"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್
Showing posts with label ವಿಶ್ವಸಂಸ್ಥೆಯ ಜಾಗತಿಕ ಹವಾಮಾನ ಬದಲಾವಣೆ ಸಮ್ಮೇಳನ. Show all posts
Showing posts with label ವಿಶ್ವಸಂಸ್ಥೆಯ ಜಾಗತಿಕ ಹವಾಮಾನ ಬದಲಾವಣೆ ಸಮ್ಮೇಳನ. Show all posts

Wednesday, 3 November 2021

•► COP26 / ಗ್ಲಾಸ್ಗೋ ಸಮಾವೇಶ / ವಿಶ್ವಸಂಸ್ಥೆಯ ಜಾಗತಿಕ ಹವಾಮಾನ ಬದಲಾವಣೆ ಸಮ್ಮೇಳನ (UNFCCC): (COP26 / Glasgow Conference / (UNFCCC) United Nations Global Climate Change Conference)

 •► COP26 / ಗ್ಲಾಸ್ಗೋ ಸಮಾವೇಶ / ವಿಶ್ವಸಂಸ್ಥೆಯ ಜಾಗತಿಕ ಹವಾಮಾನ ಬದಲಾವಣೆ ಸಮ್ಮೇಳನ  (UNFCCC):
(COP26 / Glasgow Conference / (UNFCCC) United Nations Global Climate Change Conference)

━━━━━━━━━━━━━━━━━━━━━━━━━━━━━━━━━━
ಜಾಗತಿಕ ಸರಾಸರಿ ತಾಪಮಾನ ಏರಿಕೆಯನ್ನು ಹವಾಮಾನ ಬದಲಾವಣೆ, ಹವಾಮಾನ ವೈಪರೀತ್ಯ ಎಂದೆಲ್ಲಾ ಕರೆಯಲಾಗುತ್ತದೆ. ಜಾಗತಿಕ ತಾಪಮಾನ ಏರಿಕೆಯನ್ನು ತಡೆಗಟ್ಟುವ ಸಲುವಾಗಿ ವಿಶ್ವ ಸಂಸ್ಥೆಯ ನೇತೃತ್ವದಲ್ಲಿ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳು ಒಂದೆಡೆ ಕೂತು, ಸಮಾಲೋಚನೆ ನಡೆಸುವುದೇ ‘ಕಾನ್ಫರೆನ್ಸ್ ಆಫ್ ಪಾರ್ಟೀಸ್‌-ಸಿಒಪಿ’. ವಿಶ್ವ ಸಂಸ್ಥೆಯು ಇಂತಹ ಸಮಾವೇ‍ಶಗಳನ್ನು ನಡೆಸಿಕೊಂಡು ಬಂದಿತ್ತಾದರೂ, ಇದಕ್ಕೊಂದು ವ್ಯವಸ್ಥಿತ ರೂಪ ನೀಡಿದ್ದು 1995ರಲ್ಲಿ.


1995ರಲ್ಲಿ ಸಿಒಪಿಯನ್ನು ರಚಿಸಲಾಯಿತು. ಜರ್ಮನಿಯ ಬರ್ಲಿನ್‌ನಲ್ಲಿ 1995ರ ಮಾರ್ಚ್ 28ರಿಂದ ಏಪ್ರಿಲ್‌ 7ರವರೆಗೆ ಈ ಸಮಾವೇಶ ನಡೆಯಿತು. 2020ರ ವೇಳೆಗೆ ಜಾಗತಿಕ ತಾಪಮಾನ ಏರಿಕೆಯನ್ನು ಸಂಪೂರ್ಣ ನಿಯಂತ್ರಣಕ್ಕೆ ತರುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ವಾಹನಗಳಿಂದಾಗುವ ವಾಯುಮಾಲಿನ್ಯ ಮತ್ತು ಕೈಗಾರಿಕೆಗಳಿಂದಾಗುವ ವಾಯುಮಾಲಿನ್ಯವನ್ನು ಕಡಿಮೆ ಮಾಡುವುದು ಮತ್ತು ಆ ಮೂಲಕ ಜಾಗತಿಕ ತಾಪಮಾನವನ್ನು ನಿಯಂತ್ರಿಸುವುದು ಈ ಸಮಾವೇಶದ ಪ್ರಮುಖ ಗುರಿಗಳಲ್ಲಿ ಒಂದಾಗಿತ್ತು.

ಗ್ಲಾಸ್ಗೋ ಸಮಾವೇಶ (COP26) —

l ಇಟಲಿ ಸಹಭಾಗಿತ್ವದಲ್ಲಿ, ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಹವಾಮಾನ ಬದಲಾವಣೆ ಸಂಬಂಧಿತ ಶೃಂಗಸಭೆಯು ಅ.31ರಿಂದ ಆರಂಭವಾಗಿದ್ದು, ನ.12ರವರೆಗೆ ನಡೆಯಲಿದೆ

l ಯುಎನ್‌ಎಫ್‌ಸಿಸಿಸಿ (UNFCCC) ಎಂಬುದು ಹವಾಮಾನ ಬದಲಾವಣೆಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಸಂರಚನಾ ಸಮಾವೇಶ. 1994ರಲ್ಲಿ ಅಸ್ತಿತ್ವಕ್ಕೆ ಬಂದ ಯುಎನ್‌ಎಫ್‌ಸಿಸಿಸಿ, ಭಾರತ, ಅಮೆರಿಕ, ಫ್ರಾನ್ಸ್‌, ಇಟಲಿ ಸೇರಿದಂತೆ 197 ರಾಷ್ಟ್ರಗಳ ಸದಸ್ಯತ್ವ ಹೊಂದಿದೆ

