"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday, 21 April 2017

☀ ಬಿಎಸ್ ಅಥವಾ ಭಾರತ್ ಸ್ಟೇಜ್ ಎಂದರೇನು ? (What is BS -Bharath Stage)

☀ ಬಿಎಸ್ ಅಥವಾ ಭಾರತ್ ಸ್ಟೇಜ್ ಎಂದರೇನು ?
(What is BS -Bharath Stage)
•─━━━━━═══════════━━━━━─••─━━━━━═══════════━━━━━─•

★ ಸಾಮಾನ್ಯ ಅಧ್ಯಯನ
(General Studies)

★ ಪ್ರಚಲಿತ ಘಟನೆಗಳು
(Current Affairs)


☀ ಬಿಎಸ್ ಅಥವಾ ಭಾರತ್ ಸ್ಟೇಜ್ :
•─━━━━━═══════════━━━━━─•

●.ಭಾರತ್  ಸ್ಟೇಜ್ ಅಂದರೆ ವಾಹನಗಳಲ್ಲಿನ ಮಾಲಿನ್ಯ ಮಟ್ಟವನ್ನು ಗುರುತಿಸುವ ವ್ಯವಸ್ಥೆ ಅಥವಾ ಮೋಟಾರು ವಾಹನಗಳ ವಾಯುಮಾಲಿನ್ಯ ಪರಿಮಿತಿ ಮಾನದಂಡ. ವಾಹನಗಳ ಎಂಜಿನ್‌ ಎಷ್ಟು ಪ್ರಮಾಣದಲ್ಲಿ ಮಾಲಿನ್ಯ ಹೊರ ಸೂಸಬೇಕು ಎಂಬುದನ್ನು ಈ ಮೂಲಕ ನಿಗದಿಪಡಿಸಲಾಗುತ್ತದೆ.

●.ಯೂರೋಪ್‌ ರಾಷ್ಟ್ರಗಳಲ್ಲಿ ಜಾರಿಯಲ್ಲಿದ್ದ ‘ಯೂರೊ 1’ ಮಾನದಂಡಕ್ಕೆ ಸರಿಸಮನಾದ ಮಾನದಂಡಗಳನ್ನು 1999ರ ಜೂನ್ 1ರಿಂದ ಜಾರಿಗೆ ತರುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತು. ಅದನ್ನು “ಭಾರತ್‌ 2000’ ಎಂದು ಜಾರಿಗೆ ತರಲಾಯಿತು. ಅದನ್ನೇ ‘ಭಾರತ್‌ ಸ್ಟೇಜ್ 1’ ಎಂದು ಪರಿಗಣಿಸಲಾಗುತ್ತದೆ. ಜತೆಗೆ ‘ಯೂರೊ 2’ಗೆ ಸಮನಾದ ಮಾಲಿನ್ಯ ನಿಯಂತ್ರಣ ಮಾನದಂಡವನ್ನು ದೆಹಲಿ ಎನ್‌ಸಿಆರ್‌ನಲ್ಲಿ 2000ರ ಏಪ್ರಿಲ್‌ನಿಂದ ಕಡ್ಡಾಯ ಮಾಡಿ ಆದೇಶ ನೀಡಲಾಗಿತ್ತು.

●.ಈ ಪರಿಸರ ಮಾಲಿನ್ಯ ನಿಯಂತ್ರಣದ ಮಾನದಂಡಗಳನ್ನು ಅನುಸರಿಸಲು ವಾಹನಗಳ ಎಂಜಿನ್‌ ಗುಣಮಟ್ಟ ಅತ್ಯಾಧುನಿಕವಾಗಿದ್ದರೆ ಸಾಲದು, ಇಂಧನದ ಗುಣಮಟ್ಟವೂ ಹೆಚ್ಚಬೇಕಿತ್ತು.

