"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday, 24 October 2022

•► ರಕ್ತದ ಗುಂಪುಗಳ ನಡುವಿನ ವ್ಯತ್ಯಾಸ ಮತ್ತು ಅವುಗಳ ವಿಶೇಷತೆ: (Some intresting facts on Blood Group and How Blood type is determined)

 
•► ರಕ್ತದ ಗುಂಪುಗಳ ನಡುವಿನ ವ್ಯತ್ಯಾಸ ಮತ್ತು ಅವುಗಳ ವಿಶೇಷತೆ:
(Some intresting facts on Blood Group and How Blood type is determined)

━━━━━━━━━━━━━━━━━━━━━━━━━━━━━━━━━━━━━━━━━━━━━

ಸಾಮಾನ್ಯವಾಗಿ ನಮ್ಮೆಲ್ಲರ ರಕ್ತ ಒಂದೇ ರೀತಿಯಾಗಿರುತ್ತದೆ. ಮೂಲತಃ ಮನುಷ್ಯನ ರಕ್ತ ಅದೇ ಪ್ಲಾಸ್ಮಾ, ಜೀವಕೋಶಗಳು ಮತ್ತು ಇತರ ರಾಸಾಯನಿಕ ವಸ್ತುಗಳಿಂದ ಮಾಡಲ್ಪಟ್ಟಿದೆ. ಆದರೆ ವ್ಯಕ್ತಿಯಿಂದ ವ್ಯಕ್ತಿಗೆ ಜೀವಕೋಶಗಳು, ಪ್ಲಾಸ್ಮಾದಲ್ಲಿನ ವ್ಯವಸ್ಥೆಗಳು ಮತ್ತು ರಾಸಾಯನಿಕ ಪ್ರಮಾಣದಲ್ಲಿ ಕೆಲವು ವ್ಯತ್ಯಾಸ ಇರುತ್ತದೆ. ಇದೇ ಕಾರಣಕ್ಕೆ ಆಸ್ಪತ್ರೆಗಳಲ್ಲಿ ರಕ್ತದ ಬದಲಿಗೆ ರಕ್ತ ವಿನಿಮಯ ಮಾಡಿಕೊಳ್ಳುವ ಪ್ರಮೇಯವಿದ್ದಾಗ ಕೂಲಂಕಷವಾಗಿ ಪರೀಕ್ಷೆ ಮಾಡಿ ತೆಗೆದುಕೊಳ್ಳಲಾಗುತ್ತದೆ. ರಕ್ತದಾನ ಶಿಬಿರಗಳಲ್ಲಿ ಅನೇಕ ಸಲ ಇಂಥ ಪರೀಕ್ಷೆಗಳಿಲ್ಲದೆ ತೆಗೆದುಕೊಂಡ ರಕ್ತ ಉಪಯೋಗಕ್ಕೆ ಬಾರದೆ ಹೋಗುತ್ತದೆ. ರಾಸಾಯನಿಕ ಸೇರಿಸಿ ಉಪಯೋಗಿಸಲು ಸಾಧ್ಯವಾಗುವ ಹಾಗಿದ್ದರೆ ಮಾತ್ರ ಬಳಕೆಯಾಗುತ್ತದೆ. ರಕ್ತವನ್ನು ಪ್ರಮುಖವಾಗಿ ನಾಲ್ಕು ಗುಂಪುಗಳಾಗಿ ವರ್ಗೀಕರಿಸಲಾಗುತ್ತದೆ.

ಮನುಷ್ಯನ ರಕ್ತವನ್ನು ಎ, ಬಿ, ಎಬಿ, ಮತ್ತು ಓ ಎಂಬ ಗುಂಪುಗಳನ್ನಾಗಿ ವಿಂಗಡಿಸಲಾಗಿದೆ.

