"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday, 1 August 2015

☀ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುವುದು ಹೇಗೆ? (How to get success in the competitive examinations?)

☀ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುವುದು ಹೇಗೆ?
(How to get success in the competitive examinations?)
━━━━━━━━━━━━━━━━━━━━━━━━━━━━━━━━━━━━━━━━━━━━━

★.ವ್ಯಕ್ತಿತ್ವ ವಿಕಸನ
(Personality Development Skills)


✧.ಇದು ಸ್ಪರ್ಧಾತ್ಮಕ ಯುಗ. ಇಂದು ಬಹುಪಾಲು ಕೋರ್ಸಗಳಿಗೆ ಹಾಗೂ ಉದ್ಯೋಗಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಅನಿವಾರ್ಯವಾಗಿದೆ. ನಮ್ಮ ವೃತ್ತಿಬದುಕಿಗೆ ಸ್ಪರ್ಧಾತ್ಮಕ ಪರೀಕ್ಷೆಗಳೇ ಸೋಪಾನ. ಹಾಗಾಗಿ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿ ಅತ್ಯಗತ್ಯ. ಈ ನಿಟ್ಟಿನಲ್ಲಿ ಅನೇಕ ಕರಿಯರ್ ಅಕಾಡೆಮಿಗಳು, ಕೋಚಿಂಗ್ ಕ್ಲಾಸ್​ಗಳು ತಕ್ಕಮಟ್ಟಿಗೆ ನೆರವಾದರೂ ಪರೀಕ್ಷೆಯನ್ನು ಎದುರಿಸಲು ನಮ್ಮಲ್ಲಿ ಪೂರ್ವತಯಾರಿ ಕೂಡ ಅಷ್ಟೇ ಮುಖ್ಯ. ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆದುಕೊಂಡರಷ್ಟೇ ಎಲ್ಲವನ್ನೂ ಗೆದ್ದಂತಾಗುವುದಿಲ್ಲ. ತರಬೇತಿ ಇಲ್ಲದೆಯೂ ಹಾಗೂ ತರಬೇತಿಯ ಜೊತೆಯೂ ನಮ್ಮ ತಯಾರಿ ಇರಬೇಕಾಗುತ್ತದೆ. ಮಾನಸಿಕ ಸಿದ್ಧತೆ, ಕಠಿಣ ಪರಿಶ್ರಮ ಹಾಗೂ ತಿಳಿದುಕೊಂಡಿದ್ದನ್ನು ಅಭಿವ್ಯಕ್ತಿಸುವ ರೀತಿ - ಇವು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಮುಖ್ಯ ಕಾರಣಗಳಾಗುತ್ತವೆ.

●.ಗುರಿ ನಿರ್ಧರಿಸಿ :
━━━━━━━━━━━
✧.ಬದುಕಿನಲ್ಲಿ ನಮಗೆ ಸಾಕಷ್ಟು ಅವಕಾಶಗಳಿವೆ. ಹಾಗಂತ ಎಲ್ಲದಕ್ಕೂ ಕೈಹಾಕುವುದು ಮೂರ್ಖತನವಾಗುತ್ತದೆ. ಹೀಗಾಗಿ ನೀವು ಆಯ್ದುಕೊಳ್ಳುವ ಪರೀಕ್ಷೆ ಅಥವಾ ಹುದ್ದೆ ನಿಖರವಾಗಿರಲಿ. ಬೇರೆ ಬೇರೆ ಹುದ್ದೆಗಳಲ್ಲಿ ನಿಮಗೆ ಆಸಕ್ತಿಯಿದ್ದರೆ, ನೀವು ಮೊದಲ ಪ್ರಾಶಸ್ಱವನ್ನು ಯಾವುದಕ್ಕೆ ಕೊಡುತ್ತೀರಿ ಎಂಬುದನ್ನು ನಿರ್ಧರಿಸಿಕೊಳ್ಳಿ. ಅಂದರೆ ನಿಮ್ಮೆದುರು ಗುರಿ ಸ್ಪಷ್ಟವಾಗಿದ್ದರೆ ಮುಂದುನ ದಾರಿ ಸರಳವಾಗುತ್ತದೆ.


