"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday 5 February 2016

☀️ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಅತ್ಯಂತ ಸುಧೀರ್ಘ ಅವಧಿಯವರೆಗೆ ಇದ್ದ ಐದು ನಿದರ್ಶನಗಳು : (The Major Instances of imposed President Rule in India for a Long term)

☀️ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಅತ್ಯಂತ ಸುಧೀರ್ಘ ಅವಧಿಯವರೆಗೆ ಇದ್ದ ಐದು ನಿದರ್ಶನಗಳು :
(The Major Instances of imposed President Rule in India for a Long term)
━━━━━━━━━━━━━━━━━━━━━━━━━━━━━━━━━━━━━━━━━━━━━
★ಭಾರತದ ಸಂವಿಧಾನ ಮತ್ತು ರಾಜಕೀಯ
(Constitution of India and Polity)


1. ಜಮ್ಮು ಕಾಶ್ಮೀರ
★ರಾಷ್ಟ್ರಪತಿ ಆಳ್ವಿಕೆಯ ಅವಧಿ: 6 ವರ್ಷ ಹಾಗೂ 264 ದಿನಗಳು. 1990ರ ಜನವರಿ 19ರಿಂದ 1996ರ ಅಕ್ಟೋಬರ್ 9ರವರೆಗೆ.
★ಕಾರಣ: ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜಕೀಯ ವಾತಾರವಣ ಸದಾ ಆತಂಕದ ಸ್ಥಿತಿಯಲ್ಲಿರುತ್ತದೆ. ಸ್ವಾತಂತ್ರ್ಯದ ಬಳಿಕ ಈ ರಾಜ್ಯ ಸದಾ ಚೀನಾ ಹಾಗೂ ಪಾಕಿಸ್ತಾನದಿಂದ ಅತಿಕ್ರಮಣ ಭೀತಿಯನ್ನು ಎದುರಿಸುತ್ತಲೇ ಬಂದಿದೆ. 1990ರಲ್ಲಿ, ಈ ಉತ್ತರ ರಾಜ್ಯದಲ್ಲಿ ರಾಜಕೀಯ ವಾತಾವರಣ ವಿಕೋಪಕ್ಕೆ ತಿರುಗಿತು. ಪಾಕಿಸ್ತಾನದಿಂದ ಸೇನಾ ಆಕ್ರಮಣದ ಅಪಾಯವನ್ನು ಮನಗಂಡ ಕೇಂದ್ರ ಸರ್ಕಾರ ಅದನ್ನು ತಡೆಯುವ ಪ್ರಯತ್ನವಾಗಿ ಸಶಸ್ತ್ರ ಪಡೆಗಳ ಕಾಯ್ದೆಯನ್ನು ಜಾರಿಗೊಳಿಸಿತು. ಈ ಹಿನ್ನೆಲೆಯಲ್ಲಿ ರಾಜ್ಯ ಆರು ವರ್ಷಗಳ ರಾಷ್ಟ್ರಪತಿ ಆಡಳಿತವನ್ನು ಅನುಭವಿಸಬೇಕಾಯಿತು. ಇದೇ ವೇಳೆ ಈ ರಾಜ್ಯ ಭಾರತದ ಸಂವಿಧಾನದ 370ನೇ ವಿಧಿ ಅನ್ವಯ ವಿಶೇಷ ಸ್ವಾಯತ್ತತೆಯನ್ನೂ ಅನುಭವಿಸಿತು.


2. ಪಂಜಾಬ್
★ರಾಷ್ಟ್ರಪತಿ ಆಳ್ವಿಕೆಯ ಅವಧಿ: 4 ವರ್ಷ 259 ದಿನಗಳು. 1987ರ ಜೂನ್ 11ರಿಂದ 1992ರ ಫೆಬ್ರುವರಿ 25ರವರೆಗೆ.
★ಕಾರಣ: ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಹತ್ಯೆ ಬಳಿಕ, ರಾಜ್ಯದಲ್ಲಿ ಉಗ್ರಗಾಮಿ ಹಾಗೂ ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ದೊಡ್ಡ ಪ್ರಹಾರವನ್ನೇ ಮಾಡಿತು. 1987ರಲ್ಲಿ 34 ಮಂದಿ ಹಿಂದೂ ಬಸ್ ಪ್ರಯಾಣಿಕರನ್ನು ಸಾಮೂಹಿಕವಾಗಿ ಹತ್ಯೆ ಮಾಡಿದ ಬಳಿಕ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲಾಯಿತು. ಪಂಜಾಬ್ ಹಗೂ ಹರ್ಯಾಣಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಖಲಿಸ್ತಾನ ಕಮಾಂಡೊ ಫೋರ್ಸ್ ಎಂಬ ಉಗ್ರ ಸಂಘಟನೆಯ ಈ ಕೃತ್ಯವನ್ನು ಹತ್ತಿಕ್ಕುವ ಸಲುವಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಯಿತು.


