"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday, 27 December 2016

☀️ ಭಾಗ - II: 2016 ರ ಪ್ರಮುಖ ರಾಷ್ಟ್ರೀಯ / ಅಂತರರಾಷ್ಟ್ರೀಯ ಘಟನೆಗಳು - ಒಂದು ಹಿನ್ನೋಟ : (Important Current Affairs of 2016 at glance)

☀️ ಭಾಗ - II: 2016 ರ ಪ್ರಮುಖ ರಾಷ್ಟ್ರೀಯ / ಅಂತರರಾಷ್ಟ್ರೀಯ ಘಟನೆಗಳು - ಒಂದು ಹಿನ್ನೋಟ :
(Important Current Affairs of 2016 at glance)
━━━━━━━━━━━━━━━━━━━━━━━━━━━━━━━━━━━━━━━━━━━━━

★ 2016ರ ಪ್ರಚಲಿತ ಘಟನೆಗಳು.
(2016 current affairs in short)

...ಮುಂದುವರೆದ ಭಾಗ.



— ಭಾರತ ಈ ವರ್ಷವೂ ಹಲವು ಭಯೋತ್ಪಾದಕ ದಾಳಿಗಳನ್ನು ಎದುರಿಸಿತು. ಭಯೋತ್ಪಾದಕರು ಹೆಚ್ಚಾಗಿ ಸೇನಾನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು ಆತಂಕಕ್ಕೆ ಕಾರಣವಾಯಿತು.


•► ಪಠಾಣ್​ಕೋಟ್ ಜನವರಿ 2

ಪಠಾಣ್​ಕೋಟ್ ವಾಯುನೆಲೆ ಮೇಲೆ ಜಮ್ಮು -ಕಾಶ್ಮೀರ ಮೂಲದ ಯುನೈಟೆಡ್ ಜಿಹಾದ್ ಕೌನ್ಸಿಲ್ ಉಗ್ರರು ನಡೆಸಿದ ದಾಳಿಯಲ್ಲಿ ಓರ್ವ ನಾಗರಿಕ ಮೃತಪಟ್ಟು 7 ಸೈನಿಕರು ಹುತಾತ್ಮರಾದರು.


•► ಪ್ಯಾಂಪೋರ್ ಜೂನ್ 25

ಕೇಂದ್ರ ಮೀಸಲು ಪೊಲೀಸ್ ಪಡೆಯ 40 ಜನರು ಪ್ರಯಾಣಿಸುತ್ತಿದ್ದ ಆರು ಬಸ್​ಗಳ ಮೇಲೆ ಲಷ್ಕರ್ ಎ ತೋಯ್ಬಾದ ನಾಲ್ವರು ಉಗ್ರರು ದಾಳಿ ನಡೆಸಿದರು. ಈ ದಾಳಿಯಲ್ಲಿ 8 ಸೈನಿಕರು ಹುತಾತ್ಮರಾದರೆ 20ಕ್ಕೂ ಹೆಚ್ಚು ನಾಗರಿಕರಿಗೆ ಗಾಯಗಳಾದವು. ಸೈನಿಕರು ನಡೆಸಿದ ಪ್ರತಿದಾಳಿಯಲ್ಲಿ ಇಬ್ಬರು ಉಗ್ರರು ಹತರಾಗಿ ಇನ್ನಿಬ್ಬರು ಪರಾರಿಯಾದರು.


•► ಅಸ್ಸಾಂನಲ್ಲಿ ಬೋಡೊ ಅಟ್ಟಹಾಸ

ಆಗಸ್ಟ್ 5

ಸರಬಾನಂದ ಸೋನೋವಾಲ ನೇತೃತ್ವದಲ್ಲಿ ಅಸ್ಸಾಂನಲ್ಲಿ ಅಧಿಕಾರಕ್ಕೇರಿದ್ದ ಬಿಜೆಪಿ ಸರ್ಕಾರಕ್ಕೆ ಮೊದಲ ಸವಾಲು ಒಡ್ಡಿದ್ದು ಬೋಡೊ ಉಗ್ರರು. ಕೋಕ್ರಾಜಾರ್ ಜಿಲ್ಲೆಯ ಬಲಾಜನಾ ತಿನೈಲಿ ಪ್ರದೇಶದಲ್ಲಿದ್ದ ಮಾರುಕಟ್ಟೆ ಮೇಲೆ ಇಬ್ಬರು ಬೋಡೊ ಉಗ್ರರು ನಡೆಸಿದ ಬಾಂಬ್ ದಾಳಿಯಲ್ಲಿ 13 ಜನರು ಮೃತಪಟ್ಟು 16 ನಾಗರಿಕರು ಗಾಯಗೊಂಡರು. ಕೂಡಲೇ ಪ್ರತಿದಾಳಿ ನಡೆಸಿದ ಪೊಲೀಸರು ಓರ್ವ ಉಗ್ರನನ್ನು ಹತ್ಯೆಗೈದರು.


