Friday, 13 October 2023
•► ಬಾಹ್ಯಾಕಾಶ ಮತ್ತು ರಾಕೆಟ್ : ತಿಳಿದುಕೊಳ್ಳಲೇಬೇಕಾದ ಪ್ರಮುಖ ಅಂಶಗಳು : (About the Space and Rocket: Some important Facts must to Know)
(About the Space and Rocket: Some important Facts must to Know)
━━━━━━━━━━━━━━━━━━━━━━━━━━━━━━
- ರಾಕೆಟ್ ಎಂಬ ಪದವು ಇಟಾಲಿಯನ್ ರೋಚೆಟ್ಟಾ ಎಂಬ ಪದದಿಂದ ಬಂದಿದೆ, ಇದನ್ನು "ಬಾಬಿನ್" ಅಥವಾ "ಲಿಟಲ್ ಸ್ಪಿಂಡಲ್" ಎಂದು ಅನುವಾದಿಸಲಾಗುತ್ತದೆ.
- ಕ್ರಿ.ಶ.995ರಲ್ಲಿಯೇ ಚೀನಾದ ಸಾಂಗ್ ರಾಜವಂಶದವರು ರಾಕೆಟ್ ಕಾರ್ಯವಿಧಾನಗಳನ್ನು ಪ್ರಯೋಗಿಸುತ್ತಿದ್ದರು.ಆದರೆ ಇವು ಬಾಹ್ಯಾಕಾಶ ರಾಕೆಟ್‌ಗಳಂತಿರದೆ ಸಿಡಿಮದ್ದುಗಳಂತಿದ್ದವು.
- 1926ರಲ್ಲಿ ಅಮೇರಿಕದ ರಾಬರ್ಟ್ ಎಚ್ ಗೊಡ್ಡಾರ್ಡ್ 3.5 ಮೀ ಉದ್ದದ ಮೊದಲ ದ್ರವ ಇಂಧನದ ರಾಕೆಟನ್ನು ಪರಿಚಯಿಸಿದನು. ಇದು ಉಡಾವಣೆಯಾದ ಕೆಲವೆ ಸೆಕೆಂಡುಗಳಲ್ಲಿ ಪತನಗೊಂಡಿತು. ಹೆಚ್ಚು ಶಕ್ತಿಶಾಲಿ ದ್ರವ-ಇಂಧನ ರಾಕೆಟ್‌ಗಳನ್ನು ಕಂಡುಹಿಡಿದ ಈತನನ್ನು 'ಆಧುನಿಕ ರಾಕೆಟ್‌ಗಳ ಪಿತಾಮಹ' ಎಂದು ಕರೆಯುತ್ತಾರೆ.
-2ನೆಯ ಮಹಾಯುದ್ಧದಲ್ಲಿ ಮೊದಲ ಬಾರಿಗೆ ಜರ್ಮನ್ ರಿಂದ v2 ಎಂಬ ರಾಕೆಟ್ ಉಪಯೋಗಿಸಲ್ಪಟ್ಟಿತು.
- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅನ್ನು ಈ ಹಿಂದೆ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಮಿತಿ (INCOSPAR) ಎಂದು ಕರೆಯಲಾಗುತ್ತಿತ್ತು
- ಭಾರತದಲ್ಲಿ ಮೊದಲ ರಾಕೆಟ್ ಅನ್ನು ಡಾ ವಿಕ್ರಮ್ ಸಾರಾಭಾಯ್ ಎಂಬ ಪ್ರವರ್ತಕ ವಿಜ್ಞಾನಿ ಅಭಿವೃದ್ಧಿಪಡಿಸಿದರು . ಡಾ ಸಾರಾಭಾಯ್ ಅವರನ್ನು ಸಾಮಾನ್ಯವಾಗಿ "ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ" ಎಂದು ಕರೆಯಲಾಗುತ್ತದೆ.
- Rh-75 ಎಂಬ ಹೆಸರಿನ ಮೊದಲ ರಾಕೆಟ್ ಅನ್ನು 1971 ರಲ್ಲಿ ಶ್ರೀಹರಿಕೋಟಾ (ಆಂಧ್ರಪ್ರದೇಶ, ನಲ್ಲೂರು) ನಿಂದ ಉಡಾವಣೆ ಮಾಡಲಾಯಿತು. (Rh ಅಂದರೆ ರೋಹಿಣಿ ಮತ್ತು 75 ಎಂಬುದು ರಾಕೆಟ್‌ನ ವ್ಯಾಸ (75mm)).
- ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ರಾಕೆಟ್ ಬಳಕೆಯಾಗಿದ್ದು 1792 ರಲ್ಲಿ, ಮೊದಲ ಕಬ್ಬಿಣದ ರಾಕೆಟ್ ಅನ್ನು ಮೈಸೂರಿನ ಆಡಳಿತಗಾರ ಟಿಪ್ಪು ಸುಲ್ತಾನ್ "ಆಂಗ್ಲೋ-ಮೈಸೂರು ಯುದ್ಧ"ದ ಸಮಯದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಪಡೆಗಳ ವಿರುದ್ಧ ಬಳಸಿದನು.
- ದ್ರವೀಕೃತ ಆಮ್ಲಜಕನ ರಾಕೆಟ್‌ನ ಇಂಧನವಾಗಿ ಬಳಸಲಾಗುತ್ತದೆ. ಹಾಗೂ ರಾಕೆಟ್ ಶಕ್ತಿಯನ್ನು ಒತ್ತಡ (thrust)ದಲ್ಲಿ ಅಳೆಯಲಾಗುತ್ತದೆ
- ರಾಕೆಟ್ 3 ಭಾಗಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ಭಾಗವು ತನ್ನ ಕಾರ್ಯ ಮುಗಿದ ಮೇಲೆ ಕಳಚಿ ಬಿಳುತ್ತದೆ.
- ರಾಕೆಟ್ ಭೂಮಿಯ ಗುರುತ್ವಾಕರ್ಷಣೆ ದಾಟಿ ಹೋಗಬೇಕಾದರೆ ಅದು ಪ್ರತಿ ಸೆಕೆಂಡಿಗೆ 11.6 ಕಿ.ಮೀ ವೇಗದಲ್ಲಿ ಚಲಿಸಬೇಕು. (40,250km/ಪ್ರತಿ ಗಂಟೆಗೆ) ಈ ವೇಗವನ್ನು 'ಭೂ ವಿಮೋಚನಾ ವೇಗ' ಎನ್ನುತ್ತಾರೆ.
- 'ಟಿ ಟೈಮ್'ಎಂದರೆ ರಾಕೆಟ್ ಉಡಾವಣೆಯ ಮೊದಲಿನ 10 ನಿಮಿಷ. ಈ ಸಮಯದಲ್ಲಿ ರಾಕೆಟ್‌ನ ಎಲ್ಲ ಭಾಗಗಳನ್ನು ಕಂಪ್ಯೂಟರಗಳಿಂದ ಪರೀಕ್ಷಿಸಿ ಸರಿ ಇವೆ ಎಂದು ಖಚಿತಪಡಿಸಿಕೊಳ್ಳಲಾಗುತ್ತದೆ. ನಂತರ ಒಂದು ಸೆಕೆಂಡು ವ್ಯತ್ಯಾಸವಾಗದ ಹಾಗೆ ನಿರ್ಧರಿತ ಸಮಯಕ್ಕೆ ರಾಕೆಟ್ ಉಡಾವಣೆ ಮಾಡಲಾಗುತ್ತದೆ.
