"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday, 15 March 2016

■. ಸಾಮಾನ್ಯ ವಿಜ್ಞಾನ :— ನೈಸರ್ಗಿಕ ಮೂಲವಸ್ತುಗಳ ಪಟ್ಟಿಯಲ್ಲಿರುವ , ಅತ್ಯಂತ ವಿಶಿಷ್ಟ ಎನಿಸಿರುವ ಕೆಲವು ಆಯ್ದ ಧಾತುಗಳ ಸಂಕ್ಷಿಪ್ತ ಪರಿಚಯ: (Important Natural Elements)

■. ಸಾಮಾನ್ಯ ವಿಜ್ಞಾನ :— ನೈಸರ್ಗಿಕ ಮೂಲವಸ್ತುಗಳ ಪಟ್ಟಿಯಲ್ಲಿರುವ , ಅತ್ಯಂತ ವಿಶಿಷ್ಟ ಎನಿಸಿರುವ ಕೆಲವು ಆಯ್ದ ಧಾತುಗಳ ಸಂಕ್ಷಿಪ್ತ ಪರಿಚಯ:
(Important Natural Elements)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ವಿಜ್ಞಾನ
(General Science)


1 . ಜಲಜನಕ :—
ಇದರಷ್ಟು ಸರಳ ಮೂಲವಸ್ತು ಇನ್ನಾವುದೂ ಇಲ್ಲ. ವಿಶ್ವದಲ್ಲಿರುವ ಒಟ್ಟೂ ದ್ರವ್ಯರಾಶಿಯ ಮೂರರ ಎರಡಂಶ ಈ ಧಾತುವಿನದೇ . ತಾರೆಗಳಲ್ಲಿನ ಪ್ರಧಾನ ದ್ರವ್ಯವೂ ಆಗಿರುವ  ಅನಿಲ ರೂಪದ ಈ ಅಲೋಹ ಧಾತುವೇ ಉಳಿದೆಲ್ಲ ಮೂಲವಸ್ತುಗಳ ಹುಟ್ಟಿನ ಆಧಾರ- ಆಕರ.

2 . ಆಮ್ಲಜನಕ :—
ಜಲಜನಕದೊಡನೆ ಬೆರೆತು ` ಜೀವಜಲ ' ವಾದ ನೀರನ್ನು ರೂಪಿಸಿರುವ, ಭೂ ವಾಯುಮಂಡಲದಲ್ಲಿ ಭಾರೀ ಪ್ರಮಾಣದಲ್ಲಿ ಬೆರೆತು (21 % ) ` ಪ್ರಾಣವಾಯು' ಆಗಿರುವ ಮೂಲದ್ರವ್ಯ. ಧರೆಯಲ್ಲಿ ಸಸ್ಯಗಳಿಂದ ತಯಾರಾಗಿ ವಾತಾವರಣಕ್ಕೆ ಬೆರೆವ ಅಲೋಹ ಧಾತು . ಒಟ್ಟಾರೆ ಜೀವಿಗಳ ಬದುಕಿಗೆ ಅತ್ಯಗತ್ಯವಾದ ಮೂಲದ್ರವ್ಯ.

3 . ಚಿನ್ನ:—
ಅತ್ಯಂತ ಜನಪ್ರಿಯ ಅಷ್ಟೇ ಅಮೂಲ್ಯ ಲೋಹೀಯ ಮೂಲವಸ್ತು. ನೇರವಾಗಿ ಪರಿಶುದ್ಧವಾಗಿಯೇ ದೊರಕುವ ಮೋಹಕ ವರ್ಣದ , ಮೃದು ಸ್ವಭಾವದ , ಸಂಪೂರ್ಣ ತಟಸ್ಥ ರಾಸಾಯನಿಕ ಗುಣದ ಈ ಧಾತು ಆಭರಣಗಳಿಗೆ ಅತ್ಯಂತ ಪ್ರಶಸ್ತ .
` ರಾಜಲೋಹ - ಲೋಹರಾಜ ' ಎಂದೇ ಜಗತ್ಪ್ರಸಿದ್ಧ .