●.ಅಧ್ಯಯನ ಸಾಮಗ್ರಿ ಕಲೆ ಹಾಕಿ :
━━━━━━━━━━━━━━━━━━━
✧.ಎಲ್ಲಕ್ಕಿಂತ ಮೊದಲು ನೀವು ಮಾಡಬೇಕಾದ್ದು ಏನೆಂದರೆ ನೀವು ಆಯ್ದುಕೊಂಡಿರುವ ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯಕ್ರಮವನ್ನೊಮ್ಮೆ ಗಮನಿಸಿ. ಅದಕ್ಕೆ ತಕ್ಕಂತೆ ಎರಡು ಮೂರು ವಿಧದ ಅಧ್ಯಯನ ಸಾಮಗ್ರಿಗಳನ್ನು ಸಂಗ್ರಹಿಸಲು ಶುರುಮಾಡಿ. ಇದಕ್ಕಾಗಿ ಹೆಚ್ಚಿನ ದುಂದು ವೆಚ್ಚ ಮಾಡದಿರಿ. ಸ್ನೇಹಿತರು ಹಾಗೂ ಗ್ರಂಥಾಲಯದ ಸಹಾಯದಿಂದ ನೀವು ಅಧ್ಯಯನ ಸಾಮಗ್ರಿಗಳನ್ನು ಸಂಗ್ರಹಿಸಬಹುದು. ಆರ್ಥಿಕವಾಗಿ ಸಬಲರಿದ್ದಲ್ಲಿ ಆಕರ ಗ್ರಂಥಗಳನ್ನು ಹಾಗೂ ಅಧ್ಯಯನ ಸಾಮಗ್ರಿಗಳನ್ನು ಕೊಂಡುಕೊಳ್ಳಬಹುದು.


●.ಟಿಪ್ಪಣಿ ಮಾಡಿಕೊಳ್ಳಿ :
━━━━━━━━━━━━━━━
✧.ಅಧ್ಯಯನ ಸಾಮಗ್ರಿಗಳನ್ನು ಸಂಗ್ರಹಿಸಿಕೊಂಡಾದ ಮೇಲೆ ಸುಖಾಸುಮ್ಮನೆ ಓದಿದರೆ, ಅದು ಹೆಚ್ಚು ಹೊತ್ತು ಮನಸ್ಸಿನಲ್ಲಿ ನಿಲ್ಲುವುದಿಲ್ಲ. ಪ್ರತಿ ಅರ್ಧ ಗಂಟೆಗೊಮ್ಮೆ ಅದನ್ನು ಮನನ ಮಾಡಿಕೊಳ್ಳುವುದು ಸೂಕ್ತ. ಅದಕ್ಕಾಗಿ ಮುಖ್ಯಾಂಶಗಳನ್ನು ಟಿಪ್ಪಣಿ ಮಾಡಿಕೊಳ್ಳಿ. ಇದನ್ನೇ RRR (Read, Recall, Rewrite) ಟೆಕ್ನಿಕ್ ಎಂದು ಕರೆಯುತ್ತಾರೆ. ಓದುವುದು, ಮನನ ಮಾಡಿಕೊಳ್ಳುವುದು ಹಾಗೂ ಟಿಪ್ಪಣಿ ಮಾಡಿಕೊಳ್ಳುವುದರಿಂದ ಕ್ಲಿಷ್ಟವೆನಿಸುವ ವಿಷಯಗಳೂ ಸಹ ಸುಲಭವಾಗಿ ನೆನಪಿನಲ್ಲಿ ಉಳಿಯುತ್ತವೆ.


