"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday 27 December 2016

☀️ ಭಾಗ - 1: 2016 ರ ಪ್ರಮುಖ ರಾಷ್ಟ್ರೀಯ / ಅಂತರರಾಷ್ಟ್ರೀಯ ಘಟನೆಗಳು - ಒಂದು ಹಿನ್ನೋಟ : (Important Current Affairs of 2016 at glance)

☀️ ಭಾಗ - 1: 2016 ರ ಪ್ರಮುಖ ರಾಷ್ಟ್ರೀಯ / ಅಂತರರಾಷ್ಟ್ರೀಯ ಘಟನೆಗಳು - ಒಂದು ಹಿನ್ನೋಟ :
(Important Current Affairs of 2016 at glance)
━━━━━━━━━━━━━━━━━━━━━━━━━━━━━━━━━━━━━━━━━━━━━

★ 2016ರ ಪ್ರಚಲಿತ ಘಟನೆಗಳು.
(2016 current affairs in short)


★ ಭಯೋತ್ಪಾದನೆ ವಿರೋಧಿ ಹೋರಾಟದ ವಿಷಯ :

ಭಯೋತ್ಪಾದನೆ ವಿರೋಧಿ ಹೋರಾಟದ ವಿಷಯದಲ್ಲಿ ಜಾಗತಿಕವಾಗಿ 2016ನೇ ವರ್ಷ ಅತಿ ಮಹತ್ವದ್ದು. ಉಗ್ರಶಕ್ತಿಗಳು ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಮಾರಕವಾಗಿರುವ ಅಪಾಯಕಾರಿ ಸನ್ನಿವೇಶವನ್ನು ಮನಗಂಡ ಜಾಗತಿಕ ವಲಯ, ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಮತ್ತು ಒಗ್ಗಟ್ಟಾಗಿ ಹೋರಾಡಲು ಸಂಕಲ್ಪಿಸಿತು. ಹಲವು ಜಾಗತಿಕ ಶೃಂಗಗಳಲ್ಲಿ ಇದು ಪುನರುಚ್ಚರಿಸಲ್ಪಟಿತು. ಪರಿಣಾಮ, ಐಸಿಸ್ ಸೇರಿದಂತೆ ಹಲವು ಭಯೋತ್ಪಾದಕ ಸಂಘಟನೆಗಳ ಶಕ್ತಿ ಕುಗ್ಗಿದೆ. ಭಾರತ ಪಿಒಕೆಯಲ್ಲಿ ಸರ್ಜಿಕಲ್ ದಾಳಿ ಮೂಲಕ ಉಗ್ರರ ಅಡಗುದಾಣಗಳನ್ನು ಧ್ವಂಸಗೊಳಿಸಿದ್ದು ಮಹತ್ವದ ವಿದ್ಯಮಾನ.


•► ಸಾರ್ಕ್​ಗೆ ಬಹಿಷ್ಕಾರ

*.ನಿಗದಿಯಂತೆ ನವೆಂಬರ್ 15 ಮತ್ತು 16ರಂದು ಪಾಕಿಸ್ತಾನದ ಇಸ್ಲಾಮಾಬಾದ್​ನಲ್ಲಿ ಸಾರ್ಕ್ ರಾಷ್ಟ್ರಗಳ ಶೃಂಗಸಭೆ ನಡೆಯಬೇಕಿತ್ತು. ಆದರೆ, ಇದಕ್ಕೆ ಮುನ್ನ (ಸೆ.18) ಜಮ್ಮು-ಕಾಶ್ಮೀರದ ಉರಿ ವಾಯುನೆಲೆ ಮೇಲೆ ನಡೆದ ಭಯೋತ್ಪಾದಕ ದಾಳಿ ಪಾಕಿಸ್ತಾನದ ಬೂಟಾಟಿಕೆಯನ್ನು ಜಗಜ್ಜಾಹೀರುಗೊಳಿಸಿತು.
*.ಪಾಕಿಸ್ತಾನದ ಧೋರಣೆಯನ್ನು ಖಂಡಿಸಿ ಭಾರತವು ಆ ರಾಷ್ಟ್ರದಲ್ಲಿ ನಡೆಯಬೇಕಿದ್ದ ಸಾರ್ಕ್ ಶೃಂಗವನ್ನು ಬಹಿಷ್ಕರಿಸಿತು. ಇದರ ಬೆನ್ನಲ್ಲೇ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್ ಹಾಗೂ ಮಾಲ್ಡೀವ್ಸ್ ಕೂಡ ಸಮ್ಮೇಳನಕ್ಕೆ ಹಾಜರಾಗದಿರಲು ನಿರ್ಧರಿಸಿದವು. ಇದರಿಂದ ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಬ್ಬಂಟಿಯಾಗಿ, ತೀವ್ರ ಮುಖಭಂಗ ಅನುಭವಿಸಿತು.


