"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday, 3 January 2017

☀️ ಭಾಗ - VI: 2016 ರ ಪ್ರಮುಖ ಸ್ಥಳೀಯ / ರಾಷ್ಟ್ರೀಯ / ಅಂತರರಾಷ್ಟ್ರೀಯ ಘಟನೆಗಳು - ಒಂದು ಹಿನ್ನೋಟ : (Important Current Affairs of 2016 at glance)

☀️ ಭಾಗ - VI: 2016 ರ ಪ್ರಮುಖ ಸ್ಥಳೀಯ / ರಾಷ್ಟ್ರೀಯ / ಅಂತರರಾಷ್ಟ್ರೀಯ ಘಟನೆಗಳು - ಒಂದು ಹಿನ್ನೋಟ :
(Important Current Affairs of 2016 at glance)
━━━━━━━━━━━━━━━━━━━━━━━━━━━━━━━━━━━━━━━━━━━━━
★ 2016ರ ಪ್ರಚಲಿತ ಘಟನೆಗಳು.
(2016 current affairs in short)

...ಮುಂದುವರೆದ ಭಾಗ.



•► ವಾಹನ ಉತ್ಪಾದನೆ ಪ್ರಮಾಣ ಏರಿಕೆ

2006ರಿಂದ 2016ರ ಅವಧಿಯ ಸಂಯುಕ್ತ ವಾರ್ಷಿಕ ಅಭಿವೃದ್ಧಿ ಪ್ರಮಾಣ(ಸಿಎಜಿಆರ್) ದಲ್ಲಿ ವಾಹನ ಉತ್ಪಾದನೆ ಶೇ.9.4ರಷ್ಟು ಏರಿಕೆ ದಾಖಲಿಸಿದೆ. ಸಾರ್ವಜನಿಕ ವಾಹನ ಉತ್ಪಾದನೆ ಪ್ರಮಾಣ ಶೇ.10.09ರಷ್ಟು ಮತ್ತು ದ್ವಿಚಕ್ರ ವಾಹನಗಳ ಉತ್ಪಾದನಾ ಪ್ರಮಾಣ ಶೇ.9.48ರಷ್ಟು ಹೆಚ್ಚಾಗಿದೆ.


•► ಆರ್​ಬಿಐ ಸಾರಥ್ಯ ಬದಲು

ರಘುರಾಂ ರಾಜನ್ ಅವರೇ ಎರಡನೇ ಅವಧಿಗೂ ಆರ್​ಬಿಐನ ಗವರ್ನರ್ ಆಗಿ ಮುಂದುವರಿಯಬಹುದೆಂಬ ನಿರೀಕ್ಷೆ ಹಲವರಲ್ಲಿ ಇತ್ತು. ಆದರೆ, ವರ್ಷದ ಮಧ್ಯಭಾಗದಲ್ಲಿ ಉರ್ಜಿತ್ ಪಟೇಲ್ ಅವರನ್ನು ನೂತನ ಗವರ್ನರ್ ಎಂದು ಘೊಷಿಸಲಾಯಿತು. ಅವರು ಸೆ.4ರಂದು ಅಧಿಕಾರ ಸ್ವೀಕರಿಸಿದರು.


•► ಗಮನ ಸೆಳೆದ ನೇಮಕಾತಿಗಳು

ಪ್ರತಿಷ್ಠಿತ ಐಟಿ ಕಂಪನಿ ವಿಪ್ರೋಗೆ ನೂತನ ಸಿಇಒ ಆಗಿ ಅಬಿದ್ ಅಲಿ ಅವರನ್ನು ಫೆ.1ರಂದು ನೇಮಿಸಲಾಯಿತು. ಕಾಪೋರೇಷನ್ ಬ್ಯಾಂಕ್​ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಎಂಡಿ ಆಗಿ ಫೆ.1ರಂದು ಜೈಕುಮಾರ್ ಗರ್ಗ್ ನೇಮಕ.


