"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday, 22 February 2018

●.'ಸಾಮಾನ್ಯ ಅಧ್ಯಯನ 2-ಪತ್ರಿಕೆ 3: ಸುಸ್ಥಿರ ಅಭಿವೃದ್ಧಿ' ವ್ಯಾಖ್ಯಾನಿಸಿ. ಜಾಗತಿಕ ಮಟ್ಟದ ಸುಸ್ಥಿರ ಅಭಿವೃದ್ಧಿ ಒಳಗೊಳ್ಳುವಿಕೆ : (Sustained Development and What does sustainable development)

●.'ಸಾಮಾನ್ಯ ಅಧ್ಯಯನ 2-ಪತ್ರಿಕೆ 3: ಸುಸ್ಥಿರ ಅಭಿವೃದ್ಧಿ' ವ್ಯಾಖ್ಯಾನಿಸಿ. ಜಾಗತಿಕ ಮಟ್ಟದ ಸುಸ್ಥಿರ ಅಭಿವೃದ್ಧಿ ಒಳಗೊಳ್ಳುವಿಕೆ :
(Sustained Development and What does sustainable development)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಪರಿಸರ ವ್ಯವಸ್ಥೆ
(Ecology & Environmental studies)


•► ಪರಿಸರ ಮತ್ತು ಅಭಿವೃದ್ಧಿ ಕುರಿತಾದ ವಿಶ್ವ ಆಯೋಗ (ಬ್ರಂಟ್ ಲ್ಯಾಂಡ ಆಯೋಗ ಎಂದು ಕರೆಯಲಾಗುತ್ತದೆ) ಸುಸ್ಥಿರ ಅಭಿವೃದ್ಧಿಯನ್ನು ಹೀಗೆ ವ್ಯಾಖ್ಯಾನಿಸಿದೆ, `ಭವಿಷ್ಯದ ಪೀಳಿಗೆಯು ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವಲ್ಲಿ ಹೊಂದಿರುವ ಸಾಮಥ್ರ್ಯದೊಂದಿಗೆ ರಾಜಿಯಾಗದೇ ಪ್ರಸಕ್ತ ಪೀಳಿಗೆ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳುವ ಪ್ರಕ್ರಿಯೆ ಸುಸ್ಥಿರ ಅಭಿವೃದ್ಧಿ'.

•► 1992ರಲ್ಲಿ ರಿಯೊದಲ್ಲಿ ಜರುಗಿದ ಭೂ ಶೃಂಗಸಭೆ (ಪರಿಸರ ಮತ್ತು ಅಭಿವೃದ್ಧಿ ಕುರಿತಂತೆ ವಿಶ್ವ ಸಂಸ್ಥೆಯ ಅಧಿವೇಶನ) ಈ ವ್ಯಾಖ್ಯಾನವನ್ನು ಬಹುವಾಗಿ ಮೆಚ್ಚಿತಲ್ಲದೆ ಅದನ್ನು ಸ್ವೀಕರಿಸಿತು. ನಂತರ ಹವಾಮಾನ ಬದಲಾವಣೆ ಹಾಗೂ ಜೀವವೈವಿಧ್ಯದಲ್ಲಿನ ಬದಲಾವಣೆಯಿಂದಾಗಿ ಉಂಟಾಗುವ ಅಸುಸ್ಥಿರತೆಯಿಂದ ಮಾನವ ಸಂಕುಲವನ್ನು ಕಾಪಾಡುವ ಸಲುವಾಗಿ ಹಾಗೂ ಜಾಗತಿಕ ಮಟ್ಟದಲ್ಲಿ ಪರಿಸರ ಅಭಿವೃದ್ಧಿಗಾಗಿ ನಿಧಿ ಸಂಗ್ರಹ ಉದ್ದೇಶದೊಂದಿಗೆ ನಡೆದ ಹವಾಮಾನ ಬದಲಾವಣೆಯ ಚೌಕಟ್ಟಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಮಹಾಅಧಿವೇಶನ (ಯುಎನ್‍ಎಫ್ ಸಿಸಿಸಿ) ಹಾಗೂ ಜೀವವೈವಿಧ್ಯ ಸಮಾವೇಶ (ಸಿ ಬಿ ಡಿ) ದ ಫಲವಾಗಿ ಜಾಗತಿಕ ಪರಿಸರ ಸೌಲಭ್ಯ (ಜಿಇಎಫ್) ಯನ್ನು ಸ್ಥಾಪಿಸಲಾಯಿತು.

•► ಹವಾಮಾನದಲ್ಲಿನ ಬದಲಾವಣೆ ಒಟ್ಟು ಪರಿಸರದ ಇತರ ಅಂಶಗಳ ಮೇಲೆಯೂ ಪರಿಣಾಮ ಬೀರುತ್ತದೆ. ಜೀವ ಭೌತಿಕ ಪರಿಸರ ಅಂದರೆ, ವಾತಾವರಣ ಭೂಮಿಯಬಳಕೆ ಮರುಭೂಮಿ ಸೃಷ್ಟಿ, ಜೈವಿಕ ದಾಳಿಯಂತಹ ಬದಲಾವಣೆ, ಹಾಗೂ ಜಾಗತೀಕರಣ, ಮುಕ್ತ ವ್ಯಾಪಾರ, ನೂತನ ಬೌದ್ಧಿಕ ಹಕ್ಕು ಸ್ವಾಮ್ಯ ದ್ವಿಪಕ್ಷೀಯ ಅಥವಾ ಬಹುಪಕ್ಷೀಯ ಸಹಕಾರ, ಹೊಂದಾಣಿಕೆ ಒಪ್ಪಂದಗಳು ಸೇರಿದಂತೆ ಆರ್ಥಿಕ ಸಾಮಾಜಿಕ ಹಾಗೂ ರಾಜಕೀಯ ಪರಿಸರದ ಮೇಲೂ ಆಗುವ ಪರಿಣಾಮದಿಂದಾಗಿ ಸೃಷ್ಟಿಯಾಗುವ ವಿವಿಧ ಸಮಸ್ಯೆಗಳನ್ನು ಎದುರಿಸಲು ಸುಸ್ಥಿರ ಅಭಿವೃದ್ಧಿ ಪ್ರಕ್ರಿಯೆ ವಿವಿಧ ಮಾರ್ಗೋಪಾಯಗಳನ್ನು ಅನುಸರಿಸಬೇಕಾಗುತ್ತದೆ.

•► 2002ರಲ್ಲಿ ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಸುಸ್ಥಿರ ಅಭಿವೃದ್ಧಿ ಕುರಿತ ವಿಶ್ವಸಂಸ್ಥೆ ಅಧಿವೇಶನ ಸಹ ಸುಸ್ಥಿರ ಅಭಿವೃದ್ಧಿ ತತ್ವಗಳನ್ನು ಒಪ್ಪಿಕೊಳ್ಳುವ ಮೂಲಕ ಈ ಪರಿಕಲ್ಪನೆಗೆ ಜಾಗತಿಕ ಮಟ್ಟದ ಆಯಾಮ ನೀಡಿತು.

•► (Sustainable development is development that meets the needs of the present without compromising the ability of future generations to meet their own needs.)

Tuesday, 20 February 2018

●.ಸಾಮಾನ್ಯ ಅಧ್ಯಯನ 3-ಪತ್ರಿಕೆ 4: ವಾತಾವರಣದ (ವಾಯುಗೋಳ)ದ ಸಂಯೋಜನೆ ಮತ್ತು ಅದರ ಪ್ರಮುಖ 5 ಪದರುಗಳು (The five layers of Atmosphere and its main features)

●.ಸಾಮಾನ್ಯ ಅಧ್ಯಯನ 3-ಪತ್ರಿಕೆ 4: ವಾತಾವರಣದ (ವಾಯುಗೋಳ)ದ ಸಂಯೋಜನೆ ಮತ್ತು ಅದರ ಪ್ರಮುಖ 5 ಪದರುಗಳು
(The five layers of Atmosphere and its main features)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಪರಿಸರ ವ್ಯವಸ್ಥೆ,
(Ecology, Environmental Studies)

★ ಭೂಗೋಳಶಾಸ್ತ್ರ
(Geography)



• ವಾಯುಗೋಳವು ವಿವಿಧ ಬಗೆಯ ಅನಿಲಗಳು, ಧೂಳಿನ ಕಣಗಳು ಮತ್ತು ನೀರಾವಿಯ ಮಿಶ್ರಣವಾಗಿದೆ.

• ವಾಯುಗೋಳದ ಮುಖ್ಯ ಅನಿಲಗಳೆಂದರೆ
- ಸಾರಜನಕ ಶೇ.78.08,
- ಆಮ್ಲಜನಕ ಶೇ.20.94,
- ಆರ್ಗಾನ್ ಶೇ.0.93,
- ಇಂಗಾಲದ ಡೈಆಕ್ಸೈಡ್ ಶೇ.03, ಮತ್ತು ಓಜೋನ್ ಶೇ. 0.000005.

• ವಾಯುಗೋಳವು ಧೂಳಿನ ಕಣಗಳನ್ನು ಸಹ ಒಳಗೊಂಡಿದ್ದು, ನೀರಿನ ಕಣಗಳ ನಿರ್ಮಾಣಕ್ಕೆ ಸಹಾಯಕವಾಗಿದೆ.
ವಾಯುಗೋಳದಲ್ಲಿರುವ ನೀರಾವಿಯು ಮೋಡದ ನಿರ್ಮಾಣ ಹಾಗೂ ವೃಷ್ಟಿಗೆ ಕಾರಣವಾಗುವುದಲ್ಲದೆ, ವಾಯುಗೋಳದ ಶಾಖ ಮತ್ತು ಶಕ್ತಿಯನ್ನು ಹಿಡಿದಿರಿಸಿಕೊಂಡು ಅದು ಒಂದು ಸ್ಥಳದ ಹವಾಮಾನದ ಪರಿಸ್ಥಿತಿಯ ಮೇಲೆ ಪ್ರಭಾವವನ್ನು ಬೀರುವುದು.


•► ವಾಯುಗೋಳದ ರಚನೆ :
ವಾಯುಗೋಳವನ್ನು ಅದರ ಹಲವಾರು ಲಕ್ಷಣಗಳನ್ನು ಆಧರಿಸಿ ಐದು ಪದರುಗಳಾಗಿ ವಿಂಗಡಿಸಲಾಗಿದೆ.
ಅವುಗಳೆಂದರೆ ;
- ಪರಿವರ್ತನಾಮಂಡಲ,
- ಸಮೋಷ್ಣಮಂಡಲ,
- ಮಧ್ಯಂತರಮಂಡಲ,
- ಉಷ್ಣತಾಮಂಡಲ ಮತ್ತು ಬಾಹ್ಯಮಂಡಲ.


