"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday, 1 October 2014

★ ಕೆಎಎಸ್‌ ಪರೀಕ್ಷೆಯ ಕುರಿತು ಅವಲೋಕನ: (Having Glance on KAS Examination).


★ ಕೆಎಎಸ್‌ ಪರೀಕ್ಷೆಯ ಕುರಿತು ಅವಲೋಕನ:
Having Glance on KAS Examination.

ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 452 ಗೆಜೆಟೆಡ್ ಪ್ರೊಬೇಷನರ್‌್ಸ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಸದ್ಯದಲ್ಲೇ ಅಧಿಸೂಚನೆ ಹೊರಡಿಸಲಿದೆ. ಮೂರು ವರ್ಷಗಳ ನಂತರ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಗೆ ಚಾಲನೆ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಕೆಪಿಎಸ್‌ಸಿ  ಸದ್ಯದಲ್ಲೇ ಅರ್ಜಿಗಳನ್ನು ಆಹ್ವಾನಿಸಲಿದೆ.

ಪ್ರತಿ ವರ್ಷ ಕೆಎಎಸ್‌ ಪರೀಕ್ಷೆ ನಡೆಸಬೇಕು ಎಂಬ ನಿಯಮ ಇದೆ. ಆದರೆ, 2011ನೇ ಸಾಲಿನ ನೇಮಕಾತಿ ಗೊಂದಲ ಬಗೆಹರಿಯದ ಕಾರಣ, 2012, 2013ನೇ ಸಾಲಿನಲ್ಲಿ ನೇಮಕಾತಿ ನಡೆದಿರಲಿಲ್ಲ. ಹಿಂದಿನ ಎರಡು ವರ್ಷಗಳ ಹುದ್ದೆಗಳನ್ನೂ ಸೇರಿಸಿ ಈ ವರ್ಷ ಒಮ್ಮಲೇ 452 ಹುದ್ದೆಗಳನ್ನು ಭರ್ತಿಗೆ ಸರ್ಕಾರ ಕೊನೆಗೂ ಮನಸ್ಸು ಮಾಡಿದೆ.

ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿ ಪೂರ್ವಭಾವಿ, ಮುಖ್ಯಪರೀಕ್ಷೆ ಹಾಗೂ ಸಂದರ್ಶನ ಸೇರಿದಂತೆ ಒಟ್ಟು ಮೂರು ಹಂತಗಳಲ್ಲಿ ನಡೆಯಲಿದೆ. ಈ ಮೂರೂ ಹಂತಗಳಲ್ಲಿ ಯಶಸ್ವಿಯಾದವರು ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಬಹುದು.

1998ರ ಸಾಲಿನಲ್ಲಿ 412 ಹುದ್ದೆಗಳನ್ನು ಭರ್ತಿ ಮಾಡಿದ್ದು ಬಿಟ್ಟರೆ ನಂತರದ ವರ್ಷಗಳಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕೆಎಎಸ್‌ ಹುದ್ದೆಗಳ ಭರ್ತಿ ನಡೆದಿರಲಿಲ್ಲ. ರಾಜ್ಯದ ಆಡಳಿತ ಸೇವೆಯ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಬೇಕು ಎಂದು ಬಯಸುವವರಿಗೆ ಇದೊಂದು ಸದಾವಕಾಶ.

ಈ ಬಾರಿ ದೊಡ್ಡ ಪ್ರಮಾಣದಲ್ಲಿ ನೇಮಕಾತಿ ನಡೆಯುತ್ತಿದ್ದು,  ಉಪ ವಿಭಾಗಾಧಿಕಾರಿ, ತಹಸೀಲ್ದಾರ್‌, ತಾಲ್ಲೂಕು ಪಂಚಾಯತ್‌ ಮುಖ್ಯಕಾರ್ಯನಿವರ್ಹಣಾಧಿಕಾರಿ ಹುದ್ದೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ.  ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವೆಗಳ ಪರೀಕ್ಷೆಯ ಮಾದರಿಯನ್ನೇ ಕರ್ನಾಟಕ ಲೋಕಸೇವಾ ಆಯೋಗವು 2011ರಲ್ಲಿ ಪೂರ್ವಭಾವಿ ಪರೀಕ್ಷೆಗೆ ಅಳವಡಿಸಿಕೊಂಡಿದೆ. ಆ ಪ್ರಕಾರವೇ ಈ ಬಾರಿಯೂ ಪೂರ್ವಭಾವಿ ಪರೀಕ್ಷೆ ನಡೆಯಲಿದೆ.