•► ಬ್ಯಾಂಕ್ ಮುಳುಗಿಸಿದ್ದು ಶ್ರೀಮಂತರೇ…

ಬ್ಯಾಂಕ್​ಗಳ ಅನುತ್ಪಾದಕ ಆಸ್ತಿ ಹೆಚ್ಚಳಕ್ಕೆ ಕಾರಣವಾಗಿದ್ದು ರೈತರು ಅಥವಾ ಮಧ್ಯಮವರ್ಗದ ಜನರಲ್ಲ. ಬದಲಿಗೆ ಶ್ರೀಮಂತರೇ ಎಂಬ ಮಾಹಿತಿ ಮಾರ್ಚ್​ನಲ್ಲಿ ಬಹಿರಂಗಗೊಂಡಿತು. 1 ಕೋಟಿ ರೂ.ಗಿಂತಲೂ ಹೆಚ್ಚು ಸಾಲವನ್ನು ಹೊಂದಿರುವ ಶ್ರೀಮಂತರು ಹಾಗೂ ಉದ್ಯಮಿಗಳು ಎಲ್ಲ ಬ್ಯಾಂಕ್​ಗಳ ಶೇ.73ರಷ್ಟು ಮರುಪಾವತಿಯಾಗದ ಸಾಲದ ಮೊತ್ತವನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ, ಪ್ರಮುಖ 10 ಉದ್ಯಮಿಗಳು ಒಟ್ಟು 1.21 ಲಕ್ಷ ಕೋಟಿ ರೂ. ಸಾಲ ಹೊಂದಿದ್ದಾರೆ. ಇದು ಎಲ್ಲ ಬ್ಯಾಂಕ್​ಗಳ ಅನುತ್ಪಾದಕ ಆಸ್ತಿಯ ಶೇ.40ರಷ್ಟಾಗಿದೆ.


•► ಸಂಸತ್ತಿನಲ್ಲೇ ಇದ್ದಾರೆ ಸುಸ್ತಿದಾರರು!:
 ದೇಶದ ವಿವಿಧ ಬ್ಯಾಂಕ್​ಗಳಲ್ಲಿ 3 ಲಕ್ಷ ಕೋಟಿ ರೂಪಾಯಿಗೂ ಅಧಿಕ ಅನುತ್ಪಾದಕ ಆಸ್ತಿ (ಎನ್​ಪಿಎ) ಇದ್ದು, ಆಂಧ್ರದ ರಾಜಕಾರಣಿಗಳು ಸುಸ್ತಿದಾರರ ಪಟ್ಟಿಯಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ.

ಆಂಧ್ರ ವಿಭಜನೆ ವಿರೋಧಿಸಿ ಸಂಸತ್ತಿನಲ್ಲಿ ಪೆಪ್ಪರ್ ಸ್ಪ್ರೇ ಮಾಡಿದ ಲಗಡಪತಿ ರಾಜಗೋಪಾಲ್(34,000 ಕೋಟಿ ರೂ.)
ಕೇಂದ್ರ ಸಚಿವ ವೈ. ಎಸ್. ಚೌಧರಿ(106 ಕೋಟಿ ರೂ.)
ಟಿಡಿಪಿ ಸಂಸದ ರಾಯಪತಿ ಸಾಂಬಶಿವ (434 ಕೋಟಿ ರೂ.)
ಡೆಕ್ಕನ್ ಕ್ರಾನಿಕಲ್ ಸಂಸ್ಥೆಯ ಮುಖ್ಯಸ್ಥ/ಕಾಂಗ್ರೆಸ್ ಸಂಸದ ವೆಂಕಟರಾಮಿ ರೆಡ್ಡಿ(4,000 ಕೋಟಿ ರೂ.)
ಬಿಜೆಡಿ ಸಂಸದ ಜೈ ಪಾಂಡಾ(2,000 ಕೋಟಿ ರೂ.)


