೀಯ ಕಾರ್ಯಸೂಚಿಯನ್ನು ಪ್ರತಿಪಾದಿಸುವುದಕ್ಕಾಗಿ ಸಿರಿಯನ್ ಸೋಷಿಯಲ್ ನ್ಯಾಷನಲಿಸ್ಟ್ ಪಾರ್ಟಿ  ಇದನ್ನು ಅಸ್ತ್ರವಾಗಿ ಬಳಸಿತು.

•►  ಶ್ರೀಲಂಕಾದ ತಮಿಳು ಪ್ರದೇಶಗಳಲ್ಲಿ ಸಿಂಹಳೀಯರ ಆಡಳಿತ ಕಿತ್ತೊಗೆಯಲು  ಬದ್ಧವಾದ ಕ್ರಾಂತಿಕಾರಿ ಸಂಘಟನೆ  ಎಲ್‌ಟಿಟಿಇ,  ಮಹಿಳಾ ಆತ್ಮಹತ್ಯಾ ದಳಗಳ ಬಳಕೆಯಲ್ಲಿ ಪರಿಣತಿ ಸಾಧಿಸಿತ್ತು. 1990ರ ದಶಕದಿಂದ  2009ರಲ್ಲಿ ಅದು  ಅಂತ್ಯವಾಗುವವರೆಗಿನ ಅವಧಿಯಲ್ಲಿ  ಬೇರೆ ಯಾವುದೇ ಉಗ್ರ ಸಂಘಟನೆಗಿಂತ   ಹೆಚ್ಚು ಮಹಿಳಾ ಆತ್ಮಹತ್ಯಾ ಬಾಂಬರ್‌ಗಳನ್ನು ಎಲ್‌ಟಿಟಿಇ ಬಳಸಿತ್ತು.  ಆ ಅವಧಿಯಲ್ಲಿ ಕನಿಷ್ಠ 46 ಮಹಿಳೆಯರನ್ನು ಆತ್ಮಹತ್ಯಾ ದಳಗಳಲ್ಲಿ ನಿಯೋಜಿಸಲಾಗಿತ್ತು. ಎಲ್‌ಟಿಟಿಇಯ ಮೊದಲ ಮಹಿಳಾ ಆತ್ಮಹತ್ಯಾ ಬಾಂಬರ್ ಧನು, 1991ರ ಮೇ ತಿಂಗಳಲ್ಲಿ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರಿಗೆ   ಸಾರ್ವಜನಿಕ ರ‍್ಯಾಲಿಯಲ್ಲಿ ಹಾರ ಹಾಕುವ ನೆಪದಲ್ಲಿ  ಸ್ಫೋಟಿಸಿ ಹತ್ಯೆ ಮಾಡಿದ್ದರು.

•►  1990ರ ದಶಕದ  ಅಂತ್ಯದಲ್ಲಿ  ಮಹಿಳಾ ಆತ್ಮಹತ್ಯಾ ಬಾಂಬರ್‌ಗಳನ್ನು ಬಳಸಿಕೊಂಡು ಟರ್ಕಿಷ್ ಮಿಲಿಟರಿ  ವಿರುದ್ಧ  ಕರ್ಡಿಸ್ತಾನ್ ವರ್ಕರ್ಸ್ ಪಾರ್ಟಿ (PKK)  ಅನೇಕ  ದಾಳಿಗಳನ್ನು ನಡೆಸಿದೆ.  ಅನೇಕ ಪಿಕೆಕೆ ಕಾರ್ಯಕರ್ತರು ಸ್ಫೋಟಕ ಸಾಧನಗಳನ್ನು ಹೊಟ್ಟೆಯ ಸುತ್ತ ಕಟ್ಟಿಕೊಂಡು ಗರ್ಭಿಣಿ ಮಹಿಳೆಯರಾಗಿ ತಮ್ಮನ್ನು ಬಿಂಬಿಸಿಕೊಂಡಿದ್ದೂ ಇದೆ. ಆರಂಭದಲ್ಲಿ ಈ ಹಿಂಸಾತ್ಮಕ ಕಾರ್ಯತಂತ್ರ ಅಳವಡಿಸಿಕೊಂಡವರೆಲ್ಲಾ ಮಾರ್ಕ್‌್ಸವಾದಿ ಗುಂಪುಗಳಿಗೆ ಸೇರಿದವರಾಗಿದ್ದರು ಎಂಬುದನ್ನು ಗಮನಿಸಬೇಕು.

