"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday 23 January 2019

●.ಮಾನವ ಹಕ್ಕುಗಳು ಮತ್ತು ಅವುಗಳ ಅನುಷ್ಠಾನ : (Human Rights and their Implementation)

●.ಮಾನವ ಹಕ್ಕುಗಳು ಮತ್ತು ಅವುಗಳ ಅನುಷ್ಠಾನ :
 (Human Rights and their Implementation)
━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ
(General Studies)

★ ಭಾರತದ ಸಂವಿಧಾನ
(Indian Constitution)



• ಒಬ್ಬ ಪ್ರಜೆಗೆ ಸಂವಿಧಾನದಲ್ಲಿ ಕೊಡ ಮಾಡಲ್ಪಟ್ಟ ಬದುಕುವ ಹಕ್ಕು, ಸ್ವಾತಂತ್ರ್ಯದ ಹಕ್ಕು, ಸಮಾನತೆಯ ಹಕ್ಕು ಹಾಗೂ ಘನತೆಯ ಹಕ್ಕು ಇದಕ್ಕೆ ಮಾನವ ಹಕ್ಕು ಎನ್ನುತ್ತಾರೆ. ಉದಾಹರಣೆಗೆ ಒಬ್ಬ ಪ್ರಜೆಗೆ ಇರುವಂತಹ ವಾಕ್ ಸ್ವಾತಂತ್ರ್ಯ. ಇದು ಸಂವಿಧಾನದಲ್ಲಿ ಒಬ್ಬ ಪ್ರಜೆಗೆ ಇರುವ ಮಾನವ ಹಕ್ಕು. ಮಾನವನ ಜೀವ ಮತ್ತು ವ್ಯಕ್ತಿ ಸ್ವಾತಂತ್ರ್ಯವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಇದು ಒಬ್ಬ ವ್ಯಕ್ತಿಯ ಸಂವಿಧಾನದ ಹಕ್ಕು.

• ಒಬ್ಬ ವ್ಯಕ್ತಿಗೆ ಬದುಕುವ ಹಕ್ಕಿರುವಾಗ ನ್ಯಾಯಯುತವಾಗಿ ಬದುಕಲು ಸಂಪಾದಿಸುವ ಹಕ್ಕು ಇರುತ್ತದೆ. ಯಾಕೆಂದರೆ ಯಾವ ವ್ಯಕ್ತಿಯೂ ಸಂಪಾದನೆ ಇಲ್ಲದೆ ಬದುಕಲು ಸಾಧ್ಯವಿಲ್ಲ. ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಕಾನೂನು ನೆರವು ಹಾಗೂ ಶಿಕ್ಷಣ ಪಡೆಯುವ ಹಕ್ಕು ಇವು ಒಬ್ಬ ಪ್ರಜೆಯ ಮೂಲಭೂತ ಹಕ್ಕುಗಳು.

• ದಸ್ತಗಿರಿ ಹಾಗೂ ಬಂಧನದಿಂದ ರಕ್ಷಣೆ ಪಡೆಯುವುದು ಸಹಾ ಮಾನವನ ಮೂಲಭೂತ ಹಕ್ಕು.

• ಬಲಾತ್ಕಾರವಾಗಿ ಒಬ್ಬ ವ್ಯಕ್ತಿಯಿಂದ ಕೆಲಸ ಮಾಡಿಸುವುದು ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಈ ಮಾನವ ಹಕ್ಕನ್ನು ರಕ್ಷಣೆ ಮಾಡುವಂತಹ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇರುತ್ತದೆ.

• ಬಾಲ ಕಾರ್ಮಿಕರಾಗಿ 14 ವರ್ಷಕ್ಕಿಂತಲೂ ಕೆಳಗಿನ ವಯಸ್ಸಿನ ಮಕ್ಕಳನ್ನು ಕಾರ್ಖಾನೆಗಳಲ್ಲಿ, ಗಣಿಗಳಲ್ಲಿ ಮತ್ತು ಅಪಾಯಕಾರಿ ಸ್ಥಳಗಳಲ್ಲಿ ಕೆಲಸಕ್ಕೆ ತೊಡಗಿಸಿಕೊಳ್ಳುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಇದೂ ಸಹಾ ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ.

