"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday, 10 August 2017

☀ ಕೆಎಎಸ್‌ ಪ್ರಿಲಿಮ್ಸ್‌-2015, ಬರೆಯುವ ಮುನ್ನ ತಿಳಿದಿರಬೇಕಾದ ಸಂಗತಿಗಳು: ( Before appearing KAS -2015 Prelims, should know)

☀ ಕೆಎಎಸ್‌ ಪ್ರಿಲಿಮ್ಸ್‌-2015, ಬರೆಯುವ ಮುನ್ನ ತಿಳಿದಿರಬೇಕಾದ ಸಂಗತಿಗಳು:
( Before appearing KAS -2015 Prelims, should know)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ಕೆಎಎಸ್‌ ಪ್ರಿಲಿಮ್ಸ್‌ (ಪೂರ್ವಭಾವಿ ಪರೀಕ್ಷೆ)-2015
(KAS -2015 Prelims)

★ ಕೆಎಎಸ್ ತಯಾರಿ
(Preparation for KAS Exams)


•►  ಕರ್ನಾಟಕ ಲೋಕಸೇವಾ ಆಯೋಗ ಗೆಜೆಟೆಡ್‌ ಪ್ರೊಬೆಷನರಿ ಅಧಿಕಾರಿಗಳ ನೇಮಕಕ್ಕೆ ಆಗಸ್ಟ್‌ 20 ರಂದು ಪೂರ್ವಭಾವಿ ಪರೀಕ್ಷೆ ನಡೆಸಲಿದೆ. ಈ ಪರೀಕ್ಷೆ ಬರೆಯುವವರಿಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಈಗಾಗಲೇ ನಿಮಗೆಲ್ಲಾ ತಿಳಿದಿರುವಂತೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ಯು 2015ನೇ ಸಾಲಿನ ಗ್ರೂಪ್‌ 'ಎ' ಹಾಗೂ ಗ್ರೂಪ್‌ 'ಬಿ'ಗೆ ಸೇರಿದ 426 ಗೆಜೆಟೆಡ್‌ ಪ್ರೊಬೆಷನರಿ ಅಧಿಕಾರಿಗಳ ನೇಮಕಕ್ಕಾಗಿ ಆಗಸ್ಟ್‌ 20 ರಂದು ಪೂರ್ವಭಾವಿ ಪರೀಕ್ಷೆ ನಡೆಸಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗುತ್ತಿದೆ.

•► 2011ರಲ್ಲಿ ಪರೀಕ್ಷೆ ನಡೆದಾಗ 1.25 ಲಕ್ಷ ಅಭ್ಯರ್ಥಿಗಳು ಅರ್ಜಿಸಲ್ಲಿಸಿದ್ದರು, 90 ಸಾವಿರ ಮಂದಿ ಪರೀಕ್ಷೆ ಬರೆದಿದ್ದರು. 2015ರಲ್ಲಿ ಒಟ್ಟು 3,07,272 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಈ ಪೈಕಿ ಸುಮಾರು 2.5 ಲಕ್ಷ ಮಂದಿ ಪರೀಕ್ಷೆ ಬರೆದಿದ್ದರು. ಈ ಬಾರಿ ಎಷ್ಟು ಮಂದಿ ಅರ್ಜಿಸಲ್ಲಿಸಿದ್ದಾರೆ ಎಂಬುದನ್ನು ಇನ್ನೂ ಕೆಪಿಎಸ್‌ಸಿ ಬಹಿರಂಗ ಪಡಿಸಿಲ್ಲ. ಆದರೆ ಉದ್ಯೋಗ ಕ್ಷೇತ್ರದಲ್ಲಿನ ಬದಲಾವಣೆಗಳನ್ನು ಗಮನಿಸಿದರೆ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಈ ಪರೀಕ್ಷೆ ತೆಗೆದುಕೊಂಡಿರುವ ಸಾಧ್ಯತೆಗಳಿವೆ. ಹೀಗಾಗಿ ಸಹಜವಾಗಿಯೇ ಪೈಪೋಟಿ ಹೆಚ್ಚಿರಲಿದೆ. ಮುಖ್ಯ ಪರೀಕ್ಷೆಗೆ ಅಭ್ಯರ್ಥಿಗಳ ಸಂಖ್ಯೆಯನ್ನು ಸೀಮಿತಗೊಳಿಸಲು ಪೂರ್ವಭಾವಿ ಪರೀಕ್ಷೆಯನ್ನು ಕಠಿಣಗೊಳಿಸುವ ಸಾಧ್ಯತೆಗಳಿವೆ.

