"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday 5 February 2016

☀️ ಝಿಕಾ ವೈರಸ್ ರೋಗ : ಒಂದು ಅವಲೋಕನ. (Disease of Zika Virus : An Overview)

☀️ ಝಿಕಾ ವೈರಸ್ ರೋಗ : ಒಂದು ಅವಲೋಕನ.
(Disease of Zika Virus : An Overview)
━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ವಿಜ್ಞಾನ
(General Science)

☀️ಝಿಕಾ ವೈರಸ್ ರೋಗ ಏನು?
ಝಿಕಾ ಎಂಬ ರೋಗವು ಝಿಕಾ ವೈರಸ್‍ನಿಂದ ಬರುತ್ತದೆ. ಇದು ಮೂಲಭೂತವಾಗಿ ಝಿಕಾ ಸೋಂಕು ತಗುಲಿದ ಈಡಿಸ್ ಸೊಳ್ಳೆಗಳ ಕಡಿತದ ಮೂಲಕ ಹರಡುತ್ತದೆ. ಝಿಕಾ ರೋಗದ ಮುಖ್ಯ ಗುಣಲಕ್ಷಣಗಳೆಂದರೆ, ಜ್ವರ, ಗುಳ್ಳೆಗಳು, ಗಂಟು ನೋವು ಹಾಗೂ ಕೆಂಗಣ್ಣು. ಇದರ ಲಕ್ಷಣಗಳು ಮಂದವಾಗಿ ಕಂಡುಬಂದರೂ ಹಲವು ದಿನಗಳವರೆಗೆ ಅಥವಾ ಹಲವು ವಾರಗಳ ವರೆಗೂ ಇರಬಹುದು.

ಝಿಕಾದಿಂದ ಸೋಂಕು ತಗುಲಿದ ಪ್ರತಿ ಐವರಲ್ಲಿ ಒಬ್ಬರು ರೋಗಕ್ಕೆ ತುತ್ತಾಗುತ್ತಾರೆ. ಈ ರೋಗಕ್ಕೆ ತುತ್ತಾದವರಿಗೆ ರೋಗಲಕ್ಷಣ ಕೂಡಾ ತೀರಾ ಗಂಭೀರವಾಗಿರುವುದಿಲ್ಲ. ಈ ಕಾರಣದಿಂದ ಝಿಕಾ ಸೋಂಕು ತಗುಲಿರುವ ಬಹುತೇಕ ಮಂದಿಗೆ ತಾವು ರೋಗಪೀಡಿತರಾಗಿರುವ ಬಗ್ಗೆ ತಿಳಿವಳಿಕೆಯೇ ಇರುವುದಿಲ್ಲ.

ಝಿಕಾ ರೋಗದ ಮುಖ್ಯ ಗುಣಲಕ್ಷಣಗಳೆಂದರೆ, ಜ್ವರ, ಗುಳ್ಳೆಗಳು, ಗಂಟು ನೋವು ಹಾಗೂ ಕೆಂಗಣ್ಣು. ಸೋಂಕುಪೀಡಿತ ಸೊಳ್ಳೆ ಕಚ್ಚಿದ ಎರಡರಿಂದ ಏಳು ದಿನಗಳ ಬಳಿಕ ಇದರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.