• ಹಿಂದೂ, ಮುಸಲ್ಮಾನ, ಕ್ರೈಸ್ತ ಅಥವಾ ಬೇರೆ ಯಾವುದೇ ಧರ್ಮದವರಿಗೆ ತಮ್ಮ ಧರ್ಮಕ್ಕೆ ನಿಷ್ಠೆ ತೋರುವುದು ಹಾಗೂ ಅದನ್ನು ಪಾಲಿಸಿಕೊಂಡು ಹೋಗುವುದು ಅವರ ಮಾನವ ಹಕ್ಕು. ಅವರ ಈ ಸ್ವಾತಂತ್ರ್ಯವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ.

• ಒಬ್ಬ ಪ್ರಜೆಯ ಮೂಲಭೂತ ಹಕ್ಕನ್ನು ಸರಕಾರ ಅಥವಾ ಸರಕಾರಿ ನೌಕರರು ಉಲ್ಲಂಘಿಸಿದಾಗ ಮೂಲಭೂತ ಹಕ್ಕಿನಿಂದ ವಂಚಿಸಲ್ಪಟ್ಟ ವ್ಯಕ್ತಿಗೆ ನ್ಯಾಯಾಲಯ ಸರಕಾರದಿಂದ ಪರಿಹಾರ ಕೊಡಿಸಬಹುದು.

• ಇತ್ತೀಚೆಗೆ ಕಾರಾಗೃಹದ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಉದಾಹರಣೆಗೆ, ಜೈಲಿನ ಅನುಕೂಲತೆಗಿಂತಲೂ ಹೆಚ್ಚಿನ ಸಂಖ್ಯೆಯ ಖೈದಿಗಳ ಸೇರ್ಪಡೆ, ಖೈದಿಗಳ ಕೇಸುಗಳ ವಿಚಾರಣೆಯಲ್ಲಾಗುವ ವಿಳಂಬ, ಕಾರಾಗೃಹದಲ್ಲಿ ಖೈದಿಗಳು ಅನುಭವಿಸುತ್ತಿರುವ ಹಿಂಸೆ, ಕಿರುಕುಳ, ಖೈದಿಗಳ ಆರೋಗ್ಯದ ಬಗ್ಗೆ ಅಸಡ್ಡೆ, ಇತ್ಯಾದಿಗಳು ಮಾನವ ಹಕ್ಕನ್ನು ಕಸಿದುಕೊಂಡಂತೆ. ಇಂತಹ ವಿಚಾರಗಳನ್ನು ರಾಷ್ಟ್ರೀಯ ಮಾನವ ಹಕ್ಕಿನ ಆಯೋಗ (Human Rights Commission) ವಿಚಾರಣೆ ನಡೆಸಿ ಸರಕಾರಕ್ಕೆ ಸೂಕ್ತ ನಿರ್ದೇಶನ ಕೊಡಬಹುದು.

• ಒಬ್ಬ ಪ್ರಜೆಗೆ ಬದುಕಲು ಹೇಗೆ ಅಧಿಕಾರವಿರುತ್ತದೋ, ಅದೇ ರೀತಿ ತನ್ನ ಆರೋಗ್ಯವನ್ನು ಕಾಪಾಡಲು ಹಕ್ಕಿರುತ್ತದೆ. ಒಬ್ಬ ಪ್ರಜೆಯ ಆರೋಗ್ಯ ಕಾಪಾಡುವ ಸಲುವಾಗಿ ಮೂಲಭೂತ ಅನುಕೂಲತೆಗಳನ್ನು ಕಲ್ಪಿಸುವುದು ಸರಕಾರದ ಆದ್ಯ ಕರ್ತವ್ಯವಾಗಿರುತ್ತದೆ. ಇಂತಹ ಅನುಕೂಲತೆಯನ್ನು ಪಡೆಯುವುದು ಒಬ್ಬ ವ್ಯಕ್ತಿಯ ಮೂಲಭೂತ ಹಕ್ಕಾಗಿರುವುದರಿಂದ ಈ ಅನುಕೂಲದ ವಂಚನೆ ಒಬ್ಬ ವ್ಯಕ್ತಿಯ ಮೂಲಭೂತ ಹಕ್ಕಿನ ವಂಚನೆ ಆಗುತ್ತದೆ. ಖೈದಿಗಳಿಗೆ, ಕಾರ್ಮಿಕರಿಗೆ ಸರಕಾರವು ಉಚಿತವಾಗಿ ಈ ಅನುಕೂಲತೆಯನ್ನು ಒದಗಿಸಬೇಕು. ಯಾಕೆಂದರೆ, ಇದು ಒಬ್ಬ ವ್ಯಕ್ತಿಯ ಮೂಲಭೂತ ಹಕ್ಕು.

