"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday, 19 November 2020

•► 2011ರ ಜನಗಣತಿ ಮತ್ತು ಕರ್ನಾಟಕದಲ್ಲಿ ಲಿಂಗ ತಾರತಮ್ಯದ ಪ್ರಾದೇಶಿಕ ಭಿನ್ನತೆ : ಒಂದು ಅವಲೋಕನ. (An Overview : 2011 Census and the Regional Diversity of Gender Discrimination in Karnataka)

 •► 2011ರ ಜನಗಣತಿ ಮತ್ತು ಕರ್ನಾಟಕದಲ್ಲಿ ಲಿಂಗ ತಾರತಮ್ಯದ ಪ್ರಾದೇಶಿಕ  ಭಿನ್ನತೆ : ಒಂದು ಅವಲೋಕನ.
(An Overview : 2011 Census and the Regional Diversity of Gender Discrimination in Karnataka)
━━━━━━━━━━━━━━━━━━━━━━━━━━━━━━━━━━━━━━━━

ಜನಸಂಖ್ಯೆಯ ಬೆಳವಣಿಗೆಯನ್ನು ಅಳತೆ ಮಾಡುವುದು ಮಾತ್ರ ಅದರ ಕೆಲಸವಲ್ಲ. ಒಂದು ಸಮಾಜವನ್ನು ಅರ್ಥ ಮಾಡಿಕೊಳ್ಳಲು ಅಗತ್ಯವಾದ ಒಳನೋಟಗಳನ್ನು ಅದು ನೀಡುತ್ತಿರುತ್ತದೆ.

ಲಿಂಗ ಸಂಬಂಧಗಳ ಇತಿಮಿತಿಗಳನ್ನು ಅದು ಬಯಲಿಗೆಳೆಯುತ್ತಿರುತ್ತದೆ. ಅದೊಂದು ನೀತಿ-ನಿರ್ದೇಶನ ನೀಡುವ ಸೂಚಿಗಳ ರಾಶಿ.

ನಮ್ಮ ರಾಜ್ಯದ 2011ರ ಜನಗಣತಿಯ ತಾತ್ಪೂರ್ತಿಕ ಮಾಹಿತಿಯನ್ನು ಪ್ರಕಟಿಸಲಾಗಿದೆ. ಲಿಂಗ ಅನುಪಾತ ಮತ್ತು ಅದರಲ್ಲಿನ ಲಿಂಗ ತಾರತಮ್ಯ, ಸಾಕ್ಷರತೆ ಮತ್ತು ಅದಕ್ಕೆ ಸಂಬಂಧಿಸಿದ ಲಿಂಗ ಅಸಮಾನತೆ, ಜನಸಂಖ್ಯೆಯ ಬೆಳವಣಿಗೆಯಲ್ಲಿನ ಪ್ರಾದೇಶಿಕ ಅಸಮತೋಲನ, ಕಾಣೆಯಾದ ಮಹಿಳೆಯರು ಮುಂತಾದ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಲು ಜನಗಣತಿ ವರದಿಯು ನೆರವಾಗುತ್ತದೆ.

• ಕೆಲವು ಸೂಚಿಗಳು :

* ಒಟ್ಟು ಜನಸಂಖ್ಯೆಗೆ ಸಂಬಂಧಿಸಿದಂತೆ ಪ್ರತಿ ಸಾವಿರ ಪುರುಷರಿಗೆ ಎದುರಾಗಿ 2001ರಲ್ಲಿ 965ರಷ್ಟಿದ್ದ ಮಹಿಳೆಯರ ಸಂಖ್ಯೆ 2011ರಲ್ಲಿ 968 ಕ್ಕೇರಿದೆ. ಇದೇನು ಸಮಾಧಾನ ಪಟ್ಟುಕೊಳ್ಳಬಹುದಾದ ಅಥವಾ ಸಾಧನೆಯೆಂದು ಬೀಗಬಹುದಾದ ಸಂಗತಿಯಲ್ಲ.