☀️ಝಿಕಾ ಹೇಗೆ ಹರಡುತ್ತದೆ?
ಝಿಕಾ ಮೂಲಭೂತವಾಗಿ ಸೋಂಕು ತಗುಲಿದ ಈಡಿಸ್ ಸೊಳ್ಳೆಗಳ ಮೂಲಕ ಹರಡುತ್ತದೆ. ಸೋಂಕಿಗೆ ಒಳಗಾದ ಸೊಳ್ಳೆಗಳು ಕಡಿದಾಗ ಅದು ಮನುಷ್ಯನಿಗೆ ವರ್ಗಾವಣೆಯಾಗುತ್ತದೆ. ಡೆಂಗೆ ಹಾಗೂ ಚಿಕೂನ್‍ಗುನ್ಯ ಹರಡುವ ಸೊಳ್ಳೆಯೇ ಈ ವೈರಸ್‍ಗಳನ್ನು ಕೂಡಾ ಹಬ್ಬಿಸುತ್ತದೆ. ಈ ಸೊಳ್ಳೆಗಳು ರಾತ್ರಿಗಿಂತ ಹೆಚ್ಚಾಗಿ ಹಗಲಿನ ವೇಳೆಯಲ್ಲಿ ಕಡಿಯುತ್ತವೆ. ಈಗಾಗಲೇ ವೈರಸ್ ಸೋಂಕಿಗೆ ಒಳಗಾಗಿರುವ ಮನುಷ್ಯನನ್ನು ಕಡಿದ ಬಳಿಕ ಆ ಸೊಳ್ಳೆಗೂ ಸೋಂಕು ತಗುಲುತ್ತದೆ. ಬಳಿಕ ಈ ಸೊಳ್ಳೆಗಳು ಆರೋಗ್ಯವಂತ ವ್ಯಕ್ತಿಗೆ ಕಡಿದಾಗ ಆತನಿಗೂ ಸೋಂಕು ಹರಡುತ್ತದೆ. ಈ ಸೋಂಕು ಗರ್ಭಿಣಿ ತಾಯಿಯಿಂದ ಮಗುವಿಗೆ ಕೂಡಾ ಗರ್ಭದಲ್ಲೇ ಹರಡುತ್ತದೆ. ಅಥವಾ ಹುಟ್ಟುವ ವೇಳೆಗೆ ಮಗು ಈ ಸೋಂಕಿಗೆ ತುತ್ತಾಗಬಹುದು.


☀️ಯಾರು ಸೋಂಕಿಗೆ ಒಳಗಾಗುವ ಸಾಧ್ಯತೆ ಅಧಿಕ?
ಝಿಕಾ ಸೋಂಕು ಇರುವ ಪ್ರದೇಶದಲ್ಲಿ ವಾಸಿಸುವ ಅಥವಾ ಅಲ್ಲಿ ಪ್ರಯಾಣ ಬೆಳೆಸುವ ಯಾವುದೇ ಆರೋಗ್ಯವಂತ ವ್ಯಕ್ತಿಗೆ ಇದು ತಗುಲುವ ಸಾಧ್ಯತೆ ಇರುತ್ತದೆ. ಅದರಲ್ಲೂ ಗರ್ಭಿಣಿ ಮಹಿಳೆಯರಿಗೆ ಈ ಸಾಧ್ಯತೆ ಅಧಿಕ.


☀️ಝಿಕಾ ವೈರಸ್ ಎಲ್ಲಿ ಪತ್ತೆಯಾಗಿದೆ?
* 2015ಕ್ಕೆ ಮುನ್ನ ಝಿಕಾ ವೈರಸ್ ಸೋಂಕು ಆಫ್ರಿಕಾದ ಹಲವು ಪ್ರದೇಶಗಳಲ್ಲಿ, ಆಗ್ನೇಯ ಏಷ್ಯಾ ದೇಶಗಳಲ್ಲಿ ಹಾಗೂ ಫೆಸಿಫಿಕ್ ದ್ವೀಪಗಳಲ್ಲಿ ಪತ್ತೆಯಾಗಿತ್ತು.
* 2015ರ ಮೇ ತಿಂಗಳಲ್ಲಿ ಪಾನ್ ಅಮೆರಿಕನ್ ಹೆಲ್ತ್ ಆರ್ಗನೈಸೇಷನ್ ಬ್ರೆಜಿಲ್‍ನಲ್ಲಿ ಮೊಟ್ಟಮೊದಲ ಝಿಕಾ ಸೋಂಕು ಪತ್ತೆಯಾದ ಬಳಿಕ ಕಟ್ಟೆಚ್ಚರ ವಿಧಿಸಿತ್ತು.
* ಇದೀಗ ಹಲವು ದೇಶಗಳಲ್ಲಿ ಝಿಕಾ ವೈರಸ್ ಪ್ರಕರಣಗಳು ಪತ್ತೆಯಾಗುತ್ತಿವೆ.
* ಝಿಕಾ ವೈರಸ್ ಮತ್ತಷ್ಟು ಹರಡುವ ಸಾಧ್ಯತೆ ಇದ್ದು, ಮುಂದಿನ ದಿನಗಳಲ್ಲಿ ಎಷ್ಟು ವ್ಯಾಪಕವಾಗಿ ಹರಡಬಹುದು ಎನ್ನುವುದನ್ನು ಈಗಲೇ ನಿರ್ಧರಿಸುವುದು ಕಷ್ಟ. ಝಿಕಾ ಸೋಂಕಿನ ದೇಶಗಳು ಹಾಗೂ ಪ್ರದೇಶಗಳ ಬಗ್ಗೆ ನಿರ್ಧರಿಸುವುದು ಕಷ್ಟ.