•► ಈ ಹಿನ್ನೆಲೆಯಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳು ಹೆಚ್ಚು ಪರಿಶ್ರಮ ಪಟ್ಟು ಅಭ್ಯಾಸ ನಡೆಸುವುದು ಅವಶ್ಯಕ. ಈ ಹಿಂದಿನ ಪೂರ್ವಭಾವಿ ಪರೀಕ್ಷೆಗಳನ್ನೇ ಗಮನದಲ್ಲಿಟ್ಟುಕೊಂಡು, 'ಹೀಗೇ ಪರೀಕ್ಷೆ ಇದ್ದರೆ, ಇಷ್ಟು ಓದಿದರೆ ಸಾಕು' ಎಂಬ ನಿರ್ಣಯಕ್ಕೆ ಬಾರದೆ, ಮುಖ್ಯ ಪರೀಕ್ಷೆಯನ್ನೂ ಗಮನದಲ್ಲಿಟ್ಟುಕೊಂಡು ಆಳವಾದ ಅಧ್ಯಯನ ಮಾಡುವುದು ಒಳ್ಳೆಯದು.

•► ಪರೀಕ್ಷೆ ಹತ್ತಿರವಾಗುತ್ತಿದ್ದಂತೆಯೇ ಬಹುತೇಕ ಅಭ್ಯರ್ಥಿಗಳು ಅಭ್ಯಾಸ ನಡೆಸುವಾಗ ಮತ್ತು ಪರೀಕ್ಷೆಯಲ್ಲಿ ಒತ್ತಡಕ್ಕೆ ಒಳಗಾಗಿ, ತಮಗೆ ಗೊತ್ತಿರುವ ವಿಷಯಗಳಲ್ಲಿಯೂ ತಪ್ಪು ಮಾಡಿ ಕೊನೆಗೆ ಪಶ್ಚಾತಾಪ ಪಡುತ್ತಿರುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳು ಹೆಚ್ಚು ಮುತುವರ್ಜಿ ವಹಿಸಬೇಕಾದ ಕೆಲವು ವಿಷಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.

•► ಯಾವುದೇ ವಿಷಯವನ್ನು ಓದಿಕೊಳ್ಳುವ ಮೊದಲು ಇದು ಪೂರ್ವಭಾವಿ ಪರೀಕ್ಷೆಯ ಪಠ್ಯಕ್ರಮದಲ್ಲಿ ಸೇರ್ಪಡೆಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಈ ಬಗ್ಗೆ ಹೆಚ್ಚು ಸ್ಪಷ್ಟತೆ ಅವಶ್ಯವಿದ್ದಲ್ಲಿ ಈ ಹಿಂದೆ ನಡೆದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಗಮನಿಸಿ.

•► ಪೂರ್ವಭಾವಿ ಪರೀಕ್ಷೆಯ ಪಠ್ಯಕ್ರಮವನ್ನು ಅಧಿಸೂಚನೆಯಲ್ಲಿಯೇ ನೀಡಲಾಗಿದೆ. ಇದನ್ನು ನೋಡಿಕೊಂಡು ಸೂಕ್ತ ಪುಸ್ತಕವನ್ನು ಆಯ್ಕೆ ಮಾಡಿಕೊಂಡು  ಪರೀಕ್ಷೆಗೆ ಓದಿ.

•► ಪರೀಕ್ಷೆ ವಸ್ತುನಿಷ್ಠ ಮಾದರಿಯಲ್ಲಿ ನಡೆಯುವುದರಿಂದ ವಿಷಯದ ಬಗ್ಗೆ ಸ್ಪಷ್ಟ ಗ್ರಹಿಕೆ ಅಗತ್ಯ. ಆದ್ದರಿಂದ ಓದುವಾಗಲೇ ಯಾವುದೇ ಗೊಂದಲವಿಲ್ಲದಂತೆ ವಿಷಯವನ್ನು ಮನದಟ್ಟು ಮಾಡಿಕೊಳ್ಳಿ. ಯಾವುದೇ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಭಿನ್ನ ರೀತಿಯಲ್ಲಿ ಪ್ರಶ್ನೆ ಕೇಳಿದರೂ ಉತ್ತರಿಸುವ ಸಾಮರ್ಥ್ಯ‌ ನಿಮ್ಮದಾಗಿರಲಿ.

