"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday, 4 November 2014

★ ಪ್ರಸ್ತುತ ಭಾರತದ ಹಳ್ಳಿಗಳ ಸ್ಥಿತಿಗತಿ - ಆವುಗಳ ಸರ್ವಾಂಗೀಣ ಅಭಿವೃದ್ದಿಗೆ ಇರುವ ಸವಾಲುಗಳು, ಪರಿಹಾರಗಳು.


★ ಪ್ರಸ್ತುತ ಭಾರತದ ಹಳ್ಳಿಗಳ ಸ್ಥಿತಿಗತಿ - ಆವುಗಳ ಸರ್ವಾಂಗೀಣ ಅಭಿವೃದ್ದಿಗೆ ಇರುವ ಸವಾಲುಗಳು,  ಪರಿಹಾರಗಳು.

ಭಾರತ ಹಳ್ಳಿಗಳ ದೇಶ, ಇದಕ್ಕೆ ಇಂಬು ಕೊಡಲೆಂದೇ ಇಂದಿಗೂ ಸುಮಾರು 70 ಕೋಟಿಯಷ್ಟು ಜನರು 6 ಲಕ್ಷಕ್ಕಿಂತ ಹೆಚ್ಚಿನ ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ದೇಶದ ಅಭಿವೃದ್ದಿ ಬಹುವಾಗಿ ಈ ಭಾಗದ ಜನರ ಏಳ್ಗೆಯ ಮೇಲೆ ನಿಂತಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಅಲ್ಲಿನ ಜನರ ಬದುಕನ್ನು ಹೊಳಹೊಕ್ಕಿ ನೋಡಿದಾಗ ಕಂಡುಬರುವುದು ಹಸಿವು, ಬಾಯಾರಿಕೆ, ಕಿತ್ತು ತಿನ್ನುವ ಬಡತನ, ರೋಗ ಬಾಧೆಗಳಿಂದ ಸೊರಗಿದ ದೇಹ, ಮುಂದುವರಿದ ವರ್ಗದವರ ಅಮಾನವೀಯ ಶೋಷಣೆ, ಮತೀಯ ಗಲಭೆಗಳು, ಅವುಗಳಿಂದಲೇ ತಮ್ಮ ಬೇಳೆ ಬೇಯಿಸಿಕೊಳ್ಳುವ ಸಮಾಜಘಾತಕ ಶಕ್ತಿಗಳು, ಭ್ರಷ್ಟ ಅಧಿಕಾರಿಗಳು ಜೊತೆಗೆ ಅವರ ನೆರಳಾಗಿ ನಿಂತಿರುವ ಹೊಲಸು ರಾಜಕೀಯ.

 21 ನೇ ಶತಮಾನದಲ್ಲೂ ಅನಕ್ಷರತೆ, ಅಸ್ಪೃಶ್ಯತೆ, ಅಂಧಕಾರ, ಹಾಗು ಗೊತ್ತು ಗುರಿಯಿಲ್ಲದ ಮೂಢನಂಬಿಕೆಗಳೇ ಮನೆಮಾಡಿವೆ. ಹೀಗಿರುವಾಗ ದೇಶದ ಅಭಿವೃದ್ದಿಯ ಕನಸು ಕಾಣುವುದಾದರೂ ಹೇಗೆ. ಕಳೆದೆರಡು ದಶಕಗಳ ಆರ್ಥಿಕ ಸುದಾರಣೆಯಿಂದ ದೇಶದ ಜನರ ಜೀವನ ಮಟ್ಟ ಗಮನಾರ್ಹ ರೀತಿಯಲ್ಲಿ ಸುದಾರಿಸುತ್ತಿದ್ದರೂ, ಗ್ರಾಮೀಣ ಜನರ ಬದುಕನ್ನು ನಗರವಾಸಿಗಳಿಗೆ ಹೋಲಿಸಿದಾಗ ಚಿಂತಾಜನಕವಾದ ಸ್ಥಿತಿ ಕಂಡು ಬರುವುದು ಸಾಮಾನ್ಯವಾಗಿದೆ.

ಸ್ವಾತಂತ್ರ್ಯ ಬಂದು 65 ವರ್ಷ ಕಳೆದರೂ ಅಲ್ಲಿನ ಬದುಕನ್ನು ಹಸನುಗೊಳಿಸಲು ಸಾಧ್ಯವಾಗದಿರುವುದು ನಮ್ಮನ್ನಾಳಿದ ಜನಪ್ರತಿನಿಧಿಗಳ ಯೋಜನೆಗಳು ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತರುವ ಅಧಿಕಾರಿಗಳ ಕರ್ತವ್ಯ ನಿಷ್ಠೆಯನ್ನು ಪ್ರತಿನಿಧಿಸುತ್ತದೆ. ಈ ನಾಗಾಲೋಟದಿಂದ ಓಡುತ್ತಿರುವ ಆಧುನಿಕ ಯುಗದಲ್ಲೂ ಹಳ್ಳಿಗಳ ಶೇ. ೫೦ ರಷ್ಟು ಮಂದಿ ಕೇವಲ ೨೦-೩೦ ರೂಪಾಯಿಗಳಲ್ಲಿ ತಮ್ಮ ದಿನವನ್ನು ದೂಡುತ್ತಿದ್ದಾರೆ ಎಂದರೆ ಅವರ ಜೀವನ ಮಟ್ಟವನ್ನು ಊಹಿಸಿಕೊಳ್ಳಲು ಕಷ್ಟವಾಗುತ್ತದೆ ಹಾಗೂ ಇದು ಸತ್ಯದ ಸಂಗತಿಯೆಂದು ತಿಳಿದಾಗ ಸಮಾಜದ ನಾಗರೀಕರಿಗೆ ನೋವಾಗುವುದು ಸಹಜ ವಿಚಾರ.

 ದಿನನಿತ್ಯದ ಬವಣೆಯನ್ನು ಎದುರಿಸುವ ಮಾರ್ಗೊಪಾಯಗಳಿಲ್ಲದೆ ಹುಟ್ಟಿ ಬೆಳೆದ ಪರಿಸರವನ್ನು ಬಿಟ್ಟು ಬದುಕುವ ದಾರಿಯನ್ನು ಹುಡುಕಿಕೊಂಡು ನಗರಗಳಿಗೆ ಹಾಗು ಇತರೆ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇವುಗಳನ್ನು ಹತ್ತಿಕ್ಕಲು ಗ್ರಾಮೀಣ ಪ್ರದೇಶಗಳ ಅಗತ್ಯಕ್ಕೆ ಅನುಗುಣವಾಗಿ ಮಾನಸಿಕ, ಭೌತಿಕ, ಮತ್ತು ಆರ್ಥಿಕ ಸಂಪನ್ಮೂಲಗಳನ್ನು ಒದಗಿಸುವುದು ಮತ್ತು ಅವುಗಳನ್ನು ಸಮರ್ಪಕವಾಗಿ ಉಪಯೋಗಿಸುವ ಜವಾಬ್ದಾರಿಯನ್ನು ಬೆಳೆಸಬೇಕಾಗಿದೆ. ಪ್ರಾದೇಶಿಕ ಅಸಮತೋಲನ ಹೋಗಲಾಡಿಸಿ ಗ್ರಾಮೀಣ ಜನರಲ್ಲಿ ಬದುಕುವ ಧೈರ್ಯ ಹಾಗು ಉತ್ಸಾಹ ತುಂಬಿ ಸ್ವಾಭಿಮಾನಿ ಹಾಗು ಸ್ವಾವಲಂಭಿಗಳಾಗಿ ಬದುಕಲು ಆಸರೆಯಾಗಬೇಕಾಗಿದೆ. ಹೀಗಿರುವಾಗ ಇಂದಿನ ಆಡಳಿತರೂಡ ಸರ್ಕಾರಗಳು, ಅಧಿಕಾರಿಗಳು, ಸಂಘ ಸಂಸ್ಥೆಗಳು, ತಂತ್ರಜ್ಞರು, ವಿಜ್ಞಾನಿಗಳು, ಚಿಂತನಶೀಲರು ಹಳ್ಳಿಗಳ ಬೆಳವಣಿಗೆಗೆ ಗಮನ ಹರಿಸಬೇಕಾಗಿರುವುದು ಒಂದು ಮುಖ್ಯ ವಿಚಾರವೇ ಸರಿ.

ಹಸಿರು ಕ್ರಾಂತಿಯು ಹಳ್ಳಿಗಳ ಅಭಿವೃದ್ಧಿಗೆ ಭಾರತದ ಬಹು ದೊಡ್ಡ ಕೊಡುಗೆ. ಇದು ದೇಶ ಆಹಾರ ತಯಾರಿಕೆಯಲ್ಲಿ ಸ್ವಾವಲಂಭಿಯಾಗಿ ನಿಲ್ಲಲು ಮತ್ತು ಗ್ರಾಮೀಣ ಜನರ ಜೀವನ ಮಟ್ಟ ಸುದಾರಿಸಲು ಸ್ವಲ್ಪ ಮಟ್ಟಿಗೆ ಸಹಕಾರಿಯಾಗಿದೆ, ಹಾಗು ಈ ನಿಟ್ಟಿನಲ್ಲಿ ಇತರ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳ ಕಣ್ಣು ತೆರೆಸುವಲ್ಲಿಯೂ ಯಶಸ್ಸನ್ನು ಕಂಡಿದೆ. ಹಾಗಿದ್ದರೂ ದೇಶದಲ್ಲಿ ೬೦ ದಶಲಕ್ಷ ಜನರು ಅತಿ ಮುಖ್ಯ ಜೀವನಾವಶ್ಯಕ ವಸ್ತುಗಳಾದ, ಮನೆ, ಪೌಷ್ಟಿಕಾಂಶ ಆಹಾರ, ಶುಚಿಯಾದ ಕುಡಿಯುವ ನೀರು, ನೈರ್ಮಲೀಕರಣ, ಆರೋಗ್ಯ, ಶಿಕ್ಷಣ, ಮತ್ತು ಉದ್ಯೋಗದಿಂದ ವಂಚಿತರಾಗಿದ್ದಾರೆ. ಹಳ್ಳಿಗಳಲ್ಲಿ ಬಡತನದಿಂದ ಜನರು ತತ್ತರಿಸಿದ್ದಾರೆ. ಗ್ರಾಮೀಣ ಜನರು, ಅದರಲ್ಲಿಯೂ ರೈತರು ಬದುಕಲು ಸಮಾನ ಅವಕಾಶಗಳಿಲ್ಲದೆ ಉಳಿವಿಗಾಗಿ ಹೋರಾಟ ಮಾಡಬೇಕಾದ ಪರಿಸ್ತಿತಿ ಏರ್ಪಟ್ಟಿದೆ. ದೇಶದ ಅನ್ನದಾತನ ಹೊಟ್ಟೆಯೇ ಬೆನ್ನಿಗೊಕ್ಕರೆ ಆಹಾರ ಸಮಸ್ಯೆಯನ್ನು ಬಗೆಹರಿಸುವುದಾದರು ಹೇಗೆ? ಬರುವ ದುಡಿಮೆಯ ಹಣ ದಿನ ನಿತ್ಯದ ಅಗತ್ಯತೆಗಳನ್ನು ಪೂರೈಸಲು ಸಾಕಾಗದೆ ಅವರ ಜೀವನ ಹೈರಾಣಾಗಿದೆ ಮತ್ತು ಅನೇಕ ಭಯಾನಕ ರೋಗ ರುಜಿನಗಳಿಂದ ನಳಲುತ್ತಿದ್ದಾರೆ.