•► ಬಾರಾಮುಲ್ಲಾ

ಅಕ್ಟೋಬರ್ 3

ಉರಿ ದಾಳಿಯಾಗಿ ಕೆಲ ವಾರಗಳಲ್ಲೇ ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಭಾರತೀಯ ಸೇನೆಯ 46 ರಾಷ್ಟ್ರೀಯ ರೈಫಲ್ಸ್ ಕೇಂದ್ರದ ಮೇಲೆ ದಾಳಿ ನಡೆಸಲಾಯಿತು. ಜೈಶ್ ಎ ಮುಹಮ್ಮದ್ ಸಂಘಟನೆಯ ಇಬ್ಬರು ಉಗ್ರರು ನಡೆಸಿದ ಈ ದಾಳಿಯಲ್ಲಿ ಓರ್ವ ಸೇನಾಧಿಕಾರಿ ಹುತಾತ್ಮರಾದರು. ಇಬ್ಬರೂ ಉಗ್ರರನ್ನು ಹತ್ಯೆಗೈಯಲಾಯಿತು.


•► ಉರಿ

ಸೆಪ್ಟೆಂಬರ್ 18

ಕಳೆದ ಎರಡು ದಶಕಗಳಲ್ಲಿ ಕಾಶ್ಮೀರದಲ್ಲಿ ಸೇನೆಯ ಮೇಲಾದ ಅತಿ ಭೀಕರ ದಾಳಿ ಎಂದು ಕರೆಸಿಕೊಂಡಿದ್ದು ಉರಿ ಸೇನಾನೆಲೆ ಮೇಲಿನ ದಾಳಿ. ಸೆ.18ರಂದು ಮುಂಜಾನೆ 5.30ರ ವೇಳೆಗೆ ಸೈನಿಕರು ಶಿಫ್ಟ್ ಬದಲಾಯಿಸುವ ಅವಧಿಯನ್ನೇ ಬಳಸಿಕೊಂಡಿದ್ದ ಉಗ್ರರು ಉರಿ ಸೇನಾನೆಲೆ ಮೇಲೆ ದಾಳಿ ನಡೆಸಿದರು. ಕೇವಲ ಮೂರು ನಿಮಿಷಗಳ ಅಂತರದಲ್ಲಿ ನಡೆಸಿದ 17 ಗ್ರೆನೇಡ್​ಗಳ ದಾಳಿಯಲ್ಲಿ 19 ಸೈನಿಕರು ಹುತಾತ್ಮರಾಗಿ, 30ಕ್ಕೂ ಹೆಚ್ಚು ಸೈನಿಕರು ಗಾಯಗೊಂಡರು. 6 ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರನ್ನು ಹತ್ಯೆಗೈಯಲಾಗಿತ್ತು.


•► ಸ್ತಬ್ಧವಾಯ್ತು ಕಾಶ್ಮೀರ

ಹಿಜ್ಬುಲ್ ಮುಜಾಹಿದೀನ್ ಉಗ್ರಸಂಘಟನೆಯ ಕಮಾಂಡರ್ ಆಗಿದ್ದ ಬುರ್ಹಾನ್ ವಾನಿಯನ್ನು ಜುಲೈ 8ರಂದು ಎನ್​ಕೌಂಟರ್​ನಲ್ಲಿ ಹತ್ಯೆಗೈದಿದ್ದು, ಇಡೀ ಕಾಶ್ಮೀರವನ್ನೇ ಸ್ತಬ್ಧವಾಗುವಂತೆ ಮಾಡಿತ್ತು. ಕಾಶ್ಮೀರದಲ್ಲಿ ಭಾರತ ಆಡಳಿತ ನಡೆಸುವುದನ್ನು ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ಗಳನ್ನು ಹಾಕಿಯೇ ಖ್ಯಾತಿಗಳಿಸಿದ್ದ ವಾನಿಯ ಎನ್​ಕೌಂಟರ್​ನಿಂದ ಕಾಶ್ಮೀರದಲ್ಲಿ ಭಾರಿ ಪ್ರತಿಭಟನೆಗಳು ನಡೆದವು. ಇದರಲ್ಲಿ 85 ಜನರು ಸಾವನ್ನಪ್ಪಿದರು, 13,000 ನಾಗರಿಕರು ಮತ್ತು ಭದ್ರತಾ ಪಡೆಯ 4,000 ಸಿಬ್ಬಂದಿ ಗಾಯಗೊಂಡರು. ನಿರಂತರ 53 ದಿನಗಳ ಕಾಲ ಕರ್ಫ್ಯೂ ವಿಧಿಸಲಾಗಿತ್ತು. ಆಗಸ್ಟ್ 31ರ ಬಳಿಕ ಕರ್ಫ್ಯೂ ತೆರವುಗೊಂಡಿತು.


