•► ಸ್ಪರ್ಧಾತ್ಮಕ ಪರೀಕ್ಷೆಗೆ 'ಭಾರತದ ಸಂವಿಧಾನ'ದ ಅಧ್ಯಯನ ಹೇಗಿರಬೇಕು?
(What should be the study of 'Constitution of India' for competitive examination?)
━━━━━━━━━━━━━━━━━━━━━━━━━━━━━━━━━━━━━━━━━━
★ ಭಾರತದ ಸಂವಿಧಾನ
('Constitution of India)
ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಾಗಿರಲಿ, ಅದರಲ್ಲಿ ಭಾರತದ ಸಂವಿಧಾನ ಕುರಿತಾದ ಪ್ರಶ್ನೆಗಳು ಕಡ್ಡಾಯವಾಗಿ ಬಂದೇ ಬರುತ್ತವೆ. ಹೀಗಾಗಿ ಇದರ ಸೂಕ್ತ ಅಧ್ಯಯನ ಅಗತ್ಯ.
ನಮ್ಮ ಸಂವಿಧಾನ ನಮ್ಮ ದೇಶದ ಸರ್ವಶ್ರೇಷ್ಠ ಕಾನೂನು. ಹೀಗಾಗಿ, ಸರ್ಕಾರಿ ಹುದ್ದೆಯಲ್ಲಿರುವ ಎಲ್ಲರಿಗೂ ಸಂವಿಧಾನದ ಅರಿವು ಇರಬೇಕು ಎಂಬುದು ಅಪೇಕ್ಷಿತ. ಅದರಲ್ಲೂ ಐಎಎಸ್, ಕೆಎಎಸ್, ಪಿಎಸ್ಐ, ಎಫ್‌ಡಿಎ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಜವಾಬ್ದಾರಿಯುತ ಹುದ್ದೆಗಳನ್ನು ಹೊಂದುವವರಿಗೆ ಸಂವಿಧಾನದ ಪರಿಜ್ಞಾನ ಅನಿವಾರ್ಯ.
ಈ ನಿಟ್ಟಿನಲ್ಲಿ, ಯಾವುದೇ ಹುದ್ದೆಯ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಯಾಗಿರಲಿ ಅದರಲ್ಲಿ ಭಾರತದ ಸಂವಿಧಾನ ಕುರಿತಾದ ಪ್ರಶ್ನೆಗಳು ಕಡ್ಡಾಯವಾಗಿ ಬಂದೇ ಬರುತ್ತವೆ. ಅದರಲ್ಲೂ 2011 ರಿಂದ ಇಲ್ಲಿಯವರೆಗಿನ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಗಮನಿಸಿದರೆ ಶೇ 8 ರಿಂದ ಶೇ 21 ರಷ್ಟು ಪ್ರಶ್ನೆಗಳು ಭಾರತದ ಸಂವಿಧಾನಕ್ಕೆ ಸಂಬಂಧಿಸಿ ಬಂದಿರುವುದನ್ನು ನಾವು ಗಮನಿಸಬಹುದು.
ಭಾರತೀಯ ಸಂವಿಧಾನದಲ್ಲಿ ಏನು ಓದಬೇಕು?
