"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday, 23 October 2015

☀ಈ ದಿನದ IAS/KAS ಪರೀಕ್ಷಾ ಪ್ರಶ್ನೆ : ಇತ್ತೀಚೆಗೆ 'ಸ್ಮಾರ್ಟ್ ಸಿಟಿ' ಬಗ್ಗೆ ತುಂಬಾ ಮಾತುಗಳು ಕೇಳಿಬರುತ್ತಿವೆ. ನಿಮ್ಮ ಪ್ರಕಾರ ಸ್ಮಾರ್ಟ್ ಸಿಟಿ ಅಂದರೆ ಏನು? ಸ್ಮಾರ್ಟ್ ಸಿಟಿಯಲ್ಲಿ ತಾವು ಪರಿಗಣಿಸಬಹುದಾದ ಪ್ರಮುಖ ಮಾನದಂಡಗಳು-ಅಂಶಗಳನ್ನು ವಿಶ್ಲೇಷಿಸಿ. (What do you mean by 'Smart City' Initiative? Analyze the most important elements criteria that to be considered for a Smart City)

☀ಈ ದಿನದ IAS/KAS ಪರೀಕ್ಷಾ ಪ್ರಶ್ನೆ :
ಇತ್ತೀಚೆಗೆ 'ಸ್ಮಾರ್ಟ್ ಸಿಟಿ' ಬಗ್ಗೆ ತುಂಬಾ ಮಾತುಗಳು ಕೇಳಿಬರುತ್ತಿವೆ. ನಿಮ್ಮ ಪ್ರಕಾರ ಸ್ಮಾರ್ಟ್ ಸಿಟಿ ಅಂದರೆ ಏನು? ಸ್ಮಾರ್ಟ್ ಸಿಟಿಯಲ್ಲಿ ತಾವು ಪರಿಗಣಿಸಬಹುದಾದ ಪ್ರಮುಖ ಮಾನದಂಡಗಳು-ಅಂಶಗಳನ್ನು ವಿಶ್ಲೇಷಿಸಿ.

(What do you mean by 'Smart City' Initiative? Analyze the most important elements criteria that to be considered for a Smart City)
━━━━━━━━━━━━━━━━━━━━━━━━━━━━━━━━━━━━━━━━━━━━━

●.ಸಾಮಾನ್ಯ ಅಧ್ಯಯನ
(General Studies)


☀‘ಸ್ಮಾರ್ಟ್‌ ಸಿಟಿ’(SMART CITY):
•┈┈┈┈┈┈┈┈┈┈┈┈┈┈┈┈┈┈┈┈┈•
■. ದೇಶದಾದ್ಯಂತ ನೂರು ನಗರಗಳನ್ನು ‘ಸ್ಮಾರ್ಟ್‌ ಸಿಟಿ’ಗಳನ್ನಾಗಿ ಗುರುತಿಸಿ ಅಭಿವೃದ್ಧಿಪಡಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಈ ಸ್ಮಾರ್ಟ್‌ ಸಿಟಿಯಾಗಿದೆ.
■. ‘ಸ್ಮಾರ್ಟ್‌ ಸಿಟಿ’ಗಳಾಗಲಿರುವ ಒಟ್ಟು 98 ನಗರಗಳ ಪಟ್ಟಿಯನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದೆ.
 ■. ಸ್ಮಾರ್ಟ್‌ ಸಿಟಿ ಎಂದರೆ ಎಲ್ಲರನ್ನು ಒಳಗೊಂಡ ಸುಸಜ್ಜಿತ ನಗರ ನಿರ್ಮಾಣ ಆಗಿದ್ದು ಸಾರ್ವಜನಿಕರ ಸಹಭಾಗಿತ್ವ ಅತ್ಯಂತ ಮುಖ್ಯವಾಗಿದೆ.