●.CUT ಮಾಡಿಕೊಳ್ಳಿ :
━━━━━━━━━━━━━━
✧.CUT ಎಂದರೆ C- Check, U-Understand, T-Test ಎಂದರ್ಥ. ಪಠ್ಯಕ್ಕನುಸಾರವಾಗಿ ಅಧ್ಯಯನ ಸಾಮಗ್ರಿಗಳನ್ನು ಓದುವುದರ ಜೊತೆಗೆ ಹಿಂದಿನ ಪರೀಕ್ಷೆಗಳಲ್ಲಿ ಎಂತಹ ಪ್ರಶ್ನೆಗಳನ್ನು ಕೇಳಿದ್ದರು, ಯಾವ ಯಾವ ವಿಷಯದ ಮೇಲೆ ಹೆಚ್ಚು ಪ್ರಶ್ನೆಗಳನ್ನು ಕೇಳಲಾಗಿದೆ ಎಂಬುದನ್ನು ಪರೀಕ್ಷಿಸಬೇಕು. ಅವುಗಳನ್ನು ಚೆನ್ನಾಗಿ ಅರಿತುಕೊಂಡು ನಾವು ಎದುರಿಸಲಿರುವ ಪರೀಕ್ಷೆಯಲ್ಲಿ ಎಂತಹ ಪ್ರಶ್ನೆಗಳನ್ನು ಕೇಳಬಹುದು ಎಂಬುದನ್ನು ಊಹಿಸಬೇಕು. ಅದರಂತೆ ಹಿಂದಿನ ಪ್ರಶ್ನೆಪತ್ರಿಕೆ ಅಥವಾ ಮಾದರಿ ಪ್ರಶ್ನೆಪತ್ರಿಕೆಗಳನ್ನು ನಿಗದಿತ ಸಮಯಾವಕಾಶದಲ್ಲಿ ಬಿಡಿಸಬೇಕು. ನಂತರ ನಮ್ಮ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು.


●.ಗುಂಪು ಚರ್ಚೆ ನಡೆಸಿ :
━━━━━━━━━━━━━━━
✧.ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವಾಗ ಗುಂಪು ಚರ್ಚೆ ನಡೆಸುವುದು ಯಾವಾಗಲೂ ಉತ್ತಮ. ಪ್ರತಿದಿನ ಒಬ್ಬೊಬ್ಬರು ಒಂದೊಂದು ವಿಷಯವನ್ನು ರ್ಚಚಿಸಬೇಕು. ಇದರಿಂದ ನಿಮಗೆ ಯಾವ ವಿಷಯ ಎಷ್ಟು ನೆನಪಿನಲ್ಲಿದೆ ಎಂಬುದರ ಅರಿವಾಗುತ್ತದೆ. ಗುಂಪು ಚರ್ಚೆ ತುಸು ಗಂಭಿರತೆಯಿಂದ ಕೂಡಿರಲಿ. ಇಲ್ಲವಾದರೆ ಅದು ಹಾಳುಹರಟೆಯಾಗುತ್ತದೆ. ಒಂದುವೇಳೆ ನೀವೊಬ್ಬರೇ ಪರೀಕ್ಷೆಗಾಗಿ ಅಭ್ಯಾಸ ಮಾಡುತ್ತಿದ್ದರೆ ಆಗಾಗ ಗೆಳೆಯರೊಂದಿಗೆ ರ್ಚಚಿಸಲೂಬಹುದು.


●.ವಿವಿಧ ಪತ್ರಿಕೆಗಳನ್ನೋದಿ :
━━━━━━━━━━━━━━━━━
✧.ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸುವಂತಹ ಹಲವಾರು ಪತ್ರಿಕೆಗಳು, ನಿಯತಕಾಲಿಕೆಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅವುಗಳನ್ನು ಅಭ್ಯಸಿಸಿ. ಪ್ರತಿನಿತ್ಯ ಕನಿಷ್ಠ ಎರಡು ಕನ್ನಡ ಹಾಗೂ ಒಂದು ಆಂಗ್ಲಪತ್ರಿಕೆಗಳನ್ನು ಓದುವುದರಿಂದ ಸಾಮಾನ್ಯ ಜ್ಞಾನದ ಜೊತೆಗೆ ಇಂಗ್ಲಿಷ್​ಜ್ಞಾನವೂ ವೃದ್ಧಿಯಗುತ್ತದೆ. ಇದಲ್ಲದೆ ವಾರ್ತಾ ಇಲಾಖೆ ಪ್ರಕಟಿಸುವ ಕೆಲವು ಪತ್ರಿಕೆಗಳ ಮೇಲೂ ಕಣ್ಣಾಡಿಸಿ. ಜೊತೆಗೆ ಪ್ರಚಲಿತ ವಿದ್ಯಮಾನಗಳನ್ನು ಟಿಪ್ಪಣಿ ಮಾಡಿಕೊಳ್ಳಿ.