ಪ್ರತಿ ಸಾವಿರ ಪುರುಷರಿಗೆ ಎದುರಾಗಿ 32 ಮಹಿಳೆಯರು ಕಾಣೆಯಾಗಿದ್ದಾರೆ.

ಇದು ರಾಜ್ಯದ ಜನಸಂಖ್ಯೆಯಲ್ಲಿನ ಮಹಿಳೆಯರ ಕೊರತೆಯನ್ನು ಸೂಚಿಸುತ್ತಿದೆ. ಈ ಕೊರತೆ 2011ರಲ್ಲಿ 9.57 ಲಕ್ಷ.  

* ಕರ್ನಾಟಕದಲ್ಲಿ 0-6 ವಯೋಮಾನದ ಮಕ್ಕಳಲ್ಲಿ ಲಿಂಗ ಅನುಪಾತ 1991ರಲ್ಲಿ  960 ರಷ್ಟಿದ್ದುದು 2001ರಲ್ಲಿ  948ರಷ್ಟಕ್ಕೆ ಮತ್ತು 2011ರಲ್ಲಿ 943ಕ್ಕಿಳಿದಿದೆ.

ಇಲ್ಲಿ  ಪ್ರತಿ ಸಾವಿರ ಗಂಡು ಮಕ್ಕಳಿಗೆ ಕಾಣೆಯಾದ ಹೆಣ್ಣು ಮಕ್ಕಳ ಸಂಖ್ಯೆ 57.

* ರಾಜ್ಯದಲ್ಲಿ ಒಟ್ಟು ಅಕ್ಷರಸ್ಥರ ಸಂಖ್ಯೆ 2011ರಲ್ಲಿ  410.29 ಲಕ್ಷ. ಇದರಲ್ಲಿ ಪುರುಷರ ಪ್ರಮಾಣ ಶೇ 55.59 (228.08 ಲಕ್ಷ)ರಷ್ಟಿದ್ದರೆ ಮಹಿಳೆಯರ ಪ್ರಮಾಣ ಶೇ 44.41(182.21 ಲಕ್ಷ). ಇದು ಲಿಂಗ ತಾರತಮ್ಯದ ಮತ್ತೊಂದು ಸೂಚಿ.

* ನಮ್ಮ ರಾಜ್ಯದಲ್ಲಿ 2011ರಲ್ಲಿ ಮಹಿಳೆಯರ ಸಾಕ್ಷರತೆಯ ಪ್ರಮಾಣ ಶೇ 60 ದಾಟದ ಎಂಟು ಜಿಲ್ಲೆಗಳಿವೆ. ಸಾಕ್ಷರತೆಯಲ್ಲಿ  ಲಿಂಗ ಅಸಮಾನತೆಯು 2001ರಲ್ಲಿ ಶೇ 18.66 ಅಂಶಗಳಷ್ಟಿದ್ದುದು 2011 ಶೇ 15.62 ಅಂಶಗಳಿಗೆ ಇಳಿದಿದೆ. ನಮ್ಮ ರಾಜ್ಯದಲ್ಲಿ  ಸಾಕ್ಷರತೆಯಲ್ಲಿ ಲಿಂಗ ಅಸಮಾನತೆಯು ಶೇ 20 ಅಂಶಗಳು ಮತ್ತು ಅದಕ್ಕಿಂತ ಅಧಿಕ ಬಾಗಲಕೋಟೆ, ವಿಜಾಪುರ, ಕೊಪ್ಪಳ, ರಾಯಚೂರು ಮತ್ತು ಯಾದಗಿರ್ ಜಿಲ್ಲೆಗಳಲ್ಲಿದೆ.

* ನಮ್ಮ ರಾಜ್ಯದಲ್ಲಿ 18 ವರ್ಷಕ್ಕಿಂತ ಮೊದಲೇ ಮದುವೆಯಾಗುವ ಮಹಿಳೆಯರ ಪ್ರಮಾಣ 2007-08ರಲ್ಲಿ ಶೇ 25 ರಷ್ಟಿದೆ. ಆದರೆ ಅಂತಹ ಮಹಿಳೆಯರ ಪ್ರಮಾಣ ಕೊಪ್ಪಳ, ಗುಲಬರ್ಗಾ, ವಿಜಾಪುರ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಶೇ 40ಕ್ಕಿಂತ ಅಧಿಕವಿದೆ.