•► ಜಾಗತಿಕ ವೇದಿಕೆಗಳಲ್ಲಿ ಮೊಳಗಿದ ಬದ್ಧತೆ

*.ಭಾರತ ಈ ವರ್ಷ ಭಯೋತ್ಪಾದನಾ ದಾಳಿಗಳನ್ನು ಖಂಡಿಸುವ ಎಂದಿನ ಪರಿಪಾಠಕ್ಕೆ ಸೀಮಿತವಾಗಿ ಉಳಿಯಲಿಲ್ಲ. ಗಡಿ ಭಾಗದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನಾ ದಾಳಿಗಳು, ಉಗ್ರರ ನುಸುಳುವಿಕೆಯ ಘಟನೆಗಳು ದೇಶಾದ್ಯಂತ ಆಕ್ರೋಶ ಸೃಷ್ಟಿಸಿದವು. ಮುಖ್ಯವಾಗಿ, ಸೈನಿಕರ ಬಲಿದಾನಕ್ಕೆ ಪ್ರತಿಯಾಗಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕೆಂಬ ಆಗ್ರಹವೂ ಜೋರಾಗಿತ್ತು.
*.ನೇರ ಕಾರ್ಯಾಚರಣೆಗೆ ಮನಸ್ಸುಮಾಡಿದ ಕೇಂದ್ರ ಸರ್ಕಾರ ವಿಜಯದಶಮಿ ಮುನ್ನಾ ದಿನವಾದ ಸೆ.29ರಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ದಾಳಿ ನಡೆಸಲು ಭಾರತೀಯ ಸೇನೆಗೆ ಹಸಿರು ನಿಶಾನೆ ತೋರಿತು. ಭಾರತೀಯ ಸೇನೆ ಕೆಲವೇ ಗಂಟೆಗಳಲ್ಲಿ ಪಿಒಕೆ ಒಳಗೆ 500 ಮೀಟರ್​ನಿಂದ 2ರಿಂದ 3 ಕಿ.ಮೀ ಅಂತರದಲ್ಲಿ ಭಿಂಬರ್, ಹಾಟ್​ಸ್ಪ್ರಿಂಗ್, ಕೆಲ್ ಮತ್ತು ಲಿಪಾ ಪ್ರದೇಶದಲ್ಲಿ ಏಳು ಉಗ್ರನೆಲೆಗಳನ್ನು ಧ್ವಂಸಗೊಳಿಸಿತು. 40ಕ್ಕೂ ಹೆಚ್ಚು ಭಯೋತ್ಪಾದಕರು ಹತರಾದರು.
*.ಭಾರತದ ಈ ದಾಳಿಗೆ ಬೆಚ್ಚಿಬಿದ್ದ ಪಾಕಿಸ್ತಾನ ತಾನು ಯುದ್ಧಕ್ಕೆ ಸಿದ್ಧನಿರುವುದಾಗಿ ಹೂಂಕರಿಸಿತು. ಪಿಒಕೆಯಲ್ಲಿ ನಡೆದ ಸೇನಾ ದಾಳಿಯನ್ನು ಸರ್ವಪಕ್ಷಗಳೂ ಶ್ಲಾಘಿಸಿದವಲ್ಲದೆ, ಭವಿಷ್ಯದಲ್ಲಿ ಕೈಗೊಳ್ಳುವ ಯಾವುದೇ ರೀತಿಯ ಕಾರ್ಯಾಚರಣೆಗೆ ಬೆಂಬಲ ನೀಡುವುದಾಗಿ ಘೊಷಿಸಿವು. ಅಷ್ಟೇ ಅಲ್ಲ, ಭಯೋತ್ಪಾದನೆಯಿಂದ ಸಂತ್ರಸ್ತವಾಗಿರುವ ಭಾರತ ಕೈಗೊಂಡಿರುವ ಈ ಕ್ರಮ ಸರಿಯಾಗಿಯೇ ಇದೆ ಎಂದು ಅಮೆರಿಕ, ರಷ್ಯಾ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಶಕ್ತಿಗಳು ಬೆಂಬಲ, ಮೆಚ್ಚುಗೆ ಸೂಚಿಸಿದವು.
*.ಪಾಕಿಸ್ತಾನ ಬೆನ್ನಿಗೆ ನಿಂತಿರುವ ಚೀನಾ ಮಾತ್ರ ಜಾಣಮೌನ ವಹಿಸಿತು. ಒಟ್ಟಾರೆ, ಸಹನೆ ತನ್ನ ದೌರ್ಬಲ್ಯವಲ್ಲ, ಭಯೋತ್ಪಾದನೆಯಂಥ ಕೃತ್ಯಗಳನ್ನು ದೇಶ ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಈ ಸರ್ಜಿಕಲ್ ದಾಳಿ ಮೂಲಕ ಅಂತಾರಾಷ್ಟ್ರೀಯ ವಲಯಕ್ಕೆ ನೀಡುವಲ್ಲಿ ಭಾರತ ಯಶಸ್ವಿಯಾಯಿತು.