• ಪೋಲೀಸರ ಬಂಧನದಲ್ಲಿ ಹಿಂಸೆ, ಕಿರುಕುಳ, ಅತ್ಯಾಚಾರ, ಕೊಲೆ ಇತ್ಯಾದಿ ಸಂಭವಿಸಿದಲ್ಲಿ ಇದು ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಕಾರಾಗೃಹದಲ್ಲಿ ಒಬ್ಬ ವಿಚಾರಣಾ ಖೈದಿ ಅಥವಾ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಯ ಜೀವ ರಕ್ಷಣೆ ಮತ್ತು ಆತನ ಆರೋಗ್ಯ ಕಾಪಾಡುವುದು ಕಾರಾಗೃಹದ ಅಧಿಕಾರಿಗಳ ಕರ್ತವ್ಯ. ಸೂಕ್ತ ಸಮಯದಲ್ಲಿ ಅಂತಹ ಖೈದಿಗಳಿಗೆ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸವಲತ್ತು ಒದಗಿಸದೇ ಇರುವುದು ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ.



●.ಮಾನವ ಹಕ್ಕು ರಕ್ಷಣಾ ಕಾಯ್ದೆಯನ್ನು ಅನುಷ್ಠಾನಕ್ಕೆ ತರಲು :
━━━━━━━━━━━━━━━━━━━━━━━━━━━━━━━━━━━
ಅ) ರಾಷ್ಟ್ರೀಯ ಮಾನವ ಹಕ್ಕು ಆಯೋಗ
ಆ) ರಾಜ್ಯ ಮಾನವ ಹಕ್ಕು ಆಯೋಗ
ಅ) ಮಾನವ ಹಕ್ಕುಗಳ ನ್ಯಾಯಾಲಯಗಳು ಅಸ್ಥಿತ್ವಕ್ಕೆ ಬಂದಿರುತ್ತದೆ.


●.ರಾಷ್ಟ್ರೀಯ ಮಾನವ ಹಕ್ಕು ಆಯೋಗ
━━━━━━━━━━━━━━━━━━━━━━
• ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ
1. ಒಬ್ಬರು ಅಧ್ಯಕ್ಷರಿದ್ದು, ಅವರು ಸರ್ವೋಚ್ಛ ನ್ಯಾಯಾಲಯದ (Supreme Court) ಮುಖ್ಯ ನ್ಯಾಯಾಧೀಶರು ಅಥವಾ ನಿವೃತ್ತ ಮುಖ್ಯ ನ್ಯಾಯಾಧೀಶರಾಗಿರತಕ್ಕದ್ದು.
2. ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಅಥವಾ ನಿವೃತ್ತ ನ್ಯಾಯಾಧೀಶರು
3. ರಾಜ್ಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಅಥವಾ ನಿವೃತ್ತ ಮುಖ್ಯ ನ್ಯಾಯಾಧೀಶರು ಸದಸ್ಯರುಗಳಾಗಿರುತ್ತಾರೆ.
4. ಅಲ್ಲದೇ ಇನ್ನಿಬ್ಬರು ಸದಸ್ಯರಿದ್ದು, ಅವರು ಮಾನವ ಹಕ್ಕಿನ ಬಗ್ಗೆ ಹೆಚ್ಚಿನ ಪರಿಣತಿ ಉಳ್ಳವರಾಗಿರತಕ್ಕದ್ದು.
5. ಒಬ್ಬ ಮಹಾಕಾರ್ಯದರ್ಶಿ ಇದ್ದು ಅವರು ಆಯೋಗದ ನಡವಳಿಕೆಗಳನ್ನು ನೋಡಿಕೊಳ್ಳುವವರಾಗಿರುತ್ತಾರೆ.

• ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ರಾಷ್ಟ್ರಪತಿ, ಪ್ರಧಾನ ಮಂತ್ರಿ, ಲೋಕಸಭಾ ಸ್ಪೀಕರ್, ಗೃಹಮಂತ್ರಿ, ವಿರೋಧ ಪಕ್ಷದ ನಾಯಕರು ಸಮಾಲೋಚನೆ ಮಾಡಿ ನೇಮಕ ಮಾಡುತ್ತಾರೆ.
ಆಯೋಗದ ಅವಧಿ ಐದು ವರ್ಷಗಳಿದ್ದು, ಇದರ ಮುಖ್ಯ ಕಛೇರಿ ನವದೆಹಲಿಯಲ್ಲಿರುತ್ತದೆ.


●.ರಾಜ್ಯ ಮಾನವ ಹಕ್ಕು ಆಯೋಗ:
━━━━━━━━━━━━━━━━━━━
• ಅದೇ ರೀತಿ, ರಾಜ್ಯ ಮಾನವ ಹಕ್ಕು ಆಯೋಗ ಸ್ಥಾಪನೆಯಾಗುತ್ತದೆ. ರಾಜ್ಯ ಮಟ್ಟದ ಆಯೋಗಕ್ಕೆ ಉಚ್ಛ ನ್ಯಾಯಾಲಯದ (High Court) ಮುಖ್ಯ ನ್ಯಾಯಾಧೀಶರು ಅಥವಾ ನಿವೃತ್ತ ಮುಖ್ಯ ನ್ಯಾಯಾಧೀಶರು, ಉಚ್ಛ ನ್ಯಾಯಾಲಯದ ನ್ಯಾಯಾಧೀಶರು ಅಥವಾ ನಿವೃತ್ತ ನ್ಯಾಯಾಧೀಶರು ಹಾಗೂ ಇತರ ಸದಸ್ಯರು ಇರುತ್ತಾರೆ.


●.ಮಾನವ ಹಕ್ಕು ನ್ಯಾಯಾಲಯ:
━━━━━━━━━━━━━━━━━━
• ಜಿಲ್ಲೆಗೊಂದರಂತೆ ರಾಜ್ಯ ಸರಕಾರವು ರಾಜ್ಯದ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಒಪ್ಪಿಗೆ ಮೇರೆಗೆ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರನ್ನು ಮಾನವ ಹಕ್ಕಿನ ಪ್ರಕರಣದ ತನಿಖೆಯ ಶೀಘ್ರ ಇತ್ಯರ್ಥಕ್ಕೆ ನೇಮಕ ಮಾಡಬಹುದು. ಮಾನವ ಹಕ್ಕಿನ ಉಲ್ಲಂಘನೆಯ ಪ್ರಕರಣಗಳನ್ನು ಈ ನ್ಯಾಯಾಲಯವು ಕಾನೂನಿನ ಚೌಕಟ್ಟಿನಲ್ಲಿ ತನಿಖೆ ನಡೆಸಿ, ಸೂಕ್ತ ಕಂಡಲ್ಲಿ ತಪ್ಪಿತಸ್ಥರನ್ನು ದಂಡಿಸಲು ಕ್ರಮ ಕೈಗೊಳ್ಳಬಹುದು ಮತ್ತು ನೊಂದವರಿಗೆ ಪರಿಹಾರ ಕೊಡಲು ಆದೇಶಿಸಬಹುದು.

• ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಮತೀಯ ಭಾವನೆಗಳನ್ನು ಕದಡಿಸುವ ಪ್ರಕರಣಗಳು ಸಹಾ ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಯಾವನೇ ಒಬ್ಬ ವ್ಯಕ್ತಿ ತನ್ನ ಧರ್ಮದ ಬಗ್ಗೆ ನಿಷ್ಢೆಯಿಂದ ಇದ್ದು ಅದನ್ನು ಪಾಲಿಸಿಕೊಂಡು ಹೋಗುತ್ತಿರುವಾಗ ಆತನನ್ನು ಬಲಾತ್ಕಾರವಾಗಿ ಆಸೆ, ಅಮಿಷ ಒಡ್ಡಿ ಮತಾಂತರ ಗೊಳಿಸುವುದು ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಅದೇ ರೀತಿ, ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ಮಾಡುವುದು, ಮೂರ್ತಿಗಳನ್ನು ಪುಡಿ ಮಾಡುವುದು, ಪವಿತ್ರ ಸ್ಥಳಗಳನ್ನು ಅಪವಿತ್ರ ಮಾಡಿ ಮತೀಯ ಭಾವನೆಗಳಿಗೆ ಧಕ್ಕೆ ತರುವುದು ಸಹಾ ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಇತ್ತೀಚೆಗೆ ನಮ್ಮ ಜಿಲ್ಲೆಯಲ್ಲಿ ನಡೆದ ದುರ್ಘಟನೆಗಳ ಬಗ್ಗೆ ರಾಜ್ಯ ಮಾನವ ಹಕ್ಕಿನ ಅಧ್ಯಕ್ಷರಾದ ನ್ಯಾಯಮೂರ್ತಿ ಎಸ್. ಆರ್. ನಾಯಕ್ ಹಾಗೂ ಸದಸ್ಯರು ಘಟನಾ ಸ್ಥಳಗಳಿಗೆ ಭೇಟಿಯಿತ್ತು ಪರಿಶೀಲಿಸಿದ ಬಗ್ಗೆ ನಮಗೆ ತಿಳಿದಿರುತ್ತದೆ.