•►  ಈಗ ಚಿತ್ರಣ ಬದಲಾಗಿದೆ. ಆತ್ಮಹತ್ಯಾ ದಾಳಿಗಳನ್ನು ನಡೆಸುತ್ತಿರುವ ಹೆಚ್ಚಿನವರು ಜಿಹಾದಿಗಳು. ಮಹಿಳೆಯರನ್ನು ಆತ್ಮಹತ್ಯಾ ಬಾಂಬರ್‌ಗಳಾಗಿ ನಿಯೋಜನೆ ಮಾಡಿದ ಮೊದಲ ತೀವ್ರವಾದಿ ಇಸ್ಲಾಮಿಕ್ ಸಂಘಟನೆ ಎಂದರೆ ಚೆಚೆನ್ ಬಂಡುಕೋರರು. ಚೆಚೆನ್ ಮಹಿಳಾ ಆತ್ಮಹತ್ಯಾ ಬಾಂಬರ್‌ಗಳನ್ನು ‘ಬ್ಲ್ಯಾಕ್ ವಿಡೊ’ಗಳೆಂದು ಕರೆಯಲಾಗುತ್ತದೆ.    ಮೊದಲ ಬ್ಲ್ಯಾಕ್ ವಿಡೊ ಹವಾ ಬಾರಾಯೆವ್. ಈಕೆ ಚೆಚೆನ್ ಬಂಡುಕೋರರ ಪರವಾಗಿ ದೇಹದೊಳಗೆ ಅಡಗಿಸಿಟ್ಟುಕೊಂಡಿದ್ದ ಸ್ಫೋಟಕವನ್ನು ಸ್ಫೋಟಿಸಿಕೊಂಡು   ರಷ್ಯನ್ ವಿಶೇಷ ಪಡೆಗಳ  27 ಯೋಧರನ್ನು 2000 ಜೂನ್‌ನಲ್ಲಿ ಹತ್ಯೆ ಮಾಡಿದ್ದಳು. 2000 ದಿಂದ 2004ರವರೆಗಿನ ಅವಧಿಯಲ್ಲಿ ಈ ಬ್ಲ್ಯಾಕ್ ವಿಡೊಗಳು,ರಷ್ಯನ್ ಮಿಲಿಟರಿ ನೆಲೆ ಹಾಗೂ ನಾಗರಿಕರ ಮೇಲೆ ದಾಳಿಗಳನ್ನು ನಡೆಸಿದ್ದುದಲ್ಲದೆ ಚೆಚೆನ್ ಅಧ್ಯಕ್ಷರ ಹತ್ಯೆಗೂ ಯತ್ನಿಸಿದ್ದರು.

•►  ಮಹಿಳಾ ಬಾಂಬರ್‌ಗಳಿಗೆ ಒಂದು ಅನುಕೂಲವಿದೆ. ಉಗ್ರರೆಂದರೆ ಹೀಗಿರಬಹುದು ಎಂಬಂತಹ ತಥಾಕಥಿತ ವರ್ಣನೆಗೆ ಅವರು ಅತೀತರು. ಹೀಗಾಗಿ ಭದ್ರತೆ ಅಧಿಕಾರಿಗಳ ಕಣ್ಣುತಪ್ಪಿಸಿ ಸಾಗಬಹುದಾದ ಅನುಕೂಲ. ದೈಹಿಕವಾಗಿ ತಪಾಸಣೆ ಮಾಡಲು ಅಥವಾ ಕೆಲವು ಸಂದರ್ಭಗಳಲ್ಲಿ ನೇರವಾಗಿ ದೃಷ್ಟಿಸಿನೋಡಲೂ ಸಾಧ್ಯವಾಗದ ರೀತಿಯ ಸಾಂಸ್ಕೃತಿಕ  ನಿರ್ಬಂಧಗಳು ಮಹಿಳಾ ಆತ್ಮಹತ್ಯಾ ಬಾಂಬರ್‌ಗಳಿಗೆ ಅನುಕೂಲಕರವಾಗಿ ಪರಿಣಮಿಸುತ್ತವೆ.