•► ಪರಿವರ್ತನಾಮಂಡಲ (Troposphere ) : 
- ಇದು ವಾಯುಗೋಳದ ಅತ್ಯಂತ ಕೆಳಪದರ.
- ಇದು ಸಮಭಾಜಕವೃತ್ತದ ಬಳಿ 18 ಕಿ.ಮೀ. ಎತ್ತರದವರೆಗೆ ಹಾಗೂ ಧ್ರುವಪ್ರದೇಶದ ಬಳಿ 8ಕಿ.ಮೀ. ಎತ್ತರದ ವರೆಗೆ ಕಂಡುಬರುವುದು.
- ಈ ವಲಯದಲ್ಲಿಯೇ ಹವಾಮಾನದ ಮೂಲಾಂಶಗಳಾದ ಉಷ್ಣಾಂಶ, ಒತ್ತಡ, ಮಾರುತಗಳು, ಮೋಡ, ಮಳೆ ಮೊದಲಾದ ಎಲ್ಲಾ ಅಂಶಗಳು ಕಂಡುಬರುತ್ತವೆ.
- ಹವಾಮಾನದ ಎಲ್ಲಾ ಬದಲಾವಣೆ ಕಂಡುಬರುವುದು ಈ ವಲಯದಲ್ಲಿ ಮಾತ್ರ.
- ಈ ವಲಯದಲ್ಲಿ ಎತ್ತರಕ್ಕೆ ಹೋದಂತೆ ಉಷ್ಣಾಂಶ ಮತ್ತು ಒತ್ತಡದ ಪ್ರಮಾಣ ಕಡಿಮೆಯಾಗುತ್ತವೆ.


•► ಸಮೋಷ್ಣಮಂಡಲ (Stratosphere) : 
- ಇದು ವಾಯುಮಂಡಲದ ಎರಡನೆಯ ಪದರವಾಗಿದ್ದು 50 ಕಿ.ಮೀ.ವರೆಗೆ ಹಬ್ಬಿದೆ.
- ಪರಿವರ್ತನಾ ಮಂಡಲ ಮತ್ತು ಮಧ್ಯಂತರ ಮಂಡಲಗಳ ನಡುವೆ ವಿಸ್ತರಿಸಿದೆ.
- ಈ ಪದರದಲ್ಲಿ ಓಜೋನ್ ಅನಿಲವು ಅತ್ಯಂತ ಮುಖ್ಯವಾದುದು.
- ಇದು ಸೂರ್ಯನಿಂದ ಬರುವ ಅತಿನೇರಳೆ (ಅಲ್ಟ್ರಾವೈಲೆಟ್) ಕಿರಣಗಳನ್ನು ಹೀರಿಕೊಂಡು ಭೂಮಿಯ ಮೇಲಿನ ಎಲ್ಲಾ ಜೀವರಾಶಿಗಳನ್ನು ರಕ್ಷಿಸಿದೆ.
- ಈ ಪದರವು ಮೋಡ ಹಾಗೂ ಇತರೆ ಎಲ್ಲಾ ಬಗೆಯ ಹವಾಮಾನದ ಅಂಶಗಳಿಂದ ಮುಕ್ತವಾಗಿರುವುದು.
- ಇದರಿಂದ ಈ ಪದರದಲ್ಲಿ ಜೆಟ್ ವಿಮಾನಗಳು ಹಾರಾಡಲು ಸೂಕ್ತವಾಗಿದೆ.


► ಮಧ್ಯಂತರ ಮಂಡಲ (Mesosphere ) : 
- ಇದು ಸಮೋಷ್ಣಮಂಡಲದ ಮೇಲಿದ್ದು ಸುಮಾರು 80 ಕಿ.ಮೀ. ಎತ್ತರದವರೆಗೆ ವಿಸ್ತರಿಸಿದೆ.
- ಈ ವಲಯದಲ್ಲಿಯೂ ಎತ್ತರಕ್ಕೆ ಹೋದಂತೆ ಉಷ್ಣಾಂಶವು ಕಡಿಮೆಯಾಗುವುದು.
- ಈ ಪದರು ವಾಯುಮಂಡಲದ ಅತಿ ಶೀತವಾದ ವಲಯವಾಗಿದೆ.


•► ಉಷ್ಣತಾಮಂಡಲ (Thermosphere) : 
- ಮಧ್ಯಂತರ ಮಂಡಲದ ನಂತರ ಉಷ್ಣತಾಮಂಡಲ ಕಂಡುಬರುತ್ತದೆ.
- ಈ ಪದರದಲ್ಲಿ ಉಷ್ಣಾಂಶವು ತೀವ್ರವಾಗಿ ಹೆಚ್ಚಾಗುತ್ತದೆ.
- ಈ ಪದರದಲ್ಲಿನ ಅತ್ಯಧಿಕ ಉಷ್ಣಾಂಶದ ಪರಿಣಾಮವಾಗಿ ಅನಿಲದ ಅಣುಗಳು ಆಯಾನುಗಳಾಗಿ ಪರಿವರ್ತನೆ ಹೊಂದಿರುತ್ತವೆ. ಆದುದರಿಂದ ಇದನ್ನು ‘ಆಯಾನುಮಂಡಲ’ವೆಂತಲೂ ಕರೆಯುವರು.
- ಇಲ್ಲಿನ ಆಯಾನುಗಳು ಭೂಮಿಯಿಂದ ಪ್ರಸಾರಗೊಂಡ ರೇಡಿಯೋ ತರಂಗಗಳನ್ನು ಪುನಃ ಭೂಮಿಯ ಕಡೆಗೆ ಪ್ರತಿಫಲಿಸುತ್ತವೆ.


•► ಬಾಹ್ಯಮಂಡಲ (Exosphere) : 
- ಬಾಹ್ಯಮಂಡಲವು ವಾಯುಗೋಳದ ಅತ್ಯಂತ ಎತ್ತರದಲ್ಲಿದ್ದು ಪದರವಾಗಿದೆ.
- ಈ ಪದರಲ್ಲಿ ವಾಯುಗೋಳದ ಘಟಕಾಂಶಗಳು ವಿರಳವಾಗಿರುತ್ತದೆ ಮತ್ತು ಒತ್ತಡ ಅತ್ಯಂತ ಕಡಿಮೆ ಇರುತ್ತದೆ.

☀️ PART IV— ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ ಬಿಟ್ಸ್ (IAS/KAS Exam Preparation Notes Bits)

☀️ PART IV— ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ ಬಿಟ್ಸ್
(IAS/KAS Exam Preparation Notes Bits)
━━━━━━━━━━━━━━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ
(IAS / KAS exam preparation notes)

★ ಸಾಮಾನ್ಯ ಅಧ್ಯಯನ
(general studies)

...ಮುಂದುವರೆದ ಭಾಗ.

ಇಲ್ಲಿ ಹಂಚಿಕೊಂಡಿರುವ ಮಾಹಿತಿಯು ಹಲವಾರು ನಿಖರ, ನಂಬಲರ್ಹವಾದ, ನೈಜ್ಯ ಮಾಹಿತಿಗಳನ್ನೊಳಗೊಂಡ ಹಲವು ಮೂಲಗಳಿಂದ ಕಲೆಹಾಕಿರುವಂತಹವು. ಏನಾದರೂ ಬರಹದಲ್ಲಿ ತಪ್ಪುಗಳಿದ್ದಲ್ಲಿ ಕ್ಷಮಿಸಿ ಹಾಗೂ ನನ್ನ ಗಮನಕ್ಕೆ ತನ್ನಿ.
Gmail : yaseen7ash@gmail.com



41. 'ಕಿಶೆನ್ ಗಂಗಾ ನದಿ'ಯನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ 'ನೀಲಂ ನದಿ' ಎಂದು ಕರೆಯಲಾಗುತ್ತದೆ.
- ಗಂಗಾ ನದಿಯು ಉತ್ತರಾಖಂಡದ 'ಗಂಗೋತ್ರಿ ಹಿಮನದಿ'ಯಿಂದ ಹುಟ್ಟಿಕೊಂಡಿದೆ.
- ಮಧ್ಯಪ್ರದೇಶದ ಸಾತ್ಪುರಾದ ದಕ್ಷಿಣದ ಇಳಿಜಾರಿನ ಸಿಯೋನಿ ಜಿಲ್ಲೆಯ ಮುಂಡಾರಾ ಹಳ್ಳಿಯಿಂದ 12 ಕಿಮೀ ದೂರದಲ್ಲಿ 'ವೆನಗಂಗಾ ನದಿ'ಯು ಉಗಮಿಸುತ್ತದೆ.
- 'ಪೆನಗಂಗಾ ನದಿ'ಯು ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯಲ್ಲಿ ಕಂಡುಬರುತ್ತದೆ.



42. ಪ್ರಧಾನ ಮಂತ್ರಿ ಜೀವನ ವಿಮಾ ಯೋಜನೆಯು ಪ್ರತಿಯೊಬ್ಬ ಭಾರತೀಯನಿಗೂ ಜೀವ ವಿಮೆಯನ್ನು ಒದಗಿಸುವ ಉದ್ದೇಶವನ್ನು ಈ ವಿಮೆ ಹೊಂದಿದೆ. ಟರ್ಮ್ ವಿಮಾ ಯೋಜನೆಯ ಪ್ರಕಾರ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯು 18-50 ವರ್ಷ ವಯಸ್ಸಿನ ಜನರಿಗೆ ಲಭ್ಯವಿರುತ್ತದೆ.
— ವಿಮಾದಾರ ಸ್ವಇಚ್ಛೆಯ ಪ್ರಕಾರ ಈ ಯೋಜನೆಯಿಂದ ಹೊರ ಹೋಗುವ ಅವಕಾಶವೂ ಇದೆ. ಭವಿಷ್ಯದಲ್ಲಿ ಯಾವಾಗಲಾದರೂ ಮತ್ತೆ ಈ ಪಾಲಿಸಿಯಲ್ಲಿ ಸೇರಿಕೊಳ್ಳಬಹುದು.
— ಈ ಸ್ಕೀಂನ ಪ್ರಕಾರ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಒಂದು ನವೀಕರಣ (renewal) ಮಾಡಬಹುದಾದ ಪಾಲಿಸಿಯಾಗಿದ್ದು, ಇದರಲ್ಲಿ ವಾರ್ಷಿಕ ಜೀವ ವಿಮಾ ರಕ್ಷಣೆ ರೂ. 2,00,000 ವನ್ನು ವಿಮಾದಾರನ ಮರಣದ ಸಂದರ್ಭದಲ್ಲಿ ಕೊಡಲಾಗುತ್ತದೆ. ಅತೀ ಕಡಿಮೆ ಅಂದರೆ ವಾರ್ಷಿಕ ರೂ. 330 ಪ್ರೀಮಿಯಂ ದರದಲ್ಲಿ ಇದನ್ನು ನೀಡಲಾಗುತ್ತದೆ.



