"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday, 7 December 2015

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : ■.'ಬಾಹ್ಯಾಕಾಶ ನಿಲ್ದಾಣ' ದ ಕುರಿತು ಟಿಪ್ಪಣಿ ಬರೆಯಿರಿ. (Write a short notes on 'Space Station')

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ :
■.'ಬಾಹ್ಯಾಕಾಶ ನಿಲ್ದಾಣ' ದ ಕುರಿತು ಟಿಪ್ಪಣಿ ಬರೆಯಿರಿ.
(Write a short notes on 'Space Station')
━━━━━━━━━━━━━━━━━━━━━━━━━━━━━━━━━

★ಖಗೋಳಶಾಸ್ತ್ರ
(Astronomy)

★ಬಾಹ್ಯಾಕಾಶ ತಂತ್ರಜ್ಞಾನ
(Space Technology)


•► ಬಾಹ್ಯಾಕಾಶ ನಿಲ್ದಾಣ, ಇದನ್ನು ಕಕ್ಷಾ ನಿಲ್ದಾಣ ಅಥವಾ ಕಕ್ಷಾ ಬಾಹ್ಯಾಕಾಶ ನಿಲ್ದಾಣ ಅಂತಲೂ ಕರೆಯುತ್ತಾರೆ. ನಿಲ್ದಾಣವೆಂದರೆ ಬಸ್, ರೈಲು, ವಿಮಾನ  ನಿಲ್ದಾಣದಂತೆ ಒಂದೇ ಜಾಗದಲ್ಲಿ ನೆಲೆಗೊಂಡಿರುವುದಿಲ್ಲ. ಸದಾ ಭೂಮಿಯ ಸುತ್ತ ಸುತ್ತುತ್ತಲೇ ಇರುತ್ತದೆ.

•► ಇದು ಕಡಿಮೆ ಭೂ ಕಕ್ಷಾ ಪರಿಧಿಯಲ್ಲಿ ತನ್ನ ಕಕ್ಷೆಯಲ್ಲಿ ಭೂಮಿ ಯನ್ನು ಸುತ್ತುವ ಬಾಹ್ಯಾಕಾಶ/ವ್ಯೋಮ ನೌಕೆ. ಈ ನೌಕೆಯೂ ಸಿಬ್ಬಂದಿ ವಾಸಿಸಲು ಯೋಗ್ಯವಾಗಿರುವ, ದೀರ್ಘಕಾಲ ಬಾಹ್ಯಾಕಾಶದಲ್ಲಿರುವ ಮತ್ತು ಇನ್ನೊಂದು ವ್ಯೋಮನೌಕೆಯನ್ನು ಈ ವಾಹನಕ್ಕೆ ಡಾಕ್  ಮಾಡುವ (ಜೋಡಿಸಲು ಅವಕಾಶ ನೀಡುವ) ವ್ಯವಸ್ಥೆಯನ್ನು ಹೊಂದಿರುತ್ತದೆ.

•► ಬಾಹ್ಯಾಕಾಶ ನಿಲ್ದಾಣಗಳು ಸಿಬ್ಬಂದಿ ಸಹಿತ ಇತರೆ ವ್ಯೋಮ ನೌಕೆಗಳಿಂದ ವಿಭಿನ್ನವಾಗಿರುತ್ತವೆ. ಏಕೆಂದರೆ ಇವುಗಳಿಗೆ ಪ್ರಮುಖ ನೋದನ (ಪ್ರೊಪಲ್ಷನ್) ಅಥವಾ ಲ್ಯಾಂಡಿಂಗ್ ವ್ಯವಸ್ಥೆಯ ಅವಶ್ಯ ಕತೆ ಇರುವುದಿಲ್ಲ. ಇತರೆ ವ್ಯೋಮನೌಕೆಗಳ ಮೂಲಕ ಸಿಬ್ಬಂದಿ ಮತ್ತು ಸಾಮಗ್ರಿಗಳನ್ನು ಈ ನಿಲ್ದಾಣಕ್ಕೆ ರವಾನಿಸಲಾಗುತ್ತದೆ.