- ಸ್ಕೈಲ್ಯಾಬ್ ಬಾಹ್ಯಾಕಾಶ ನಿಲ್ದಾಣವನ್ನು ಸ್ಯಾಟರ್ನ್ V ರಾಕೆಟ್ ಮೂಲಕ ಉಡಾವಣೆ ಮಾಡಲಾಯಿತು. ರಾಕೆಟಗಳನ್ನು ಹಾಗೂ ಉಪಗ್ರಹಗಳನ್ನು ಅತ್ಯಾಧುನಿಕ ಅಂಟೆನಾಗಳಿಂದ ಸಂರ್ಪಕಿಸಲಾಗುತ್ತದೆ.
-ಬಾಹ್ಯಾಕಾಶದಲ್ಲಿ ಶೂನ್ಯ ಗುರುತ್ವ ಇರುವುದರಿಂದ ಅಲ್ಲಿ ಎಲ್ಲವೂ ತೇಲುತ್ತವೆ. ಅಲ್ಲಿ ನಾವು ಮಾತನಾಡಿದರೆ ನಮ್ಮ ಧ್ವನಿ ಶೂನ್ಯದಲ್ಲಿ ಚಲಿಸುವುದಿಲ್ಲ. ನಾವು ಎಷ್ಟೇ ಕಿರುಚಿದರೂ ನಮ್ಮ ಪಕ್ಕದ ವ್ಯಕ್ತಿಗೂ ಕೂಡಾ ನಮ್ಮ ಧ್ವನಿ ತಲುಪುವುದಿಲ್ಲ, ಹೀಗಾಗಿ ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ರೇಡಿಯೋ ಮೂಲಕ ಸಂಪರ್ಕದಲ್ಲಿರುತ್ತಾರೆ.
- ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳ ರಕ್ತವು ಬಿಸಿಯಾಗುವುದನ್ನು ತಡೆಯಲು ವಾಟರ್ ಕೊಲ್ಡ್ ಉಡುಪು ಧರಿಸುತ್ತಾರೆ. ಅವರ ಉಡುಪಿನ ಜೊತೆ ಆಮ್ಲಜನಕ, ಬ್ಯಾಟರಿಗಳು ಇರುತ್ತವೆ.
- ಬಾಹ್ಯಾಕಾಶದಲ್ಲಿ ಪ್ರತಿಯೊಂದು ವಸ್ತುವು ತೇಲುತ್ತದೆ. ಹೀಗಾಗಿ ಆಹಾರದ ಟ್ರೇ ಗಗನಯಾತ್ರಿಗಳ ಬಟ್ಟೆಯೊಂದಿಗೆ ಕಟ್ಟಲ್ಪಟ್ಟಿರುತ್ತದೆ. ಪಾನೀಯಗಳು ಒಂದು ಲೋಟದಲ್ಲಿ ಮುಚ್ಚಳದೊಂದಿಗೆ ಇರುತ್ತವೆ ಮತ್ತು ಪಾನೀಯವನ್ನು ಸ್ಟ್ರಾ ಮೂಲಕ ಹೀರಲಾಗುತ್ತದೆ.
- ಬಾಹ್ಯಾಕಾಶಕ್ಕೆ ಹಾರಿಬಿಟ್ಟ ಮೊದಲ ಕೃತಕ ಉಪಗ್ರಹ ರಷ್ಯದ ಸ್ಪುಟ್ನಕ್ ಇದು ಕೇವಲ 60 ಸೆ.ಮೀ ಅಗಲವಾಗಿತ್ತು. 1957ರಲ್ಲಿ ಉಡಾವಣೆ ಮಾಡಲಾಗಿತ್ತು.
- ಬಾಹ್ಯಾಕಾಶ ಅಧ್ಯಯನಕ್ಕಾಗಿ ಪ್ರಪಂಚದಲ್ಲಿ 2 ದೊಡ್ಡ ರೇಡಿಯೋ ಟೆಲಿಸ್ಕೋಪ್‌ಗಳನ್ನು ನಿರ್ಮಿಸಲಾಗಿದೆ. ಅವುಗಳೆಂದರೆ,
1) ಆರ್ಸಿಬೊ ರೇಡಿಯೋ ಟೆಲಿಸ್ಕೋಪ್- ಇದನ್ನು ವೆಸ್ಟ್ ಇಂಡೀಸ್ ಬೆಟ್ಟದ ಮೇಲಿನ ಗುಂಡಿಯಲ್ಲಿ ನಿರ್ಮಿಸಲಾಗಿದೆ. ಇದರ ತಟ್ಟೆಯ ವ್ಯಾಸ 20 ಎಕರೆಯಷ್ಟು ವಿಸ್ತಾರವಾಗಿದೆ. ಇದು ಭೂಮಿಯ ತಿರುಗುವಿಕೆಯನ್ನು ಉಪಯೋಗಿಸಿಕೊಂಡು ಆಕಾಶದ ಎಲ್ಲ ದಿಕ್ಕೂಗಳಿಂದ ಸಂಜ್ಞೆಗಳನ್ನು ಸ್ವೀಕರಿಸುತ್ತದೆ.
2) ಜೋಡ್ರೆಲ್ ಬ್ಯಾಂಕ್ ರೇಡಿಯೋ ಟೆಲಿಸ್ಕೋಪ್- ಇದನ್ನು ಇಂಗ್ಲೆಂಡಿನ ಚಷೈರನಲ್ಲಿ ನಿರ್ಮಿಸಲಾಗಿದೆ. ಇದರ ತಟ್ಟೆಯು 250 ಅಡಿ ಅಗಲವಾಗಿದೆ. ವೃತ್ತಾಕಾರದ ರೈಲು ಕಂಬಿಗಳ ಮೇಲೆ ಇದನ್ನು ನಿಲ್ಲಿಸಿದ್ದು, ಆಕಾಶದ ಯಾವ ದಿಕ್ಕಿಗೆ ಬೇಕಾದರೂ ಇದನ್ನು ತಿರುಗಿಸಬಹುದಾಗಿದೆ.
- ನಾಸಾ ಈವರೆಗೂ ಬಾಹ್ಯಾಕಾಶ ಕಾರ್ಯಾಚರಣೆಗೆ ಒಟ್ಟು 166 ಮಾನವಸಹಿತ ರಾಕೆಟ್‌ಗಳನ್ನು ಉಡಾವಣೆ ಮಾಡಿದೆ.
- ವಿಶ್ವದ ಇನ್ಯಾವುದೇ ದೇಶಗಳಿಗಿಂತ ಚೀನಾ ದೇಶವು ಅತೀ ಹೆಚ್ಚು ರಾಕೆಟ್‌ಗಳನ್ನು ಉಡಾವಣೆ ಮಾಡಿದೆ.