43. ಬಿಟ್ ಕಾಯಿನ್ ಡಿಜಿಟಲ್ ಯುಗದ ಡಿಜಿಟಲ್ ಕರೆನ್ಸಿ. ಇದಕ್ಕೆ ಮುದ್ರಣ ರೂಪ ಇಲ್ಲ. ಅಲ್ಲದೇ ಇದಕ್ಕೆ ಯಾವುದೇ ದೇಶ, ಭಾಷೆ, ಬ್ಯಾಂಕು ಇದ್ಯಾವುದು ಇರುವುದಿಲ್ಲ.
— ಬಿಟ್ ಕಾಯಿನ್ ವಿಶ್ವದ ಯಾವುದೇ ಮೂಲದಿಂದ ಕೆಲವೇ ನಿಮಿಷಗಳಲ್ಲಿ ಕಳಿಸಲು ಅಥವಾ ಪಡೆಯಲು ಬಳಸಬಹುದು. ಉತ್ಪನ್ನ-ಸೇವೆಗಳನ್ನು ಪಡೆಯಲು ಇಲ್ಲವೇ ಷೇರು ಮತ್ತು ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಆದರೆ ಈ ಪ್ರಕ್ರಿಯೆಗಳೇಲ್ಲ ಅಂತರ್ಜಾಲದ ಮೂಲಕ ಮಾತ್ರ ನಡೆಯುತ್ತದೆ.
— ಬಿಟ್ ಕಾಯಿನ್ ಭಾರತದಲ್ಲಿ ಕಾನೂನು ಬದ್ದವಾಗಿ ಚಲಾವಣೆಗೆ ತಂದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಇದರ ಒಳಿತು ಕೆಡುಕುಗಳ ಬಗ್ಗೆ ಗಮನ ಹರಿಸಿದೆ. ಬಿಟ್ ಕಾಯಿನ್ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ನಿಯಂತ್ರಿಸಲ್ಪಡುವುದಿಲ್ಲ.



44. ಕಾಲಗಣನೆಗೆ ಸಂಬಂಧಿಸಿದ ಭಾರತದ ಪಂಚಾಂಗಗಳು ಸೂರ್ಯ–ಚಂದ್ರರ ತೋರಿಕೆಯ ಚಲನೆಯನ್ನು ಆಧರಿಸಿವೆ. ಈ ನಿಟ್ಟಿನಲ್ಲಿ ಮಕರ ಸಂಕ್ರಾಂತಿ ಹಬ್ಬದ ಆಚರಣೆಯೂ ಸೂರ್ಯನನ್ನು ಕುರಿತದ್ದೆ ಆಗಿದ್ದು ಮಕರ ‘ರಾಶಿ’ಗೆ ಅಥವಾ ನಕ್ಷತ್ರಪುಂಜಕ್ಕೆ (ಕೇಪ್ರಿಕಾರ್ನ್‍ಸ್ ಕಾನ್ಸ್ಟಲೇಷನ್) ಸೂರ್ಯನ ‘ಪ್ರವೇಶ’ವನ್ನು ಸೂಚಿಸಿ ಒಂದು ದೃಷ್ಟಿಯಿಂದ ಹೆಚ್ಚು ಬೆಳಕಿರುವ ದಿನಗಳ ಪ್ರಾರಂಭವನ್ನು (ಉತ್ತರಾಯಣ) ಸಾರುತ್ತದೆ.



45. ಸರ್ಕಾರವು ವನ್ಯಜೀವಿಗಳ ಸಂರಕ್ಷಣೆಗೆಂದು ಅಭಯಾರಣ್ಯ, ರಾಷ್ಟ್ರೀಯ ಉದ್ಯಾನಗಳನ್ನು ಮಾಡಿದೆ. ಅಭಯಾರಣ್ಯ, ರಾಷ್ಟ್ರೀಯ ಉದ್ಯಾನಗಳಿಗೆ ಇರುವ ವತ್ಯಾಸ ಏನೆಂದರೆ, ಅಭಯಾರಣ್ಯದಲ್ಲಿ ಮನುಷ್ಯರ ಯಾವುದೇ ಚಟುವಟಿಕೆಗೆ ಅನುಮತಿ ಇಲ್ಲ. ಸ್ಥಳೀಯರಿಗೂ ಕೂಡ ಇಲ್ಲಿ ನಿರ್ಬಂಧವಿರುತ್ತದೆ. ರಾಷ್ಟ್ರೀಯ ಉದ್ಯಾನಗಳಲ್ಲಿ ಸ್ಥಳೀಯರು ತಮ್ಮ ಚಟುವಟಿಕೆ ನಡೆಸಲು ಅನುಮತಿ ಇರುತ್ತದೆ.



46. ಗೋಲ್ಡ್ ಮಾನಿಟೈಸೇಶನ್ ಯೋಜನೆ ಎಂದರೆ ಚಿನ್ನವನ್ನು ಬಂಡವಾಳ ಅಥವಾ ಹೂಡಿಕೆ ರೂಪದಲ್ಲಿ ಬಳಕೆ ಮಾಡಿಕೊಳ್ಳಬಹುದು (ಚಿನ್ನದ ಪತ್ರಗಳನ್ನು ಹೊರತುಪಡಿಸಿ).
— ಸದ್ಯ ಭಾರತದಲ್ಲಿ (ಬಿಎಸ್ ಐ) 350 ಹಾಲ್ ಮಾರ್ಕಿಂಗ್ ಕೇಂದ್ರಗಳಿವೆ. ಚಿನ್ನದ ಆಭರಣದ ಪರಿಶುದ್ಧತೆಯನ್ನು ಇವೇ ನಿರ್ಧರಿಸುತ್ತಿವೆ.
— ಈ ಯೋಜನೆಯಲ್ಲಿ ಚಿನ್ನವನ್ನು ಪರೀಕ್ಷೆಗೆ ಒಳಪಡಿಸಲು ಕನಿಷ್ಠ 30 ಗ್ರಾಂ ಚಿನ್ನವನ್ನಾದರೂ ಹೊಂದಿರಬೇಕಾಗುತ್ತದೆ.
— ಎಕ್ಸ್ಆರ್ಎಫ್ ಯಂತ್ರದ ಮೂಲಕ ಚಿನ್ನದ ಪರಿಶುದ್ಧತೆಯ ಲೆಕ್ಕ ಮಾಡಲಾಗುತ್ತದೆ. ಚಿನ್ನ ಪರಿಶೀಲನೆ ಮಾಡಬೇಕಾದವರು ಕೆವೈಸಿ ಸೇರಿದಂತೆ ವಿವಿಧ ಮಾಹಿತಿಯನ್ನು ನೀಡಬೇಕಾಗುತ್ತದೆ.



47. ವುಡ್ಸ್ ವರದಿಯು (ವುಡ್ಸ್ ಡೆಸ್ಪ್ಯಾಚ್) ಭಾರತೀಯ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅನುದಾನ-ನೆರವು ವ್ಯವಸ್ಥೆಯ ಮಂಜೂರಾತಿಯ ಕುರಿತು ಶಿಫಾರಸು ಮಾಡಿತು ಮತ್ತು ಶಾಲೆಗಳು ತಮ್ಮ ವಿದ್ಯಾರ್ಥಿಗಳಿಗೆ ಶುಲ್ಕ ವಿಧಿಸಬೇಕು ಎಂದು ವಾದಿಸಲಾಯಿತು.
— 1854 ರ ಡೆಸ್ಪ್ಯಾಚ್ನ ನಂತರ, ಬ್ರಿಟಿಷರು ಹಲವಾರು ಕ್ರಮಗಳನ್ನು ಪರಿಚಯಿಸಿದರು. ಶಿಕ್ಷಣದ ಎಲ್ಲ ವಿಷಯಗಳ ಮೇಲೆ ನಿಯಂತ್ರಣವನ್ನು ವಿಸ್ತರಿಸಲು ಸರಕಾರದ ಶಿಕ್ಷಣ ಇಲಾಖೆಗಳನ್ನು ಸ್ಥಾಪಿಸಲಾಯಿತು. ವಿಶ್ವವಿದ್ಯಾಲಯ ಶಿಕ್ಷಣ ವ್ಯವಸ್ಥೆಯನ್ನು ಸ್ಥಾಪಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಯಿತು.


48. ಪ್ರಮುಖ ಮಾರುತಗಳು :
– 'ಫೋಹ್ನ್'(Fohn) ಎಂಬುದು ಆಲ್ಪ್ಸ್ ಪ್ರದೇಶದಲ್ಲಿ ಬೀಸುವ ಬೆಚ್ಚಗಿನ ಮತ್ತು ಒಣ ಗಾಳಿಯಾಗಿದೆ.
– 'ಸುರ್ಮನ್'(Sarmun) ಎಂಬುದು ಕುರಿಸ್ತಾನ್ ಪ್ರದೇಶದ ಸ್ಥಳೀಯ ಮಾರುತವಾಗಿದೆ.
– 'ಸಾಂಟಾ ಅನಾ' (Santa Ana) ಎಂಬುದು ಕ್ಯಾಲಿಫೋರ್ನಿಯಾದ ಸ್ಥಳೀಯ ಗಾಳಿಯಾಗಿದೆ.  
– 'ಝೋಂಡಾ' (Zonda) ಎಂಬುದು ಅರ್ಜೆಂಟೈನಾದ ಸ್ಥಳೀಯ ಮಾರುತವಾಗಿದೆ.