☀️ಝಿಕಾ ಸೋಂಕು ತಡೆ ಹೇಗೆ?
ಝಿಕಾ ನಿಯಂತ್ರಿಸುವ ಯಾವುದೇ ಲಸಿಕೆ ಸದ್ಯಕ್ಕಿಲ್ಲ. ಆದ್ದರಿಂದ ಇದನ್ನು ತಡೆಯುವ ಉತ್ತಮ ವಿಧಾನವೆಂದರೆ ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳುವುದು. ನೀವು ಹಾಗೂ ನಿಮ್ಮ ಕುಟುಂಬವನ್ನು ಸೊಳ್ಳೆಕಡಿತದಿಂದ ರಕ್ಷಿಸಿಕೊಳ್ಳಬಹುದಾದ ಕೆಲ ವಿಧಾನಗಳು ಇಲ್ಲಿವೆ.
* ಉದ್ದ ತೋಳಿನ ಅಂಗಿ ಹಾಗೂ ಪೂರ್ಣ ಪ್ಯಾಂಟ್‍ಗಳನ್ನು ಧರಿಸಿ.
* ಹವಾನಿಯಂತ್ರಿತ ಪ್ರದೇಶಗಳಲ್ಲಿ ಇರಲು ಪ್ರಯತ್ನಿಸಿ ಹಾಗೂ ಕಿಟಕಿ, ಬಾಗಿಲುಗಳನ್ನು ಭದ್ರಪಡಿಸಿ, ಸೊಳ್ಳೆಗಳು ಒಳಕ್ಕೆ ಪ್ರವೇಶಿಸದಂತೆ ಎಚ್ಚರ ವಹಿಸಿ.
* ಅಂತರರಾಷ್ಟ್ರೀಯ ಸುರಕ್ಷತಾ ಏಜೆನ್ಸಿಯಲ್ಲಿ ನೊಂದಣಿಯಾಗಿರುವ ಸೊಳ್ಳೆ ನಿಯಂತ್ರಕಗಳನ್ನು ಬಳಸಿ.
* ಸೊಳ್ಳೆಪರದೆಗಳ ಸುರಕ್ಷೆಯಲ್ಲೇ ನಿದ್ದೆ ಮಾಡಿ.


☀️ಇದು ಹೊಸ ವೈರಸ್?
ಅಲ್ಲ. ಆಫ್ರಿಕಾ, ಆಗ್ನೇಯ ಏಷ್ಯಾ ಹಾಗೂ ಫೆಸಿಫಿಕ್ ದ್ವೀಪ ಪ್ರದೇಶದಲ್ಲಿ ಝಿಕಾ ವೈರಸ್ ಹಿಂದೆಯೂ ಪತ್ತೆಯಾಗಿತ್ತು. ಝಿಕಾ ವೈರಸ್ ಹೊಸ ಪ್ರದೇಶಗಳಿಗೆ ಹರಡುವ ಸಾಧ್ಯತೆ ಇರುತ್ತದೆ. 2015ರ ಮೇ ತಿಂಗಳಲ್ಲಿ ಪಾನ್ ಅಮೆರಿಕನ್ ಹೆಲ್ತ್ ಆರ್ಗನೈಸೇಷನ್ ಬ್ರೆಜಿಲ್‍ನಲ್ಲಿ ಮೊಟ್ಟಮೊದಲ ಝಿಕಾ ಸೋಂಕು ಪತ್ತೆಯಾದ ಬಳಿಕ ಕಟ್ಟೆಚ್ಚರ ವಿಧಿಸಿತ್ತು.