•►  2002ರಲ್ಲಿ ಇಸ್ರೇಲ್– ಪ್ಯಾಲೆಸ್ಟೀನ್  ತೀವ್ರ ಸಂಘರ್ಷದ ಸಂದರ್ಭದಲ್ಲಿ ಹೊಸ ಭದ್ರತಾ ಕ್ರಮಗಳನ್ಮು ಅಳವಡಿಸಿಕೊಂಡು  ಆತ್ಮಹತ್ಯಾ ಬಾಂಬ್ ದಾಳಿಗಳನ್ನು ಇಸ್ರೇಲ್ ಹತ್ತಿಕ್ಕತೊಡಗಿತು. ಆಗ ಇದಕ್ಕೆ ಪ್ರತಿಯಾದ ಕಾರ್ಯತಂತ್ರವಾಗಿ ಪ್ಯಾಲೆಸ್ಟೀನೀಯರು ಮಹಿಳಾ ಬಾಂಬರ್‌ಗಳನ್ನು ನಿಯೋಜಿಸಲಾರಂಭಿಸಿದರು.  ಅಲ್ ಅಕ್ಸಾ ಮಾರ್ಟೈರ್ಸ್, ಪ್ಯಾಲೆಸ್ಟೀನಿಯನ್ ಇಸ್ಲಾಮಿಕ್ ಜಿಹಾದ್ (ಪಿಐಜೆ) ಹಾಗೂ ನಂತರ ಹಮಾಸ್, ಇಸ್ರೇಲ್ ವಿರುದ್ಧದ ದಾಳಿಗಳಲ್ಲಿ ಮಹಿಳಾ ಆತ್ಮಹತ್ಯಾ ಬಾಂಬರ್‌ಗಳನ್ನು ನಿಯೋಜಿಸಲಾರಂಭಿಸಿತ್ತು. ಪ್ಯಾಲೆಸ್ಟೀನ್ ಆತ್ಮಹತ್ಯಾ ಬಾಂಬರ್‌ಗಳು ಅದರಲ್ಲೂ ಮಹಿಳಾ ಬಾಂಬರ್‌ಗಳ ಸಂಖ್ಯೆ 2002– 2003ರಲ್ಲಿ ಎತ್ತರಕ್ಕೇರಿ ನಂತರ  ಇಳಿಮುಖವಾಗಿದೆ.

•►  ಆದರೆ,ಪರಿಣಾಮಕಾರಿಯಾದ ಈ  ಕಾರ್ಯ ತಂತ್ರವನ್ನು ಇತರ ಇಸ್ಲಾಮಿಕ್ ಸಂಘಟನೆಗಳು ಕಂಡುಕೊಂಡಿದ್ದು ದುರಂತ. ಈಗ ‘ಇಸ್ಲಾಮಿಕ್ ಸ್ಟೇಟ್’ಎಂದು ಕರೆಯಲಾಗುವ ಇರಾಕ್‌ನ ಅಬು ಮುಸಾಬ್ ಅಲ್– ಝಾರ್ ಕ್ವಾವಿಯ ಅಲ್ ಕೈದಾ 2005ರ ಉತ್ತರಾರ್ಧದಲ್ಲಿ ಮಹಿಳಾ ಆತ್ಮಹತ್ಯಾ ಬಾಂಬರ್‌ಗಳನ್ನು ನಿಯೋಜಿಸಲು ಶುರು ಮಾಡಿತು.  2005ರ ನವೆಂಬರ್‌ನಲ್ಲಿ ಜೋರ್ಡಾನ್‌ನ  ಅಮ್ಮಾನ್‌ನಲ್ಲಿ ಮೂರು ಹೋಟೆಲ್‌ಗಳ ಮೇಲೆ  ನಡೆದ  ದಾಳಿಯಲ್ಲಿ ಭಾಗವಹಿಸಿದ್ದವರು  ಮಹಿಳಾ ಆತ್ಮಹತ್ಯಾ ಬಾಂಬರ್‌ಗಳು. ಆದರೆ ಈ ಕ್ರಮ ಮುಸ್ಲಿಂ ಸಮುದಾಯದಲ್ಲಿ  ತೀವ್ರ ಟೀಕೆಗಳಿಗೆ ಒಳಗಾಯಿತು.  ಅದರಲ್ಲೂ ಅಮ್ಮಾನ್ ಮೇಲಿನ ದಾಳಿ ಸಂದರ್ಭದಲ್ಲಿ  ಮಹಿಳೆಯೊಬ್ಬಳು ಹೊತ್ತಿದ್ದಂತಹ ಸ್ಫೋಟಕಗಳು ಸ್ಫೋಟಗೊಳ್ಳದೆ  ಆಕೆಯನ್ನು ಸೆರೆ ಹಿಡಿಯಲಾಗಿತ್ತು. ಆ ನಂತರ ಮಹಿಳಾ ಬಾಂಬರ್‌ಗಳನ್ನು  ಬಳಸುವ ಪ್ರಮಾಣ ಕಡಿಮೆ ಆಯಿತು.

ನಂತರದ ದಿನಗಳಲ್ಲಿ  ಪಾಕಿಸ್ತಾನದ ತಾಲಿಬಾನಿಗಳೂ ಮಹಿಳಾ ಆತ್ಮಹತ್ಯಾ ಬಾಂಬರ್ ಗಳನ್ನು ನಿಯೋಜಿಸಲು ಶುರುಮಾಡಿದರು. ಪಾಕಿಸ್ತಾನದಲ್ಲಿ ಮೊದಲ ಮಹಿಳಾ ಆತ್ಮಹತ್ಯಾ ದಾಳಿ ನಡೆದದ್ದು 2010ರ ಡಿಸೆಂಬರ್ 24ರಂದು.

