"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday, 13 February 2022

•► ಅವನತಿಯತ್ತ ಹಲವು ಜೀವ ಪ್ರಭೇದ (2019ರ ಸಮೀಕ್ಷೆಯಂತೆ) (Declining Many Species)

•► ಅವನತಿಯತ್ತ ಹಲವು ಜೀವ ಪ್ರಭೇದ (2019ರ ಸಮೀಕ್ಷೆಯಂತೆ)
(Declining Many Species)

━━━━━━━━━━━━━━━━━━━━━━━━━━━━━━


ನಗರಗಳ ಮೇಲಿನ ಮಾನವನ ವ್ಯಾಮೋಹದಿಂದಾಗಿ ಅನೇಕ ಜಾತಿಯ ಪ್ರಾಣಿ, ಪಕ್ಷಿಗಳು ಅವನತಿಯಂಚಿನಲ್ಲಿದೆ. ಸಸ್ತನಿ , ಸರೀಸೃಪ , ಉಭಯಚರ, ಕೀಟ, ಮೀನು ಸಹಿತ ಲೆಕ್ಕಕ್ಕೆ ಸಿಗ ದಷ್ಟು ಪ್ರಭೇದಗಳು ಕಣ್ಮರೆಯಾಗುತ್ತಿದೆ.

·  ಐದು ಜಾತಿಯ ಪ್ರಭೇದಗಳಲ್ಲಿ ವರ್ಷದಲ್ಲಿ ನಾವು ಒಂದನ್ನು ಕಳೆದುಕೊಳ್ಳುತ್ತಿದ್ದೇವೆ.

·  ಒಟ್ಟು 1,000 ದಿಂದ 10,000 ಸಾವಿರ ಪ್ರಭೇದಗಳನ್ನು ವಾರ್ಷಿಕವಾಗಿ ಕಳೆದುಕೊಳ್ಳುತ್ತಿದ್ದೇವೆ ಎಂದು ಸಂಶೋಧನೆಗಳು ತಿಳಿಸಿವೆ.

·  ಕಳೆದ 28 ವರ್ಷಗಳಲ್ಲಿ ಕೀಟಗಳ ಪ್ರಮಾಣ ಶೇ. 75ರಷ್ಟು ಕಡಿಮೆಯಾಗಿದ್ದು, ಇದ ರಿಂದ ಶೇ. 60ರಷ್ಟು ಪಕ್ಷಿಗಳಿಗೆ ಸಿಗುವ ಆಹಾರದ ಪ್ರಮಾಣ ಕಡಿಮೆಯಾಗಿದೆ.

·  ಆವಾಸ ಸ್ಥಾನಗಳ ನಾಶ, ಶೋಷಣೆ ಮತ್ತು ಹವ ಮಾನ ಬದಲಾವಣೆಯಿಂದ ವಿಶ್ವದ ಕಾಡು ಪ್ರಾಣಿ ಗಳು ಪ್ರಸ್ತುತ ಅರ್ಧ ದಷ್ಟು ಕಡಿಮೆಯಾಗಿದೆ.

·  ವಿಶ್ವದಾದ್ಯಂತ ವಾರ್ಷಿಕವಾಗಿ ಮೀನುಗಾರಿಕೆ ಮತ್ತು ಇನ್ನಿತರ ಕಾರಣಗಳಿಂದ ಸಮುದ್ರದಲ್ಲಿರುವ 6,50,000ಕ್ಕೂ ಹೆಚ್ಚು ಪ್ರಭೇದಗಳು ನಾಶಗೊಂಡಿವೆೆ.

·  20 ವರ್ಷಗಳಲ್ಲಿ ಡಾಲ್ಫಿನ್‌ಗಳ ಪ್ರಮಾಣ ಶೇ.65, ಪಿನ್ನಿ ಪೆಡ್‌(ಸಮುದ್ರ ಸಿಂಹಗಳು) ಮತ್ತು ಹಲ್ಲಿನ ತಿಮಿಂಗಿಲಗಳ ಪ್ರಮಾಣ ಶೇ. 75ರಷ್ಟು ಕಡಿಮೆಯಾಗಿದೆ.

