"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday 7 December 2015

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : ●. ಪ್ರಸ್ತುತ ಬಾಹ್ಯಾಕಾಶದಲ್ಲಿ ಬಳಕೆಯಲ್ಲಿರುವ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಹಾಗೂ ಅಲ್ಲಿರುವ ಗಗನಯಾತ್ರಿ ಸಿಬ್ಬಂದಿಗಳ ಕಾರ್ಯ ವೈಖರಿಯ ಕುರಿತು ಚರ್ಚಿಸಿ. ( Discuss about the working method of International Space Station and the Astronaut crew)

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ :
●. ಪ್ರಸ್ತುತ ಬಾಹ್ಯಾಕಾಶದಲ್ಲಿ ಬಳಕೆಯಲ್ಲಿರುವ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ  ಹಾಗೂ ಅಲ್ಲಿರುವ ಗಗನಯಾತ್ರಿ ಸಿಬ್ಬಂದಿಗಳ ಕಾರ್ಯ ವೈಖರಿಯ ಕುರಿತು ಚರ್ಚಿಸಿ.
( Discuss about the working method of International Space Station and the Astronaut crew)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ಖಗೋಳಶಾಸ್ತ್ರ
(Astronomy)

★ಬಾಹ್ಯಾಕಾಶ ತಂತ್ರಜ್ಞಾನ
(Space Technology)


•► ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್- 1998ರಿಂದ ಬಳಕೆಯಲ್ಲಿದೆ):
ಐಎಸ್‌ಎಸ್ ಅನ್ನುವುದು ಕಡಿಮೆ ಭೂ ಕಕ್ಷಾ ಪರಿಧಿಯಲ್ಲಿ ತನ್ನ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುವ ಮಾಡ್ಯುಲರ್ ರಚನೆ. ಇದು ಮೂರನೇ ತಲೆಮಾರಿನ ಮಾಡ್ಯುಲರ್ ಬಾಹ್ಯಾಕಾಶ ನಿಲ್ದಾಣ.ಇದರಲ್ಲಿ ಹೆಚ್ಚುವರಿ ಮಾಡ್ಯೂಲ್‌ಗಳನ್ನು ಜೋಡಿಸಲು, ಬದಲಾಯಿಸಲು, ಬೇಡವಾಗಿದ್ದನ್ನು ಇರುವ ರಚನೆಯಿಂದ ತೆಗೆದು ಹಾಕಲು ಅವಕಾಶವಿದೆ.


●. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ತಯಾರಕರು :
━━━━━━━━━━━━━━━━━━━━━━━━━━━━━━
•► ಐಎಸ್‌ಎಸ್ ಅಮೆರಿಕ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ ಏಜೆನ್ಸಿ (ಎನ್‌ಎಎಸ್ಎ-ನಾಸಾ), ರಷ್ಯಾದ ರಷ್ಯನ್ ಫೆಡರಲ್ ಸ್ಪೇಸ್ ಏಜೆನ್ಸಿ (ಆರ್‌ಎಫ್‌ಎಸ್‌ಎ)  ರೋಸ್ಕಾ ಮೊಸ್ (ಆರ್‌ಕೆಎ), ಜಪಾನಿನ ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋ ರೇಷನ್ ಏಜೆನ್ಸಿ (ಜಾಕ್ಸಾ), ಯುರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್‌ಎ), ಕೆನೆಡಿಯನ್ ಸ್ಪೇಸ್ ಏಜೆನ್ಸಿ (ಸಿಎಸ್‌ಎ) ಎಂಬ ಐದು ಬಾಹ್ಯಾಕಾಶ ಸಂಸ್ಥೆಗಳ ಜಂಟಿ ಸಹಭಾಗಿತ್ವದ ಬೃಹತ್‌ ಯೋಜನೆ.


