"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 29 March 2014

★ 'ಅಂಡಮಾನ್' ದ್ವೀಪದ ಪ್ರವಾಸಿ ತಾಣಗಳು (Tourism destinations of Andaman Island ) :

★ 'ಅಂಡಮಾನ್' ದ್ವೀಪದ  ಪ್ರವಾಸಿ ತಾಣಗಳು (Tourism destinations of Andaman Island )  :

 ಇದು ಪ್ರಕೃತಿ ಸೌಂದರ್ಯದಿಂದ ತುಂಬಿ ತುಳುಕುತ್ತಿರುವ ದ್ವೀಪ. ತರಹೇವಾರಿ ಹೂವುಗಳು, ಪಕ್ಷಿಗಳು, ಪ್ರಾಣಿಗಳು, ತಾಳೆ ಮತ್ತು ತೆಂಗು ಮುಂತಾದವು ನೋಡಲು ಅತ್ಯಂತ ರಮಣೀಯವಾಗಿವೆ.

 * ಪೋರ್ಟ್‌ಬ್ಲೇರ್ :
ಈ ದ್ವೀಪ ಸಮೂಹದ ರಾಜಧಾನಿ. ಅಂಡಮಾನ್‌ಗೆ ಇದೇ ಹೆಬ್ಬಾಗಿಲು.ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಸುಮಾರು 600 ದ್ವೀಪಗಳಿವೆ. ಇವು ಬಂಗಾಳ ಕೊಲ್ಲಿಯ ಸೀಮೆಗೆ ಬರುತ್ತವೆ.ಇವುಗಳ ವಿಸ್ತೀರ್ಣ ಸುಮಾರು 780 ಚದರಕಿಲೋಮೀಟರ್. ಇದರಲ್ಲಿ ಶೇಕಡ 35ರಷ್ಟು ಭಾಗ ಆದಿವಾಸಿಗಳಿಗೆ ಮೀಸಲಾಗಿದೆ. ಈ ನಡುಗಡ್ಡೆಗಳನ್ನು ಉತ್ತರ , ಮಧ್ಯ ಮತ್ತು ದಕ್ಷಿಣ ಅಂಡಮಾನ್ ಎಂದು ವಿಂಗಡಿಸಿದ್ದು, ಕೇವಲ ಇಪ್ಪತ್ನಾಲ್ಕರಲ್ಲಿ ಮಾತ್ರ (ಅಂಡಮಾನಿನಲ್ಲಿ 11 ಮತ್ತು ನಿಕೋಬಾರಿನಲ್ಲಿ 13) ಜನರು ವಾಸಿಸುತ್ತಿದ್ದಾರೆ. ಈ ದ್ವೀಪಗಳಿಗೆ ಶತಮಾನಗಳ ಕಾಲ ಸಂಪರ್ಕವೇ ಇರಲಿಲ್ಲ.

* ಆಂತ್ರೊಪಾಲಜಿ ಮ್ಯೂಸಿಯಂ :
ಇಲ್ಲಿರುವ ಆಂತ್ರೊಪಾಲಜಿ ಮ್ಯೂಸಿಯಂನಲ್ಲಿ ಆದಿವಾಸಿಗಳ ಜೀವನಶೈಲಿ ಮತ್ತು ಅವರ ಕಲೆ, ಅವರು ಉಪಯೋಗಿಸುವ ವಸ್ತುಗಳ ಬಗ್ಗೆ ತಿಳಿಯಬಹುದು.