.
49. ಭಾರತದ ಕೇಂದ್ರ ಲೋಕ ಸೇವಾ ಆಯೋಗದ ಅಧ್ಯಕ್ಷರನ್ನು ಮತ್ತು ಸದಸ್ಯರನ್ನು, ಮುಖ್ಯ ಚುನಾವಣಾ ಅಧಿಕಾರಿ ಮತ್ತು ಇತರೇ ಚುನಾವಣಾ ಅಧಿಕಾರಿ, ಮಹಾಲೆಕ್ಕಪತ್ರ ಪರಿಶೋಧಕ,  ಹಣಕಾಸು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು,  ಅಂತರ್ ರಾಜ್ಯಗಳ ಸಮಿತಿ, ರಾಷ್ಟ್ರೀಯ ಪರಿಶಿಷ್ಟ ಜಾತಿ / ಪಂಗಡ ಮತ್ತು ಮಹಿಳಾ ಆಯೋಗಗಳ ಅಧ್ಯಕ್ಷರನ್ನು ಮತ್ತು ಸದಸ್ಯರನ್ನು ನೇಮಿಸುವುದು ಮತ್ತು ವಜಾ ಮಾಡುವ ಅಧಿಕಾರ ರಾಷ್ಟಪತಿಯವರಿಗಿದೆ.
— ಭಾರತದ ಅಟಾರ್ನಿ ಜನರಲ್‍ರನ್ನು ರಾಷ್ಟ್ರಪತಿ ನೇಮಕ ಮಾಡುವರು.
— ರಾಜ್ಯ ಲೋಕ ಸೇವಾ ಆಯೋಗದ ಅಧ್ಯಕ್ಷರನ್ನು ಮತ್ತು ಸದಸ್ಯರನ್ನು ವಜಾ ಮಾಡುವ ಅಧಿಕಾರ.
— ಸುಪ್ರಿಂ ಕೋರ್ಟಿನ ಮತ್ತು ಹೈ ಕೋರ್ಟಿನ ಮುಖ್ಯ ನಾಯಾಧೀಶರನ್ನು ಮತ್ತು ಇತರೇ ನ್ಯಾಯಾಧಿಶರನ್ನು ನೇಮಕ ಮಾಡುವುದು.
— ಭಾರತೀಯ ಸೇನಾ ಪಡೆಯ ಮುಖ್ಯ ಸೇನಾಪತಿ. ವಾಯಪಡೆಯ ಏರ್ ಮಾರ್ಷಲ್ ಮತ್ತು ನೌಕಾಪಡೆಯ ಅಡ್ಮಿರಲ್‍ರವರನ್ನು ರಾಷ್ಟ್ರಪತಿ ನೇಮಕ ಮಾಡುವರು.


50. ಸುಕನ್ಯಾ ಸಮೃದ್ಧಿ ಯೋಜನೆ ಯೋಜನೆಯ ಪ್ರಕಾರ ಒಂದು ಹಣಕಾಸು ವರ್ಷದ ಅವಧಿಯಲ್ಲಿ ಖಾತೆಯ ಒಟ್ಟು ಠೇವಣಿ ಮೊತ್ತ 1.5 ಲಕ್ಷ ದಾಟಬಾರದು. ಇದಕ್ಕಿಂತಲೂ ಹೆಚ್ಚಿನ ಮೊತ್ತಕ್ಕೆ ಯಾವುದೆ ಬಡ್ಡಿ ಇರುವುದಿಲ್ಲ. 1.5 ಲಕ್ಷಕ್ಕಿಂತ ಹೆಚ್ಚು ಇಟ್ಟಿರುವ ಮೊತ್ತವನ್ನು ಖಾತೆದಾರರು ಯಾವಾಗ ಬೇಕಾದರೂ ಹಿಂಪಡೆಯಬಹುದು.
— ಸರ್ಕಾರ ಈ ಖಾತೆಯ ಬಡ್ಡಿದರವನ್ನು ಕಾಲ ಕಾಲಕ್ಕೆ ನಿರ್ಧರಿಸಲಿದೆ ಹಾಗೂ ವಾರ್ಷಿಕವಾಗಿ ಇದನ್ನು ಪರಿಷ್ಕರಿಸಲಿದೆ. ಜತೆಗೆ ಖಾತೆಗೆ ಪಾವತಿಸಲಿದೆ. ಸರ್ಕಾರ ಪ್ರತಿ ತ್ರೈಮಾಸಿಕಕ್ಕೆ ಅನುಗುಣವಾಗಿ ಬಡ್ಡಿಯನ್ನು ಘೋಷಿಸಲಿದೆ. ವಾರ್ಷಿಕವಾಗಿ ಪ್ರಸ್ತುತ ತ್ರೈಮಾಸಿಕದ ಬಡ್ಡಿದರ ಶೇ. 8.4ರಷ್ಟು ಇದೆ.
— ಈ ಹಿಂದೆ ಠೇವಣಿಯನ್ನು 14ನೇ ವಯಸ್ಸಿನವರೆಗೆ ಮಾಡಿಸಬಹುದಾಗಿತ್ತು. ಆದರೆ ಈಗ ಇದನ್ನು 15ನೇ ವರ್ಷಕ್ಕೆ ಹೆಚ್ಚಿಸಲಾಗಿದೆ. ಮೊದಲಿಗೆ ವಾರ್ಷಿಕವಾಗಿ ಕನಿಷ್ಟ ಠೇವಣಿ 1000 ರೂಪಾಯಿಗಳಿದ್ದವು. ಜತೆಗೆ ಶೇ. 8.4ರಷ್ಟು ಬಡ್ಡಿದರ ಇದೆ. ಪ್ರಸ್ತುತ ಯಾವುದೇ ಕನಿಷ್ಟ ಠೇವಣಿ ಇಟ್ಟಿಲ್ಲ.

... ಮುಂದುವರೆಯುವುದು. 

Monday, 19 February 2018

●.ಸಾಮಾನ್ಯ ಅಧ್ಯಯನ 1-ಪತ್ರಿಕೆ 2: ರಾಷ್ಟ್ರೀಯ ಆದಾಯ (National Income)

●.ಸಾಮಾನ್ಯ ಅಧ್ಯಯನ 1-ಪತ್ರಿಕೆ 2: ರಾಷ್ಟ್ರೀಯ ಆದಾಯ
(National Income)
━━━━━━━━━━━━━━━━━━━━━━━━━━━━━━━━━━━━
★ಭಾರತದ ಆರ್ಥಿಕತೆ
(Indian Economics)

ರಾಷ್ಟ್ರೀಯ ಆದಾಯವು ಒಂದು ರಾಷ್ಟ್ರದಲ್ಲಿ ಉತ್ಪಾದಿಸಿದ ಸರಕುಗಳ ಮತ್ತು ಸೇವೆಗಳ ಒಟ್ಟು ಮೌಲ್ಯವನ್ನು ಸೂಚಿಸುತ್ತದೆ.

•► ಸೈಮನ ಕುಜನೆಟ್ಸ ವ್ಯಾಖ್ಯಾನಿಸುವಂತೆ, ರಾಷ್ಟ್ರೀಯ ಆದಾಯವು, “ಒಂದು ವರ್ಷದ ಅವಧಿಯಲ್ಲಿ ರಾಷ್ಟ್ರದ ಉತ್ಪಾದನಾ ವ್ಯವಸ್ಥೆಯಿಂದ ಅನುಭೋಗಿಗಳ ಕೈಗಳಿಗೆ ಪ್ರವಹಿಸುವ ಅಂತಿಮ ಸರಕುಗಳ ಮತ್ತು ಸೇವೆಗಳ ನಿವ್ವಳ ಉತ್ಪನ್ನವಾಗಿದೆ”.

•► ಅಂತಿಮವಾಗಿ ಅನುಭೋಗಿಗಳು ಆದಾಯವನ್ನು ಪಡೆಯುವವರಾಗಿರುವುದರಿಂದ, ಒಂದು ವರ್ಷದಲ್ಲಿ ಆರ್ಥಿಕ ಚಟುವಟಿಕೆಗಳಿಂದ ಪಡೆದ ಒಟ್ಟು ಆದಾಯವನ್ನು ರಾಷ್ಟ್ರೀಯ ಆದಾಯ ಎನ್ನುತ್ತಾರೆ.

•► ಇದು ಎಲ್ಲ ವ್ಯಕ್ತಿಗಳಿಗೆ ನೀಡಿದ ಕೂಲಿ, ಬಡ್ಡಿ, ಗೇಣಿ ಮತ್ತು ಲಾಭ ಪಾವತಿಯಾಗಿದೆ. ಸ್ವಾಭಾವಿಕವಾಗಿ, ರಾಷ್ಟ್ರೀಯ ಆದಾಯವು ರಾಷ್ಟ್ರದ ಉತ್ಪಾದನಾ ವ್ಯವಸ್ಥೆಯ ಗಾತ್ರ, ಅನುಭೋಗದ ಗಾತ್ರ, ಉಳಿತಾಯ, ಮತ್ತು ವಿವಿಧ ವಲಯಗಳಲ್ಲಿ ಮಾಡಿದ ಹೂಡಿಕೆಯಲ್ಲದೇ ಇತರ ರಾಷ್ಟ್ರಗಳೊಂದಿಗಿನ ವ್ಯಾಪಾರ-ವ್ಯವಹಾರಗಳನ್ನು ಸೂಚಿಸುತ್ತದೆ. ಆದಾಗ್ಯೂ, ರಾಷ್ಟ್ರೀಯ ಆದಾಯದ ಮಾಪನವು ವ್ಯಕ್ತಿಯ ಆದಾಯದ ಮಾಪನದಂತಿರದೇ ಬಹು ಕಷ್ಟಕರವಾಗಿರುತ್ತದೆ ಮತ್ತು ಸಂಕೀರ್ಣ ವಿಧಾನವನ್ನು ಒಳಗೊಂಡಿರುತ್ತದೆ.