4 . ಇಂಗಾಲ :—
ಈ ಅಲೋಹ ಮೂಲವಸ್ತು ಸಕಲ ಜೀವಕೋಶಗಳ ಅವಿಭಾಜ್ಯ ಅಂಗ. ವಿಶ್ವದ ಅತ್ಯಂತ ಗಟ್ಟಿವಸ್ತುವಾದ ವಜ್ರ ಮತ್ತು ಅತೀವ ಮಾಲಿನ್ಯದ ಕಲ್ಲಿದ್ದಿಲು ಇಂಗಾಲದ್ದೇ ಬಹುರೂಪಗಳು .

5 . ಬೆಳ್ಳಿ:—
ಬಹುಬೆಲೆಯ ಬಹೂಪಯೋಗೀ ಮೂಲವಸ್ತು. ಅತಿ ಸಮರ್ಥ ಶುದ್ಧಿಕಾರಕ ; ಶಾಖ ಮತ್ತು ವಿದ್ಯುತ್ ಶಕ್ತಿಯ ಸರ್ವೋತ್ತಮ ವಾಹಕ .

6 . ಕಬ್ಬಿಣ :—
ಭೂಗರ್ಭದಲ್ಲಿ ಗರಿಷ್ಠ ಪ್ರಮಾಣದಲ್ಲಿರುವ, ಧಾರಾಳ ಲಭ್ಯ ಲೋಹೀಯ ಧಾತು. ಕೈಗಾರಿಕೆಗಳ, ಕಟ್ಟಡಗಳ ಬೆನ್ನೆಲುಬು . ಯಂತ್ರ- ಉಪಕರಣಗಳ ಜೀವಾಳ. ಕಬ್ಬಿಣದಷ್ಟು ಜನೋಪಯೋಗೀ ಧಾತು ಬೇರೊಂದಿಲ್ಲ .

7 . ಸಿಲಿಕಾನ್:—
ಧರೆಯಲ್ಲಿ ಧಾರಾಳ ಲಭ್ಯತೆಯಲ್ಲಿ ಆಮ್ಲಜನಕದ ನಂತರ ದ್ವಿತೀಯ ಸ್ಥಾನದಲ್ಲಿರುವ ಅಲೋಹ ಧಾತು. ಎಲ್ಲ ಶಿಲೆಗಳಲ್ಲಿ ಮರಳಲ್ಲಿ ಜೇಡಿಮಣ್ಣಲ್ಲಿ ಈ ಧಾತುವೇ ಪ್ರಧಾನ ಘಟಕ . ಗಾಜು , ಕಂಪ್ಯೂಟರ್ ಚಿಪ್ , ಸೌರಕೋಶ , ಗಡಿಯಾರ ಇತ್ಯಾದಿಗಳಲ್ಲೆಲ್ಲ ಈ ಮೂಲವಸ್ತುವಿನದೇ ಮೂಲಸತ್ವ .

8 . ಕಾಲ್ಷಿಯಂ :—
ಆಮ್ಲಜನಕ , ನೀರು ಮತ್ತು ಇಂಗಾಲಗಳೊಡನೆ ತೀವ್ರವಾಗಿ ವರ್ತಿಸುವ ಲೋಹೀಯ ಮೂಲವಸ್ತು . ಪ್ರಾಣಿಗಳು ಮೂಳೆ ಹಲ್ಲು ಮತ್ತು ಮೃದ್ವಂಗಿ ಚಿಪ್ಪುಗಳ ಪ್ರಧಾನ ಅಂಶವೆಲ್ಲ ಈ ಧಾತುವೇ .