* ಸಮುದ್ರಿಕಾ ಮ್ಯೂಸಿಯಂ :
ಸನಿಹದಲ್ಲೇ ಇರುವ ಸಮುದ್ರಿಕಾ ಮ್ಯೂಸಿಯಂನಲ್ಲಿ ನಾನಾ ರೀತಿಯ ಶಂಖಗಳು, ಹವಳಗಳು, ಕಪ್ಪೆಚಿಪ್ಪುಗಳು ನೋಡಲು ಸಿಗುತ್ತವೆ. ಇವು ಖರೀದಿಗೂ ಲಭ್ಯ. ಇಲ್ಲಿ ಮುತ್ತು-ಹವಳಗಳೂ ಇವೆ. ಅತಿ ವಿರಳವಾದ ಶಂಖ ಮತ್ತು ಕಪ್ಪೆ ಚಿಪ್ಪುಗಳನ್ನು ನೋಡಬಹುದು.

 * ಸೆಲ್ಯುಲರ್ ಜೈಲು :
ಇಲ್ಲಿರುವ ಸೆಲ್ಯುಲರ್ ಜೈಲು ಏಷ್ಯಾದಲ್ಲೇ ಅತ್ಯಂತ ದೊಡ್ಡದು. ಇದುಈಗ ರಾಷ್ಟ್ರೀಯ ಸ್ಮಾರಕಗಳಲ್ಲೊಂದಾಗಿದೆ. ಇಲ್ಲಿ ಮ್ಯೂಸಿಯಂ ಕೂಡ ಇದೆ. ಸಂಜೆ ಧ್ವನಿ ಮತ್ತು ಬೆಳಕಿನ ಪ್ರದರ್ಶನ ಇರುತ್ತದೆ. ಬ್ರಿಟೀಷರು ನಮ್ಮ ಧೀರ-ಶೂರ ಸ್ವಾತಂತ್ರ್ಯ ಸೇನಾನಿಗಳನ್ನು ಬಂಧಿಸಿಡುತ್ತಿದ್ದರು. ಇಲ್ಲಿ ಅವರಿಗೆ ಕೊಡುತ್ತಿದ್ದ ಕಷ್ಟಗಳನ್ನೆಲ್ಲ ವಿವರವಾಗಿ ಬಿಚ್ಚಿಡಲಾಗಿದೆ. ಅದನ್ನೆಲ್ಲ ನೋಡಿದರೆ ಮನಸ್ಸು ಮೌನಕ್ಕೆ ಶರಣಾಗುತ್ತದೆ.

 * ಛತ್ತಮ್ ಸಾಮಿಲ್ ಕಟ್ಟಿಗೆ ಮಿಲ್ : ಇಲ್ಲಿರುವ ಛತ್ತಮ್ ಸಾಮಿಲ್ ಏಷ್ಯಾದಲ್ಲೇ ಅತ್ಯಂತ ದೊಡ್ಡ ಮತ್ತು ಹಳೆಯ ಕಟ್ಟಿಗೆ ಮಿಲ್. 1883ರಲ್ಲಿ ಇದು ಬ್ರಿಟಿಷರಿಂದ ಸ್ಥಾಪಿಸಲ್ಪಟ್ಟಿತು. ಇಲ್ಲಿಂದ ದೊಡ್ಡ ದೊಡ್ಡ ಕಟ್ಟಿಗೆಗಳನ್ನು ರಫ್ತು ಮಾಡುತ್ತಾರೆ. ಸ್ವಾತಂತ್ರ್ಯಪೂರ್ವದಲ್ಲಿ ಇಲ್ಲಿಂದ ಪಶ್ಚಿಮ ದೇಶಗಳಿಗೆ ಕಟ್ಟಿಗೆ ರಫ್ತಾಗುತ್ತಿತ್ತು. ಎರಡನೇ ಮಹಾಯುಧ್ಧದ ವೇಳೆ ಜಪಾನೀಯರು ನಡೆಸಿದ ಬಾಂಬ್ ದಾಳಿಯಲ್ಲಿ ಒಂದು ಬಾಂಬ್ ನೇರವಾಗಿ ಇದರ ಮೇಲೇ ಬಿದ್ದು ತುಂಬಾ ಹಾನಿಯಾಯಿತು. 1946ರಲ್ಲಿ ಈ ಸಾಮಿಲ್‌ಗೆ ಮತ್ತೆ ಜೀವ ತುಂಬಲಾಯಿತು. ಇಲ್ಲಿ ಅಂಡಮಾನ್ನಲ್ಲಿಯೇ ಸಿಗುವ 'ಪಡೌಕ' ಎನ್ನುವ ಒಂದು ಜಾತಿಯ ಮರದಿಂದ ಪೀಠೋಪಕರಣಗಳನ್ನು ತಯಾರಿಸುತ್ತಾರೆ.