•► ಕುಪ್ವಾರ ಸೇನಾ ಕ್ಯಾಂಪ್ ಮೇಲೆ ದಾಳಿ

ಅಕ್ಟೋಬರ್ 6

ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಂದ್ವಾರದಲ್ಲಿರುವ ಸೇನಾ ಕ್ಯಾಂಪ್ ಮೇಲೆ ಪಾಕಿಸ್ತಾನದ ಮೂವರು ಉಗ್ರರು ದಾಳಿ ನಡೆಸಿದರು. ಸೈನಿಕರ ವಿಶ್ರಾಂತಿ ಕೊಠಡಿಗಳನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿತ್ತು. ಆದರೆ ಪ್ರತಿದಾಳಿ ನಡೆಸಿದ ಸೈನಿಕರು ಮೂವರೂ ಉಗ್ರರನ್ನು ಹತ್ಯೆಗೈದರು.

151 ಬಾರಿ ಕದನ ವಿರಾಮ ಉಲ್ಲಂಘನೆ!: ಈ ವರ್ಷ ಪಾಕಿಸ್ತಾನ ಸೇನೆ 151ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ. ಅದರಲ್ಲೂ ಸೆಪ್ಟೆಂಬರ್ ತಿಂಗಳೀಚೆಗೆ 110 ಬಾರಿ ಉಲ್ಲಂಘನೆ ಮಾಡಿದೆ. 2003ರ ನ.26ರಂದು ಉಭಯ ರಾಷ್ಟ್ರಗಳ ನಡುವೆ ಕದನ ವಿರಾಮ ಘೊಷಿಸಲಾಗಿತ್ತು.


•► ಕ್ಷೀಣಿಸಿದ ಐಸಿಸ್ ಪ್ರಭಾವ

ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಲೆವಂಟ್(ಐಎಸ್​ಐಎಲ್) ಅಥವಾ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಸಿರಿಯಾ (ಐಎಸ್​ಐಎಸ್) ಪಾಲಿಗೆ 2016 ಕೊಂಚ ಹಿನ್ನಡೆಯ ವರ್ಷ. ಆರ್ಥಿಕ ಹೊಡೆತ ಒಂದೆಡೆಯಾದರೆ, ಅಮೆರಿಕ ನೇತೃತ್ವದ ಸಂಯುಕ್ತ ಸೇನಾಪಡೆಗಳ ದಾಳಿಗೆ ಸಿಲುಕಿ ಹಲವು ನಾಯಕರು ಸಾವನ್ನಪ್ಪಿದ್ದು ಮತ್ತೊಂದು ಹೊಡೆತ. ಮಾರ್ಚ್, ಏಪ್ರಿಲ್ ವೇಳೆಗಾಗಲೇ ಈ ಉಗ್ರ ಸಂಘಟನೆ ತನ್ನ ಬಳಿ ಇದ್ದ ಭೂಪ್ರದೇಶದಲ್ಲಿ ಕಾಲಂಶವನ್ನು ಕಳೆದುಕೊಂಡಿತ್ತು.