* ಒಟ್ಟು ಸಂತಾನೋತ್ಪತ್ತಿ ಅಧಿಕವಾಗಿದ್ದರೆ ಅಲ್ಲಿ ಜನಸಂಖ್ಯಾ ಸ್ಫೋಟ ಉಂಟಾಗುತ್ತದೆಯೆಂದು ತಜ್ಞರು ಕಳವಳಪಡುತ್ತಾರೆ. ಮತ್ತೆ ಮತ್ತೆ ಗರ್ಭಿಣಿಯರಾಗುವುದರಿಂದ ಮಹಿಳೆಯರು ಸ್ವಾತಂತ್ರ್ಯದಿಂದ ವಂಚಿತರಾಗುತ್ತಾರೆಂಬುದು ಗಮನಿಸಬೇಕಾದ ಸಂಗತಿಯಾಗಿದೆ.

• ಲಿಂಗ ಅನುಪಾತದಲ್ಲಿ ತಾರತಮ್ಯ

ಪ್ರತಿ ಸಾವಿರ ಪುರುಷರಿಗೆ ಎದುರಿಗೆ ಎಷ್ಟು ಮಹಿಳೆಯರಿದ್ದಾರೆ ಎಂಬುದನ್ನು ಮಾಪನ ಮಾಡುವ ಸೂಚಿಯನ್ನು ಲಿಂಗ ಅನುಪಾತವೆಂದು ಕರೆಯಲಾಗಿದೆ. ಲಿಂಗ ಅನುಪಾತದ ಸಂಖ್ಯೆಯು ಸಾವಿರಕ್ಕಿಂತ ಅಧಿಕವಿರಬೇಕೆಂದು ತಜ್ಞರು ಹೇಳುತ್ತಾರೆ.

ಮಹಿಳೆಯರ ಜೀವನಾಯುಷ್ಯವು ಪುರುಷರ ಜೀವನಾಯುಷ್ಯಕ್ಕಿಂತ ಅಧಿಕವಾಗಿರುತ್ತದೆ. ಯಾವುದೇ ಬಗೆಯ ಪ್ರತಿಕೂಲ ಸಂದರ್ಭದಲ್ಲೂ ಬದುಕುಳಿಯುವ ಸಾಮರ್ಥ್ಯವನ್ನು ಮಹಿಳೆಯರು ಪಡೆದಿರುತ್ತಾರೆ. ಈ ಹಿನ್ನೆಲೆಯಲ್ಲಿ ಜನಸಂಖ್ಯೆಯಲ್ಲಿ ಮಹಿಳೆಯರ ಸಂಖ್ಯೆಯು ಪುರುಷರ ಸಂಖ್ಯೆಗಿಂತ ಹೆಚ್ಚಿರಬೇಕೆಂದು ಅಮರ್ತ್ಯಸೆನ್ ವಾದಿಸುತ್ತಾರೆ.

ಕರ್ನಾಟಕದಲ್ಲಿ ಒಟ್ಟು ಜನಸಂಖ್ಯೆಯ ಲಿಂಗ ಅನುಪಾತವು 2001ರಲ್ಲಿ 965 ರಷ್ಟಿದ್ದುದು 2011ರಲ್ಲಿ 968ಕ್ಕೇರಿದೆ. ಲಿಂಗ ಅನುಪಾತ ಕನಿಷ್ಠ ಸಾವಿರವಿರಬೇಕೆಂದು ಭಾವಿಸಿದರೂ ಕರ್ನಾಟಕದಲ್ಲಿ ಕಾಣೆಯಾದ ಮಹಿಳೆಯರ ಸಂಖ್ಯೆಯು 2011ರಲ್ಲಿ  9.57 ಲಕ್ಷ. ಲಿಂಗ ತಾರತಮ್ಯಕ್ಕೆ ಇವರೆಲ್ಲ ಬಲಿಯಾಗಿದ್ದಾರೆ. ಲಿಂಗ ಅನುಪಾತ 968 ವಾಸ್ತವವಾಗಿ ಜನಸಂಖ್ಯೆಯಲ್ಲಿರುವ ಮಹಿಳೆಯರ ಕೊರತೆಯನ್ನು ತೋರಿಸುತ್ತದೆ.

