"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday 2 August 2015

●.ಈ ದಿನದ (KAS/IAS) ಪ್ರಶ್ನೆ: (Short Notes) ☀.ಬಗರ್‌ ಹುಕುಂ :  (Bager Hukum) 

●.ಈ ದಿನದ (KAS/IAS) ಪ್ರಶ್ನೆ: (Short Notes)

☀.ಬಗರ್‌ ಹುಕುಂ :
(Bager Hukum)
━━━━━━━━━━━━━━━━━━━━━━━━━━━━━━━━━━━━━━━━━━━━━

★ಸಾಮಾನ್ಯ ಅಧ್ಯಯನ.
(GENERAL STUDIES)

★ಪ್ರಚಲಿತ ಘಟನೆಗಳ ಮೇಲೆ ನೋಟ್ಸ್
(Notes on current affairs)


✧.ಬಗರ್‌ಹುಕುಂ ಎಂಬುದು ಉರ್ದು ಭಾಷೆ ಪದ. ಬಗರ್‌ಹುಕುಂ ಎಂದರೆ ಅನಧಿಕೃತ ಸಾಗುವಳಿ ಎಂದರ್ಥ. ಸರ್ಕಾರಿ ಗೋಮಾಳ, ಅರಣ್ಯ ಇಲಾಖೆ, ಕಂದಾಯ ಇಲಾಖೆಯ ಭೂಮಿಯಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುವ ರೈತರು ಬಗರ್‌ಹುಕುಂ ಸಾಗುವಳಿದಾರರು. ಕಂದಾಯ ಇಲಾಖೆಯಲ್ಲಿ ಬಳಸುವ ಅನೇಕ ಪರಿಭಾಷೆಗಳಲ್ಲಿ ಇದೂ ಒಂದಾಗಿದೆ.

✧.ಊಳುವವನೇ ಭೂ ಒಡೆಯ ಕಾಯ್ದೆ ಜಾರಿಯೊಂದಿಗೆ ಬಗರ್‌ಹುಕುಂ ಸಾಗುವಳಿದಾರರು ಹುಟ್ಟಿಕೊಂಡರು. ಆಯಾಯ ಗ್ರಾಮಗಳಲ್ಲಿ ಖಾಲಿ ಇದ್ದ, ಫಲವತ್ತಾದ ಭೂಮಿಯನ್ನು ರೈತರು ಉಳುಮೆ ಮಾಡ ತೊಡಗಿದರು. ಈ ರೀತಿ ಉಳುಮೆ ಮಾಡುತ್ತಿದ್ದ ಭೂಮಿಯನ್ನು ಮಂಜೂರು ಮಾಡುವಂತೆ ಹುಟ್ಟಿಕೊಂಡ ಹೋರಾಟವೇ ಬಗರ್‌ಹುಕುಂ ಸಾಗುವಳಿದಾರರ ಹೋರಾಟ.

✧.ರಾಜ್ಯದ ಇಪ್ಪತ್ತು ಜಿಲ್ಲೆಗಳಲ್ಲಿ ಬಗರ್‌ಹುಕುಂ ಸಾಗುವಳಿದಾರ ರೈತರ ಸಮಸ್ಯೆಗಳು ತೀವ್ರತರವಾಗಿವೆ. ಬೆಂಗಳೂರು, ಮೈಸೂರು, ಬೆಳಗಾವಿ ಸೇರಿದಂತೆ ಹತ್ತು ಜಿಲ್ಲೆಗಳನ್ನು ಹೊರತುಪಡಿಸಿ ಮಂಡ್ಯ, ಹಾಸನ, ಚಿಕ್ಕಮಗಳೂರು, ತುಮಕೂರು, ಶಿವಮೊಗ್ಗ ಸೇರಿ ಉಳಿದ ಜಿಲ್ಲೆಗಳಲ್ಲಿ ಅತಿ ಹೆಚ್ಚು ಸಾಗುವಳಿದಾರರಿದ್ದಾರೆ. ಎರಡೂ ದಶಕಗಳಿಂದಲೂ ಭೂ ಮಂಜೂರಾತಿಗೆ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರಿ ಭೂಮಿ ಮರು ವಶಕ್ಕೆ ಪಡೆಯುವ ಸರ್ಕಾರದ ಈಚೆಗಿನ ಯತ್ನಗಳು ಸಾಗುವಳಿದಾರ ರೈತರ ಬದುಕನ್ನೇ ಆತಂಕಕ್ಕೆ ನೂಕಿದೆ.