●.ಮಾನವ ಹಕ್ಕು ಆಯೋಗದ ಕಾರ್ಯ ಕಲಾಪ:
━━━━━━━━━━━━━━━━━━━━━━━━━

1. ಸರಕಾರಿ ಅಧಿಕಾರಿಯಿಂದ ಮಾನವ ಹಕ್ಕಿನ ಉಲ್ಲಂಘನೆಯಿಂದ ನೊಂದ ವ್ಯಕ್ತಿಯ ದೂರಿನ ಮೇರೆಗೆ ಅಥವಾ ಸ್ವಪ್ರೇರಣೆಯಿಂದ (Suo Moto) ಸಂಬಂಧ ಪಟ್ಟ ಮಾನವ ಹಕ್ಕಿನ ಉಲ್ಲಂಘನೆಯ ವಿಚಾರವಾಗಿ ತನಿಖೆ ಮಾಡುವುದು.
2. ಮಾನವ ಹಕ್ಕಿನ ಉಲ್ಲಂಘನೆಯ ಪ್ರಕರಣ ಯಾವುದಾದರೂ ನ್ಯಾಯಾಲಯದಲ್ಲಿ ತನಿಖೆಯಾಗುತ್ತಿದ್ದಲ್ಲಿ ಸದ್ರಿ ನ್ಯಾಯಾಲಯದ ಅನುಮತಿ ಪಡೆದು ತನಿಖೆಯಲ್ಲಿ ಭಾಗಿಯಾಗುವುದು.
3. ಜೈಲುಗಳಲ್ಲಿ ಅಥವಾ ಸರಕಾರಿ ಸ್ವಾಮ್ಯದ ಸಂಘ ಸಂಸ್ಥೆಗಳಲ್ಲಿ ಬಂಧಿಯಾಗಿರುವ ಅಥವಾ ಇರಿಸಲ್ಪಟ್ಟ, ವ ಚಿಕಿತ್ಸೆಗೊಳಪಡುತ್ತಿರುವ ಸ್ಥಳಗಳಿಗೆ ಸರಕಾರಕ್ಕೆ ಮುನ್ಸೂಚನೆ ಕೊಟ್ಟು ಭೇಟಿ ಕೊಡುವುದು. ಮತ್ತು ಸದ್ರಿ ವ್ಯಕ್ತಿಗಳ ಜೀವನ ಕ್ರಮದ ಬಗ್ಗೆ ಅಧ್ಯಯನ ಮಾಡುವುದು ಹಾಗೂ ಆ ಸ್ಥಳಗಳಲ್ಲಿ ಮಾನವ ಹಕ್ಕಿನ ಉಲ್ಲಂಘನೆಯಾಗದಂತೆ ಸರಕಾರಕ್ಕೆ ಸಲಹೆ ಸೂಚನೆ ಕೊಡುವುದು.
4. ಮಾನವ ಹಕ್ಕಿನ ವಿಚಾರಗಳಿಗೆ ಸಂಬಂಧ ಪಟ್ಟಂತೆ ಸಂಶೋಧನೆ ನಡೆಸುವುದು ಹಾಗೂ ಮಾನವ ಹಕ್ಕನ್ನು ಪರಿಪಾಲಿಸಲು ಸೂಕ್ತ ಕ್ರಮ ಕೈಗೊಳ್ಳುವುದು ಹಾಗೂ ಮಾಧ್ಯಮಗಳ ಮುಖಾಂತರ ಜನಸಾಮಾನ್ಯರಿಗೆ ಮಾನವ ಹಕ್ಕಿನ ಬಗ್ಗೆ ಅರಿವು ಮೂಡಿಸುವುದು ಹಾಗೂ ಆ ವಿಚಾರಗಳಲ್ಲಿ ಕಾರ್‍ಯಾಗಾರಗಳನ್ನು ಹಮ್ಮಿಕೊಳ್ಳುವುದು.
5. ಸರಕಾರೇತರ ಸಂಘ ಸಂಸ್ಥೆಗಳಿಗೆ ಮಾನವ ಹಕ್ಕಿನ ಬಗ್ಗೆ ಅರಿವು ಮೂಡಿಸಲು ಪ್ರೋತ್ಸಾಹ ಕೊಡುವುದು ಇತ್ಯಾದಿ.