■. ಬ್ರಾಡ್‌ಬ್ಯಾಂಡ್‌ ಸಂಪರ್ಕ, ವಿದ್ಯುನ್ಮಾನ ಉಪಕರಣಗಳು ಮತ್ತು ಸಾಫ್ಟ್‌ವೇರ್‌ನಲ್ಲಿ ದೊಡ್ಡ ಪ್ರಮಾಣದ ಹೂಡಿಕೆಗಳನ್ನು ಮಾಡಿರುವ ಕಂಪೆನಿಗಳು ಪಶ್ಚಿಮದ ದೇಶಗಳಲ್ಲಿ ಈ ಪದವನ್ನು ಜನಪ್ರಿಯಗೊಳಿಸಿವೆ.
■. ಸ್ಮಾರ್ಟ್‌ ಮೀಟರ್ ವ್ಯವಸ್ಥೆ, ಸಮನ್ವಯ ಹೊಂದಿರುವ ಸಂಚಾರ ದೀಪಗಳು, ಸ್ಮಾರ್ಟ್‌ ವಾಹನ ನಿಲುಗಡೆ ವ್ಯವಸ್ಥೆ, ಯಂತ್ರಗಳ ನಡುವೆ ಸಂವಹನ ಇತ್ಯಾದಿ ತಂತ್ರಜ್ಞಾನ ಆಧಾರಿತವಾದ ಭವಿಷ್ಯದ ನಗರಗಳ ಪರಿಕಲ್ಪನೆಯನ್ನು ಈ ಕಂಪೆನಿಗಳು ಜನರಿಗೆ ತಲುಪಿಸಿದವು.

■. ಆದರೆ ಭಾರತದಲ್ಲಿ ಈ ಪರಿಕಲ್ಪನೆ ಅತ್ಯಂತ ಸೀಮಿತ ಅನಿಸುತ್ತದೆ. ಏಕೆಂದರೆ ಇಲ್ಲಿನ ಜನಸಂಖ್ಯೆಯ ಬಹುದೊಡ್ಡ ವರ್ಗ ವಸತಿ, ನೀರು ಪೂರೈಕೆ, ಒಳಚರಂಡಿ ವ್ಯವಸ್ಥೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳುವುದಕ್ಕೇ ಹೆಣಗುತ್ತಿದೆ.
■. ಭಾರತದಲ್ಲಿ ಸ್ಮಾರ್ಟ್‌ ನಗರಗಳು ಎಂದರೆ, ಸೂಕ್ತ ಆಡಳಿತ ವ್ಯವಸ್ಥೆಯೊಳಗೆ ಅಗತ್ಯ ಡಿಜಿಟಲ್ ಮತ್ತು ಮಾಹಿತಿ ತಂತ್ರಜ್ಞಾನದ ನೆರವಿನೊಂದಿಗೆ ಹೆಚ್ಚು ಪರಿಸರ ಸ್ನೇಹಿ ಹಾಗೂ ಸುಸ್ಥಿರ ರೀತಿಯಲ್ಲಿ ನಮ್ಮ ನಗರಗಳನ್ನು ಯೋಜಿಸುವುದಾಗಿದೆ.


●.ವಿಶ್ವಾದ್ಯಂತ ಸ್ಮಾರ್ಟ್ ಸಿಟಿಗಳ ಕಲ್ಪನೆ ಹೇಗಿದೆ ಎಂಬುದನ್ನು ಆಧರಿಸಿ ಸ್ಮಾರ್ಟ್ ಸಿಟಿ ಮಾನದಂಡಗಳ ಬಗ್ಗೆ ಒಂದಷ್ಟು ಪ್ರಮುಖ ಅಂಶಗಳನ್ನು ಇಲ್ಲಿ ಪರಿಗಣಿಸಲಾಗಿದೆ. ಈ ಅಂಶಗಳು ಕೆಳಕಂಡಂತಿವೆ.
━━━━━━━━━━━━━━━━━━━━━━━━━━━━━━━━━━━━━━━━━━━━━