•► ಭೂಪ್ರದೇಶ ಕಳೆದುಕೊಂಡ ಉಗ್ರರು

ಸಿರಿಯಾ ಮತ್ತು ಇರಾಕ್​ಗಳಲ್ಲಿ ಹಿಡಿತ ಉಳಿಸಿಕೊಂಡಿರುವ ಐಸಿಸ್ ತನ್ನ ವಶದಲ್ಲಿದ್ದ ಶೇ. 22 ಪ್ರದೇಶವನ್ನು ಮಾರ್ಚ್ ವೇಳೆಗಾಗಲೇ ಕಳೆದುಕೊಂಡಿತ್ತು. ಇದಾಗಿ, ಮೂರು ತಿಂಗಳ ಅವಧಿಯಲ್ಲಿ ಮತ್ತೆ ಶೇಕಡ 8 ಭಾಗ ಕೈತಪ್ಪಿದ್ದು ಐಸಿಸ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ರಷ್ಯಾ, ಅಮೆರಿಕ ಮತ್ತು ಫ್ರಾನ್ಸ್ ಮತ್ತಿತರ ರಾಷ್ಟ್ರಗಳು ಐಸಿಸ್ ವಿರುದ್ಧ ಯುದ್ಧ ಕೈಗೊಂಡಿವೆ. ಈ ಸಮರ 2016ರ ಅವಧಿಯಲ್ಲಿ ತೀವ್ರಗೊಂಡಿತ್ತು.


•► ಆರ್ಥಿಕ ಸಂಕಷ್ಟವೂ ಎದುರಾಯ್ತು

ಪೆಟ್ರೋಲಿಯಂ ಗಣಿಗಳ ನಾಶ, ಕಳ್ಳಸಾಗಣೆ ಮತ್ತು ಅಕ್ರಮ ಶಸ್ತ್ರಾಸ್ತ್ರ ಸಾಗಾಟಕ್ಕೆ ಕಡಿವಾಣ, ಮತ್ತಿತರ ವ್ಯವಹಾರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದಿಗ್ಬಂಧನ ವಿಧಿಸಿದ್ದು ಕೂಡಾ ಐಸಿಸ್ ಪರಿಸ್ಥಿತಿ ಬಿಗಡಾಯಿಸಲು ಕಾರಣವಾಯಿತು. ಅಮೆರಿಕದ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡಲು ಪಣ ತೊಟ್ಟಿದ್ದ ಐಸಿಸ್ ಉಗ್ರರು, ತಮ್ಮದೇ ಆದ ಚಿನ್ನ, ಬೆಳ್ಳಿ ಹಾಗೂ ತಾಮ್ರದ ನಾಣ್ಯಗಳನ್ನು ಕಳೆದ ವರ್ಷ ಪರಿಚಯಿಸಿದ್ದರು. ಆದರೆ ಅವರ ಲೆಕ್ಕಾಚಾರ ತಲೆಕೆಳಗಾಗಿ ಈ ವರ್ಷ ಪ್ರತಿಯೊಂದು ವಹಿವಾಟಿಗೂ ಡಾಲರನ್ನು ಅವಲಂಬಿಸುವಂತಾಯಿತು. ಸಿರಿಯಾದ ಪ್ರಮುಖ ನಗರ ರಖ್ಖಾದಲ್ಲಿ ಕಾನೂನು ಉಲ್ಲಂಘಿಸುವ ಸ್ಥಳೀಯರಿಗೆ ದಂಡ ಪಾವತಿಯನ್ನು ಸಿರಿಯಾ ಪೌಂಡ್ ಅಥವಾ ದಿನಾರ್ ಬದಲಾಗಿ ಡಾಲರ್ ರೂಪದಲ್ಲೇ ಪಾವತಿಸುವಂತೆ ಐಸಿಸ್ ಸೂಚಿಸಿದ್ದು, ಅದರ ಆರ್ಥಿಕ ಸಂಕಷ್ಟಕ್ಕೆ ಸಾಕ್ಷಿ.


•► ಭಟ್ಕಳದ ಉಗ್ರ ಪೋಸ್ಟರ್​ಬಾಯ್

ಅಪ್ಘಾನಿಸ್ತಾನದಲ್ಲಿ ಎರಡು ವರ್ಷ ಹಿಂದೆ ಹತ್ಯೆಯಾದ ಭಟ್ಕಳದ ಉಗ್ರ ಅನ್ವರ್ ಹುಸೇನ್​ನನ್ನು ಐಸಿಸ್ ಸಂಘಟನೆ ಹೊಸ ಪೋಸ್ಟರ್​ಬಾಯ್ ಆಗಿ ಬಿಂಬಿಸಿದ್ದು, ಭಾರತದಿಂದ ಹೆಚ್ಚಿನ ಸಂಖ್ಯೆಯ ಯುವಕರನ್ನು ಸಂಘಟನೆಯತ್ತ ಸೆಳೆಯುವ ಯೋಜನೆ ರೂಪಿಸಿತ್ತು. ಈ ಕುರಿತ 14 ನಿಮಿಷದ ವಿಡಿಯೋವನ್ನು ಅದು ವರ್ಷದ ಮಧ್ಯಭಾಗದಲ್ಲಿ ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಿತ್ತು.