ರಕ್ತದಲ್ಲಿರುವ ಕೆಂಪು ರಕ್ತಕಣಗಳ ಮೇಲಿರುವ ಪ್ರತಿಜನಕ (ಆಂಟಿಜೆನ್-ಕೆಂಪುರಕ್ತ ಕಣಗಳ ಮೇಲ್ಮೈಯಲ್ಲಿ ಇರುವ ಪ್ರೋಟಿನ್ ಅಣುಗಳು) ಅಂಶಗಳನ್ನು ಆಧಾರದ ಮೇಲೆ ರಕ್ತದ ಗುಂಪುಗಳನ್ನು ವರ್ಗೀಕರಿಸಲಾಗಿದೆ. ಜೊತೆಗೆ ಆರ್‍ಎಚ್ ಆಂಟಿಜೆನ್‍ ಆಧಾರದ ಮೇಲೆ ಎ ಪಾಸಿಟಿವ್, ಬಿ ಪಾಸಿಟಿವ್, ಎಬಿ ಪಾಸಿಟಿವ್, ಎಬಿ ನೆಗೆಟಿವ್, ಓ ನೆಗೆಟಿವ್, ಓ ಪಾಸಿಟಿವ್ ಎಂಬುದಾಗಿ ಪುನಃ ವಿಂಗಡಿಸಲಾಗಿದೆ.

ಹೆಚ್ಚಿನ ಜನರಲ್ಲಿ ಸಾಮಾನ್ಯವಾಗಿ ಎ ಪಾಸಿಟಿವ್ ಮತ್ತು ಓ ಪಾಸಿಟಿವ್ ಗುಂಪುಗಳು ಕಾಣಸಿಗುತ್ತವೆ. ಬಿ ನೆಗೆಟಿವ್, ಓ ನೆಗೆಟಿವ್ ಮುಂತಾದ ರಕ್ತದ ಗುಂಪುಗಳು ಬಹಳ ವಿರಳ. ಇಂತಹ ವ್ಯಕ್ತಿಗಳಿಗೆ ರಕ್ತವನ್ನು ಸಂಗ್ರಹಿಸಿ ನೀಡುವುದು ಬಹಳ ಕಷ್ಟದ ಕೆಲಸ. ಆ ಕಾರಣಕ್ಕಾಗಿಯೂ ವಿರಳ ರಕ್ತದ ಗುಂಪನ್ನು ಹೊಂದಿದ ವ್ಯಕ್ತಿಗಳನ್ನು ಗುರುತಿಸಿ ಅವರ ದೂರವಾಣಿ ಸಂಖ್ಯೆ ತೆಗೆದುಕೊಳ್ಳಲಾಗುತ್ತದೆ ಹಾಗೂ ಅಗತ್ಯವಿದ್ದಾಗ ಮಾತ್ರ ಇಂತಹ ವಿರಳಗುಂಪಿನ ವ್ಯಕ್ತಿಗಳಿಂದ ರಕ್ತದಾನವನ್ನು ಪಡೆಯಲಾಗುತ್ತದೆ.

● ರಕ್ತದ ಗುಂಪುಗಳನ್ನು ಕಂಡು ಹಿಡಿದ ವಿಜ್ಞಾನಿ ಯಾರು?
━━━━━━━━━━━━━━━━━━━━━━━━━━━━━
ಆಸ್ಟ್ರಿಯಾದ ಕಾರ್ಲ್ ಲ್ಯಾಂಡ್‍ಸ್ಟೈನರ್‍ ಎಂಬ ವೈದ್ಯರು 1901ರಲ್ಲಿ ರಕ್ತದ ಗುಂಪುಗಳ ವರ್ಗೀಕರಣ ಮಾಡಿದರು. ಈ ಕಾರಣಕ್ಕಾಗಿಯೇ ಅವರ ಜನ್ಮದಿನವಾದ ಜೂನ್ 14ರಂದು “ವಿಶ್ವ ರಕ್ತದಾನಿಗಳ ದಿವಸ”ವನ್ನು ಆಚರಿಸಲಾಗುತ್ತದೆ. ಇದೇ ರೀತಿ ಅಕ್ಟೋಬರ್ 1ರಂದು ‘ರಾಷ್ಟ್ರೀಯ ರಕ್ತದಾನ ದಿವಸ’ ಎಂದು ನಮ್ಮ ದೇಶದಲ್ಲಿ ಆಚರಿಸಲಾಗುತ್ತದೆ.