•► ಅಂಚೆ ಕಚೇರಿ ಬ್ಯಾಂಕ್

ಕೇಂದ್ರ ಸಚಿವ ಸಂಪುಟ ಜ.1ರಂದು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್(ಐಪಿಪಿಬಿ) ಆರಂಭಕ್ಕೆ ಅನುಮೋದನೆ ನೀಡಿತು. ದೇಶಾದ್ಯಂತ ಒಟ್ಟು 650 ಶಾಖೆಗಳನ್ನು ತೆರೆಯಲು ಉದ್ದೇಶಿಸಿದ್ದು, ಆರ್​ಬಿಐನಿಂದ ಬ್ಯಾಂಕಿಂಗ್ ಪರವಾನಗಿ ಪಡೆದುಕೊಂಡ ಅಂಚೆ ಕಚೇರಿಗಳು ಪೇಮೆಂಟ್ ಬ್ಯಾಂಕ್ ಆರಂಭಿಸಬಹುದಾಗಿದೆ. ಇದರಿಂದ ಸುಮಾರು 2000 ಜನರಿಗೆ ಉದ್ಯೋಗಾವಕಾಶ ಸಿಗಲಿದೆ.

ಜಾರ್ಖಂಡ್​ನಲ್ಲಿ ಮೊದಲ ಐಪಿಪಿಬಿ: 2017ರ ಜನವರಿಯಲ್ಲಿ ದೇಶದ ಮೊದಲ ಪೋಸ್ಟ್ ಪೇಮೆಂಟ್ ಬ್ಯಾಂಕ್ ಜಾರ್ಖಂಡ್​ನಲ್ಲಿ ಆರಂಭವಾಗಲಿದೆ.


•► ರಿಲಯನ್ಸ್ ಜಿಯೋ ಡೇಟಾಗಿರಿ

4ಜಿ ನೆಟ್​ವರ್ಕ್ ಸೇವೆಯಲ್ಲಿ ರಿಲಯನ್ಸ್ ಜಿಯೋ ಹೊಸ ಸಂಚಲನವನ್ನೇ ಸೃಷ್ಟಿಸಿತು. ಸೆಪ್ಟೆಂಬರ್ 5ರಿಂದ ಆರಂಭವಾದ ಈ ಸೇವೆ ಟೆಲಿಕಾಂ ಕ್ಷೇತ್ರದಲ್ಲಿ ದರ ಸಮರದ ಹೊಸ ಶಕೆ ಆರಂಭಿಸಿತು. ಡಿ.31ರವರೆಗೆ ಕರೆ ಹಾಗೂ ಡೇಟಾ ಸೌಲಭ್ಯವನ್ನು ಉಚಿತವಾಗಿ ನೀಡುವುದಾಗಿ ಘೊಷಿಸಿದ್ದ ಕಂಪನಿ, ಈ ಕೊಡುಗೆಯನ್ನು ‘ನ್ಯೂ ಇಯರ್’ ಎಂಬ ಹೊಸಯೋಜನೆಯಡಿ 2017ರ ಮಾರ್ಚ್ 31ರವರೆಗೆ ವಿಸ್ತರಿಸಿದೆ. ಜಿಯೋ ತನ್ನ ಎಲ್ಲ ಪ್ಲ್ಯಾನ್​ಗಳಲ್ಲೂ ಕರೆ ಉಚಿತಗೊಳಿಸಿದ್ದು, ಡೇಟಾಗಳಿಗಷ್ಟೇ ದರ ವಿಧಿಸಿರುವುದು ವಿಶೇಷ.

ರಿಲಯನ್ಸ್ ಷೋರೂಂಗಳಲ್ಲಿ ಕ್ಯೂ: ಉಚಿತ ಅನಿಯಮಿತ ಕರೆ ಹಾಗೂ ಡೇಟಾ ಸೌಲಭ್ಯದ ವೆಲ್​ಕಮ್ ಆಫರ್ ಪಡೆಯಲು ಗ್ರಾಹಕರು ರಿಲಯನ್ಸ್ ಡಿಜಿಟಲ್ ಷೋರೂಂಗಳ ಮುಂದೆ ಕ್ಯೂನಲ್ಲಿ ನಿಂತ ದೃಶ್ಯಗಳು ಗಮನ ಸೆಳೆದವು.