ಕರ್ನಾಟಕದಲ್ಲಿ ಲಿಂಗ ಅನುಪಾತ 2001ರಲ್ಲಿ ್ಲ ಸಾವಿರಕ್ಕಿಂತ ಅಧಿಕವಿದ್ದ ಮೂರು ಜಿಲ್ಲೆಗಳೆಂದರೆ ದಕ್ಷಿಣ ಕನ್ನಡ, ಉಡುಪಿ ಮತ್ತು ಹಾಸನ. ಈ ಗುಂಪಿಗೆ 2011ರಲ್ಲಿ ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಸೇರಿವೆ. ಈ ಗುಂಪಿನ ಸಂಖ್ಯೆಯು ಅಧಿಕವಾಗಬೇಕು.

• ಮಕ್ಕಳ ಲಿಂಗ ಅನುಪಾತ

ಕರ್ನಾಟಕದಲ್ಲಿ  0-6 ವಯೋಮಾನದ ಮಕ್ಕಳ ಸಂಖ್ಯೆ 1991ರಲ್ಲಿ  74.77 ಲಕ್ಷವಿದ್ದುದು 2001ರಲ್ಲಿ ಅದು 71.82 ಲಕ್ಷಕ್ಕೆ ಇಳಿದಿದೆ. ಅದು ಮತ್ತೆ 2011ರಲ್ಲಿ  68.55 ಲಕ್ಷಕ್ಕೆ ಇಳಿದಿದೆ. ಇದು ನಮ್ಮ ರಾಜ್ಯದಲ್ಲಿ ಒಟ್ಟು ಸಂತಾನೊತ್ಪತ್ತಿಯು ಕಡಿಮೆಯಾಗುತ್ತಿರುವುದನ್ನು ಸೂಚಿಸುತ್ತದೆ. ಆದರೆ ಇದರಲ್ಲಿನ ಲಿಂಗ ತಾರತಮ್ಯವು ಆತಂಕಕಾರಿಯಾಗಿದೆ. ಈ ವಯೋಮಾನದ ಮಕ್ಕಳ ಲಿಂಗ ಅನುಪಾತವು 1991ರಲ್ಲಿ 960ರಷ್ಟಿದ್ದುದು 2001ರಲ್ಲಿ  945ಕ್ಕೆ ಮತ್ತು 2011ರಲ್ಲಿ  ಮತ್ತೆ 943ಕ್ಕಿಳಿದಿದೆ. ಇದಕ್ಕೆ ಮುಖ್ಯವಾದ ಕಾರಣವೆಂದರೆ ಶಿಶು ಮರಣ ಪ್ರಮಾಣ (ಐಎಮ್‌ಆರ್)ದಲ್ಲಿನ ಲಿಂಗ ಅಸಮಾನತೆ. ಇಡೀ ದೇಶದಲ್ಲಿ 2008ರಲ್ಲಿ ಹೆಣ್ಣು ಶಿಶುಗಳ ಮರಣ ಪ್ರಮಾಣ (55) ಗಂಡು ಶಿಶುಗಳ ಮರಣ ಪ್ರಮಾಣಕ್ಕಿಂತ (52) ಅಧಿಕವಿದೆ.  ಕರ್ನಾಟಕದಲ್ಲಿ  ಪ್ರತಿ ಸಾವಿರ ಜೀವಂತ ಜನನಗಳಿಗೆ 2008ರಲ್ಲಿ ಗಂಡು ಶಿಶುಗಳ ಮರಣ ಪ್ರಮಾಣ 42ರಷ್ಟಿದ್ದರೆ ಹೆಣ್ಣು ಶಿಶುಗಳ ಮರಣ ಪ್ರಮಾಣ 45. ಲಿಂಗವನ್ನು ಗರ್ಭದಲ್ಲೇ  ಪತ್ತೆ ಮಾಡುವ ತಂತ್ರಜ್ಞಾನದ ಆವಿಷ್ಕಾರದಿಂದ ಹೆಣ್ಣು ಭ್ರೂಣ ಹತ್ಯೆಯ ಸಮಸ್ಯೆಯು ಉಲ್ಬಣಗೊಳ್ಳುತ್ತಿದೆ. ಈ ಸಂಗತಿಯು ಸಮಾಜದಲ್ಲಿ  ಅನೇಕ ಕೌಟುಂಬಿಕ, ಸಾಮಾಜಿಕ, ಸಾಂಸ್ಕೃತಿಕ ಸಮಸ್ಯೆಗಳನ್ನು ಹುಟ್ಟುಹಾಕಬಹುದು. ಮತ್ತೆ `ಬಹುಪತಿತ್ವ~ ಕ್ಕೆ ಇದು ಕಾರಣವಾಗಿ ಬಿಡಬಹುದು. ಹೆಣ್ಣಿನ ಮೇಲಿನ ಅತ್ಯಾಚಾರಗಳು ಅಧಿಕವಾಗಬಹುದು. ಇದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಈ ತಾರತಮ್ಯವನ್ನು ಸರಿಪಡಿಸಬೇಕೆಂಬುದು 2011ರ ಜನಗಣತಿಯ ಸಂದೇಶವಾಗಿದೆ.