● ಯುನಿವರ್ಸಲ್ ಪ್ಲಾಸ್ಮಾ ಡೋನರ್ :
(Universal Plasma Donor)

━━━━━━━━━━━━━━━━━━━━
ಎಬಿ ರಕ್ತದ ಗುಂಪು ಇರುವವರನ್ನು ‘ಯುನಿವರ್ಸಲ್ ಪ್ಲಾಸ್ಮಾ ಡೋನರ್’ ಎಂದು ಕರೆಯುತ್ತಾರೆ. ತುರ್ತು ಸನ್ನಿವೇಶಗಳಲ್ಲಿ ಮತ್ತು ನವಜಾತ ಶಿಶುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಕ್ತದ ಅವಶ್ಯಕತೆ ಇದ್ದಲ್ಲಿ ಎಬಿ ಗುಂಪಿನ ಪ್ಲಾಸ್ಮಾವನ್ನು ಉಪಯೋಗಿಸಲಾಗುತ್ತದೆ. ಸಾಮಾನ್ಯವಾಗಿ ಎಲ್ಲರ ರಕ್ತದಲ್ಲಿಯೂ ಕೆಂಪು ರಕ್ತಕಣ, ಬಿಳಿ ರಕ್ತಕಣ, ಪ್ಲೇಟ್‍ಲೆಟ್‍ ಮತ್ತು ಪ್ಲಾಸ್ಮಾ ಎಂಬ ಅಂಶಗಳು ಇರುತ್ತದೆ. ಆದರೆ ಪ್ರತಿಯೊಬ್ಬರ ರಕ್ತವು ಇತರರ ರಕ್ತಕ್ಕಿಂತ ಭಿನ್ನವಾಗಿರುತ್ತದೆ. ಈ ಕಾರಣಕ್ಕಾಗಿಯೇ ರಕ್ತದಾನ ಮಾಡುವ ಮೊದಲ ಹಲವಾರು ಬಾರಿ ರಕ್ತವನ್ನು ಪರೀಕ್ಷಿಸಿ ಹೊಂದಾಣಿಕೆ ಮಾಡಿದ ಬಳಿಕವೇ ರಕ್ತವನ್ನು ರೋಗಿಗೆ ನೀಡಲಾಗುತ್ತದೆ.

● ರಕ್ತದ ಗುಂಪುಗಳು:
(Blood Groups)

━━━━━━━━━━━━
ಕೆಂಪು ರಕ್ತಕಣಗಳ ಮೇಲಿರುವ ಆಂಟಿಜೆನ್ ಮತ್ತು ಆಂಟಿಬಾಡಿ ಆಧಾರದ ಮೇಲೆ ರಕ್ತದ ಗುಂಪುಗಳನ್ನು ಈ ರೀತಿ ವಿಂಗಡಿಸಲಾಗಿದೆ.

ಎ ರಕ್ತದ ಗುಂಪು:
ಕೆಂಪು ರಕ್ತಕಣಗಳ ಮೇಲೆ ‘ಎ’ ಆಂಟಿಜೆನ್ ಮತ್ತು ಪ್ಲಾಸ್ಮಾದಲ್ಲಿ ‘ಬಿ’ ಪ್ರತಿಕಾಯ (ಆಂಟಿಬಾಡಿ-ಪ್ಲಾಸ್ಮಾದಲ್ಲಿರುವ ಕಾರ್ಯವಿಧಾನ ಸಂಬಂಧಿತ ಪ್ರೋಟಿನ್)  ಇರುತ್ತದೆ.

ಬಿ ರಕ್ತದ ಗುಂಪು: ಕೆಂಪು ರಕ್ತಕಣಗಳ ಮೇಲೆ ‘ಬಿ’ ಆಂಟಿಜೆನ್ ಮತ್ತು ಪ್ಲಾಸ್ಮಾದಲ್ಲಿ ‘ಎ’ ಆಂಟಿಬಾಡಿ ಇರುತ್ತದೆ.
ಎಬಿ ರಕ್ತದ ಗುಂಪು: ಕೆಂಪು ರಕ್ತಕಣಗಳ ಮೇಲೆ ‘ಎ’ ಮತ್ತು ‘ಬಿ’ ಆಂಟಿಜೆನ್‍ ಎರಡೂ ಇರುತ್ತದೆ ಮತ್ತು ಪ್ಲಾಸ್ಮಾದಲ್ಲಿ ಯಾವುದೇ ಆಂಟಿಬಾಡಿ ಇರುವುದಿಲ್ಲ.

ಓ ರಕ್ತದ ಗುಂಪು: ಕೆಂಪು ರಕ್ತಕಣಗಳ ಮೇಲೆ ಯಾವುದೇ ಆಂಟಿಜೆನ್‍ ಇರುವುದಿಲ್ಲ. ಆದರೆ ಪ್ಲಾಸ್ಮಾದಲ್ಲಿ ‘ಎ’ ಮತ್ತು ‘ಬಿ’ ಆಂಟಿಬಾಡಿ ಇರುತ್ತದೆ.

● ಯುನಿವರ್ಸಲ್‍ ಡೋನರ್ :
(Universal Donor)

━━━━━━━━━━━━━━━
ಸಾಮಾನ್ಯವಾಗಿ ಓ ನೆಗೆಟಿವ್‍ ರಕ್ತವನ್ನು ಸಾರ್ವತ್ರಿಕ ದಾನಿ (ಯುನಿವರ್ಸಲ್‍ ಡೋನರ್)  ಎಂದು ಕರೆಯಲಾಗುತ್ತದೆ. ಯಾಕೆಂದರೆ ವ್ಯಕ್ತಿಗೆ ಸರಿಹೊಂದುವ ರಕ್ತವು ದೊರಕದೇ ಇದ್ದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಥವಾ ರೋಗಿಯ ರಕ್ತದ ಗುಂಪು ತಿಳಿಯದೇ ಇದ್ದಲ್ಲಿ ಹಾಗೂ ನವಜಾತ ಶಿಶುಗಳಲ್ಲಿ ಈ ರೀತಿ ಓ ನೆಗೆಟಿವ್‍ ರಕ್ತವನ್ನು ರೋಗಿಗೆ ಕೊಡಲಾಗುತ್ತದೆ. ಯಾವುದೇ ರಕ್ತದ ಗುಂಪು ಹೊಂದಿರುವ ವ್ಯಕ್ತಿಗೆ ಓ ನೆಗೆಟಿವ್‍ ರಕ್ತವನ್ನು ಕೊಡಬಹುದು.

ಆದರೆ ನಮ್ಮ ದೇಶದ ಜನಸಂಖ್ಯೆಯ ಕೇವಲ 7 ಪ್ರತಿಶತ ಜನರು ಮಾತ್ರ ಓ ನೆಗೆಟಿವ್‍ ರಕ್ತವನ್ನು ಹೊಂದಿದ್ದಾರೆ. 35 ಪ್ರತಿಶತ ಜನರು ಓ (ಪಾಸಿಟಿವ್ ಮತ್ತು ನೆಗೆಟಿವ್) ರಕ್ತದ ಗುಂಪನ್ನು ಹೊಂದಿರುತ್ತಾರೆ. ಕೇವಲ 0.4 ಪ್ರತಿಶತ ಜನರು ಎಬಿ ರಕ್ತದ ಗುಂಪು ಹೊಂದಿರುತ್ತಾರೆ.

● ಯುನಿವರ್ಸಲ್ ರಿಸೀವರ್ :
(Universal Receiver)

━━━━━━━━━━━━━━━
ಎಬಿ ರಕ್ತದ ಗುಂಪು ಇರುವವರಲ್ಲಿ ಯಾವುದೇ ಆಂಟಿಬಾಡಿ ಇಲ್ಲದ ಕಾರಣ ಎಬಿ ರಕ್ತದ ಗುಂಪಿನವರು ಎ, ಬಿ, ಎಬಿ ಮತ್ತು ಓ ಗುಂಪಿನವರು ರಕ್ತವನ್ನು ಪಡೆಯಬಹುದು. ಆ ಕಾರಣಕ್ಕಾಗಿಯೇ ‘ಎಬಿ ಪಾಸಿಟಿವ್’ ರಕ್ತ ಗುಂಪನ್ನು ‘ಯುನಿವರ್ಸಲ್ ರಿಸೀವರ್’ ಎಂದು ಹೇಳುತ್ತಾರೆ. ಅದೇ ರೀತಿ ‘ಓ’ ಗುಂಪಿನ ರಕ್ತದಲ್ಲಿ ಯಾವುದೇ ಆಂಟಿಜೆನ್‍ ಇಲ್ಲದ ಕಾರಣ ‘ಓ’ ಗುಂಪಿನ ರಕ್ತವನ್ನು ಎ, ಬಿ, ಎಬಿ ಮತ್ತು ಓ ಗುಂಪಿನವರಿಗೆ ತುರ್ತು ಪರಿಸ್ಥಿತಿಗಳಲ್ಲಿ ನೀಡಬಹುದು. ಅದಕ್ಕಾಗಿಯೇ ಓ ನೆಗೆಟಿವ್ ಗುಂಪಿನ ರಕ್ತದಾನಿಗಳನ್ನು ಯುನಿವರ್ಸಲ್‍ ಡೋನರ್‍ ಎಂದು ಕರೆಯಲಾಗುತ್ತದೆ.