·  ವಿಶ್ವದ ಪಕ್ಷಿ ಪ್ರಭೇದಗಳಲ್ಲಿ ಶೇ. 40ರಷ್ಟು ಕಡಿಮೆಯಾಗಿದೆ. ವಾರ್ಷಿಕವಾಗಿ 8 ಪ್ರಭೇದಗಳಲ್ಲಿ 1 ಪ್ರಭೇದ ಅಳಿವಿನಂಚಿನಲ್ಲಿದೆ.

·  ಹುಲಿ, ಚಿರತೆ ಮತ್ತು ಬೆಕ್ಕುಗಳ ಪ್ರಮಾಣ ಕಡಿಮೆಯಾಗುತ್ತಿದ್ದು, ಮುಂದಿನ ದಶಕಗಳಲ್ಲಿ ಇದರ ಪ್ರಮಾಣ ಇನ್ನಷ್ಟು ಕಡಿಮೆಯಾಗಲಿದೆ ಎಂಬು ದನ್ನು ಸಂಶೋಧನೆಗಳು ಸ್ಪಷ್ಟಪಡಿಸಿದೆ.

·  ಬೆಕ್ಕು, ಖಡ್ಗಮೃಗ ಮತ್ತು ಇತರ ಪ್ರಾಣಿಗಳ ಚರ್ಮ ಮತ್ತು ದೇಹದ ಭಾಗಗಳನ್ನು ಬಳಸಿಕೊಳ್ಳುತ್ತಿರುವ ಚೀನಾ ವಿಶ್ವದ ಅತಿ ದೊಡ್ಡ ಮಾರುಕಟ್ಟೆಯಾಗಿದೆ.

·  ಹಲ್ಲಿಗಳ ಜನನದ ಪ್ರಮಾಣ ಹವಮಾನ ಬದಲಾವಣೆಯಿಂದಾಗಿ ಕಡಿಮೆಯಾಗತ್ತಿದ್ದು, ಇತ್ತೀ ಚಿನ ಅಧ್ಯಯನಗಳ ಪ್ರಕಾರ ಶೇ. 40ರಷ್ಟು ಹಲ್ಲಿ ಗಳು ನಾಶವಾಗಿವೆ. 2080ರ ಹೊತ್ತಿಗೆ ಈ ಜಾತಿಯೇ ನಿರ್ನಾಮಗೊಳ್ಳುತ್ತದೆ ಎನ್ನಲಾಗಿದೆ.

·  ಲಕ್ಷಾಂತರ ಸಂಖ್ಯೆಯಲ್ಲಿದ್ದ ಅಮೆರಿಕಾದ ಕಾಡೆಮ್ಮೆಗಳ ಪ್ರಮಾಣ ಕ್ಷಿಣಿಸುತ್ತಿದೆ.

Saturday, 12 February 2022

•► 2022ನೇ ಸಾಲಿನ IAS, IPS ಹುದ್ದೆಗಳ ನಾಗರಿಕ ಸೇವಾ ಪರೀಕ್ಷೆಗೆ ಅರ್ಜಿ ಆಹ್ವಾನ : (UPSC Civil Services Exam 2022, CSE Notification)

 •► 2022ನೇ ಸಾಲಿನ IAS, IPS ಹುದ್ದೆಗಳ ನಾಗರಿಕ ಸೇವಾ ಪರೀಕ್ಷೆಗೆ ಅರ್ಜಿ ಆಹ್ವಾನ :
(UPSC Civil Services Exam 2022, CSE Notification)

