"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday, 4 July 2017

●.ತೀಸ್ತಾ ನದಿ (Tystha River) — ಬಾಂಗ್ಲಾದೇಶ ಮತ್ತು ಭಾರತದ ನಡುವೆ ತೀಸ್ತಾ ನದಿ ನೀರು ಹಂಚಿಕೆ ವಿವಾದ ಹುಟ್ಟಿಕೊಂಡಿದ್ದು ಹೇಗೆ?


●.ತೀಸ್ತಾ ನದಿ (Tystha River) — ಬಾಂಗ್ಲಾದೇಶ ಮತ್ತು ಭಾರತದ ನಡುವೆ ತೀಸ್ತಾ ನದಿ ನೀರು ಹಂಚಿಕೆ ವಿವಾದ ಹುಟ್ಟಿಕೊಂಡಿದ್ದು ಹೇಗೆ?
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ
(general studies)


- ಬಾಂಗ್ಲಾದೇಶ ಮತ್ತು ಭಾರತದ ನಡುವೆ ತೀಸ್ತಾ ನದಿ ನೀರು ಹಂಚಿಕೆ ವಿವಾದ ಕಳೆದ 34 ವರ್ಷಗಳಿಂದಲೂ ಬಗೆಹರಿಯದೆ ಉಳಿದಿದೆ. 2011ರಲ್ಲಿ ಡಾ.ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಎರಡೂ ರಾಷ್ಟ್ರಗಳು ಈ ಸಂಬಂಧ ಒಪ್ಪಂದವೊಂದಕ್ಕೆ ಸಹಿಹಾಕಲು ಮುಂದಾಗಿದ್ದವು. ಆದರೆ, ಕೊನೆಕ್ಷಣದಲ್ಲಿ ಮಮತಾ ಬ್ಯಾನರ್ಜಿ ವಿರೋಧದಿಂದ ಒಪ್ಪಂದ ಏರ್ಪಡಲಿಲ್ಲ. ಆದರೆ ಜಲವಿವಾದಕ್ಕೆ ತೆರೆಬೀಳುವ ಮುನ್ಸೂಚನೆಗಳು ಈಗ ಸಿಕ್ಕಿವೆ.


●.ತೀಸ್ತಾ ನದಿಯ ಹುಟ್ಟು :
━━━━━━━━━━━━━━━
ಸಿಕ್ಕಿಂನ ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ತೀಸ್ತಾ ಹುಟ್ಟುತ್ತದೆ. ಖಾಂಗ್ಸೆ ಮತ್ತು ಝೆಮು ಹಿಮನದಿಗಳು ಕರಗಿ ಕಾಂಚನಗಂಗಾದ ಸಮೀಪದಲ್ಲಿರುವ ತ್ಸೋ ಲಾಮೋ ಸರೋವರಕ್ಕೆ ಸೇರುತ್ತವೆ. ಅಲ್ಲಿಂದ ತೀಸ್ತಾ ಹುಟ್ಟಿಕೊಳ್ಳುತ್ತದೆ. ಈ ನದಿಯು ಮುಂದೆ ಡಾರ್ಜಿಲಿಂಗ್​ನ ತೀಸ್ತಾಬಜಾರ್ ಸಮೀಪ ರಂಜೀತ್ ನದಿಯೊಂದಿಗೆ ಸಂಗಮವಾಗಿ ವಿಶಾಲ ರೂಪ ಪಡೆದುಕೊಳ್ಳುತ್ತದೆ. ಆ ಬಳಿಕ ಉತ್ತರ ಬಾಂಗ್ಲಾದ ಕೂಚ್​ಬೆಹಾರ್ ಜಿಲ್ಲೆಯ ಮೆಖ್ಸಿಗುಂಜ್​ನಲ್ಲಿ ಅಂತಾರಾಷ್ಟ್ರೀಯ ಗಡಿ ದಾಟಿ ಬಾಂಗ್ಲಾದೇಶಕ್ಕೆ ಪ್ರವೇಶಿಸಿ ಅಲ್ಲಿ ಬ್ರಹ್ಮಪುತ್ರಾ ನದಿಯೊಂದಿಗೆ ಸಂಗಮ ವಾಗುತ್ತದೆ. ಕೊನೆಗೆ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.