ವಿಶ್ವದ ಅತಿದೊಡ್ಡ ಸ್ಟಾರ್ಟಪ್: ರಿಲಯನ್ಸ್ ಜಿಯೋಗಾಗಿ 1.50 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದ್ದು, ವಿಶ್ವದ ಅತಿ ದೊಡ್ಡ ಸ್ಟಾರ್ಟಪ್ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.

ಹೊಸದೇನು?: ರಿಲಯನ್ಸ್ ಜಿಯೋ 2017ರಲ್ಲಿ ಡಿಟಿಎಚ್ ಸೇವೆ ಆರಂಭಿಸಲಿದೆ. ಈ ಸೇವೆಗಾಗಿ ಹೈಸ್ಪೀಡ್ ಆಪ್ಟಿಕಲ್ ಫೈಬರ್ ಬಳಕೆ ಮಾಡಲಿದೆ.


•► ಭವಿಷ್ಯದ ಜಿಜ್ಞಾಸೆ

ಪಿಎಫ್ ಮೇಲಿನ ಬಡ್ಡಿದರ ಇಳಿಕೆ: ಡಿ.19ರಂದು ಬೆಂಗಳೂರಿನಲ್ಲಿ ಕಾರ್ವಿುಕ ಸಚಿವ ಬಂಡಾರು ದತ್ತಾತ್ರೇಯ ನೇತೃತ್ವದಲ್ಲಿ ನಡೆದ ನೌಕರರ ಭವಿಷ್ಯ ನಿಧಿ ಸಂಘಟನೆಯ ಟ್ರಸ್ಟಿಗಳ ಸಭೆಯಲ್ಲಿ 2016-17ರ ಆರ್ಥಿಕ ವರ್ಷಕ್ಕೆ ಪಿಎಫ್ ಮೇಲಿನ ಬಡ್ಡಿದರವನ್ನು 8.8ರಿಂದ ಶೇ.8.65ಕ್ಕೆ ಇಳಿಕೆ ಮಾಡಲಾಗಿದೆ. ಇದು ಕಳೆದ ಏಳು ವರ್ಷಗಳ ಅವಧಿಯಲ್ಲೇ ಕನಿಷ್ಠ ಬಡ್ಡಿದರವಾಗಿದೆ.


•► ತಿದ್ದುಪಡಿಗೆ ಸಿಗಲಿಲ್ಲ ಬೆಂಬಲ

ಕೇಂದ್ರ ಕಾರ್ವಿುಕ ಮತ್ತು ಉದ್ಯೋಗ ಸಚಿವಾಲಯ 1952ರ ಉದ್ಯೋಗಿಗಳ ಭವಿಷ್ಯನಿಧಿ ಯೋಜನೆ ಕಾಯ್ದೆಯಲ್ಲಿ ತಿದ್ದುಪಡಿ ತಂದಿತು. ಅದರಂತೆ ಕಾರ್ವಿುಕರು 58 ವರ್ಷಕ್ಕೂ ಮೊದಲೇ ಭವಿಷ್ಯನಿಧಿಯ ಮೊತ್ತದಲ್ಲಿ ಶೇ.60ರಷ್ಟನ್ನು ಮಾತ್ರ ತೆಗೆಯಬಹುದಾಗಿತ್ತು. ಈ ಬದಲಾವಣೆ ಫೆಬ್ರವರಿ 10ರಿಂದ ಜಾರಿಗೆ ಬಂದಿತ್ತು. ಆದರೆ ಇದಕ್ಕೆ ಕಾರ್ವಿುಕ ಸಂಘಟನೆಗಳಿಂದ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆಗಸ್ಟ್​ನಲ್ಲಿ ಇದನ್ನು ಹಿಂಪಡೆದುಕೊಳ್ಳಲಾಯಿತು.