•► ನಿಮಗೆ ಈಗಾಗಲೇ ತಿಳಿದಿರುವಂತೆ ಪ್ರತಿಯೊಂದು ಪ್ರಶ್ನೆಗೂ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಲಾಗಿರುತ್ತದೆ. ಇದರಲ್ಲಿ ನೀವು ಸ್ಪಷ್ಟವಾಗಿ ಒಂದು ಸರಿಯುತ್ತರವನ್ನು ಗುರುತಿಸಬೇಕು. ಒಂದು ವೇಳೆ ತಪ್ಪು ಉತ್ತರ ಗುರುತಿಸಿದಲ್ಲಿ ನಾಲ್ಕನೇ ಒಂದಂಶದಷ್ಟು (1/4)ಅಂಕವನ್ನು ಕಳೆಯಲಾಗುತ್ತದೆ. ಇದರ ಉದ್ದೇಶ ಏನೂ ತಯಾರಿ ನಡೆಸದೇ ಪರೀಕ್ಷೆಗೆ ಹಾಜರಾಗುವವರ ಸಂಖ್ಯೆಯನ್ನು ಮೊದಲ ಹಂತದಲ್ಲೇ ಕಡಿತಗೊಳಿಸುವುದು. ಋಣಾತ್ಮಕ ಮೌಲ್ಯಮಾಪನ ಸ್ಫರ್ಧಾತ್ಮಕ ಪರೀಕ್ಷೆಯ ಅವಿಭಾಜ್ಯ ಅಂಗವಾಗಿರುವುದರಿಂದ ಈ ಬಗ್ಗೆ ಆತಂಕ ಬೇಡ. ಆದರೆ ಎಚ್ಚರಿಕೆ ಇರಲಿ. ಉತ್ತರವನ್ನು ಬ್ಲೈಂಡ್‌ ಆಗಿ ಗೆಸ್‌ ಮಾಡುವ ಅನಿವಾರ್ಯತೆಯನ್ನು ನೀವೇ ಸೃಷ್ಟಿಸಿಕೊಳ್ಳಬೇಡಿ.

•► ಒಂದೇ ಪ್ರಶ್ನೆಗೆ ಒಂದಕ್ಕಿಂತ ಹೆಚ್ಚಿನ ಉತ್ತರಗಳನ್ನು ಗುರುತಿಸಿದ್ದಲ್ಲಿ , ಅದರಲ್ಲಿ ಒಂದು ಉತ್ತರವು ಸರಿಯಾಗಿದ್ದರೂ ಸಹ ಅದನ್ನು ತಪ್ಪು ಉತ್ತರವೆಂದು ಪರಿಗಣಿಸಿ, ಅಂಕವನ್ನು ಕಳೆಯಲಾಗುತ್ತದೆ ಎಂದು ಕೆಪಿಎಸ್‌ಸಿಯು ಈಗಾಗಲೇ ಪ್ರಕಟಿಸಿದೆ. ಹೀಗಾಗಿ ಉತ್ತರವನ್ನು ಖಚಿತಪಡಿಸಿಕೊಂಡೇ ಗುರುತಿಸಲು ಹೋಗಿ. ನೆನಪಿಡಿ, ಒಂದು ವೇಳೆ ಕೊಡಲಾಗಿರುವ ನಾಲ್ಕು ಉತ್ತರಗಳಲ್ಲಿ ಯಾವ ಉತ್ತರವನ್ನೂ ಗುರುತಿಸದಿದ್ದಲ್ಲಿ, ಅಂತಹ ಪ್ರಶ್ನೆಗೆ ಋಣಾತ್ಮಕ ಅಂಕಗಳನ್ನು ಕಳೆಯಲಾಗುವುದಿಲ್ಲ.

•► ಯಾವುದೇ ಪರೀಕ್ಷೆಯಲ್ಲಿ ಸಮಯ ನಿರ್ವಹಣೆ ಅತ್ಯಂತ ಮುಖ್ಯವಾದ ವಿಷಯ. ಪ್ರತಿ ಪತ್ರಿಕೆಯು 200 ಅಂಕಗಳನ್ನು ಒಳಗೊಂಡಿದ್ದು, 2ಗಂಟೆ ಕಾಲಾವಕಾಶ ನೀಡಲಾಗಿರುತ್ತದೆ. ಅಂದರೆ 200 ಅಂಕಗಳ ಪ್ರಶ್ನೆಗಳಿಗೆ ಉತ್ತರಿಸಲು ಕೇವಲ 120 ನಿಮಿಷ ಕಾಲಾವಕಾಶ ದೊರೆಯಲಿದೆ. ಹೀಗಾಗಿ ತೀರಾ ಕಷ್ಟವೆನಿಸುವ ಪ್ರಶ್ನೆಗಳನ್ನು ಮೊದಲೇ ಗುರುತಿಸಿಕೊಂಡು, ಅವುಗಳಿಗೆ ನೀಡುವ ಸಮಯವನ್ನು ಕಡಿಮೆ ಮಾಡಿ. (ಹೆಚ್ಚೆಂದರೆ 15ರಿಂದ 30 ಸೆಕೆಂಡ್‌ಗಳಲ್ಲಿ ತೀರ್ಮಾನ ತೆಗೆದುಕೊಂಡು, ಮುಂದಿನ ಪ್ರಶ್ನೆಗೆ ಉತ್ತರಿಸಲು ಹೋಗಿ)