●.ಆಯೋಗಕ್ಕೆ ತನಿಖಾ ವಿಚಾರದಲ್ಲಿರುವ ಅಧಿಕಾರಗಳು:
━━━━━━━━━━━━━━━━━━━━━━━━━━━━━
6. ದೂರನ್ನು ವಿಚಾರ ಮಾಡುವ ಕಾಲಕ್ಕೆ ಆಯೋಗಕ್ಕೆ ಸಿವಿಲ್ ನ್ಯಾಯಾಲಯಕ್ಕೆ ವ್ಯಾಜ್ಯ ತನಿಖೆ ಮಾಡಲು ಇರುವ ಎಲ್ಲಾ ಅಧಿಕಾರಗಳು ಇರುತ್ತವೆ. ಅಂದರೆ:-
a) ಸಂಬಂಧ ಪಟ್ಟ ವಿಚಾರದಲ್ಲಿ ತನಿಖೆಗಾಗಿ ಯಾರನ್ನಾದರೂ ಕರೆಸಿ ಪ್ರಮಾಣ ವಚನ ಬೋಧಿಸಿ ವಿಚಾರಣೆ ಮಾಡುವುದು.
b) ವಿಚಾರಣೆಗೆ ಸಂಬಂಧ ಪಟ್ಟ ದಾಖಲೆಗಳನ್ನು ಪತ್ತೆ ಹಚ್ಚಿ ಹಾಜರು ಪಡಿಸುವುದು.
c) ಅಫಿದಾವಿತ್ ಮೂಲಕ ಸಾಕ್ಷ್ಯವನ್ನು ಸ್ವೀಕರಿಸುವುದು.
d) ಸರಕಾರಿ ಕಛೇರಿ ಅಥವಾ ನ್ಯಾಯಾಲಯದಿಂದ ತನಿಖೆಗೆ ಸಂಬಂಧಿತ ಸಾರ್ವಜನಿಕ ದಾಖಲೆ (Public Servant) ಗಳನ್ನು ಆಯೋಗದ ಮುಂದೆ ಹಾಜರು ಪಡಿಸಲು ಕೋರುವುದು.
e) ಸಾಕ್ಷಿಗಳನ್ನು ಅಥವಾ ದಾಖಲೆಗಳನ್ನು ತನಿಖೆ ಮಾಡಲು ಕಮಿಷನ್ ನೇಮಕ ಮಾಡುವುದು.
f) ಒಬ್ಬ ವ್ಯಕ್ತಿಯಿಂದ ತನಿಖೆಗೆ ಅವಶ್ಯಕವಾದ ಮಾಹಿತಿಯನ್ನು ಆಯೋಗದ ಮುಂದೆ ಒದಗಿಸಲು ಆದೇಶಿಸುವುದು.
g) ಯಾವುದೇ ಕಟ್ಟಡ ಅಥವಾ ಸ್ಥಳದಲ್ಲಿ ತನಿಖೆಗೆ ಸಂಬಂಧ ಪಟ್ಟ ದಾಖಲೆಗಳು ಇದ್ದಲ್ಲಿ ಅಂತಹ ಸ್ಥಳಗಳಿಗೆ ಪ್ರವೇಶಿಸಿ ಸದ್ರಿ ದಾಖಲೆಗಳನ್ನು ಪರಿಶೀಲಿಸುವುದು ಅಥವಾ ವಶಪಡಿಸಿಕೊಳ್ಳುವುದು.
h) ಆಯೋಗದ ಸರಹದ್ದಿನಲ್ಲಿ ಅಥವಾ ಸಮ್ಮುಖದಲ್ಲಿ ಅಪರಾಧ ಸಂಭವಿಸಿದ್ದಲ್ಲಿ ಅಪರಾಧ ಸಂಭವಿಸಿದ ಬಗ್ಗೆ ಹೇಳಿಕೆಗಳನ್ನು ಬರೆದುಕೊಂಡು ಸಂಬಂಧಪಟ್ಟ ದಂಡಾಧಿಕಾರಿಯವರಿಗೆ (Judicial Magistrate) ಪ್ರಕರಣ ದಾಖಲಿಸಿ ತನಿಖೆ ಮಾಡುವಂತೆ ನಿರ್ದೇಶನ ಕೊಡುವುದು.
i) ತನಿಖಾ ಕಾಲದಲ್ಲಿ ಅವಶ್ಯಕತೆ ಇದ್ದಲ್ಲಿ ಕೇಂದ್ರ ಅಥವಾ ರಾಜ್ಯ ಸರಕಾರದ ಯಾವುದೇ ಅಧಿಕಾರಿಯನ್ನು ಅನುಮತಿ ಪಡೆದು ತನಿಖೆಗೆ ಬಳಸಿಕೊಳ್ಳುವುದು.