•► ಅಲ್ ಬಗ್ದಾದಿ ಸಾವು?

ಐಸಿಸ್​ನ ಸ್ವಘೊಷಿತ ಮುಖ್ಯಸ್ಥ ಅಬು ಬಕ್ರ್ ಅಲ್ ಬಗ್ದಾದಿ ಸಾವಿನ ಕುರಿತಂತೆ ಇನ್ನೂ ನಿಖರ ಮಾಹಿತಿ ಹೊರಬಿದ್ದಿಲ್ಲ. ಆದರೆ, 2015ರ ಮಾ.18ರಂದು ನಡೆದ ವಾಯುದಾಳಿಯಲ್ಲಿ ಬಗ್ದಾದಿ ಹಾಗೂ ಆತನ ಮೂವರು ಬೆಂಬಲಿಗರು ಗಂಭೀರವಾಗಿ ಗಾಯಗೊಂಡಿದ್ದರು. ಈಗ 2016ರ ಏಪ್ರಿಲ್​ನಲ್ಲಿ ಸಿರಿಯಾ ಗಡಿಭಾಗದಲ್ಲಿ ಬೆಂಬಲಿಗರೊಂದಿಗೆ ಸಭೆ ನಡೆಸುತ್ತಿದ್ದ ವೇಳೆ ನ್ಯಾಟೋ ಮಿತ್ರಪಡೆಗಳು ನಡೆಸಿದ ಬಾಂಬ್ ದಾಳಿಯಲ್ಲಿ ಬಗ್ದಾದಿ ಗಾಯಗೊಂಡಿದ್ದಾನೆ ಎಂದು ವರದಿಯಾಗಿತ್ತು. ಇರಾಕಿನ ಟಿವಿ ಚಾನೆಲ್ ಜೂನ್ 9ರಂದು ಬಿತ್ತರಿಸಿದ ಸುದ್ದಿ ಪ್ರಕಾರ ಉತ್ತರ ಇರಾಕ್​ನಲ್ಲಿ ಅಮೆರಿಕ ಸೇನೆ ನಡೆಸಿದ ದಾಳಿಯಲ್ಲಿ ಅಲ್ ಬಗ್ದಾದಿ ಗಾಯಗೊಂಡಿದ್ದಾನೆ. ಜೂನ್ 14ರಂದು ಮಧ್ಯಪ್ರಾಚ್ಯದ ಅನೇಕ ಮಾಧ್ಯಮಗಳು ಬಿತ್ತರಿಸಿದ ವರದಿಯಲ್ಲಿ, ರಖ್ಖಾ ಮೇಲೆ ಅಮೆರಿಕ ಸೇನೆ ನಡೆಸಿದ ದಾಳಿಯಲ್ಲಿ ಜೂನ್ 12ರಂದೇ ಅಲ್ ಬಗ್ದಾದಿ ಹತನಾಗಿದ್ದಾನೆ ಎಂದಿದ್ದವು. ಇನ್ನೊಂದೆಡೆ, ಅಕ್ಟೋಬರ್ 3ರಂದು ಹಲವು ಮಾಧ್ಯಮಗಳು, ಅಲ್ ಬಗ್ದಾದಿ ಮತ್ತು ಆತನ ಮೂವರು ಸಹಚರರಿಗೆ ವಿಷ ಉಣಿಸಲಾಗಿದೆ. ಅವರನ್ನು ಒಬ್ಬ ಹಂತಕ ಜೀವಂತವಾಗಿ ಒತ್ತೆಯಾಳಾಗಿ ಇರಿಸಿಕೊಂಡಿದ್ದಾನೆ ಎಂಬ ವರದಿ ಬಿತ್ತರಿಸಿದ್ದವು. ಆದರೆ, ಇದ್ಯಾವುದನ್ನೂ ಐಸಿಸ್ ದೃಢೀಕರಿಸಿಲ್ಲ.