•► ಸರಿಯಾದ ಉತ್ತರವನ್ನು ಗುರುತಿಸುವುದು ಎಷ್ಟು ಮುಖ್ಯವೋ ಅದಕ್ಕಿಂತಲೂ ಹೆಚ್ಚು ಮುಖ್ಯವಾದದು ಸರಿಯಾಗಿ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳುವುದು! ಪ್ರಶ್ನೆಯನ್ನು ಸರಿಯಾಗಿ ಓದಿ ಮನದಟ್ಟು ಮಾಡಿಕೊಂಡ ನಂತರವಷ್ಟೇ ಉತ್ತರ ಗುರುತಿಸಲು ಮುಂದಾಗಿ. ಕೆಲವೊಮ್ಮೆ, ನಿಮಗೆ ಗೊತ್ತಿರುವ ವಿಷಯವಾಗಿದ್ದರೆ, ಪ್ರಶ್ನೆಯನ್ನು ಯಾವ ರೀತಿಯಲ್ಲಿ ಕೇಳಲಾಗಿದೆ ಎಂದು ನೋಡದೇ ಉತ್ತರ ಗುರುತಿಸಿಬಿಟ್ಟಿರುತ್ತೀರಿ. ಇದರಿಂದ ಉತ್ತರ ತಪ್ಪಾಗಿರುವ ಸಾಧ್ಯತೆಯೂ ಇದೆ.

•► ಪರೀಕ್ಷೆಯ ಹಿಂದಿನ ದಿನ ಕೆಪಿಎಸ್‌ಸಿಯು ಅಭ್ಯರ್ಥಿಗಳಿಗೆ ನೀಡಿರುವ ಸೂಚನೆಯನ್ನು ಸರಿಯಾಗಿ ಓದಿಕೊಳ್ಳಿ. ಈ ಸೂಚನೆಯನ್ನು ಪ್ರವೇಶ ಪತ್ರದಲ್ಲಿ ನೀಡಲಾಗಿರುತ್ತದೆ. ಪರೀಕ್ಷೆಗೆ ಹೋಗುವಾಗ ಏನೆಲ್ಲಾ ತೆಗೆದುಕೊಂಡು ಹೋಗಬಹುದು, ಪರೀಕ್ಷಾ ನಿಯಮಗಳೇನು ಎಂಬುದನ್ನು ಗಮನಿಸಲು ಮರೆಯಬೇಡಿ.


•► ಪೂರ್ವಭಾವಿ ಪರೀಕ್ಷೆಯನ್ನು ಆಗಸ್ಟ್‌ 20ರಂದೇ ನಡೆಸಲಾಗುತ್ತದೆ, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೆಪಿಎಸ್‌ಸಿ ಪ್ರಕಟಿಸಿದ್ದು, ಈಗಾಗಲೇ ವೇಳಾಪಟ್ಟಿಯನ್ನು ಒದಗಿಸಿದೆ. ಹೀಗಾಗಿ ಸದ್ಯವೇ ಪ್ರವೇಶ ಪತ್ರ ಪ್ರಕಟಿಸಲಿದೆ. ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬೇಕಿರುತ್ತದೆ. ಆದ್ದರಿಂದ ಅಭ್ಯರ್ಥಿಗಳು ಪ್ರತಿದಿನ ಆಯೋಗದ ವೆಬ್‌ ಅನ್ನು ನೋಡುತ್ತಿರುವುದು ಒಳ್ಳೆಯದು.

•► ಪರೀಕ್ಷೆ ಹತ್ತಿರವಾಗುತ್ತಿದ್ದಂತೆಯೇ ಪರೀಕ್ಷೆಗೆ ಸಂಬಂಧಿಸಿದ ವದಂತಿಗಳು, ಇಲ್ಲ ಸಲ್ಲದ ಸುದ್ದಿಗಳು ಹರಡುವುದು ಸಾಮಾನ್ಯ. ಈ ಬಗ್ಗೆ ಗಮನ ನೀಡಿ, ಅಮೂಲ್ಯ ಸಮಯ ಹಾಳುಮಾಡಿಕೊಳ್ಳಬೇಡಿ. ಪರೀಕ್ಷೆಗೆ ಸಿದ್ಧತೆ ನಡೆಸುವುದರತ್ತವೇ ಹೆಚ್ಚಿನ ಗಮನ ನೀಡಿ.

(ಕೃಪೆ: ವಿಜಯ ಕರ್ನಾಟಕ)

No comments:

Post a Comment