• ತನಿಖಾ ಕಾಲದಲ್ಲಿ ಆಯೋಗವು ಬರೆದುಕೊಂಡ ಹೇಳಿಕೆಯನ್ನು ಯಾವುದೇ ವ್ಯಕ್ತಿಯ ವಿರುದ್ಧ ಸಿವಿಲ್ ಅಥವಾ ಕೋರ್ಟಿನಲ್ಲಿ ಆತನ ವಿರುದ್ಧ ಬಳಸಿಕೊಳ್ಳಲು ಬರುವುದಿಲ್ಲ. ಆದರೆ ಸದ್ರಿ ವ್ಯಕ್ತಿ ಉದ್ದೇಶ ಪೂರ್ವಕ ಸುಳ್ಳು ಹೇಳಿಕೆ ನೀಡಿದ್ದಲ್ಲಿ ಆತನ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರವಿರುತ್ತದೆ.

• ಆಯೋಗದ ತನಿಖೆಯಿಂದ ಯಾವುದೇ ಒಬ್ಬ ವ್ಯಕ್ತಿಯ ಘನತೆ ಗೌರವಕ್ಕೆ ಧಕ್ಕೆಯಾದಲ್ಲಿ ಅಂತಹ ವ್ಯಕ್ತಿಯಿಂದ ಆಯೋಗವು ವಿವರಣೆಯನ್ನು ಪಡೆಯಬಹುದಾಗಿದೆ ಹಾಗೂ ಆತನಿಗೆ ಆತನ ಪರವಾದ ಸಾಕ್ಷ್ಯಾಧಾರಗಳನ್ನು ಒದಗಿಸಲು ಸಾಕಷ್ಟು ಕಾಲಾವಕಾಶವನ್ನು ಒದಗಿಸಬಹುದಾಗಿದೆ.


●.ದೂರು ತನಿಕೆ ಮಾಡುವ ಕ್ರಮ:
━━━━━━━━━━━━━━━━━━━━
• ಮಾನವ ಹಕ್ಕಿನ ಉಲ್ಲಂಘನೆಯ ಬಗೆಗಿನ ದೂರು ದಾಖಲಾದ ನಂತರ ಆಯೋಗವು ಕೇಂದ್ರ ಅಥವಾ ರಾಜ್ಯ ಸರಕಾರದಿಂದ ಅಥವಾ ಸಂಬಂಧಪಟ್ಟ ಸಂಸ್ಥೆಗಳಿಂದ ಇಂತಿಷ್ಟೇ ಸಮಯದೊಳಗೆ ಈ ಕುರಿತು ವಿವರಣೆಯನ್ನು ಕೊಡತಕ್ಕದ್ದೆಂದು ತಾಖೀತು ಮಾಡತಕ್ಕದ್ದು. ನಿಯಮಿತ ಕಾಲಾವಧಿಯಲ್ಲಿ ವಿವರಣೆ ಬಾರದಿದ್ದಲ್ಲಿ ಆಯೋಗವು ತನಿಖೆಯನ್ನು ಸ್ವತಃ ಮುಂದುವರಿಸಿಕೊಂಡು ಹೋಗಬಹುದು.

No comments:

Post a Comment