*.ಒಟ್ಟಾದ ಅಂತಾರಾಷ್ಟ್ರೀಯ ಶಕ್ತಿಗಳು: ಜಾಗತಿಕ ಮಟ್ಟದಲ್ಲೂ ಹಲವು ಘೊಷಣೆ ಮತ್ತು ಮಹತ್ವದ ಒಪ್ಪಂದಗಳು ಏರ್ಪಟ್ಟವು. ಅಭಿವೃದ್ಧಿಯೇ ಮುಖ್ಯ ಕಾರ್ಯಸೂಚಿಯಾಗಿರುತ್ತಿದ್ದ ಜಾಗತಿಕ ಶೃಂಗಗಳಲ್ಲಿ ಈ ಬಾರಿ ಪ್ರಮುಖ ಕಾರ್ಯಸೂಚಿ ಭಯೋತ್ಪಾದನೆ ವಿರುದ್ಧದ ಹೋರಾಟವೇ ಆಗಿತ್ತು ಎಂಬುದು ಗಮನಾರ್ಹ.


•► ಮಹಿಳಾ ಬಾಂಬರ್ ದಾಳಿ

*.ಬೊಕೊ ಹರಾಮ್ ಉಗ್ರ ಸಂಘಟನೆಯ ಇಬ್ಬರು ಮಹಿಳಾ ಆತ್ಮಾಹುತಿ ಬಾಂಬರ್​ಗಳು ನೈಜೀರಿಯಾದ ಮೈದುಗಿರಿಯಲ್ಲಿ ಮಸೀದಿಯಲ್ಲೇ ಮಾರ್ಚ್ 16ರಂದು ಬಾಂಬ್ ದಾಳಿ ನಡೆಸಿದರು. ಈ ದಾಳಿಯಲ್ಲಿ 24 ಜನರು ಮೃತಪಟ್ಟು 18 ಜನ ಗಾಯಗೊಂಡರು.