ಶೇಕಡ ೬೦ ರಷ್ಟಿರುವ ಯುವಕರೇ ಭಾರತದ ಅತಿ ದೊಡ್ಡ ಸಂಪನ್ಮೂಲ.ಯುವಕರಿಂದ ಹೇರಳವಾಗಿ ದೊರೆಯುವ ನೈಸರ್ಗಿಕ ಹಾಗು ಇತರ ಸಂಪತ್ತನ್ನು ಬಳಸಿಕೊಂಡು ಶೈಕ್ಷಣಿಕ, ತಾಂತ್ರಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿ ಗ್ರಾಮೀಣ ಭಾರತದ ಶಾಶ್ವತ ಅಭ್ಯುದಯಕ್ಕೆ ಸಹಕಾರಿಯಾಗಬೇಕಿದೆ. ಇಂತಹ ಯೋಜನೆಗಳನ್ನು ಸರ್ಕಾರ ಸಮರೋಪಾದಿಯಲ್ಲಿ ಹಮ್ಮಿಕೊಳ್ಳಬೇಕಾಗಿದೆ. ಸರ್ವರಿಗೂ ಸಮಪಾಲು ಮತ್ತು ಸರ್ವರಿಗೂ ಸಮಬಾಳು ಎನ್ನುವುದು ಬರೀ ಮರೀಚಿಕೆಯಾಗಿದೆ.

ಪಾಶ್ಚಿಮಾತ್ಯ ದೇಶಗಳಲ್ಲಿರುವ ಹಾಗೆ ಹಳ್ಳಿ ಮತ್ತು ನಗರಗಳ ಮೂಲ ವ್ಯವಸ್ಥೆಗಳಲ್ಲಿನ ತಾರತಮ್ಯ ಹೋಗಲಾಡಿಸಿ, ಅಶಕ್ತರಿಗೆ (ಜಾತಿ ಧರ್ಮಗಳನ್ನು ಪರಿಗಣಿಸದೆ) ಜೀವನಾಗತ್ಯ ವಸ್ತುಗಳನ್ನು ದೊರಕಿಸಿಕೊಡಬೇಕು. ಅಧಿಕಾರಿಗಳ ಹಾಗು ಮೇಲ್ವರ್ಗದವರ ದುರಾಚಾರ, ದಬ್ಬಾಳಿಕೆ ಕೊನೆಗಾಣಬೇಕು. ಸರ್ಕಾರದಿಂದ ದೊರಕಬೇಕಾದ ಸಣ್ಣ ಪುಟ್ಟ ಕೆಲಸಗಳಿಗೂ ಲಂಚ ಕೊಟ್ಟು ಕೈಚಾಚಿ ನಿಲ್ಲುವುದು ದೂರವಾಗಬೇಕು.

ರೈತರು ದೇಶದ ಬೆನ್ನೆಲುಬು ಎನ್ನುವ ಸರ್ಕಾರಗಳೇ ಇತ್ತೀಚಿನ ದಿನಗಳಲ್ಲಿ ಅವನ ಬೆನ್ನೆಲುಬು ಮುರಿಯುತ್ತಿರುವುದನ್ನು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿವೆ. ತನ್ನ ಬೆನ್ನೆಲುಬನ್ನು ಮುರಿದುಕೊಂದವನಿಗೆ ಇನ್ನಾರದೋ ಬೆನ್ನೆಲುಬಾಗಿ ನಿಲ್ಲುವ ಶಕ್ತಿಯು ಬರುವುದಾದರೂ ಹೇಗೆ? ಸರ್ಕಾರಿ ನೌಕರರಿಗಿರುವಂತೆ ಅವನಿಗೂ ವೇತನ ಆಯೋಗವೇಕಿರಬಾರದು? ಪ್ರಜಾಪ್ರಭುತ್ವ ದೇಶದಲ್ಲಿ ಇರಬೇಕಾದ ಸ್ಥಿತಿಗತಿಗಳು ನಿಜವಾಗಿಯೂ ನಮ್ಮ ಹಳ್ಳಿಗಳಲ್ಲಿ ಇದೆಯೇ?

★ ಆರೋಗ್ಯ:
ಗ್ರಾಮೀಣ ಜನರ ಆರೋಗ್ಯ ಸ್ಥಿತಿ ಚಿಂತಾಜನಕ. ಇದಕ್ಕೆ ಕಾರಗಳು ಅನೆಕ, ಬಡತನ, ಮನೆಯ ಸುತ್ತಲಿರುವ ಅವರೇ ನಿರ್ಮಿಸಿಕೊಂಡ ಪರಿಸರ, ಅವರಲ್ಲಿರುವ ಮೂಡನಂಭಿಕೆ, ಅನಕ್ಷರತೆ, ಆರೋಗ್ಯದ ಬಗ್ಗೆ ಕೊಡುವ ನಿರ್ಲಕ್ಷ್ಯ, ಹಾಗು ಸೂಕ್ತ ಕಾಲದಲ್ಲಿ ಸಿಗದಿರುವ ಆರೋಗ್ಯ ಸೇವೆ ಮುಖ್ಯವಾದವು. ದೇಶದಲ್ಲಿ ಭೀಕರ ಕಾಯಿಲೆಗಳಿಂದ ಮೃತಪಟ್ಟವರಲ್ಲಿ ಸುಮಾರು ೮೦ ರಷ್ಟು ಜನರು ಗ್ರಾಮೀಣ ಭಾಗದ ಅತೀ ಕಡು ಬಡವರಾಗಿದ್ದಾರೆ. ಕೆಮ್ಮು, ದಢಾರ, ಕ್ಷಯ, ಕಾಲರ, ಮಲೇರಿಯಾ, ನ್ಯುಮೋನಿಯಾ ಮುಂತಾದ ರೋಗಗಳನ್ನು ಅಗತ್ಯ ಶುಚಿತ್ವ ಕಾಪಾಡುವುದರಿಂದಲೂ ಮತ್ತು ರೋಗ ಉಲ್ಬಣ ಗೊಳ್ಳಲು ಅವಕಾಶ ಕೊಡದೆ ಅಗತ್ಯ ಔಷಧಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳುವುದರಿಂದಲೂ ತಡೆಗಟ್ಟಬಹುದು. ವೈದ್ಯರು, ಆರೋಗ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರದ ಅನೇಕ ಆರೋಗ್ಯ ಯೋಜನೆಗಳು ಗ್ರಾಮೀಣ ಪ್ರದೇಶಗಳಿಗೆ ತಲುಪಲು ವಿಪಲವಾಗಿದೆ.

• ನಿಯಮಿತ ಪೌಷ್ಟಿಕ ಆಹಾರ ಹಾಗು ವ್ಯಾಯಾಮಗಳ ಅಗತ್ಯತೆ ಬಗ್ಗೆ ಗಮನ
• ಎಲ್ಲ ಹಳ್ಳಿಗಳಿಗೂ ಆರೋಗ್ಯ ಕೇಂದ್ರ ಮತ್ತು ಅಗತ್ಯ ಸೇವೆಗಳ ಲಬ್ಯತೆ
• ಹೋಬಳಿ ಮತ್ತು ತಾಲ್ಲೂಕು ಮಟ್ಟದಲ್ಲಿ ಸುಸಜ್ಜಿತ ಆಸ್ಪತ್ರೆಗಳಿರಬೇಕು
• ಮಹಿಳೆಯರು ಹಾಗು ಮಕ್ಕಳು ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಅಗತ್ಯ ಸೇವೆ
• ಆರೋಗ್ಯ ವಿಮೆಯನ್ನು ವಿನಾಯಿತಿ ದರದಲ್ಲಿ ದೊರಕಿಸಿಕೊಡಬೇಕು
• ಏಡ್ಸ್ ನಂತಹ ಭಯಾನಕ ರೋಗಗಳ ಬಗ್ಗೆ ಮಾಹಿತಿ
• ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು
• ಅಶುಚಿತ್ವದಿಂದ ತಗಲುವ ಸೋಂಕು ರೋಗಗಳ ಬಗ್ಗೆ ಎಚ್ಚರಿಕೆ
• ಧೂಮಪಾನ, ಮದ್ಯಪಾನಗಳಂತಹ ಕೆಟ್ಟ ಚಟಗಳು ಮತ್ತು ಅವುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅಗತ್ಯ ಮಾಹಿತಿ

★ ವಸತಿ :
ಹಳ್ಳಿಗಳಲ್ಲಿ ಶೇಕಡ ೨೦ ರಷ್ಟು ಜನರು ಈಗಲೂ ಗುಡಿಸಲು ಹಾಗು ಜೋಪಡಿಗಳಲ್ಲಿ ವಾಸಿಸುತ್ತಿದ್ದಾರೆ. ಇನ್ನಷ್ಟು ಮಂದಿಗೆ ಮನೆಗಳಿದ್ದರೆ ಅವು ನೆಪಮಾತ್ರಕ್ಕೆ, ಮಳೆಗಾಲದಲ್ಲಿ ಅವುಗಳ ಸ್ಥಿತಿ ದೇವರಿಗೆ ತೃಪ್ತಿಯಾಗಬೇಕು. ಮಳೆಗಾಲ ಕಳೆದು ಬದುಕುಳಿದರೆ ಸಾಕು ಎನ್ನುವ ಜೀವ ಭಯದಲ್ಲಿ ದಿನಗಳನ್ನು ಕಳೆಯಬೇಕಾಗಿದೆ. ಸರ್ಕಾರಗಳು ಪ್ರತಿ ವರ್ಷ ಗೃಹ ಯೋಜನೆಯಡಿಯಲ್ಲಿ ಅನೇಕ ಮನೆಗಳನ್ನು ನಿರ್ಮಿಸಿಕೊಡುತ್ತಿವೆಯಾದರೂ , ಕಳಪೆ ಮಟ್ಟದ ಕಾಮಗಾರಿಗಳಿಂದ ಉದ್ಗಾಟನೆಗೆ ಮುಂಚೆಯೇ ಅವುಗಳಲ್ಲಿ ಅರ್ಧ ಮನೆಗಳು ಅಂತ್ಯ ಕಾಣುತ್ತವೆ ಇನ್ನುಳಿದ ಮನೆಗಳಲ್ಲಿ ವಾಸಿಸುವವರು ತಮ್ಮ ಜೀವವನ್ನು ಕೈಯಲ್ಲಿಡಿದು ಯಾವಾಗಲೂ ಜೀವ ಭಯದಲ್ಲಿ ದಿನ ಕಳೆಯಬೇಕಾದ ಭಾಗ್ಯ ಪಡೆಯುತ್ತಾರೆ.
• ಪ್ರತಿಯೊಂದು ಕುಟುಂಬಕ್ಕೂ ಮನೆಗಳನ್ನು ನಿರ್ಮಿಸಿಕೊಡಬೇಕು
• ಅವುಗಳ ಗುಣಮಟ್ಟದಲ್ಲಿ ಯಾವುದೇ ರೀತಿಯ ಲೋಪವಿರಬಾರದು
• ಅವುಗಳಿಗೆ ಶೌಚಾಲಯ ಸ್ನಾನಗೃಹ, ಗಾಳಿ ಮತ್ತು ಬೆಳಕಿನ ವ್ಯವಸ್ಥೆಯಿರಬೇಕು