★ ಯಾರು ಅರ್ಹರು?:
ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅಥವಾ ಪದವಿಯ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವವರು ಕೆಎಎಸ್‌ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ಆದರೆ, ಮುಖ್ಯಪರೀಕ್ಷೆಗೆ ಅರ್ಜಿ ಸಲ್ಲಿಸುವ ವೇಳೆಗೆ ಪದವಿಯ ಅಂಕಪಟ್ಟಿಗಳನ್ನು ಹೊಂದಿರಲೇಬೇಕು. ಅಲ್ಲದೆ ಆಯಾ ಪ್ರವರ್ಗಕ್ಕೆ ಅನುಗುಣವಾಗಿ ಸರ್ಕಾರವು  ನಿಗದಿಪಡಿಸುವ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.

★ ಪರೀಕ್ಷಾ ವಿಧಾನ
ಪೂರ್ವಭಾವಿ ಪರೀಕ್ಷೆ: ಅರ್ಜಿ ಸಲ್ಲಿಸಿದ ಎಲ್ಲ ಅರ್ಹ ಅಭ್ಯರ್ಥಿಗಳಿಗೆ ಪೂರ್ವಭಾವಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ.
ಪೂರ್ವಭಾವಿ ಪರೀಕ್ಷೆಯು ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಎರಡು ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಇವೆರಡಕ್ಕೂ ತಲಾ 200 ಅಂಕಗಳನ್ನು ನಿಗದಿಪಡಿಸಲಾಗಿದೆ. ಈ ಪತ್ರಿಕೆಗಳು ಎಲ್ಲರಿಗೂ ಕಡ್ಡಾಯ. ಪ್ರತಿಯೊಂದು ಪ್ರಶ್ನೆಪತ್ರಿಕೆ ತಲಾ ಎರಡು ಅಂಕಗಳ 100 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

ಸಾವರ್ಜನಿಕ ಆಡಳಿತ, ಕಲೆ, ಸಾಹಿತ್ಯ, ಇತಿಹಾಸ, ಭೂಗೋಳ, ಅರ್ಥಶಾಸ್ತ್ರ, ವಿಜ್ಞಾನ ಮತ್ತು ತಂತ್ರಜ್ಞಾನ, ಸಂವಿಧಾನ, ಪ್ರಚಲಿತ ವಿದ್ಯಮಾನ, ಎಂಜಿನಿಯರಿಂಗ್, ವೈದ್ಯಕೀಯ, ಸಾಮಾನ್ಯ ಜ್ಞಾನ, ಬೌದ್ಧಿಕ ಸಾಮರ್ಥ್ಯ, ಪರಿಸರ ಇತ್ಯಾದಿ ವಿಷಯಗಳು ಪಠ್ಯಕ್ರಮದಲ್ಲಿ ಸೇರಿವೆ.

ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯಪರೀಕ್ಷೆಗೆ 1:20ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಉದಾಹರಣೆಗೆ ಒಂದು ಹುದ್ದೆ ಇದ್ದರೆ 20 ಮಂದಿ ಮುಖ್ಯಪರೀಕ್ಷೆ ಬರೆಯಲು ಅರ್ಹರು.