●. ಈ ಅಂತರಿಕ್ಷ ನಿಲ್ದಾಣದ ನಿರ್ವಹಣಾ ವೆಚ್ಚದ ನಿರ್ವಹಣೆ :
━━━━━━━━━━━━━━━━━━━━━━━━━━━━━
•► ಈ ಅಂತರಿಕ್ಷ ನಿಲ್ದಾಣದ ಮಾಲೀಕತ್ವ ಮತ್ತು ಬಳಕೆ ವಿಚಾರಗಳನ್ನು ಅಂತರರಾಷ್ಟ್ರೀಯ ಒಪ್ಪಂದ ಮತ್ತು ಸಮ್ಮತಿಯ ಮೂಲಕ ತೀರ್ಮಾನಿಸಲಾಗುತ್ತದೆ. ಈ ನಿಲ್ದಾಣದ ನಿರ್ಮಾಣಕ್ಕೆ ಮತ್ತು ನಿರ್ವಹಣೆಗೆ ಖರ್ಚಾಗಿರುವುದು ಸಾವಿರಾರು ಕೋಟಿ ಡಾಲರ್‌. ಈ ವೆಚ್ಚ ವನ್ನು ಒಂದು ದೇಶವೇ ಭರಿಸುವುದು ಕಷ್ಟದ ಕೆಲಸ. ಆದ್ದರಿಂದ ಈ ಯೋಜನೆಗೆ ಐದ ರಾಷ್ಟ್ರಗಳು ಹಣ ವಿನಿಯೋಗಿಸಿವೆ.ಈ ನಿಲ್ದಾಣವನ್ನು ಪ್ರಮುಖವಾಗಿ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ರಷ್ಯನ್ ಕಕ್ಷಾ ವಿಭಾಗ (ಆರ್‌ಒಎಸ್) ಮತ್ತು  ಯುನೈಟೆಡ್ ಸ್ಟೇಟ್ ಕಕ್ಷಾ ವಿಭಾಗ (ಯುಎಸ್‌ಒಎಸ್). 2000ದ ನ. 2ರಿಂದ ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

•► ಸತತವಾಗಿ 14 ವರ್ಷಗಳ ಕಾಲ ಭೂ ಕಕ್ಷೆಯಲ್ಲಿ ಸಿಬ್ಬಂದಿ ಉಪಸ್ಥಿತಿ ಹೊಂದಿದ ಹೆಗ್ಗಳಿಕೆಗೆ ಈ ನಿಲ್ದಾಣ ಪಾತ್ರವಾಗಿದೆ. ಈ ಮೊದಲು 10 ವರ್ಷಗಳ ಕಾಲ ಸಿಬ್ಬಂದಿಯನ್ನು ಹೊಂದಿದ್ದ ದಾಖಲೆ ಮಿರ್ ಬಾಹ್ಯಾಕಾಶ ನಿಲ್ದಾಣದ ಹೆಸರಲ್ಲಿತ್ತು.ಈ ಬಾಹ್ಯಾಕಾಶ ನಿಲ್ದಾಣಕ್ಕೆ 15 ವಿವಿಧ ರಾಷ್ಟ್ರಗಳ ಗಗನ ಯಾತ್ರಿಗಳು ಭೇಟಿ ಕೊಟ್ಟಿದ್ದಾರೆ.
ಭಾರತೀಯ ಸಂಜಾತೆ, ಅಮೆರಿಕ ನಿವಾಸಿ ಸುನೀತಾ ವಿಲಿಯಮ್ಸ್ ಈ ನಿಲ್ದಾಣಕ್ಕೆ ಎರಡು ಬಾರಿ ತೆರಳಿ ಕಾರ್ಯನಿರ್ವ ಹಿಸಿದ್ದಾರೆ. 2011ರಲ್ಲಿ ಅಮೆರಿಕದ ಸ್ಪೇಸ್ ಶಟಲ್‌ಗಳು ಗಗನ ಯಾತ್ರಿಗಳನ್ನು ಮತ್ತು ಸಲಕರಣೆಗಳ ಸಾಗಣೆಯನ್ನು ನಿಲ್ಲಿಸಿದ ಮೇಲೆ  ರಷ್ಯಾದ ಸೋಯುಝ್ ರಾಕೆಟ್ ಈ ಐಎಸ್‌ಎಸ್‌ಗೆ ಗಗನ ಯಾತ್ರಿಗಳನ್ನು ಕರದೊಯ್ಯಲು ಮತ್ತು ಡ್ರಾಗನ್ ರಾಕೆಟನ್ನು ಸಲಕರಣೆಗಳ ಸಾಗಣೆಗೆ ಬಳಸಿದೆ.