•► ರಾಷ್ಟ್ರೀಯ ಆದಾಯದ ಪ್ರಮಾಣ ಮತ್ತು ದರ ಬೆಳವಣಿಗೆಯ ದರವನ್ನು ಮಾಪನ ಮಾಡುವುದರಿಂದ ಈ ಕೆಳಗಿನವುಗಳನ್ನು ಅವಲೋಕಿಸಬಹುದು:
i. ಆರ್ಥಿಕ ಬೆಳವಣಿಗೆಯ ದರ
ii. ಜೀವನ ಮಟ್ಟದಲ್ಲಿನ ಬದಲಾವಣೆ
iii. ಆದಾಯ ಹಂಚಿಕೆಯಲ್ಲಿನ ಬದಲಾವಣೆ

Sunday, 18 February 2018

●. ಸಾಮಾನ್ಯ ಅಧ್ಯಯನ 3- ಪತ್ರಿಕೆ 4 : ಸಿ-14 (ವಿಕೀರಣಶೀಲ ಇಂಗಾಲ) (C-14 - Radio active carbon)

●. ಸಾಮಾನ್ಯ ಅಧ್ಯಯನ 3- ಪತ್ರಿಕೆ 4 : ಸಿ-14 (ವಿಕೀರಣಶೀಲ ಇಂಗಾಲ)
(C-14 - Radio active carbon)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ವಿಜ್ಞಾನ
(general science)

- ಇದು ಕಾಲ ನಿಷ್ಕರ್ಷೆಯ ಒಂದು ವೈಜ್ಞಾನಿಕ ವಿಧಾನವಾಗಿದೆ. ಈ ವಿಧಾನಕ್ಕೆ ಒಳಪಡಿಸುವ ಅವಶೇಷಗಳು ಜೈವಿಕ (ಮರ, ಗಿಡ, ಪ್ರಾಣಿ, ಪಕ್ಷಿ ಇತ್ಯಾದಿಗಳ) ಪಳೆಯುಳಿಕೆಗಳಾಗಿರಬೇಕು. ಪ್ರತಿಯೊಂದು ಜೀವಿಯಲ್ಲಿಯೂ ಇಂಗಾಲ-12 ಮತ್ತು ಇಂಗಾಲ-14 ಸಮ ಪ್ರಮಾಣದಲ್ಲಿ ಇರುತ್ತವೆ. ಜೀವಿಯು ಸತ್ತನಂತರವೂ ಇಂಗಾಲ-12 ಅದೇ ಪ್ರಮಾಣದಲ್ಲಿ ಇದ್ದರೆ, ಇಂಗಾಲ-14 ಕ್ರಮೇಣ ಕ್ಷೀಣಿಸುತ್ತಿರುತ್ತದೆ.

ಇದು 5700 ವರ್ಷಗಳಿಗೆ ತನ್ನ ಅರ್ಧ ಪ್ರಮಾಣದಷ್ಟು ಕ್ಷೀಣವಾಗುತ್ತದೆ. ಇಂಗಾಲ-12 ಮತ್ತು 14ರ ನಡುವಿನ ವ್ಯತ್ಯಾಸದ ಪ್ರಮಾಣವನ್ನು ಪ್ರಯೋಗಗಳ ಮೂಲಕ ಗುರುತಿಸಿದರೆ ಪಳೆಯುಳಿಕೆಯು ಎಷ್ಟು ವರ್ಷಗಳ ಹಳೆಯದೆಂದು ಲೆಕ್ಕಾಚಾರಮಾಡಬಹುದು.

ಈ ವಿಧಾನದ ಮೂಲಕ 10,000 ವರ್ಷಗಳ ಹಿಂದಿನವರೆಗಿನ ಪಳೆಯುಳಿಕೆಗಳ ಕಾಲವನ್ನು ಗುರುತಿಸಬಹುದು.

Saturday, 17 February 2018

●.ಸಾಮಾನ್ಯ ಅಧ್ಯಯನ 1-ಪತ್ರಿಕೆ 2 : ವುಡ್ಸ್ ವರದಿಯ (ವುಡ್ಸ್ ಡೆಸ್ಪ್ಯಾಚ್) ಉದ್ದೇಶಗಳು : (Recommendations of Wood’s Despatch)

●.ಸಾಮಾನ್ಯ ಅಧ್ಯಯನ 1-ಪತ್ರಿಕೆ 2.: ವುಡ್ಸ್ ವರದಿಯ (ವುಡ್ಸ್ ಡೆಸ್ಪ್ಯಾಚ್) ಉದ್ದೇಶಗಳು :
(Recommendations of  Wood’s Despatch)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಆಧುನಿಕ ಭಾರತದ ಇತಿಹಾಸ
(Modern Indian History)




ಡಾಲ್ ಹೌಸಿಯ ಕಾಲದಲ್ಲಿ ಭಾರತೀಯರ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ವಿಧಿವಿಧಾನಗಳನ್ನು ಕಂಡುಹಿಡಿಯುವಲ್ಲಿ ಸಂಸತ್ ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯು ಸಲ್ಲಿಸಿದ ವರದಿಯನ್ನು ಆಧರಿಸಿ ಕಂಪನಿಯ ನಿಯಂತ್ರಕ ಮಡಳಿಯ ಅಧ್ಯಕ್ಷನಾದ ಚಾರ್ಲ್ಸ್ ವುಡ್ ನು 1854ರಲ್ಲಿ ಭಾರತೀಯ ಶೈಕ್ಷಣಿಕ ಅಭಿವೃದ್ಧಿಗಾಗಿ ಈ ಕೆಳಗಿನ ಶಿಫಾರಸ್ಸುಗಳನ್ನಿ ಮಾಡಿದನು.           

ಈ ವರದಿಯ ಆಧಾರದ ಮೇಲೆ ಡಾಲ್ ಹೌಸಿಯು ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ಮಾಡಿದನು.


•► ವುಡ್ಸ್ ವರದಿಯು (ವುಡ್ಸ್ ಡೆಸ್ಪ್ಯಾಚ್) ಈ ಕೆಳಗಿನ ಉದ್ದೇಶಗಳನ್ನು ಹೊಂದಿತ್ತು:
  • • ಭಾರತೀಯರಿಗೆ ಪಾಶ್ಚಾತ್ಯ ಜ್ಞಾನವನ್ನು ನೀಡುವುದರೊಂದಿಗೆ ಪಾಶ್ಚಾತ್ಯ ಸಂಸ್ಕೃತಿಯ ಬಗ್ಗೆ ತಿಳುವಳಿಕೆ ಮೂಡಿಸುವುದು.
  • • ಭಾರತದ ಸ್ಥಳೀಯರನ್ನು ಶಿಕ್ಷಣ ನೀಡುವುದರೊಂದಿಗೆ ಸಾರ್ವಜನಿಕ ಸೇವಕರ ವರ್ಗ ರಚಿಸಬಹುದು. 
  • • ಯುವ ಪೀಳಿಗೆಯಲ್ಲಿ ಬೌದ್ಧಿಕ ಬೆಳವಣಿಗೆಯನ್ನು ಉತ್ತೇಜಿಸುವುದು ಮತ್ತು ನೈತಿಕತೆಯ ಪಾತ್ರವನ್ನು ಹೆಚ್ಚಿಸುವುದು 
  • • ಭಾರತೀಯರ ಪ್ರಾಯೋಗಿಕ ಮತ್ತು ಔದ್ಯೋಗಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ  ಹೆಚ್ಚೆಚ್ಚು ಸರಕು-ಸೇವೆಗಳನ್ನು  ಉತ್ಪಾದಿಸುವುದು ಮತ್ತು ಆ ಸರಕುಗಳ ಬಳಕೆಗಾಗಿ ಇಲ್ಲಿ ಉತ್ತಮ ಮಾರುಕಟ್ಟೆ ರಚಿಸುವುದು.

ವುಡ್ಸ್ ವರದಿಯು (ವುಡ್ಸ್ ಡೆಸ್ಪ್ಯಾಚ್) ಭಾರತೀಯ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅನುದಾನ-ನೆರವು ವ್ಯವಸ್ಥೆಯ ಮಂಜೂರಾತಿಯ ಕುರಿತು ಶಿಫಾರಸು ಮಾಡಿತು ಮತ್ತು ಶಾಲೆಗಳು ತಮ್ಮ ವಿದ್ಯಾರ್ಥಿಗಳಿಂದ ಶುಲ್ಕ ವಿಧಿಸಬೇಕು ಎಂದು ವಾದಿಸಲಾಯಿತು.

ಭಾರತದಲ್ಲಿ ಅನುಸರಿಸಬೇಕಾದ ಶೈಕ್ಷಣಿಕ ನೀತಿಯ ಬಗ್ಗೆ ವಿವರಿಸುತ್ತಾ, ಯುರೋಪಿಯನ್ ಕಲಿಕೆಯ ಒಂದು ಪ್ರಾಯೋಗಿಕ ಪ್ರಯೋಜನಗಳನ್ನು ಮತ್ತೊಮ್ಮೆ ಒತ್ತಿಹೇಳಿತು.

1854 ರ ಡೆಸ್ಪ್ಯಾಚ್ನ ನಂತರ, ಬ್ರಿಟಿಷರು ಹಲವಾರು ಕ್ರಮಗಳನ್ನು ಪರಿಚಯಿಸಿದರು. ಶಿಕ್ಷಣದ ಎಲ್ಲ ವಿಷಯಗಳ ಮೇಲೆ ನಿಯಂತ್ರಣವನ್ನು ವಿಸ್ತರಿಸಲು ಸರಕಾರದ ಶಿಕ್ಷಣ ಇಲಾಖೆಗಳನ್ನು ಸ್ಥಾಪಿಸಲಾಯಿತು. ವಿಶ್ವವಿದ್ಯಾಲಯ ಶಿಕ್ಷಣ ವ್ಯವಸ್ಥೆಯನ್ನು ಸ್ಥಾಪಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಯಿತು.

●. ಸಾಮಾನ್ಯ ಅಧ್ಯಯನ - ಪತ್ರಿಕೆ 4 : ಜೈವಿಕ ಸಂವರ್ಧನೆ (biomagnification)

●. ಸಾಮಾನ್ಯ ಅಧ್ಯಯನ - ಪತ್ರಿಕೆ 4  : ಜೈವಿಕ ಸಂವರ್ಧನೆ
 (biomagnification)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ವಿಜ್ಞಾನ
(General Science)


ಆಹಾರ ಸರಪಳಿಗಳಲ್ಲಿ ಕೇವಲ ಪೋಷಕಾಂಶಗಳು ಮಾತ್ರ ವಿನಿಮಯವಾಗುವುದಿಲ್ಲ. ಕೆಲವೊಮ್ಮೆ ವಿಷಕಾರಿ ವಸ್ತುಗಳೂ ಸಹ ಒಂದು ಪೋಷಣಾ ಸ್ತರದಿಂದ ಇನ್ನೊಂದು ಪೋಷಣಾ ಸ್ತರಕ್ಕೆ ವರ್ಗಾವಣೆಗೊಳ್ಳುತ್ತವೆ. ಇಂಥ ಬಹುತೇಕ ಸಂದರ್ಭಗಳಲ್ಲಿ ಹಾನಿಕಾರಕ ವಸ್ತುಗಳ ಸಾರತೆ ಮೇಲಿನ ಸ್ತರಗಳಿಗೆ ಸಾಗುತ್ತಿದ್ದಂತೆ ಹೆಚ್ಚುತ್ತಾ ಹೋಗುತ್ತದೆ.