★ ಮುಖ್ಯಪರೀಕ್ಷೆ:
ಎರಡನೇ ಹಂತದಲ್ಲಿ ನಡೆಯುವ ಮುಖ್ಯಪರೀಕ್ಷೆ 1,800 ಅಂಕಗಳನ್ನು ಒಳಗೊಂಡಿರುತ್ತದೆ. ಎರಡು ಐಚ್ಛಿಕ ವಿಷಯಗಳು ಹಾಗೂ ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟ ಒಟ್ಟು 6 ಪ್ರಶ್ನೆಪತ್ರಿಕೆಗಳನ್ನು ಮುಖ್ಯಪರೀಕ್ಷೆ ಒಳಗೊಂಡಿರುತ್ತದೆ. ಆಯೋಗ ಗುರುತಿಸಿರುವ 30 ಐಚ್ಛಿಕ ವಿಷಯಗಳ ಪೈಕಿ ಯಾವುದಾದರೂ ಎರಡು ವಿಷಯಗಳನ್ನು ಅಭ್ಯರ್ಥಿಗಳು ಆಯ್ಕೆ ಮಾಡಿಕೊಳ್ಳಬೇಕು. ಪ್ರತಿ ವಿಷಯದಲ್ಲಿ ತಲಾ 300 ಅಂಕಗಳ ಎರಡು ಪ್ರಶ್ನೆಪತ್ರಿಕೆಗಳು ಇರುತ್ತವೆ. ಸಾಮಾನ್ಯ ಜ್ಞಾನ ವಿಷಯದಲ್ಲೂ ತಲಾ 300 ಅಂಕಗಳ ಎರಡು ಪ್ರಶ್ನೆಪತ್ರಿಕೆಗಳು ಇರುತ್ತವೆ.

ಸಾಮಾನ್ಯ ಕನ್ನಡ ಮತ್ತು ಸಾಮಾನ್ಯ ಇಂಗ್ಲಿಷ್ ವಿಷಯದ ಪ್ರಶ್ನೆ ಪತ್ರಿಕೆಗಳು ಮುಖ್ಯಪರೀಕ್ಷೆಯಲ್ಲಿ ಇರುತ್ತವೆ. ಆದರೆ ಈ ವಿಷಯಗಳಲ್ಲಿ  ಕೇವಲ ತಲಾ 35 ಅಂಕಗಳನ್ನು ಗಳಿಸಿದರೆ ಸಾಕು. ಇದು ಕೇವಲ ಅರ್ಹತಾ ಪರೀಕ್ಷೆಯಾಗಿದ್ದು, ಈ ಅಂಕಗಳನ್ನು ಫಲಿತಾಂಶ ನಿರ್ಧರಿಸಲು ಪರಿಗಣಿಸುವುದಿಲ್ಲ. ಆದರೆ ಕನ್ನಡ ಮತ್ತು ಇಂಗ್ಲಿಷ್ ವಿಷಯದಲ್ಲಿ ಪಾಸಾದರೆ ಮಾತ್ರ ಉಳಿದ ವಿಷಯಗಳ ಪ್ರಶ್ನೆಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ.

★ ಆಯ್ಕೆ:
ಮುಖ್ಯಪರೀಕ್ಷೆಯಲ್ಲಿ ಗಳಿಸುವ ಅಂಕಗಳನ್ನು ಆಧರಿಸಿ 1:3ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಸಂದರ್ಶನಕ್ಕೆ ಒಟ್ಟು  200 ಅಂಕಗಳನ್ನು ನಿಗದಿ ಮಾಡಲಾಗಿದೆ.  ರಹಸ್ಯ ಪಾಲನೆ: ಕೇಂದ್ರ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಪಿ.ಸಿ.ಹೋಟಾ ನೇತೃತ್ವದ ಸಮಿತಿ ಮಾಡಿರುವ ಶಿಫಾರಸುಗಳನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ.

ಹೀಗಾಗಿ ಮುಖ್ಯಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸುವ ಅಂಕಗಳನ್ನು ಸಂದರ್ಶನಕ್ಕೂ ಮೊದಲೇ ಬಹಿರಂಗಪಡಿಸುವುದಿಲ್ಲ. ಇದರಿಂದಾಗಿ ಸಂದರ್ಶನ ಹಂತದಲ್ಲಿ ನಡೆಯುವ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ. ಪಾರದರ್ಶಕವಾಗಿ ಸಂದರ್ಶನ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.
(ಕೃಪೆ: ಪ್ರಜಾವಾಣಿ)

No comments:

Post a Comment