★ ಪರಿಶುದ್ಧ ನೀರು :
ಭಾರತದ ಬಹುತೇಕ ರಾಜ್ಯಗಳಲ್ಲಿ ನೀರಿನ ಸಮಸ್ಯೆ ಇದೆ, ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು ಸಿಗುವುದೇ ದುರ್ಲಭವಾಗಿದೆ. ಉತ್ತರದಲ್ಲಿ ಸಮಸ್ಯೆ ಅಷ್ಟಿಲ್ಲದಿದ್ದರೂ, ದೊರೆಯುವ ನೀರು ಕಲುಷಿತವಾಗಿರುತ್ತದೆ. ಇನ್ನು ದಕ್ಷಿಣ ರಾಜ್ಯಗಳಲ್ಲಿ ಎಷ್ಟೋ ಗ್ರಾಮಗಳಲ್ಲಿ ೨-೩ ದಿನಗಳಿಗೊಮ್ಮೆ ಕುಡಿಯುವ ನೀರು ಬರುವುದು ಸಾಮಾನ್ಯ. ಕೆಲವು ಪ್ರದೇಶಗಳಲ್ಲಿ ವಾರಕ್ಕೊಮ್ಮೆಯೂ ಕುಡಿಯುವ ನೀರು ಲಭ್ಯವಿರುವುದಿಲ್ಲ. ಹಾಗೊಮ್ಮೆ ನೀರು ಬಂದರೂ ಕುಡಿಯಲು ಯೋಗ್ಯವಿರುವುದಿಲ್ಲ.

 ದಿನಂಪ್ರತಿ ಎಲ್ಲಾದರೂ ಒಂದು ಕಡೆ ಕಲುಷಿತ ನೀರು ಸೇವಿಸಿ ಶಾಲಾಮಕ್ಕಳು, ಗ್ರಾಮೀಣ ಪ್ರದೇಶದವರು ಅಥವಾ ಸಾಮನ್ಯ ನಾಗರಿಕರು ಅಸ್ವಸ್ಥ ಎನ್ನುವ ಸುದ್ದಿಯನ್ನು ದಿನಪತ್ರಿಕೆಗೆಳಲ್ಲಿ ನೋಡುತ್ತಿದ್ದೇವೆ. ಕುಡಿಯುವ ನೀರನ್ನೇ ಪೂರೈಸಲಾಗದಿದ್ದರೆ ಇತರ ಕೆಲಸಗಳಿಗೆ ನೀರನ್ನು ಒದಗಿಸುವುದಾದರು ಹೇಗೆ ಎನ್ನುವ ಸಮಸ್ಯೆ ಇದೆ. ನೀರಿನ ಸಮಸ್ಯೆ ತಲೆದೋರಿದರೆ ಶುಚಿತ್ವ ಕಾಪಾಡುವುದು ಕಷ್ಟದ ಕೆಲಸ. ಶುಚಿತ್ವ ಇಲ್ಲದಿದ್ದರೆ ಅನೇಕ ಭೀಕರ ಸಾಂಕ್ರಾಮಿಕ ರೋಗಗಳಿಗೆ ಜನರು ತುತ್ತಾಗುತ್ತಾರೆ. ಇದು ಒಂದು ಕಡೆ ತಲೆದೋರಿದರೆ ಬಹು ಬೇಗ ದೇಶವ್ಯಾಪಿಯಗುತ್ತದೆ.

ಮಹತ್ತರ ಯೋಜನೆಗಳನ್ನು ರೂಪಿಸಿ ಉತ್ತರದ ಗಂಗಾ ಯಮುನಾ ನದಿಗಳನ್ನು ದಕ್ಷಿಣದ ನದಿಗಳೊಂದಿಗೆ ಜೋಡಿಸಿದರೆ ಅನೇಕ ರಾಜ್ಯಗಳ ನೀರಿನ ಸಮಸ್ಯೆಯನ್ನು ಬಗೆಹರಿಸಬಹುದು. ಜನರ ಅಗತ್ಯಕ್ಕೆ ತಕ್ಕಂತೆ ಪ್ರತಿ ಹಳ್ಳಿಗಳಿಗೂ ಶುದ್ಧ ನೀರು ದೊರಕಿಸಿಕೊಡುವ ಪ್ರಮುಖ ಕೆಲಸ ಶೀಘ್ರವಾಗಿ ಆಗಬೇಕಾಗಿದೆ.

★ ನೈರ್ಮಲೀಕರಣ:
ಭಾರತದ ಹಳ್ಳಿಗಳ ನೈರ್ಮಲೀಕರಣದ ಬಗೆಗೆ ಹೇಳಲು ಹೊರಟರೆ ಮನಸ್ಸಿಗೆ ಬೇಸರವಾಗುವುದು ಸಹಜ. ಅಲ್ಲಿನ ಜನರು ಬದುಕುತ್ತಿರುವ ವಾತಾವರಣದಲ್ಲಿ ಬಹುಷಃ ಪ್ರಾಣಿಗಳು ಇರಲು ಹೇಸಿಗೆಪಡಬಹುದೇನೂ . ಗ್ರಾಮೀಣ ಪ್ರದೇಶಗಳು ತಿಪ್ಪೆಗಳಾಗಿವೆ. ಎಲ್ಲೆಂದರಲ್ಲಿ ಕಸ ಕಡ್ಡಿಗಳು, ಮನೆಯ ಸುತ್ತಮುತ್ತ ಕೊಳೆತು ನಾರುವ ವಸ್ತುಗಳು, ಎಷ್ಟೋ ಹಳ್ಳಿಗಳಲ್ಲಿ ಕನಿಷ್ಠ ಚರಂಡಿಗಳ ವ್ಯವಸ್ಥೆಯೇ ಇಲ್ಲದಿರುವುದು ಕಂಡುಬರುವ ವಿಚಾರ. ಸ್ನಾನಗೃಹವಾಗಲಿ, ಶೌಚಾಲಯಗಳಾಗಲಿ ಹಳ್ಳಿಗಳಲ್ಲಿ ಇರುವುದು ದುರ್ಲಬವೆ ಸರಿ. ಹೀಗಿರುವಾಗ ಅವರ ಆರೋಗ್ಯದ ಪರಿಸ್ತಿತಿಯಾದರು ಏನು, ಅಲ್ಲಿ ಹುಟ್ಟುವ ಮಕ್ಕಳು ಭೂಮಿಗೆ ಬರುವಾಗಲೇ ಅದೆಷ್ಟು ರೋಗಗಳನ್ನು ಹೊತ್ತು ತರುವುದಿಲ್ಲ. ಮುಂದೆ ಅವರ ಬದುಕು ಹಸನಗೊಳ್ಳುವುದಾದರು ಹೇಗೆ. ಇದನ್ನೆಲ್ಲಾ ನೋಡಿದರೆ ದೇಶದ ಬೆಳವಣಿಗೆ ಯಾವ ದಿಕ್ಕಿನಲ್ಲಿದೆ ಎಂಬ ಅರಿವಾಗುತ್ತದೆ.

• ನಗರದ ಮೂಲ ಸೌಲಭ್ಯಗಳು ಹಳ್ಳಿಗಳಿಗೂ ದೊರೆಯಬೇಕು
• ಎಲ್ಲ ಮನೆಗಳಿಗೂ ಶೌಚಾಲಯ ಮತ್ತು ಸ್ನಾನಗೃಹಗಳಿಗೆ ಅವಕಾಶ
• ಸಾರ್ವಜನಿಕ ಪ್ರದೇಶಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಬೇಕು
• ಜನರಲ್ಲಿ ಶುಚಿತ್ವದ ಬಗೆಗೆ ಕಾಳಜಿ ರೂಪಿಸಬೇಕು

★ ಶಿಕ್ಷಣ :
ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣಕ್ಕೆ ಅತ್ಯಂತ ಹೆಚ್ಚಿನ ಪ್ರೋತ್ಸಾಹ ಸಿಗಬೇಕು. ಅಲ್ಲಿ ವಿದ್ಯಾಭ್ಯಾಸ ಎನ್ನುವುದು ಕೇವಲ ಉದ್ಯೋಗಕ್ಕಾಗಿ ಎನ್ನುವ ನಂಬಿಕೆಯಿದೆ. ನಮ್ಮ ಮಕ್ಕಳು ಕಲಿತು ಯಾವ ಅಧಿಕಾರಿ ಹಾಗಬೇಕು ಅಥವಾ ರಾಜ್ಯಭಾರ ಮಾಡಬೇಕು ಎನ್ನುವ ಅನಿಸಿಕೆಯನ್ನು ವ್ಯಕ್ತಪಡಿಸುವ ಪೋಷಕರು ಹಾಗು ತಂದೆ ತಾಯಿಗಳೇ ಸಾಮಾನ್ಯವಾಗಿ ಕಾಣಸಿಗುತ್ತಾರೆ. ಇದಕ್ಕೆ ಬಹುಮಟ್ಟಿನ ಕಾರಣ ಅವರ ಶೈಕ್ಷಣಿಕ, ಸಾಮಾಜಿಕ, ಹಾಗು ಕೌಟುಂಬಿಕ ಹಿನ್ನೆಲೆ, ಇದರ ಜೊತೆಗೆ ಇಲ್ಲಿಯವರೆಗೂ ಅಧಿಕಾರ ನಡೆಸಿದವರು ಮತ್ತು ಅವರ ಚಿಂತನೆಗಳೂ ಸಹ.

ಗ್ರಾಮೀಣ ಜನರಿಗೆ ದಿನನಿತ್ಯದ ಬದುಕಿಗೆ ಸಹಕಾರಿಯಾಗುವ, ಪ್ರಪಂಚದ ಹಾಗು ಹೋಗುಗಳನ್ನು ಅರಿಯುವ, ಹಾಗು ಶಾಂತಿ ಮತ್ತು ಸಹಬಾಳ್ವೆಯನ್ನು ಪ್ರತಿನಿಧಿಸುವ ಶಿಕ್ಷಣ ಅಗತ್ಯವಾಗಿ ದೊರೆಯಬೇಕು. ವಿದ್ಯೆಯಿಂದ ತಮ್ಮ ಮೂಲಭೂತ ಹಕ್ಕುಗಳನ್ನು ಮತ್ತು ಜವಾಬ್ದಾರಿಗಳನ್ನು ಅರಿತು ಸರ್ಕಾರ ಹಾಗು ಇತರ ಸಂಘ ಸಂಸ್ಥೆಗಳಿಂದ ದೊರೆಯುವ ಅನುಕೂಲಗಳನ್ನು ಸದುಪಯೋಗಪಡಿಸಿಕೊಳ್ಳುವುದರ ಜೊತೆಗೆ ತಮ್ಮ ಸ್ವಂತ ಹಾಗು ಸುತ್ತಮುತ್ತಲಿರುವವರ ಆರೋಗ್ಯದ ಬಗೆಗೆ ಕಾಳಜಿ ವಹಿಸಲು, ಪರಿಸರವನ್ನು ಶುಚಿಯಾಗಿಡಲು ದಾರಿಯಾಗುತ್ತದೆ.