ಡಿಡಿಟಿ , ಪಾದರಸ, ಕ್ಯಾಡ್ಮಿಯಂ ಮೊದಲಾದ ಹಾನಿಕಾರಕ ಅಥವಾ ಮಾಲಿನ್ಯಕಾರಕ ವಸ್ತುಗಳ ಸಾರತೆಯು ಆಹಾರ ಸರಪಳಿಯ ಒಂದೊಂದು ಕೊಂಡಿಯಲ್ಲಿ ಮೇಲೆ ಸಾಗುತ್ತಿದ್ದಂತೆ, ಕ್ರಮೇಣ ಹೆಚ್ಚುತ್ತಾ ಹೋಗುವ ಈ ಪ್ರಕ್ರಿಯೆಗೆ ಜೈವಿಕ ಸಂವರ್ಧನೆ (biomagnification) ಎಂದು ಹೆಸರು.

ಜೈವಿಕ ಸಂವರ್ಧನೆಗೆ ಅತ್ಯಂತ ಪರಿಚಿತ ಉದಾಹರಣೆ ಎಂದರೆ ಬಹುತೇಕ ಆಹಾರ ಸರಪಳಿಗಳಲ್ಲಿ ಇಂದು ನಾವು ಕಾಣುತ್ತಿರುವ ಡಿಡಿಟಿ ಸಾರತೆಯ ಏರಿಕೆ. ವಿಶೇಷವಾಗಿ ಸೊಳ್ಳೆಗಳನ್ನು ನಿರ್ನಾಮಮಾಡಲು ಕೀಟನಾಶಕ ಡಿಡಿಟಿ  ಯನ್ನು ವಿವೇಚನಾರಹಿತವಾಗಿ ಬಳಸಿರುವ ಪರಿಣಾಮವಾಗಿ ಇಂದು ಸಣ್ಣ ಮೀನುಗಳ ಹಾಗೂ ಹಕ್ಕಿಗಳ ದೇಹದಲ್ಲಿನ ಅಂಗಾಂಶಗಳಲ್ಲಿ ಡಿಡಿಟಿ  ಸಂಗ್ರಹವಾಗಿರುವುದು ಗೋಚರಿಸಿದೆ. ಡಿಡಿಟಿ  ತಾಯಂದಿರ ಎದೆಹಾಲಿನಲ್ಲೂ ಪತ್ತೆಯಾಗಿದೆ.

ಜೈವಿಕ ಸಂವರ್ಧನೆಯು ಆಹಾರ ಸರಪಳಿಗಳಲ್ಲಿರುವ ಸಮತೋಲನವನ್ನು ಹಾಳುಗೆಡವುತ್ತದೆ. ವಿಶೇಷವಾಗಿ ಅದು ಆಹಾರ ಸರಪಳಿಯ ಮೇಲಿನ ಸ್ತರಗಳಲ್ಲಿರುವ ಜೀವಿಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.

●. ಸಮಭಾಜಕವೃತ್ತದ ಕಡಿಮೆ ಒತ್ತಡ ಪ್ರದೇಶ: (Equatorial Low Pressure Area or Inter Tropical Convergence Zone –ITCZ)

●. ಸಮಭಾಜಕವೃತ್ತದ ಕಡಿಮೆ ಒತ್ತಡ ಪ್ರದೇಶ:
(Equatorial Low Pressure Area or
Inter Tropical Convergence Zone –ITCZ)
━━━━━━━━━━━━━━━━━━━━━━━━━━━━━━━━━━━━━━━━━━━━━



★ ಪ್ರಾಕೃತಿಕ ಭೂಗೋಳಶಾಸ್ತ್ರ
(Physical Geography)



ಇದು ಹೆಚ್ಚು ಉಷ್ಣಾಂಶದ ವಲಯವಾಗಿದ್ದು ಕಡಿಮೆ ಒತ್ತಡವನ್ನು ಹೊಂದಿದೆ. ಇದು ಸಮಭಾಜಕವೃತ್ತದಿಂದ 50 ಉತ್ತರ ಮತ್ತು 50 ದಕ್ಷಿಣ ಅಕ್ಷಾಂಶದವರೆಗೆ ಕಂಡುಬರುವುದು. ಈ ಭಾಗವು ವರ್ಷವೆಲ್ಲಾ ಸೂರ್ಯನ ಲಂಬವಾದ ಕಿರಣಗಳನ್ನು ಪಡೆಯುವುದು. ಇದರಿಂದ ವಾಯು ಹೆಚ್ಚು ಉಷ್ಣಾಂಶದಿಂದ ಕೂಡಿರುತ್ತದೆ ಹಾಗೂ ಇಲ್ಲಿ ವಾಯು ಚಲನೆ ಕಡಿಮೆ.

 ಈ ವಲಯವು ಪ್ರಶಾಂತವಾಗಿದ್ದು (calm) ಲಘುಮಾರುತಗಳಿರುವುದರಿಂದ ಇದನ್ನು ‘ಶಾಂತವಲಯ’ (Dol- drum) ಎಂದೂ ಕರೆಯುವರು. ಈ ಪ್ರದೇಶವನ್ನು ಅಂತರ ಉಷ್ಣ ಸಂಧಿವಲಯ (Inter Tropical Convergence Zone –ITCZ) ಎಂಬ ಹೆಸರಿನಲ್ಲೂ ಕರೆಯುವರು. ವಾಣಿಜ್ಯ ಮಾರುತಗಳು ಈ ವಲಯದಲ್ಲಿ ಸಂಧಿಸುತ್ತವೆ.

●.ಹವಾಗುಣ ಮತ್ತು ವಾಯುಗುಣ : (Weather and Climate)

●.ಹವಾಗುಣ ಮತ್ತು ವಾಯುಗುಣ :
(Weather and Climate)
 ━━━━━━━━━━━━━━━━━━━━━━━

★ ಸಾಮಾನ್ಯ ಭೂಗೋಳಶಾಸ್ತ್ರ
(Physical geography)



•► ಒಂದು ಸ್ಥಳದ ಅಲ್ಪಾವಧಿಯ ವಾಯುಗೋಳದ ಪರಿಸ್ಥಿತಿಯನ್ನು ಹವಾಗುಣ ಎನ್ನುವರು. ಉದಾ: ಮೋಡಯುಕ್ತ ಪ್ರಖರ ಬಿಸಿಲು, ಹಿತಕರ ಹವಾಗುಣ. ಹವಾಗುಣ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡುವುದಕ್ಕೆ ‘ಹವಾಗುಣ ಶಾಸ್ತ್ರ’ (Meteorology) ಎನ್ನುವರು.

•► ಒಂದು ಪ್ರದೇಶದ ದೀರ್ಘಾವಧಿಯ ಹವಾಗುಣದ ಸರಾಸರಿಯನ್ನು ವಾಯುಗುಣವೆನ್ನುವರು.

ಉದಾ: ಸಮಭಾಜಕ ವೃತ್ತದ ವಾಯುಗುಣ, ತಂಡ್ರಾ ವಾಯುಗುಣ, ಮರುಭೂಮಿ ವಾಯುಗುಣ, ಮೆಡಿಟರೇನಿಯನ್, ಮಾನ್ಸೂನ್ ವಾಯುಗುಣ ಮೊದಲಾದವು.

•► ವಾಯುಗುಣದ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಶಾಸ್ತ್ರವನ್ನು ‘ವಾಯುಗುಣಶಾಸ್ತ್ರ’ (Climatology) ಎನ್ನುವರು.

•► ಒಂದು ಪ್ರದೇಶದ ವಾಯುಗುಣದ ಮೇಲೆ ಪ್ರಭಾವ ಬೀರುವ ಅಂಶಗಳೆಂದರೆ ಅಕ್ಷ್ಮಾಂಶ, ಸಮುದ್ರ ಮಟ್ಟದಿಂದ ಇರುವ ಎತ್ತರ, ಮಾರುತಗಳು, ಸಮುದ್ರದಿಂದ ಇರುವ ದೂರ, ಭೂಮಿ ಮತ್ತು ಜಲರಾಶಿಗಳ ಹಂಚಿಕೆ, ಸಾಗರ ಪ್ರವಾಹಗಳು ಇತ್ಯಾದಿ.

Monday, 12 February 2018

☀️ ಐಎಎಸ್ / ಕೆಎಎಸ್ ಪ್ರಿಲಿಮ್ಸ್ ಮಾದರಿ ಪ್ರಶ್ನೆ ಪತ್ರಿಕೆ :1ರ 33 ಪ್ರಶ್ನೆಗ ಉತ್ತರಗಳು (Key answers of IAS / KAS Prelims Model Question Paper -I)

☀️ ಐಎಎಸ್ / ಕೆಎಎಸ್ ಪ್ರಿಲಿಮ್ಸ್ ಮಾದರಿ ಪ್ರಶ್ನೆ ಪತ್ರಿಕೆ :1ರ 33 ಪ್ರಶ್ನೆಗ ಉತ್ತರಗಳು
(Key answers of IAS / KAS Prelims Model Question Paper -I)
━━━━━━━━━━━━━━━━━━━━━━━━━━━━━━━━━━━━━━━━━━━

★ ಐಎಎಸ್ / ಕೆಎಎಸ್ ಪ್ರಿಲಿಮ್ಸ್ ಮಾದರಿ ಪ್ರಶ್ನೆ ಪತ್ರಿಕೆ
(IAS / KAS Prelims Model Question Paper)


...ಮುಂದುವರೆದ ಭಾಗ.
 ಐಎಎಸ್ / ಕೆಎಎಸ್ ಪ್ರಿಲಿಮ್ಸ್ ಎಕ್ಸಾಂ ಗೆ ಸಂಬಂಧಿಸಿದಂತೆ ನಾನು ಮಾದರಿ ಪ್ರಶ್ನೆ ಪತ್ರಿಕೆಯನ್ನು ತಯಾರಿಸುತ್ತಿದ್ದು ಈಗ 1 ರಿಂದ 33 ಪ್ರಶ್ನೆಗಳನ್ನು ಅವುಗಳ ಸರಿಯುತ್ತರಗಳೋಂದಿಗೆ ಇಲ್ಲಿ ಷೇರ್ ಮಾಡಿರುವೆ. ಈಗ ಹಾಕಿರೋ ಮಾದರಿಯೊಂದಿಗೆ ಉಳಿದವುಗಳನ್ನು ತಯಾರಿಸುತ್ತಿರುವೆ. ಸಧ್ಯದಲ್ಲಿ ಪೂರ್ಣಗೊಳಿಸುವೆ.