•► ಬಾಹ್ಯಾಕಾಶ ನಿಲ್ದಾಣಗಳನ್ನು ನಾಗರಿಕ ಮತ್ತು ಮಿಲಿಟರಿ ಉದ್ದೇಶ ಗಳಿಗೆ ಬಳಸಲಾಗುತ್ತದೆ. ಇದಕ್ಕೆ ಬೇಕಾಗುವ ವಿದ್ಯುಚ್ಛಕ್ತಿಯನ್ನು ಸೌರಶಕ್ತಿಯಿಂದ ಉತ್ಪಾದಿಸಲಾಗುತ್ತದೆ.

•► ಬಾಹ್ಯಾಕಾಶ ನಿಲ್ದಾಣದಲ್ಲಿ ಶೂನ್ಯ ಗುರುತ್ವ ಇರುತ್ತದೆ ಮತ್ತು ಉಸಿರಾಟಕ್ಕೆ ಬೇಕಾಗುವ ಪ್ರಾಣವಾಯು ಆಮ್ಲಜನಕ ಅಲ್ಲಿರುವು ದಿಲ್ಲ. ಆದ್ದರಿಂದ ನಮ್ಮ ದೇಹವೂ ಭೂಮಿಯ ವಾತಾವರಣದಲ್ಲಿ ಕಾರ್ಯನಿರ್ವಹಿಸಿದಂತೆ ಅಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಆದ್ದರಿಂದ ಗಗನಯಾತ್ರಿಗಳಿಗೆ ಯಾನಕ್ಕೂ ಒಂದು ವರ್ಷ ಮುಂಚಿತವಾಗಿ ಹಲವಾರು ಪರೀಕ್ಷೆಗಳನ್ನು ಮತ್ತು ಪ್ರಯೋಗಗಳನ್ನು ನಡೆಸಿ ನಂತರ ಕಳುಹಿಸಲಾಗುತ್ತದೆ.

•► ಸಂಶೋಧನೆಗಳ ಜತೆಗೆ ನಿತ್ಯ ಕರ್ಮಗಳಾದ ಶೌಚ-ಸ್ನಾನ,  ಮುಖ ತೊಳೆಯುವುದು, ತಲೆಗೂದಲು ಬಾಚುವುದು, ನಿದ್ದೆ ಮಾಡುವುದು ಮೊದಲಾದ ಚಟುವಟಿಕೆಗಳೆಲ್ಲವೂ ತುಂಬಾ ತ್ರಾಸದಾಯಕ. ಭೂಮಿ ಮೇಲೆ ಸ್ನಾನ ಮಾಡುವಾಗ ಅಥವಾ ಹಲ್ಲುಜ್ಜುವಾಗ ಮಗ್ ಅಥವಾ ಬ್ರಷ್ ಕೈಜಾರಿದರೆ ಕೆಳಕ್ಕೆ ಬೀಳುತ್ತದೆ, ಆ ವಸ್ತುಗಳೆಲ್ಲ ಇಲ್ಲಿ ನಾವು ಇಟ್ಟಲ್ಲಿಯೇ ಇರುತ್ತವೆ.ಆದರೆ ಬಾಹ್ಯಾಕಾಶದಲ್ಲಾದರೆ  ಶೂನ್ಯ ಗುರುತ್ವದಿಂದಾಗಿ ಈ ವಸ್ತುಗಳೆಲ್ಲವೂ ಗಾಳಿಯಲ್ಲಿ ತೇಲುತ್ತಾ ಎಲ್ಲೆಂದರಲ್ಲಿ ಹೋಗಿ ಅನಾಹುತವಾಗುತ್ತದೆ. ಆದ್ದರಿಂದ ಅವುಗಳನ್ನು ಯಾವುದಾದರೂ ಸ್ಥಿರವಾದ ಆಧಾರಕ್ಕೆ ಕಟ್ಟಿಹಾಕಿರಬೇಕು. ನಿದ್ರೆ ಮಾಡುವಾಗ ಸ್ಲೀಪಿಂಗ್ ಬ್ಯಾಗ್‌ನಲ್ಲಿ ಝಿಪ್ ಹಾಕಿ, ಬಿಗಿಯಾಗಿ ಕಟ್ಟಿಕೊಂಡು ಮಲಗಬೇಕು. ಸಾಮಾನ್ಯವಾಗಿ ಗಗನಯಾತ್ರಿಗಳು ಇಲ್ಲಿ 4ರಿಂದ 6 ತಿಂಗಳ ಕಾಲ ವಾಸಿಸುತ್ತಾರೆ. ನಂತರ ಭೂಮಿಗೆ ಮರಳುತ್ತಾರೆ.