•► ಇಎಂಐಗೆ ಬಳಸಬಹುದು

2017-18ರಿಂದ ಭವಿಷ್ಯನಿಧಿ ಖಾತೆಯಲ್ಲಿರುವ ಮೊತ್ತವನ್ನು ಮನೆ ಖರೀದಿ ಮತ್ತು ಗೃಹಸಾಲದ ಇಎಂಐ ಸಂದಾಯಕ್ಕೆ ಬಳಸಬಹುದು. ಈ ಬಗ್ಗೆ ಅಕ್ಟೋಬರ್​ನಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಕಾರ್ವಿುಕರು ನಿವೃತ್ತಿಗೂ ಮೊದಲೇ ಸ್ವಂತ ಸೂರೊಂದನ್ನು ಹೊಂದಬೇಕೆಂಬುದು ಇದರ ಉದ್ದೇಶವಾಗಿದೆ. ಆದರೆ, ಈ ವ್ಯವಸ್ಥೆ ಕಡಿಮೆ ಬೆಲೆಯ ಮನೆಖರೀದಿಗೆ ಮಾತ್ರ ಅನ್ವಯವಾಗಲಿದೆ. ಇದೇ ರೀತಿ, ಆನ್​ಲೈನ್​ನಲ್ಲೇ ಪಿಎಫ್ ವಿತ್​ಡ್ರಾ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.


•► ಸಿಎಸ್​ಆರ್​ನಿಂದ ಸಮಾಜಮುಖಿ ಕೆಲಸಗಳಿಗೆ ವೇಗ

ಕಾಪೋರೇಟ್ ಸಾಮಾಜಿಕ ಹೊಣೆಗಾರಿಕೆಯಡಿ ಉದ್ಯಮಸಂಸ್ಥೆಗಳು, ಕಂಪನಿಗಳು ಆದಾಯದಲ್ಲಿ ಶೇಕಡ 2ರಷ್ಟನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಬೇಕು ಎಂಬ ಕಾನೂನು ಬಂದ ನಂತರ ಭಾರಿ ಬದಲಾವಣೆ ಕಂಡುಬಂದಿದೆ. ಹಲವು ಉದ್ಯಮಗಳು ಆದಾಯದ ಶೇ.2ರಷ್ಟನ್ನು ವೆಚ್ಚ ಮಾಡುತ್ತಿದ್ದರೆ ಇನ್ನೂ ಕೆಲವು ಉದ್ಯಮಗಳು ಶೇ.5ರಿಂದ 25ರವರೆಗೆ ವೆಚ್ಚ ಮಾಡುತ್ತಿವೆ. ಪರಿಣಾಮ, ಸಾಮಾಜಿಕ ಕಾರ್ಯಗಳಿಗೆ ವೇಗ ಸಿಕ್ಕಿದೆ. ನಿಫ್ಟಿ ಸೂಚ್ಯಂಕದ ಮೇಲೆ ಪ್ರಭಾವ ಬೀರುವ ದೇಶದ ಪ್ರಮುಖ 50 ಕಂಪನಿಗಳು 2016ರಲ್ಲಿ ಸಾಮಾಜಿಕ ಕಾರ್ಯಗಳಿಗಾಗಿ 5,100 ಕೋಟಿ ರೂಪಾಯಿ ವೆಚ್ಚ ಮಾಡಿವೆ ಎಂದು ಕೇಂದ್ರ ಕಾಪೋರೇಟ್ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳು ಹೇಳುತ್ತವೆ. ಈ ಪೈಕಿ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಹಣ ಹರಿದುಬರುತ್ತಿದೆ.