ಸಂವಿಧಾನದ ಐತಿಹಾಸಿಕ ಹಿನ್ನೆಲೆ (ಈಸ್ಟ್ ಇಂಡಿಯಾ ಕಂಪನಿ ಕಾಯ್ದೆಗಳು: 1700 ರಿಂದ 1857 ರವರೆಗೆ ಹಾಗೂ ಬ್ರಿಟಿಷ್- ಭಾರತ ಸರ್ಕಾರದ ಕಾಯ್ದೆಗಳು: 1858 ರಿಂದ 1947 ರವರೆಗೆ- 1935 ರ ಬ್ರಿಟಿಷ್- ಭಾರತ ಸರ್ಕಾರದ ಕಾಯ್ದೆಗೆ ಆದ್ಯತೆ ಅಗತ್ಯ), ಸಂವಿಧಾನದ ಆಕರಗಳು (60 ದೇಶದ ಎರವಲುಗಳು), ಪ್ರಸ್ತಾವನೆ, ಮೂಲಭೂತ ಹಕ್ಕು ಮತ್ತು ಕರ್ತವ್ಯಗಳು, ರಾಜ್ಯ ನೀತಿ ನಿರ್ದೇಶಕ ತತ್ವಗಳು, ಕಾರ್ಯಾಂಗ, ಶಾಸಕಾಂಗ, ಸಾಂವಿಧಾನಿಕ ಸ್ವತಂತ್ರ ಸಂಸ್ಥೆಗಳು (ಉದಾ: ಚುನಾವಣಾ ಆಯೋಗ, ನೀತಿ ಆಯೋಗ, ಇತ್ಯಾದಿ...), ಕೇಂದ್ರ- ರಾಜ್ಯಗಳ ಸಂಬಂಧ, ಸಂವಿಧಾನದ ಪ್ರಮುಖ ತಿದ್ದುಪಡಿಗಳು, ಪಂಚಾಯತ ರಾಜ್ ವ್ಯವಸ್ಥೆ, ಆಡಳಿತ ವಿಕೇಂದ್ರೀಕರಣ (73 ಮತ್ತು 74 ನೇ ತಿದ್ದುಪಡಿ ಅತ್ಯಂತ ಮುಖ್ಯ), ಸಂವಿಧಾನ ಮತ್ತು ರಾಜಕೀಯಕ್ಕೆ ಸಂಬಂಧಿಸಿದ ಪ್ರಚಲಿತ ವಿದ್ಯಮಾನಗಳು (ಉದಾ: 371 ನೇ ವಿಧಿ, ಒಂದು ದೇಶ ಒಂದು ಚುನಾವಣೆ, ಚುನಾವಣಾ ಸುಧಾರಣಾ ಕ್ರಮಗಳು, ಮೀಸಲಾತಿ ಹೋರಾಟ ಮತ್ತು ತೀರ್ಪುಗಳು, ಇತ್ಯಾದಿ...) ಇವೆಲ್ಲವುಗಳಿಗೆ ಆದ್ಯತೆ ನೀಡಬೇಕು.
ಟಿಪ್ಪಣಿ ಮೂಲಕ ಪರಿಕಲ್ಪನೆಗಳನ್ನು ಸಂಬಂಧೀಕರಿಸಿ: ಭಾರತೀಯ ಸಂವಿಧಾನ ವಿಷಯವನ್ನು ಓದುವಾಗ ನಿಮ್ಮದೇ ಆದ ಟಿಪ್ಪಣಿ ಮಾಡಿಕೊಳ್ಳಬೇಕು. ಆಯಾ ವಿಧಿಗಳು, ಪರಿಚ್ಛೇದಗಳಲ್ಲಿನ ಹೋಲಿಕೆ ಮತ್ತು ವ್ಯತ್ಯಾಸಗಳನ್ನು ಸಹಸಂಬಂಧೀಕರಿಸಿ ನೆನಪಿನಲ್ಲಿ ಇಟ್ಟುಕೊಳ್ಳಬೇಕು.
ಇಂಗ್ಲಿಷ್ ಪದಗಳ ಬಳಕೆ ಅನಿವಾರ್ಯ: ಸಂವಿಧಾನದಲ್ಲಿ ಬಳಕೆಯಾಗಿರುವ ಕೆಲ ಇಂಗ್ಲಿಷ್ ಪದಗಳ ಯತಾರ್ಥ ಕನ್ನಡೀಕರಣ ಸಾಧ್ಯವಿಲ್ಲ. ಉದಾಹರಣೆಗೆ: ರಾಷ್ಟ್ರಪತಿಗಳ ಅಧಿಕಾರಕ್ಕೆ ಸಂಬಂಧಿಸಿ ಬಳಕೆಯಾಗಿರುವ ‘Pocket VISA’ ಪದವನ್ನು ನಾವು ‘ಜೇಬು ಪರಮಾಧಿಕಾರ’ ಎಂದು ಉಲ್ಲೇಖಿಸಿದರೆ ಆಭಾಸವಾಗುತ್ತದೆ. ಇಂಥ ಸಂದರ್ಭದಲ್ಲಿ ಇಂಗ್ಲಿಷ್ ಪದಗಳನ್ನೇ ಬಳಸಬೇಕು.