●.ಈ ನಿಲ್ದಾಣದ ಪ್ರಮುಖ ಉದ್ದೇಶ :
━━━━━━━━━━━━━━━━━━━━
•► ಇದರಲ್ಲಿರುವ ಸಿಬ್ಬಂದಿಗಳು ಇದನ್ನು ಪ್ರಯೋಗಾಲಯದ ರೀತಿ ಬಳಸಿಕೊಂಡು ಶೂನ್ಯ ಗುರುತ್ವ ಮತ್ತು ಬಾಹ್ಯಾಕಾಶ ವಾತಾವರಣ ದಲ್ಲಿ ಜೀವಶಾಸ್ತ್ರ, ಜೀವವಿಜ್ಞಾನ, ಭೌತಶಾಸ್ತ್ರ, ಖಗೋಳವಿಜ್ಞಾನ, ವೈದ್ಯಕೀಯ ವಿಜ್ಞಾನ, ಹವಾಮಾನ ಶಾಸ್ತ್ರ ಮತ್ತು ಇತರೆ ಕ್ಷೇತ್ರಗಳಿಗೆ ಸಂಬಂಧಪಟ್ಟ ವಿಷಯಗಳು, ಚಂದ್ರಯಾನ ಮತ್ತು ಮಂಗಳ ಯಾನಕ್ಕೆ ಸಂಬಂಧಪಟ್ಟ ವ್ಯೋಮನೌಕೆಯ ಸಿಸ್ಟಮ್ ಮತ್ತು  ಉಪಕರಣಗಳು, ಹೊಸ ತಂತ್ರಜ್ಞಾನಗಳ ಬಗ್ಗೆ ಸಂಶೋಧನೆ ನಡೆಸುತ್ತಾರೆ.


●. ಈ ಅಂತರಿಕ್ಷ ನಿಲ್ದಾಣದ ಹಾಗು ಗಗನಯಾತ್ರಿ ಸಿಬ್ಬಂದಿಗಳ ಕಾರ್ಯ ನಿರ್ವಹಣೆ :
━━━━━━━━━━━━━━━━━━━━━━━━━━━━━━━━━━━━━━━━━
•► ಐಎಸ್‌ಎಸ್‌ನ ಕೋರ್ ಯೂನಿಟನ್ನು 1998ರಲ್ಲಿ ಉಡಾವಣೆ ಮಾಡಲಾಯಿತು. ನಂತರ ಹೆಚ್ಚುವರಿ ಮಾಡ್ಯೂಲ್‌ಗಳನ್ನು ಹಂತ ಹಂತವಾಗಿ ಜೋಡಣೆ ಮಾಡಿ ನಿಲ್ದಾಣವನ್ನು ವಿಸ್ತರಿಸಲಾಯಿತು. ಇದು ಬಾಹ್ಯ ಆಕಾಶದ ಕಕ್ಷೆಯಲ್ಲಿ ಇರುವ ಅತೀ ದೊಡ್ಡ ಕೃತಕ ವಸ್ತು. ಇದನ್ನು ಆಗಾಗ್ಗೆ ನಿರ್ದಿಷ್ಟ ಸಮಯದಲ್ಲಿ ಭೂಮಿಯಿಂದ ಬರೀ ಕಣ್ಣಿನಿಂದ ನೋಡಬಹುದು. ಸರಾಸರಿ 330 ಕಿ.ಮೀ.ನಿಂದ 410 ಕಿ.ಮೀ ಎತ್ತರದಲ್ಲಿ, ಗಂಟೆಗೆ 27,724 ಕಿ.ಮೀ ವೇಗದಲ್ಲಿ ಸುತ್ತುವ ಈ ಅಂತರಿಕ್ಷ ನಿಲ್ದಾಣವು ದಿನಕ್ಕೆ 15.51 ಬಾರಿ ಭೂಮಿ ಯನ್ನು ಸುತ್ತು ಹಾಕುತ್ತದೆ.