3. ಪುದುಚೇರಿ
★ರಾಷ್ಟ್ರಪತಿ ಆಳ್ವಿಕೆಯ ಅವಧಿ: 3 ವರ್ಷ 96 ದಿನಗಳು (1974ರ ಮಾರ್ಚ್ 28ರಿಂದ 1977ರ ಜುಲೈ ಎರಡರವರೆಗೆ)
★ಕಾರಣ: ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಹಾಗೂ ಸಂಸ್ಥಾ ಕಾಂಗ್ರೆಸ್ ಮೈತ್ರಿಕೂಟದ ರಾಜ್ಯ ಸರ್ಕಾರ ಪತನವಾದ ಬಳಿಕ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಲಾಯಿತು. ಕಾಂಗ್ರೆಸ್ ರಿಕ್ವಿಸಿಷನ್ ಪಾರ್ಟಿ ಹಾಗೂ ದ್ರಾವಿಡ ಮುನ್ನೇತ್ರ ಕಳಗಂ ಜತೆ ಸೇರಿ ಸರ್ಕಾರದ ವಿರುದ್ಧ ಮತ ಚಲಾಯಿಸಿದ್ದರಿಂದ ಸರ್ಕಾರ ಪತನವಾಗಿತ್ತು. ಈ ಕೇಂದ್ರಾಡಳಿತ ಪ್ರದೇಶ ಮೂರು ವರ್ಷಗಳಿಗೂ ಹೆಚ್ಚು ಅವಧಿಗೆ ರಾಷ್ಟ್ರಪತಿ ಆಡಳಿತಕ್ಕೆ ಒಳಪಟ್ಟಿತು.


4. ವಿಂಧ್ಯಪ್ರದೇಶ
★ರಾಷ್ಟ್ರಪತಿ ಆಳ್ವಿಕೆಯ ಅವಧಿ: 2 ವರ್ಷ ಹಾಗೂ 340 ದಿನಗಳು. 1949ರ ಏಪ್ರಿಲ್ 8ರಿಂದ 1952ರ ಮಾರ್ಚ್ ತಿಂಗಳ 13ರ ವರೆಗೆ.
★ಕಾರಣ: ವಿಂಧ್ಯಪ್ರದೇಶ ಎನ್ನುವುದು ಭಾರತದ ಮಾಜಿ ರಾಜ್ಯ. ಇದು ಸ್ವಾತಂತ್ರ್ಯಾ ನಂತರ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯ ಬಳಿಕ ಆಧುನಿಕ ರಾಜ್ಯವಾದ ಮಧ್ಯಪ್ರದೇಶದ ಭಾಗವಾಗಿದೆ. ಈ ರಾಜ್ಯ 1948ರಲ್ಲಿ ಇತರ 35 ರಾಜಾಡಳಿತದ ರಾಜ್ಯಗಳ ಜತೆಗೆ ಅಸ್ತಿತ್ವಕ್ಕೆ ಬಂತು. ಕ್ಷಿಪ್ರ ಅವಧಿಯಲ್ಲೇ ಸರಣಿಯೋಪಾದಿಯಲಲ್ಲಿ ಸಚಿವ ಸಂಪುಟದಲ್ಲಿ ಬದಲಾವಣೆಗಳನ್ನು ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸಿತು. ಕಾಂಗ್ರೆಸ್ ಸದಸ್ಯ ಎಸ್.ಎನ್.ಶುಕ್ಲಾ ಅವರು 1952ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವವರೆಗೂ ರಾಷ್ಟ್ರಪತಿ ಆಳ್ವಿಕೆ ಮುಂದುವರಿಯಿತು. 1956ರ ಅಕ್ಟೋಬರ್ 31ರಂದು ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಲಾಯಿತು. ಶುಕ್ಲಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ಈ ರಾಜ್ಯವನ್ನು ಮಧ್ಯಪ್ರದೇಶ ರಾಜ್ಯದ ವ್ಯಾಪ್ತಿಗೆ ಒಳಪಡಿಸಿದರು.