●.ಗಮನಿಸಬೇಕಾದ ಅಂಶಗಳು :
━━━━━━━━━━━━━━━━━━
- 414 ಕಿಲೋಮೀಟರ್ ತೀಸ್ತಾ ನದಿಯ ಒಟ್ಟು ಉದ್ದ
- ಸಿಕ್ಕಿಂನಲ್ಲಿ 150 ಕಿಮೀ, ಪಶ್ಚಿಮ ಬಂಗಾಳದಲ್ಲಿ 123 ಕಿಮೀ ಮತ್ತು ಬಾಂಗ್ಲಾದಲ್ಲಿ 140 ಕಿಮೀ ನದಿ ಹರಿಯುತ್ತದೆ.
- ಬಾಂಗ್ಲಾದೇಶದಲ್ಲಿ 1 ಕೋಟಿ ಜನರಿಗೆ ಜೀವನಾಧಾರ
- ಬಾಂಗ್ಲಾದ ಶೇ.14ರಷ್ಟು ಕೃಷಿಗೆ ತೀಸ್ತಾ ಅಗತ್ಯ
- ಬಾಂಗ್ಲಾದ 1 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುತ್ತಿದೆ.
- ಪಶ್ಚಿಮ ಬಂಗಾಳದ ಜಲಪೈಗುರಿ ಮತ್ತು ದಕ್ಷಿಣ ದಿನಾಜಪುರಕ್ಕೆ ತೀಸ್ತಾ ನೀರಿನ ಮೂಲ.



●.ಬಾಂಗ್ಲಾ, ಪಶ್ಚಿಮಬಂಗಾಳಕ್ಕೆ ಜೀವನದಿ
━━━━━━━━━━━━━━━━━━━━━━━
ತೀಸ್ತಾ ನದಿ ಅಂದಾಜು 414 ಕಿಲೋಮೀಟರ್​ಗಳಷ್ಟು ದೂರ ಹರಿಯುತ್ತದೆ. ಇದರಲ್ಲಿ 150 ಕಿಲೋಮೀಟರ್ ಸಿಕ್ಕಿಂನಲ್ಲಿ, 123 ಕಿಲೋಮೀಟರ್ ಪಶ್ಚಿಮ ಬಂಗಾಳ ಮತ್ತು 140 ಕಿಲೋಮೀಟರ್​ಗಳಷ್ಟು ಬಾಂಗ್ಲಾದೇಶದಲ್ಲಿ ಹರಿಯುತ್ತದೆ. ತೀಸ್ತಾ ನದಿ ಬಾಂಗ್ಲಾದೇಶದ ಉತ್ತರ ಭಾಗಕ್ಕೆ ನೀರಿನ ಪ್ರಮುಖ ಮೂಲವಾಗಿದೆ. ಬಾಂಗ್ಲಾದ ನಾಲ್ಕನೇ ಅತಿದೊಡ್ಡ ನದಿ ಎಂಬ ಹೆಗ್ಗಳಿಕೆಯೂ ಇದರದ್ದು. ಬಾಂಗ್ಲಾದ 1 ಕೋಟಿ ಜನರಿಗೆ ಜೀವನಾಧಾರವೂ ಈ ತೀಸ್ತಾ. ಶೇ.14ರಷ್ಟು ಕೃಷಿ, ಐದು ಜಿಲ್ಲೆಗಳ 1 ಲಕ್ಷ ಹೆಕ್ಟೇರ್​ನಷ್ಟು ಪ್ರದೇಶಕ್ಕೆ ನೀರಿನ ಮೂಲಕೂಡ ಆಗಿದೆ ಈ ನದಿ. ಹೀಗಾಗಿಯೇ ಬಾಂಗ್ಲಾದೇಶವು ನದಿಯ ಶೇ.50ರಷ್ಟು ನೀರು ತನಗೆ ಸಲ್ಲಬೇಕು ಎಂದು ಪಟ್ಟು ಹಿಡಿದಿದೆ. ಪಶ್ಚಿಮ ಬಂಗಾಳಕ್ಕೂ ತೀಸ್ತಾ ಜೀವನದಿ ಆಗಿದೆ. ಅಲ್ಲಿನ ಜಲಪೈಗುರಿ, ದಕ್ಷಿಣ ದಿನಾಜಪುರ ಮತ್ತು ಡಾರ್ಜಿಲಿಂಗ್​ನಲ್ಲಿನ ಕೃಷಿಗೂ ತೀಸ್ತಾ ಆಧಾರವಾಗಿದೆ.