9 . ಸಾರಜನಕ:—
ಭೂ ವಾಯುಮಂಡಲದಲ್ಲಿ ಗರಿಷ್ಠ ಪ್ರಮಾಣದಲ್ಲಿರುವ (ಶೇ 78 ಭಾಗ ) ಅಲೋಹ ಧಾತು . ಸಸ್ಯ ಸಾಮ್ರಾಜ್ಯದ ಒಂದು ಪ್ರಧಾನ ಪೋಷಕ ವಸ್ತು ಕೂಡ. ಮಿಂಚುಗಳಿಂದ ಪ್ರತ್ಯೇಕಗೊಂಡು , ಮಳೆ ನೀರಲ್ಲಿ ಬೆರೆತು ಸುರಿದು ಸಸ್ಯಗಳಿಗೆ ಒದಗುವ ಅತ್ಯವಶ್ಯ ಮೂಲದ್ರವ್ಯ.

10 . ಪಾದರಸ:—
ಸಾಮಾನ್ಯ ತಾಪಮಾನಗಳಲ್ಲಿ ದ್ರವರೂಪದಲ್ಲಿರುವ ಏಕೈಕ ಲೋಹ (ಅಲೋಹ ಧಾತು ಬ್ರೋಮೀನ್ ಕೂಡ ಇದೇ ಗುಣ ಹೊಂದಿದೆ). ಕರಗಿದ ಬೆಳ್ಳಿಯಂಥದೇ ರೂಪ ಹಾಗಾಗಿ ` ಬೆಳ್ಳಿನೀರು ' ಎಂದೂ ಪ್ರಸಿದ್ಧ. ಜೀವಿಗಳಿಗೆ ವಿಷಕರ, ಅಪಾಯಕರ ಧಾತು.

11 . ಯುರೇನಿಯಂ :—
ಸುಪ್ರಸಿದ್ಧ ವಿಕಿರಣಪಟು ಧಾತು . ಅಣು ವಿದ್ಯುತ್ ಸ್ಥಾವರಗಳ ಪ್ರಧಾನ ಇಂಧನ . ಪ್ರಸ್ತುತ ಜಗದ ಶೇಕಡ ಹದಿನೇಳರಷ್ಟು ವಿದ್ಯುದುತ್ಪಾದನೆಗೆ ಈ ಲೋಹೀಯ ಧಾತುವಿನ ಬಳಕೆ . ` ಆಧುನಿಕ ಜಗದ ಸ್ವಚ್ಛ ಇಂಧನ ' ಎಂದೇ ಖ್ಯಾತ. ನಿಯಂತ್ರಣ ತಪ್ಪಿದರೆ ಸರ್ವನಾಶ ತರಬಲ್ಲ ಮೂಲದ್ರವ್ಯ .

12 . ` ಲೀಥಿಯಂ ':—
 ಅತ್ಯಂತ ಹಗುರ ಲೋಹೀಯ ಧಾತುವಾಗಿ , ` ಆಸ್ಮಿಯಂ ' ಅತ್ಯಂತ ಭಾರವಾದ ಲೋಹವಾಗಿ, ` ಅಸ್ಟಟೈನ್ ' ಅತ್ಯಂತ ವಿರಳ ಮೂಲವಸ್ತುವಾಗಿ (ಇಡೀ ಧರೆಯಲ್ಲಿ ಈ ಧಾತುವಿನ ಪ್ರಮಾಣ ಮುವ್ವತ್ತು ಗ್ರಾಂ ಮೀರುವುದಿಲ್ಲ ) ವಿಶಿಷ್ಟ ದಾಖಲೆಗಳನ್ನು ಸೃಷ್ಟಿಸಿವೆ! ಗರಿಷ್ಠ ವಿಷಕರ ಧಾತುವಾಗಿ ` ಪ್ಲುಟೋನಿಯಂ ' ವಿಶಿಷ್ಟ ಸ್ಥಾನ ಗಳಿಸಿದೆ .

2 comments: