"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 15 August 2020

•► ಭಾರತ–ನೇಪಾಳ ಗಡಿ ವಿವಾದಿತ ಪ್ರದೇಶಗಳು (Territorial disputes of India and Nepal)

•► ಭಾರತ–ನೇಪಾಳ ಗಡಿ ವಿವಾದಿತ ಪ್ರದೇಶಗಳು
(Territorial disputes of India and Nepal)

━━━━━━━━━━━━━━━━━━━━━━━

ನೇಪಾಳದ ಜೊತೆಗಿನ ಗಡಿ ವಿವಾದ ಸುದೀರ್ಘ ಇತಿಹಾಸ ಹೊಂದಿದ್ದರೂ ತೀರಾ ಮುನ್ನೆಲೆಗೆ ಬಂದು ಇತ್ತೀಚಿನ ದಿನಗಳಲ್ಲಿ. ಸುಮಾರು ಆರು ತಿಂಗಳ ಹಿಂದೆ ಉತ್ತರಾಖಂಡ-ನೇಪಾಳ ಗಡಿ ಪ್ರದೇಶದಲ್ಲಿ ಬರುವ ಕಾಲಾಪಾನಿಯನ್ನು ಭಾರತವು ತನ್ನ ವ್ಯಾಪ್ತಿಯಲ್ಲಿ ಸೇರಿಸಿ ಪರಿಷ್ಕೃತ ಭೂಪಟ ಬಿಡುಗಡೆ ಮಾಡಿತ್ತು. ಇದರ ಬೆನ್ನಲ್ಲೇ ನೇಪಾಳವು ಲಿಪುಲೇಖ್ ಪಾಸ್ ಮತ್ತು ಲಿಂಪಿಯಾಧೂರಾ ಪ್ರದೇಶಗಳನ್ನು ತನ್ನ ಗಡಿಯೊಳಗೆ ಸೇರಿಸಿ ಪರಿಷ್ಕೃತ ನಕಾಶೆ ಬಿಡುಗಡೆ ಮಾಡಿತ್ತು. ಇದರೊಂದಿಗೆ ಉಭಯ ರಾಷ್ಟ್ರಗಳ ನಡುವಣ ಗಡಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ನೇಪಾಳ ಲಿಪುಲೇಖ್ ಪಾಸ್, ಕಾಲಾಪಾನಿ ಮತ್ತು ಲಿಂಪಿಯಾಧೂರಾ ಪ್ರದೇಶಗಳನ್ನು ತನ್ನ ಭೂಪಟದಲ್ಲಿ ಸೇರಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನೂ ಸಂಸತ್ತಿನಲ್ಲಿ ಮಂಡಿಸಿದೆ.

• ಕಾಳಿ ನದಿ / ಕಾಲಾಪಾನಿ :
372 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಕಾಲಾಪಾನಿ 1962ರಿಂದಲೂ ಇಂಡೊ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ನಿಯಂತ್ರಣದಲ್ಲಿದೆ. ಒಟ್ಟಾರೆಯಾಗಿ ಭಾರತವು ನೇಪಾಳದ ಜತೆ ಸುಮಾರು 1,758 ಕಿಲೋಮೀಟರ್ ಉದ್ದದ ಗಡಿ ಹೊಂದಿದೆ. ಕಾಲಾಪಾನಿ ಉತ್ತರಾಖಂಡದ ಪಿತೋರಗಡ ಜಿಲ್ಲೆಯ ಪ್ರದೇಶ ಎಂದು ಭಾರತ ಪ್ರತಿಪಾದಿಸುತ್ತಿದ್ದರೆ, ಅದು ತನಗೆ ಸೇರಿದ ಧಾರಾಚುಲಾ ಜಿಲ್ಲೆಯ ಭಾಗವೆಂದು ನೇಪಾಳ ವಾದಿಸುತ್ತಿದೆ. ಕಾಲಾಪಾನಿ ಕಣಿವೆಯು ಸದ್ಯ ಟಿಬೆಟ್‌ನ ಪ್ರಾಚೀನ ಯಾತ್ರಾಸ್ಥಳವಾದ ಕೈಲಾಸ ಮಾನಸ ಸರೋವರಕ್ಕೆ ತೆರಳುವ ಭಾರತೀಯ ಮಾರ್ಗದಲ್ಲಿ ಬರುತ್ತದೆ.