•► ಯುರೋಪ್ ಒಕ್ಕೂಟದ ಬಲ

*.ಮಾರ್ಚ್ 30ರಂದು ಬೆಲ್ಜಿಯಂನ ರಾಜಧಾನಿ ಬ್ರಸೆಲ್ಸ್​ನಲ್ಲಿ ನಡೆದ ಭಾರತ-ಯುರೋಪ್ ಒಕ್ಕೂಟದ ಶೃಂಗಸಭೆಯಲ್ಲಿ ಭಯೋತ್ಪಾದನೆ ವಿರುದ್ಧ ಒಗ್ಗಟ್ಟಾಗಿ ಹೋರಾಡುವ ನಿರ್ಣಯ ಅಂಗೀಕರಿಸಲಾಯಿತು. ಅಷ್ಟೇ ಅಲ್ಲ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಯುರೋಪಿಯನ್ ಒಕ್ಕೂಟಕ್ಕೆ ಭಾರತ ಪ್ರಮುಖ ಜತೆಗಾರನಾಗಿದೆ. ಈ ವಿಷಯದಲ್ಲಿ ಭಾರತ ಹೆಚ್ಚು ಅನುಭವ ಹೊಂದಿರುವುದರಿಂದ ಪ್ರಧಾನಿ ಮೋದಿ ಸಕ್ರಿಯರಾಗಿ ಸಲಹೆ ನೀಡಬೇಕು ಎಂದು ಬೆಲ್ಜಿಯಂ ಸಂಸತ್ ಸದಸ್ಯರು ಮನವಿ ಮಾಡಿದರು.

•► ಅಮೆರಿಕ ಷರತ್ತುಬದ್ಧ ನೆರವು

*.ಅಮೆರಿಕ 2017ನೇ ವಿತ್ತವರ್ಷದಲ್ಲಿ ಪಾಕಿಸ್ತಾನಕ್ಕೆ 900 ದಶಲಕ್ಷ ಡಾಲರ್ ನೆರವು ಘೊಷಿಸಿದೆ. ಆದರೆ, ಪಾಕಿಸ್ತಾನ ಹಕ್ಕಾನಿ ನೆಟ್​ವರ್ಕ್ ಹತ್ತಿಕ್ಕಲು ಕ್ರಮ ಕೈಗೊಂಡಲ್ಲಿ ಮಾತ್ರ ಈ ನೆರವು ನೀಡಲಾಗುವುದು ಎಂಬ ಷರತ್ತನ್ನು ಒಡ್ಡಿರುವುದು ಗಮನಾರ್ಹ. ಉಗ್ರವಾದಕ್ಕೆ ಬೆಂಬಲ ನೀಡುತ್ತಿರುವ ಮತ್ತು ಅಣ್ವಸ್ತ್ರ ಬಲ ಹೊಂದಿರುವ ಪಾಕ್ ಜಗತ್ತಿಗೆ ಒಂದು ಸಮಸ್ಯೆಯಿದ್ದಂತೆ ಎಂಬ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯೂ ಮಹತ್ವ ಪಡೆದುಕೊಂಡಿತು.

•►  ಬೆಚ್ಚಿಬಿದ್ದ ಬ್ರಸೆಲ್ಸ್

*.ಬ್ರಸೆಲ್ಸ್​ನ ವಿಮಾನ ನಿಲ್ದಾಣ ಮತ್ತು ಮೆಟ್ರೋ ಸ್ಟೇಷನ್ ಮೇಲೆ ಮಾರ್ಚ್ 22ರಂದು ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 32 ನಾಗರಿಕರು ಮೃತಪಟ್ಟು 300 ಜನರು ಗಾಯಗೊಂಡರು. ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಲಿವೆಂಡ್(ಐಎಸ್​ಐಎಲ್) ದಾಳಿಯ ಹೊಣೆ ಹೊತ್ತಿತು.
*.ಬೆಲ್ಜಿಯಂನ ಇತಿಹಾಸದಲ್ಲೇ ಇದು ಅತಿ ಭೀಕರ ಉಗ್ರ ದಾಳಿಯಾಗಿದ್ದು, ಸರ್ಕಾರ ಮೂರು ದಿನಗಳ ಶೋಕಾಚರಣೆ ಘೊಷಿಸಿತ್ತು.