• ಸಾಕ್ಷರತೆಯಲ್ಲಿ  ಲಿಂಗ ಅಸಮತೋಲನ

 ಲಿಂಗ ತಾರತಮ್ಯವೆನ್ನುವುದು ಜಾಗತಿಕವಾದ ಸಂಗತಿಯೆನ್ನುವುದು ಲಿಂಗ ಸಂಬಂಧಿ ಸಾಕ್ಷರತೆಯ ವಿವರಗಳಿಂದ  ತಿಳಿಯುತ್ತದೆ. ಸ್ಕ್ಯಾಂಡಿನೇವಿಯ ದೇಶಗಳನ್ನು ಬಿಟ್ಟರೆ ಪ್ರಪಂಚದ ಯಾವ ದೇಶದಲ್ಲೂ ಮಹಿಳೆಯರ ಸಾಕ್ಷರತೆಯ ಪ್ರಮಾಣ ಪುರುಷರ ಸಾಕ್ಷರತೆಯ ಪ್ರಮಾಣಕ್ಕೆ ಸಮನಾಗಿಲ್ಲ. ಈ ತಾರತಮ್ಯ ಬಂಡವಾಳಶಾಹಿ ದೇಶಗಳಲ್ಲೂ ಇದೆ, ಸಮಾಜವಾದಿ ದೇಶಗಳಲ್ಲೂ ಇದೆ. ಸರ್ವಾಧಿಕಾರಿ ವ್ಯವಸ್ಥೆಯಲ್ಲೂ ಕಂಡು ಬರುತ್ತದೆ. ಸಾಕ್ಷರತೆಯ ಲಿಂಗ ಸಂಬಂಧಿ ವ್ಯಾಪ್ತಿಯು ಸೀಮಿತವಾದುದು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಮಹಿಳೆಯರ ಸಾಕ್ಷರತೆಯು ಪುರುಷರ ಸಾಕ್ಷರತೆಗೆ ಸಮವಾಗಿ ಬಿಟ್ಟರೆ ಲಿಂಗ ತಾರತಮ್ಯವು ನಿವಾರಣೆಯಾಗಿ ಬಿಡುತ್ತದೆಯೇ ಎಂದು ಯಾರೂ ಪ್ರಶ್ನೆ ಕೇಳಬಹುದು. ನಿಜ, ಅದರಿಂದ ತನ್ನಷ್ಟಕ್ಕೆ ತಾನೆ ಲಿಂಗ ಅಸಮಾನತೆಯು ಬಗೆಹರಿದು ಬಿಡುವುದಿಲ್ಲ. ತಮ್ಮ ಸ್ಥಾನಮಾನ ಯಾಕೆ ಕೆಳಮಟ್ಟದಲ್ಲಿದೆ, ತಾವು ಯಾಕೆ ಶೋಷಣೆಗೆ ಒಳಗಾಗಿದ್ದೇವೆ, ನಮ್ಮ ಬದುಕು ಯಾಕೆ ಗಂಡಸರ ಅನುಬಂಧದಂತಿದೆ ಮುಂತಾದ ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಮತ್ತು ಅವುಗಳನ್ನು ಅರ್ಥ ಮಾಡಿಕೊಳ್ಳುವುದು ಶಿಕ್ಷಣದಿಂದ ಮಹಿಳೆಯರಿಗೆ ಸಾಧ್ಯ.