ಕ್ರಿ.ಶ. 1816ರಲ್ಲಿ ನೇಪಾಳ ಮತ್ತು ಬ್ರಿಟಿಷ್ ಅಧೀನದಲ್ಲಿದ್ದ ಭಾರತ ‘ಸುಗೌಲಿ’ ಒಪ್ಪಂದಕ್ಕೆ ಸಹಿ ಹಾಕಿದ್ದವು. ಇದರ ಪ್ರಕಾರ ಕಾಳಿ ನದಿಯ ಪಶ್ಚಿಮದ ಭಾಗ ಭಾರತಕ್ಕೆ ಸೇರಿದ್ದಾಗಿದೆ. ಕಾಲಾಪಾನಿ ಮೂಲಕ ಹಾದುಹೋಗುವ ಕಾಳಿ ನದಿಯ ಮೂಲ ಯಾವುದು ಎಂಬ ಬಗ್ಗೆ ಒಪ್ಪಂದದಲ್ಲಿ ಖಚಿತ ಉಲ್ಲೇಖ ಇಲ್ಲ. ಇದುವೇ ವಿವಾದಕ್ಕೆ ಮೂಲ ಕಾರಣ. ವಿವಿಧ ಉಪನದಿಗಳುಳ್ಳ ಕಾಳಿನದಿ ಹಲವು ಪ್ರದೇಶಗಳಲ್ಲಿ ಹರಿಯುತ್ತದೆ. ‘ಪಶ್ಚಿಮ ದಿಕ್ಕಿನಲ್ಲಿ ಹರಿಯುತ್ತಿರುವುದು ಕಾಳಿ ನದಿಯ ಮೂಲ. ಹೀಗಾಗಿ ಆ ಪ್ರದೇಶ ತನಗೇ ಸೇರಿದ್ದು’ ಎಂಬುದು ನೇಪಾಳದ ವಾದ. ಆದರೆ, ಕಾಲಾಪಾನಿಯ ಪೂರ್ವಕ್ಕೆ ಇರುವುದೇ ಗಡಿ. ಹೀಗಾಗಿ ಕಾಲಾಪಾನಿ ತನಗೇ ಸೇರಿದ್ದು ಎಂಬುದು ಭಾರತದ ವಾದ.
 
ಲಿಪುಲೇಖ್ ಪಾಸ್ ಪ್ರದೇಶ :
ಇದು ಭೌಗೋಳಿಕವಾಗಿ ಕಾಲಾಪಾನಿಗಿಂತ ಮೇಲ್ಭಾಗದಲ್ಲಿ ಬರುತ್ತದೆ. ಇದು ಉತ್ತರಾಖಂಡ-ನೇಪಾಳ ಗಡಿಯಲ್ಲಿರುವ ಪರ್ವತ ಮಾರ್ಗವಾಗಿದೆ. ವ್ಯಾಪಾರ ಮತ್ತು ತೀರ್ಥಯಾತ್ರೆಗಾಗಿ ಪ್ರಾಚೀನ ಕಾಲದಿಂದಲೂ ಇದನ್ನು ಭಾರತೀಯರು ಮಾರ್ಗವಾಗಿ ಬಳಸುತ್ತಿದ್ದರು. 1962ರ ಭಾರತ-ಚೀನಾ ಯುದ್ಧದ ನಂತರ ಈ ಮಾರ್ಗವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು.

• ಲಿಂಪಿಯಾಧೂರಾ :
ಇದು ಲಿಪುಲೇಖ್ ಪಾಸ್‌ನ ವಾಯವ್ಯಕ್ಕಿದೆ. ಈ ಪ್ರದೇಶ ಕಾಳಿ ನದಿಯ ಮೂಲ ಎಂದು ನೇಪಾಳ ಪ್ರತಿಪಾದಿಸುತ್ತಿದೆ. ಕಾಲಾಪಾನಿ ಮತ್ತು ಲಿಪುಲೇಖ್ ಕೂಡ ಕಾಳಿನದಿಯ ಪೂರ್ವಕ್ಕೆ ಇರುವುದರಿಂದ ಈ ಪ್ರದೇಶಗಳು ತನಗೆ ಸೇರಿದ್ದು ಎಂದು ನೇಪಾಳ ಹೇಳುತ್ತಿದೆ.