•► ರ್ಪಾನಲ್ಲೇ ಬಾಂಬ್ ಸ್ಫೋಟ

*.ಲಾಹೋರ್​ನ ಪಾರ್ಕೆಂದರಲ್ಲಿ ಮಾರ್ಚ್ 28ರಂದು ತಾಲಿಬಾನ್​ನ ಅಂಗಸಂಸ್ಥೆ ಜಮಾತ್ ಉಲ್ ಅಹರಾರ್ ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 72 ಜನರು ಸಾವನ್ನಪ್ಪಿದರು. 300ಕ್ಕೂ ಹೆಚ್ಚು ಜನರು ಗಾಯಗೊಂಡರು. ಮೃತಪಟ್ಟವರಲ್ಲಿ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆಯೇ ಹೆಚ್ಚಾಗಿತ್ತು.


•► ಗೋವಾದಲ್ಲಿ ಬ್ರಿಕ್ಸ್ ರಾಷ್ಟ್ರಗಳು

*.ಅಕ್ಟೋಬರ್ 15 ಮತ್ತು 16ರಂದು ಗೋವಾದಲ್ಲಿ ನಡೆದ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳ ಕೂಟ) ರಾಷ್ಟ್ರಗಳ 8ನೇ ಶೃಂಗಸಭೆಯು ಐತಿಹಾಸಿಕ ‘ಗೋವಾ ಘೊಷಣೆ’ಯನ್ನು ಅಂಗೀಕರಿಸಿ ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನ ಹೋರಾಟವನ್ನು ಪ್ರತಿಪಾದಿಸಿತು.


•► ಗೋವಾ ಘೊಷಣೆಯ ಮುಖ್ಯಾಂಶಗಳು

*.ಉಗ್ರವಾದ, ಹಿಂಸಾರೂಪದ ತೀವ್ರಗಾಮಿತನ, ಮೂಲಭೂತವಾದ, ಉಗ್ರರ ನೇಮಕಾತಿ, ಅವರ ಹಣಕಾಸು ಮೂಲ ಹತ್ತಿಕ್ಕಲು ಎಲ್ಲ ದೇಶಗಳು ಸಮಗ್ರ ಕ್ರಮ ಕೈಗೊಳ್ಳಬೇಕು.
*.ಭಯೋತ್ಪಾದನೆ ಮತ್ತು ಹಿಂಸೆಯನ್ನು ಪೋಷಿಸುವ, ಆಶ್ರಯ ನೀಡುವ, ಬೆಂಬಲಿಸುವ, ಪ್ರಾಯೋಜಿಸುವ ಶಕ್ತಿಗಳನ್ನು ಭಯೋತ್ಪಾದಕರಷ್ಟೇ ಬೆದರಿಕೆ ಎಂದು ಪರಿಗಣಿಸಬೇಕು.
*.ಎಲ್ಲ ದೇಶಗಳು ತಮ್ಮ ನೆಲದಲ್ಲಿ ನಡೆಯುವ ಅಥವಾ ನಡೆಯಬಹುದಾದ ಯಾವುದೇ ರೀತಿಯ ಭಯೋತ್ಪಾದಕ ಚಟುವಟಿಕೆಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕು.
*.ಜಾಗತಿಕ ಭಯೋತ್ಪಾದನೆ ಪಿಡುಗಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ವಿಶ್ವಸಂಸ್ಥೆಯ ಭಾರತ ಬೆಂಬಲಿತ ಒಪ್ಪಂದವನ್ನು ತಕ್ಷಣ ಅಳವಡಿಸಿಕೊಳ್ಳಬೇಕು.
*.ಯಾವುದೇ ರಾಷ್ಟ್ರವಾಗಿರಲಿ ಭಯೋತ್ಪಾದನೆಯನ್ನು ಪೋಷಿಸುವ ಚಾಳಿಯನ್ನು ಕೈಬಿಡಬೇಕು. ಇಲ್ಲವಾದಲ್ಲಿ, ಜಾಗತಿಕವಾಗಿ ಮೂಲೆಗುಂಪಾಗುವುದನ್ನು ಎದುರಿಸಲು ಸಿದ್ಧವಿರಬೇಕು.