- ಬಾಹ್ಯಾಕಾಶಕ್ಕೆ ಹೋದ ಮೊದಲ ಜೀವಿ- ರಷ್ಯಾದ ಲೈಕಾ ಎಂಬ ನಾಯಿ ನವ್ಹೆಂಬರ್ 1957ರಲ್ಲಿ
- ಬಾಹ್ಯಾಕಾಶಕ್ಕೆ ಹೋದ ಮೊದಲ ಮಾನವ- 12-4-1961ರಲ್ಲಿ ರಷ್ಯದ ಯೂರಿ ಗಗಾರಿನ್, ವೊಸ್ಟೋಕ್-1 ಮೂಲಕ.
- ಬಾಹ್ಯಾಕಾಶಕ್ಕೆ ಹೋದ ಮೊದಲ ಮಹಿಳೆ- 1963ರಲ್ಲಿ ರಷ್ಯದ ವಾಲೆಂಟೆನಾ ತೆರೆಸ್ಕೋವಾ, ವೊಸ್ಟೋಕ್-6 ಮೂಲಕ.
- ಮೊದಲ ಬಾಹ್ಯಾಕಾಶ ನಡಿಗೆ ಮಾಡಿದವರು- ರಷ್ಯದ ಗಗನಯಾತ್ರಿ ಅಲೆಕ್ಸೀ ಲಯೊನೊವ್, 18-3-1965ರಲ್ಲಿ.
Thursday, 12 October 2023
•► ಭಾರತೀಯ ರಾಜಕೀಯಕ್ಕೆ ಸಂಬಂಧಿಸಿದಂತೆ "ವಿಪ್" ಎಂದರೇನು? ಯಾವಾಗ ಪ್ರಯೋಗಿಸಲಾಗುತ್ತದೆ? (What is "Whip" in relation with Indian Polity?)
•► ಭಾರತೀಯ ರಾಜಕೀಯಕ್ಕೆ ಸಂಬಂಧಿಸಿದಂತೆ "ವಿಪ್" ಎಂದರೇನು? ಯಾವಾಗ ಪ್ರಯೋಗಿಸಲಾಗುತ್ತದೆ?
(What is "Whip" in relation with Indian Polity?)
━━━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್
(IAS/KAS Exam Preparation Short Notes)
- ರಾಜಕೀಯ ಉಪಭಾಷೆಯಲ್ಲಿ, ವಿಪ್ ಎನ್ನುವುದು ಪಕ್ಷವೊಂದರ ಲಿಖಿತ ಸುಗ್ರೀವಾಜ್ಞೆಯಾಗಿದ್ದು, ಪ್ರಮುಖವಾದ ಮತವನ್ನು ಚಲಾಯಿಸಬೇಕಾದರೆ ಪಕ್ಷದ ಸದಸ್ಯರು ರಾಜ್ಯ ವಿಧಾನಸಭೆ ಅಥವಾ ಸಂಸತ್ತಿನಲ್ಲಿ ಹಾಜರಿರಬೇಕು ಮತ್ತು ಈ ಮೂಲಕ ನಿರ್ದಿಷ್ಟ ರೀತಿಯಲ್ಲಿ ಮತ ಚಲಾಯಿಸುವಂತೆ ಒತ್ತಾಯಿಸುತ್ತದೆ. ಅಡ್ಡ ಮತದಾನದ ಉದ್ದೇಶಕ್ಕಾಗಿ ಅಥವಾ ಬೆಂಬಲಕ್ಕಾಗಿ ಅವರ ಧ್ವನಿಗೆ ಶಕ್ತಿ ನೀಡಲು ವಿಪ್ ಜಾರಿ ಮಾಡಬಹುದು.
- ವಿಪ್' ಎಂಬ ಪದವು ಸಾಂಪ್ರದಾಯಿಕ ಬ್ರಿಟಿಷ್ ಸಂಸದೀಯ ವಿಧಾನದ ವ್ಯುತ್ಪನ್ನವಾಗಿದೆ,
- ವಿಪ್ ಪರಿಕಲ್ಪನೆಯು ಯಾವುದೇ ಅಧಿಕೃತ ಅನುಮೋದನೆಯನ್ನು ಹೊಂದಿಲ್ಲ ಮತ್ತು ಸಂವಿಧಾನದಲ್ಲಿ ಉಲ್ಲೇಖಿಸಲಾಗಿಲ್ಲವಾದರೂ , ಇದು ಭಾರತೀಯ ಸಂಸತ್ತಿನಲ್ಲಿ ಅನುಸರಿಸುವ ಒಂದು ಸಂಪ್ರದಾಯವಾಗಿದೆ.
- ಯಾವುದೇ ಒಂದು ಪಕ್ಷ ತನ್ನ ಶಿಸ್ತನ್ನು ಕಾಪಾಡಿಕೊಳ್ಳಲು ವಿಪ್ ಅನ್ನು ಅಸ್ತ್ರದಂತೆ ಬಳಸುತ್ತದೆ. ಬಹುಮತ ಸಾಬೀತುಪಡಿಸುವ ಸಂದರ್ಭದಲ್ಲಿ ವಿಧಾನಸಭಾ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗಲು, ಪಕ್ಷದ ಸಭೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಲು ವಿಪ್ ಮೂಲಕ ಪಕ್ಷದ ಶಾಸಕರಿಗೆ ಸೂಚಿಸಲಾಗುತ್ತದೆ. ಪಕ್ಷದ ಮುಖ್ಯ ಸಚೇತಕರು ವಿಪ್ ಜಾರಿಗೊಳಿಸಿ ಆದೇಶ ಹೊರಡಿಸುತ್ತಾರೆ.
- ವಿಪ್ ಜಾರಿಯಾದ ನಂತರ ಅದನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರವನ್ನು ಪಕ್ಷ ಹೊಂದಿರುತ್ತದೆ.
ಪಕ್ಷದ 'ಬಿ' ಫಾರಂ ಪಡೆದು ಪಕ್ಷದ ಚಿಹ್ನೆಯಡಿ ಶಾಸಕ ಅಥವಾ ಸಂಸದರಾಗಿ ಆಯ್ಕೆಯಾದವರು ಇದನ್ನು ಪಾಲಿಸಬೇಕು. ಇಲ್ಲದಿದ್ದರೆ ಪಕ್ಷಾಂತರ ನಿಷೇಧ ಕಾಯಿದೆಯಡಿ ಸದಸ್ಯತ್ವದಿಂದ ಅನರ್ಹಗೊಳ್ಳುತ್ತಾರೆ.
▪️ವಿಪ್‌ನಲ್ಲಿ ಮೂರು ವಿಧಗಳು :
━━━━━━━━━━━━━
▪️ಒನ್‌ಲೈನ್ ವಿಪ್ :
(One Line Whip)
━━━━━━━━━
ವಿಶ್ವಾಸ ಮತ ಸಂದರ್ಭದಲ್ಲಿ ಸರಕಾರದ ಪರ ಹಾಗೂ ಪಕ್ಷದ ಆದೇಶ ಪಾಲನೆಗೆ ನೀಡುವ ವಿಪ್ ಅನ್ನು ಒನ್‌ಲೈನ್ ವಿಪ್ ಎಂದು ಕರೆಯಲಾಗುತ್ತದೆ.