ಕರ್ನಾಟದಲ್ಲಿ ಲಿಂಗ ಸಂಬಂಧಿ ಅಂತರ 2001ರಲ್ಲಿ  ಶೇ19.23 ಅಂಶಗಳಷ್ಟಿದ್ದುದು 2011ರಲ್ಲಿ ಅದು ಶೇ 14.72 ಅಂಶಕ್ಕಿಳಿದಿದೆ. ಆದರೆ ಇದು ರಾಯಚೂರು ಜಿಲ್ಲೆಯಲ್ಲಿ ಶೇ21.79 ಅಂಶಗಳಷ್ಟಿದ್ದರೆ ಕೊಪ್ಪಳ ಜಿಲ್ಲೆಯಲ್ಲಿ ಅದು ಶೇ21.99 ಅಂಶಗಳಷ್ಟಿದೆ. ಯಾದಗೀರ್ ಜಿಲ್ಲೆಯಲ್ಲಿ ಅದು ಶೇ 22.02ರಷ್ಟಿದೆ. ನಮ್ಮ ರಾಜ್ಯದ ಅತ್ಯಂತ ಹಿಂದುಳಿದ ರಾಯಚೂರು ಜಿಲ್ಲೆಯ ಮಹಿಳೆಯರ ಸಾಕ್ಷರತೆಯು 2011ರಲ್ಲಿ ಶೇ 50 ಮೀರಿಲ್ಲ. ಈ ಸಮಸ್ಯೆಯ ನಿವಾರಣೆಗೆ ಜ್ಲ್ಲಿಲಾ ಮಟ್ಟದಲ್ಲಿ  ಪ್ರಜ್ಞಾಪೂರ್ವಕವಾಗಿ ಪ್ರಯತ್ನ ನಡೆಸಬೇಕು.

• ಜನಸಂಖ್ಯೆಯ ಬೆಳವಣಿಗೆ ಮತ್ತು ಸಂತಾನೋತ್ಪತ್ತಿ ಒತ್ತಡ

ಮಹಿಳೆಯರ ಸಾಕ್ಷರತಾ ಪ್ರಮಾಣ ಮತ್ತು ಜನಸಂಖ್ಯೆಯ ಬೆಳವಣಿಗೆ ಪ್ರಮಾಣಗಳ ನಡುವೆ ವಿಲೋಮ ಬಿಂಬಕ ಸಂಬಂಧವಿದೆ. ಕರ್ನಾಟಕದ 26 ಜಿಲ್ಲೆಗಳಲ್ಲಿ 1991-2001ರ ದಶಕದಿಂದ 2001-2011ರ ದಶಕಗಳ ನಡುವೆ ಜನಸಂಖ್ಯಾ ಬೆಳವಣಿಗೆ ಪ್ರಮಾಣ ಕಡಿಮೆಯಾಗಿದೆ. ಆದರೆ ಯಾದಗಿರ್, ಬಳ್ಳಾರಿ ಮತ್ತು ವಿಜಾಪುರ ಜಿಲ್ಲೆಗಳಲ್ಲಿ ಅದು ಅಧಿಕಗೊಂಡಿದೆ. ಬೆಂಗಳೂರು ನಗರ ಜಿಲ್ಲೆಯಲ್ಲೂ ಅದು ಅಧಿಕಗೊಂಡಿದೆ.