•►  ಮಹಿಳೆಯರನ್ನು ಭಯೋತ್ಪಾದನೆಗೆ ಸೆಳೆಯುವ  ಅಂಶಗಳಾದರೂ ಏನು? ಅವರದೇ ಮಾತುಗಳ ಪ್ರಕಾರ, ಪುರುಷ ಸಹಚರರಂತೆ ಅವರೂ ಕೂಡ ರಾಜಕೀಯ ಬದ್ಧತೆಯಿಂದಾಗಿ ಹಿಂಸಾಚಾರಕ್ಕೆ ಹೊರಳಿಕೊಳ್ಳುತ್ತಾರೆ. ಐಎಸ್ ಉಗ್ರರು ಮಹಿಳೆಯರನ್ನು ಕ್ರೂರ ರೀತಿಯಲ್ಲಿ ದಮನ ಮಾಡುತ್ತಿರುವ ಕಥನಗಳು ಬಹಿರಂಗಗೊಳ್ಳುತ್ತಲೇ ಇದೆ. ಆದರೆ ಅನೇಕ ಮಹಿಳೆಯರು ಐಎಸ್ ಉಗ್ರ ಬಣ ಸೇರಲು ಉತ್ಸುಕರಾಗಿದ್ದಾರೆಂಬುದು ಕಥನದ ಮತ್ತೊಂದು ಮಗ್ಗುಲು. ಐಎಸ್‌ಗೆ ಪಶ್ಚಿಮ ರಾಷ್ಟ್ರಗಳಿಂದ ನಿಯೋಜನೆಗೊಳ್ಳುವವರಲ್ಲಿ ಶೇ 10ರಷ್ಟು ಮಂದಿ ಮಹಿಳೆಯರು ಎನ್ನುತ್ತವೆ ಅಂಕಿಅಂಶಗಳು.

•►  ಫ್ರಾನ್ಸ್‌ನಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಿದೆ. ಐಎಸ್‌ನಂತಹ ಉಗ್ರ ಗುಂಪುಗಳಿಗೆ ಮಹಿಳೆಯರು ಸೇರಿಕೊಳ್ಳಲು ಪುರುಷರಿಗಿರುವಂತಹದ್ದೇ ಕಾರಣಗಳಿರಬಹುದು; ಸಾಹಸ, ಅಸಮಾನತೆ, ಅನಾಥಪ್ರಜ್ಞೆ ಅಥವಾ ಸಿದ್ಧಾಂತದ ಸೆಳೆತ. ಸಾರ್ವಜನಿಕವಾಗಿ ಫ್ರಾನ್ಸ್‌ನಲ್ಲಿ ಬುರ್ಕಾ ಮೇಲಿನ ನಿಷೇಧದಂತಹ ವಿಚಾರವೂ ಧಾರ್ಮಿಕ ಆಚರಣೆಗಳ ನಿರ್ಬಂಧದಂತಾಗಿ ಅನುಭವಿಸಿದ ಅನಾಥ ಪ್ರಜ್ಞೆಯ ಕಾರಣದಿಂದಾಗಿ ಐಎಸ್ ಸೆಳೆತಕ್ಕೆ ಸಿಕ್ಕಿದ್ದಾಗಿ ಐಎಸ್ ಗುಂಪಿನಲ್ಲಿರುವ ಫ್ರಾನ್ಸ್ ಮಹಿಳೆಯರು ಹೇಳಿಕೊಂಡಿದ್ದಾರೆ. ಹಲವು  ಕ್ರೂರ ಮಾರ್ಗಗಳಲ್ಲಿ ಮಹಿಳೆಯರನ್ನು ಬಳಸಿಕೊಳ್ಳಲು ಭಯೋತ್ಪಾದಕರು ಮುಂದಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ, ಲಿಂಗತ್ವ ಹಾಗೂ ಭಯೋತ್ಪಾದನೆಯ ಕುರಿತಾದ ಸರಳ  ಪರಿಕಲ್ಪನೆಯನ್ನು ಬಿಟ್ಟು  ಬದಲಾಗುತ್ತಿರುವ ಕಾಲದ ವರ್ತಮಾನದ ಕಣ್ಣಿನಿಂದ ನೋಡಬೇಕು. ಯಾವುದನ್ನೂ ಸರಳೀಕರಿಸಲಾಗುವುದಿಲ್ಲ.  ಭಯೋತ್ಪಾದನೆಯಲ್ಲಿ ಮಹಿಳೆ  ವಹಿಸುತ್ತಿರುವ ಪಾತ್ರವನ್ನೂ ಅರ್ಥ ಮಾಡಿಕೊಳ್ಳಬೇಕಾದ ಕಾಲ ಇದು

No comments:

Post a Comment