●. ಬಾಹ್ಯಾಕಾಶದಲ್ಲಿ ಸ್ಥಾಪಿಸಲಾದ ಮೊದಲ ಬಾಹ್ಯಾಕಾಶ ನಿಲ್ದಾಣಗಳು :
━━━━━━━━━━━━━━━━━━━━━━━━━━━━━━━━━━━━━━
•► ಸಲ್ಯೂಟ್ (1971-1986)
•► ಅಲ್ಮಾಝ್  (1971-1986)
•► ಸ್ಕೈ ಲ್ಯಾಬ್ ಬಾಹ್ಯಾಕಾಶ ನಿಲ್ದಾಣ (1971-1986)
•► ಮಿರ್ ಬಾಹ್ಯಾಕಾಶ ನಿಲ್ದಾಣ (1986-2001)

●. ಸಲ್ಯೂಟ್-1 (1971-1986):
━━━━━━━━━━━━━━━━━━━
✧.ಇದು ಮೊದಲ ಬಾಹ್ಯಾಕಾಶ ನಿಲ್ದಾಣ. 1971ರ ಏ. 19ರಂದು ಸೋವಿಯತ್ ಒಕ್ಕೂಟ ಇದನ್ನು ಉಡಾಯಿಸಿತು.
✧.ಏಕನಿರ್ಮಾಣ ರಚನೆಯುಳ್ಳ ನಿಲ್ದಾಣವನ್ನು ಉಡಾಯಿಸಿದ ನಂತರ ಸಿಬ್ಬಂದಿಯನ್ನು ಬೇರೊಂದು ವ್ಯೋಮನೌಕೆ ಮೂಲಕ ಸಾಗಿಸಲಾಯಿತು.

●. ಅಲ್ಮಾಝ್ (1971-1986):
━━━━━━━━━━━━━━━━━━━
✧.ಅಲ್ಮಾಝ್ ಎಂದು ಕರೆಯಿಸಿಕೊಳ್ಳುವ ಸಲ್ಯೂಟ್-2, ಸಲ್ಯೂಟ್-3, ಸಲ್ಯೂಟ್-5 ಮಿಲಿಟರಿ ಉದ್ದೇಶಿತ ಬಾಹ್ಯಾಕಾಶ ನಿಲ್ದಾಣಗಳು.
✧.ಸಲ್ಯೂಟ್-6 ಮತ್ತು ಸಲ್ಯೂಟ್-7 ನಾಗರಿಕ ಉದ್ದೇಶಕ್ಕಾಗಿ ನಿರ್ಮಿಸಲಾದ ಅಂತರಿಕ್ಷ ನಿಲ್ದಾಣಗಳು.
✧.ಈ ನಿಲ್ದಾಣಗಳು ಎರಡು ಡಾಕಿಂಗ್ ಪೋರ್ಟ್‌ಗಳನ್ನು ಹೊಂದಿದ್ದವು. ಸಲ್ಯೂಟ್ ಶ್ರೇಣಿಯ ಬಾಹ್ಯಾಕಾಶ ನಿಲ್ದಾಣಗಳು ಸೋವಿಯತ್ ಒಕ್ಕೂಟ ನಿರ್ಮಿಸಿದವು.

●. ಸ್ಕೈಲ್ಯಾಬ್ (1971-1986):
━━━━━━━━━━━━━━━━━━━
✧.ಸ್ಕೈಲ್ಯಾಬ್ ಇದು ಎರಡನೇ ತಲೆಮಾರಿನ ಅಮೆರಿಕದ ಬಾಹ್ಯಾಕಾಶ ನಿಲ್ದಾಣ.
✧.ಇದು ಕೂಡ ಎರಡು ಡಾಕಿಂಗ್ ಪೋರ್ಟ್‌ಗಳನ್ನು ಹೊಂದಿತ್ತು.