●.1) ಇ-ಆಡಳಿತ:
•┈┈┈┈┈┈┈┈┈┈┈•
ಸ್ಮಾರ್ಟ್ ಸಿಟಿಯ ಮುಖ್ಯಾಂಶಗಳಲ್ಲಿ ಇ-ಆಡಳಿತ ಕೂಡ ಒಂದು. ಸ್ಮಾರ್ಟ್ ಸಿಟಿಯಲ್ಲಿ ಮಾಹಿತಿ, ಸಂವಹನ ಹಾಗೂ ತಂತ್ರಜ್ಞಾನ ಶಕ್ತ ಆಡಳಿತ (ICT enabled governance) ಇರುತ್ತದೆ. ಇದಕ್ಕೆ ಒಂದು ಪುಟ್ಟ ಉದಾಹರಣೆ, ಕರ್ನಾಟಕದ ಮೊಬೈಲ್ ಒನ್ ಆಪ್. ಈ ಆಪ್'ನಲ್ಲಿ ನಮ್ಮ ಅನೇಕ ಸರಕಾರೀ ಸೇವೆಗಳನ್ನು ಒಂದೇ ಆಪ್'ನಲ್ಲಿ ತಲುಪಬಹುದಾಗಿದೆ. ಎಲೆಕ್ಟ್ರಿಕ್ ಬಿಲ್, ವಾಟರ್ ಬಿಲ್, ಖಾತೆ ಪಡೆಯುವುದು ಇತ್ಯಾದಿ ಸೇವೆಗಳನ್ನ ಒಂದೇ ಕ್ಲಿಕ್'ನಲ್ಲಿ ಮಾಡಬಹುದಾಗಿದೆ. ಒಟ್ಟಿನಲ್ಲಿ ನಮ್ಮ ಅನೇಕ ಕಾರ್ಯಗಳನ್ನು ಹೊಸ ತಂತ್ರಜ್ಞಾನದ ಮೂಲಕ ಸುಲಭವಾಗಿ ಮಾಡುವ ವ್ಯವಸ್ಥೆ ಹೊಂದಿರಲಾಗುತ್ತದೆ.


●.2) ಸಂಪನ್ಮೂಲ ಸದ್ಬಳಕೆ:
•┈┈┈┈┈┈┈┈┈┈┈┈┈┈┈┈•
ಪುನರ್ಬಳಕೆ ಇಂಧನ, ಜಲ ಸಂರಕ್ಷಣೆ, ವೈಜ್ಞಾನಿಕವಾಗಿ ಕಸ ವಿಲೇವಾರಿ, ಕಸದಿಂದ ರಸ ಇತ್ಯಾದಿ ನಮ್ಮ ಪರಿಸರ ರಕ್ಷಣೆಗೆ ಬಹಳ ಮಹತ್ವದ ಅಂಶಗಳು ಸ್ಮಾರ್ಟ್ ಸಿಟಿಯಲ್ಲಿರುತ್ತವೆ.


●.3) ಪಿಪಿಪಿ (PPP) ಮಾದರಿ:
•┈┈┈┈┈┈┈┈┈┈┈┈┈┈┈┈┈┈•
ಈಗೀಗ ನಮ್ಮ ದೇಶದಲ್ಲಿ ಪಿಪಿಪಿ ಮಾದರಿಯಲ್ಲಿ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಪಬ್ಲಿಕ್-ಪ್ರೈವೇಟ್ ಪಾಲುದಾರಿಕೆಯಲ್ಲಿ ನಿಜಕ್ಕೂ ಸಮರ್ಪಕ ಯೋಜನೆಗಳು ಬರಲು ಸಾಧ್ಯ. ಪಿಪಿಪಿ ಮಾದರಿಯಲ್ಲಿ ಖಾಸಗಿ ಕ್ಷೇತ್ರದಿಂದ ಬಂಡವಾಳ ಹೂಡಿಕೆ ಹೆಚ್ಚುವುದಲ್ಲದೆ, ಸೇವೆಯ ಗುಣಮಟ್ಟವನ್ನೂ ಕಾಪಾಡಿಕೊಳ್ಳಲು ಸಾಧ್ಯ.


●.4) ಸುರಕ್ಷತೆ:
•┈┈┈┈┈┈┈┈┈┈•
ರಸ್ತೆ ಗಲಾಟೆ, ಕಳ್ಳತನ, ದರೋಡೆ, ಮಹಿಳೆಯರು ಹಾಗೂ ವೃದ್ಧರ ಮೇಲೆ ಹಲ್ಲೆ ಇತ್ಯಾದಿ ಅಪರಾಧಗಳಿಗೆ ಆಸ್ಪದ ಕೊಡದಂಥ ಸುರಕ್ಷಿತ ವ್ಯವಸ್ಥೆಯನ್ನು ಸ್ಮಾರ್ಟ್ ಸಿಟಿಯಲ್ಲಿ ಕಲ್ಪಿಸಬೇಕಾಗುತ್ತದೆ. ನಗರದಾದ್ಯಂತ ಸಾರ್ವಜನಿಕ ಪ್ರದೇಶಗಳಲ್ಲಿ ಕ್ಯಾಮೆರಾ ಅಳವಡಿಸುವುದು; ರಾತ್ರಿ ಎಲ್ಲ ಕಡೆ ಸರಿಯಾದ ಬೆಳಕಿನ ವ್ಯವಸ್ಥೆ, ತುರ್ತು ಕರೆಗಳಿಗೆ ಕ್ಷಿಪ್ರ ಪ್ರತಿಸ್ಪಂದನೆ; ಪೊಲೀಸ್ ಕಟ್ಟೆಚ್ಚರ ಇತ್ಯಾದಿ ವ್ಯವಸ್ಥೆಗಳು ಸ್ಮಾರ್ಟ್ ಸಿಟಿಯಲ್ಲಿರುತ್ತವೆ.