▪️ಟೂ ಲೈನ್ ವಿಪ್:
(Two Line Whip)
━━━━━━━━━
ಬಜೆಟ್ ಅಥವಾ ಪ್ರಮುಖ ವಿಧೇಯಕ ಮಂಡನೆ ಮತ್ತು ಅನುಮೋದನೆ ಸಮಯದಲ್ಲಿ ಜಾರಿ ಮಾಡಲಾಗುವ ವಿಪ್ ಅನ್ನು ಟೂ ಲೈನ್ ವಿಪ್ ಎಂದು ಕರೆಯಲಾಗುತ್ತದೆ.
▪️ತ್ರೀ ಲೈನ್ ವಿಪ್:
(Three Line Whip)
━━━━━━━━━
ಅಧಿವೇಶನದಲ್ಲಿ ಹಾಜರಾತಿ, ವಿತ್ತೀಯ ಕಾರ‍್ಯಕಲಾಪದಲ್ಲಿ ಪಾಲ್ಗೊಳ್ಳುವಿಕೆ, ಬಜೆಟ್, ಅನುಮೋದನೆ ಸಂದರ್ಭದಲ್ಲಿ ಸರಕಾರದ ಪರ ಮತ ಚಲಾಯಿಸುವಿಕೆಗೆ ನೀಡುವ ವಿಪ್. ಕಾಯಿದೆ ಪ್ರಕಾರ ಯಾವುದೇ ಶಾಸಕ, ಸಂಸದ ತನ್ನ ಪಕ್ಷದ ವಿಪ್ ಉಲ್ಲಂಘಿಸಿ ಮತ ಚಲಾಯಿಸಿದ ಬಳಿಕವಷ್ಟೇ ಸ್ಪೀಕರ್ ಕ್ರಮ ಕೈಗೊಳ್ಳಬಹುದು.
▪️ಯಾವಾಗ ಪ್ರಯೋಗಿಸಬಹುದು?
━━━━━━━━━━━━━━━━
ಇದು ಯಾವ ಸದಸ್ಯರು, ಶಾಸಕರ ಮೇಲೆ ವಿಶ್ವಾಸ ಇರೋದಿಲ್ವೋ, ಪಕ್ಷದ ವಿರುದ್ಧವಾಗಿ ಕೆಲಸ ಮಾಡ್ತಿದ್ದಾರೆ ಅಂತಾ ಕಂಡುಬರುತ್ತೋ, ಅಂತಹ ಟೈಮ್‌ನಲ್ಲಿ ವಿಪ್ ಜಾರಿ ಮಾಡಲಾಗುತ್ತದೆ. ಪಕ್ಷಾಂತರ ಕಾಯಿದೆ ಅಡಿ ಅವರ ಸದಸ್ಯತ್ವ ರದ್ದಾದರೆ 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲಲು ಬರುವುದಿಲ್ಲ.
Thursday, 5 October 2023
•► 'UPSC/KPSC ಪ್ರಿಲೀಮ್ಸ್ -2023': ದೈನಂದಿನ (05/10/2023) 10 ಬಹು ಆಯ್ಕೆಯ ಮಾದರಿ ಪ್ರಶ್ನೆಗಳು (Prelims 2023: Daily 10 Multiple Choice Questions)
•► 'UPSC/KPSC ಪ್ರಿಲೀಮ್ಸ್ -2023': ದೈನಂದಿನ (05/10/2023) 10 ಬಹು ಆಯ್ಕೆಯ ಮಾದರಿ ಪ್ರಶ್ನೆಗಳು
(Prelims 2023: Daily 10 Multiple Choice Questions)
━━━━━━━━━━━━━━━━━━━━━━━━━━━━━━
31) ಇತ್ತೀಚೆಗೆ ಸಾಮಾನ್ಯವಾಗಿ ಸುದ್ದಿಗಳಲ್ಲಿ ಕೇಳಿಬರುವ "ಲೆವಂಟ್" ಪದವು ಈ ಕೆಳಗಿನ ಯಾವ ಪ್ರದೇಶಗಳಿಗೆ ಅನುರೂಪವಾಗಿದೆ?
A) ಪೂರ್ವ ಮೆಡಿಟರೇನಿಯನ್ ತೀರದುದ್ದಕ್ಕೂ ಇರುವ ಪ್ರದೇಶ
B) ಈಜಿಪ್ಟ್‌ನಿಂದ ಮೊರಾಕೊದವರೆಗೆ ವಿಸ್ತರಿಸಿರುವ ಉತ್ತರ ಆಫ್ರಿಕಾದ ತೀರದ ಪ್ರದೇಶ
C) ಪರ್ಷಿಯನ್ ಕೊಲ್ಲಿ ಮತ್ತು ಆಫ್ರಿಕಾದ ಅಂಚಿನ ತೀರದುದ್ದಕ್ಕೂ ಹರಡಿರುವ ಪ್ರದೇಶ
D) ಮೆಡಿಟರೇನಿಯನ್ ಸಮುದ್ರದ ಸಂಪೂರ್ಣ ಕರಾವಳಿ ಪ್ರದೇಶಗಳು
ಉತ್ತರ: (A)
32) ವರ್ಷಕ್ಕೊಮ್ಮೆಯಾದರೂ ಈ ಪ್ರದೇಶದಲ್ಲಿ 'ಮಧ್ಯಾಹ್ನದ ಸೂರ್ಯನು' ನಿಖರವಾಗಿ ತಲೆಯ ಮೇಲೆ ಬರುತ್ತಾನೆ.
A) ಧ್ರುವೀಯ ಅಕ್ಷಾಂಶವನ್ನು ಹೊರತುಪಡಿಸಿ ಎಲ್ಲಾ ಅಕ್ಷಾಂಶಗಳು.
B) ಕರ್ಕಾಟಕ ಸಂಕ್ರಾಂತಿ ಮತ್ತು ಮಕರ ಸಂಕ್ರಾಂತಿಯ ನಡುವಿನ ಎಲ್ಲಾ ಅಕ್ಷಾಂಶಗಳು.
C) ಸಮಭಾಜಕ ವೃತ್ತದಲ್ಲಿ ಮಾತ್ರ.
D) ಎರಡೂ ಉಷ್ಣವಲಯಗಳ ಆಚೆಗಿನ ಎಲ್ಲಾ ಅಕ್ಷಾಂಶಗಳು.
ಉತ್ತರ: (B)
33) ಇತ್ತೀಚೆಗೆ ಬಿಡುಗಡೆಗೊಂಡ 'ರಫ್ತು ಸಿದ್ಧತೆ ಸೂಚ್ಯಂಕ (Export Preparedness Index (EPI) Report, 2022 ಪ್ರಕಟಿಸಿದವರು,
A) ಹಣಕಾಸು ಸಚಿವಾಲಯ.
B) ನೀತಿ ಆಯೋಗ.
C) ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
D) ಅಂಕಿಅಂಶ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ
ಉತ್ತರ: (B)
34) 'ಕೌನ್ಸಿಲ್ ಆಫ್ ಯುರೋಪ್'ನ ಕುರಿತ ಸರಿಯಾದ ಹೇಳಿಕೆಗಳನ್ನು ಪರಿಗಣಿಸಿ:
1. ಇದು 2ನೇ ವಿಶ್ವ ಸಮರದ ಹಿನ್ನೆಲೆಯಲ್ಲಿ ಯುರೋಪ್‌ನಲ್ಲಿ ಮಾನವ ಹಕ್ಕುಗಳನ್ನು ಎತ್ತಿಹಿಡಿಯಲು ಸ್ಥಾಪಿಸಲಾಯಿತು.