✧.ರಾಜ್ಯದಲ್ಲಿ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ 1986ರಲ್ಲೇ ಬಗರ್‌ಹುಕುಂ ಸಾಗುವಳಿದಾರರ ಚಳವಳಿ ಆರಂಭಗೊಂಡಿತ್ತು. ಚಳವಳಿಯ ತೀವ್ರತೆ ಗಮನಿದ ಸರ್ಕಾರ ಭೂ ಸಕ್ರಮಕ್ಕೆ 1991 ಹಾಗೂ 1997ರಲ್ಲಿ ಅರ್ಜಿ ಕರೆದಿತ್ತು.

✧.ಈ ಎರಡು ಅವಧಿಯಲ್ಲಿ 30 ಲಕ್ಷ ಸಾಗುವಳಿದಾರರು ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲನೆ ಬಳಿಕ 16 ಲಕ್ಷ ಬಗರ್‌ಹುಕುಂ ಸಾಗುವಳಿದಾರನ್ನು ಸರ್ಕಾರವೇ ಗುರುತಿಸಿತ್ತು.

✧.ಇಲ್ಲಿಯವರೆಗೂ 12 ಲಕ್ಷ ಸಾಗುವಳಿದಾರರಿಗೆ ಭೂಮಿ ಹಂಚಲಾಗಿದೆ. ಬಗರ್‌ಹುಕುಂ ಅಡಿ ಒಬ್ಬರಿಗೆ ಐದು ಎಕರೆಯವರೆಗೂ ಭೂಮಿ ಮಂಜೂರು ಮಾಡಬಹುದು.

✧.ಆದರೆ ಒಂದೂವರೆಯಿಂದ ಎರಡು ಎಕರೆ ಸಾಗುವಳಿ ಮಾಡಿಕೊಂಡಿರುವ ರೈತರ ಸಂಖ್ಯೆಯೇ ಹೆಚ್ಚಿದೆ. ರಾಜ್ಯದಲ್ಲೆಗ 4 ಲಕ್ಷ ಬಗರ್‌ಹುಕುಂ ಸಾಗುವಳಿದಾರರು ಭೂ ಮಂಜೂರಾತಿಗಾಗಿ ಕಳೆದ ಇಪ್ಪತ್ತು ವರ್ಷಗಳಿಂದ ಅಲೆಯುತ್ತಿದ್ದಾರೆ.


●.ಬಗರ್‌ಹುಕುಂ v/s ಸರ್ಕಾರ :
━━━━━━━━━━━━━━━━━━
✧.1964ರಲ್ಲಿ ಜಾರಿಗೆ ಬಂದ ಕರ್ನಾಟಕ ಭೂ ಮಂಜೂರಾತಿ ಅಧಿನಿಯಮದಲ್ಲಿ ಬಗರ್‌ಹುಕುಂ ಭೂ ಮಂಜೂರಾತಿ ಕುರಿತು ಹೇಳಲಾಗಿದೆ. ಭೂ ಮಂಜೂರಾತಿ ಅಧಿಕಾರ ಈ ಹಿಂದೆ ತಹಶೀಲ್ದಾರ್ ಬಳಿ ಇತ್ತು. ಈಗ ಈ ಅಧಿಕಾರ ಶಾಸಕರ ಅಧ್ಯಕ್ಷತೆಯ ಬಗರ್‌ಹುಕುಂ ಸಮಿತಿಗೆ ನೀಡಲಾಗಿದೆ.