•► ಭಾರತದಲ್ಲಿ ಐಸಿಸ್​ಗೆ ಕಡಿವಾಣ

ಗುಪ್ತಚರ ಮೂಲಗಳ ಪ್ರಕಾರ ಇದುವರೆಗೆ 23 ಭಾರತೀಯರು ಐಸಿಸ್ ಸೇರ್ಪಡೆಯಾಗಿದ್ದು, ಇವರಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಟ್ಟಿರುವ ಭದ್ರತಾ ಪಡೆಗಳು ಐಸಿಸ್ ಸೇರ ಹೊರಟಿದ್ದ 150 ಯುವಕರನ್ನು ತಡೆಹಿಡಿದಿವೆ. ಕಳೆದೊಂದು ವರ್ಷದ ಅವಧಿಯಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ತೀವ್ರಗೊಳಿಸಿದ್ದ

ಎನ್​ಐಎ ಸುಮಾರು 24 ಶಂಕಿತ ಐಸಿಸ್ ಉಗ್ರರು, ನೇಮಕಾತಿದಾರರನ್ನು ಬಂಧಿಸಿತ್ತು. ಅನೇಕ ಯುವಕರು ಸಿರಿಯಾಗೆ ತೆರಳುವುದನ್ನು ತಡೆಗಟ್ಟಿ ಅವರ ಮನಃಪರಿವರ್ತನೆಗೊಳಿಸುವಲ್ಲಿ ಯಶಸ್ವಿಯಾಗಿತ್ತು. ಇಂಥ ಕ್ರಮಗಳಿಂದ ಕಂಗಾಲಾಗಿರುವ ಉಗ್ರ ಸಂಘಟನೆ ಭಾರತದಲ್ಲಿ ಚಟುವಟಿಕೆಯ ಪ್ರಮಾಣ ತಗ್ಗಿಸುವಂತೆ ಬೆಂಬಲಿಗರಿಗೆ ಸೂಚಿಸಿದ್ದಾಗಿ ವರದಿಯಾಗಿತ್ತು.

**ಬಲೆಗೆ ಬಿದ್ದವರಲ್ಲಿ ಕರ್ನಾಟಕದ 6 ಜನ

ಎನ್​ಐಎ ಅಧಿಕಾರಿಗಳು ಜನವರಿ ತಿಂಗಳ ಆರಂಭದಲ್ಲಿ ಉತ್ತರಾಖಂಡದಲ್ಲಿ ನಾಲ್ವರು ಉಗ್ರರನ್ನು ಬಂಧಿಸಿದ್ದರು. ಈ ಆರೋಪಿಗಳು ಅರ್ಧಕುಂಭಮೇಳದ ಸಂದರ್ಭ ದಾಳಿ ನಡೆಸಲು ಸಂಚು ರೂಪಿಸಿದ್ದರು. ಅವರು ನೀಡಿದ ಮಾಹಿತಿಯನ್ನು ಆಧರಿಸಿ,

ಜ. 23ರಂದು ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ ಹಲವು ಶಂಕಿತ ಐಸಿಸ್ ಉಗ್ರರನ್ನು ಎನ್​ಐಎ ಬಂಧಿಸಿತ್ತು. ಈ ಉಗ್ರರು ಗಣರಾಜ್ಯೋತ್ಸವ ಸಮಾರಂಭದ ಸಂದರ್ಭ ದಾಳಿ ನಡೆಸಲು ಸಂಚು ರೂಪಿಸಿದ್ದರು. ಈ ಪೈಕಿ, ಆರು ಜನ ಕರ್ನಾಟಕ ಮೂಲದವರು ಎಂಬುದು ಬಳಿಕ ಬೆಳಕಿಗೆ ಬಂದಿತ್ತು.


•► ಪ್ರಮುಖ ಬೆಳವಣಿಗೆಗಳು

ಉಗ್ರನಿಗ್ರಹಕ್ಕೆ ಸಂಬಂಧಿಸಿ 33 ಅಂಶಗಳನ್ನೊಳಗೊಂಡ ನಿಲುವಳಿಯನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸಮಾವೇಶದಲ್ಲಿ ಮಂಡಿಸಿದರು. ಪಾಕ್ ಹೊರತುಪಡಿಸಿ ಉಳಿದೆಲ್ಲ ದೇಶಗಳು ನಿಲುವಳಿಯನ್ನು ಬೆಂಬಲಿಸಿದವು.