2. ಇದು 46 ಸದಸ್ಯ ರಾಷ್ಟ್ರಗಳನ್ನು ಹೊಂದಿದೆ.
3. ಇದರ ಪ್ರಧಾನ ಕಛೇರಿಯು ಫ್ರಾನ್ಸ್‌ನ ಸ್ಟ್ರಾಸ್‌ಬರ್ಗ್‌ನಲ್ಲಿದೆ.
4.ಯುರೋಪ್ ಕೌನ್ಸಿಲ್‌ನಲ್ಲಿ ರಷ್ಯಾದ ಸದಸ್ಯತ್ವವನ್ನು ಅಮಾನತುಗೊಳಿಸಲಾಗಿದೆ.
A) 1 ಮತ್ತು 2 ಮಾತ್ರ ಸರಿ.
B) 1,3 ಮತ್ತು 4 ಮಾತ್ರ ಸರಿ.
C) 1,2 ಮತ್ತು 4 ಮಾತ್ರ ಸರಿ.
D) ಎಲ್ಲವೂ ಸರಿ.
ಉತ್ತರ: (D)
35) ಇತ್ತೀಚೆಗೆ ‘ಥ್ರೀ ಪವರ್ ಸ್ಕ್ವೇರ್’ ಎಂಬ ಸ್ಥಳವು ಸುದ್ದಿಯಲ್ಲಿದ್ದುದು ಈ ದೇಶದಲ್ಲಿದೆ.
A) ಜಪಾನ್.
B) ಇಸ್ರೇಲ್.
C) ಬ್ರೆಜಿಲ್
D) ರಷ್ಯಾ
ಉತ್ತರ: (C)
36) ಸೆಂಡೈ ಚೌಕಟ್ಟು (Sendai Framework) ಇದಕ್ಕೆ ಸಂಬಂಧಿಸಿದುದಾಗಿದೆ.
A) ಜಾಗತಿಕ ಮಟ್ಟದಲ್ಲಿ ಹಸಿವನ್ನು ಹೋಗಲಾಡಿಸುವುದು.
B) ಜೀವವೈವಿಧ್ಯ ಸಂರಕ್ಷಣೆ
C) ವಿಪತ್ತಿನ ಅಪಾಯ ತಗ್ಗಿಸುವಿಕೆ.
D) ಪತ್ರಿಕಾ ಸ್ವಾತಂತ್ರ್ಯ
ಉತ್ತರ: (C)
37) ಇತ್ತೀಚೆಗೆ "ವೋಲ್ಬಾಚಿಯಾ ವಿಧಾನ' (Wolbachia method) ಎಂಬುದು ಈ ಕೆಳಗಿನ ಯಾವ ವಿಷಯವೊಂದಿಗೆ ಸುದ್ದಿಯಲ್ಲಿದೆ?
A) ಸೊಳ್ಳೆಗಳಿಂದ ಹರಡುವ ವೈರಲ್ ರೋಗಗಳನ್ನು ನಿಯಂತ್ರಿಸುವುದು
B) ಬೆಳೆ ಅವಶೇಷಗಳನ್ನು ಪ್ಯಾಕಿಂಗ್ ವಸ್ತುವಾಗಿ ಪರಿವರ್ತಿಸುವುದು
C) ಜೈವಿಕ ವಿಘಟನೀಯ ಪ್ಲಾಸ್ಟಿಕ್‌ಗಳನ್ನು ಉತ್ಪಾದಿಸುವುದು
D) ಜೈವಿಕ ದ್ರವ್ಯರಾಶಿಯ ನೇರ ಉಷ್ಣ ವಿಭಜನೆಯ ಮೂಲಕ ಬಯೋಚಾರ್ ಅನ್ನು ಉತ್ಪಾದಿಸುವುದು.
ಉತ್ತರ: (A)
38) 'ಕಾಂಗರ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ'ದ ಕುರಿತ ಸರಿಯಾದ ಹೇಳಿಕೆಗಳನ್ನು ಪರಿಗಣಿಸಿ:
1.ಅಪರೂಪದ ಭಾರತೀಯ ಇಲಿ ಜಿಂಕೆ ಅಥವಾ ಮಚ್ಚೆಯುಳ್ಳ ಚೆವ್ರೊಟೈನ್ ಇತ್ತೀಚೆಗೆ ಈ ಉದ್ಯಾನವನದಲ್ಲಿ ಕಂಡುಬಂದಿದೆ.
2.ತಿರತ್‌ಗಡ್ ಜಲಪಾತವು ಈ ಉದ್ಯಾನವನದಲ್ಲಿದೆ.
3.ಈ ಉದ್ಯಾನವನ ಭೂಗತ ಸುಣ್ಣದ ಗುಹೆಗಳ ಉಪಸ್ಥಿತಿಗೆ ಹೆಸರುವಾಸಿಯಾಗಿದೆ
A) 1 ಮತ್ತು 2 ಮಾತ್ರ ಸರಿ.
B) 2 ಮತ್ತು 3 ಮಾತ್ರ ಸರಿ.
C) 1 ಮತ್ತು 3 ಮಾತ್ರ ಸರಿ.
D) ಎಲ್ಲವೂ ಸರಿ.
ಉತ್ತರ: (D)
39) ಇತ್ತೀಚೆಗೆ 'GST Sahay' ಎಂಬ ಆ್ಯಪ್ ಆಧಾರಿತ 'ರಶೀದಿ ಹಣಕಾಸು ಸಾಲಗಳ ವೇದಿಕೆ'ಯನ್ನು ಪ್ರಾರಂಭಿಸಿದ್ದು?
A) SEBI
B) SIDBI
C) ನೀತಿ ಆಯೋಗ
D) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ.
ಉತ್ತರ: (B)
40) 'ಕೊರಿಯೊಲಿಸ್ ಪರಿಣಾಮ'(Coriolis effect)ದ ಕುರಿತ ಸರಿಯಾದ ಹೇಳಿಕೆಗಳನ್ನು ಪರಿಗಣಿಸಿ:
1.ಕೋರಿಯೊಲಿಸ್ ಪರಿಣಾಮವು ಧ್ರುವಗಳಲ್ಲಿ ಗರಿಷ್ಠವಾಗಿರುತ್ತದೆ ಮತ್ತು ಸಮಭಾಜಕದಲ್ಲಿ ಶೂನ್ಯವಾಗಿರುತ್ತದೆ.
2.ಕೋರಿಯೊಲಿಸ್ ಬಲವು ಯಾವಾಗಲೂ ಚಲಿಸುವ ವಸ್ತುವಿನ ಅಕ್ಷಕ್ಕೆ ಲಂಬವಾಗಿರುವ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತದೆ.
3.ಕೊರಿಯೊಲಿಸ್ ಬಲದ ಪ್ರಮಾಣವನ್ನು ಗಾಳಿಯ ವೇಗದಿಂದ ನಿರ್ಧರಿಸಲಾಗುತ್ತದೆ.