l 2020 ನವೆಂಬರ್‌ನಲ್ಲಿ ನಡೆಯಬೇಕಿದ್ದ ಈ ಸಮಾವೇಶವು ಕೋವಿಡ್‌–19 ಸಾಂಕ್ರಾಮಿಕದ ಕಾರಣದಿಂದ ತಡವಾಗಿದೆ

l ಸದಸ್ಯ ರಾಷ್ಟ್ರಗಳು, ಭೂಮಿಯ ತಾಪಮಾನ ಏರಿಕೆಯನ್ನು ನಿಧಾನಗೊಳಿಸಬೇಕು ಹಾಗೂ ಹಸಿರುಮನೆ ಅನಿಲಗಳ (ಇಂಗಾಲದ ಡೈ ಆಕ್ಸೈಡ್‌, ಕ್ಲೋರೊಫೊರೊ ಕಾರ್ಬನ್‌ನಂಥ ಅನಿಲಗಳು) ಹೊರಸೂಸುವಿಕೆಯನ್ನು ನಿಯಂತ್ರಿಸಬೇಕು ಎಂಬುದು ಇದರ ಕಾರ್ಯಸೂಚಿ

l ಜಾಗತಿಕ ತಾಪಮಾನವು, 2030ರ ವೇಳೆಗೆ ಕೈಗಾರಿಕಾಪೂರ್ವ ಮಟ್ಟಕ್ಕಿಂತ 1.5 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ಮಿತಿಯನ್ನು ದಾಟಬಾರದು ಹಾಗೂ 2050ರ ವೇಳೆಗೆ ಜಗತ್ತಿನಾದ್ಯಂತ ಹಸಿರುಮನೆಗಳ ಅನಿಲಗಳ ಹೊರಸೂಸುವಿಕೆಯು ಸ್ಥಗಿತ (ನೆಟ್‌ ಝೀರೊ) ಆಗಬೇಕು ಎಂಬುದು ಪ್ರಮುಖ ಗುರಿ

l ಈ ಗುರಿ ತಲುಪುವಲ್ಲಿ, ಅರಣ್ಯ ಬೆಳೆಸುವುದು ಸೇರಿದಂತೆ ನೈಸರ್ಗಿಕ ಪರಿಹಾರೋಪಾಯಗಳನ್ನು ಕಂಡುಕೊಳ್ಳುವುದು, ಬ್ಯಾಟರಿಚಾಲಿತ ವಾಹನಗಳ ಬಳಕೆ ಹಾಗೂ ಮರುಬಳಕೆ ಕ್ಷೇತ್ರದಲ್ಲಿ ಹೂಡಿಕೆಗೆ ಉತ್ತೇಜನ ನೀಡುವುದು ಪ್ರಮುಖ ಆದ್ಯತೆಯಾಗಿದೆ

l ನೈಸರ್ಗಿಕ ಆವಾಸಸ್ಥಾನ–ಸಮುದಾಯಗಳನ್ನು ಸಂರಕ್ಷಿಸುವ ಕ್ರಮಕ್ಕೆ ಮುಂದಾಗುವುದು

l 2015ರ ಪ್ಯಾರಿಸ್‌ ಶೃಂಗಸಭೆಯ ಒಪ್ಪಂದಕ್ಕೆ ಬದ್ಧತೆ ವ್ಯಕ್ತಪಡಿಸಿದ್ದ ದೇಶಗಳು, ಆ ದಿಸೆಯಲ್ಲಿ ಕೈಗೊಂಡ ಉಪಕ್ರಮಗಳೇನು? ಗುರಿ ಸಾಧನೆಯಲ್ಲಿನ ಪ್ರಗತಿಯನ್ನು ವಿವರಿಸಲು ಹಾಗೂ ಮುಂದಿನ ದಿನಗಳಲ್ಲಿ ಹಾಕಿಕೊಳ್ಳುವ ಗುರಿಯ ಬಗ್ಗೆ ಬದ್ಧತೆಯನ್ನು ವ್ಯಕ್ತಪಡಿಸಲು ಸದಸ್ಯ ರಾಷ್ಟ್ರಗಳಿಗೆ ಸಮಾವೇಶ ಅವಕಾಶ ಒದಗಿಸಿದೆ

l ಭೂಮಿಯ ಭವಿಷ್ಯಕ್ಕಾಗಿ ಹಾಗೂ ಗುರಿ ಸಾಧನೆಗಾಗಿ ಹೆಚ್ಚು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಹಾಗೂ ಈ ದಿಸೆಯಲ್ಲಿ ಅಭಿವೃದ್ಧಿ ಹೊಂದಿದ ದೇಶಗಳು, ಬಡ ಹಾಗೂ ಅಭಿವೃದ್ಧಿ ಶೀಲ ರಾಷ್ಟ್ರಗಳಿಗೆ ನೆರವಾಗುವಂಥ  ದೃಢವಾದ ಕಾರ್ಯಯೋಜನೆಗಳನ್ನು ರೂಪಿಸುವುದು ಹಾಗೂ ಜಾಗತಿಕ ಒಗ್ಗಟ್ಟು ಪ್ರದರ್ಶಿಸುವುದು ಸಮಾವೇಶದ ಕಾರ್ಯಸೂಚಿಯಲ್ಲಿ ಸೇರಿದೆ.
(ಕೃಪೆ : ಪ್ರಜಾವಾಣಿ)