 * ರಾಸ್ ಐಲ್ಯಾಂಡ್ :
ಇದು ಮೊದಲು ಅಂಡಮಾನ್ ಮತ್ತು ನಿಕೋಬಾರ್‌ನ ರಾಜಧಾನಿಯಾಗಿದ್ದು, ಬ್ರಿಟಿಷರ ಮುಖ್ಯ ಕಚೇರಿಯಾಗಿತ್ತು. ಈಗ ಇದು ಭಾರತದ ನೌಕಾಪಡೆಯ ಅಧೀನದಲ್ಲಿದೆ. ಇಲ್ಲಿನ ಸಮುದ್ರ ತಟದಲ್ಲಿರುವ ಎತ್ತರದ ತೆಂಗಿನ ಮರಗಳು, ಪುರಾತನ ಕಟ್ಟಡಗಳು, ಜಿಂಕೆಮರಿಗಳು ನಯನ ಮನೋಹರವಾಗಿವೆ.

* ವೈಪರ್ ಐಲ್ಯಾಂಡ್ (ಮಹಿಳಾಜೈಲು) : ಇದರ ವಿಶೇಷತೆ ಎಂದರೆ, ಇದು ಗೋಡೆಗಳಿಲ್ಲದ ಬಂದೀಖಾನೆ! ಇದನ್ನು ಸೆಲ್ಯುಲರ್ ಜೈಲಿಗಿಂತ ಮೊದಲು ನಮ್ಮ ಸ್ವಾತಂತ್ರಯೋಧರನ್ನು ಬಂಧಿಸಿಡಲು -ಮುಖ್ಯವಾಗಿ ಮಹಿಳಾಕೈದಿಗಳನ್ನು ಬಂಧಿಸಿಡಲು- ಉಪಯೋಗಿಸುತ್ತಿದ್ದರು. ಇದಕ್ಕೆ ಮಹಿಳಾಜೈಲು ಎಂದೂ ಕರೆಯಲಾಗುತ್ತದೆ. ಇಲ್ಲಿ ಕೈದಿಗಳ ಕೈ-ಕಾಲು ಗಳಿಗೆ ಕೋಳ ಹಾಕಿ ಬಿಡಲಾಗುತ್ತಿತ್ತು. ಇಲ್ಲಿಂದ ತಪ್ಪಿಸಿಕೊಂಡು ಹೋಗಲು ಯಾರಿಗೂ ಸಾಧ್ಯವಾಗುತ್ತಿರಲಿಲ್ಲ.

* ಹ್ಯಾವ್‌ಲಾಕ್ ಐಲ್ಯಾಂಡ್ :
ಇದು ಬಂಗಾರದ ಬಣ್ಣದ ಮರಳಿಗೆ ಮತ್ತು ನೀಲಿ ಬಣ್ಣದ ನೀರಿಗೆ ಪ್ರಸಿಧ್ಧವಾಗಿದೆ. ಇಲ್ಲಿನ ಬೀಚ್‌ಗಳು ತಿಳಿನೀರಿನಿಂದ ಕೂಡಿದ್ಜು, ಸುತ್ತಲೂ ಕಾಣುವ ನೀಲಿ ನೀರು, ಅದನ್ನು ಆವರಿಸಿರುವ ದಟ್ಟ ಕಾಡುಗಳ ಸೌಂದರ್ಯ ದ್ವೀಪದ ಮೆರಗನ್ನು ಹೆಚ್ಚಿಸಿವೆ. ಇಲ್ಲಿನ ಇನ್ನೊಂದು ವಿಶೇಷವೆಂದರೆ ಸಮುದ್ರ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ತನ್ನ ಬಣ್ಣವನ್ನು ಬದಲಿಸುತ್ತದೆ. ಇದು ಅವಿಸ್ಮರಣೀಯ ಅನುಭವ.