ಇಲ್ಲಿ ಹಂಚಿಕೊಂಡಿರುವ ಮಾದರಿ ಪ್ರಶ್ನೆಗಳು ಹಲವಾರು ನಿಖರ, ನಂಬಲರ್ಹವಾದ, ನೈಜ್ಯ ಮಾಹಿತಿಗಳನ್ನೊಳಗೊಂಡ ಹಲವು ಮೂಲಗಳಿಂದ ಕಲೆಹಾಕಿರುವಂತಹವು. ಏನಾದರೂ ಬರಹದಲ್ಲಿ ತಪ್ಪುಗಳಿದ್ದಲ್ಲಿ ಕ್ಷಮಿಸಿ ಹಾಗೂ ನನ್ನ ಗಮನಕ್ಕೆ ತನ್ನಿ.
Gmail : yaseen7ash@gmail.com


Sunday, 11 February 2018

☀️ PART III— ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ ಬಿಟ್ಸ್ (IAS/KAS Exam Preparation Notes Bits)

☀️ PART III— ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ ಬಿಟ್ಸ್
(IAS/KAS Exam Preparation Notes Bits)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ
(IAS / KAS exam preparation notes)

★ ಸಾಮಾನ್ಯ ಅಧ್ಯಯನ
(general studies)


...ಮುಂದುವರೆದ ಭಾಗ.

ಗಮನಕ್ಕೆ — ಇಲ್ಲಿ ಹಂಚಿಕೊಂಡಿರುವ ಮಾಹಿತಿಯು ಹಲವಾರು ನಿಖರ, ನಂಬಲರ್ಹವಾದ, ನೈಜ್ಯ ಮಾಹಿತಿಗಳನ್ನೊಳಗೊಂಡ ಹಲವು ಮೂಲಗಳಿಂದ ಕಲೆಹಾಕಿರುವಂತಹವು. ಏನಾದರೂ ಬರಹದಲ್ಲಿ ತಪ್ಪುಗಳಿದ್ದಲ್ಲಿ ಕ್ಷಮಿಸಿ ಹಾಗೂ ನನ್ನ ಗಮನಕ್ಕೆ ತನ್ನಿ. 
Gmail : yaseen7ash@gmail.com


30. ನಮ್ಮಲ್ಲಿರುವ 250 ರಾಜ್ಯಸಭಾ ಸ್ಥಾನಗಳ ಪೈಕಿ 12 ಜನರನ್ನು ಸಚಿವರ ಸಮಿತಿಯ ಸಲಹೆಯ ಮೇರೆಗೆ ರಾಷ್ಟ್ರಪತಿ ನೇರವಾಗಿ ಆಯ್ಕೆ ಮಾಡುತ್ತಾರೆ. ವಿವಿಧ ರಂಗಗಳಲ್ಲಿನ ಸಾಧಕರನ್ನು ಇದಕ್ಕೆ ಪರಿಗಣಿಸಲಾಗುತ್ತದೆ.
— ಇನ್ನು ಉಳಿದ 238 ಸ್ಥಾನಗಳಿಗೆ ರಾಜ್ಯಗಳ ವಿಧಾನಸಭೆಗಳಿಂದ ಅಭ್ಯರ್ಥಿಗಳನ್ನು ಚುನಾಯಿಸಲಾಗುತ್ತದೆ. ಪ್ರತಿ ರಾಜ್ಯದಿಂದ ಎಷ್ಟು ಅಭ್ಯರ್ಥಿಗಳನ್ನು ರಾಜ್ಯಸಭೆಗೆ ನಿಗದಿ ಮಾಡಬೇಕು ಎಂಬುದನ್ನು ಆಯಾ ರಾಜ್ಯದ ಜನಸಂಖ್ಯೆ ಆಧರಿಸಿ ನಿರ್ಧರಿಸಲಾಗಿದೆ.
— ಸಣ್ಣ ರಾಜ್ಯಗಳಿಂದ ಕನಿಷ್ಠ ಒಬ್ಬ ಪ್ರತಿನಿಧಿಯಾದರೂ ಇರಬೇಕು ಎಂಬ ನಿಯಮ ಅಡಕವಾಗಿದೆ.


31. ಅಣುಶಕ್ತಿ ಚಾಲಿತ, ಅಣ್ವಸ್ತ್ರ ಸಜ್ಜಿತ ಕ್ಷಿಪಣಿಗಳನ್ನು ಉಡಾಯಿಸಬಲ್ಲ ಸಾಮರ್ಥ್ಯದ ಸಂಪೂರ್ಣ ದೇಶೀಯ ನಿರ್ಮಾಣದ ಮೊದಲ ಜಲಾಂತರ್ಗಾಮಿ 'ಐಎನ್‌ಎಸ್‌ ಅರಿಹಂತ್‌' ವಿನ್ಯಾಸದ ಮೂಲ ರಷ್ಯಾದ್ದು.


32. ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ ನೀಡಲಾಗುವ ಅತ್ಯನ್ನುತ ಪ್ರಶಸ್ತಿ ಜ್ಞಾನಪೀಠ ಪ್ರಶಸ್ತಿ. ಇದು ಭಾರತೀಯ ಸಂವಿಧಾನದ 8ನೇ ಷೆಡ್ಯೂಲ್‌ನಲ್ಲಿ ಸೂಚಿತವಾಗಿರುವ ಭಾರತೀಯ ಭಾಷೆಗಳ ಲೇಖಕರಿಗೆ ಮಾತ್ರ ಈ ಪ್ರಶಸ್ತಿ ಮೀಸಲು.
— ಈವರೆಗೆ ಹಿಂದಿ ಭಾಷೆಯ 11 ಸಾಹಿತಿಗಳು ಜ್ಞಾನಪೀಠ ಪುರಸ್ಕೃತರಾಗಿದ್ದರೆ, ಕನ್ನಡ 8 ಸಾಹಿತಿಗಳು ಈ ಗೌರವಕ್ಕೆ ಪಾತ್ರರಾಗಿದ್ದು ಎರಡನೇ ಸ್ಥಾನದಲ್ಲಿದ್ದಾರೆ.
— ಈ ಪ್ರಶಸ್ತಿಯು ನಗದು ಜತೆಗೆ ಕಂಚಿನ ಸರಸ್ವತಿಯ ಕಂಚಿನ ಪ್ರತಿಕೃತಿ ಮತ್ತು ಫಲಕವನ್ನು ಒಳಗೊಂಡಿದೆ.


33. ಐಯುಸಿಎನ್ (IUCN) ಎಂಬ ವಿಶ್ವ ಸಂಸ್ಥೆಯು ಭಾಗವಾಗಿರುವ ಇಲಾಖೆಯಿಂದ ಮಾಹಿತಿ ಪಡೆದು, ವನ್ಯ ಜೀವಿಗಳ ಸಂತತಿ ಯಾವ ಪ್ರಮಾಣದಲ್ಲಿದೆ ಎಂಬುದನ್ನು ರೆಡ್ ಡೇಟಾ ಬುಕ್ ಎಂಬ ಪುಸ್ತಕದಲ್ಲಿ ಕೊಡುತ್ತಾರೆ.
— ನಮ್ಮ ದೇಶದಲ್ಲಿ ಇಂಡಿಯನ್ ಚೀತಾ ಪೂರ್ತಿಯಾಗಿ ಗತಿಸಿಹೋಗಿದೆ.
— ಅರುಣಾಚಲ ಪ್ರದೇಶದಲ್ಲಿನ ನಂದಪ ಹಾರುವ ಅಳಿಲುಗಳು, ಹಿಮಾಲಯದ ಭಾಗಗಳಲ್ಲಿ ಮಾತ್ರ ಕಂಡುಬರುವ ಪ್ರಪಂಚದ ಅತಿ ಚಿಕ್ಕ ಘೇಂಡಾಮೃಗಗಳಾದ ಸುಮಾತ್ರಾನ್ ಘೇಂಡಾಮೃಗಗಳು, ರಣಹದ್ದುಗಳು ಕೂಡ ಈಗ ಗತಿಸಿ ಹೋಗುವ ಸಾಧ್ಯತೆ (ಕ್ರಿಟಿಕಲಿ ಎಂಡೇಜರ್ಡ್) ಹೊಂದಿರುವ ಜೀವಿಗಳಾಗಿವೆ.


34. ಗ್ರೀನ್ ವಿಚ್ ಮೀನ್ ಟೈಮ್(GMT-Greenwich Mean Time) ಎನ್ನುವುದು ವಿವಿಧ ದೇಶಗಳಲ್ಲಿ ಸಮಯ ನಿರ್ಧಾರಣೆಗಾಗಿ ಅಂಗೀಕೃತ ಪ್ರಮಾಣಿತ ಸಮಯವಾಗಿದೆ. ಗ್ರೀನ್ ವಿಚ್ ಪ್ರಧಾನ ರೇಖಾಂಶದ ಪೂರ್ವಕ್ಕೆ ಇರುವ ದೇಶಗಳ ಸಮಯವು GMTಕ್ಕಿಂತ ಮುಂದಿರುತ್ತದೆ, ಹಾಗೆಯೇ ಗ್ರೀನ್ ವಿಚ್ ಪ್ರಧಾನ ರೇಖಾಂಶದ ಪಶ್ಚಿಮಕ್ಕೆ ಇರುವ ದೇಶಗಳು GMTಯ ಹಿಂದೆ ತಮ್ಮ ಪ್ರಮಾಣಿತ ಸಮಯವನ್ನು ಹೊಂದಿವೆ.
— 180° ರೇಖಾಂಶಕ್ಕೆ 'ಅಂತರಾಷ್ಟ್ರೀಯ ದಿನ ರೇಖೆ' ಎಂದು ಕರೆಯುತ್ತಾರೆ.
— ಬೇರಿಂಗ್ ಜಲಸಂಧಿಯು ಅಂತರಾಷ್ಟ್ರೀಯ ದಿನ ರೇಖೆಗೆ ಸಮೀಪವಿರುತ್ತದೆ.


35.  'ಜಿಪ್ಸಿಗಳು' (Gypsies) ಮಧ್ಯ ಏಷಿಯಾದಲ್ಲಿ ಕಂಡುಬರುವ ಒಂದು ಜನರ ಗುಂಪು. ಆದರೆ ಜಿಪ್ಸಿಗಳ ಮೂಲ ಮನೆ ಭಾರತದ (ಪಶ್ಚಿಮ ರಾಜಸ್ಥಾನ ಮತ್ತು ಪಂಜಾಬ್) ಪ್ರದೇಶದಲ್ಲಿದೆ.
– 'ಜಿಪ್ಸಿಗಳು' ಒಂದು ಜನಾಂಗೀಯ ಗುಂಪು (ethnic group) ಆಗಿದ್ದು, ಕೆಲವು ಅಜ್ಞಾತ ಕಾರಣಾಂತರಗಳಿಂದಾಗಿ ಮಧ್ಯಯುಗದ ಅಂತ್ಯದಲ್ಲಿ ಇವರು ಅಲೆದಾಡುವ ಜೀವನ ಶೈಲಿಗೆ ಒಗ್ಗಿಕೊಳ್ಳಬೇಕಾಯಿತು.


