"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday, 30 March 2014

* ಇತ್ತೀಚೆಗೆ ಉತ್ತರಾಖಂಡದಲ್ಲಿ ಸಂಭವಿಸಿದ ಜಲ ಪ್ರಳಯಕ್ಕೆ ಪ್ರಮುಖ ಕಾರಣಗಳು (The main causes for Uttarakhand floods) :

* ಇತ್ತೀಚೆಗೆ ಉತ್ತರಾಖಂಡದಲ್ಲಿ ಸಂಭವಿಸಿದ ಜಲ ಪ್ರಳಯಕ್ಕೆ ಪ್ರಮುಖ ಕಾರಣಗಳು
(The main causes for Uttarakhand floods) :

 2013ರ ಜೂನ್ ತಿಂಗಳ ಮಧ್ಯ ಭಾಗದಲ್ಲಿ ಉತ್ತರ ಭಾರತದ ರಾಜ್ಯಗಳಾದ ಉತ್ತರಾಖಂಡ, ಹಿಮಾಚಲ ಪ್ರದೇಶ, ದೆಹಲಿ ಹಾಗೂ ಪಂಜಾಬ್, ಹರಿಯಾಣದ ಕೆಲವು ಭಾಗಗಳಲ್ಲಿ ಸಂಭವಿಸಿದ ಅನಿರೀಕ್ಷಿತ ಮೇಘಸ್ಪೋಟದಿಂದಾಗಿ ಬಹುಪಾಲು ಗ್ರಾಮ, ಪಟ್ಟಣ, ನಗರಗಳು ಜಲಾವೃತಗೊಂಡು, ಜನ-ಜೀವನ ತತ್ತರಿಸಿ ಹೋಯಿತು. ಅದರಲ್ಲೂ ಅತೀ ಹೆಚ್ಚಿನ ಪ್ರವಾಹಕ್ಕೀಡಾದ ಉತ್ತರಾಖಂಡದ ಪವಿತ್ರ ಯಾತ್ರಾ ಸ್ಥಳಗಳಾದ ಬದರೀನಾಥ್, ಕೇದಾರನಾಥ, ಹರಿದ್ವಾರ, ಹೃಷಿಕೇಶ, ರುದ್ರಪ್ರಯಾಗಗಳು ಜಲಪ್ರಳಯದಲ್ಲಿ ಮುಳುಗಿ ಸಾವಿರಾರು ಸಂಖ್ಯೆಯಲ್ಲಿ ಪ್ರಾಣಹಾನಿ ಉಂಟಾಯಿತು.

ಅಭಿವೃದ್ಧಿಯ ಹೆಸರಿನಲ್ಲಿ ಮಾನವನು ತನ್ನ ಸ್ವಾರ್ಥ ಪರ ಇಚ್ಛೆ ಈಡೇರಿಕೆಗಾಗಿ ನೈಸರ್ಗಿಕ ವ್ಯವಸ್ಥೆಗೆ ಧಕ್ಕೆಯುಂಟು ಮಾಡಿರುವ ಕಾರಣ ಸಂಭವಿಸಿದ ನೈಸರ್ಗಿಕ ವಿಕೋಪಕ್ಕೆ ಈ ಉತ್ತರಾಖಂಡದ ಜಲ ಪ್ರಳಯ ಸ್ಪಷ್ಟ ನಿದರ್ಶನವಾಗಿದೆ.

 * ಉತ್ತರ ಭಾರತದಲ್ಲಿ, ಅದರಲ್ಲೂ ಮುಖ್ಯವಾಗಿ ಉತ್ತರಾಖಂಡದಲ್ಲಿ ಸಂಭವಿಸಿದ ಜಲ ಪ್ರಳಯಕ್ಕೆ ನೈಸರ್ಗಿಕ ವ್ಯವಸ್ಥೆಯಲ್ಲಿ ಮಾನವನ ಹಸ್ತಕ್ಷೇಪವೇ ಪ್ರಮುಖ ಕಾರಣವೆಂಬುದು ಸ್ಪಷ್ಟವಾಗಿದೆ.

 * ಭಾಗೀರಥಿ, ಕೋಸಿ, ಗಂಗಾ, ಯಮುನಾ, ಅಲಕನಂದಾ, ಗೋಮತಿ, ಮಂದಾಕಿನಿ ಇತ್ಯಾದಿ ಪ್ರಮುಖ ನದಿಗಳ ದಟ್ಟ ಜಾಲವನ್ನು ಹೊಂದಿರುವ ಉತ್ತರಾಖಂಡದಲ್ಲಿನ ಅರಣ್ಯ ಸಂಪತ್ತು ದೊಡ್ಡ ಪ್ರಮಾಣದಲ್ಲಿ ನಶಿಸುತ್ತಿರುವುದರಿಂದ ಅರಣ್ಯ ಗಳ ಸಹಜ ನೀರು ಹಿಡಿದಿಟ್ಟುಕೊಳ್ಳುವ ವ್ಯವಸ್ಥೆಗೆ ಧಕ್ಕೆಯಾಗಿದೆ.