 * ಬಾರಾತಾಂಗ್ ಐಲ್ಯಾಂಡ್ :
ಇದು ದಕ್ಷಿಣ ಮತ್ತು ಮಧ್ಯ ಅಂಡಮಾನ್ ನಡುವೆ ಇದೆ. ಇಲ್ಲಿನ ಸುಣ್ಣಕಲ್ಲುಗಳಗುಹೆ ಮತ್ತು ಮಣ್ಣಿನ ಜ್ವಾಲಾಮುಖಿಗಳು ಪ್ರಸಿದ್ಧ. ಇದಕ್ಕೆ ದಟ್ಟ ಕಾಡಿನ ಮಧ್ಯ ಪ್ರಯಾಣಿಸಬೇಕಾಗುತ್ತದೆ. ಪೋರ್ಟ್‌ಬ್ಲೇರ್‌ನಿಂದ 100ಕಿ.ಮೀ. ದೂರದಲ್ಲಿದ್ದು, ಜರಾವಾ ಬುಡಕಟ್ಟು ಜನಾಂಗದವರು ವಾಸಿಸುತ್ತಾರೆ. ಇದು ಪ್ರಕೃತಿದತ್ತವಾದ ಗುಹೆ.

* ಪೋರ್ಟ್‌ಬ್ಲೇರ್ :
ಭಾರತೀಯ ಸಂಪ್ರದಾಯದಿಂದ ಕೂಡಿದ ಚಿಕ್ಕ ನಗರವಾಗಿದೆ. ಇಲ್ಲಿ ನಿಜವಾದ ಸಾಮಾಜಿಕ ವೈವಿಧ್ಯವಿದೆ. ಈ ಊರಿನ ಇತಿಹಾಸದಲ್ಲಿ ಯಾವತ್ತೂ ಮತೀಯ ಗಲಭೆಗಳಾಗಿಲ್ಲ. ಎಲ್ಲಾ ಧರ್ಮೀಯರೂ ಜತೆಗೂಡಿ ಎಲ್ಲಾ ಹಬ್ಬಗಳನ್ನೂ ಆಚರಿಸುತ್ತಾರೆ.ಇಲ್ಲಿನ ಕಿಂಗ್ ಎಳನೀರು ತುಂಬಾ ಪ್ರಸಿದ್ಧ. ಇಲ್ಲಿನ ಊಟದಲ್ಲಿ ಮೀನು ಮತ್ತಿತರ ಸಮುದ್ರಾಹಾರಗಳು ಪ್ರಮುಖ.

 * ಇಲ್ಲಿ ನೋಡತಕ್ಕ ಸ್ಥಳಗಳೆಂದರೆ ಮಹಾತ್ಮ ಗಾಂಧಿ ಮೆರೀನ್ ನ್ಯಾಷನಲ್ ಪಾರ್ಕ್, ಸೆಲ್ಯುಲರ್ ಜೈಲು, ಮತ್ಸ್ಯಾಗಾರ, ಸಮುದ್ರಿಕಾ ನೌಕಾ ಮ್ಯೂಸಿಯಂ, ಆಂತ್ರೊಪಾಲಜಿ ಮ್ಯೂಸಿಯಂ ಮತ್ತು ಖಾದಿ ಗ್ರಾಮೋದ್ಯೋಗ ಭವನ.
(ಮೂಲ : ವಿಜಯ ಕರ್ನಾಟಕ ಪತ್ರಿಕೆ)

No comments:

Post a Comment