ಕಾಲಾಪಾನಿ ಭಾರತಕ್ಕೆ ಯಾಕೆ ಮುಖ್ಯ? 
ಉತ್ತರಾಖಂಡ-ನೇಪಾಳ ಗಡಿಪ್ರದೇಶದಲ್ಲಿ 800 ಕಿಲೋಮೀಟರ್ ಉದ್ದಕ್ಕೆ ಹರಡಿರುವ ಕಾಲಾಪಾನಿಯು ಚೀನಾದ ಸೇನಾ ಚಟುವಟಿಕೆಗಳ ಮೇಲೆ ನಿಗಾ ಇರಿಸುವ ನಿಟ್ಟಿನಲ್ಲಿ ಭಾರತಕ್ಕೆ ಮುಖ್ಯವಾಗಿದೆ. 2000ನೇ ಇಸವಿಯಲ್ಲಿ ನೇಪಾಳದ ಆಗಿನ ಪ್ರಧಾನಮಂತ್ರಿ ಗಿರಿಜಾ ಪ್ರಸಾದ್ ಕೊಯಿರಾಲಾ ನವದೆಹಲಿಗೆ ಭೇಟಿ ನೀಡಿದ್ದಾಗ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜೊತೆ ಕಾಲಾಪಾನಿ ಗಡಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದರು. ಆದರೆ ನಂತರ ಆ ವಿಚಾರದಲ್ಲಿ ಯಾವುದೇ ಪ್ರಗತಿ ಆಗಿರಲಿಲ್ಲ. 2014ರಲ್ಲಿ ಉಭಯ ರಾಷ್ಟ್ರಗಳು ಮತ್ತೆ ಗಡಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದವು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಇದಾದ ಕೆಲವು ಸಮಯದ ಬಳಿಕ, 2015ರಲ್ಲಿ ಲಿಪುಲೇಖ್ ಪಾಸ್‌ನಲ್ಲಿ ವಾಣಿಜ್ಯ ವಹಿವಾಟು ಉತ್ತೇಜನಕ್ಕೆ ಚೀನಾ ಮತ್ತು ಭಾರತ ಒಪ್ಪಂದ ಮಾಡಿಕೊಂಡದ್ದು ನೇಪಾಳದ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿತು. ಇದಕ್ಕೆ ಪ್ರತಿಭಟನೆಯನ್ನೂ ನೇಪಾಳ ವ್ಯಕ್ತಪಡಿಸಿತ್ತು.

ಉಲ್ಬಣಿಸಿದ ಬಿಕ್ಕಟ್ಟು:
2019ರ ನವೆಂಬರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪುನಾರಚನೆ ಬಳಿಕ ಭಾರತ ಹೊಸ ನಕಾಶೆಯನ್ನು ಬಿಡುಗಡೆ ಮಾಡಿತು. ಇದರಲ್ಲಿ ಕಾಲಾಪಾನಿ ಸೇರಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನೇಪಾಳ ಗಡಿ ವಿವಾದಕ್ಕೆ ಸಂಬಂಧಿಸಿ ಮಾತುಕತೆ ನಡೆಸುವ ಸಲಹೆ ನೀಡಿತು. ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಲು ಆದಷ್ಟು ಬೇಗನೆ ಮಾತುಕತೆ ನಡೆಸಬೇಕು ಎಂದು ಭಾರತವನ್ನು ಕೋರಿತು. ಆದರೆ, ನೇಪಾಳದ ವಾದವನ್ನು ಭಾರತವು ಪುರಸ್ಕರಿಸಿಲ್ಲ. ಬದಲಿಗೆ, ‘ಹೊಸ ನಕ್ಷೆಯು ಭಾರತದ ಸಾರ್ವಭೌಮ ಪ್ರದೇಶವನ್ನು ನಿಖರವಾಗಿ ಗುರುತಿಸಿದೆ’ ಎಂದು ಹೇಳಿತು.

ಈ ಎಲ್ಲ ಬೆಳವಣಿಗೆಗಳ ಮಧ್ಯೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಿಪುಲೇಖ್ ಪಾಸ್‌ನಲ್ಲಿ ಭಾರತ ನಿರ್ಮಿಸಿರುವ 80 ಕಿಲೋಮೀಟರ್ ಉದ್ದದ ರಸ್ತೆಯನ್ನು ಉದ್ಘಾಟಿಸಿದರು. ಕೈಲಾಸ ಮಾನಸ ಸರೋವರ ಯಾತ್ರಿಕರಿಗೆ ನೆರವಾಗುವ ನಿಟ್ಟಿನಲ್ಲಿ ಭಾರತ ಈ ರಸ್ತೆಯನ್ನು ನಿರ್ಮಿಸಿದೆ. ಈ ಬೆಳವಣಿಗೆಗಳಿಗೆ ನೇಪಾಳ ಆಕ್ಷೇಪ ವ್ಯಕ್ತಪಡಿಸಿತು. ತನ್ನ ಭೂಪ್ರದೇಶದಲ್ಲಿ ಭಾರತ ರಸ್ತೆ ನಿರ್ಮಿಸಿದೆ ಎಂದು ಆರೋಪಿಸಿತು. ಬಳಿಕ ಪರಿಷ್ಕೃತ ನಕಾಶೆ ಬಿಡುಗಡೆ ಮಾಡಿದ ನೇಪಾಳ, ವಿವಾದಿತ ಪ್ರದೇಶಗಳನ್ನು ಅದರಲ್ಲಿ ಸೇರಿಸಿತು. ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಸಂವಿಧಾನ ತಿದ್ದುಪಡಿ ಮಸೂದೆ ಮಂಡನೆ ಮಾಡಿದೆ. ಇದಕ್ಕೆ ಪ್ರಮುಖ ವಿರೋಧ ಪಕ್ಷ ನೇಪಾಳಿ ಕಾಂಗ್ರೆಸ್ ಬೆಂಬಲವನ್ನು ಪಡೆದುಕೊಂಡಿದೆ.(June 2020)
(Courtesy : by Times fo Deenabandhu)

No comments:

Post a Comment