ತಂದೆ ತಾಯಂದಿರು ಹಾಗು ಮನೆಯ ಹಿರಿಯರು ವಿದ್ಯಾವಂತರಾದರೆ ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಲು ಅನುವಾಗುವುದಷ್ಟೇ ಅಲ್ಲದೆ ಅವರ ವ್ಯಕ್ತಿತ್ವ ವಿಕಸನದ ಜೊತೆಗೆ ಇಡೀ ಪ್ರದೇಶದ ಅಬಿವೃದ್ದಿಗೆ ನಾಂದಿಯಾಗುತ್ತದೆ. ಮಕ್ಕಳಿಗೆ ಮನೆಯಲ್ಲಿ ತಾಯಿಯ ಜೋಗುಳದಿಂದ ಪ್ರಾರಂಭವಾಗುವ ಶಿಕ್ಷಣ, ಅಷ್ಟೇ ಪ್ರೀತಿ ವಾತ್ಸಲ್ಯದಿಂದ ಪ್ರೌಢಾವಸ್ಥೆಯವರೆಗೂ ದೊರಕಬೇಕು. ಶಿಕ್ಷಣದಿಂದ ಅವರಲ್ಲಿ ಚಿಂತನಾ ಶಕ್ತಿ ವೃದ್ದಿಸುವುದರ ಜೊತೆಗೆ, ಜೀವನದ ಗುರಿ ಮುಟ್ಟಲು, ಮತ್ತು ಅದರಿಂದ ಬಾಳನ್ನು ಬೆಳಕಾಗಿಸಿಕೊಳ್ಳಲು ಸಹಕಾರಿಯಾಗುವುದು. ಆದುದರಿಂದ ಸಮಾಜದ ಸರ್ವಾಂಗೀಣ ಬೆಳವಣಿಗೆಗೆ ಶಿಕ್ಷಣ ಬಹು ಮುಖ್ಯ ಎನ್ನುವುದನ್ನು ಪ್ರತಿಯೊಬ್ಬರಿಗೂ ಮನದಟ್ಟು ಮಾಡಿಸಿ ಅವರನ್ನು ಶಿಕ್ಷಣದ ದಾರಿಗೆ ಕರೆತರುವ ಕೆಲಸವಾಗಬೇಕು.

• ಎಲ್ಲ ಹಳ್ಳಿಗಳಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡುವ ಶಾಲೆಗಳಿರಬೇಕು
• ಶಿಕ್ಷಕರಲ್ಲಿ ಪ್ರೀತಿ ವಾತ್ಸಲ್ಯದಿಂದ ಕೂಡಿದ ಕರ್ತವ್ಯ ನಿಷ್ಠೆಯಿರಬೇಕು
• ಶಿಕ್ಷಕರು ಮಕ್ಕಳ ಪ್ರತಿಭೆಗೆ, ಅಭಿರುಚಿಗೆ ಅನುಸಾರ ಪಾಠ ಪ್ರವಚನಗಳನ್ನು ಹೇಳಿಕೊಡಬೇಕು
• ಮಕ್ಕಳಿಗೆ ಸಾಂಸ್ಕೃತಿಕ ಮತ್ತು ಅಟೋಟಗಳ ಬಗ್ಗೆ ಲಕ್ಷ್ಯ ಬೆಳೆಸಬೇಕು
• ವಯಸ್ಕರಿಗೆ ಅಗತ್ಯವಾದ ಶಿಕ್ಷಣ ದೊರೆಯಬೇಕು
• ಹಳ್ಳಿಗಳಲ್ಲಿ ವೃತ್ತಿಶಿಕ್ಷಣ ಕಾಲೇಜುಗಳನ್ನು, ವಿಶ್ವವಿದ್ಯಾಲಯಗಳನ್ನು ತೆರೆಯಬೇಕು ಇದರಿಂದ ದ್ವಿಮುಖ ವಲಸೆಗೆ ಅನುಕೂಲವಾಗುತ್ತದೆ

★ ವ್ಯವಸಾಯ :
ಗ್ರಾಮೀಣ ಜನರ ಬದುಕು ಮುಖ್ಯವಾಗಿ ಕೃಷಿಯನ್ನವಲಂಬಿಸಿದೆ. ದಕ್ಷಿಣ ಭಾಗದಲ್ಲಿ ಹೆಚ್ಚಿನವರು ಮಳೆಯಾದಾರಿತ ಬೆಸಾಯವನ್ನವಲಂಬಿಸಿದ್ದರೆ, ಉತ್ತರದಲ್ಲಿ ನೀರಾವರಿಯುಕ್ತ ಕೃಷಿ ಮುಖ್ಯವಾಗಿದೆ. ಹವಾಮಾನ ಹಾಗು ದೊರೆಯುವ ಸೌಲಭ್ಯಗಳಿಗನುಗುಣವಾಗಿ ವಿವಿಧ ರೀತಿಯ ಆಹಾರ (ಭತ್ತ, ರಾಗಿ, ಜೋಳ, ಗೋದಿ, ಇತ್ಯಾದಿ) ಮತ್ತು ಹಣಕಾಸಿನ (ಕಾಫಿ, ಟೀ, ನೆಲಗಡಲೆ, ಸೂರ್ಯಕಾಂತಿ, ಕಬ್ಬು, ಮಸಾಲ ಪದಾರ್ಥಗಳು) ಬೆಳೆಗಳನ್ನು ಹಾಗು ಅನೇಕ ಹಣ್ಣುಗಳನ್ನು ಬೆಳೆಯುತ್ತಾರೆ.

ಪುರಾತನ ವ್ಯವಸಾಯ ಪದ್ಧತಿಗಳು ಮತ್ತು ಚೆಲ್ಲಾಟವಾಡುವ ಮಳೆಯನ್ನು ನಂಬಿದ ಕೃಷಿಕರು, ಕಾಲಕ್ಕೆ ಸರಿಯಾಗಿ ಬಿತ್ತನೆ ಅಥವಾ ನಾಟಿ ಮಾಡದೆ, ಅಥವಾ ನಂತರ ಕೈಕೊಡುವ ಮಳೆಯಿಂದ ಹಾಗು ಬಿತ್ತಿದ ಬೆಳೆ ಅನೇಕ ರೋಗಗಳಿಗೆ ತುತ್ತಾಗುವುದರಿಂದ, ಜೊತೆಗೆ ಕೊನೆಯಲ್ಲಿ ಕಾಡು ಪ್ರಾಣಿ ಪಕ್ಷಿಗಳಿಗೆ ಈಡಾಗುವುದರಿಂದ ಬೆಳೆ ನಾಶವಾಗಿ ಸಾಲ ಮಾಡಿ ಹಾಕಿದ ಬೀಜ ಗೊಬ್ಬರ ಮತ್ತು ಪಟ್ಟ ಶ್ರಮ ಎಲ್ಲವೂ ವ್ಯರ್ಥವಾಗಿ ಕೈ ಚೆಲ್ಲಿ ಕುಳಿತುಕೊಳ್ಳುವ ಸಂದಿಗ್ದತೆ ಎದುರಾಗುತ್ತದೆ. ಉತ್ತರ ಭಾರತದ ರೈತರು ಮಳೆಯಾದಾರಿತ ವ್ಯವಸಾಯವನ್ನು ಅವಲಂಬಿಸಿಲ್ಲವಾದರೂ, ಅತಿವೃಷ್ಟಿ ಹಾಗು ಅನಾವೃಷ್ಟಿ ಹಾಗು ಇತರ ಸಮಸ್ಯೆಗಳು ಇದ್ದೆ ಇರುತ್ತವೆ. ಇಂತಹ ಕ್ಲಿಷ್ಟ ಪರಿಸ್ತಿತಿಗಳು ಪುನರಾವರ್ತನೆಯಾದಾಗ, ತೀರಿಸಲಾಗದಷ್ಟು ಮಾಡಿದ ಸಾಲಗಳು ಚಿಂತೆಗೆ ತಳ್ಳುವುದರ ಜೊತೆಗೆ , ಹಸಿವು, ಆರೋಗ್ಯವಿಲ್ಲದ ಜೀವನ ಅವರದ್ದಾಗುತ್ತದೆ. ಬೀಜ, ರಸಗೊಬ್ಬರ, ವ್ಯವಸಾಯೋತ್ಪನ್ನಗಳು ಹಾಗು ವೈಜ್ಞಾನಿಕ ಯಂತ್ರೋಪಕರಣಗಳ ಮೇಲೆ ಸರ್ಕಾರವು ಕೊಡುವ ತೆರಿಗೆ ವಿನಾಯಿತಿಗಳು ಸಣ್ಣ ಹಾಗು ಅತಿ ಸಣ್ಣ ಹಿಡುವಳಿ ರೈತರಿಗೆ ತಲುಪುವ ಬದಲು, ಯಾವುದೊ ಕಂಪನಿಯ ಅಥವಾ ಎಜೆಂಟುಗಳ ಸ್ವಾರ್ಥಕ್ಕಾಗುತ್ತವೆ.

 ಕಳೆದ ವರ್ಷಗಳಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಹಾಗು ಕೇರಳ ರಾಜ್ಯಗಳಲ್ಲಿ ತಮ್ಮ ಅವಸ್ಥೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವುದು ಕಂಡು ಬಂದಿರುವ ವಿಚಾರ. ಕಷ್ಟಕಾಲದಲ್ಲಿ ರೈತರಿಗೆ ಮಾನಸಿಕವಾಗಿ ಹಾಗು ಆರ್ಥಿಕವಾಗಿ ಸಹಾಯ ದೊರಕಿಸಿಕೊಡಲು ಸರ್ಕಾರ ಹಾಗು ಸಂಘ ಸಂಸ್ಥೆಗಳು ಶ್ರಮಿಸಬೇಕು.