★ ಶೃಂಗದಲ್ಲಿ ಭಾಗವಹಿಸಿದ್ದ ನಾಯಕರು:
*.ನರೇಂದ್ರ ಮೋದಿ: ಭಾರತದ ಪ್ರಧಾನಿ
*.ವ್ಲಾದಿಮಿರ್ ಪುಟಿನ್: ರಷ್ಯಾ ಅಧ್ಯಕ್ಷ
*.ಕ್ಸಿ-ಜಿನ್​ಪಿಂಗ್: ಚೀನಾ ಅಧ್ಯಕ್ಷ
*.ಜೇಕಬ್ ಜುಮಾ: ದಕ್ಷಿಣ ಆಫ್ರಿಕಾ ಅಧ್ಯಕ್ಷ
*.ಮಿಷೆಲ್ ಟೆಮೆರ್: ಬ್ರೆಜಿಲ್ ಅಧ್ಯಕ್ಷ


—ಅಫ್ಘಾನಿಸ್ತಾನ ಅಭಿವೃದ್ಧಿಗೆ ಪಾಕಿಸ್ತಾನ ಘೊಷಿಸಿದ್ದ ನೆರವನ್ನು ನಿರಾಕರಿಸಿದ ಆಫ್ಘನ್ ಅಧ್ಯಕ್ಷ, ಮೊದಲು ಭಯೋತ್ಪಾದನೆ ವಿರುದ್ಧ ಹೋರಾಡಿ ಎಂದು ತಾಕೀತು ಮಾಡಿದರು. ಈ ಸುದ್ದಿ ಓದಿದ ಪಾಕಿಸ್ತಾನಿಯೋರ್ವ ‘ಇನ್ನೆಷ್ಟು ದೇಶಗಳು ಈ ರೀತಿ ಮಂಗಳಾರತಿ ಎತ್ತಬೇಕೋ? ನಮಗೆ ತಿನ್ನಲು ಬೇಕಿರುವುದು ಅನ್ನ, ಅಣುಬಾಂಬ್​ಗಳಲ್ಲ ಎಂದು ಷರೀಫ್ ಸಾಹೇಬರಿಗೆ ಯಾರು ಹೇಳಬೇಕೋ’ ಅಂತ ನಿಟ್ಟುಸಿರುಬಿಟ್ಟನಂತೆ!


•► ವಿಶ್ವಸಂಸ್ಥೆ ವೇದಿಕೆಯಲ್ಲಿ ಗಟ್ಟಿದನಿ

*.ಉರಿ ಉಗ್ರದಾಳಿ ಬೆನ್ನಲ್ಲೇ ವಿಶ್ವಸಂಸ್ಥೆಯಲ್ಲಿ ನಡೆದ ಮಹಾಧಿವೇಶನದಲ್ಲಿ (ಸೆಪ್ಟೆಂಬರ್) ಪಾಕಿಸ್ತಾನದ ಪ್ರಧಾನಮಂತ್ರಿ ನವಾಜ್ ಷರೀಫ್ ಅವರು ಕಾಶ್ಮೀರ ವಿಷಯ ಪ್ರಸ್ತಾಪಿಸಿ ವಿವಿಧ ದೇಶಗಳ ಮಧ್ಯಪ್ರವೇಶ ಕೋರಿದ್ದರು. ಆದರೆ ಅದಕ್ಕೆ ಸೂಕ್ತ ಬೆಂಬಲ ದಕ್ಕಲಿಲ್ಲ. ಅಷ್ಟೇ ಅಲ್ಲ, ವಿಶ್ವಸಂಸ್ಥೆಯೂ ಅದನ್ನು ದ್ವಿಪಕ್ಷೀಯವಾಗಿ ಬಗೆಹರಿಸಿಕೊಳ್ಳಿ ಎಂದಿತು. ಇನ್ನೊಂದೆಡೆ, ಭಾರತದ ರಾಜತಾಂತ್ರಿಕ ಪ್ರತಿನಿಧಿ, ಪಾಕಿಸ್ತಾನ ‘ಭಯೋತ್ಪಾದಕ ರಾಷ್ಟ್ರ’ ಎಂಬುದನ್ನು ಸಾಧಾರ ನಿರೂಪಿಸುವ ಮೂಲಕ ಸರಿಯಾದ ತಿರುಗೇಟನ್ನೇ ನೀಡಿದರು.
*.ಪಾಕಿಸ್ತಾನವು ನೂರಾರು ಕೋಟಿ ಡಾಲರ್​ಗಳನ್ನು ಅಂತಾರಾಷ್ಟ್ರೀಯ ನೆರವನ್ನಾಗಿ ಪಡೆಯುತ್ತಿದ್ದು, ಅದರಲ್ಲಿ ಬಹುತೇಕ ಪಾಲನ್ನು ಉಗ್ರ ಸಂಘಟನೆಗಳ ತರಬೇತಿಗೆ, ಅವುಗಳ ಖರ್ಚಿಗೆ ಬಳಸುತ್ತಿದೆ. ಈ ಉಗ್ರ ಸಂಘಟನೆಗಳನ್ನು ಮುಂದಿಟ್ಟುಕೊಂಡು ಅದು ನೆರೆರಾಷ್ಟ್ರಗಳ ಜತೆಗೆ ಛಾಯಾಸಮರ ನಡೆಸುತ್ತಿದೆ ಎಂದು ಭಾರತ ಸ್ಪಷ್ಟದನಿಯಲ್ಲಿ ಹೇಳಿತು.