●.5) ಆರ್ಥಿಕ ಸ್ವಾವಲಂಬನೆ:
•┈┈┈┈┈┈┈┈┈┈┈┈┈┈┈┈•
ಸ್ಮಾರ್ಟ್ ಸಿಟಿ ತನ್ನ ಖರ್ಚು ವೆಚ್ಚಗಳೆಲ್ಲವನ್ನೂ ತಾನೇ ನಿಭಾಯಿಸಿಕೊಳ್ಳುವಷ್ಟು ಆರ್ಥಿಕ ಶಕ್ತಿ ಹೊಂದಿರಬೇಕಾಗುತ್ತದೆ. ಕೇಂದ್ರ ಅಥವಾ ರಾಜ್ಯ ಸರಕಾರದ ಸಹಾಯವಾಗಲೀ ನಿರೀಕ್ಷಿಸುವಂತಿಲ್ಲ.


●.6) ನಾಗರಿಕರ ಪಾತ್ರ:
•┈┈┈┈┈┈┈┈┈┈┈┈┈•
ಸ್ಮಾರ್ಟ್ ಸಿಟಿಯಲ್ಲಿ ವಾಸಿಸುವ ಜನಸಾಮಾನ್ಯರು ತಮ್ಮ ಪ್ರದೇಶದ ಸ್ಥಳೀಯ ಸಮಸ್ಯೆಗಳ ವಿಷಯದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಂತಹ ವ್ಯವಸ್ಥೆ ರೂಪುಗೊಳ್ಳಬೇಕು. ಇದಕ್ಕಾಗಿ, ಚುನಾವಣೆ ವ್ಯವಸ್ಥೆಯಲ್ಲಿ ಸೂಕ್ತ ಬದಲಾವಣೆ ಬೇಕಾದರೆ ಮಾಡಬಹುದು.


●.7) ಸಾಮಾಜಿಕ ಸೌಲಭ್ಯಗಳು:
•┈┈┈┈┈┈┈┈┈┈┈┈┈┈┈┈•
ಸ್ಮಾರ್ಟ್ ಸಿಟಿಯಲ್ಲಿ ಮೂಲಭೂತ ಸೌಕರ್ಯಗಳ ಜೊತೆಗೆ ಸಾಮಾಜಿಕ ಸೌಲಭ್ಯಗಳು ಜನರ ಕೈಗೆಟುಕುವಂತಿರಬೇಕು. ಶಾಲೆ, ಆಸ್ಪತ್ರೆ, ಕ್ರೀಡಾಂಗಣ, ಮನರಂಜನಾ ತಾಣ ಇತ್ಯಾದಿಗಳು ಅಗತ್ಯ ಪ್ರಮಾಣದಲ್ಲಿ ಸಾಕಷ್ಟು ಇರಲೇಬೇಕು.


●.8) ಸಾರಿಗೆ ವ್ಯವಸ್ಥೆ:
•┈┈┈┈┈┈┈┈┈┈┈┈•
ಸ್ಮಾರ್ಟ್ ಸಿಟಿಯಲ್ಲಿರುವ ಪ್ರತಿಯೊಂದು ಪ್ರದೇಶದಿಂದ ಇತರ ಕಡೆಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಇರಬೇಕು. ಮೆಟ್ರೋ ರೈಲು, ಬಸ್ಸುಗಳು ಎಲ್ಲಾ ಕಡೆ ತಲುಪುವಂತಿರಬೇಕು. ಜನರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗಲು ಕಾರು, ಬೈಕು ಬಳಸುವ ಬದಲು ಸಾರ್ವಜನಿಕ ಸಾರಿಗೆ ಬಳಸುವಂತಾಗಬೇಕು.