●. ಮಿರ್ ಬಾಹ್ಯಾಕಾಶ ನಿಲ್ದಾಣ (1986-2001):
━━━━━━━━━━━━━━━━━━━━━━━━━━━
✧.ಇದನ್ನು ಸೋವಿಯತ್ ಯೂನಿಯನ್ ಉಡಾಯಿಸಿತು.
✧.ಇದು ಮಾಡ್ಯುಲರ್ ವಿನ್ಯಾಸ ರಚನೆ ಹೊಂದಿತ್ತು.
✧.ಮೊದಲಿಗೆ ಕೋರ್ ಯೂನಿಟ್ ಮಾತ್ರ ಉಡಾಯಿಸಿ ನಂತರ ಹೆಚ್ಚುವರಿ ಮಾಡ್ಯೂಲ್‌ ಗಳನ್ನು ಕೊಂಡೊಯ್ದು ಇದಕ್ಕೆ ಜೋಡಿಸಲಾಯಿತು.  

●. ಸದ್ಯ ಎರಡು ಬಾಹ್ಯಾಕಾಶ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿವೆ. ಅವು;
━━━━━━━━━━━━━━━━━━━━━━━━━━━━━━━━━━━━━━
•► ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್).
•► ಟಿಯಾಂಗಾಂಗ್-1.

•► ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್):
━━━━━━━━━━━━━━━━━━━━━━━━━━━━━━━
✧.ಐಎಸ್‌ಎಸ್ ಅನ್ನುವುದು ಕಡಿಮೆ ಭೂ ಕಕ್ಷಾ ಪರಿಧಿಯಲ್ಲಿ ತನ್ನ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುವ ಮಾಡ್ಯುಲರ್ ರಚನೆ.
✧.ಇದು ಮೂರನೇ ತಲೆಮಾರಿನ ಮಾಡ್ಯುಲರ್ ಬಾಹ್ಯಾಕಾಶ ನಿಲ್ದಾಣ.
✧.ಸತತವಾಗಿ 14 ವರ್ಷಗಳ ಕಾಲ ಭೂ ಕಕ್ಷೆಯಲ್ಲಿ ಸಿಬ್ಬಂದಿ ಉಪಸ್ಥಿತಿ ಹೊಂದಿದ ಹೆಗ್ಗಳಿಕೆಗೆ ಈ ನಿಲ್ದಾಣ ಪಾತ್ರವಾಗಿದೆ.

•► ಟಿಯಾಂಗಾಂಗ್-1 ಬಾಹ್ಯಾಕಾಶ ನಿಲ್ದಾಣ (2011ರಿಂದ ಚಾಲ್ತಿಯಲ್ಲಿದೆ):
━━━━━━━━━━━━━━━━━━━━━━━━━━━━━━━━━━━━━━━
✧.ಇದು ಚೀನಾ ನಿರ್ಮಿಸಿ ಕಳುಹಿಸಿದ ಮೊದಲ ಬಾಹ್ಯಾಕಾಶ ನಿಲ್ದಾಣ.
✧.ಇದನ್ನು 29ನೇ ಸೆಪ್ಟೆಂಬರ್ 2011ರಂದು ಉಡಾಯಿಸ ಲಾಯಿತು.
✧.ರಷ್ಯಾದ ಮಿರ್ ಬಾಹ್ಯಾಕಾಶ ನಿಲ್ದಾಣವನ್ನು ಮೀರಿಸುವಂತಹ ಮತ್ತೊಂದು ನಿಲ್ದಾಣವನ್ನು 2020ರೊಳಗೆ ನಿರ್ಮಿಸುವ ಮಹತ್ವಾಕಾಂಕ್ಷೆ ಚೀನಾದ್ದಾಗಿದೆ.
✧.ಮಹಿಳೆ ಮತ್ತು ಇಬ್ಬರು ಪುರುಷ ಗಗನಯಾತ್ರಿಗಳನ್ನು ಹೊತ್ತೊಯ್ದ ಶೆನ್ಚವೊ-9 ವ್ಯೋಮನೌಕೆಯೂ 2012ರ ಜೂನ್‌ನಲ್ಲಿ ನಿಲ್ದಾಣದಲ್ಲಿ ಡಾಕ್ ಮಾಡಿ 13 ದಿನಗಳ ಯಶಸ್ವಿ ಪ್ರಯಾಣದ ನಂತರ ಭೂಮಿಗೆ ಹಿಂದಿರುಗಿದೆ.

(Courtesy :Prajawani Newspaper) 

No comments:

Post a Comment