•► ಹಾರ್ಟ್ ಆಫ್ ಏಷ್ಯಾ

*.ಡಿಸೆಂಬರ್ 3-4 ರಂದು ಪಂಜಾಬ್​ನ ಅಮೃತಸರದಲ್ಲಿ ನಡೆದ ‘ಹಾರ್ಟ್ ಆಫ್ ಏಷ್ಯಾ’ ಶೃಂಗಸಭೆಯ ಅಂತಿಮ ಘೊಷಣೆಯಲ್ಲಿ ತಾಲಿಬಾನ್ ಜತೆ ಮೊಟ್ಟಮೊದಲ ಬಾರಿಗೆ ಪಾಕ್ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ-ತೋಯ್ಬಾ ಹಾಗೂ ಜೈಶ್-ಎ-ಮೊಹಮ್ಮದ್​ಗಳನ್ನೂ ಹೆಸರಿಸಿ ಖಂಡಿಸಲಾಯಿತು. ಅಷ್ಟೇ ಅಲ್ಲ, ಭಯೋತ್ಪಾದನೆಯನ್ನು ಪೋಷಿಸಿ ಅಫ್ಘಾನಿಸ್ತಾನವಲ್ಲದೇ ಇಡೀ ಪ್ರದೇಶವನ್ನೇ ಅಭದ್ರಗೊಳಿಸುತ್ತಿರುವ ಕಾರಣಕ್ಕಾಗಿ ಸಮ್ಮೇಳನದಲ್ಲಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಳ್ಳಲಾಯಿತು. ಈ ಶೃಂಗದಲ್ಲಿ 40 ರಾಷ್ಟ್ರಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಅಫ್ಘಾನಿಸ್ತಾನದ ಅಭಿವೃದ್ಧಿಗಾಗಿ 500 ದಶಲಕ್ಷ ಡಾಲರ್ ದೇಣಿಗೆ ನೀಡುವುದಾಗಿ ಪಾಕಿಸ್ತಾನ ಘೊಷಿಸಿದ್ದಕ್ಕೆ ಪ್ರತಿಕ್ರಿಯಿಸಿದ ಆಘ್ಘನ್ ಅಧ್ಯಕ್ಷ ಅಶ್ರಫ್ ಘನಿ, ಭಯೋತ್ಪಾದನೆ ಹತ್ತಿಕ್ಕಲು ಆ ಹಣವನ್ನು ಪಾಕಿಸ್ತಾನ ಬಳಸುವುದು ಒಳಿತು ಎಂದು ಹೇಳುವ ಮೂಲಕ ತಕ್ಕ ಪ್ರತ್ಯುತ್ತರ ನೀಡಿದರು.

... ಮುಂದುವರೆಯುವುದು. 

No comments:

Post a Comment