A) 1 ಮತ್ತು 2 ಮಾತ್ರ ಸರಿ.
B) 2 ಮತ್ತು 3 ಮಾತ್ರ ಸರಿ.
C) 1 ಮತ್ತು 3 ಮಾತ್ರ ಸರಿ.
D) ಎಲ್ಲವೂ ಸರಿ.
ಉತ್ತರ: (D)
Wednesday, 4 October 2023
•► ️ಡಿಎನ್ಎ (DNA) ಎಂದರೇನು? ಅದರ ರಚನೆ ಮತ್ತು ಸಂಯೋಜನೆಯ ಕುರಿತ ಸಂಕ್ಷಿಪ್ತ ಮಾಹಿತಿ (Brief Information of the Structure and Composition of DNA)
•► ️ಡಿಎನ್ಎ (DNA) ಎಂದರೇನು? ಅದರ ರಚನೆ ಮತ್ತು ಸಂಯೋಜನೆಯ ಕುರಿತ ಸಂಕ್ಷಿಪ್ತ ಮಾಹಿತಿ
(Brief Information of the Structure and Composition of DNA)
━━━━━━━━━━━━━━━━━━━━━━━━━━━━━━━━━━━━━━━━
- ಮಗು ಹುಟ್ಟಿದೊಡನೆ ಅದರ ಲಿಂಗ, ಬಣ್ಣ, ಕೂದಲು, ಮೂಗು, ಕಿವಿ ಮುಂತಾದವುಗಳ ಆಕಾರ ಯಾರ ರೀತಿ ಇದೆ? ಎಂದು ಹೋಲಿಕೆ ಮಾಡುವುದು ಸಾಮಾನ್ಯ. ಈ ರೀತಿಯ ಹೋಲಿಕೆ ಎಲ್ಲಾ ಜೀವಿಗಳಲ್ಲೂ ಕಾಣಬಹುದು. ಇವು ತಂದೆ-ತಾಯಿ ಗಳಿಂದ ಪಡೆದ ಗುಣಗಳು. ಬಾಹ್ಯ ಗುಣಲಕ್ಷಣಗಳನ್ನು ಪ್ರಕಟಲಕ್ಷಣ (Phenotype) ಎನ್ನುವರು. ಇವುಗಳನ್ನು ನಿರ್ಧರಿಸುವುದು ಗುಣಾಣು ಮಾದರಿ (Genotype). ಈ ರೀತಿ ತಂದೆ-ತಾಯಿಯರಿಂದ ಪಡೆಯುವ ಗುಣಗಳನ್ನು ಅಧ್ಯಯನ ಮಾಡುವುದೇ ಅನುವಂಶೀಯ ಶಾಸ್ತ್ರ.
- ಜೀವಿಗಳಲ್ಲಿರುವ ಗುಣಲಕ್ಷಣಗಳು ವಂಶಪಾರಂಪರ್ಯವಾಗಿ ಬರುವ ಅಂಶಗಳು.
- ಅನುವಂಶೀಯತೆ ಅಗತ್ಯವಾದ ವಸ್ತು ಜೀವಿಯ ಎಲ್ಲಾ ಲಕ್ಷಣಗಳು. ಅಂದರೆ ಆಕಾರ, ಗಾತ್ರ, ಬಣ್ಣ, ಚಯಾಪಚಯ ಕ್ರಿಯೆ ಮುಂತಾದವುಗಳನ್ನು ನಿಯಂತ್ರಿಸುವಂತಿರಬೇಕು. ಹಾಗೆಯೇ ಈ ರಾಸಾಯನಿಕದಲ್ಲಿ ಅಡಗಿರುವ ಸಂಕೇತವನ್ನು ಕಾರ್ಯ ರೂಪಕ್ಕೆ ತರಲು ಅವಶ್ಯವಿರುವ ವ್ಯವಸ್ಥೆ ಜೀವಕೋಶಗಳಲ್ಲಿರಬೇಕು. ಈ ಗುಣಗಳನ್ನು ಹೊಂದಿರುವ ರಾಸಾಯನಿಕ ಅಣುವೆಂದರೆ ‘ಡಿಎನ್‌ಎ’ (ಡಿಆಕ್ಸಿರೈಬೊ ನ್ಯೂಕ್ಲಿಯಿಕ್ ಆಮ್ಲ, Deoxyribo Nucleic Acid, DNA). ಇದೊಂದು ಸಂಕೀರ್ಣ ಅನುವಂಶೀಯ ವಸ್ತುವಾಗಿದ್ದು ಜೀವಿಗಳ ವರ್ಣತಂತು (Chromosome)ಗಳಲ್ಲಿ ಹುದುಗಿರುತ್ತದೆ.
▪️ಡಿಎನ್‌ಎ ರಚನೆ:
(Structureof DNA)
━━━━━━━━━━
ಜೀವಿಗಳಲ್ಲಿ ಡಿಎನ್‌ಎ ನಿರ್ದಿಷ್ಟ ಗಾತ್ರದಲ್ಲಿದ್ದು ಸುರಳಿ ಸುತ್ತಿ ಇಟ್ಟ ಹಗ್ಗದಂತೆ ಜೀವಕೋಶದ ಕೋಶಕೇಂದ್ರದಲ್ಲಿರುತ್ತದೆ. ಪ್ರತಿ ಜೀವಿಯ ಡಿಎನ್‌ಎಯು ನ್ಯೂಕ್ಲಿಯೊಟೈಡ್‌ಗಳೆಂಬ ರಾಸಾಯನಿಕ ಗುಂಪುಗಳ ಜೋಡಣೆಯಿಂದ ಆಗಿರುತ್ತದೆ. ಪ್ರತಿ ನ್ಯೂಕ್ಲಿಯೊಟೈಡ್‌ನಲ್ಲಿ ಐದು ಇಂಗಾಲದ ಪರಮಾಣುಗಳಿರುವ ಸಕ್ಕರೆ (Pentose sugar), ಸಾರಜನಕಯುಕ್ತ ರಾಸಾಯನಿಕಗಳಾದ ಪ್ಯೂರಿನ್ (Purine) ಅಥವ ಪಿರಿಮಿಡಿನ್ (Pyrimidine) ಮತ್ತು ಫಾಸ್ಪೆಟ್ ಗುಂಪುಗಳಿರುತ್ತವೆ.
ಇಂತಹ ನ್ಯೂಕ್ಲಿಯೊಟೈಡ್‌ನ ನಾಲ್ಕು ವಿಧಗಳೆಂದರೆ ಪ್ಯೂರಿನ್‌ಗಳಾದ ಅಡಿನೈನ್ (Adenine) ಮತ್ತು ಗ್ವಾನೈನ್ (Guanine), ಪಿರಿಮಿಡಿನ್‌ಗಳಾದ ಥೈಮಿನ್ (Thymine) ಮತ್ತು ಸೈಟೊಸಿನ್ (Cytosine). ಎಲ್ಲಾ ಜೀವಿಯಲ್ಲಿರುವ ಡಿಎನ್‌ಎ ಗಳಲ್ಲಿ ಇದೇ ನಾಲ್ಕು ನ್ಯೂಕ್ಲಿಯೊಟೈಡ್‌ಗಳಿರುತ್ತವೆ. ಆದರೆ ಅವುಗಳ ಸಂಖ್ಯೆ ಮತ್ತು ಸರಣಿ ಜೋಡಣೆ ಪ್ರತಿ ಜೀವಿಯಲ್ಲಿ ವ್ಯತ್ಯಾಸವಾಗುತ್ತದೆ.