━━━━━━━━━━━━━━━━━━━━━━━━━━━━━━

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​ಸಿ) 2022ನೇ ಸಾಲಿನ ಐಎಎಸ್, ಐಪಿಎಸ್‌ ಸೇರಿದಂತೆ ಇನ್ನಿತರ ಹುದ್ದೆಗಳ ನಾಗರಿಕ ಸೇವಾ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಯುಪಿಎಸ್​ಸಿ ಅಧಿಕೃತ ವೆಬ್​ಸೈಟ್‌ಗೆ ಲಾಗಿನ್‌ ಆಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಫೆಬ್ರುವರಿ 22 ಕೊನೆಯ ದಿನವಾಗಿದೆ. ಪೂರ್ವಭಾವಿ ಪರೀಕ್ಷೆ ಜೂನ್ ಹಾಗೂ ಮುಖ್ಯ ಪರೀಕ್ಷೆ ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ಸಾಧ್ಯತೆಗಳಿವೆ.

ಹುದ್ದೆಗಳ ಸಂಖ್ಯೆ

ಐಎಎಸ್:  861 ( ಸಂಭಾವ್ಯ)

ವಿದ್ಯಾರ್ಹತೆ: ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಅಂಗೀಕೃತ ವಿಶ್ವವಿದ್ಯಾಲಯಗಳಿಂದ ಪಡೆದಿರಬೇಕು. ಪದವಿ ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿರುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.

ವಯಸ್ಸು

*ಕನಿಷ್ಠ 21 ವರ್ಷಗಳಾಗಿರಬೇಕು.

ವಯೋಮಿತಿ ಸಡಿಲಿಕೆ

* ಸಾಮಾನ್ಯ ವರ್ಗದ ಅಭ್ಯರ್ಥಿಗಳು– ಗರಿಷ್ಠ 32 ವರ್ಷ

* ಹಿಂದುಳಿದ ವರ್ಗದ ಅಭ್ಯರ್ಥಿಗಳು– ಗರಿಷ್ಠ 35 ವರ್ಷ

* ಪ.ಜಾತಿ, ಪ.ಪಂಗಡ, ಪ್ರವರ್ಗ-1 ಅಭ್ಯರ್ಥಿಗಳು– 37 ವರ್ಷ

* ಅಂಗವಿಕಲ ಅಭ್ಯರ್ಥಿಗಳಿಗೆ –42 ವರ್ಷಗಳು

ಅರ್ಜಿ ಶುಲ್ಕ

ಸಾಮಾನ್ಯ ವರ್ಗದ ಅಭ್ಯರ್ಥಿಗಳು ₹ 100 ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ನೇಮಕಾತಿ: ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಅಧಿಸೂಚನೆಯ ಲಿಂಕ್‌ ಅನ್ನು ಕ್ಲಿಕ್ಕಿಸಿ ಮಾಹಿತಿ ಪಡೆಯಬಹುದು.

ಅರ್ಜಿ ಸಲ್ಲಿಸುವ ವಿಧಾನ

* ಲೋಕಸೇವಾ ಆಯೋಗದ ವೆಬ್‌ಸೈಟ್‌ https://upsc.gov.in ಗೆ ಲಾಗಿನ್‌ ಆಗಿ ಅನ್‌ಲೈನ್ ಮೂಲಕ ಅರ್ಜಿ ಭರ್ತಿ ಮಾಡಬೇಕು.

* ಆನ್‌ಲೈನ್‌ ಅರ್ಜಿಯನ್ನು ಎರಡು ಹಂತಗಳಲ್ಲಿ ಭರ್ತಿ ಮಾಡಬೇಕು.

ಮುಖ್ಯ ಮಾಹಿತಿ

* ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 22-02-2022

* ಅಧಿಸೂಚನೆ ಲಿಂಕ್‌: https://www.upsc.gov.in/sites/default/files/Notif-CSP-22-engl-020222F.pdf

* ಯುಪಿಎಸ್‌ಸಿ ವೆಬ್‌ಸೈಟ್‌: https://upsc.gov.in


(Courtesy : ಪ್ರಜಾವಾಣಿ)