✧.ಬಗರ್‌ಹುಕುಂ ಸಮಿತಿಗೆ ಆಯಾಯ ಕ್ಷೇತ್ರದ ಶಾಸಕರು ಅಧ್ಯಕ್ಷರಾಗಿರುತ್ತಾರೆ. ತಹಶೀಲ್ದಾರ್ ಸದಸ್ಯ ಕಾರ್ಯದರ್ಶಿ. ಉಳಿದ ಸದಸ್ಯರನ್ನು ಸರ್ಕಾರ ನೇಮಕ ಮಾಡುತ್ತದೆ. ಸರ್ಕಾರ ಬದಲಾದಾಗ ಸದಸ್ಯರು ಬದಲಾಗುತ್ತಾರೆ. ಆಯಾಯ ಪಕ್ಷದ ಕಾರ್ಯಕರ್ತರನ್ನೇ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡುವ ಸಂಪ್ರದಾಯ ಬೆಳೆದುಬಂದಿದೆ. ಹೀಗಾಗಿಯೇ ಭೂ ಮಂಜೂರಾತಿ ನೀಡುವಲ್ಲಿ ಅಕ್ರಮ, ಸ್ವಜನ ಪಕ್ಷಪಾತಕ್ಕೆ ಕಾರಣವಾಗಿದೆ


●.ಬಗರ್‌ಹುಕುಂ ಸಾಗುವಳಿ ಕುರಿತು ರಾಜ್ಯದಲ್ಲಿನ ಇತ್ತೀಚಿನ ಕೆಲವು ಆರೋಪ - ಪ್ರತ್ಯಾರೋಪಗಳು :
━━━━━━━━━━━━━━━━━━━━━━━━━━━━━━━━━━━━━━━━━━━━
✧.ಸರ್ಕಾರಿ ಭೂಮಿ ಅತಿಕ್ರಮಣ ಸಂಬಂಧ ಎ.ಟಿ.ರಾಮಸ್ವಾಮಿ ಸಮಿತಿ ನೀಡಿದ ವರದಿ ಬಳಿಕ 2007ರಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಜಾರಿಗೆ ತಂದ ಭೂ ಅತಿಕ್ರಮಣ ನಿಯಂತ್ರಣ ಕಾಯ್ದೆಯು ಬಗರ್ ಹುಕುಂ ಸಾಗುವಳಿದಾರರ ಕನಸನ್ನೇ ನುಚ್ಚು ನೂರಾಗಿಸಿದೆ ಎಂಬುದು ರೈತ ಸಂಘಟನೆಗಳ ಆರೋಪ.

✧.ಬಗರ್‌ಹುಕುಂ ಸಾಗುವಳಿದಾರರ ಭೂ ಸಕ್ರಮಕ್ಕೆ ಒತ್ತಾಯಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರೋಧ ಪಕ್ಷದಲ್ಲಿದಾಗ ಶಿಕಾರಿಪುರದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿದ್ದರು.

✧.ಆದರೆ ಅವರ ಪಕ್ಷ ಅಧಿಕಾರಕ್ಕೆ ಬಂದಾಗ ಸಾಗುವಳಿದಾರರ ಹಿತ ಕಡೆಗಣಿಸಲಾಯಿತು ಎಂದೂ ಮಾನ್ಪಡೆ ದೂರುತ್ತಾರೆ.ಶಾಸಕರ ಅಧ್ಯಕ್ಷತೆಯಲ್ಲಿ ಬಗರ್ ಹುಕುಂ ಸಮಿತಿ ಇದ್ದರೂ ಅದರಿಂದ ಪ್ರಯೋಜವಿಲ್ಲ. ಭೂ ಹಂಚಿಕೆ ಮಾಡದಂತೆ ಕಾನೂನು ಕೈಕಟ್ಟಿ ಹಾಕಿದೆ. ಬಗರ್‌ಹುಕುಂ ಸಾಗುವಳಿದಾರರು ಬಹುತೇಕರು ಪರಿಶಿಷ್ಟ ಪಂಗಡ, ಜಾತಿ ಹಾಗೂ ಅಲ್ಪಸಂಖ್ಯಾತರು.