• ನೀರನ್ನು ಶೇಕರಿಸಿಡುವುದು, ಇದಕ್ಕಾಗಿ ಸಣ್ಣ ಕೆರೆಗಳನ್ನು ಇಂಗು ಗುಂಡಿಗಳನ್ನು ನಿರ್ಮಿಸುವುದು
• ಹೆಚ್ಚಿನ ಮಳೆಯ ನೀರು ಪೋಲಾಗದೆ ಹಣೆಕಟ್ಟುಗಳನ್ನೂ ಕಟ್ಟಿ ನೀರನ್ನು ಶೇಕರಿಸಿ ವ್ಯವಸಾಯಕ್ಕೆ ಬಳಸಿಕೊಳ್ಳಲು ಸಹಕರಿಸುವುದು
• ಮಣ್ಣನ್ನು ಪಳವತ್ತುಗೊಳಿಸಲು ಅಗತ್ಯ ಮಾರ್ಗದರ್ಶನ
• ನೈಸರ್ಗಿಕ ಹಾಗು ಜೈವಿಕ ಗೊಬ್ಬರಗಳನ್ನು ಉಪಯೋಗಿಸಲು ಉತ್ತೇಜನ
• ವೈಜ್ಞಾನಿಕ ಪದ್ಧತಿ ಅಳವಡಿಕೆ ಹಾಗು ಯಂತ್ರೋಪಕರಣಗಳ ಬಳಕೆ
• ಅವರ ವೃತ್ತಿಗೆ ಅಗತ್ಯವಾದ ಮಾಹಿತಿ ಒದಗಿಸುವುದು
• ಉತ್ತಮ ಗುಣಮಟ್ಟದ ಬೀಜಗಳನ್ನು ನೀಡುವುದು
• ಹವಾಮಾನಕ್ಕನುಗುಣವಾಗಿ ಆಹಾರ ಮತ್ತು ಆರ್ಥಿಕ ಬೆಳೆ ಬೆಳೆಯಲು ಅವಕಾಶ ಕಲ್ಪಿಸುವುದು
• ಸಾಂಪ್ರದಾಯಿಕ ನಾಟಿ ಬೆಳೆಗಳ ಜೊತೆಗೆ ಮಿಶ್ರತಳಿ ಹಾಗು ತಳಿ ಪರಿವರ್ತನೆ ಮಾಡಿದ ಬೆಳೆ ಬೆಳೆಯಲು ಉತ್ತೇಜನ
• ಆಹಾರ ಸಂಸ್ಕರಣ ಕೇಂದ್ರಗಳು ಮತ್ತು ಗೋದಾಮುಗಳ ಅವಶ್ಯಕತೆ
• ತೋಟಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ
• ಸಂಪನ್ಮೂಲಗಳ ಕ್ರೋಡೀಕರಣ ಮತ್ತು ಸದ್ಬಳಕೆ
• ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳುವುದು
• ಎಲ್ಲಾ ಗ್ರಾಮಗಳಿಗೆ ವ್ಯವಸಾಯೋತ್ಪನ್ನ ಸಹಕಾರ ಸಂಘಗಳಿರಬೇಕು ಹಾಗು ಇವುಗಳ ಮೂಲಕ ರೈತರಿಗೆ ಬೇಕಾಗುವ ಗೊಬ್ಬರ, ಬೀಜ, ಹಾಗು ಇತರ ಸಲಕರಣೆಗಳು ನಿಯಮಿತ ದರಗಳಲ್ಲಿ ದೊರಕುವಂತಿರಬೇಕು
• ಬ್ಯಾಂಕ್ ಹಾಗು ಇತರ ವಾಣಿಜ್ಯ ಸೇವೆಗಳು ಎಲ್ಲ ಗ್ರಾಮಗಳಿಗೂ ದೊರಕಬೇಕು
• ಹಳ್ಳಿಗಳ ಮತ್ತು ನಗರ ಯೋಜನೆಗಳಿಗೆ ವ್ಯತ್ಯಾಸವಿರದಂತೆ ಎಚ್ಚರವಹಿಸುವುದು
• ಉತ್ತಮ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಿ ಭಂಡವಾಳಶಾಹಿಗಳನ್ನು ವಿಕೇಂದ್ರಿಕರಣಗೊಳಿಸಬೆಕು
• ದಿನನಿತ್ಯ ಜೀವನಕ್ಕೆ ಬೇಕಾಗುವ ವಸ್ತುಗಳು, ಸಲಕರಣೆಗಳು ಹೇರಳವಾಗಿ ದೊರೆಯಬೇಕು
• ಹಳ್ಳಿಗಳಿಂದ ನಗರಗಳಿಗೆ ಬರುವ ವಲಸೆ ತಡೆಯಲು ಅಗತ್ಯ ಕಾರ್ಖಾನೆಗಳನ್ನು ತೆರೆಯಬೇಕು
• ಸಾಮಾಜಿಕ, ವಾಣಿಜ್ಯ, ಹಾಗು ಖಾಸಗಿ ಉದ್ಯಮಗಳಲ್ಲಿ ಹಣ ಹೂಡಿಕೆ

★ ಪಶುಪಾಲನೆ :
ಗ್ರಾಮೀಣ ಪ್ರದೇಶಗಳಲ್ಲಿ ವ್ಯವಸಾಯದ ನಂತರ ಪಶುಪಾಲನೆ ಬಹು ಮುಖ್ಯ ಉದ್ಯೋಗ. ಅನೇಕ ರೈತರು ವ್ಯವಸಾಯದ ಜೊತೆಗೆ ಪಶುಪಾಲನೆಯನ್ನು ಉಪ ಕಸುಬನ್ನಾಗಿಯೂ ಅವಲಂಭಿಸಿದ್ದಾರೆ. ಪ್ರಾಚೀನ ಕಾಲದಿಂದಲೂ ಜನರು ಇದರ ಮೇಲೆ ಅವಲಂಬಿತವಾಗಿದ್ದರೂ ಅದರ ಏಳ್ಗೆ ಮಾತ್ರ ತೃಪ್ತಿದಾಯಕವಾಗಿಲ್ಲ. ಆರ್ಥಿಕವಾಗಿ ಸಬಲರಲ್ಲದವರು, ಸಣ್ಣಬೇಸಾಯಗಾರರು ಅನೇಕ ಸಾಕು ಪ್ರಾಣಿಗಳನ್ನು ವ್ಯವಸಾಯಕ್ಕಾಗಿಯೂ ಬಳಸುತ್ತಾರೆ. ಹಸು, ಎಮ್ಮೆಗಳನ್ನು ಹಾಲು ಮತ್ತು ಹಾಲಿನ ಉತ್ಪನ್ನಗಳಿಗಾಗಿ, ದನಗಳು ಮತ್ತು ಕೋಣಗಳನ್ನು ಭೂಮಿಯನ್ನು ಉಳಲು ಹಾಗು ಕುರಿ, ಮೇಕೆ, ಕೋಳಿ ಮುಂತಾದವುಗಳನ್ನು ಮಾಂಸಕ್ಕಾಗಿಯೂ ಸಾಕುತ್ತಾರೆ. ಆದರೆ ದುರದೃಷ್ಟವಾಗಿ ಪಶುಪಾಲನೆಯನ್ನು ಒಂದು ಲಾಭದಾಯಕ ಉದ್ದಿಮೆಯನ್ನಗಿ ಪರಿವರ್ತಿಸಲು ಇಲ್ಲಿಯವರೆಗೂ ಸಾಧ್ಯವಾಗದಿರುವುದು ವಿಷಾದನೀಯ.

• ಅಗತ್ಯ ಒಳ್ಳೆಯ ತಳಿಗಳಗಳನ್ನೂ ಒದಗಿಸುವುದು
• ಮೇವು ಮತ್ತು ಇತರ ಅಗತ್ಯ ಆಹಾರ ಮತ್ತು ಔಷಧಿಗಳ ಪೂರೈಕೆ
• ಗೋಧಾಮುಗಳ ನಿರ್ಮಾಣ
• ಪಶುಗಳ ಆಸ್ಪತ್ರೆಗಳ ನಿರ್ಮಾಣ ಮತ್ತು ಉತ್ತಮ ಚಿಕಿತ್ಸೆ ದೊರೆಯುವಂತೆ ಗಮನ
• ಹಾಲು ಸಂಸ್ಕರಣೆ ಮತ್ತು ಅದರ ಇತರ ಉತ್ಪನ್ನಗಳ ತಯಾರಿಕಾ ಗಟಕಗಳನ್ನು ತೆರೆಯುವುದು

★ ಮೀನುಸಾಕಣೆ :
ಹೊರ ಪ್ರಪಂಚಕ್ಕೆ ಮೀನುಸಾಕಣೆ ಹೆಚ್ಚಿನ ಲಾಭದಾಯಕ ಗ್ರಾಮೀಣ ಕಸುಬುಗಳಲ್ಲಿ ಒಂದು. ಆದರೆ ಇದಕ್ಕೆ ಸಿಗುತ್ತಿರುವ ಪ್ರೋತ್ಸಾಹ ಅತ್ಯಲ್ಪ ಆದ್ದರಿಂದ ಇದು ಕೆಲವೇ ಪ್ರದೇಶಗಳಿಗೆ ಸೀಮಿತವಾಗಿದೆ. ಇದು ಕೇವಲ ಕರಾವಳಿ ಪ್ರದೇಶಗಳ, ನದಿತೀರ ಪ್ರದೇಶಗಳ ಜನರ ಕಸುಬಾಗದೆ ಒಳನಾಡಿಗೂ ವೃದ್ದಿಸಬೇಕು. ಉದ್ದಿಮೆಗೆ ಹೆಚ್ಚಿನ ಸಹಕಾರ ಮತ್ತು ಅಗತ್ಯ ಮೂಲ ವ್ಯವಸ್ಥೆಗಳನ್ನು ಕಲ್ಪಿಸುವುದರಿಂದ ರೈತರನ್ನು ಆಕರ್ಷಿಸಬಹುದು ಮತ್ತು ಇದರಿಂದ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಬಹುದು.

• ಕೆರೆ ಕುಂಟೆಗಳು, ಹೊಂಡಗಳನ್ನು ನಿರ್ಮಿಸಿ ಮಿನುಸಾಕಣೆಗೆ ವಿಪುಲ ಅವಕಾಶಗಳನ್ನು ಕಲ್ಪಿಸುವುದು
• ರೈತರಿಗೆ ಉತ್ತಮ ತರಬೇತಿ ಕೊಡುವುದು
• ಸ್ವಚ್ಛತೆ ಹಾಗು ಸುರಕ್ಷತೆಗೆ ಆಧ್ಯತೆ ನೀಡುವುದು
• ವಿವಿದ ರೀತಿಯ ಲಾಭದಾಯಕ ತಳಿಗಳನ್ನು ಒದಗಿಸುವುದು
• ಆಹಾರ ಮತ್ತು ಔಷಧಿಗಳ ಪೂರೈಕೆ
• ವಾತಾವರಣ, ಅವುಗಳ ಆಹಾರ ಮತ್ತು ತಗಲುವ ರೋಗಗಳ ಬಗ್ಗೆ ಮತ್ತು ನಿವಾರಣೆಯ ಬಗ್ಗೆ ಅಗತ್ಯ ಮಾಹಿತಿ ಒದಗಿಸುವುದು

★ ಕಾಡು ಬೆಳೆಸುವುದು :
ಹಿಂದೊಮ್ಮೆ ನಮ್ಮ ಹಳ್ಳಿಗೆ ಅರಣ್ಯದ ಮದ್ಯೆ ಹೋಗಬೇಕೆಂದರೆ ಸಂತಸವಾಗುತ್ತಿತ್ತು. ಅದರಲ್ಲೂ ಪಕ್ಕದೂರಿನ ಶಾಲೆಗೆ ನಡೆದೇ ಹೋಗಬೇಕಾಗಿದ್ದರಿಂದ ಗಿಡ ಮರಗಳ ನಡುವೆ ಆಟವಾಡಿಕೊಂಡು ಹೋಗುವಾಗಿನ ಮಜವೇ ಬೇರೆ. ಆದರೆ ಈಗ ಬೆಂಗಾಡು, ಸುಡುವ ಬಿಸಿಲನ ಜೊತೆ ನಡೆಯಬೇಕಾದ ಪರಿಸ್ಥಿತಿ. ಹೇಗೆ ನಾಶವಾಯಿತು ಎಂದು ಹೇಳಬೇಕಾದ ಅವಶ್ಯಕತೆಯಿಲ್ಲ. ಇದು ನಮ್ಮೂರಿಗಷ್ಟೇ ಒದಗಿಲ್ಲ, ದೇಶದ ಎಲ್ಲ ಭಾಗಗಳಲ್ಲಿ ಕಂಡು ಬರುವ ಸಾಮಾನ್ಯ ಸನ್ನಿವೇಶ. ಆದರೆ ಇದರಿಂದ ಹಾಗುವ ಅಡ್ಡ ಪರಿಣಾಮಗಳನ್ನು ಹಾಗು ಕಾಡು ಬೆಳೆಸುವುದರಿಂದ ಹಾಗುವ ಪ್ರಯೋಜನಗಳನ್ನು ಸಾಮಾನ್ಯಜನರಿಗೆ ತಿಳಿಸಿ, ಅನೇಕ ಸಾಲುಮರದ ತಿಮ್ಮಕ್ಕನಂತಹವರನ್ನು ಸೃಷ್ಟಿಸಬೇಕಾಗಿದೆ.