●.ಆದರೆ ಈ ಹಠಾತ್‌ ಮತ್ತು ಕ್ಷಿಪ್ರ ಪರಿವರ್ತನೆಗೆ ಇಂಧನ ಸಂಸ್ಥೆಗಳು ಮತ್ತು ವಾಹನಗಳ ಬಿಡಿಭಾಗಗಳ ತಯಾರಕರು (ಒರಿಜಿನಲ್ ಇಕ್ವಿಪ್‌ಮೆಂಟ್ಸ್ ಮ್ಯಾನುಫಾಕ್ಚರರ್ಸ್- ಒಇಎಂ) ಅಗತ್ಯ ಸಿದ್ಧತೆ ಮಾಡಿಕೊಂಡಿರಲಿಲ್ಲ. ಈ ಸಂಬಂಧ ಅಗತ್ಯವಿದ್ದ ಇಂಧನ ನೀತಿಯೂ ಭಾರತದಲ್ಲಿ ಜಾರಿಯಲ್ಲಿರಲಿಲ್ಲ. ಹೀಗಾಗಿ ‘ಯೂರೊ 2’ ಅಥವಾ ‘ಭಾರತ್‌ ಸ್ಟೇಜ್‌ 2’ ನಿಗದಿತ ಕಾಲಮಿತಿಯಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ಬರಲಿಲ್ಲ.

●.ಈ ಮಾನದಂಡಗಳ ಜಾರಿ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳು, ವೆಚ್ಚ, ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ಎರಡು ಸಮಿತಿಗಳನ್ನು ರಚಿಸಿತ್ತು. ಯೂರೋಪ್‌ನಲ್ಲಿ ಜಾರಿಯಲ್ಲಿರುವ ಮಾನದಂಡಗಳನ್ನು ಜಾರಿಗೆ ತರುವಂತೆ ಈ ಸಮಿತಿಗಳು ಶಿಫಾರಸು ಮಾಡಿತು. ಸರ್ಕಾರ ಅದನ್ನು ಒಪ್ಪಿಕೊಂಡಿತು.

●.ಇವುಗಳ ಜಾರಿಗೆ ಈ ಸಮಿತಿಗಳು ಕಾಲಮಿತಿಯನ್ನು ನಿಗದಿಪಡಿಸಿದವು. 2010ರಲ್ಲಿ ದೇಶದಾದ್ಯಂತ ‘ಬಿಎಸ್‌ 3 ’ ಜಾರಿಗೆ ತರಲಾಯಿತು. ನಂತರ ದೇಶದ ಪ್ರಮುಖ 17 ನಗರಗಳಲ್ಲಿ ಪ್ಯಾಸೆಂಜರ್‌ ಕಾರುಗಳಿಗೆ ‘ಬಿಎಸ್‌ 4’ ಪರಿಮಾಣಗಳನ್ನು ಕಡ್ಡಾಯ ಮಾಡಲಾಯಿತು. 2017ರ ಹೊತ್ತಿಗೆ ದೇಶದಾದ್ಯಂತ ಬಿಎಸ್‌4, 2020ರ ಹೊತ್ತಿಗೆ ಬಿಎಸ್‌5 ಮತ್ತು 2024ಕ್ಕೆ ಬಿಎಸ್‌6 ಜಾರಿಗೆ ತರುವಂತೆ ಈ ಸಮಿತಿಗಳು ಸೂಚಿಸಿದ್ದವು.


☀ ಬಿಎಸ್ ಅಥವಾ ಭಾರತ್ ಸ್ಟೇಜ್ ನ ಪ್ರಸ್ತುತತೆ :
•─━━━━━═══════════━━━━━─•

●.ಮೋಟಾರು ವಾಹನಗಳ ವಾಯುಮಾಲಿನ್ಯ ಪರಿಮಿತಿ ಮಾನದಂಡ ಬಿಎಸ್ IV ಏಪ್ರಿಲ್ 1ರಿಂದ ಜಾರಿಗೆ ಬರುವ ಹಿನ್ನೆಲೆಯಲ್ಲಿ ಮಾಲಿನ್ಯಕಾರಕ ಬಿಎಸ್ III ವಾಹನಗಳ ನೋಂದಣಿ ಮತ್ತು ಮಾರಾಟವನ್ನು ಸುಪ್ರೀಂಕೋರ್ಟ್ ನಿಷೇಧಿಸಿದೆ.