•► ಕನ್ನಡ ಭಾಷೆಯ ಸತ್ವವನ್ನು, ಕಾವ್ಯಶಕ್ತಿಯನ್ನು ಬಗೆಬಗೆಯಾಗಿ ಸಮೃದ್ಧಗೊಳಿಸುವಲ್ಲಿ ಪ್ರಾಕೃತ ಭಾಷೆಯ ಪಾತ್ರ. (Role of Prakrit language in enriching the essence of Kannada language and poetry) or •► ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಪುನರುತ್ಥಾನ ಪ್ರಕ್ರಿಯೆಯಲ್ಲಿ ಸಂಸ್ಕೃತದಷ್ಟೇ ಮಹತ್ವದ ಪಾತ್ರ ವಹಿಸಿದ್ದು ಪ್ರಾಕೃತ - ಸಮರ್ಥಿಸಿ. (significant role of the Prakrit in the process of resurrecting Kannada language, literature and culture-assert) or •► ಪ್ರಾಕೃತ ಮತ್ತು ಕನ್ನಡ ಸಾಹಿತ್ಯ . (Prakrit and Kannada Literature)

•► ಕನ್ನಡ ಭಾಷೆಯ ಸತ್ವವನ್ನು, ಕಾವ್ಯಶಕ್ತಿಯನ್ನು ಬಗೆಬಗೆಯಾಗಿ ಸಮೃದ್ಧಗೊಳಿಸುವಲ್ಲಿ ಪ್ರಾಕೃತ ಭಾಷೆಯ ಪಾತ್ರ.
(Role of Prakrit language in enriching the essence of  Kannada language and poetry)
or
•► ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಪುನರುತ್ಥಾನ ಪ್ರಕ್ರಿಯೆಯಲ್ಲಿ ಸಂಸ್ಕೃತದಷ್ಟೇ ಮಹತ್ವದ ಪಾತ್ರ ವಹಿಸಿದ್ದು ಪ್ರಾಕೃತ - ಸಮರ್ಥಿಸಿ.
(significant role of the Prakrit in the process of resurrecting Kannada language, literature and culture-assert)
or
•► ಪ್ರಾಕೃತ ಮತ್ತು ಕನ್ನಡ ಸಾಹಿತ್ಯ .
(Prakrit and Kannada Literature)

━━━━━━━━━━━━━━━━━━━━━━━━━━━━━━━━━
(ಸಾಮಾನ್ಯ ಕನ್ನಡ)
(ಕನ್ನಡ ಸಾಹಿತ್ಯ ಚರಿತ್ರೆ)



ಪ್ರಾಕೃತವೆಂಬುದು ಹಲವು ಜನಭಾಷೆಗಳನ್ನೊಳಗೊಂಡಿರುವ ಸಮಷ್ಟಿಶಬ್ದ.

ಅಪಭ್ರಂಶ, ಅರ್ಧಮಾಗಧಿ, ಪಾಳಿ, ಪೈಶಾಚಿ, ಮಹಾರಾಷ್ಟ್ರೀ, ಶೌರಸೇನೀ ಮೊದಲಾದ ಜನಭಾಷೆಗಳ ಗುಂಪಿಗೆ ಪ್ರಾಕೃತವೆಂದು ಕರೆಯುತ್ತಾರೆ.

ಬಲ್ಲಿದರ ಭಾಷೆ ಸಂಸ್ಕೃತ. ಜನಸಾಮಾನ್ಯರ ಭಾಷೆ ಪ್ರಾಕೃತ. ಬುದ್ಧ ಮತ್ತು ಮಹಾವೀರರು ತಮ್ಮ ವಿಚಾರಗಳು ಜನಸಾಮಾನ್ಯರಿಗೆ ತಿಳಿಯಬೇಕೆಂಬ ಕಕ್ಕುಲಾತಿಯಿಂದ ಜನರಾಡುವ ಪಾಳಿ–ಪ್ರಾಕೃತ ಭಾಷೆಗಳಲ್ಲಿ ಬೋಧಿಸಿದರು. ಆದ್ದರಿಂದ ಪ್ರಾಕೃತ ಭಾಷೆಗಳು ಸರ್ವಮಾನ್ಯವಾದವು. ಮಹಾಕವಿಗಳು ಪುರಸ್ಕರಿಸಿದರು. ಕತೆ, ಕಾವ್ಯಗಳೂ ಪ್ರಬುದ್ಧ ಶಾಸ್ತ್ರ ಕೃತಿಗಳೂ ವರಸೆಯಾಗಿ ರಚಿತವಾದವು.