★ ಸಾರಿಗೆ :
ಗ್ರಾಮೀಣ ಪ್ರದೇಶಗಳ ಸಾರಿಗೆ ಮತ್ತು ಸಂಪರ್ಕದ ಸ್ಥಿತಿ ಶೋಚನೀಯ. ೨೧ ನೇ ಶತಮಾನದಲ್ಲೂ ಅನೇಕ ಹಳ್ಳಿಗಳಿಗೆ ರಸ್ತೆಗಳಿಲ್ಲದೆ ಇಂದಿಗೂ ಕಾಲು ದಾರಿಯಲ್ಲೇ ತಲುಪಬೇಕೆಂಬುದು ಅಚ್ಚರಿಯೆನಿಸಿದರೂ ಸತ್ಯ ಸಂಗತಿ ಮತ್ತು ನಾಚಿಕೆ ತರಿಸುವಂತ ವಿಷಯ. ಇನ್ನು ಕೆಲವು ಪ್ರದೇಶಗಳಲ್ಲಿ ಇರುವ ರಸ್ತೆಗಳಲ್ಲಿ ಪ್ರಯಾಣಿಸಲು ಪೂರ್ವ ತಯಾರಿ ಮತ್ತು ಧೈರ್ಯ ಇರಲೇಬೇಕು. ಕೆಲ ಊರುಗಳಿಗೆ ಹೊಸದಾಗಿ ರಸ್ತೆ ಭಾಗ್ಯ ಲಭಿಸಿದರೆ ಮೂರು ತಿಂಗಳುಗಳಲ್ಲಿ ಅಲ್ಲಿದ್ದ ರಸ್ತೆ ಮಾಯವಾಗಿ ಹಳ್ಳ ಗುಂಡಿಗಳನ್ನು ಕಾಣಬಹುದು. ಹೀಗಿರುವಾಗ ರೈತರು ತಾವು ಬೆಳೆದ ದವಸ ದಾನ್ಯಗಳನ್ನು ನಗರದ ಮಾರುಕಟ್ಟೆಯಲ್ಲಿ ಮಾರಲು ಅವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಅಲ್ಲಿಂದ ತರಬೇಕಾದ ಬವಣೆ ಹೇಳತೀರದು. ಸರ್ಕಾರಗಳು ಎಲ್ಲ ಗ್ರಾಮಗಳಿಗೆ ಗುಣಮಟ್ಟದ ರಸ್ತೆ ಮತ್ತು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕು.

• ಸುತ್ತಮುತ್ತಲಿನ ಹಳ್ಳಿಗಳು ಹಾಗು ನಗರಗಳ ಜೋಡಣೆ ಹಾಗು ಹೆಚ್ಚಿನ ಸಂಪರ್ಕ
• ವಿಶಾಲವಾದ ಮತ್ತು ಗುಣಮಟ್ಟದ ರಸ್ತೆಗಳ ಅವಶ್ಯಕತೆ

★ ಉತ್ತಮ ಮಾರುಕಟ್ಟೆ
ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಕೊಳ್ಳುವವರಿಲ್ಲದೆ ಎಷ್ಟೋ ಬಾರಿ ದಾರಿಯಲ್ಲಿ ಅಥವಾ ಚರಂಡಿಗೆ ಸುರಿದು ಪ್ರತಿಭಟಿಸಿರುವ ಅನೇಕ ಘಟನೆಗಳನ್ನು ದಿನ ನಿತ್ಯ ಕಾಣುತ್ತೇವೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಲು ದೂರದ ನಗರಗಳ ಮಾರುಕಟ್ಟೆಯನ್ನು ಅವಲಂಭಿಸುವುದು ಲಾಭಕರವಲ್ಲ ಹಾಗಾಗಿ ಹೋದಷ್ಟಕ್ಕೆ ಮಾರುವುದು ವಾಡಿಕೆ.  ಗ್ರಾಮೀಣ ಪ್ರದೇಶಗಳಲ್ಲಿ ರೈತರಿಗೆ ಅತ್ಯುತ್ತಮ ಮಾರುಕಟ್ಟೆಯ ಅಗತ್ಯ ಪ್ರಶ್ನಾತೀತವಾದದ್ದು. ಇದರಿಂದ ತಾವು ಬೆಳೆದ ಬೆಳೆಗಳನ್ನು ಸ್ಪರ್ಧಾತ್ಮಕ ಬೆಲೆಗೆ ಮಾರಲು ಮತ್ತು ಅಗತ್ಯ ವಸ್ತುಗಳನ್ನು ಸೂಕ್ತ ಬೆಲೆಗೆ ಕರೀದಿಸಲು ಅನುಕೂಲವಾಗುತ್ತದೆ.

• ಗ್ರಾಮೀಣ ಮಾರುಕಟ್ಟೆಗಳ ಸೌಲಭ್ಯ ಒದಗಿಸುವುದು
• ರೈತರ ಬೆಳೆಗೆ ಸ್ಪರ್ಧಾತ್ಮಕ ಬೆಲೆ ಸಿಗುವಂತೆ ಎಚ್ಚರ
• ದಲ್ಲಾಳಿಗಳ ಮತ್ತು ವರ್ತಕರ ಮೋಸ ವಂಚನೆಗಳಿಂದ ಮುಕ್ತಿ
• ತೆರಿಗೆಗಳಿಂದ ವಿನಾಯಿತಿ
• ಮುಕ್ತ ವ್ಯಾಪಾರಕ್ಕೆ ಅನುಮತಿ ಕೊಡಬೇಕು

★ ಪ್ರವಾಸೋದ್ಯಮ:
ಪ್ರಪಂಚದ ಕೆಲವು ದೇಶಗಳ ಆರ್ಥಿಕತೆ ಬಹುವಾಗಿ ಪ್ರವಾಸೋದ್ಯಮದ ಮೇಲೆಯೇ ನಿಂತಿದೆ ಎಂದರೆ ಅಚ್ಚರಿಯಾಗಬಹುದು, ಆದರೂ ಇದು ಸತ್ಯವೆಂದು ಒಪ್ಪಿಕೊಳ್ಳಬೇಕಾಗಿದೆ. ದೇಶದಲ್ಲಿ ಪ್ರವಾಸೋದ್ಯಮ ವೇಗವಾಗಿ ಬೆಳೆಯುತ್ತಿದ್ದರೂ ಅವುಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಸಿಗುತ್ತಿಲ್ಲ. ನಮ್ಮ ದೇಶದಲ್ಲಿರುವ ಅನೇಕ ನೈಸರ್ಗಿಕ ಪ್ರೇಕ್ಷಣೀಯ ಸ್ಥಳಗಳನ್ನು ಪುರಾತತ್ವ ಗುಡಿ ಗೋಪುರಗಳನ್ನು ಅಭಿವೃದ್ದಿಪಡಿಸಿ, ಅಗತ್ಯ ರಕ್ಷಣೆ ಮತ್ತು ಸೂಕ್ತ ಸೌಲಭ್ಯಗಳನ್ನು ಒದಗಿಸಿದರೆ ಪ್ರಪಂಚದ ಮೂಲೆ ಮೂಲೆಗಳಿಂದ ಯಾತ್ರಿಕರನ್ನು ಆಕರ್ಷಿಸಬಹುದು.

• ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರೇಕ್ಷಣೀಯ ಸ್ಥಳಗಳನ್ನು ಗುರುತಿಸಿ ಅಭಿವೃದ್ದಿಪಡಿಸಿದರೆ ಪ್ರದೇಶಾಭಿವೃದ್ದಿಯ ಜೊತೆಗೆ ಆರ್ಥಿಕವಾಗಿಯೂ ಪ್ರಗತಿ ಸಾದಿಸಬಹುದು

* ಉದ್ಯೋಗ
ದೇಶದ ಹಳ್ಳಿಗಳಲ್ಲಿ ಉದ್ಯೋಗವೆಂದರೆ ಕೇವಲ ಹೊಟ್ಟೆಪಾಡಿಗೆ ಮಾಡುವ ಒಂದು ಕೆಲಸವಾಗಿದೆ. ಆದರೆ ವಾಸ್ತವದಲ್ಲಿ ಅದಕ್ಕೂ ಕುತ್ತು. ಕುಟುಂಬ ಪಾರಂಪರ್ಯವಾಗಿ ಬಂದಿರುವ ಕೆಲಸಗಳನ್ನು ಅನೇಕ ಕಾರಣಗಳಿಂದ ಮುಂದುವರಿಸಲಾಗದೆ, ಹಾಗೆ ಒಮ್ಮೆ ಮಾಡಿದರೂ ಅದರಿಂದ ಸೂಕ್ತ ಪ್ರಯೋಜನವಿಲ್ಲದೆ ಕೈಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ನಮ್ಮ ಹಳ್ಳಿಯ ಜನರದ್ದು. ಬೇರೆ ಉದ್ಯೋಗಗಳನ್ನು ಮಾಡಲು ಅಗತ್ಯ ತರಬೇತಿ, ಹಾಗು ಅದಕ್ಕೆ ಬೇಕಾದ ಅವಕಾಶಗಳಿಲ್ಲದಿರುವುದು ಜನರನ್ನು ಒಂದೆಡೆ ನಗರ ಪ್ರದೇಶಗಳಿಗೆ ವಲಸೆ ಹೋಗಲು ಪ್ರಚೋದಿಸುವುದರ ಜೊತೆಗೆ ಮತ್ತೊಂದೆಡೆ ಸೋಮರಿಗಳನ್ನಾಗಿಯೂ, ಹಾಗು ಇತರ ಆತಂಕಕಾರಿ ಕೆಲಸಗಳಿಗೆ ಮಾರು ಹೋಗಲು ಅವಕಾಶವಾಗಿಸಿದೆ. ಹಳ್ಳಿಗಳಲ್ಲಿ ದೊರೆಯುವ ಸಂಪನ್ಮೂಲಗಳಿಗನುಗುಣವಾಗಿ ಅಲ್ಲಿ ಉಪಯುಕ್ತ ಕಾರ್ಖಾನೆಗಳನ್ನು ನಿರ್ಮಿಸಿ ಹೆಚ್ಚಿನ ಉದ್ಯೋಗ ಸೃಷ್ಟಿಸಬಹುದಾಗಿದೆ.