●.9) ಹಸಿರು ಛಾಯೆ:
•┈┈┈┈┈┈┈┈┈┈┈┈•
ಸ್ಮಾರ್ಟ್ ಸಿಟಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಉದ್ಯಾನಗಳಂತಹ ಹಸಿರು ಪ್ರದೇಶಗಳು ಅತ್ಯಗತ್ಯ. ಪುನರ್ಬಳಕೆ ತಂತ್ರಜ್ಞಾನಗಳ ಯಥೇಚ್ಛ ಬಳಕೆ ಇತ್ಯಾದಿಗಳಿಂದ ಪರಿಸರ ಹಾನಿಯನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.


●.10) ಸೀಮಿತ ಜನಸಂಖ್ಯೆ:
•┈┈┈┈┈┈┈┈┈┈┈┈┈┈┈┈•
ವಿಶ್ವದ ಕೆಲವೆಡೆ ಸ್ಮಾರ್ಟ್ ಸಿಟಿಗೆ ನಿರ್ದಿಷ್ಟ ವಿಸ್ತಾರ ಹಾಗೂ ಜನಸಂಖ್ಯೆ ನಿಗದಿ ಮಾಡಲಾಗಿದೆ. ಉದಾಹರಣೆಗೆ ಜಪಾನ್'ನ ಫುಜಿಸಾವದಲ್ಲಿ 47 ಎಕರೆಯಲ್ಲಿ ಸ್ಮಾರ್ಟ್ ಟೌನ್ ನಿರ್ಮಿಸಲಾಗಿದೆ. ಇಲ್ಲಿ 1 ಸಾವಿರ ಮನೆ ಹಾಗೂ 3 ಸಾವಿರ ಜನಸಂಖ್ಯೆ ಸೀಮಿತಗೊಳಿಸಲಾಗಿದೆ. ಭಾರತದ ವಿಷಯಕ್ಕೆ ಬಂದರೆ ಇದು ವರ್ಕೌಟ್ ಆಗುವುದಿಲ್ಲ. ಒಂದು ಸ್ಮಾರ್ಟ್'ಸಿಟಿ ಇಂತಿಷ್ಟು ವಿಸ್ತೀರ್ಣ ಹಾಗೂ ಜನಸಂಖ್ಯೆಯನ್ನು ನಿಗದಿ ಮಾಡಿ ಅದಕ್ಕೆ ತಕ್ಕಂತೆ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ.


●.ಅನುಷ್ಠಾನ ಹೀಗೆ...
•┈┈┈┈┈┈┈┈┈•
■. ಜನರ ಜೀವನಮಟ್ಟ ಸುಧಾರಣೆಯೇ ಯೋಜನೆಯ ಮುಖ್ಯ ಉದ್ದೇಶ
■.  5 ವರ್ಷಗಳಲ್ಲಿ ಹಂತಹಂತವಾಗಿ ದೇಶದ 100 ನಗರಗಳ ಅಭಿವೃದ್ಧಿ
■.  ಒಟ್ಟು ₹ 48 ಸಾವಿರ ಕೋಟಿ ವೆಚ್ಚ
■.  ವರ್ಷಾಂತ್ಯಕ್ಕೆ 20 ನಗರಗಳಲ್ಲಿ ಯೋಜನೆ  ಕಾರ್ಯಾರಂಭ
■.  ಎರಡನೇ ಹಂತದಲ್ಲಿ 40 ನಗರಗಳ ಅಭಿವೃದ್ಧಿ ಗುರಿ
■.  ಸುಸಜ್ಜಿತ ನಗರಗಳ ನೀಲನಕ್ಷೆ ಸಿದ್ಧಪಡಿಸಲು ಪ್ರತಿ ನಗರಕ್ಕೂ ಸದ್ಯದಲ್ಲೇ ತಲಾ ₹ 2 ಕೋಟಿ ಬಿಡುಗಡೆ