✧.ಅವರು ಸತ್ತರೂ ಹೂಳಲು ಅವರ ಬಳಿ ಆರಡಿ ಜಮೀನು ಇಲ್ಲ. ಹತ್ತಿಪ್ಪತ್ತು ವರ್ಷಗಳಿಂದ ಸರ್ಕಾರಿ ಭೂಮಿಯಲ್ಲೇ ಇದ್ದುಕೊಂಡು ತೋಟ ಮಾಡಿಕೊಂಡಿದ್ದಾರೆ. ಈಗ ಅವರನ್ನೆಲ್ಲ ಒಕ್ಕಲೆಬ್ಬಿಸಬೇಕಾಗಿದೆ. ಬೇರೆ ದಾರಿ ಕಾಣದೆ ರೈತರು ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಮಾನವೀಯತೆ ಆಧಾರದಲ್ಲಿ ಈಗಿರುವ ಎಲ್ಲ ಬಗರ್‌ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರು ಮಾಡಲು ಕಾನೂನು ತಿದ್ದುಪಡಿ ಮಾಡುವುದಷ್ಟೇ ಪರಿಹಾರ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಅಭಿಪ್ರಾಯಪಡುತ್ತಾರೆ.

✧.ಭೂ ಕಾಯ್ದೆಗೆ ತಿದ್ದುಪಡಿ ಅಗತ್ಯ
ಶ್ರೀಮಂತ ರೈತರು, ಭೂಗಳ್ಳರು ಹಾಗೂ ಬಗರ್‌ಹುಕುಂ ಸಾಗುವಳಿದಾರರ ನಡುವಿನ ವ್ಯತ್ಯಾಸ ಗುರುತಿಸದ ಈ ಕಾಯ್ದೆ ಸರ್ಕಾರಿ ಭೂಮಿಯಲ್ಲಿ ಇರುವವರೆಲ್ಲರೂ ಭೂಗಳ್ಳರೆಂದೇ ಹೇಳಿದೆ. ಹೀಗಾಗಿ ಬಗರ್‌ಹುಕುಂ ರೈತರು ಕೂಡ ಭೂಗಳ್ಳರ ಸಾಲಿನಲ್ಲಿ ಸೇರುವಂತಾಗಿದೆ.

✧.ಸರ್ಕಾರಿ ಭೂಮಿ ವಶಕ್ಕೆ ಪಡೆಯುವ ಎ.ಟಿ.ರಾಮಸ್ವಾಮಿ, ಬಾಲಸುಬ್ರಹ್ಮಣ್ಯಂ ವರದಿ ಜಾರಿಯ ಯತ್ನಗಳೇ ಈಗ ಬಗರ್‌ಹುಕುಂ ಸಾಗುವಳಿದಾರರು ವಿಷ ಸೇವಿಸುವ ಹಂತಕ್ಕೆ ತೆಗೆದುಕೊಂಡು ಹೋಗಿದೆ. ಸರ್ಕಾರ ಭೂ ಕಾಯ್ದೆಗೆ ತಿದ್ದುಪಡಿ ತಂದು ಕೂಡಲೇ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು.
ಮಾರುತಿ ಮಾನ್ಪಡೆ, (ಪ್ರಾಂತ ರೈತ ಸಂಘದ ಅಧ್ಯಕ್ಷ)

(Courtesy : Kannada News Papers)

No comments:

Post a Comment