ಒನಕೆ ನಾಡು, ಓವನಿಗೆ, ಚತ್ತಾಣ, ಪಗರಣ, ಬೆದಂಡೆಯೆಂಬ ದೇಸಿ ಸಾಹಿತ್ಯ ಪ್ರಕಾರಗಳಿಂದ ಸ್ವತಂತ್ರ ಜನಭಾಷೆಯಾಗಿದ್ದ ಕನ್ನಡ, ಸರ್ವಾಂಗೀಣ ಪುಷ್ಟಿಯಿಂದ ತನ್ನ ಅಭಿವ್ಯಕ್ತಿ ಸಾಧ್ಯತೆಯನ್ನು ವಿಸ್ತರಿಸಲು ಹವಣಿಸಿತ್ತು. ಅದಕ್ಕೆ ನಾನಾ ಜ್ಞಾನಶಾಖೆಗಳ ಸಾರವನ್ನು ಲೀಲಾಜಾಲವಾಗಿ ಸಮರ್ಥವಾಗಿ ಸಂವಹನಿಸಲು ಹೊಸ ಮಾದರಿಗಳು ಬೇಕಿದ್ದವು. ಸಂಸ್ಕೃತ–ಪ್ರಾಕೃತಗಳು ಆ ಅಗತ್ಯವನ್ನು ಪೂರೈಸಿದವು.

ಸಂಸ್ಕೃತ ಮತ್ತು ಪ್ರಾಕೃತ ಭಾಷಾ ಸಾಹಿತ್ಯವನ್ನು ಮಹಾಕವಿಗಳು, ನಾಟಕಕಾರರು ಸಮಾನವಾಗಿ ಗೌರವಿಸಿ ಬಳಸಿದರು. ಸಂಸ್ಕೃತ ನಾಟಕಗಳಲ್ಲಿ ಸಂಸ್ಕೃತಕ್ಕಿಂತ ಪ್ರಾಕೃತವೇ ಪ್ರಧಾನವಾಗಿತ್ತು. ರಾಜನನ್ನು ಬಿಟ್ಟರೆ ಉಳಿದೆಲ್ಲ ಪಾತ್ರಗಳು, ರಾಣಿಯರು ಸಹ ಪ್ರಾಕೃತದಲ್ಲಿ ಮಾತನಾಡಬೇಕಿತ್ತು. ಭಾಸ, ಕಾಳಿದಾಸರ ಎಲ್ಲ ನಾಟಕಗಳಲ್ಲಿ ಪ್ರಾಕೃತದ್ದೇ ದರಬಾರು.

ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಪ್ರಾಕೃತ ವಹಿಸಿದ ಪಾತ್ರ ದೊಡ್ಡದು. ಕನ್ನಡದಲ್ಲಿ ಗ್ರಂಥ ರಚನೆ ಆರಂಭವಾದದ್ದೇ ಪ್ರಾಕೃತ ಕೃತಿಗಳಿಗೆ ಬರೆದ ವ್ಯಾಖ್ಯಾನಗಳ ಮೂಲಕ. ಆನಂತರ ಶಾಸ್ತ್ರಗ್ರಂಥಗಳ ಅನುವಾದಕ್ಕೆ ತೊಡಗಿದರು. ತರುವಾಯ ಪ್ರಾಕೃತ ಕತೆ, ಕಾವ್ಯಗಳ ಸ್ಫೂರ್ತಿಯಿಂದ ಅಲ್ಲಿನ ಮಾದರಿಗಳಿಗೆ ಮುಗಿಬಿದ್ದರು. ಕನ್ನಡದ ಮುಂಗೋಳಿ ಎನಿಸಿದ ವಡ್ಡಾರಾಧನೆ ಪ್ರಾಕೃತದ ಕೊಡುಗೆ. ಅಲ್ಲಿಂದ ಪ್ರಾಕೃತದ ಪ್ರಭಾವ ಪ್ರವಾಹವಾಯಿತು. ಕನ್ನಡ ಕಾವ್ಯ ಪ್ರಪಂಚದ ತುಂಬಾ ಪ್ರಾಕೃತದ ಹೆಜ್ಜೆಗಳೂಡಿದವು. ಕನ್ನಡಕ್ಕೆ ಮೊಲೆಯೂಡಿ ಕಸುವು ಹೆಚ್ಚಿಸಿದುದನ್ನು ಅರಿಯಲು ಸಾಹಿತ್ಯ ಪ್ರಕಾರಗಳ ಪಕ್ಷಿನೋಟ ಸಾಕು.