●.ವಿಶ್ಲೇಷಣೆ :
•┈┈┈┈┈┈┈┈•
■. ಈ ಎಲ್ಲ 10 ಅಂಶಗಳನ್ನು ಪೂರೈಸುವುದು ನಿಜಕ್ಕೂ ಕಷ್ಟವೇ ಸರಿ. ಸ್ಥಳೀಯ ಜನರ ಅಗತ್ಯಕ್ಕೆ ತಕ್ಕಂತೆ ಸ್ಮಾರ್ಟ್‌ಸಿಟಿ ನಿರ್ಮಾಣವಾಗಬೇಕು. ಸಲಹೆ ಸೂಚನೆಗಳನ್ನು ಇಂಗ್ಲಿಷ್‌ನಲ್ಲಿ ಮುದ್ರಿಸದೆ, ಕನ್ನಡದಲ್ಲಿ ಮುದ್ರಿಸಿ ಜನರಿಗೆ ಅರ್ಥವಾಗುವಂತೆ ಮಾಡಬೇಕು. ಸ್ಮಾರ್ಟ್‌ಸಿಟಿ ಎಂದರೆ ಕೇವಲ ಕಟ್ಟಡ ನಿರ್ಮಾಣ, ಕೈಗಾರಿಕೆಗಳ ಅಭಿವೃದ್ಧಿಯಲ್ಲ. ಅದರೊಂದಿಗೆ ಶ್ರೀಸಾಮಾನ್ಯರ ಜನಜೀವನವೂ ಅಭಿವೃದ್ಧಿಯಾಗಬೇಕು.
■. ಮುಂದಿನ 20 ವರ್ಷಗಳ ಭವಿಷ್ಯದ ಜನಸಂಖ್ಯೆ ಗಮನದಲ್ಲಿಟ್ಟುಕೊಂಡು ನಗರವನ್ನು ಎಲ್ಲಾ ದೃಷ್ಟಿಯಿಂದಲೂ ಅಭಿವೃದ್ಧಿ ಪಡಿಸಬೇಕಿರುವುದರಿಂದ ಸಾರ್ವಜನಿಕರು ಹೆಚ್ಚು ಆಸಕ್ತಿ ವಹಿಸುವ ಅಗತ್ಯವಿದೆ. ಭವಿಷ್ಯದ ನಗರ ಹೇಗಿರಬೇಕು ಎಂಬುದನ್ನು ತೀರ್ಮಾನಿಸಬೇಕಿದೆ. ನಗರದಲ್ಲಿರುವ ಬಡವರು, ಶ್ರೀಮಂತರ ನಡುವಿನ ಅಂತರ ಕಡಿಮೆ ಮಾಡುವ ಜೊತೆಗೆ, ಸ್ಲಂಗಳ ಅಭಿವೃದ್ಧಿ, ಮಾನವ ಸಂಪನ್ಮೂಲ ಅಭಿವೃದ್ಧಿ, ಸ್ಥಳೀಯ ಸಂಸ್ಥೆಗಳ ದಕ್ಷ ಆಡಳಿತ ಅತಿ ಅವಶ್ಯಕ.ಜನಜೀವನ ಸುಧಾರಣೆಗೆ ಅಗತ್ಯ ಕ್ರಮ ಯೋಜನೆ ರೂಪಿಸಬೇಕು.
■. ಪಾಲಿಕೆಗೆ ಪರ್ಯಾಯವಾಗಿ ಸಮಿತಿ ರಚಿಸುವ ಬದಲು ಸಂವಿಧಾನ ಸಂಸ್ಥೆಯಾದ ಪಾಲಿಕೆ ಅಡಿಯಲ್ಲಿಯೇ ಸಂಸ್ಥೆ ಬರುವಂತೆ ಮಾಡಿದರೆ ಹೆಚ್ಚು ಸೂಕ್ತ. ಅಲ್ಲದೆ ಸ್ಮಾರ್ಟ್‌ ಸಿಟಿಯನ್ನು ಆರ್‌ಟಿಇ ಅಡಿಯಲ್ಲಿ ತಂದು ಪಾರದರ್ಶಕಗೊಳಿಸಬೇಕು
ಇವುಗಳಲ್ಲಿ ಕೆಲವನ್ನಾದರೂ ನಾವು ಸಾಧಿಸಿ ತೋರಿಸಿದರೆ ಸ್ಮಾರ್ಟ್ ಎನಿಸಿಕೊಳ್ಳಬಹುದು.

No comments:

Post a Comment