•► ಈ ಬೃಹತ್‌ ಬಾಹ್ಯಾಕಾಶ ನಿಲ್ದಾಣ 72.80 ಮೀಟರ್‌ ಉದ್ದ, 108.50 ಮೀಟರ್‌ ಅಗಲ, 20 ಮೀಟರ್‌ ಎತ್ತರ, 453 ಟನ್ ತೂಕ ಹೊಂದಿದೆ. ನಿಲ್ದಾಣದಲ್ಲಿ ಗರಿಷ್ಠ ಏಳು ಗಗನಯಾತ್ರಿಗಳು ಏಕಕಾಲಕ್ಕೆ ವಾಸಿಸಲು ಅವಕಾಶವಿದೆ. ಗಗನಯಾತ್ರಿಗಳು ಬೆಳಿಗ್ಗೆ 6 ಗಂಟೆಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ಪ್ರತಿದಿನ ನಿಲ್ದಾಣ ವನ್ನೊಮ್ಮೆ ಪರೀಕ್ಷಿಸುತ್ತಾರೆ. 8.10ಕ್ಕೆ ಆರಂಭಿಸಿ ಮಧ್ಯಾಹ್ನ 1.05ರ ವರೆಗೂ ನಿಗದಿತ ಕೆಲಸಗಳನ್ನು ನಿರ್ವಹಿಸುತ್ತಾರೆ. ನಂತರ ಒಂದು ಗಂಟೆ ಕಾಲ ಊಟಕ್ಕೆ ಬಿಡುವು. ಸಾಯಂಕಾಲ 7.30ರಿಂದ ರಾತ್ರಿ ಊಟವೂ ಸೇರಿ ನಿದ್ರೆಗೆ ಮುಂಚೆ ಮಾಡಬೇಕಾದ ಕೆಲಸಗಳನ್ನು ಮುಗಿಸಿ ರಾತ್ರಿ 9.30ಕ್ಕೆ ನಿದ್ರೆಗೆ ಜಾರುತ್ತಾರೆ. ವಾರದಲ್ಲಿ ನಿತ್ಯ 10 ಗಂಟೆ ಕಾಲ ಕೆಲಸ ಮಾಡಿದರೆ, ಶನಿವಾರ 5ಗಂಟೆಗಳಷ್ಟೆ ದುಡಿಮೆ. ಉಳಿದ ಸಮಯದಲ್ಲಿ ಅವರು ಖಾಸಗಿಯಾಗಿ ಇರಬಹುದು.

•► ನಿಲ್ದಾಣದಲ್ಲಿ ನಿದ್ರಿಸಲು ಸಿಬ್ಬಂದಿ ವಸತಿ ಗೃಹಗಳಿವೆ, ವಸತಿ ಗೃಹದಲ್ಲಿ ಗೋಡೆಗಳಿಗೆ ಕಟ್ಟಿರುವ ನಿದ್ರಾ ಚೀಲಗಳು (ಟೆದರ್ಡ್ಡ್ ಸ್ಲೀಪಿಂಗ್ ಬ್ಯಾಗ್), ಸಂಗೀತ ಆಲಿಸಲು ಅವಕಾಶ, ಓದುವ ದೀಪ, ಲ್ಯಾಪ್‌ಟಾಪ್ ಉಪಯೋಗಿಸಲು ಅವಕಾಶ, ಸಂಬಂಧಪಟ್ಟ ವಸ್ತುಗಳನ್ನು ಇಟ್ಟುಕೊಳ್ಳಲು ದೊಡ್ಡ ಡ್ರಾಯರ್ ಅಥವಾ ಮಾಡ್ಯುಲ್ ಗೋಡೆಗೆ ಕಟ್ಟಿರುವ ಬಲೆಗಳು ಇರುತ್ತವೆ. ಉತ್ತಮ ವೆಂಟಿಲೇಶನ್ ವ್ಯವಸ್ಥೆಯೂ ಇರುತ್ತದೆ. ಇಲ್ಲವಾದರೆ ಕಾರ್ಬನ್ ಡೈ ಆಕ್ಸೈಡ್ ಹೆಚ್ಚಾಗಿ ಉಸಿರಾಟದ ತೊಂದರೆಯಾಗಿ ನಿದ್ರಾಭಂಗ ವಾಗುತ್ತದೆ.ಸಂದರ್ಶಕ ಸಿಬ್ಬಂದಿಗೆ ನಿದ್ರೆಗೆ ವಿಶೇಷ ಜಾಗವೇನೂ ಇರು ವುದಿಲ್ಲ. ಅವರು ಮಾಡ್ಯುಲ್ ಗೋಡೆಗಳಲ್ಲಿ ಖಾಲಿ ಇರುವ ಜಾಗದಲ್ಲಿ ಸ್ಲೀಪಿಂಗ್ ಬ್ಯಾಗ್ ಕಟ್ಟಿಕೊಂಡು ನಿದ್ರಿಸಬೇಕು.