ಆದರೆ ಅಲ್ಲಿನ ಕಾರಣ ಬೇರೆ ಇದೆ. ಈ ಮೂರು ಹಿಂದುಳಿದ ಜಿಲ್ಲೆಗಳ ಮಹಿಳೆಯರ ಸಾಕ್ಷರತಾ ಪ್ರಮಾಣ ಕಡಿಮೆ ಇರುವುದಕ್ಕೂ ಮತ್ತು ಅಲ್ಲಿ ಜನಸಂಖ್ಯೆಯ ಬೆಳವಣಿಗೆ ಪ್ರಮಾಣ ಅಧಿಕವಿರುವುದಕ್ಕೂ ನಡುವೆ ಸಂಬಂಧವಿದೆ. ಈ ಜಿಲ್ಲೆಗಳಲ್ಲಿ ಮಹಿಳೆಯರ ಮದುವೆ ವಯಸ್ಸು ಕೆಳಮಟ್ಟದಲ್ಲಿರುವುದರಿಂದ ಮತ್ತು ಮತ್ತೆ ಮತ್ತೆ ಗರ್ಭಿಣಿಯರಾಗಬೇಕಾದ ಒತ್ತಡಕ್ಕೆ ಮಹಿಳೆಯರು ಇಲ್ಲಿ ಒಳಗಾಗುವುದರಿಂದ ಹಿಂದುಳಿದ ಜಿಲ್ಲೆಗಳಲ್ಲಿ ಸಾಕ್ಷರತೆಯ ಲಿಂಗ ಅಸಮಾನತೆ ಪ್ರಮಾಣ ಅಧಿಕವಿದೆ.

ವರಮಾನದ ಆಸ್ಫೋಟಕಾರಿ ವರ್ಧನೆಯಿಂದ ಅಥವಾ ತೀವ್ರಗತಿಯ ಆರ್ಥಿಕ ಅಭಿವೃದ್ಧಿಯಿಂದ ಲಿಂಗ ತಾರತಮ್ಯವನ್ನೆಲ್ಲ ನಿವಾರಣೆ ಮಾಡಿಬಿಡಬಹುದು ಎಂಬ ನಂಬಿಕೆ ವ್ಯಾಪಕವಾಗಿದೆ. ಆದರೆ ಅದು ಹುಸಿ ಎಂಬುದು ಅನೇಕ ಅಧ್ಯಯನಗಳಿಂದ ಸ್ಪಷ್ಟವಾಗಿದೆ. ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ ಮುಂತಾದ ಜಿಲ್ಲೆಗಳ ತಲಾ ವರಮಾನದ ಮಟ್ಟವು ಬಳ್ಳಾರಿ ಜಿಲ್ಲೆಯ ತಲಾ ವರಮಾನದ ಮಟ್ಟಕ್ಕಿಂತ ಬಹಳಷ್ಟು ಕಡಿಮೆ ಇದೆ. ಆದರೆ ಅವು ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸಿವೆ. ಮಹಿಳೆಯರ ಮದುವೆಯ ವಯಸ್ಸು ಅಲ್ಲಿ ಅಧಿಕವಿದೆ. ಅಲ್ಲಿ ಮಹಿಳೆಯರ ಸಾಪೇಕ್ಷ ಸಾಕ್ಷರತೆಯ ಪ್ರಮಾಣ ಬಳ್ಳಾರಿ ಜಿಲ್ಲೆಯಲ್ಲಿರುವುದ್ಕಕಿಂತ ಅಧಿಕವಿದೆ.

• ಜನಗಣತಿ 2011ರ ಸಂದೇಶವೇನು?