- ಎಲ್ಲಾ ಜೀವಿಗಳಲ್ಲಿ ಡಿಎನ್‌ಎ ಎರಡು ಎಳೆಗಳಿಂದಾಗಿದ್ದು ಒಂದಕ್ಕೊಂದು ಹೆಣೆದುಕೊಂಡಿರುತ್ತವೆ. ಪ್ರತಿಯೊಂದು ಎಳೆಯಲ್ಲಿಯೂ ಹಲವಾರು ನ್ಯೂಕ್ಲಿಯೊಟೈಡ್‌ಗಳ ಸರಣಿಯಿರುತ್ತದೆ. ಎರಡು ಎಳೆಗಳಲ್ಲಿರುವ ನ್ಯೂಕ್ಲಿಯೊಟೈಡ್‌ಗಳು ಒಂದಕ್ಕೊಂದು ಪೂರಕವಾಗಿರುತ್ತವೆ. ಅಂದರೆ ಒಂದು ಎಳೆಯ ಅಡಿನೈನ್ ನ್ಯೂಕ್ಲಿಯೊಟೈಡ್ ಮತ್ತೊಂದು ಎಳೆಯ ಥೈಮಿನ್‌ನೊಂದಿಗೆ ಹಾಗೆಯೇ ಒಂದು ಎಳೆಯ ಗ್ವಾನಿನ್ ಮತ್ತೊಂದು ಎಳೆಯ ಸೈಟೊಸಿನ್‌ನೊಂದಿಗೆ ಪೂರಕ ಅನುಬಂಧ ಹೊಂದಿರುತ್ತದೆ. ಇದನ್ನು ಪೂರಕ ಜೊತೆ (Complementary base-pairing) ಎನ್ನುತ್ತೇವೆ.
- ಕೋಶವಿಭಜನೆಯ ಸಮಯದಲ್ಲಿ ಪ್ರತಿ ಡಿಎನ್‌ಎ ಅಣುವು ತನ್ನದೇ ಪ್ರತಿರೂಪವನ್ನು ಸೃಷ್ಟಿ ಮಾಡುತ್ತಿದ್ದು ಸಂತತಿಯಿಂದ ಸಂತತಿಗೆ ರವಾನೆಯಾಗುತ್ತದೆ. ಇದರಲ್ಲಿ ಸ್ವಲ್ಪವೇ ಏರುಪೇರಾದರೂ ಆ ಪ್ರಭೇದದ ಸಂತತಿಯಲ್ಲಿ ಗಮನಾರ್ಹ ಬದಲಾವಣೆಗಳಾಗಬಹುದು.
▪️ಡಿಎನ್‌ಎ ಪಾತ್ರ:
(Role of DNA)
━━━━━━━━━
ಜೀವಿಗಳಲ್ಲಿ ನಡೆಯುವ ಜೀವರಾಸಾಯನಿಕ ಕ್ರಿಯೆಗಳಿಗೆ ಹಲವಾರು ಪ್ರೊಟಿನ್ ಕಿಣ್ವಗಳ ಮತ್ತು ರಸದೂತಗಳ (Hormone) ಅಗತ್ಯವಿರುತ್ತದೆ. ಡಿಎನ್‌ಎ ನಲ್ಲಿರುವ ನ್ಯೂಕ್ಲಿಯೊಟೈಡ್‌ಗಳ ಸರಣಿ ಅನುಸಾರ ಆರ್‌ಎನ್‌ಎ (ರೈಬೊ ನ್ಯೂಕ್ಲಿಯಿಕ್ ಆಮ್ಲ, Ribonucleic Acid, RNA) ತಯಾರಾಗುತ್ತದೆ. ಈ ಕ್ರಿಯೆಯನ್ನು ಪ್ರತಿಲೇಖನ (Transcription) ಎನ್ನುವರು. ಆನಂತರ ಆರ್‌ಎನ್‌ಎ ಯಲ್ಲಿರುವ ನ್ಯೂಕ್ಲಿಯೊಟೈಡ್ ಸರಣಿ ಜೋಡಣೆಯ ಸಂಕೇತವನ್ನು ಅನುಸರಿಸಿ ಅಮೈನೊ ಆಮ್ಲಗಳ ಸರಣಿ ಜೋಡಣೆಯಾಗಿ ಪ್ರೊಟಿನ್‌ಗಳ ಉತ್ಪಾದನೆಯಾಗುತ್ತದೆ. ಇದನ್ನು ಭಾಷಾಂತರ (Translation) ಎನ್ನುವರು. ಅಂದರೆ ಪ್ರತಿಯೊಂದು ಜೀವಿಯ ಜೈವಿಕ ಕ್ರಿಯೆಗಳಿಗೆ ಅವಶ್ಯವಾದ ಪ್ರೊಟಿನ್ ಉತ್ಪಾದನೆಗೆ ಬೇಕಾದ ನಿದೇರ್ಶನ ಡಿಎನ್‌ಎ ಯದ್ದು. ಜೈವಿಕ ಕ್ರಿಯೆಯೆಂಬ ನಾಟಕದಲ್ಲಿ ಭಾಗವಹಿಸುವ ಪ್ರೊಟಿನ್‌ಗಳದ್ದು ನಟರ ಪಾತ್ರ. ಯಾವ ಪ್ರೊಟಿನ್ ಯಾವಾಗ ಮತ್ತು ಎಷ್ಟು ತಯಾರಾಗಬೇಕು ಅಲ್ಲದೆ ಹಾಗೆ ತಯಾರಾದ ಪ್ರೊಟಿನ್ ಎಷ್ಟು ಕಾಲದವರಗೆ ಸಕ್ರಿಯವಾಗಿರಬೇಕು ಎನ್ನುವುದನ್ನು ಸಹ ಡಿಎನ್‌ಎ ನಿರ್ಧರಿಸುತ್ತದೆ.
- ಡಿಎನ್‌ಎ ದಲ್ಲಿರುವ ಒಂದು ನಿರ್ದಿಷ್ಟ ನ್ಯೂಕ್ಲಿಯೊಟೈಡ್‌ಗಳ ಸರಣಿಯನ್ನು ಗುಣಾಣು (Gene) ಎಂದು ಕರೆಯುತ್ತಾರೆ. ಇಂತಹ ಗುಣಾಣುಗಳು ಅಭಿವ್ಯಕ್ತಿಗೊಂಡಾಗ (Gene Expression) ಡಿಎನ್‌ಎ ಯಲ್ಲಿರುವ ನ್ಯೂಕ್ಲಿಯೊಟೈಡ್ ಸರಣಿಯ ಸಂಕೇತವನ್ನುಸರಿಸಿ ಆರ್‌ಎನ್‌ಎ ಯ ನ್ಯೂಕ್ಲಿಯೊಟೈಡ್ ಸರಣಿ ತಯಾರಾಗಿ ಅದು ಪ್ರೊಟಿನ್‌ನಲ್ಲಿರುವ ಅಮೈನೊ ಆಮ್ಲಗಳ ಸರಣಿಯನ್ನು ನಿರ್ಧರಿಸುತ್ತದೆ. ಹಾಗಾಗಿ ಯಾವುದೇ ಪ್ರಭೇದದ ರಹಸ್ಯ ಆ ಜೀವಿಯಲ್ಲಿರುವ ಡಿಎನ್‌ಎ ನಲ್ಲಿ ಅಡಗಿರುತ್ತದೆ.