 * ಏಷ್ಯಾದಲ್ಲೇ ಅತಿ ದೊಡ್ಡ ದೊಡ್ಡದಾಗಿರುವ ತೆಹರಿ ಅಣೆಕಟ್ಟನ್ನೊಳಗೊಂಡು ಸುಮಾರು 300ಕ್ಕೂ ಹೆಚ್ಚು ಹಿರಿ-ಕಿರಿಯ ಜಲ ವಿದ್ಯುತ್ ಯೋಜನೆಗಳು ಇಲ್ಲಿ ತಲೆಯೆತ್ತುತ್ತಿರುವುದು ಈ ಅನಾಹುತಕ್ಕೆ ಇನ್ನೊಂದು ಪ್ರಮುಖ ಕಾರಣವಾಗಿದೆ.

 * ಇಲ್ಲಿನ ಬೆಟ್ಟ ಗುಡ್ಡಗಳಲ್ಲಿ ನಿರಂತರವಾಗಿ ನಡೆಯುತ್ತಿರುವಂಥ ಖನಿಜಗಳ ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ರಸ್ತೆಗಳ ನಿರ್ಮಾಣ ಇತ್ಯಾದಿಗಳಿಗಾಗಿ ನಡೆಸುವ ನಿರಂತರ ಸ್ಫೋಟಗಳು ಭೂಮಿಯ ಶಿಲಾಸ್ಥರಗಳನ್ನು ಸಡಿಲುಗೊಳಿಸಿದ್ದು ಭೂ ಕುಸಿತಕ್ಕೆ ಕಾರಣವಾಗಿದೆ.

 * ಪ್ರವಾಸೋದ್ಯಮ ಅಭಿವೃದ್ದಿ ಹೆಸರಿನಲ್ಲಿ ನದಿ ದಡಗಳನ್ನು ಆಕ್ರಮಿಸಿ ಕಟ್ಟಡಗಳನ್ನು, ನದಿಗಳ ಮಧ್ಯದಲ್ಲಿಯೇ ಪಿಲ್ಲರ್ ನಿರ್ಮಿಸಿ ಅವುಗಳ ಮೇಲೆ ಹೊಟೇಲುಗಳನ್ನು ಕಟ್ಟಿರುವುದು.

 * ಇಲ್ಲಿ ಹಲವಾರು ಯಾತ್ರಾಸ್ಥಳಗಳನ್ನು ಹೊಂದಿದ್ದು ಭಕ್ತಿಯ ಭಾವಾವೇಶದಲ್ಲಿ ಈ ಪ್ರದೇಶಗಳಿಗೆ ಲಕ್ಷಗಟ್ಟಲೆ ಜನ ನುಗ್ಗಿದ್ದರಿಂದಲೂ ಪ್ರವಾಹದ ಸಂದರ್ಭದಲ್ಲಿ ಹೆಚ್ಚು ಸಾವು ನೋವುಗಳಾಗಿವೆ.

 ಹೀಗೆ ಒಂದೆಡೆ ಅತಿಯಾದ ಸ್ವಾರ್ಥ ಮತ್ತೊಂದೆಡೆ ವೈಚಾರಿಕತೆಯ ಕೊರತೆಯಿಂದಾಗಿ ಈ ಪ್ರಳಯದಲ್ಲಿ ಸಾವಿರಾರು ಜನ ಜೀವ ಕಳೆದುಕೊಂಡರು. ಮಾನವನೊಂದಿಗೆ ಉಳಿದ ಜೀವರಾಶಿಯೂ ಬದುಕಬೇಕು. ಅಭಿವೃದ್ಧಿಯ ಸೋಗಿನಲ್ಲಿ ನೈಸರ್ಗಿಕ ವ್ಯವಸ್ಥೆಗೆ ಧಕ್ಕೆಯಾಗಬಾರದು. ಭಕ್ತಿಯೆಂಬುವುದು ಮೂಢನಂಬಿಕೆಯಾಗಬಾರದು ಎಂಬ ಪಾಠ ಈ ಪ್ರಳಯ ಕಲಿಸಿದ್ದನ್ನು ಮರೆಯುವಂತಿಲ್ಲ.

No comments:

Post a Comment