ಅಫ್ಘಾನಿಸ್ತಾನ ಹಾಗೂ ದಕ್ಷಿಣ ಏಷ್ಯಾ ಪ್ರದೇಶಗಳ ಮೇಲೆ ತಾಲಿಬಾನ್, ಲಷ್ಕರ್ ಎ ತೊಯ್ಬಾ ಹಾಗೂ ಜೈಶ್ ಎ ಮೊಹಮದ್ ಸಂಘಟನೆಗಳ ಕುರಿತು ಕಳವಳ ವ್ಯಕ್ತಪಡಿಸಿರುವ ಸದಸ್ಯ ರಾಷ್ಟ್ರಗಳು, ಭಯೋತ್ಪಾದಕರ ಸುರಕ್ಷಿತ ತಾಣಗಳನ್ನು ನಿರ್ನಾಮ ಮಾಡುವ ಕುರಿತು ಒಕ್ಕೊರಲಿನ ನಿರ್ಣಯ ಕೈಗೊಂಡಿವು.


•► ಕೈಗೊಂಡ ನಿರ್ಣಯಗಳು

ಭಯೋತ್ಪಾದಕರ ಸುರಕ್ಷಿತ ತಾಣವನ್ನು ನಿಮೂಲನೆ ಮಾಡಬೇಕು.
ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಶಾಂತಿಭಂಗ ಉಂಟುಮಾಡುತ್ತಿರುವ ಎಲ್ಲ ರೀತಿಯ ಭಯೋತ್ಪಾದನೆಯನ್ನು ನಿಮೂಲನೆ ಮಾಡಬೇಕು.
ಭಯೋತ್ಪಾದನೆಗೆ ಬೆಂಬಲ ಹಾಗೂ ಆರ್ಥಿಕ ನೆರವು ನೀಡುತ್ತಿರುವರ ವಿರುದ್ಧ ಕೂಡ ಕ್ರಮ ಕೈಗೊಳ್ಳಬೇಕು.
ಭಯೋತ್ಪಾದಕರ ಸುರಕ್ಷಿತ ತಾಣಗಳನ್ನು ನಾಶಪಡಿಸಲು ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ಸಹಕಾರ ಅತ್ಯಗತ್ಯ.
ಭಯೋತ್ಪಾದಕ ತಂಡಗಳಿಗೆ ಯುವಜನತೆಯ ನೇಮಕ ಪ್ರಕ್ರಿಯೆ ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.


•► ಚೀನಾ ಬೂಟಾಟಿಕೆ

ಎಲ್ಲ ರಂಗಗಳಲ್ಲೂ ಭಾರತದೊಂದಿಗೆ ಸ್ಪರ್ಧೆ ಒಡ್ಡಿರುವ ಚೀನಾ, ‘ಮಹಾಶಕ್ತಿ’ ಆಗುವ ಕನಸಿನಲ್ಲಿ ಭಾರತವಿರೋಧಿ ಶಕ್ತಿಗಳೊಂದಿಗೆ ಕೈಜೋಡಿಸುತ್ತಿದೆ. ಪಾಕಿಸ್ತಾನ ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿದೆ ಎಂಬ ವಾಸ್ತವ ತಿಳಿದಿದ್ದರೂ ಭಾರತವನ್ನು ವಿರೋಧಿಸಬೇಕೆಂಬ ಕಾರಣದಿಂದ ಅದು ಪಾಕ್ ಬೆನ್ನಿಗೆ ನಿಂತಿದೆ. ಇದು ವಿಶ್ವಸಂಸ್ಥೆ ಮಹಾಧಿವೇಶನದಲ್ಲೂ ಪುನರಾವರ್ತನೆಯಾಗಿ, ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಚೀನಾದ ಬದ್ಧತೆ ಬಗ್ಗೆ ಅನುಮಾನ, ಪ್ರಶ್ನೆ ಮೂಡಿತು. ಚೀನಾ ಪ್ರಧಾನಿ ಲಿ ಕಿಯಾಂಗ್ ಅವರು ವಿಶ್ವಸಂಸ್ಥೆಯ ಮಹಾಧಿವೇಶನದ ವೇಳೆ ಪಾಕ್ ಪ್ರಧಾನಿ ಷರೀಫ್ ಜತೆ ಮಾತನಾಡುತ್ತ, ಭಯೋತ್ಪಾದಕ ಕೃತ್ಯಗಳ ಸಂತ್ರಸ್ತ ದೇಶ ಪಾಕಿಸ್ತಾನ. ಹೀಗಾಗಿ ಪಾಕಿಸ್ತಾನದ ಪರವಾಗಿ ನಾವು ಎಲ್ಲ ವೇದಿಕೆಗಳಲ್ಲೂ ಧ್ವನಿ ಎತ್ತುವುದಾಗಿ ಭರವಸೆ ನೀಡಿದರು, ಮಾತ್ರವಲ್ಲ, ಕುಖ್ಯಾತ ಭಯೋತ್ಪಾದಕ ಮಸೂದ್ ಅಜಹರ್ ಮೇಲೆ ನಿಷೇಧ ಹೇರುವ ಭಾರತದ ಪ್ರಸ್ತಾವನೆಗೆ ಅಮೆರಿಕ, ರಷ್ಯಾ ಸೇರಿದಂತೆ ಹಲವು ರಾಷ್ಟ್ರಗಳು ಬೆಂಬಲಿಸಿದರೂ ಚೀನಾ ಬೆಂಬಲಿಸಲಿಲ್ಲ.