5. ನಾಗಾಲ್ಯಾಂಡ್
★ರಾಷ್ಟ್ರಪತಿ ಆಳ್ವಿಕೆಯ ಅವಧಿ: 2 ವರ್ಷ 250 ದಿನಗಳು. 1975ರ ಮಾರ್ಚ್ 20ರಿಂದ 1977ರ ನವೆಂಬರ್ ತಿಂಗಳ 25ರವರೆಗೆ
★ಕಾರಣ: 1975ರಲ್ಲಿ ನಾಗಾಲ್ಯಾಂಡಿನ ರಾಜಕೀಯ ವಾತಾವರಣ ಪ್ರಕ್ಷುಬ್ಧಗೊಂಡಿತ್ತು. ಬುಡಕಟ್ಟು ಜನಾಂಗಗಳ ನಡುವಿನ ಪೈಪೊಟಿ ಹಾಗೂ ನಾಗಾ ಸಮುದಾಯದಲ್ಲೇ ವೈಯಕ್ತಿಕ ದ್ವೇಷದ ಕಾರಣದಿಂದಾಗಿ ರಾಜಕೀಯ ಅರಾಜಕತೆ ತಾಂಡವವಾಡುತ್ತಿತ್ತು. ಇಲ್ಲಿ ಭಿನ್ನಮತ, ಪಕ್ಷ ವಿಭಜನೆ ಹಾಗೂ ಭಿನ್ನಮತಕ್ಕೆ ವ್ಯತಿರಿಕ್ತವಾದ ಬೆಳವಣಿಗೆಗಳು ಸಾಮಾನ್ಯ ಲಕ್ಷಣವಾಗಿತ್ತು. ಈ ಹಂತದಲ್ಲಿ ಅಂದಿನ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ, ಪ್ರಧಾನಿ ಇಂದಿರಾಗಾಂಧಿಯವರ ನಿರ್ದೇಶನದ ಅನ್ವಯ ರಾಷ್ಟ್ರಪತಿ ಆಳ್ವಿಕೆಯನ್ನು ರಾಜ್ಯದಲ್ಲಿ ಹೇರಲಾಯಿತು.


6. ಅರುಣಾಚಲ ಪ್ರದೇಶ:
ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಪ್ರಸ್ತಾವಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆಂಗೀಕಾರ ನೀಡಿದ್ದಾರೆ. ಈ ನಿರ್ಧಾರ ಭಾರತದ ಕೇಂದ್ರ- ರಾಜ್ಯ ಸಂಬಂಧದ ಇತಿಹಾಸದಲ್ಲಿ ಹೊಸ ಅಧ್ಯಾಯ ಸೃಷ್ಟಿಸಿದೆ. ಅದಾಗ್ಯೂ ಈ ನಿರ್ಧಾರ ಸುಪ್ರೀಂಕೋರ್ಟ್‍ನ ತೀಕ್ಷ್ಣ ಅವಲೋಕನಕ್ಕೆ ಗುರಿಯಾಗಿದ್ದು, ಅರುಣಾಚಲ ಪ್ರದೇಶದ ರಾಜ್ಯಪಾಲ ಜ್ಯೋತಿ ಪ್ರಸಾದ್ ರಾಜ್‍ಖೋವಾ ಅವರಿಂದ ಸುಪ್ರೀಂಕೋರ್ಟ್ ಈಗಾಗಲೇ ವರದಿ ಕೇಳಿದೆ. ರಾಷ್ಟ್ರಪತಿ ಆಳ್ವಿಕೆ ಹೇರಿಕೆಯ ಶಿಫಾರಸ್ಸನ್ನು ಕೇಂದ್ರಕ್ಕೆ ಸಲ್ಲಿಸಿದ ಕ್ರಮಕ್ಕೆ ಸಮರ್ಥನೆ ನೀಡುವಂತೆ ಕೋರ್ಟ್ ಸೂಚಿಸಿದೆ.


☀️ವಿಶೇಷ ಉಲ್ಲೇಖ:
*.ಕೇವಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಮಾತ್ರವಲ್ಲದೇ ರಾಷ್ಟ್ರ ರಾಜಧಾನಿಯೂ ಇತ್ತೀಚೆಗೆ ರಾಷ್ಟ್ರಪತಿ ಆಳ್ವಿಕೆಗೆ ಒಳಪಟ್ಟಿದೆ.
*.ತೀರಾ ಇತ್ತೀಚಿನ ನಿರ್ದಶನವೆಂದರೆ ದೆಹಲಿಯ ಮೇಲೆ ಒಂದು ವರ್ಷಗಳ ಅವಧಿಯ ರಾಷ್ಟ್ರಪತಿ ಆಳ್ವಿಕೆ ಹೇರಿಕೆ. 2014ರ ಫೆಬ್ರವರಿ 14ರಂದು ದೆಹಲಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರೀವಾಲ್ ದಿಢೀರನೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಈ ಕಾರಣದಿಂದ ಕೇಂದ್ರ ಸರ್ಕಾರ ರಾಜ್ಯದಲ್ಲಿ ಸಂವಿಧಾನ 356ನೇ ವಿಧಿ ಅನ್ವಯ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿತು.
*.ದೆಹಲಿ ವಿಧಾನಸಭೆಯಲ್ಲಿ ಲೋಕಪಾಲ ಮಸೂದೆ ಆಂಗೀಕಾರವಾಗದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರಾಜೀನಾಮೆ ನೀಡಿದ್ದರು. ರಾಷ್ಟ್ರಪತಿ ಆಳ್ವಿಕೆ 2015ರ ಫೆಬ್ರವರಿ 11ರವರೆಗೂ ಮುಂದುವರಿದಿತ್ತು.

No comments:

Post a Comment