ಸಂಕ್ಷೇಪಾಕ್ಷರಗಳ ಮೂಲಕ ಸ್ಮರಣೆಯಲ್ಲಿ ಇಟ್ಟುಕೊಳ್ಳಿ: ಆರಂಭದಲ್ಲಿ 395 ವಿಧಿಗಳು, 22 ಭಾಗಗಳು ಹಾಗೂ 8 ಪರಿಚ್ಛೇದಗಳನ್ನು ಹೊಂದಿದ್ದ ಭಾರತದ ಸಂವಿಧಾನ ಪ್ರಸ್ತುತ 103 ತಿದ್ದುಪಡಿಗಳ ಬಳಿಕ 448 ವಿಧಿಗಳು, 25 ಭಾಗಗಳು ಹಾಗೂ 12 ಪರಿಚ್ಛೇದಗಳನ್ನು ಹೊಂದಿದೆ. ಇವೆಲ್ಲವುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ನಿಮ್ಮದೇ ಆದ ಸಂಕ್ಷೇಪಾಕ್ಷರಗಳ ಬಳಕೆ ಉತ್ತಮ.
ಉದಾಹರಣೆಗೆ: ‘U Can Fly Directly From US’ ಎಂಬ ವಾಕ್ಯವನ್ನು ಸಂಕ್ಷೇಪಾಕ್ಷರವಾಗಿ ಬಳಸಿಕೊಂಡು ನೀವು- U- Union and it's Territory (ಒಕ್ಕೂಟ ವ್ಯವಸ್ಥೆ ಮತ್ತು ಅದರ ಅಂಗಗಳು- ಭಾಗ 1), Can- Citizenship (ಪೌರತ್ವ- ಭಾಗ 2), Fly- Fundamental Rights (ಮೂಲಭೂತ ಹಕ್ಕುಗಳು- ಭಾಗ 3), Directly- Directive Principles of State Policy (ರಾಜ್ಯ ನೀತಿ ನಿರ್ದೇಶಕ ತತ್ವಗಳು- ಭಾಗ 4), From- Fundamental Duties (ಮೂಲಭೂತ ಕರ್ತವ್ಯಗಳು- ಭಾಗ 4 ಎ), U- Union Government (ಕೇಂದ್ರ ಸರ್ಕಾರ- ಭಾಗ 5), S- State Government (ರಾಜ್ಯ ಸರ್ಕಾರ- ಭಾಗ 6) ಪರಿಕಲ್ಪನೆಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬಹುದು.
ಗುಣಮಟ್ಟದ ಪುಸ್ತಕಗಳನ್ನು ಓದಿ
ಭಾರತದ ಸಂವಿಧಾನಕ್ಕೆ ಸಂ ಬಂಧಿಸಿ ಕೆಲವು ಗುಣಮಟ್ಟದ ಇಂಗ್ಲಿಷ್ ಹಾಗೂ ಕನ್ನಡ ಮಾಧ್ಯಮದ ಮೂಲ ಆಕರ ಗ್ರಂಥಗಳನ್ನು ಓದುವುದು ಒಳಿತು. Indian Polity- ಎಂ.ಲಕ್ಷ್ಮೀಕಾಂತ್, Introduction to Indian Constitution- ದುರ್ಗಾ ದಾಸ್ ಬಸು, Our Parliament- ಸುಭಾಷ್ ಕಶ್ಯಪ್, ಭಾರತದ ರಾಜಕೀಯ & ಸಂವಿಧಾನ - ಗಂಗಾಧರ ಪಿ.ಎಸ್., ಸಾರ್ವಜನಿಕ ಆಡಳಿತ - ಹಾಲಪ್ಪ... ಈ ಪುಸ್ತಕಗಳು ಕೆಲ ಉತ್ತಮ ಆಕರ ಗ್ರಂಥಗಳಾಗಿದ್ದು, ಇವುಗಳ ಜೊತೆಗೆ NCERT ಪಠ್ಯಕ್ರಮದನ್ವಯ ರಚನೆಗೊಂಡಿರುವ ಸಿಬಿಎಸ್‌ಇ ಹಾಗೂ ರಾಜ್ಯ ಪಠ್ಯಕ್ರಮದ ಸಮಾಜ ವಿಜ್ಞಾನ ಪಠ್ಯಪುಸ್ತಕಗಳ ಪೌರನೀತಿ ಭಾಗವನ್ನು ಕಡ್ಡಾಯವಾಗಿ ಓದಬೇಕು. ಇದಲ್ಲದೇ ಕನಿಷ್ಠ 10 ವರ್ಷಗಳ ಹಳೆಯ / ಮಾದರಿ ಪ್ರಶ್ನೆ ಪತ್ರಿಕೆಗಳ ಅವಲೋಕನ ಮರೆಯಬಾರದು.
(ಲೇಖಕರು: ನಿರ್ದೇಶಕರು, ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)
(ಕೃಪೆ : ಪ್ರಜಾವಾಣಿ)