●.ಟಿವಿ, ಫೋನ್ ದೂರ ಇರಲಿ :
━━━━━━━━━━━━━━━━━
✧.ಒಂದೇ ಸಮನೆ ಓದುತ್ತ ಕುಳಿತರೆ ಏಕಾಗ್ರತೆ ಸಾಧಿಸುವುದು ಸಾಧ್ಯವಿಲ್ಲ. ತುಸು ಮನರಂಜನೆ ಹಾಗೂ ವಿಶ್ರಾಂತಿ ಅವಶ್ಯಕ. ಹಾಗಂತ ಅದೇ ನೆಪದಲ್ಲಿ ಟಿವಿ ಹಾಗೂ ಮೊಬೈಲಿನಲ್ಲಿ ಕಣ್ಣಾಡಿಸುತ್ತ ಕುಳಿತರೆ ನಿಮ್ಮ ಓದು ಮುಂದೆ ಸಾಗುವುದಿಲ್ಲ. ಟಿವಿ, ಫೋನ್, ಮುಂದಾದ ಗ್ಯಾಜೆಟ್​ಗಳನ್ನು ಮಿತವಾಗಿ ಬಳಸಿ. ಸಾಧ್ಯವಾದರೆ ಇವುಗಳಿಂದ ದೂರವಿರುವುದೇ ಉತ್ತಮ.


●.ಮತ್ತೇನು ಮಾಡಬಹುದು? :
━━━━━━━━━━━━━━━━━
✧.ನಿಮ್ಮ ಓದನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಹಾಗೂ ಓದಿದ್ದು ನೆನಪಿನಲ್ಲಿರಲು ಕೆಲವು ತಂತ್ರಗಳನ್ನು ಬಳಸಬಹುದು. ನಿಮೊನಿಕ್ಸ್ ತಂತ್ರದ ಮೂಲಕ ಕೆಲವು ಸಂಗತಿಗಳನ್ನು ಬೇಗನೆ ನೆನಪಿನಲ್ಲಿಟ್ಟುಕೊಳ್ಳಬಹುದು.

✧.ಉದಾಹರಣೆಗೆ ಎಂಟು ಗ್ರಹಗಳ ಹೆಸರುಗಳನ್ನು My Very Educated Mother Just Showed Us Nest ಎಂಬ ವಾಕ್ಯದಡಿ ನೆನಪಿನಲ್ಲಿಡಬಹುದು; ಕಾಮನಬಿಲ್ಲಿನಲ್ಲಿರುವ ಬಣ್ಣಗಳನ್ನು ಹೆಸರಿಸಲು VIBGYOR ನೆನಪಿನಲ್ಲಿಟ್ಟುಕೊಂಡರೆ ಸಾಕು. ಇಂತಹ ತಂತ್ರಗಳನ್ನು ನೀವೇ ಕಂಡುಹಿಡಿದುಕೊಳ್ಳಿ. ಅಲ್ಲದೆ, ನಿಯಮಿತವಾದ ಧ್ಯಾನ, ವ್ಯಾಯಾಮ, ಯೋಗಾಸನ, ಉತ್ತಮ ಆಹಾರ ಸೇವನೆ, ಸೊಂಪಾದ ನಿದ್ದೆ ಇವೆಲ್ಲವೂ ನಮಗೆ ಪರೋಕ್ಷವಾಗಿ ನೆರವಾಗಬಲ್ಲವು.