•► ರಷ್ಯನ್ ಕಕ್ಷಾ ವಿಭಾಗ ಮತ್ತು  ಯುನೈಟೆಡ್ ಸ್ಟೇಟ್ ಕಕ್ಷಾ ವಿಭಾಗಗಳು ವಿವಿಧ ವಿನ್ಯಾಸಗಳನ್ನು ಹೊಂದಿವೆ. ಆಹಾರವನ್ನು ನಿರ್ವಾತ ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಯಾಕ್ ಮಾಡಲಾಗಿರುತ್ತದೆ, ಸಿಬ್ಬಂದಿಗಳಿಗೆ ಆಹಾರ ತಯಾರಿಸಲು ವ್ಯವಸ್ಥೆಯಿದೆ. ಆಹಾರವನ್ನು ರುಚಿಯಾಗಿಡಲು ಎಷ್ಟೇ ಶ್ರಮ ವಹಿಸಿದರೂ ಶೂನ್ಯ ಗುರುತ್ವ ದಿಂದಾಗಿ ರುಚಿ ಕಡಿಮೆಯಾಗುತ್ತದೆ. ಆದ್ದರಿಂದ ಆಹಾರ ತಯಾರಿಕೆಯಲ್ಲಿ ಹೆಚ್ಚಿಗೆ ಮಸಾಲೆಗಳನ್ನು ಬಳಸುತ್ತಾರೆ.

•► ತಾಜಾ ಹಣ್ಣು ಮತ್ತು ತರಕಾರಿ ಬೇಕೆಂದರೆ ಭೂಮಿಯಿಂದ ಬರುವ ಇನ್ನೊಂದು ವ್ಯೋಮನೌಕೆಗಾಗಿ ಇಲ್ಲಿನ ಜೀವಿಗಳು ಕಾಯಲೇಬೇಕು. ದ್ರವ ಪದಾರ್ಥಗಳು ಇಲ್ಲಿ ಪುಡಿ ರೂಪದಲ್ಲಿ ಇರುತ್ತವೆ. ಪಾನೀಯ ಬೇಕೆಂದಾಗ ನೀರು ಬೆರೆಸಿ ಸ್ಟ್ರಾ ಮೂಲಕ ಕುಡಿಯುತ್ತಾರೆ. ಘನ ಆಹಾರ ಪದಾರ್ಥಗಳು ತೇಲಿಹೋಗುವು ದನ್ನು ತಡೆಯಲು ಆಯಸ್ಕಾಂತೀಯ ಟ್ರೇಗಳಲ್ಲಿ ಇಟ್ಟು ಚಾಕು ಮತ್ತು ಫೋರ್ಕ್ ಮೂಲಕ ತಿನ್ನುತ್ತಾರೆ.