•► ಸಹಾರಾ ಕೋಲಾಹಲ

ಹೂಡಿಕೆದಾರರಿಗೆ ಮರುಪಾವತಿ ಮಾಡದ ಪ್ರಕರಣದಲ್ಲಿ 2014ರ ಮಾರ್ಚ್​ನಲ್ಲಿ ಜೈಲು ಪಾಲಾಗಿರುವ ಸಹಾರಾ ಮುಖ್ಯಸ್ಥ ಸುಬ್ರತಾ ರಾಯ್ಗೆ ಜಾಮೀನು ನೀಡಲು 10,000 ಕೋಟಿ ರೂ. ಬಾಂಡ್ ಹಾಗೂ ಕೆಲ ಷರತ್ತುಗಳನ್ನು ಸುಪ್ರೀಂ ಕೋರ್ಟ್ ವಿಧಿಸಿದೆ. ಆದರೆ, ಈ ಷರತ್ತುಗಳನ್ನು ಪೂರೈಸದ ಹಿನ್ನೆಲೆಯಲ್ಲಿ ಸುಬ್ರತಾ ರಾಯ್ ಜೈಲುವಾಸ ಮುಂದುವರಿದಿದೆ. ಸಹಾರಾ ಕಂಪನಿಯು ಹೂಡಿಕೆದಾರರಿಗೆ ಸುಮಾರು 36,000 ಕೋಟಿ ರೂ. ಮರುಪಾವತಿ ಮಾಡಬೇಕಿದೆ.


•► ವಿದೇಶ ಸೇರಿದ ವಿಜಯ್ ಮಲ್ಯ

ದೇಶದ ವಿವಿಧ ಬ್ಯಾಂಕ್​ಗಳಲ್ಲಿ 9,000 ಕೋಟಿ ರೂ.ನಷ್ಟು ಸಾಲ ಮಾಡಿ ಮರುಪಾವತಿ ಮಾಡದ ಉದ್ಯಮಿ ವಿಜಯ್ ಮಲ್ಯ ಮಾರ್ಚ್​ನಲ್ಲಿ ದೇಶ ಬಿಟ್ಟು ತೆರಳಿ ಲಂಡನ್​ನಲ್ಲಿ ನೆಲೆಕಂಡುಕೊಂಡಿದ್ದಾರೆ. ಮಲ್ಯ ಲಂಡನ್ನಿನ ವಿಶ್ವವಿಖ್ಯಾತ ಮೇಡಂ ಟುಸಾಡ್ಸ್ ಮ್ಯೂಸಿಯಂನಿಂದ ಎರಡು ಕಟ್ಟಡಗಳ ಪಕ್ಕದಲ್ಲೇ ಸ್ವಂತ ಐಷಾರಾಮಿ ಬಂಗಲೆ ಹೊಂದಿದ್ದಾರೆ. ಟ್ವಿಟರ್​ನಲ್ಲಿ ಸಕ್ರಿಯವಾಗಿರುವ ಮಲ್ಯ, ‘‘ಈಗ ಒಳ್ಳೆಯ ದಿನಗಳು, ಆಟ ಈಗ ಶುರು’’ ಎಂದು ಟ್ವೀಟ್ ಮಾಡಿದ್ದರು. ಮಲ್ಯ ವಿಷಯ ಸಂಸತ್ತಿನಲ್ಲೂ ಪ್ರಸ್ತಾಪವಾಯಿತು. ಮೇನಲ್ಲಿ ಮಲ್ಯ ಲಂಡನ್​ನಿಂದಲೇ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ಪತ್ರವನ್ನು ಸಭಾಪತಿ ಹಮೀದ್ ಅನ್ಸಾರಿಗೆ ರವಾನಿಸಿದರು. ಮಲ್ಯರನ್ನು ವಾಪಸ್ ಭಾರತಕ್ಕೆ ಕರೆತರುವ ಪ್ರಯತ್ನ ನಡೆಸುತ್ತಿರುವ ಸರ್ಕಾರ ಇಂಟರ್​ಪೋಲ್ ಸಹಕಾರವನ್ನೂ ಕೋರಿದೆ. ಏತನ್ಮಧ್ಯೆ, ಎಸ್​ಬಿಐ ಸೇರಿ 17 ಬ್ಯಾಂಕ್​ಗಳಿಗೆ ಸಾಲ ಮರುಪಾವತಿ ಮಾಡದ ಆರೋಪದಲ್ಲಿ ಮಲ್ಯ ವಿರುದ್ಧ ಸೆಪ್ಟೆಂಬರ್​ನಲ್ಲಿ ಎಫ್​ಐಆರ್ ದಾಖಲಾಗಿದೆ. ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಮುಂಬೈನ ವಿಶೇಷ ನ್ಯಾಯಾಲಯದ ಮೂಲಕ ಬ್ರಿಟನ್ ಸರ್ಕಾರಕ್ಕೆ ಸಿಬಿಐ ನವೆಂಬರ್ ಕೊನೆಯಲ್ಲಿ ಮನವಿ ಮಾಡಿದೆ. ಬ್ಯಾಂಕ್​ಗಳು ಮಲ್ಯ ಆಸ್ತಿ ಹರಾಜಿಗೆ ಮುಂದಾದರೂ ಇವುಗಳನ್ನು ಕೊಳ್ಳಲು ಖರೀದಿದಾರರು ಮುಂದೆ ಬರಲಿಲ್ಲ.