●.ಪರಿಸರ ಮಾಲಿನ್ಯ  ನಿಯಂತ್ರಣ ಮಂಡಳಿ ಸಲ್ಲಿಸಿದ ಅರ್ಜಿ ಬಗ್ಗೆ ಬುಧವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ವಾಣಿಜ್ಯ ಹಿತಾಸಕ್ತಿಗಿಂತ ಲಕ್ಷಾಂತಕ ಜನರ ಆರೋಗ್ಯದ ಹಿತಾಸಕ್ತಿ ಮುಖ್ಯ ಎಂದು ಹೇಳಿದೆ. ಅದೇ ವೇಳೆ ಮಾರ್ಚ್ 31ರ ಬಳಿಕ ಬಿಎಸ್ III (ಭಾರತ್ ಸ್ಟೇಜ್ III)  ವಾಹನಗಳ ನೋಂದಣಿ ಮಾಡದಂತೆ ಸರ್ಕಾರಕ್ಕೆ ಆದೇಶಿಸಿದ ನ್ಯಾಯಾಲಯ ಈ ವಾಹನಗಳ ಮಾರಾಟವನ್ನು ನಿಷೇಧಿಸಿ ತೀರ್ಪು ನೀಡಿದೆ.

●.ವಾಹನ ತಯಾಕರು ತಮ್ಮ ವಾಹನಗಳನ್ನು ಬಿಎಸ್ IV ಮಾನದಂಡಕ್ಕೆ ತಕ್ಕಂತೆ ಮೇಲ್ದರ್ಜೆಗೆ ಏರಿಸಬೇಕು ಮತ್ತು ಇದನ್ನು ಸರ್ಕಾರ ಖಾತ್ರಿ ಪಡಿಸಬೇಕು ಎಂದು ಕೋರ್ಟ್ ಹೇಳಿದೆ.

●.ಸುಪ್ರೀಂಕೋರ್ಟ್‍ನ ಈ ತೀರ್ಪಿನಿಂದಾಗಿ ಮಾರಾಟಕ್ಕೆ ಸಿದ್ಧವಾಗಿರುವ ಸರಿಸುಮಾರು 8 ಲಕ್ಷ ಬಿಎಸ್ III ವಾಹನಗಳ ಮೇಲೆ ಹೊಡೆತ ಬೀಳಲಿದೆ.

●.2010ರಿಂದ ಬಿಎಸ್ IVನ್ನು ಹಂತ ಹಂತವಾಗಿ ಪರಿಚಯಿಸಲಾಗಿದ್ದು, ಇದು ಏಪ್ರಿಲ್ 1ರಿಂದ ದೇಶದಾದ್ಯಂತ ಜಾರಿಯಾಗುವ ಸಾಧ್ಯತೆ ಇದೆ.

●.ಹಳೆಯ ವಾಹನಗಳು ಮಾರುಕಟ್ಟೆಯಲ್ಲಿ ಮುಂದುವರಿದರೆ ಸ್ವಚ್ಛ ಇಂಧನ ತಂತ್ರಜ್ಞಾನವನ್ನು ಅನುಷ್ಠಾನ ಮಾಡಲು ಸಾಧ್ಯವಿಲ್ಲ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ. ಬಜಾಜ್ ಹೊರತು ಪಡಿಸಿ ಇನ್ನಿತರ ಆಟೊಮೊಬೈಲ್ ಕಂಪನಿಗಳು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅರ್ಜಿಯನ್ನು ವಿರೋಧಿಸಿದ್ದವು.

(ಕೃಪೆ :ಪ್ರಜಾವಾಣಿ)

No comments:

Post a Comment