•►1970ರ ದಶಕದ ನಿಲ್ದಾಣದಲ್ಲಿ ಶವರ್ ವ್ಯವಸ್ಥೆ ಇತ್ತು, ಸಿಬ್ಬಂದಿಗಳು ಇದರಲ್ಲಿ ಸ್ನಾನ ಮಾಡಲು ತ್ರಾಸದಾಯಕ ಎಂದು ಹೇಳಿದ್ದರಿಂದ ಈಗ ಸ್ನಾನಕ್ಕೆ ವಾಟರ್ ಜೆಟ್ ಮತ್ತು ತೇವದ ಬಟ್ಟೆಗಳನ್ನು ಬಳಸುವ ವ್ಯವಸ್ಥೆ ಮಾಡಲಾಗಿದೆ. ಸೋಪು ಮತ್ತು ಟೂತ್‌ಪೇಸ್ಟ್ ಕೊಳವೆಯಲ್ಲಿ ಬರುತ್ತದೆ. ನೀರನ್ನು ಉಳಿಸುವ ಉದ್ದೇಶದಿಂದ ರಿನ್ಸ್‌ಲೆಸ್ ಶ್ಯಾಂಪು ಮತ್ತು ತಿನ್ನಬಹುದಾದ ಪೇಸ್ಟ್ ಉಪಯೋಗಿಸುತ್ತಾರೆ.

•► ಇನ್ನು ಶೌಚಾಲಯದ ವಿಷಯಕ್ಕೆ ಬಂದರೆ ಇದರಲ್ಲಿ ರಷ್ಯಾ ವಿನ್ಯಾಸದ ಎರಡು ಶೌಚಾಲಯಗಳಿವೆ. ಸಿಬ್ಬಂದಿ ಶೌಚದ ಆಸನದ ಮೇಲೆ ಕುಳಿತುಕೊಂಡು ಕಟ್ಟಿಕೊಳ್ಳಬೇಕು. ಸ್ಥಿರವಾಗಿರಲು ಆಸನಕ್ಕೆ ಸ್ಪ್ರಿಂಗ್ ಲೋಡೆಡ್ ರೀಸ್ಟ್ರೇನ್ ಬಾರ್‌ಗಳನ್ನು ಒದಗಿಸಲಾಗಿರುತ್ತದೆ. ಲಿವರ್ ಆಪರೇಟ್ ಮಾಡಿದರೆ ಶಕ್ತಿಯುತವಾದ ಫ್ಯಾನ್ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಆಗ ಹೀರಿಕೊಳ್ಳುವ ರಂಧ್ರದ ಜಾರುಕ (ಸಕ್ಷನ್ ಹೋಲ್ ಸ್ಲೈಡ್) ತೆರೆದುಕೊಳ್ಳುತ್ತದೆ. ಗಾಳಿಯ ಪ್ರವಾಹ ತ್ಯಾಜ್ಯವನ್ನು ಹೊರಹಾಕುತ್ತದೆ, ಘನ ತ್ಯಾಜ್ಯಗಳು ಪ್ರತ್ಯೇಕ ಬ್ಯಾಗ್‌ಗಳಲ್ಲಿ ಶೇಖರವಾಗುತ್ತವೆ. ಅವನ್ನು ಅಲ್ಯೂಮಿನಿಯಂ ಕಂಟೇನರ್‌ನಲ್ಲಿ ಸಂಗ್ರಹಿಸಿಡಲಾಗುತ್ತದೆ, ಈ ಕಂಟೇನರನ್ನು ಸೂಕ್ತ ರೀತಿ ವಿಲೇವಾರಿ ಮಾಡಲು ನೌಕೆ ಮೂಲಕ ಭೂಮಿಗೆ ಸಾಗಿಸ ಲಾಗುತ್ತದೆ.  ದ್ರವ ತ್ಯಾಜ್ಯಗಳನ್ನು ಶೌಚದ ಮುಂದೆ ಇರುವ ಪೈಪಿನ ಮುಖಾಂತರ ಸಂಗ್ರಹಿಸಲಾಗುತ್ತದೆ. ಈ ಪೈಪಿನ ತುದಿಯಲ್ಲಿ ಯೂರಿನ್ ಫನೆಲ್ ಸಂಯೋಜಕವನ್ನು ಅಳವಡಿಸಲಾಗಿರುತ್ತದೆ. ಇದು ದ್ರವ ತ್ಯಾಜ್ಯವನ್ನು ಶುದ್ಧ ಮಾಡಿ ನೀರು  ಶುದ್ಧೀಕರಣ ಮತ್ತು ಪುನರ್ಬಳಕೆ ಘಟಕಕ್ಕೆ ಕಳುಹಿಸುತ್ತದೆ. ಅಲ್ಲಿ ಪರಿಶೋಧಿಸಿ ಮರು ಬಳಕೆಗೆ ಯೋಗ್ಯವಾಗುವಂತೆ ಮಾಡಲಾಗುತ್ತದೆ.