- ವಿವಿಧ ಜೀವಿಗಳಲ್ಲಿರುವ ಡಿಎನ್‌ಎ ಗಾತ್ರ ಮತ್ತು ನ್ಯೂಕ್ಲಿಯೊಟೈಡ್‌ಗಳ ಸರಣಿಯಲ್ಲಿನ ವ್ಯತ್ಯಾಸಗಳು ಜೀವವೈವಿಧ್ಯಕ್ಕೆ ಕಾರಣವಾಗಿದೆ. ಸಹಸ್ರಾರು ವರ್ಷಗಳ ಜೀವ ವಿಕಾಸದಲ್ಲಿ ಪ್ರತಿ ಜೀವಿಯಲ್ಲಿಯೂ ಡಿಎನ್‌ಎ ಅನುವಂಶಿಕ ವಸ್ತುವಾಗಿ ರೂಪುಗೊಂಡಿರುವುದು ಸೋಜಿಗದ ವಿಷಯ. ಅಂದರೆ ಪ್ರಕೃತಿಯ ಮೂಸೆಯಲ್ಲಿ ವಿಕಾಸ ಹೊಂದಿದ ಜೈವಿಕ ರಾಸಾಯನಿಕಗಳಲ್ಲಿ ಡಿಎನ್‌ಎ ಅಗ್ರಸ್ಥಾನದಲ್ಲಿದೆ.
(ಲೇಖಕರು: ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮಜೀವಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರು)
(Courtesy:ಪ್ರಜಾವಾಣಿ ದಿನಪತ್ರಿಕೆ)
Tuesday, 3 October 2023
•► ಸಂಸತ್ತಿನ ಸ್ಥಾಯಿ ಸಮಿತಿ. (Parliamentary Standing committee)
•► ಸಂಸತ್ತಿನ ಸ್ಥಾಯಿ ಸಮಿತಿ.
(Parliamentary Standing committee)
━━━━━━━━━━━━━━━━━━━━━━━━
- ಸಂಸತ್ತಿನ ಉಭಯ ಸದನಗಳ ಸದಸ್ಯರನ್ನು ಒಳಗೊಂಡ ಸಮಿತಿಗಳನ್ನು ಸಂಸದೀಯ ಸಮಿತಿ ಎನ್ನಲಾಗುತ್ತದೆ.
- ಸಂಸದೀಯ ಸಮಿತಿಯು ಸದನದಿಂದ ನೇಮಕಗೊಂಡ/ ಚುನಾಯಿತರಾದ ಅಥವಾ ಸ್ಪೀಕರ್/ಅಧ್ಯಕ್ಷರಿಂದ ನಾಮನಿರ್ದೇಶನಗೊಂಡ ಸಂಸದರ(MP's) ಸಮಿತಿಯಾಗಿದೆ.
- ಸಮಿತಿಯು ಸ್ಪೀಕರ್/ಅಧ್ಯಕ್ಷರ ನಿರ್ದೇಶನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ತನ್ನ ವರದಿಯನ್ನು ಸದನಕ್ಕೆ ಅಥವಾ ಸ್ಪೀಕರ್/ಅಧ್ಯಕ್ಷರಿಗೆ ಸಲ್ಲಿಸುತ್ತದೆ.
- ಇದರಲ್ಲಿ 2 ವಿಧ.
-1.ತಾತ್ಕಾಲಿಕ ಸಮಿತಿ (Ad Hoc Committee)
ಇದು ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ ವರದಿ ನೀಡುತ್ತದೆ. ಆ ಬಳಿಕ ಸಮಿತಿ ತಂತಾನೆ ವಿಸರ್ಜನೆಗೊಳ್ಳುತ್ತದೆ.
- 2.ಸ್ಥಾಯಿ ಸಮಿತಿ (Standing Committee).
ಪ್ರತಿ ಸ್ಥಾಯಿ ಸಮಿತಿ ತಲಾ 31 ಸದಸ್ಯರನ್ನು ಹೊಂದಿರುತ್ತದೆ. ಸದನದಲ್ಲಿ ಪಕ್ಷಗಳ ಬಲಾಬಲ ಆಧರಿಸಿ ಸಮಿತಿಯಲ್ಲಿ ಆಯಾ ಪಕ್ಷಗಳಿಗೆ ಸ್ಥಾನ ನಿಗದಿ ಮಾಡಲಾಗಿರುತ್ತದೆ. ಇದರ ಸದಸ್ಯರನ್ನು ಕಾಲಾನುಕಾಲಕ್ಕೆ ನೇಮಿಸಲಾಗುತ್ತದೆ.
- ಸ್ಥಾಯಿ ಸಮಿತಿಗಳು ಶಾಶ್ವತವಾಗಿರುತ್ತವೆ (ಪ್ರತಿ ವರ್ಷ ಅಥವಾ ನಿಯತಕಾಲಿಕವಾಗಿ ರಚನೆಯಾಗುತ್ತವೆ) ಮತ್ತು ನಿರಂತರವಾಗಿ ಕಾರ್ಯನಿರ್ವಹಿಸುತ್ತವೆ.
- ಸಂಸತ್ತಿನ ಪ್ರಸ್ತುತ ಸ್ಥಾಯಿ ಸಮಿತಿಯು ಲೋಕಸಭೆ ಮತ್ತು ರಾಜ್ಯಸಭೆಯಿಂದ 31 ಸದಸ್ಯರನ್ನು ಒಳಗೊಂಡಿದ್ದು ಇದರಲ್ಲಿ 21 ಲೋಕಸಭೆಯ ಮತ್ತು 10 ರಾಜ್ಯಸಭೆಯ ಸದಸ್ಯರನ್ನು ಒಳಗೊಂಡಿದೆ.
- ಸಂಸತ್ತಿನಲ್ಲಿ ಒಟ್ಟು 24 ಸ್ಥಾಯಿ ಸಮಿತಿಗಳಿವೆ.
- ಈ ಪೈಕಿ 8 ರಾಜ್ಯಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ಮತ್ತು 16 ಲೋಕಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ಇರುತ್ತವೆ. ಗೃಹ, ಹಣಕಾಸು, ವಿದೇಶಾಂಗ ವ್ಯವಹಾರಗಳ ಕುರಿತಾದ ಸಮಿತಿಯ ಅಧ್ಯಕ್ಷತೆಯನ್ನು ಸಾಮಾನ್ಯವಾಗಿ ವಿರೋಧ ಪಕ್ಷದ ಹಿರಿಯ ನಾಯಕರಿಗೆ ನೀಡಲಾಗುತ್ತದೆ.