-•► ಏಳು-ಬೀಳು ಕಂಡ ಫ್ಲಿಪ್​ಕಾರ್ಟ್

ಇ-ಕಾಮರ್ಸ್ ತಾಣ ಫ್ಲಿಪ್​ಕಾರ್ಟ್ ಈ ವರ್ಷ ನಂಬರ್ 1 ಸ್ಥಾನವನ್ನು ಕಳೆದುಕೊಂಡಿತಾದರೂ 10 ಕೋಟಿ ಗ್ರಾಹಕರ ಗುರಿಯನ್ನು ತಲುಪುವ ಮೂಲಕ ಬೀಗಿತು. ಕಳಪೆ ನಿರ್ವಹಣೆಗಾಗಿ ಕಂಪನಿಯ ಸಹ-ಸಂಸ್ಥಾಪಕ ಸಚಿನ್ ಬನ್ಸಾಲ್​ಗೆ ಜನವರಿಯಲ್ಲಿ ಹಿಂಬಡ್ತಿ ನೀಡಿ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಮುಂದುವರಿಸಿದ ಘಟನೆ ಚರ್ಚೆಗೆ ಕಾರಣವಾಯಿತು. ಸಚಿನ್ ಜಾಗಕ್ಕೆ ನೂತನ ಸಿಇಒ ಆಗಿ ಸಹಸಂಸ್ಥಾಪಕ ಬಿನ್ನಿ ಬನ್ಸಾಲ್ ನೇಮಕಗೊಂಡರು.

ಜಬಾಂಗ್ ಖರೀದಿ:
ಜಾಗತಿಕ ಆನ್​ಲೈನ್ ಫ್ಯಾಷನ್ ಉಡುಗೆ ಜಾಲತಾಣವಾದ ಜಬಾಂಗ್​ನ್ನು ಈ ವರ್ಷದ ಜುಲೈನಲ್ಲಿ 70 ಮಿಲಿಯನ್ ಡಾಲರ್ ಮೊತ್ತಕ್ಕೆ ಪ್ಲಿಪ್​ಕಾರ್ಟ್ ಸ್ವಾಮ್ಯದ ಮಿಂತ್ರಾ ಖರೀದಿಸಿತು. ಈ ಖರೀದಿ ಪ್ರಕ್ರಿಯೆಯಿಂದ ಮಿಂತ್ರಾ ಮಾಸಿಕ 1.5 ಕೋಟಿ ಸಕ್ರಿಯ ಬಳಕೆದಾರರನ್ನು ಹೊಂದಿತು.

ಉದ್ಯೋಗಿಗಳಿಗೆ ಗೇಟ್​ಪಾಸ್:
 30,000 ಉದ್ಯೋಗಿಗಳನ್ನು ಹೊಂದಿರುವ ಫ್ಲಿಪ್​ಕಾರ್ಟ್ ಕಳಪೆ ನಿರ್ವಹಣೆ ತೋರಿದ 1,000 ಉದ್ಯೋಗಿಗಳನ್ನು ಈ ವರ್ಷದ ಜುಲೈನಲ್ಲಿ ಕೈಬಿಟ್ಟಿತು.

(Courtesy : Vijayavani) 

No comments:

Post a Comment