✧.ಒಟ್ಟಿನಲ್ಲಿ ಎರಡು-ಮೂರು ತಾಸುಗಳ ಪರೀಕ್ಷೆಗೆ ನಮ್ಮ ಬದುಕಿನ ಗತಿಯನ್ನು ಬದಲಿಸುವ ಶಕ್ತಿಯಿರುವುದರಿಂದ ಇದರ ಕುರಿತು ಅಲಕ್ಷ್ಯಬೇಡ. ಮೊದಲೇ ಹೇಳಿದಂತೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಿದ್ಧತೆ, ಪರಿಶ್ರಮ ಹಾಗೂ ಅಭಿವ್ಯಕ್ತಿ ಈ ಮೂರು ಅಂಶಗಳು ಬಹುಮುಖ್ಯವಾಗಿದ್ದು ಇವುಗಳಲ್ಲಿ ಒಂದು ದುರ್ಬಲವಾದರೆ ಉಳಿದದ್ದೆಲ್ಲವೂ ವ್ಯರ್ಥ. ಆದ್ದರಿಂದ ಇಂದಿನಿಂದಲೇ ಸರಿಯಾದ ಸಿದ್ಧತೆಯೊಂದಿಗೆ ಆರಂಭಿಸಿ, ಅಭ್ಯಸಿಸಿ. ಆಲ್ ದಿ ಬೆಸ್ಟ್!


●.ಪರೀಕ್ಷಾ ಕೇಂದ್ರದಲ್ಲಿ :
━━━━━━━━━━━━━━
✧. ಪರೀಕ್ಷೆ ಪ್ರಾರಂಭಕ್ಕೂ ಮುನ್ನ ನಿಮ್ಮ ಸೀಟಿನಲ್ಲಿ ಕುಳಿತಾಗ ದೀರ್ಘವಾದ ಉಸಿರಾಟ ನಡೆಸಿ, ಪ್ರಶ್ನೆಪತ್ರಿಕೆ ಸಿಕ್ಕ ಕೂಡಲೇ ಉತ್ತರಿಸುವ ಮೊದಲು ಸೂಚನೆಗಳನ್ನು ಸರಿಯಾಗಿ ಓದಿ.

✧. ಪ್ರಶ್ನೆಗೆ ಉತ್ತರ ನಿಖರವಾಗಿ ಗೊತ್ತಿಲ್ಲದಿದ್ದಾಗ ಹೆಚ್ಚು ಯೋಚಿಸದೇ ಮುಂದಿನ ಪ್ರಶ್ನೆಗೆ ಉತ್ತರಿಸಿ. ನೀವು ಉತ್ತರಿಸಿರುವ ಪ್ರಶ್ನೆಗಳನ್ನು ಪ್ರಶ್ನೆಪತ್ರಿಕೆಯಲ್ಲಿ ತಪ್ಪದೇ ಗುರುತಿಸಿ. ಇದರಿಂದ ಕೊನೆಯಲ್ಲಿ ನೀವು ಯಾವ ಪ್ರಶ್ನೆಗಳಿಗೆ ಉತ್ತರಿಸಿಲ್ಲ ಎಂಬುದನ್ನು ತಿಳಿದುಕೊಂಡು ಬೇಗ ಉತ್ತರಿಸಲು ಸಾಧ್ಯವಾಗುತ್ತದೆ.

✧. ಪ್ರಶ್ನೆಪತ್ರಿಕೆಗಳಲ್ಲಿ ಭಾಗಗಳಿದ್ದರೆ ಮೊದಲು ನಿಮಗೆ ಸರಳವೆನಿಸುವ ಭಾಗದ ಪ್ರಶ್ನೆಗಳಿಗೆ ಉತ್ತರಿಸಿ, ಆಯ್ಕೆಗಳಿಂದ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗುವ ಸಂಭವವಿರುತ್ತದೆ. ಅದನ್ನೂ ಪ್ರಯತ್ನಿಸಿ.

✧. ಪ್ರತಿ ಪ್ರಶ್ನೆಗೆ 60 ಸೆಕೆಂಡುಗಳಿಗಿಂತ ಹೆಚ್ಚು ಸಮಯ ವ್ಯರ್ಥ ಮಾಡಬೇಡಿ, ಋಣಾತ್ಮಕ ಅಂಕಗಳಿರುವ ಸಂದರ್ಭದಲ್ಲಿ ನಿಮಗೆ ಗೊತ್ತಿರದ ಪ್ರಶ್ನೆಗಳಿಗೆ ಉತ್ತರಿಸಲೇಬೇಡಿ.

(Courtesy :Vijayavani Newspaper)

No comments:

Post a Comment