ಹಳಗನ್ನಡದಲ್ಲಿ ತೂಗಿ ತೊನೆಯುವ ಕಾವ್ಯ ಪ್ರಕಾರ ‘ಚಂಪೂ’. ಇದು ಕನ್ನಡಕ್ಕೆ ಪ್ರಾಕೃತ ನೀಡಿದ ಮೊದಲ ವರ.

ಸಂಘದಾಸಗಣಿ ವಾಚಕನ ವಸುದೇವ ಹಿಂಡಿ, ಉದ್ಯೋತನ ಸೂರಿಯ ಕುವಲಯಮಾಲ ಕಾವ್ಯಗಳ ದಟ್ಟ ಪ್ರಭಾವದಿಂದ ಚಂಪೂ ರೂಪ ಕನ್ನಡದಲ್ಲಿ ಪಲ್ಲವಿಸಿತು. ಶತಮಾನದಿಂದ ಶತಮಾನಕ್ಕೆ ದಾಂಗುಡಿಯಿಡುತ್ತಾ ಚಂಪೂ ರೂಪ ಮಹಾರಾಜನಾಗಿ ವಿಜೃಂಭಿಸಿತು. ಪಂಪ, ಪೊನ್ನ, ರನ್ನ, ಜನ್ನ, ರುದ್ರಭಟ್ಟ, ಹರಿಹರ ಕವಿಗಳಿಂದ ಚಂಪೂ ಶಿಖರಾರೋಹಣ ಮಾಡಿತು. ಕಂದಪದ್ಯಗಳಿಲ್ಲದ ಚಂಪೂ ಕಾವ್ಯಗಳಿಲ್ಲ. ‘ಕಂದ’ ಛಂದಸ್ಸು ಪ್ರಾಕೃತವು ಕನ್ನಡಕ್ಕೆ ಕೊಟ್ಟಿರುವ ಎರಡನೆಯ ಬಳುವಳಿ.


‘ಪ್ರಾಸ’ ಕನ್ನಡ ಪದ್ಯಗಳ ಜೀವಾಳ. ಪ್ರಾಸಗಳಲ್ಲಿ ಆದಿಪ್ರಾಸ ಪ್ರಾಣಾನಿಲ. ಅಂತ್ಯಪ್ರಾಸವೂ ಸಾಕಷ್ಟಿದೆ. ಕೆಲವೊಮ್ಮೆ ಆದ್ಯಂತಪ್ರಾಸ ಬಳಕೆಯಾಗಿದೆ. ರಗಳೆ ಕಾವ್ಯಗಳಲ್ಲಿ ಇದು ಕಂಡುಬಂದಿದೆ. ಈ ಆದಿಪ್ರಾಸ, ಅಂತ್ಯಪ್ರಾಸ ಮತ್ತು ಆದ್ಯಂತ ಪ್ರಾಸಗಳು ಪ್ರಾಕೃತದ ಮೂರನೆಯ ದೇಣಿಗೆ.