• ಗುಡಿ ಕೈಗಾರಿಕೆ ಮತ್ತು ಗ್ರಾಮೀಣ ಉದ್ದಿಮೆಗಳಿಗೆ ಉತ್ತೇಜನ ಮತ್ತು ಅಗತ್ಯ ತರಬೇತಿ
• ಕರ ಕುಶಲ ವಸ್ತುಗಳ ತಯಾರಿಕೆಗೆ ಪ್ರೋತ್ಸಾಹ
• ಸ್ವಂತ ಉದ್ಯೋಗ ಮಾಡುವವರಿಗೆ ಪ್ರೋತ್ಸಾಹ
• ವಿವಿಧ ವಲಯಗಳಲ್ಲಿ ಉದ್ಯೋಗ ಸೃಷ್ಟಿ
• ಕೈಗಾರಿಕಾ ವಲಯಗಳನ್ನು ಸ್ಥಾಪಿಸಿ, ಅಗತ್ಯ ಮೂಲಭೂತ ವ್ಯವಸ್ಥೆಗಳನ್ನು ನಿರ್ಮಿಸಿ ಬಂದವಾಳಶಾಹಿಗಳನ್ನು ಆಕರ್ಷಿಸಬೇಕು

★ ವಿದ್ಯುತ್ ಮತ್ತು ಇಂದನ : ಶಕ್ತಿಯನ್ನು ಬಳಸುವಿಕೆ
ದೇಶ ಇಂಧನದ ಕೊರತೆಯನ್ನು ಅನುಭವಿಸುತ್ತಿರುವುದು ತಿಳಿದ ವಿಷಯ. ಇದನ್ನು ಸರಿದೂಗಿಸಲು ಸರ್ಕಾರ ಅನೇಕ ತೊಡರುಗಳ ನಡುವೆಯೂ ಅಮೆರಿಕದೊಂದಿಗೆ ಅಣು ಒಪ್ಪಂದಕ್ಕೆ ಸಹಿ ಮಾಡಿದೆ, ಇದರಿಂದ ದೇಶದ ಹಿತಕ್ಕೆ ದಕ್ಕೆ ಬಾರದಿರಲಿ. ವಾಸ್ತವಿಕವಾಗಿ ಹಲವು ರಾಜ್ಯಗಳ ಹಳ್ಳಿಗಳಲ್ಲಿ ದಿನಕ್ಕೆ ೪ ರಿಂದ ೫ ಘಂಟೆ ವಿದ್ಯುತ್ ಸಿಗುವುದೂ ಕಷ್ಟಕರ. ಹೀಗಿರುವಾಗ ಇಂಧನವನ್ನು ಹಿತ ಮಿತವಾಗಿ ಬಳಸುವುದು ಶ್ರೇಯಸ್ಕರ. ಇದರ ಬಗ್ಗೆ ಜನರಲ್ಲಿ ತಿಳುವಳಿಕೆ ಹಾಗು ಅರಿವು ಮೂಡಿಸುವುದು ಅತ್ಯಗತ್ಯ. ಜೊತೆಗೆ ಸೌರಶಕ್ತಿ ಮತ್ತು ಸಾವಯವ ಶಕ್ತಿಗಳ ಉತ್ಪಾದನೆ ಮತ್ತು ಬಳಸುವ ಬಗೆಗೆ ತರಬೇತಿ ನೀಡುವುದರಿಂದ ಬಹು ಮಟ್ಟಿನ ತೊಂದರೆಯನ್ನು ನಿವಾರಿಸಿಕೊಳ್ಳಬಹುದು.
• ಸೌರ ಶಕ್ತಿ ಮತ್ತು ಸಾವಯವ ಶಕ್ತಿಗಳ ಬಳಕೆ
• ಇಂಧನದ ಮಿತ ಬಳಕೆಯ ಬಗ್ಗೆ ಅಗತ್ಯ ಮಾಹಿತಿ

★ ಸ್ತ್ರೀ ಸಭಲೀಕರಣ :
ದೇಶದಲ್ಲಿ ಸ್ತ್ರೀಯರು ಬಹುತೇಕ ಎಲ್ಲ ರಂಗಗಳಲ್ಲಿ, ಪುರುಷನಿಗೆ ಸರಿ ಸಮಾನವಾಗಿ ನಿಲ್ಲಲು ದಾಪುಗಾಲಿಡುತ್ತಿದ್ದಾರೆಂಬುದು ಸಂತೋಷದ ವಿಷಯ. ಆದರೆ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಮಹಿಳೆಯರು ಪುರುಷರ ಆಣತಿಯ ಮೇರೆಗೆ ಜೀವನ ಸಾಗಿಸಬೇಕಾಗಿದೆ. ಪುರುಷರ ಲೈಂಗಿಕ ಶೋಷಣೆ, ದಬ್ಬಾಳಿಕೆ ಮಾನಸಿಕ ಹಾಗು ದೈಹಿಕ ಹಿಂಸೆಗಳು ಅವರನ್ನು ಅಬಲಳನ್ನಾಗಿಸಿವೆ. ಅನೇಕ ರೋಗ ರುಜಿನಗಳಿಂದ ನರಳುತ್ತಿದ್ದರೂ ಮುಚ್ಚಿಡುವ ಪರಿಸ್ತಿತಿಯನ್ನೂ ಎದುರಿಸುತ್ತಾರೆ. ಪುರುಷ ಪ್ರಧಾನ ಸಮಾಜಕ್ಕೆ ಹೆದರಿ ತಾನೆಷ್ಟೇ ಸಬಲಳಿದ್ದರೂ, ಕೈ ಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿಯಿದೆ. ಇದಕ್ಕೆ ಕಾರಣಗಳು ಅನೇಕ, ಅಂದಕಾರ, ಅನಕ್ಷರತೆ ಹಾಗು ಕೆಲಸಕ್ಕೆ ಬಾರದ ಸಾಮಾಜಿಕ ಕಟ್ಟಳೆಗಳು.

 ಒಬ್ಬ ಸ್ತ್ರೀ ಶಿಕ್ಷಣ ಪಡೆದರೆ ತನ್ನ ಇಡೀ ಕುಟುಂಬಕ್ಕೆ ಶಿಕ್ಷಣ ನೀಡಬಲ್ಲಳು. ಒಂದು ಕುಟುಂಬದವರು ವಿದ್ಯಾವಂತರಾದರೆ ಕೊನೆಯ ಪಕ್ಷ ನೆರೆ ಹೊರೆಯವರ ಕಣ್ಣನ್ನಾದರು ತೆರೆಸಲು ಸಹಾಯವಾಗುತ್ತದೆ. ಮುಂದೆ ಅದು ದೇಶದ ಉದ್ದಾರಕ್ಕೆ ಸಹಾಯವಾಗುತ್ತದೆ. ಆದ್ದರಿಂದ ಮಹಿಳೆಯರಿಗೆ ಅಗತ್ಯ ಶಿಕ್ಷಣ ಮತ್ತು ಸಹಾಯ ನೀಡಿ ಆಧುನಿಕ ಸಮಾಜದ ಬಾಗಿಲಿಗೆ ಕರೆತರಬೇಕಾಗಿದೆ.

• ಅವರಲ್ಲಿ ಧೈರ್ಯ ಹಾಗು ಭರವಸೆ ಮೂಡಿಸುವ ಕಡ್ಡಾಯ ಶಿಕ್ಷಣದ ಅಗತ್ಯ
• ಅಗತ್ಯ ಆರೋಗ್ಯ ಸೇವೆ
• ವೃತ್ತಿ ಶಿಕ್ಷಣ ತರಬೇತಿ ಮತ್ತು ಪ್ರೋತ್ಸಾಹ
• ಸ್ತ್ರೀ ಸಹಾಯ ಗುಂಪುಗಳನ್ನ ರಚಿಸಿ ಅವುಗಳಿಂದ ಸ್ತ್ರೀಯರ ಏಳ್ಗೆಗೆ ಅವಕಾಶ

★ ಬಾಲಕಾರ್ಮಿಕ ಪದ್ಧತಿ :
ತಂದೆ ತಾಯಿಗಳ ಬದತನದಿಂದಲೂ ಅಥವಾ ಅವರಿಗೆ ಬೇಡವಾಗಿಯೋ ಅನೇಕ ಮಕ್ಕಳು ಆಟ ಪಾಠ ಗಳನ್ನು ಕಲಿಯುವ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಕೆಲಸ ಮಾಡಬೇಕಾದ ಅನಿವಾರ್ಯತೆಗೆ ಸಿಲುಕುತ್ತಾರೆ. ಇದರಿಂದ ಮುಂದೆ ದೇಶದ ಭವಿಷ್ಯ ಬರೆಯುವ ಕೈಗಳು ತಮ್ಮ ಜೀವನವನ್ನೇ ಕತ್ತಲೆಯ ಗೂಡಾಗಿಸಿಕೊಳ್ಳುತ್ತವೆ. ಅರಳಬೇಕಾದ ಹೂವುಗಳು ವಯಸ್ಸಿಗೆ ಮೀರಿದ ಮಾನಸಿಕ ಹಾಗು ದೈಹಿಕ ಹಿಂಸೆಯಿಂದ ಮುರುಟಿ ಹೋಗುತ್ತವೆ. ತನ್ನ ಒಡೆಯ ಕೊಡುವ ಒಪ್ಪೊತ್ತಿನ ಊಟಕ್ಕಾಗಿ ತಮ್ಮ ಬದುಕನ್ನೇ ಬಲಿಕೊಡುತ್ತಾರೆ. ಕೆಲವರು ನರಕಯಾತನೆಯನ್ನು ತಾಳಲಾರದೆ ಅಡ್ಡದಾರಿ ಹಿಡಿದು ಸಮಾಜಕ್ಕೆ ಮಾರಕವಾಗುವುದೂ ಉಂಟು. ಇವರನ್ನು ಇಂತಹ ಸಂಕಷ್ಟದಿಂದ ರಕ್ಷಿಸಿ ಪೌಷ್ಟಿಕ ಆಹಾರ, ಬಟ್ಟೆ ಹಾಗು ಇತರ ಸೌಲಭ್ಯಗಳನ್ನು ಒದಗಿಸಿ ಪ್ರೀತಿ ವಾತ್ಸಲ್ಯದಿಂದ ಶಿಕ್ಷಣವನ್ನು ನೀಡಿ ಉತ್ತಮ ನಾಗರೀಕರನ್ನಾಗಿಸುವುದು ಎಲ್ಲರ ಹೊಣೆಯಾಗಬೇಕು.