☀️ಭಾರತದ ಪೂರ್ವಸಿದ್ಧತೆ
ಝಿಕಾ ವೈರಸ್ ಸೋಂಕಿನಿಂದ ಪೀಡಿತವಾಗಿರುವ ದೇಶಗಳಿಂದ ಬರುವ ಜನರಿಗೆ ಭಾರತ ಕಟ್ಟುನಿಟ್ಟಿನ ತಪಾಸಣೆ ಕ್ರಮವನ್ನು ಕೈಗೊಳ್ಳುತ್ತಿದೆ. ಎಲ್ಲ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸೊಳ್ಳೆಯಿಂದ ಹರಡುವ ವೈರಸ್ ಹರಡದಂತೆ ಎಚ್ಚರ ವಹಿಸಲಿದೆ.

ಇತ್ತೀಚೆಗೆ ಕೇಂದ್ರ ಹಾಗೂ ಕರ್ನಾಟಕ ಸರ್ಕಾರಗಳು ವಿಶ್ವ ಆರೋಗ್ಯ ಸಂಸ್ಥೆಗೆ ತಪಾಸಣಾ ಕಿಟ್‍ಗಳನ್ನು ಸರಬರಾಜು ಮಾಡುವಂತೆ ಮನವಿ ಸಲ್ಲಿಸಿವೆ.


☀️ಮುಂಜಾಗ್ರತಾ ಕ್ರಮಗಳು:
ಭಾರತಕ್ಕೆ ದೊಡ್ಡ ಸಂಖ್ಯೆಯ ವಿದೇಶಿ ಪ್ರವಾಸಿಗರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಕೂಡಾ ಇದು ಹರಡುವ ಎಲ್ಲ ಲಕ್ಷಣಗಳಿವೆ. ಝಿಕಾ ವೈರಸ್ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಲು ಕೇಂದ್ರ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಜತೆ ತಜ್ಞರು ಸಂಪರ್ಕದಲ್ಲಿದ್ದಾರೆ. ಜನಾರೋಗ್ಯದ ಮೇಲೆ ಇದರ ಪರಿಣಾಮ ಹಾಗೂ ಅದನ್ನು ತಪಾಸಣೆ ಮಾಡುವ ವಿಧಾನಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳುತ್ತಿದ್ದಾರೆ.

ಈಗಾಗಲೇ ನವದೆಹಲಿ, ಮುಂಬೈ ಹಾಗೂ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಇದರ ತಫಾಸಣೆಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಇದು ಹರಡದಂತೆ ತಡೆಯಲು ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ.

ಕೇಂದ್ರದ ಆರೋಗ್ಯ ಸಚಿವಾಲಯ ಕೂಡಾ ಝಿಕಾ ವೈರಸ್ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದು, ಇದು ಹರಡುವ ಬಗ್ಗೆ ಮಾಹಿತಿ ಸಂಗ್ರಹಿಸಲು ಹಾಗೂ ತಪಾಸಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರವನ್ನು ನೋಡಲ್ ಏಜೆನ್ಸಿಯಾಗಿ ನೇಮಕ ಮಾಡಿದೆ.

ಇದು ಹಾಲಿ ಇರುವವರಿಗೆ ಮಾತ್ರವಲ್ಲದೇ ಮುಂದಿನ ಪೀಳಿಗೆಯ ಭವಿಷ್ಯಕ್ಕೂ ಮಾರಕವಾಗಲಿದ್ದು, ಗರ್ಭಿಣಿಯರ ಮೂಲಕ ಮಕ್ಕಳಿಗೆ ಹರಡುವ ಕಾರಣದಿಂದ ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಳವಳಕ್ಕೆ ಕಾರಣವಾಗಿದೆ.

No comments:

Post a Comment