●.ವಿವಾದದ ಹುಟ್ಟಿಕೊಂಡಿದ್ದು ಹೇಗೆ?
━━━━━━━━━━━━━━━━━━━━━━━
ಪಶ್ಚಿಮ ಬಂಗಾಳದ ಕೃಷಿಕರ ನೀರಾವರಿ ಅಗತ್ಯಗಳನ್ನು ಪೂರೈಸುವ ಸಲುವಾಗಿ 1980ರ ದಶಕದಲ್ಲಿ ತೀಸ್ತಾಗೆ ಅಡ್ಡಲಾಗಿ ಎರಡು ಅಣೆಕಟ್ಟುಗಳನ್ನು ನಿರ್ವಿುಸಲು ರಾಜ್ಯ ಸರ್ಕಾರ ಮುಂದಾಗಿತ್ತು. ಇದಕ್ಕೆ ಬಾಂಗ್ಲಾದೇಶ ತೀವ್ರ ವಿರೋಧ ವ್ಯಕ್ತಪಡಿಸಿತು. ಹೀಗಾಗಿ ಈ ವಿಚಾರದಲ್ಲಿ ಕೇಂದ್ರ ಮಧ್ಯಪ್ರವೇಶಿಸಿತು. ಆಗಿನ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಬಾಂಗ್ಲಾದೇಶದೊಡನೆ ಚರ್ಚೆ ನಡೆಸಿ 1983ರಲ್ಲಿ ಒಪ್ಪಂದವೊಂದನ್ನು ಮಾಡಿಕೊಂಡಿತು. ಅದರಂತೆ ತೀಸ್ತಾ ನದಿಯ ಶೇ. 39ರಷ್ಟು ನೀರು ಭಾರತಕ್ಕೆ ಮತ್ತು ಶೇ.36ರಷ್ಟು ನೀರು ಬಾಂಗ್ಲಾದೇಶಕ್ಕೆ ಎಂದು ಹಂಚಿಕೆ ಮಾಡಲಾಗಿತ್ತು. ಉಳಿದ ಶೇ.25ರಷ್ಟು ನೀರನ್ನು ಹಂಚಿಕೆ ಮಾಡಿರಲಿಲ್ಲ. ಆದಾಗ್ಯೂ, ಈ ಸೂತ್ರ ಹೆಚ್ಚು ಕಾಲ ಉಳಿಯಲಿಲ್ಲ.


●.ಜಲವಿದ್ಯುತ್ ಉತ್ಪಾದನೆಗೆ ತಟ್ಟಲಿದೆ ಬಿಸಿ
━━━━━━━━━━━━━━━━━━━━━━━
ತೀಸ್ತಾ ನದಿ ಜಲವಿದ್ಯುತ್​ನ ಮೂಲವೂ ಹೌದು. ಭಾರತದಲ್ಲಿ ತೀಸ್ತಾ ನದಿಯನ್ನು ಆಧರಿಸಿ 26 ಜಲವಿದ್ಯುತ್ ಯೋಜನೆಗಳನ್ನು ಸಿದ್ಧಪಡಿಸಲಾಗಿದ್ದು, ಈ ಪೈಕಿ ಹೆಚ್ಚಿನ ಯೋಜನೆಗಳು ಸಿಕ್ಕಿಂನಲ್ಲಿ ಸ್ಥಾಪಿತವಾಗಿವೆ. ಇವುಗಳ ಮೂಲಕ 50,000 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ಬಾಂಗ್ಲಾದೇಶಕ್ಕೆ ನೀರು ಹಂಚಿಕೆ ಮಾಡಬೇಕಾದದ್ದೇ ಆದಲ್ಲಿ ಈ ಯೋಜನೆಗಳಿಗೆ ಅಡ್ಡಿಯಾಗಲಿದೆ.

(courtesy :ವಿಜಯವಾಣಿ ಸುದ್ದಿಜಾಲ )

No comments:

Post a Comment