ನಮ್ಮ ರಾಜ್ಯದ 2011ರ ಜನಗಣತಿ ಸಂದೇಶ ಸ್ಪಷ್ಟವಾಗಿದೆ. ಲಿಂಗ ತಾರತಮ್ಯವೆನ್ನುವುದು ತನ್ನಷ್ಟಕ್ಕೆ ತಾನೆ ಅಥವಾ ವರಮಾನ ಏರಿಕೆಯಾಗಿ ಬಿಟ್ಟರೆ ನಿವಾರಣೆಯಾಗಿ ಬಿಡುತ್ತದೆ ಎಂಬುದು ಖಚಿತವಾಗಿಲ್ಲ. ಅದನ್ನು ಪ್ರಜ್ಞಾಪೂರ್ವಕವಾಗಿ ನಿರ್ವಹಿಸಬೇಕಾಗಿದೆ. ತಕ್ಷಣ 0-6 ವಯೋಮಾನದ ಮಕ್ಕಳ ಲಿಂಗ ಅನುಪಾತದಲ್ಲಿನ ಕುಸಿತವನ್ನು ತಡೆಯಲು ತೀವ್ರ ಪ್ರಯತ್ನ ನಡೆಸಬೇಕು. ಲಿಂಗವನ್ನು ಹೊಟ್ಟೆಯಲ್ಲಿಯೇ ಪತ್ತೆ ಮಾಡಿ ಹೆಣ್ಣು ಭ್ರೂಣ ಹತ್ಯೆ ಮಾಡುವ ಅಪರಾಧದ ಕಾುದೆಯನ್ನು ಮತ್ತಷ್ಟು ಬಿಗಿಗೊಳಿಸಬೇಕು.

ಲಿಂಗ ತಾರತಮ್ಯದ ಪ್ರ್ರಾದೇಶಿಕ  ಭಿನ್ನತೆಯ ಬಗ್ಗೆ ನಾವು ಹೆಚ್ಚು ಗಮನ ನೀಡುತ್ತಿಲ್ಲ. ಶಿಕ್ಷಣದ ಮಟ್ಟ, ವರಮಾನದ ಮಟ್ಟ, ನಗರೀಕರಣದ ಪ್ರಮಾಣ ಉತ್ತಮವಾಗಿ ಬಿಟ್ಟರೆ ಲಿಂಗ ಅಸಮಾನತೆಯು ನಿವಾರಣೆಯಾಗುವುದಿಲ್ಲ ಎಂಬ ಸಂಗತಿಯನ್ನು ಅಮರ್ತ್ಯಸೆನ್ ತನ್ನ ಅಧ್ಯಯನಗಳಲ್ಲಿ ಮತ್ತೆ ಮತ್ತೆ ಸ್ಪಷ್ಟಪಡಿಸುತ್ತಿದ್ದಾರೆ.  ಈ ಸಮಸ್ಯೆಯನ್ನು ನಾವು ಮೊದಲು ಸಮಸ್ಯೆಯೆಂದು ಗುರುತಿಸಬೇಕು. ಅದರ ಬಗ್ಗೆ ಜನಜಾಗೃತಿಯನ್ನು ಉಂಟು ಮಾಡಬೇಕು. ಈ ಸಮಸ್ಯೆಯ ನಿವಾರಣೆಗೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೇವಲ ಅಂಕಿ-ಅಂಶಗಳ ರಾಶಿಯೆಂದು ನಾವು ಜನಗಣತಿ ವರದಿಗಳನ್ನು ನಿರ್ಲಕ್ಷಿಸುವುದು ಸಲ್ಲ. ಅದು ನಮಗೆ ಅನೇಕ ಸಂದೇಶಗಳನ್ನು ಪ್ರತ್ಯಕ್ಷವಾಗಿ ಮತ್ತು ಅಗೋಚರವಾಗಿ ನೀಡುತ್ತಿರುತ್ತದೆ. ಅದನ್ನು ಅರ್ಥ ಮಾಡಿಕೊಂಡು ನಾವು ಕಾರ್ಯ ಪ್ರವತ್ತರಾಗಬೇಕಾಗುತ್ತದೆ.
(ಕೃಪೆ : ಪ್ರಜಾವಾಣಿ)

No comments:

Post a Comment