36. ಅಮೃತಸರದಿಂದ ದೆಹಲಿಯ ಮೂಲಕ ಕಲ್ಕತ್ತಾಕ್ಕೆ ಸಾಗುವ  ರಾಷ್ಟ್ರೀಯ ಹೆದ್ದಾರಿಯನ್ನು 'ರಾಷ್ಟ್ರೀಯ ಹೆದ್ದಾರಿ - 2' ಎಂದು ಕರೆಯಲಾಗುತ್ತದೆ. ಇದನ್ನು 'ಗ್ರ್ಯಾಂಡ್ ಟ್ರಂಕ್ ರಸ್ತೆ' (Grand Trunk Road) ಎಂದು ಕರೆಯಲಾಗುತ್ತಿತ್ತು ಮತ್ತು ಇದನ್ನು ಶೇರ್ ಷಾ ಸೂರಿಯು ನಿರ್ಮಿಸಿದನು.


37. ಉತ್ತರ-ಪಶ್ಚಿಮ ಬಯಲು ಪ್ರದೇಶ(north-western plains)ಗಳಲ್ಲಿ ತೀವ್ರವಾದ ಕಡಿಮೆ ಒತ್ತಡದ ಪಟ್ಟಿಗಳ ಕಾರಣದಿಂದಾಗಿ, ನೈಋತ್ಯ ಮಾನ್ಸೂನ್ ಮಾರುತವು ಭಾರತ ಉಪಖಂಡಕ್ಕೆ ಪ್ರವೇಶಿಸುತ್ತದೆ.
— ಇದು ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದಿಂದ ಬೀಸುವುದು.


38. 52ನೇ ವಿಧಿಯು ಭಾರತಕ್ಕೆ ರಾಷ್ಟ್ರಪತಿ ಸ್ಥಾನವನ್ನು ಹೇಳಿದೆ. ಭಾರತದ ರಾಷ್ಟ್ರಪತಿಗಳು ಪರೋಕ್ಷವಾಗಿ ಭಾರತ ಸಂಸತ್ತು (ಎರಡೂ ಮನೆಗಳು) ಮತ್ತು ಭಾರತದ ಎಲ್ಲ ರಾಜ್ಯಗಳ ಮತ್ತು ಪ್ರಾಂತ್ಯಗಳ ಶಾಸನಸಭೆಯ ಸಭೆಗಳನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನಿಂದ ಚುನಾಯಿತರಾಗುತ್ತಾರೆ,


39. ವನ್ಯಜೀವಿಗಳ ಸಂರಕ್ಷಣೆಗೆಂದು ಕೇಂದ್ರ ಸರಕಾರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನ್ನು 1972ರಲ್ಲಿ ಜಾರಿ ಮಾಡಿತು. ಅದರಲ್ಲಿ 6 ಶೆಡ್ಯೂಲ್ ಗಳಿವೆ. ಯಾವ ಪ್ರಾಣಿಗಳು ಅಳಿವಿನ ಅಂಚಿನಲ್ಲಿವೆಯೋ ಅವೆಲ್ಲವನ್ನು ಶೆಡ್ಯೂಲ್ 1ರಲ್ಲಿ ತರಲಾಯಿತು. ಹುಲಿ, ಸಿಂಹ, ಘೇಂಡಾಮೃಗ, ಹುಲ್ಲೇಕರ ಇವೆಲ್ಲ ಶೆಡ್ಯೂಲ್ 1ರ ಅಡಿ ಬರುತ್ತದೆ.


40.  ಜಸ್ಟಿಸ್‌ ಎಂ.ಎನ್‌.ವೆಂಕಟಾಚಲಯ್ಯ ಕಮಿಷನ್‌: ಈ ಹಿಂದಿನ ಎನ್‌ಡಿಎ ಸರಕಾರ ಈ ಆಯೋಗವನ್ನು ನೇಮಕ ಮಾಡಿತ್ತು. ಕೊಲಿಜಿಯಮ್‌ ವ್ಯವಸ್ಥೆಗೆ ಬದಲಿಯಾಗಿ 'ನ್ಯಾಷನಲ್‌ ಜುಡಿಷಿಯಲ್‌ ಅಪಾಯಿಂಟ್‌ಮೆಂಟ್ಸ್‌ ಕಮಿಷನ್‌(ಎನ್‌ಜೆಎಸಿ)' ರಚನೆ ಬಗ್ಗೆ ಆಯೋಗ ಒಲವು ತೋರಿತ್ತು.
— ಈ ಆಯೋಗಕ್ಕೆ ಸಿಜೆಐ, ಇಬ್ಬರು ಅತ್ಯಂತ ಹಿರಿಯ ನ್ಯಾಯಮೂರ್ತಿಗಳು, ಕಾನೂನು ಸಚಿವರು ಹಾಗೂ ಸಿಜೆಐ ಜತೆ ಸಮಾಲೋಚಿಸಿ ರಾಷ್ಟ್ರಪತಿಯಿಂದ ನೇಮಕಗೊಳ್ಳುವ ಸಾರ್ವಜನಿಕ ವಲಯದ ಗಣ್ಯ ವ್ಯಕ್ತಿ ಸದಸ್ಯರಾಗಬೇಕು ಎಂದು ಅದು ಶಿಫಾರಸು ಮಾಡಿತ್ತು.

... ಮುಂದುವರೆಯುವುದು.

Saturday, 10 February 2018

☀️ ಸಿವಿಲ್ ಸರ್ವೀಸ್ (ಪ್ರಿಲಿಮ್ಸ್) ನೇಮಕಾತಿಗೆ ಅಧಿಸೂಚನೆ - 2018 (Civil Service (Prelims) Examination 2018)

☀️ ಸಿವಿಲ್ ಸರ್ವೀಸ್ (ಪ್ರಿಲಿಮ್ಸ್) ನೇಮಕಾತಿಗೆ ಅಧಿಸೂಚನೆ - 2018
(Civil Service (Prelims) Examination 2018)
━━━━━━━━━━━━━━━━━━━━━━━━━━━━━━━━━━━━━━━━━━━
★ 2018 ನೇ ಸಾಲಿನ  ಸಿವಿಲ್ ಸರ್ವೀಸ್ (ಪ್ರಿಲಿಮ್ಸ್) ನೇಮಕಾತಿಗೆ ಅಧಿಸೂಚನೆ
(Civil service notification 2018)



ಕೇಂದ್ರ ಲೋಕಸೇವಾ ಆಯೋಗವು 2018 ನೇ ಸಾಲಿನ  ಸಿವಿಲ್ ಸರ್ವೀಸ್ (ಪ್ರಿಲಿಮ್ಸ್) ನೇಮಕಾತಿಗೆ ಅಧಿಸೂಚನೆ ಆದೇಶ ಹೊರಡಿಸಿದೆ.  ಪೂರ್ವಭಾವಿ ಪರೀಕ್ಷೆ ಗೆ ಸೂಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಯ ವಿವರಣೆಗಳು

ಹುದ್ದೆಗಳ ಪದನಾಮ : ನಾಗರಿಕ ಸೇವಾ  ಸಿವಿಲ್ ಸರ್ವೀಸ್ (ಪ್ರಿಲಿಮ್ಸ್)
ಒಟ್ಟು ಹುದ್ದೆಗಳು : 782
ವಿದ್ಯಾರ್ಹತೆ :
ಯಾವುದೇ ಪದವಿ ಹೊಂದಿರಬೇಕು
ಪದವಿ ಅಂತಿಮ ವರ್ಷದಲ್ಲಿ ಒದುತ್ತಿರುವವರು ಕೂಡ ಅರ್ಜಿ ಸಲ್ಲಿಸಲು ಅರ್ಹರು
ವಯೋಮಿತಿ

ಕನಿಷ್ಠ ವಯಸ್ಸು : 21
ಗರಿಷ್ಠ ವಯಸ್ಸು : 32
ಅರ್ಜಿ ಶುಲ್ಕ :

ಇತರೆ ಅಭ್ಯರ್ಥಿಗಳಿಗೆ : 100/-
ST,SC,PWD, Womens: ಶುಲ್ಕ ವಿನಾಯ್ತಿ

ಆಯ್ಕೆ ವಿಧಾನ :

ಮೂರು ಹಂತಗಳ ಪರೀಕ್ಷೆ ನಡೆಸಲಾಗುತ್ತೆ  ಇದರಲ್ಲಿ ಅಭ್ಯರ್ಥಿಗಳು ಮೊದಲನೆಯದಾಗಿ ಪೂರ್ವಭಾವಿ ಪರೀಕ್ಷೆಗೆ ಅರ್ಹತೆ ಪಡೆದ ನಂತರ ಮುಂದಿನ ಪರೀಕ್ಷಗಳು ಮುಖ್ಯ ಪರೀಕ್ಷೆ (Main Exam) ಮತ್ತು ಸಂದರ್ಶನ ಇರುತ್ತೆ .
ಸಿವಿಲ್ ಸರ್ವೀಸಸ್ ಪ್ರಾಥಮಿಕ ಪರೀಕ್ಷೆಯ ದಿನಾಂಕ  : 03-06-2018
ಮುಖ್ಯ ಪರೀಕ್ಷೆಯ ದಿನಾಂಕ:  ಸೆಪ್ಟೆಂಬರ್ 2018
ಪ್ರಮುಖ ದಿನಾಂಕಗಳು :

ಅರ್ಜಿ ಸಲ್ಲಿಸಲು  ಪ್ರಾರಂಭ ದಿನಾಂಕ  : 07-02-2018

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ   : 06-03-2018 ರಿಂದ 06:00 ಕ್ಕೆ

ಶುಲ್ಕ ಪಾವತಿಸಲು ಕೊನೆಯ ದಿನಾಂಕ : 05-03-2018

ಆನ್ ಲೈನ್ ಮೂಲಕ ಶುಲ್ಕ ಪಾವತಿ ಕೊನೆಯ ದಿನಾಂಕ  : 06-03-2018

ಹೆಚ್ಚಿನ ಮಾಹಿತಿಗಾಗಿ

https://upsconline.nic.in/

(Courtesy :http://www.digitalcareer.co.in)