ಹಳ್ಳಿಗಳು ವ್ರುದ್ದಾಶ್ರಮವಾಗುವುದನ್ನು ತಪ್ಪಿಸಿ
ಹಳ್ಳಿಗಳಲ್ಲಿನ ಜನರು ಬಡತನದ ಜೀವನದಲ್ಲಿ ಬೆಂದು ನೊಂದು, ತಮ್ಮ ಒಪ್ಪತ್ತಿನ ಗಂಜಿಗೂ ತತ್ವಾರವಿರುವುದನ್ನರಿತು ಇಲ್ಲಿ ಇದ್ದು ತಮ್ಮ ಬದುಕನ್ನು ರೂಪಿಸಿಕೊಳ್ಳುವುದು ದುಸ್ಸಾಧ್ಯವೆಂದು ಬಗೆದು ನಗರಗಳ ಕಡೆ ಗುಳೇ ಹೊರಟಿದ್ದಾರೆ. ಅದರಲ್ಲಿಯೂ ಯುವ ಜನಾಂಗ ತಮ್ಮ ವಂಶ ಪಾರಂಪರ್ಯವಾಗಿ ಮಾಡುತ್ತಿದ್ದ ವ್ಯವಸಾಯ ಹಾಗು ಇನ್ನಿತರ ಕುಲ ಕಸುಬುಗಳನ್ನು ತೊರೆದು ನಗರಗಳಲ್ಲಿ ದೊರೆಯುವ ಕಾರ್ಖಾನೆಗಳಲ್ಲಿನ ಕೆಲಸ, ಬಟ್ಟೆ ಉದ್ಯಮಗಳಲ್ಲಿನ ಕೆಲಸ, ಹಾಗು ಇತರ ಕೂಲಿ ಕೆಲಸಗಳನ್ನರಸಿ, ತಮ್ಮ ಹುಟ್ಟಿದ  ಊರುಗಳನ್ನೂ ತೊರೆಯುತ್ತಿದ್ದಾರೆ. ಇದರಿಂದ ಅನೇಕ ಹಳ್ಳಿಗಳಲ್ಲಿ ಇಂದು ವೃದ್ದಾಪ್ಯ ತಂದೆ ತಾಯಿಗಳು ತಮ್ಮ ಬದುಕಿನ ಕೊನೆಯ ದಿನಗಳನ್ನು ಆತಂಕದಿಂದ ಕಳೆಯಬೇಕಾಗಿದೆ.

★ ಸಂಘಜೀವನ :
ನಗರಗಳಿಗೆ ಹೋಲಿಸಿದರೆ ಹಳ್ಳಿಗಳಲ್ಲಿ ಸಂಘ ಜೀವನ ಇನ್ನೂ ಉಳಿದಿದೆ. ಅಜ್ಜ-ಅಜ್ಜಿ, ತಾಯಿ-ತಂದೆ, ಮಕ್ಕಳು ಒಂದೇ ಮನೆಯಲ್ಲಿ ಇರುವುದನ್ನೂ ಇಂದಿಗೂ ನೋಡಬಹುದು. ಇದರಿಂದಲೇ ಪಾಶ್ಚಿಮಾತ್ಯ ದೇಶಗಳ ಸಂಸ್ಕೃತಿಗಳ ಅಬ್ಬರದ ನಡುವೆಯೂ ದೇಶ ತನ್ನ ಭಿನ್ನತೆಯನ್ನು ಉಳಿಸಿಕೊಂಡಿದೆ. ಭಾರತದ ಭವ್ಯ ಪರಂಪರೆಯನ್ನು ಉಳಿಸಿ ಬೆಳೆಸಲು ಪರಸ್ಪರ ಸ್ನೇಹ, ಸಹಕಾರ, ಸೌಹಾರ್ಧತೆಯನ್ನು ಬೆಳೆಸಿ, ಎಲ್ಲ ಜಾತಿ ದರ್ಮಗಳ ನಡುವೆ ಒಮ್ಮತ ಮೂಡಿಸಿ, ಜನರಲ್ಲಿ ಭಾವೈಕ್ಯತೆಯನ್ನು ಬೆಳೆಸಬೇಕಾಗಿದೆ. ದೇಶದ ಉಜ್ವಲ ಭವಿಷ್ಯಕ್ಕಾಗಿ ಸಹಬಾಳ್ವೆಯನ್ನು ಪ್ರೋತ್ಸಹಿಸಬೇಕಾಗಿದೆ.
ಸಾಂಸ್ಕೃತಿಕ ಚಟುವಟಿಕೆಗಳು
ದುಡಿದು ದಣಿದ ಮನಸ್ಸಿಗೆ ಮುದ ನೀಡಲು, ಸಾಂಸ್ಕೃತಿಕ ಚಟುವಟಿಕೆಗಳು ಅತ್ಯವಶ್ಯಕ. ಗ್ರಾಮೀಣ ಪ್ರದೇಶದ ಜನರು ತಮ್ಮ ಬಿಡುವಿನ ವೇಳೆಯಲ್ಲಿ, ಹಬ್ಬ ಹರಿದಿನಗಳಲ್ಲಿ ಅತ್ಯುತ್ಸಾಹದಿಂದ ಪ್ರಾದೇಶಿಕವಾದ ನಾಟಕಗಳು, ಬಯಲಾಟಗಳು, ಕೋಲಾಟ ಹಾಗು ವಿವಿಧ ರೀತಿಯ ಹಾಡು ಭಜನೆ ಮುಂತಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ.

ಇತ್ತೀಚಿನ ದಿನಗಳಲ್ಲಿ ದೂರದರ್ಶನ, ಸಿನಿಮಾ ಮತ್ತು ಇತರ ಮಾದ್ಯಮಗಳ ಹೊಡೆತದಿಂದ ಅವುಗಳಲ್ಲಿ ಭಾಗಿಯಾಗುವವರೂ ಇಲ್ಲ ಹಾಗು ಒಂದು ವೇಳೆ ಯಾರಾದರು ಆ ದಿಕ್ಕಿನಲ್ಲಿ ಮನಸ್ಸು ಮಾಡಿದರೆ ಅದಕ್ಕೆ ಸಿಗುವ ಬೆಲೆ ಒತ್ತಟ್ಟಿಗಿರಲಿ ನೋಡುವವರೂ ಇರುವುದಿಲ್ಲ. ಇದರಿಂದ ದೇಶದ ನೈಜ ಸಾಂಸ್ಕೃತಿಕ ಕಲೆ ಅಳಿಯುವುದು ಸಹಜ. ಸಾಂಸ್ಕೃತಿಕ ಕಲೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಅನೇಕ ಮಂದಿಗೆ ಬದುಕನ್ನೂ ನೀಡಬಹುದು.

ಯೋಜನೆಗಳನ್ನು ಸಾಕಾರಗೊಳಿಸಲು ಸರ್ಕಾರ ಮತ್ತು ಸಂಘ ಸಂಸ್ಥೆಗಳು ಗ್ರಾಮೀಣ ಜನರ ಸಹಬಾಗಿತ್ವದಲ್ಲಿ ಅಭಿವೃದ್ದಿ ಸಂಸ್ಥೆಗಳನ್ನು ನಿರ್ಮಿಸಿ ಅದಕ್ಕೆ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ಹಾಗು ಜನಪ್ರತಿನಿಧಿಗಳನ್ನು ನಿಯಮಿಸಿ ಅವರಿಗೆ ಅವಶ್ಯಕ ತರಬೇತಿಯನ್ನು ಕಲ್ಪಿಸಬೆಕು. ವಿಕಲಾಂಗರು, ಬಡವರು, ಅನಕ್ಷರಸ್ಥರು ಮತ್ತು ಸಮಾಜದ ಸೌಲಭ್ಯಗಳು ವಂಚಿತರಾದವರಿಗೆ ಸರ್ಕಾರಗಳಿಂದ ಮತ್ತು ಇತರ ಸಂಘ ಸಂಸ್ಥೆಗಳಿಂದ ಒದಗುವ ಸಹಾಯಗಳ ಬಗೆಗೆ ಮಾಹಿತಿ ನೀಡುವುದು ಮತ್ತು ಅವರಿಗೆ ಲಭ್ಯವಾಗುವ ರೀತಿಯಲ್ಲಿ ಕ್ರಿಯಾತ್ಮಕ ಸಹಾಯಹಸ್ತ ನೀಡುವುದು. ಇಲ್ಲಿಯವರೆಗೂ ಸರ್ಕಾರದ ಯೋಜನೆಗಳು ಸೌಲಭ್ಯಗಳು ತಲುಪದೇ ಇರುವ ಪ್ರದೇಶಗಳಿಗೆ ಹೆಚ್ಚಿನ ಗಮನ ನೀಡುವುದು. ದಲಿತರು ಅಲೆಮಾರಿಗಳು, ಆದಿವಾಸಿಗಳು, ಹಾಗು ಗುಡ್ಡಗಾಡು ಪ್ರದೇಶದ ಕಾಡುಜನರ ಉದ್ದಾರಕ್ಕೆ ಶ್ರಮಿಸುವುದು.
ಬಡವರ ಅತಿ ಮುಖ್ಯ ಆರ್ಥಿಕ ಮತ್ತು ಸಾಮಾಜಿಕ ಅವಶ್ಯಕತೆಗಳನ್ನು ಪೂರೈಸಲು ಸಹಕಾರಿ ಸಂಘಗಳನ್ನು ನಿರ್ಮಿಸಿ ಅದು ಸೂಕ್ತವಾಗಿ ಕಾರ್ಯರೂಪಿಸುವಂತೆ ಕ್ರಮ ಕೈಗೊಳ್ಳುವುದು. ಭಯ ಮತ್ತು ದುಗುಡತೆಯನ್ನು ನಿವಾರಿಸಲು ಗ್ರಾಮೀಣ ಜನರ ಅಗತ್ಯ ವಸ್ತುಗಳು ಹೇರಳವಾಗಿ ದೊರೆಯುವಂತೆ ನೋಡಿಕೊಳ್ಳುವುದು. ಹಸಿದವನಿಗೆ ಒಂದು ಹೊತ್ತಿನ ಊಟ ಬಡಿಸುವುದು ತಪ್ಪಲ್ಲದಿದ್ದರೂ, ಅಂತಹ ತಾತ್ಕಾಲಿಕ ಯೋಜನೆಗಳನ್ನು ಜಾರಿಗೊಳಿಸಿ ಜವಾಬ್ಧಾರಿಯಿಂದ ತಪ್ಪಿಸಿಕೊಳ್ಳುವ ಬದಲು, ಗ್ರಾಮೀಣ ಜನರೇ ದುಡಿದು ಜೀವನ ನಡೆಸಲು ಸಹಕಾರಿಯಾಗುವಂತಹ ಶಾಶ್ವತ ಯೋಜನೆಗಳನ್ನು ರೂಪಿಸಿ ಅವುಗಳನ್ನು ಪ್ರಾದೆಶಿಕ್ಕನುಗುಣವಾಗಿ ಅನುಷ್ಟಾನಗೊಳಿಸಿದರೆ ಸಪಲತೆಯನ್ನು ನಿರೀಕ್ಷಿಸಲು ಸಾಧ್ಯವಾಗುವುದು. ಒಟ್ಟಿನಲ್ಲಿ ಸ್ವಾವಲಂಭಿಯಾಗಿ, ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಲ್ಲುವಂತಹ ಗ್ರಾಮೀಣ ಸಮಾಜವನ್ನು ಸೃಷ್ಟಿಸಿದರೆ ಅದು ದೇಶದ ಸರ್ವತೋಮುಖ ಅಭಿವೃದ್ಧಿಗೆ ನಾಂದಿಯಾಗುವುದರಲ್ಲಿ ಅನುಮಾನವಿಲ್ಲ.

ಮೂಲ:  ( ಲೇಖಕರು: ಜಿ. ಆರ್. ವಸಂತಕುಮಾರ್ )

No comments:

Post a Comment