ಹರಿಹರ ಕವಿ ‘ರಗಳೆ’ ಛಂದಸ್ಸಿನ ಕಾವ್ಯಗಳ ಬಾದಷಹ. ಉತ್ಸಾಹ ರಗಳೆ, ಮಂದಾನಿಲ ರಗಳೆ, ಲಲಿತ ರಗಳೆ ಜನಪ್ರಿಯ ಪ್ರಕಾರಗಳು. ಈ ಮೂರೂ ಪ್ರಕಾರಗಳ ರಗಳೆ ಛಂದಸ್ಸನ್ನು ಕನ್ನಡಕ್ಕೆ ಧಾರೆ ಎರೆದದ್ದು ಪ್ರಾಕೃತ. ಇದು ನಾಲ್ಕನೆಯ ಉಪಕಾರ.

ನಡುಗನ್ನಡ ಸಾಹಿತ್ಯದಲ್ಲಿ ‘ಸಾಂಗತ್ಯ’ ಕಾವ್ಯಗಳದ್ದೇ ದರಬಾರು. ರತ್ನಾಕರ ವರ್ಣಿ ಹತ್ತು ಸಾವಿರ ಪದ್ಯಗಳ ‘ಭರತೇಶ ವೈಭವ’ ಮಹಾಕಾವ್ಯ ಬರೆದದ್ದು ಸಾಂಗತ್ಯ ಛಂದಸ್ಸಿನಲ್ಲಿ. ಕನ್ನಡಕ್ಕೆ ಈ ಸಾಂಗತ್ಯ ಮಟ್ಟು ಬಂದದ್ದು ಪ್ರಾಕೃತದಿಂದ. ಐದನೆಯ ಕೊಡುಗೆ ಇದು.

‘ಚರಿತೆ’ಯೆಂಬ ಕಾವ್ಯ ಪ್ರಕಾರ ಕನ್ನಡದಲ್ಲಿ ರೂಢಿಗೆ ಬಂದದ್ದು ಪ್ರಾಕೃತದಿಂದ. ಪರಶುರಾಮ ಚರಿತೆ, ಚಕ್ರೇಶ್ವರ ಚರಿತೆ ಮತ್ತು ಯಶೋಧರ ಚರಿತೆ ಕಾವ್ಯಗಳು ನೆನಪಾಗುತ್ತವೆ. ಚಿದಾನಂದ ಮಲ್ಲಿಕಾರ್ಜುನನ ಸೂಕ್ತಿ ಸುಧಾರ್ಣವ ಮೊದಲಾದ ಕಾವ್ಯ ಸಂಕಲನಗಳು ಪ್ರಾಕೃತದ ಗಾಥಾಸಪ್ತಶತಿಯಂಥ ಸಂಕಲನ ಮಾದರಿಯಿಂದ ರಚಿತವಾದವು.

ಇವೆಲ್ಲ ಬಳುವಳಿಗಿಂತ ಬಹುದೊಡ್ಡ ಕೊಡುಗೆ ಎಂದರೆ ಕನ್ನಡ ನುಡಿಭಂಡಾರವನ್ನು ಶ್ರೀಮಂತಗೊಳಿಸಿದ್ದು. ಸಂಸ್ಕೃತದಿಂದ ಬಂದಿದೆ ಎಂದು ಭಾವಿಸಿರುವ ಸಾವಿರಾರು ಶಬ್ದಗಳು ಮತ್ತು ತದ್ಭವ ರೂಪಗಳು ಪ್ರಾಕೃತದ ಮೂಲಕ ಬಂದಿವೆ. ಹೀಗೆ ಬಗೆಬಗೆಯಾಗಿ ಕನ್ನಡದ ಸತ್ವವನ್ನು, ಕಾವ್ಯಶಕ್ತಿಯನ್ನು ಸಮೃದ್ಧಗೊಳಿಸಿದ ಪ್ರಾಕೃತದ ಉಪಕಾರ ಸ್ಮರಣೆ ಕನ್ನಡಿಗರಾದ ನಮ್ಮದು ಆದ್ಯ ಕರ್ತವ್ಯ.
(Courtesy : ಪ್ರಜಾವಾಣಿ)