"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday 19 June 2020

•► ನಿಯರ್ ಅರ್ಥ್ ಆಬ್ಜೆಕ್ಟ್ (NEO) ಎಂದರೇನು? ಇವುಗಳನ್ನು ಹೇಗೆ ಪತ್ತೆ ಹಚ್ಚಲಾಗುತ್ತದೆ? (What do you mean by Near Earth Object and How these can be detected?)

•► ನಿಯರ್ ಅರ್ಥ್ ಆಬ್ಜೆಕ್ಟ್ (NEO) ಎಂದರೇನು? ಇವುಗಳನ್ನು ಹೇಗೆ ಪತ್ತೆ ಹಚ್ಚಲಾಗುತ್ತದೆ?
(What do you mean by Near Earth Object and How these can be detected?)
━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ವಿಜ್ಞಾನ
(General Science)


ಭೂಮಿಗೆ ಅತ್ಯಂತ ಸಮೀಪ ಬರುವ ಕ್ಷುದ್ರಗ್ರಹ ಅಥವಾ ಇನ್ಯಾವುದೇ ಗ್ರಹಕಾಯಗಳನ್ನು ನಿಯರ್ ಅರ್ಥ್ ಆಬ್ಜೆಕ್ಟ್ ಎಂದು ಕರೆಯಲಾಗುತ್ತದೆ. ಭೂಮಿಯಿಂದ 30 ಮಿಲಿಯನ್ ಮೈಲು ದೂರದಿಂದ ಹಾದು ಹೋಗುವ ಯಾವುದೇ ಗ್ರಹಕಾಯಗಳನ್ನು ನಿಯರ್ ಅರ್ಥ್ ಆಬ್ಜೆಕ್ಟ್ ಪಟ್ಟಿಗೆ ಸೇರಿಸಲಾಗುತ್ತದೆ.

ಆದರೆ ನಾಸಾ ಭೂಮಿಯಿಂದ ಕೇವಲ 5 ಮಿಲಿಯನ್ ಮೈಲು ದೂರದಲ್ಲಿರುವ ಗ್ರಹಕಾಯಗಳ ಕುರಿತು ವಿಸ್ತೃತವಾಗಿ ಅಧ್ಯಯನ ಮಾಡುತ್ತದೆ. ನಾಸಾದ ಕ್ಷುದ್ರಗ್ರಹ ಅಧ್ಯಯನ ಆಬ್ಸರ್‌ವೇಟರಿಗಳ ಕಣ್ಣಿಗೆ ಬೀಳುವ 5 ಮಿಲಿಯನ್ ಮೈಲು ದೂರದ ಗ್ರಹಕಾಯಗಳ ಚಲನವಲನದ ಮೇಲೆ ಖಗೋಳ ವಿಜ್ಞಾನಿಗಳು ಕಣ್ಣಿಟ್ಟಿರುತ್ತಾರೆ.

ಪತ್ತೆ ಹೇಗೆ?:

ನಾಸಾದ ಗ್ರಹ ರಕ್ಷಣಾ ಸಹಕಾರ ಕಚೇರಿ ಭೂಮಿಗೆ ಅತ್ಯಂತ ಸಮೀಪದಿಂದ ಹಾದು ಹೋಗುವ ಕ್ಷುದ್ರಗ್ರಹಗಳ ಕುರಿತು ಅಧ್ಯಯನ ನಡೆಸುತ್ತದೆ. ಯಾವುದೇ ಗ್ರಹಕಾಯಗಳು ಭೂಮಿಯ ಅತ್ಯಂತ ಸಮೀಪಕ್ಕೆ ಬಂದರೆ ಈ ಕುರಿತು ಎಚ್ಚರಿಕೆ ನೀಡುವ ಜವಾಬ್ದಾರಿ ಇದರ ಹೆಗಲ ಮೇಲಿದೆ.

ಅದರಂತೆ ಭೂಮಿಯ ಮೇಲೆ ಇರುವ ಗ್ರೌಂಡ್ ಟೆಲಿಸ್ಕೋಪ್‌ಗಳು ಆಕಾಶದ ಸಮೀಕ್ಷೆಯನ್ನು ನಡೆಸುತ್ತವೆ. ಸ್ತಬ್ಧ ಆಗಸದಲ್ಲಿ ಯಾವುದೇ ವಸ್ತುವಿನ ಚಲನೆ ಕಂಡುಬಂದರೆ ಕೂಡಲೇ ಅದರ ಚಲನೆಯನ್ನೂ ಈ ಟೆಲಿಸ್ಕೋಪ್‌ಗಳು ದಾಖಲಿಸುತ್ತವೆ. ಅಲ್ಲದೇ ಈ ಹಿಂದೆ ಪತ್ತೆಯಾದ ಯಾವುದೇ ಗ್ರಹಕಾಯದ ಅಂಕಿ ಸಂಖ್ಯೆಗಳನ್ನು ಪರಿಶೀಲನೆ ನಡೆಸಿ ಅದಕ್ಕೂ ಹೊಸದಾಗಿ ಪತ್ತೆಯಾದ ಗ್ರಹಕಾಯಕ್ಕೂ ಹೋಲಿಕೆ ಇದೆಯೇ ಎಂಬುದನ್ನು ಪತ್ತೆ ಮಾಡಲಾಗುತ್ತದೆ.

ಒಂದು ವೇಳೆ ಈ ಹಿಂದೆ ಪತ್ತೆಯಾದ ಗ್ರಹಕಾಯಗಳ ಮಾಹಿತಿಗೆ ಹೊಸದಾಗಿ ಪತ್ತೆಯಾದ ವಸ್ತು ಹೋಲಿಕೆಯಾಗದಿದ್ದರೆ ಅದನ್ನು ಹೊಸ ಬ್ರಹ್ಮಾಂಡೀಯ ವಸ್ತು ಎಂದು ಪರಿಗಣಿಸಿ ಅದರ ಅಧ್ಯಯನ ನಡೆಸಲಾಗುತ್ತದೆ.
ಹೀಗೆ ಮಾಡುವುದರಿಂದ ಭೂಮಿಯ ಸಮೀಪಕ್ಕೆ ಬರುವ ಯಾವುದೇ ಗ್ರಹಕಾಯದ ವಿವರವಾದ ಮಾಹಿತಿ ಹಾಗೂ ಭವಿಷ್ಯದಲ್ಲಿ ಅವು ಮತ್ತೆ ಭೂಮಿಯತ್ತ ಬರುವ ಸಾಧ್ಯತೆಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳಲಾಗುತ್ತದೆ.

ಒಟ್ಟಿನಲ್ಲಿ ಭೂಮಿಗೆ ಸದಾ ಗಂಡಾಂತರಕಾರಿ ಎಂದೇ ಪರಿಗಣಿಸಲಾಗಿರುವ ಕ್ಷುದ್ರಗ್ರಹಗಳ ಚಲನವಲನಗಳ ಮೇಲೆ ನಾಸಾ ಸದಾ ಕಣ್ಣಿಟ್ಟಿದ್ದು, ಭವಿಷ್ಯದಲ್ಲಿ ಸಂಭವಿಸಬಹುದಾದ ಭಾರೀ ಅನಾಹುತವನ್ನು ತಪ್ಪಿಸಿ ವಸುಧೆಯನ್ನು ರಕ್ಷಿಸುವ ಗುರುತರ ಜವಾಬ್ದಾರಿ ಹೊತ್ತಿರುವುದು ನಿಜಕ್ಕು ಶ್ಲಾಘನೀಯ. (Courtesy : ವಿಜಯ ಕರ್ನಾಟಕ)

No comments:

Post a Comment