•► ಒಬ್ಬಂಟಿಯಾದ ಪಾಕಿಸ್ತಾನ

ಭಯೋತ್ಪಾದನೆಯ ರಫ್ತನ್ನು ಮುಂದುವರಿಸಿರುವ ಪಾಕಿಸ್ತಾನ ಈ ವರ್ಷ ಅಂತಾರಾಷ್ಟ್ರೀಯ ವಲಯದಲ್ಲಿ ಒಬ್ಬಂಟಿಯಾಯಿತು. ಇದು ಭಾರತ ಕೈಗೊಂಡ ಸತತ ರಾಜತಾಂತ್ರಿಕ ಪ್ರಯತ್ನಗಳಿಗೆ ಸಿಕ್ಕ ಯಶಸ್ಸು ಎಂದೇ ವ್ಯಾಖ್ಯಾನಿಸಬಹುದು. ಯುರೋಪಿಯನ್ ಯೂನಿಯನ್, ಬ್ರಿಕ್ಸ್, ಹಾರ್ಟ್ ಆಫ್ ಏಷ್ಯಾ ಸೇರಿದಂತೆ ಹಲವು ಶೃಂಗಗಳಲ್ಲಿ ಪಾಕ್ ಭಾರಿ ಮುಜುಗರಕ್ಕೀಡಾಯಿತು. ಹಲವು ದೇಶಗಳ ನಾಯಕರು ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿರುವ ಪಾಕ್ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಉಗ್ರದಮನ ಕಾರ್ಯವನ್ನು ವಿವರಿಸುವುದಕ್ಕೆ ಭಾಷಣದ ಶೇಕಡ 80ರಷ್ಟು ಭಾಗವನ್ನು ಪಾಕ್ ಪ್ರಧಾನಿ ಮೀಸಲಿಟ್ಟಿದ್ದರು. ಆದರೆ, ಯಾರೊಬ್ಬರೂ ಪಾಕಿಸ್ತಾನದ ಉಗ್ರ ದಮನ ರೀತಿಯನ್ನು ಬೆಂಬಲಿಸಿಲ್ಲ. ಇದೇ ವೇಳೆ, ಪಾಕಿಸ್ತಾನ ಯಾವ ರೀತಿ ಭಯೋತ್ಪಾದನೆಯ ಪ್ರಾಯೋಜಕತ್ವ ವಹಿಸುತ್ತಿದೆ ಎಂಬ ಸೂಕ್ಷ್ಮವನ್ನು ಜಗತ್ತಿನೆದುರು ನಿರೂಪಿಸುವಲ್ಲಿ ಭಾರತ ಯಶಸ್ವಿಯಾಯಿತು.

(Courtesy :ನಿರ್ವಹಣೆ: ನಾಗರಾಜ ಇಳೆಗುಂಡಿ. ವಿಜಯವಾಣಿ ಟೀಂ: ರವೀಂದ್ರ ಎಸ್.ದೇಶಮುಖ್, ಉಮೇಶ್ ಕುಮಾರ್ ಶಿಮ್ಲಡ್ಕ, ಅಕ್ಷತಾ ಮುಂಡಾಜೆ ವಿನ್ಯಾಸ: ಅಶ್ವತ್ಥ ಕೃಷ್ಣ)

No comments:

Post a Comment