•► ದೀರ್ಘ ಕಾಲ ಶೂನ್ಯ ಗುರುತ್ವದಲ್ಲಿ ತೂಕ ಇಲ್ಲದಿರುವಿಕೆ ಮತ್ತು ಶ್ರಮವಿಲ್ಲದ ಕೆಲಸಗಳಿಂದಾಗಿ ಇಲ್ಲಿನ ನಿವಾಸಿಗಳಿಗೆ ಸ್ನಾಯುಗಳ ಶಕ್ತಿ ಕ್ಷಯಿಸುತ್ತದೆ. ಅಸ್ಥಿಪಂಜರದ ಸಾಮರ್ಥ್ಯವೂ ಕ್ಷೀಣಿಸುತ್ತದೆ. ಹೃದಯ ರಕ್ತನಾಳದಲ್ಲಿನ ರಕ್ತಸಂಚಾರ ನಿಧಾನಗತಿಗೆ ತಿರುಗು ತ್ತದೆ. ಕೆಂಪು ರಕ್ತಕಣಗಳ ಉತ್ಪತ್ತಿ ಕಡಿಮೆಯಾಗುತ್ತದೆ. ದೈಹಿಕ ಅಸ್ಥಿರತೆ ಉಂಟಾಗುತ್ತದೆ. ರೋಗ ನಿರೋಧಕ ಶಕ್ತಿ ಕುಂದುತ್ತದೆ.ಶಬ್ಧ ಮತ್ತು ನೌಕೆಗೆ ಸಂಬಂಧಿಸಿದ ವಿಷಯಗಳಿಗಾಗಿ ಆಗಾಗ ನಿದ್ರೆಯಿಂದ ಎಚ್ಚರಗೊಳ್ಳಬೇಕಾಗುತ್ತದೆ. ಆದ್ದರಿಂದ ಇಲ್ಲಿ ಸುದೀರ್ಘವಾದ ನಿದ್ದೆ ಸಾಧ್ಯವಿಲ್ಲ. ಇದು ಸಹ ಆರೋಗ್ಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.

•► ಈ ಎಲ್ಲ ಪ್ರತಿಕೂಲ ಪರಿಣಾಮಗಳನ್ನು ಎದುರಿಸಲು ನಿಲ್ದಾಣ ದಲ್ಲಿನ ಸಿಬ್ಬಂದಿಗಳಿಗೆ ದೈಹಿಕ ವ್ಯಾಯಾಮದ ಅವಶ್ಯಕತೆ ಇರುತ್ತದೆ. ಅದಕ್ಕಾಗಿ ಎರಡು ಟ್ರೆಡ್‌ಮಿಲ್ಸ್ (ಬಂಗಿ ಜಂಪಿಂಗ್‌ ಬಳಸುವಂತಹ ದಾರವನ್ನು ಸೊಂಟಕ್ಕೆ ಕಟ್ಟಿಕೊಳ್ಳುವುದರಿಂದ ಶೂನ್ಯ ಗುರುತ್ವ ದಿಂದಾಗಿ ತೇಲುವುದನ್ನು ನಿರ್ಬಂದಿಸುತ್ತದೆ), ತೂಕ ಎತ್ತುವ ಉಪಕರಣ, ಸ್ಥಿರವಾದ ಸೈಕಲ್ ವ್ಯವಸ್ಥೆಯೂ ವ್ಯಾಯಾಮಕ್ಕಾಗಿ ಇಲ್ಲಿದೆ. ಸಿಬ್ಬಂದಿಗಳು ಕಡ್ಡಾಯವಾಗಿ ಕನಿಷ್ಠ ಎರಡು ಗಂಟೆಗಳ ಕಾಲ ದೈಹಿಕ ವ್ಯಾಯಾಮ ಮಾಡಬೇಕಾಗುತ್ತದೆ.

(Courtesy :Prajawani) 

No comments:

Post a Comment